ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ನ ಹತ್ತನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಇದೇ ಅ. 8 ರಿಂದ ‘ಬಿಗ್ ಬಾಸ್’ ಕನ್ನಡ ಸೀಸನ್ 10 ಆರಂಭವಾಗಲಿದ್ದು, ಅಂದು ಅದ್ಧೂರಿ ಸಮಾರಂಭದ ಮೂಲಕ ಈ ಸೀಸನ್ ಗೆ ಅಧಿಕೃತ ಚಾಲನೆ ಸಿಗಲಿದೆ.
ಇನ್ನು ಈ ಬಾರಿಯೂ ‘ಬಿಗ್ ಬಾಸ್’ ರಿಯಾಲಿಟಿ ಶೋ ದಲ್ಲಿ ನಿರೂಪಣೆಯ ಸಾರಥ್ಯವನ್ನು ನಟ ಕಿಚ್ಚ ಸುದೀಪ್ ಅವರೇ ವಹಿಸಲಿದ್ದಾರೆ. ಈ ಮೂಲಕ ಭಾರತದಲ್ಲಿ ‘ಬಿಗ್ ಬಾಸ್’ ಆವೃತ್ತಿಯಲ್ಲಿ ಸತತ ಹತ್ತನೇ ಬಾರಿಗೆ ನಿರೂಪಣೆ ಮಾಡುತ್ತಿರುವ ಸ್ಟಾರ್ ಎಂಬ ಹೆಗ್ಗಳಿಕೆಗೂ ಸುದೀಪ್ ಪಾತ್ರವಾಗುತ್ತಿದ್ದಾರೆ.
ಇತ್ತೀಚೆಗಷ್ಟೇ ‘ಬಿಗ್ ಬಾಸ್’ ಕನ್ನಡ ಸೀಸನ್ 10 ಶೋ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ನಟ ಸುದೀಪ್, ಆರಂಭದಿಂದ ಇಲ್ಲಿಯವರೆಗೂ ನಡೆದುಕೊಂಡು ಬಂದಿರುವ ‘ಬಿಗ್ ಬಾಸ್’ ಕನ್ನಡ ಸೀಸನ್ ಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇನ್ನ ಈ ಬಾರಿಯ ‘ಬಿಗ್ ಬಾಸ್’ ಕನ್ನಡ ಸೀಸನ್ 10 ರಿಯಾಲಿಟಿ ಶೋ ‘ಕಲರ್ಸ್ ಕನ್ನಡ ವಾಹಿನಿ’ಯಲ್ಲಿ ಪ್ರಸಾರವಾಗಲಿದೆ. ಅ. 8 ರಂದು ‘ಬಿಗ್ ಬಾಸ್’ ಕನ್ನಡ ಸೀಸನ್ 10 ಕ್ಕೆ ಚಾಲನೆ ಸಿಗಲಿದ್ದು, ಪ್ರತಿದಿನ ರಾತ್ರಿ 9.30 ರಿಂದ 11 ಗಂಟೆಯವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವಾರಾಂತ್ಯದಲ್ಲಿ ನಟ ಸುದೀಪ್, ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಹಾಜರಾಗಲಿದ್ದಾರೆ.