ಚಿತ್ರದುರ್ಗದ ಒಡಲಿನಲ್ಲಿರುವ ಜೋಗಿಮಟ್ಟಿಗೆ ಕರ್ನಾಟಕದ ಊಟಿ ಎಂಬ ಖ್ಯಾತಿಯಿದೆ. ನವೆಂಬರ್ ಅಂಚಿನಿಂದ ಶುರುವಾಗಿ ಡಿಸೆಂಬರ್ ತುಂಬೆಲ್ಲ ಜೋಗಿಮಟ್ಟಿಗೆ ಎಂಥಾವರನ್ನೂ ಮೋಹಕ್ಕೀಡು ಮಾಡುವಂಥಾ ರಂಗೊಂದು ಪ್ರಾಕೃತಿಕವಾಗಿಯೇ ಅಂಟಿಕೊಳ್ಳುತ್ತೆ. ಚುಮು ಚುಮು ಚಳಿಯಲ್ಲಿ ನೀವೇನಾದರೂ ಜೋಗಿಮಟ್ಟಿಗೆ ಹೋದರೆ ನಮ್ಮದೇ ಮಡಿಕೇರಿ, ಊಟಿ, ಮನ್ನಾರ್, ಮನಾಲಿಗೆ ಹೋದಂಥಾ ಅನುಭೂತಿಯೊಂದು ಖಂಡಿತವಾಗಿಯೂ ಆವರಿಸಿಕೊಳ್ಳುತ್ತದೆ. ಆದರೆ, ಊಟಿ, ಮನ್ನಾರಿನಂಥಾ ಪ್ರವಾಸಿ ತಾಣಗಳಲ್ಲಿ ಅವುಗಳ ರಕ್ಷಣೆಯ ದೃಷ್ಟಿಯಿಂದ ಕಟ್ಟುನಿಟ್ಟಾದ ಕ್ರಮಗಳಿದ್ದಾವೆ. ಆದರೆ, ಕರ್ನಾಟಕದ ಊಟಿ ಜೋಗಿಮಟ್ಟಿಯಲ್ಲಿ ಮಾತ್ರ ಯಾವ ಲಂಗು ಲಗಾಮೂ ಇಲ್ಲ. ಕೊಂಚ ಎಚ್ಚರ ವಹಿಸಿದ್ದರೂ ಜೋಗಿಮಟ್ಟಿ ಎಂಬುದು ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವ ಛಾತಿ ಹೊಂದಿರುವ ತಾಣವಾಗುತ್ತದೆ. ಆದರೆ, ಒಂದಷ್ಟು ಅಸಹನೆಗಳ ನಡುವೆಯೂ ಜೋಗಿಮಟ್ಟಿ ಎಂಬುದು ಕರ್ನಾಟಕದ ಅತ್ಯಂತ ಆಕರ್ಷಣೆಯ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಪಡೆದುಕೊಂಡಿದೆ.
ಚಿತ್ರದುರ್ಗ ಅಂದರೇನೇ ಕೋಟೆಗಳ ನಾಡು. ರಾಜ ಮಹಾರಾಜರ ಆಳ್ವಿಕೆಯ ಕಾಲದ ಕುರುಹುಗಳು ಇಲ್ಲಿ ಹೆಜ್ಜೆ ಹೆಜ್ಜೆಗೂ ಜೀವಂತವಾಗುಳಿದಿವೆ. ರಾಜ ಮನೆತನಗಳು ಅಸ್ತಿತ್ವದಲ್ಲಿದ್ದ ಕಾಲದ ಕೋಟೆ ಕೊತ್ತಲುಗಳನ್ನು ಕಣ್ತುಂಬಿಕೊಳ್ಳೋದೇ ಒಂದು ವರ್ಣಿಸಲು ಸಾಧ್ಯವಾಗದಂಥಾ ಅನುಭೂತಿ. ಹಾಗಂಥಾ ಕೋಟೆನಾಡಿನ ಸೆಳೆತ ಬರೀ ಹಳೇ ಕಾಲದ ಅವಶೇಷಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಅಷ್ಟೇ ಆಗಿದ್ದರೆ ಬಹುಶಃ ಚಿತ್ರದುರ್ಗಕ್ಕೆ ಕರ್ನಾಟಕದ ಊಟಿ ಎಂಬಂಥಾ ಗರಿಮೆ ಬರಲೂ ಸಾಧ್ಯವಾಗುತ್ತಿರಲಿಲ್ಲ. ಅದು ಸಾಧ್ಯವಾದದ್ದು ಜೋಗಿಮಟ್ಟಿ ಧಾಮದಿಂದ. ಇದೊಂದು ದುರ್ಗಮವಾದಂಥಾ, ವಿಶೇಷವಾದ ಭೂಭಾಗವನ್ನು ಒಳಗೊಂಡ ಪ್ರದೇಶ. ಒಂದಾನೊಂದು ಕಾಲದಲ್ಲಿ ಚಿತ್ರಕೇತು ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನಂತೆ. ಈ ಕಾರಣದಿಂದಲೇ ಚಿತ್ರದುರ್ಗ ಎಂಬ ಹೆಸರು ಬಂತೆಂಬ ಪ್ರತೀತಿ ಇದೆ.
ಜೋಗಿಮಟ್ಟಿಯೆಂಬ ಸೆಳೆತ
ಜೋಗಿಮಟ್ಟಿ ಚಿತ್ರದುರ್ಗದಿಂದ ಏಳು ಕಿಲೋಮೀಟರ್ ದೂರದಲ್ಲಿ ದಕ್ಷಿಣ ದಿಕ್ಕಿನಲ್ಲಿದೆ. ಹೊಳಲ್ಕೆರೆ ತಾಲೂಕು ಮತ್ತು ಹಿರಿಯೂರು ತಾಲೂಕಿನಲ್ಲಿ ಈ ಪ್ರವಾಸಿ ತಾಣ ಮೈಚಾಚಿಕೊಂಡಿದೆ. ಸರಿಸುಮಾರು ಹತ್ತು ಸಾವಿರ ಹೆಕ್ಟೇರುಗಳ ತುಂಬ ಹಬ್ಬಿಕೊಂಡಿರುವ ಅತ್ಯಂತ ಸುಂದರ ತಾಣವಿದು. ಜೋಗಿಮಟ್ಟಿಯ ಒಡಲು ಈ ಹಿಂದೆ ಹುಲಿ, ಸಿಂಹ, ಚಿರತೆ, ಆನೆಯಂಥಾ ವನ್ಯ ಜೀವಿಗಳಿಂದ ಸಮೃದ್ಧವಾಗಿತ್ತು. ಆದರೆ, ಬರಬರುತ್ತಾ ಅವೆಲ್ಲವೂ ಮಾಯವಾಗಿ, ಅಪರೂಪಕ್ಕೊಮ್ಮೆ ಚಿgಚಿve ಕಾಣಿಸಿಕೊಳ್ಳೋದಿದೆ. ಇನ್ನುಳಿದಂತೆ ಜಿಂಕೆ, ಕಾಡುಕೋಳಿ, ಕೃಷ್ಣಮೃಗ, ಕಾಡುಹಂದಿಯಂಥಾ ಅನೇಕ ಜೀವಿಗಳು ಈವತ್ತಿಗೂ ಜೋಡಿಮಟ್ಟಿಯ ಮಡಿಲಲ್ಲಿವೆ. ಬಬಳ, ದೇವರಗುಡ್ಡ, ಇಂಗಳದಾಳು, ಕಕ್ಕೇರು ಬೆಟ್ಟ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಜೋಗಿಮಟ್ಟಿಯ ಪರಿಸರ ಅನೇಕ ವಿಹಂಗಮ ಸ್ಥಳಗಳಿಂದ ಶ್ರೀಮಂತವಾಗಿದೆ. ಹನುಮನಕಲ್ಲು, ಕುಕ್ಕುವಾರಮ್ಮನ ಗುಡಿ, ಒಕ್ಕಲಿಗರ ಕಟ್ಟೆ ಕಾಯಿನ ಕೊಂಡ, ಪಾಂಡವರಮನೆ, ಹಿಮವತ್ಕದಾರ, ಆಡೂರು ಮಲ್ಲೇಶ್ವರ ಮುಂತಾದ ಸ್ಥಳಗಳೂ ಇಲ್ಲಿ ಚಾರಣಿಗರನ್ನು ಸೆಳೆಯುತ್ತವೆ.
ಇನ್ನುಳಿದಂತೆ, ಜೋಗಿಮಟ್ಟಿಯಲ್ಲಿ ಸಿಗುವಂಥಾ ಸಸ್ಯಸಂಪತ್ತು ಕರ್ನಾಟಕದ ಬೇರ್‍ಯಾವ ಅರಣ್ಯದಲ್ಲಿಯೂ ಕಾಣ ಸಿಗಲಿಕ್ಕಿಲ್ಲ. ಸುಮಾರು ಎಪ್ಪತ್ತು ಜಾತಿಯ ಅಪರೂಪದ ಮರಗಳು, ಇನ್ನೂರಕ್ಕೂ ಹೆಚ್ಚು ಸಸ್ಯ ಪ್ರಬೇಧಗಳು ಇಲ್ಲಿವೆ. ಇಲ್ಲಿ ಚಾರಣಿಗರ ಪಾಲಿಗೆ ಫುಲ್ ಪ್ಯಾಕೇಜಿನಂಥಾ ವಾತಾವರಣವಿದೆ. ಉತ್ತರಕ್ಕೆ ದುರ್ಗದ ಕೋಟೆ, ಪಶ್ಚಿಮಕ್ಕೆ ಚಂದ್ರವಳ್ಳಿ, ದಕ್ಷಿಣಕ್ಕೆ ಹಿಮವತ್ ಕೇದರ, ದೊಡ್ಡಣ್ಣ ನಾಯಕನ ಕೆರೆ, ಆಡು ಮಲ್ಲೇಶ್ವರ ಕಿರು ಮೃಗಾಲಯವಿದೆ. ಇಂಥಾ ಜೋಗಿಮಟ್ಟಿ ಅರಣ್ಯದಲ್ಲಿ ಅಂತರ್ಧಾನ ಹೊಂದಿದ್ದ ಹೊಂಡಗಳನ್ನು ಕ್ಲೀನು ಮಾಡಿಸಿದ್ದ ಕೀರ್ತಿ ಅಂದಿನ ಧಿಕಾರಿ ವರ್ಗಕ್ಕೆ ಸೇರುತ್ತದೆ.
ಗಿಡಮೂಲಿಕೆಗಳ ಉಗ್ರಾಣ
ಇಂಥಾ ಜೋಗಿಮಟ್ಟಿಯಲ್ಲಿ ಈ ಹಿಂದೆ ಅನೇಕ ನಾಟಿ ವೈದ್ಯರ ಗುಂಪು ನೆರೆಯುತ್ತಿತ್ತತು. ಇಲ್ಲಿ ಅಪರೂಪದ ಸಸ್ಯ ಸಂಪತ್ತಿದ್ದ ಕಾರಣ ನಾಟಿ ವೈದ್ಯರ ಸಮ್ಮೇಳನ ಇಲ್ಲಿ ಜರುಗುತ್ತಿತ್ತು. ಸಮುದ್ರ ಮಟ್ಟದಿಂದ ೩೬೦೦ ಅಡಿ ಎತ್ತರದಲ್ಲಿರುವ ಜೋಗಿ ಮಟ್ಟಿಯ ಪ್ರಭೆ ಕರ್ನಾಟಕದ ಗಡಿ ದಾಟಿ ಹಬ್ಬಿಕೊಂಡಿತ್ತು. ಇಷ್ಟೊಂದು ಎತ್ತರ ಪ್ರದೇಶವಾದ್ದರಿಂದಲೇ ಇಲ್ಲಿ ವಿಪರೀತವಾಗಿ ಗಾಳಿ ಬೀಸುತ್ತದೆ. ೧೯೪೦ರಲ್ಲಿ ಈ ಭಾಗವನ್ನು ರಿಸರ್ವ್ ಫಾರೆಸ್ಟ್ ಎಂದು ಘೋಶಿಸಲಾಗಿತ್ತು. ಈ ಕಾರಣಕ್ಕೇ ಇಂದು ಜೋಗಿಮಟ್ಟಿ ವನ್ಯಧಾಮ ಅಂತಲೇ ಕರೆಸಿಕೊಳ್ಳುತ್ತಿದೆ.
ಇಂಥಾ ಜೋಗಿಮಟ್ಟಿ ಪ್ರವಾಸಿಗರಿಂದ ಮಲಿನಗೊಳ್ಳುತ್ತಿರೋದರ ಬಗ್ಗೆ ದಶಕಗಳ ಹಿಂದಿನಿಂದಲೇ ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳು ನಡೆಯುತ್ತಾ ಬಂದಿದ್ದವು. ಪರಿಸರ ಜಾಗೃತಿ ಶಿಭಿರ ಮಾಡಿ ಜಾಗೃತಿ ಮೂಡಿಸಿದ್ದರು. ಇಂಥಾ ಪ್ರಯತ್ನಗಳು ಆ ಕಾಲದಿಂದ ಈ ಕಾಲದವರೆಗೂ ಅನೂಚಾನವಾಗಿ ಮುಂದುವರೆದುಕೊಂಡು ಬಂದಿವೆ. ಈ ಭಾಗದ ಮಂದಿ ಜೋಗಿಮಟ್ಟಿಯನ್ನು ಎಂದಿನಂತೆ ಶುದ್ಧವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಅನೇಕಾನೇಕ ಅಭಿಯಾನಗಳನ್ನು ನಡೆಸಿಕೊಂಡು ಬರುತ್ಚತಿದ್ದಾರೆ. ಸಾವಿರಾರು ಪ್ರವಾಸಿಗರು ಆಗಮಿಸೋದರಿಂದ ಆಗಬಹುದಾದ ಮಾಲೀನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈಗ ಒಂದಷ್ಟು ಸಹ್ಯ ವಾತಾವರಣವಿದೆ ಅಂದರೆ ಅದಕ್ಕೆ ಪರಿಸರಾಸಕ್ತ ಪ್ರಜ್ಞಾವಂತರ ಪ್ರಯತ್ನಗಳೇ ಕಾರಣ.
ಈವತ್ತಿಗೆ ಎಲ್ಲ ಅಧ್ವಾನಗಳಾಚೆಗೆ ಜೋಗಿಮಟ್ಟಿಯಲ್ಲಿ ಒಂದಷ್ಟು ಹಸುರುಳಿದಿದೆ ಎಂದರೆ ಅದಕ್ಕೆ ಕಾರಣ ಚಿತ್ರದುರ್ಗದ ಈ ಹಿಂದಿನ ಅಧಿಕಾರಿಗಳೇ ಕಾರಣ. ಈ ಕಾರಣದಿಂದಲೇ ದುರ್ಗದ ಜನರು ಅವರನ್ನು ಪ್ದರೀತಿಯಿಂದ ವತ್ತಿಗೂ ಅಂಥಾ ಮಹನೀಯ ಅಧಿಕಾರಿಗಳನ್ನು ನಿತ್ಯವೂ ಸ್ಮರಿಸುತ್ತಾರೆ. ಅವರ ಕಾಲದಲ್ಲಿ ಬರಿದಾಗಿದ್ದ ಪ್ರದೇಶದಲ್ಲಿ ಬಿತ್ತಿದ್ದ ಬೀಜ ಗಿಡವಾಗಿ, ಇದೀಗ ಹೆಮ್ಮರವಾಗಿ ಬೆಳೆದು ನಿಂತಿವೆ. ಗುಂಪುಗಳನ್ನು ಮಾಡಿ ಸುಮಾರು ಐದು ಲಕ್ಷ ಬೀಜಗಳನ್ನು ಮಳೆಗಾಲದಲ್ಲಿ ಜೋಗಿ ಮಟ್ಟಿಗೆ ಎರಚಲಾಗಿತ್ತು. ಇಂಥಾ ಕೆಲಸ ಮಾಡಿದ್ದ ಅಧಿಕಾರಿಗಳು ಪರಿಸ ಜಾಗೃತಿಗಾಗಿ ಶಕ್ತಿ ಮೀರಿ ಶ್ರಮಿಸಿದ್ದರು.
ವಿಂಡ್ ಫ್ಯಾನ್ ಕಂಟಕ
ಇಂಥಾ ಹಸಿರುಹೊದ್ದ ಸ್ವರ್ಗದಂಥಾ ಜೋಗಿಮಟ್ಟಿಗೆ ನೋಡ ನೋಡುತ್ತಲೇ ವಿಂಡ್ ಫ್ಯಾನ್ ಎಂಟ್ರಿ ಕೊಟ್ಟಿತ್ತು. ಬಂಡವಾಳಶಾಹಿಗಳ ವಿಂಡ್ ಫ್ಯಾನ್ ಮೂಲಕ ಕಪ್ಪು ಹಣ ಬಿಳಿ ಮಾಡಿಕೊಳ್ಳುವ ಕಸರತ್ತು ನಡೆಸಿದ್ದರು. ಹೇಳಿಕೇಳಿ ಜೋಗಿಮಟ್ಟಿಗೆ ಏಷ್ಯಾ ಖಮಡದಲ್ಲಿಯೇ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶವೆಂಬ ಹೆಗ್ಗಳಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಮಂದಿ ಓಬವ್ವನಹಳ್ಳಿ, ಉಪ್ಪನಾಯ್ಕನಹಳ್ಳಿ, ಕುಂಚಿಗನಾಳ, ಇಂಗಳದಾಳ ಮುಂತಾದೆಡೆಗಳಲ್ಲಿ ಗಾಳಿ ಯಂತ್ರಗಳನ್ನು ಅಳವಡಿಸಿದ್ದರು. ಗಾಳಿ ಹೆಚ್ಚಾದಷ್ಟೂ ಫ್ಯಾನುಗಳು ಜಾಸ್ತಿ ತಿರುಗಿ ಬಂಡವಾಳ ಶಾಹಿಗಳ ತಿಜೋರಿ ತುಂಬುತ್ತದೆ. ಇಂಥಾ ಲಾಭದಾಸೆಯಿಂದ ಹುಟ್ಟಿಕೊಂಡ ಗಾಳಿಯಂತ್ರಗಳು ಜೋಗಿಮಟ್ಟಿಯ ಎದೆ ಮೇಲೆ ರಾರಾಜಿಸಲಾರಂಭಿಸಿದ್ದವು.
ಹೀಗೆ ನಾನಾ ದಿಕ್ಕುಗಳಲ್ಲಿ ಜೋಗಿಮಟ್ಟಿಯ ವಾತಾವರಣ ಹಡಾಲೇಳಲಾರಂಭಿಸಿದಾಗ ಈ ಭಾಗದ ಪ್ರಜ್ಞಾವಂತರು ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ಚಿತ್ರದುರ್ಗ ಭಾಗದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಇದಕ್ಕೆ ನಾಗರಿಕರೂ ಕೂಡಾ ಸಾಥ್ ಕೊಡುತ್ತಾ ಬರುತ್ತಿದ್ದಾರೆ. ಇಂಥಾ ಜೋಗಿಮಟ್ಟಿಯೀಗ ಹೊಸತಾಗಿ ಬರುವ ಪ್ರವಾಸಿಗರಿಗೂ ಕೂಡಾ ರೇಜಿಗೆ ಮೂಡಿಸುತ್ತಿದೆ. ಕೆಲ ಪ್ರವಾಸಿಗರು ಜೋಗಿಮಟ್ಟಿ ಬೆಳವಣಿಗೆ ಕಂಡಿಲ್ಲ ಎಂಬಂಥಾ ತಕರಾರು ಹೊಂದಿದ್ದಾರೆ. ಸಾವಿರಾರು ಮಂದಿ ಜೋಗಿಮಟ್ಟಿಗೆ ಆಗಮಿಸುತ್ತಾರೆ. ಆದರೆ ಅವರಿಗಿಲ್ಲಿ ಯಾವ ಸೌಕರ್ಯಗಳೂ ಇಲ್ಲ. ಅಕಸ್ಮಾತಾಗಿ ಅವರು ಚಿತ್ರದುರ್ಗದಿಂದ ತಿಂಡಿ ಊಟ ಕಟ್ಟಿಸಿಕೊಂಡು ಬರದಿದ್ದರೆ ಪಡಬಾರದ ಪಾಡು ಅನುಭವಿಸಬೇಕಾಗುತ್ತದೆ. ಯಾಕೆಂದರೆ, ಅಲ್ಲಿ ಏನೂ ಸಿಗುವುದಿಲ್ಲ. ಜೋಗಿಮಟ್ಟಿಯಲ್ಲೊಂದು ಬ್ರಟಿಷ್ ಕಾಲದ ಬಂಗಲೆಯಿದೆ. ಚಳಿಗಾಲದಲ್ಲಿ ಬೆಚ್ಚಗಿದ್ದು, ಬೇಸಿಗೆಯಲ್ಲಿ ತಂಪಾಗಿರೋದು ಆ ಬಂಗಲೆಯ ಅಸಲೀ ವಿಶೇಷತೆ. ಇಂಥಾ ಬಂಗಲೆಗೆ ಈವತ್ತಿಗೂ ಖಾಯಂ ನೌಕರರಿಲ್ಲ. ಅರಣ್ಯ ಇಲಾಖೆಯ ಅಧಿನದಲ್ಲಿರುವ ಸದರಿ ಬಂಗಲೆ ಇದ್ದೂ ಇಲ್ಲದಂತಾಗಿದೆ.
ಮಾಲೀನ್ಯವೂ ಇದೆ
ರಾತ್ರಿ ಇಲ್ಲಿಯೇ ಪ್ರವಾಸಿಗರು ಉಳಿಯಬೇಕಾಗಿ ಬಂದರೆ ದುರ್ಗದಿಂದ ಊಟ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ರಾತ್ರಿ ಇಲ್ಲಿ ಉಳಿಯುವ ಪ್ರವಾಸಿಗರು ತ್ಯಾಜ್ಯಗಳನ್ನು, ಎಣ್ಣೆ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಅದನ್ನು ವಿಲೇವಾರಿ ಮಾಡೋದಾಗಲಿ, ಗಲೀಜಾಗದಂತೆ ತಡೆಯೋದಾಗಲಿ ನಡೆಯುತ್ತಿಲ್ಲ. ಹೀಗಿರುವಾಗ ಜೋಗಿಮಟ್ಟಿಯ ಸ್ವರ್ಗದಂಥಾ ವಾತಾವರಣ ಹೇಗೆ ಹದಗೆಡದಿರಲು ಸಾಧ್ಯ? ಈಗಾಗಲೇ ವಿಂಡ್ ಫ್ಯಾನ್ಗಳಿರೋದರಿಂದ ಕೇಬಲ್ ಕಾರ್ ಬಂದರೆ ಏನು ತೊಂದರೆ ಅಂತ ಪ್ರವಾಸಿಗರೇ ಕೇಳುತ್ಚತಿದ್ದಾರೆ. ಆದರೆ, ಇಲ್ಲಿ ಎಲ್ಲವೂ ಅವ್ಯವಸ್ಥೆಗಳೇ. ಇಲ್ಲೊಂದು ವೀವ್ ಪಾಯಿಂಟಿದೆ. ಆ ಕಾಲದಲ್ಲಿ ಅಲ್ಲಿಗೆ ಹತ್ತಿ ಹೋಗಲು ಪ್ರಯಾಸ ಪಡಬೇಕಾಗುತ್ತಿತ್ತು. ಇಂಥಾ ಹೊತ್ತಿನಲ್ಲಿ ಅಲ್ಲಿಗೆ ಮೆಟ್ಟಿಲು ಮಾಡಿಸಿದ್ದರು. ಇಂಥಾ ಒಂದಷ್ಟು ಸವಲತ್ತುಗಳ ಮೂಲಕ ಜೋಗಿಮಟ್ಟಿಯನ್ನು ಸಹ್ಯವಾಗಿಸುವ ಅವಕಾಶಗಳಿದ್ದಾವೆ.
ಚಿತ್ರಂಗದ ಫೇವರಿಟ್
ಇನ್ನುಳಿದಂತೆ ಸಿನಿಮಾ ಮಂದಿಗೂ ಇದು ಪ್ರೀತಿ ತಾಣ. ವಿಷ್ಣವರ್ಧನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಚಿತ್ರ ನಾಗರಹಾವು. ಈ ಸಿನಿಮಾದ ಬಾರೆ ಬಾರೆ ಚೆಂದದ ಚೆಲುವಿನ ತಾರೆ ಹಾಡು ಚಿತ್ರೀಕರಣವಾಗಿದ್ದು ಇದೇ ಜೋಗಿಮಟ್ಟಿಯಲ್ಲಿ. ಕೊಂಚ ಎಚ್ಚರದಿಂದ ಹೆಜ್ಜೆಯಿಟ್ಟರೂ ಜೋಗಿಮಟ್ಟಿಯ ಪರಿಸರಕ್ಕೆ ಹಾನಿಯಾಗದಂತೆ ಅದನ್ನು ಪ್ರವಾಸಿ ತಾಣವಾಗಿ ಮತ್ತಷ್ಟು ಎತ್ತರಕ್ಕೇರಸಿಬಹುದು.
ಗಣ್ಯರೆಲ್ಲ ಸೇರಿ ಒಂದು ಅಭಿವೃದ್ಧಿ ಸಮಿತಿ ರಚಿಸಿಕೊಂಡು, ಇಲ್ಲಿನ ಪರಿಸರ ಹಾನಿಯ ಬಗ್ಗೆ ಆಲೋಚಿಸಬೇಕಿದೆ. ಪರಿಸರಕ್ಕೆ ಕುಂದಾಗದಂತೆ ಪ್ರವಾಸೋದ್ಯಮ ಬೆಳೆಸುವ ದಿಕ್ಕಿನಲ್ಲಿ ಆಲೋಚಿಸಬೇಕಿದೆ. ಮದಕರಿ ರಸ್ತೆಯಿಂದ ಅನ್ನಪೂರ್ಣೇಶ್ವರಿ ದೇವಸ್ಥಾನದವರೆಗೆ ನೂರಡು ರಸ್ತೆ ಇದೆ. ಆದರೆ ಅದೀಗ ಅರವತ್ತಡಿ ರಸ್ತೆಯಾಗಿಯೂ ಉಳಿದಿಲ್ಲ. ಚಿತ್ರದುರ್ಗದ ಉತ್ಸಾಹಿ ಅರಣ್ಯ ಇಲಾಖೆಯವರು ಜೋಗಿಮಟ್ಟಿಯ ಪರಿಸರ ಕೆಡದಂತೆ ಎಚ್ಚರದಿಂದಿರಬೇಕಿದೆ. ಇಲ್ಲಿಗೆ ಬರುವ ಪ್ರವಾಸಿಗರೂ ಕೂಡಾ ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಂಡು, ವಾತಾವರಣ ಕಲುಷಿತಗೊಳಿಸದೆ ಸಂಭ್ರಮಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕಿದೆ. ಇಷ್ಟಾದರೆ ಕರ್ನಾಟಕದ ಜೋಗಿಮಟ್ಟಿ ಅನ್ನಿಸಿಕೊಂಡಿರುವ ಕರ್ನಾಟಕದ ಘನತೆ ಹಾಗೆಯೇ ಉಳಿದುಕೊಳ್ಳುತ್ತದೆ.
ದೇವಾಲಯಗಳ ಬೀಡು
ಚಿತ್ರದುರ್ಗ ಅಂದರೆ ಕೋಟೆ ಕೊತ್ತಲಗಳು ಕಣ್ಮುಂದೆ ಬರುತ್ತವೆ. ಆದರೆ ಚಿತ್ರದುರ್ಗದಲ್ಲಿರೋದು ಕೋಟೆಗಳು ಮಾತ್ರವಲ್ಲ. ಅದು ದೈವೀಕ ಅನುಭೂತಿಯ ತಾಣವೂ ಹೌದು. ಚಿತ್ರದುಘದಿಂದ ಐದು ಕಿಲೋಮೀಟರ್ ದೂರದಲ್ಲಿಯೇ ಪುರಾಣ ಪ್ರಸಿದ್ಧ ಆಡುಮಲ್ಲೇಶ್ವರ ದೇವಸ್ಥಾನವಿದೆ. ಅದರ ಬಾಜಿನಲ್ಲಿಯೇ ಮಿನಿ ಮೃಗಾಲಯವೂ ಇದೆ. ಇನ್ನು ಅನತಿ ದೂರದಲ್ಲಿಯೇ ಹದಿನೈದನೇ ಶತಮಾನದ ಬೃಹತ್ ಏಕಶಿಲಾ ಗಂನಪತಿ ದೇವಸ್ಥಾನವಿದೆ. ಇನ್ನುಳಿದಂತೆ ಮೊಳಕಾಲ್ಮೂರು ತಾಲೂಕಿನಲ್ಲಿ ಹಲವಾರು ಐತಿಹಾಸಿಕ ಶಾಸನಗಳನ್ನು ಒಳಗೊಂಡಿರುವ ಬೆಟ್ಟಗಳಿದ್ದಾವೆ. ಅದರ ಇಕ್ಕೆಲದಲ್ಲಿಯೇ ಗಾಯತ್ರಿ ಜಲಾಶಯವೂ ಇದೆ.
ಇದು ಬಯಲು ಸೀಮೆಯೂ ಹೌದು. ಮೆಲೆನಾಡಿನಂಥಾ ದಟ್ಟ ಕಾಡುಗಳಿಂದ ಆವೃತವಾದ ಪ್ರದೇಶವೂ ಹೌದು. ಇಲ್ಲಿಯೇ ವನ್ಯ ಜೀವಿ ಅಭಯಾರಣ್ಯವೂ ಇದೆ. ಬೆಟ್ಟ ಗುಡ್ಡಗಳ ಸುಂದರ ಪ್ರದೇಶದ ಮೈ ತುಂಬಾ ಈ ವನ್ಯಜೀವಿ ತಾಣ ವ್ಯಾಪಿಸಿಕೊಂಡಿದೆ. ಇಲ್ಲಿ ಅಳಿವಿನಂಚಿನಲ್ಲಿರುವಂಥಾ ಅತ್ಯಪರೂಪಪದ ಅನೇಕ ಪ್ರಾಣಿ ಪಕ್ಷಿಗಳು ಸ್ವಚ್ಚಂದವಾಗಿ ವಿಹರಿಸುತ್ತಿದ್ದಾವೆ. ಇಂಥಾ ವನ್ಯ ಜೀವಿಗಳು ನೆಲೆ ಕಂಡುಕೊಳ್ಳಲು ನೀರಿನ ಸೆಲೆ ಇರಲೇ ಬೇಕು. ಅದಕ್ಕಾಗಿಯೇ ವಾಣಿ ವಿಲಾಸ ಡ್ಯಾಂ ಕೂಡಾ ಇಲ್ಲಿದೆ. ಇನ್ನುಳಿದಂತೆ ಚಿತ್ರದುರ್ಗ ಕೋಟೆ, ಅಶೋಕ ಸಿದ್ದಾಪುರ ಸೇರಿದಂತೆ ಒಂದು ದಿನಕ್ಕೆ ನೋಡಿ ಮುಗಿಯದ ಅತ್ಯದ್ಭುತ ತಾಣಗಳು ಇಲ್ಲಿವೆ.