ಪ್ರೇಮಲೋಕ(Premaloka).. ಯಾರಿಗೆ ಈ ಸಿನಿಮಾ ಬಗ್ಗೆ ಗೊತ್ತಿಲ್ಲ ಹೇಳಿ ಗಾಂದೀನಗರದ ಗಲ್ಲಿಯಿಂದ ಹಿಡಿದು ಹಳ್ಳಿಯ ಓಣಿಗಳಿಗೂ ಪ್ರೇಮಲೋಕದ ಮ್ಯಾಜಿಕ್ ಎಂತದ್ದು ಅನ್ನೋದು ಗೊತ್ತಿದೆ. ಹಂಸಲೇಖ(Hamsalekha)-ಕ್ರೇಜಿ಼ ಸ್ಟಾರ್(Crazy Star) ಜುಗಲ್ಬಂಧಿಯಲ್ಲಿ ಮೂಡಿಬಂದ ಪ್ರೇಮಲೋಕ ಕನ್ನಡ ಚಿತ್ರರಸಿಕರಲ್ಲಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿ ಮಾಡಿತ್ತು. ಆ ಮೂಲಕ ಕ್ರೇಜಿ ಸ್ಟಾರ್ ಆಗಿ ವಿ. ರವಿಚಂದ್ರನ್(V. Ravichandran) ಜನರ ಮನಸ್ಸಲ್ಲಿ ಹಚ್ಚೆ ಹಾಕಿದಂತೆ ಕುಳಿತು ಬಿಟ್ಟಿದ್ರು. ಅಂತಹದ್ದೊಂದು ಅಭೂತಪೂರ್ವ ಇತಿಹಾಸವನ್ನು ಪ್ರೇಮಲೋಕ ಸೃಷ್ಟಿ ಮಾಡಿಬಿಟ್ಟಿತ್ತು.
ಪ್ರೇಮಲೋಕ(Premaloka) ಮೋಡಿಗೆ ಒಳಗಾಗಿ ಬರೋಬ್ಬರಿ 37 ವರ್ಷ. ಪಡ್ಡೆ ಹೈಕ್ಳ ನಿದ್ದೆ ಕದ್ದ ಸಾಂಗ್ಸ್ ಇವತ್ತಿಗೂ ಟ್ರೆಂಡಿಂಗ್ ನಲ್ಲಿವೆ. ಕಾಲೇಜ್ ಲವ್ ಸಬ್ಜೆಕ್ಟ್, ಜೂಹಿ ಚಾವ್ಲ (Juhi Chawla) ಬ್ಯೂಟಿ, ರವಿಚಂದ್ರನ್(V. Ravichandran) ಚಾರ್ಮ್ ಎಲ್ಲವೂ ಜಾದೂ ಮಾಡಿತ್ತು. ಇವತ್ತು ಕೋಟಿ ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡೋದು ದೊಡ್ಡ ವಿಚಾರವೇನಲ್ಲ ಆದ್ರೆ ಮೂರುವರೆ ದಶಕದ ಹಿಂದೇಯೇ ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡೋದು ದೊಡ್ಡ ಸವಾಲಿನ ಕೆಲಸ. ಕ್ರೇಜಿ಼ ಸ್ಟಾರ್(Crazy Star) ಅಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ರು. ಜಿದ್ದಿಗೆ ಬಿದ್ದು ಮಾಡಿದ ಪ್ರೇಮಲೋಕ ಮುಂದೆ ಸೃಷ್ಟಿಸಿದ್ದು ಇತಿಹಾಸ. ಈಗ ಆ ಇತಿಹಾಸ ಮತ್ತೆ ಸೃಷ್ಟಿ ಆಗೋ ಕಾಲ ಬಂದಿದೆ.
ಹೌದು, ಇದೀಗ ಮತ್ತೆ ಪ್ರೇಮಲೋಕ(Premaloka) ಸಿನಿಮಾ ಬಾರೀ ಚರ್ಚೆಯಲ್ಲಿದೆ. ಈ ಚರ್ಚೆಗೆ ಕಾರಣ ಕ್ರೇಜಿ಼ ಸ್ಟಾರ್(Crazy Star). ಹಲವು ವೇದಿಕೆಗಳಲ್ಲಿ ಪ್ರೇಮಲೋಕ ಸೀಕ್ವೆಲ್ ಮಾಡೋ ಬಗ್ಗೆ ಮಾತಾನಾಡ್ತಾಯಿದ್ರು. ಆದ್ರೆ ಆ ಸುದ್ದಿ ಈಗ ಖಚಿತವಾಗಿದೆ. ಪ್ರೇಮಲೋಕ-2(Premaloka-2) ಮಾಡಲು ಕೋಟಿ ಕೋಟಿ ಹಣಬೇಕು ಅದಕ್ಕಾಗಿ ತಾವು ಕಷ್ಟಪಟ್ಟು ದುಡಿಯುತ್ತಿರೋದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಪ್ರೇಮಲೋಕ(Premaloka) ಕಾಮನ್ ಮ್ಯಾನ್ ಜೊತೆ ನಡೆಯೋ ಸಬ್ಜೆಕ್ಟ್. ಬಹಳ ದೊಡ್ಡ ಮಟ್ಟದಲ್ಲಿ ತಯಾರಿ ನಡೆಯುತ್ತಿರೋ ಬಗ್ಗೆಯೂ ತಿಳಿಸಿದ್ದಾರೆ. ಅಲ್ಲಿಗೆ ಕ್ರೇಜಿ಼ ಸ್ಟಾರ್ ಕ್ರೇಜಿ಼ ಲೋಕ ತೆರೆ ಮೇಲೆ ಅನಾವರಣ ಆಗೋದು ಕನ್ಫರ್ಮ್ ಆದಂಗೆ. ಸುದ್ದಿ ಕೇಳಿಬಂದಲ್ಲಿಂದ ಕ್ರೇಜಿ಼ ಅಭಿಮಾನಿ ಬಳಗ ಹಾಗೂ ಪ್ರೇಮಲೋಕ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಸಿನಿಮಾ ಯಾವ ರೀತಿ ಇರಲಿದೆ ಎನ್ನುವ ಇಮ್ಯಾಜಿನರಿ ಮೂಡ್ ಗೆ ಜಾರಿದ್ದಾರೆ.