‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ನಟ ಕಂ ನಿರ್ದೇಶಕ ರಾಜ್ ಬಿ. ಶೆಟ್ಟಿ ನಟನೆ ಮತ್ತು ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಟೋಬಿ’ಯ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ಆಗಸ್ಟ್ 25 ರಂದು ‘ಟೋಬಿ’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿ ತೆರೆಗೆ ಬರುತ್ತಿದ್ದು, ಇತ್ತೀಚೆಗೆ ‘ಟೋಬಿ’ ಸಿನಿಮಾದ ಟ್ರೇಲರ್ ಕೂಡ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಟೋಬಿ’ ಟ್ರೇಲರಿನಲ್ಲಿ ಸಿನಿಮಾದ ಕಥಾಹಂದರದ ಸಣ್ಣ ಝಲಕ್ ಅನ್ನು ಬಿಟ್ಟುಕೊಡಲಾಗಿದೆ. ಅಮಾಯಕನೊಬ್ಬನ ಅತ್ಯಂತ ಭಯಾನಕ ಮುಖ ಅನಾವರಣವಾಗಿ, ಮುಂದೆ ಮೈಕೈಗೆ ರಕ್ತಮೆತ್ತಿಕೊಳ್ಳುವ ಕಥೆಯ ಸಣ್ಣ ಎಳೆಯನ್ನು ಟ್ರೇಲರ್ ತೆರೆದಿಟ್ಟಿದೆ.
‘ಹರಕೆ ಕುರಿಯೊಂದು ತಪ್ಪಿಸಿಕೊಂಡಿದೆ. ಯಾವುದೇ ಕಾರಣಕ್ಕೂ ಕುರಿ ಮತ್ತೆೆ ಊರಿಗೆ ಕಾಲಿಡಬಾರದು. ಕುರಿ ಹಿಂದೆ ಬಂದ್ರೆೆ ಅದು ಕುರಿಯಾಗಿರಲ್ಲ, ಮಾರಿಯಾಗಿರುತ್ತೆೆ…’ ಎಂಬ ಡೈಲಾಗ್ ‘ಟೋಬಿ’ ಸಿನಿಮಾದ ಕಥೆಗೆ ಕನ್ನಡಿ ಹಿಡಿಯುವಂತಿದ್ದು, ಮಾಸ್ ಆಡಿಯನ್ಸ್ ಗಮನ ಸೆಳೆಯುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ‘ಟೋಬಿ’ ಟ್ರೇಲರ್ ನೋಡಿದವರು ಕೂಡ, ‘ಇದೊಂದು ರೆಗ್ಯುಲರ್ ಪ್ಯಾಟರ್ನ್ ಸಿನಿಮಾ ಅಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಯು-ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ‘ಟೋಬಿ’ ಟ್ರೇಲರ್ ಒಂದೇ ವಾರದಲ್ಲಿ ಬರೋಬ್ಬರಿ 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯಾಗಿದೆ.
‘ಲೈಟರ್ ಬುದ್ಧ ಫಿಲಂಸ್’, ‘ಅಗಸ್ತ್ಯ ಫಿಲಂಸ್’ ಹಾಗೂ ‘ಕಾಫಿ ಗ್ಯಾಂಗ್ ಸ್ಟುಡಿಯೋ’ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಟೋಬಿ’ ಸಿನಿಮಾದಲ್ಲಿ ರಾಜ್ .ಬಿ. ಶೆಟ್ಟಿ ಅವರೊಂದಿಗೆ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ತನ್ನ ಟ್ರೇಲರ್ ಮೂಲಕ ಸಿನಿಮಾ ಪ್ರೇಮಿಗಳ ಗಮನ ಸೆಳೆಯಲು ಸಕ್ಸಸ್ ಆಗಿರುವ ‘ಟೋಬಿ’ ಥಿಯೇಟರಿನಲ್ಲಿ ಹೇಗೆಲ್ಲ ಅಬ್ಬರಿಸಲಿದೆ ಎಂಬುದು ಇದೇ ಆಗಸ್ಟ್ ತಿಂಗಳ ಕೊನೆಯೊಳಗೆ ಗೊತ್ತಾಗಲಿದೆ.