-ಅವರ ಕೈಗೆ ಹೆಣ್ಣುಮಕ್ಕಳು ಸಿಕ್ರೆ ನರಕದರ್ಶನ!
-ಮಕ್ಕಳ ಕಳ್ಳತನ ಅನ್ನೋದು ಈಗಲೂ ಇದೆಯಾ?
ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಬೇರೂರಿಕೊಂಡಿರೋ ದಂಧೆಗಳು ಒಂದೆರಡಲ್ಲ. ಅಲ್ಲಿ ದುಡಿದು ಬದುಕುವವರಿಗೆ ಅಗಾಧ ಅವಕಾಶಗಳಿವೆ. ಬೇರೆಯವರನ್ನ ಹುರಿದು ಮುಕ್ಕುವ ರಕ್ಕಸರಿಗೂ ಕೂಡಾ ಅಂಥಾದ್ದೇ ಅವಕಾಶಗಳಿವೆ. ನೀವೇನಾದರೂ ಬೆಂಗಳೂರಿನಂಥಾ ನಿವಾಸಿಗಳಾಗಿದ್ದರೆ, ಅಪರೂಪಕ್ಕಾದರೂ ಅಲ್ಲಿಗೆ ಹೋಗಿ ಬಂದ ಅನುಭವವಿದ್ದರೆ ಕಂಡ ಕಂಡಲ್ಲಿ ಸನ್ನೆಗಳ ಮೂಲಕ ಸೆಳೆಯೋ ಬೆಲೆವೆಣ್ಣುಗಳನ್ನು ಗಮನಿಸಿರುತ್ತೀರಿ. ಸಿಂಗಾರಗೊಂಡು, ಉದ್ರೇಕಿಸುವಂಥಾ ಮಾದಕ ನೋಟ ಬೀರುತ್ತಾ ಗಿರಾಕಿಗಳಿಗಾಗಿ ಕಾದು ಕೂತ ಈ ಜೀವಗಳಿಗೆ ಸಭ್ಯ ಸಮಾಜ ಸೂಳೆಯರೆಂಬ ಪಟ್ಟ ಕೊಟ್ಟಿದೆ. ಸಭ್ಯ ಭಾಷೆಯಲ್ಲದಕ್ಕೆ ವೇಶ್ಯಾವಾಟಿಕೆ ಅನ್ನಲಾಗುತ್ತೆ. ವಾಸ್ತವವೆಂದರೆ, ಮೇಲುನೋಟಕ್ಕೆ ಆ ಜೀವಗಳ ಬಗ್ಗೆ ಅಸಹ್ಯ ಹೊಂದಿರುವವರೇ ರಾತ್ರಿ ಹೊತ್ತಲ್ಲಿ ಗಿರಾಕಿಗಳಾಗೋದೂ ಇದೆ. ಆದರೆ, ಹಾಗೆ ಬೀದಿಯಲ್ಲಿ ಕೈಚಾಚಿ ನಿಂತವರ ಹಿಂದೆ ಅದೆಂಥಾ ಕರುಣಾಜನಕ ಕಥೆಗಳಿರಬಹುದು, ಅವರ ನೋವೆಂಥಾದ್ದು, ಯಾರದ್ದೋ ಮನೆಯ ಕೂಸಾಗಿ ಹುಟ್ಟಿದ್ದ ಆ ಹೆಣ್ಣುಮಕ್ಕಳನ್ನು ಈ ರೀತಿ ಬೀದಿಗಿಳಿಸಿದ ದುಷ್ಟ ವ್ಯವಸ್ಥೆ ಯಾವುದೆಂಬುದರ ಬಗ್ಗೆ ಬಹುತೇಕರು ಯೋಚಿಸೋ ಗೋಜಿಗೆ ಹೋಗುವುದಿಲ್ಲ.
ನತದೃಷ್ಟ ಬದುಕು

ವೇಶ್ಯಾವಾಟಿಕೆ ಅಂದಾಕ್ಷಣ ಕಾಮದ ಕಮಟು ಮಾತ್ರವೇ ಮುತ್ತಿಕೊಳ್ಳುತ್ತೆ. ಹಾದಿ ಬಿಟ್ಟ ಹೆಣ್ಣು ಮಕ್ಕಳು ಆ ದಂಧೆಗಿಳಿಯುತ್ತಾರೆಂಬಂತೆ ಈ ಸಮಾಜ ಷರಾ ಬರೆದು ಬಿಟ್ಟಿದೆ. ಈವತ್ತಿಗೆ ಹೆಣ್ಣುಮಕ್ಕಳನ್ನು ಹೇಗೆಲ್ಲಾ ಕಾಮ ಕೂಪಕ್ಕಿಳಿಸುತ್ತಾರೆಂಬ, ಆ ದಂಧೆಯ ಹಿಂದೆ ಎಂತೆಂಥಾ ಮಾಫಿಯಾಗಳಿವೆ ಎಂಬ ಬಗ್ಗೆ ಜನಸಾಮಾನ್ಯರಿಗೂ ಗೊತ್ತಿದೆ. ಆದರೆ ಈ ಕ್ಷಣಕ್ಕೂ ಹೆಣ್ಣುಮಕ್ಕಳು ತಾವೇ ಇಷ್ಟಪಟ್ಟು ವೇಶ್ಯಾವಾಟಿಕೆಗಿಳಿಯುತ್ತಾರೆ ಅಂದುಕೊಂಡವರ ಸಂಖ್ಯೆ ಜಾಸ್ತಿಯಿದೆ. ಆದರೆ, ಅದರ ಹಿಂದಿರೋದು ಲಾಗಾಯ್ತಿನಿಂದ ಚಾಲ್ತಿಯಲ್ಲಿರೋ ಮಾನವ ಕಳ್ಳ ಸಾಗಣೆ ಜಾಲ. ಹ್ಯೂಮನ್ ಟ್ರಾಫಿಕಿಂಗ್ ಅಂತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಿರೆಸಿಕೊಳ್ಳೋ ಈ ಅನಿಷ್ಟ ವಿಷವರ್ತುಲಕ್ಕೆ ನಮ್ಮ ದೇಶವೊಂದರಲ್ಲಿಯೇ ವರ್ಷವೊಂದಕ್ಕೆ ಸಾವಿರಾರು ಎಳೇಯ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ.
ಪ್ರೀತಿಸೋ ನಾಟಕದ ಮೂಲಕ, ಅಪಹರಣಗಳ ಮೂಲಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳೋ ಕಥೆಗಳನ್ನ ಸಿನಿಮಾಗಳಲ್ಲಿ ನೋಡಿರುತ್ತೇವೆ. ಅದೊಂದು ಸಿನಿಮಾ ಕಥೆ ಮಾತ್ರ, ವಾಸ್ತವದಲ್ಲಿ ಅಂಥಾದ್ದೆಲ್ಲ ನಡೆಯೋದಿಲ್ಲ ಅಂತ ನಮ್ಮನ್ನು ನಾವೇ ಸಮಾಧಾನಿಸಿಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ನಡೆಯೋ ಕ್ರೌರ್ಯಗಳ ಕಥೆಯ ಮುಂದೆ ಸಿನಿಮಾ ಸೀನುಗಳೇ ಡಲ್ಲು ಹೊಡೆಯುತ್ತವೆ. ಯಾಕೆಂದರೆ, ಕೆಲಸ ಕೊಡಿಸೋ ನೆಪದಲ್ಲಿಯೂ ಹುಡುಗೀರನ್ನು ಪಾಪಕೂಪಕ್ಕೆ ತಳ್ಳುವ ಕಿರಾತಕರು ಇಲ್ಲಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಭಾರತ ಮೂಲಕ ಮೂವರು ಹೆಣ್ಣು ಮಕ್ಕಳು ಹೀಗೆಯೇ ವಂಚನೆಗೀಡಾಗಿ ತಪ್ಪಿಸಿಕೊಂಡಿದ್ದರು. ಅದು ಹೇಗೋ ಯಶವಂತಪುರ ರೈಲ್ವೇ ನಿಲ್ದಾಣದ ಬಳಿ ಅವರನ್ನು ಪೊಲೀಸರು ರಕ್ಷಿಸಿದ್ದರು. ಈ ಮೂಲಕ ಹ್ಯೂಮನ್ ಟ್ರ್ಯಾಫಿಕಿಂಗ್ ದಂಧೆ ಮತ್ತೆ ದೇಶಾದ್ಯಂತ ಸುದ್ದಿಯಲ್ಲಿದೆ.
ಹೀಗೆ ಯಶವಂತಪುರದಲ್ಲಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದರಲ್ಲಾ ಮೂವರು ಹುಡುಗಿಯರು? ಅವರೆಲ್ಲರೂ ಕೂಡಾ ಕೆಲಸದಾಸೆಯಿಂದ ಯಾಮಾರಿ ದುಷ್ಟರ ಬಲೆಗೆ ಬಿದ್ದವರು. ಚೆಂದಗೆ ಓದಿಕೊಂಡು ಕೆಲಸಕ್ಕಾಗಿ ಅರಸುತ್ತಿದ್ದ ಇವರನ್ನು ವಂಚಕರ ಗ್ಯಾಂಗು ಬೆಂಗಳೂರಿನಲ್ಲಿ ಕೆಸ ಕೊಡಿಸೋದಾಗಿ ನಂಬಿಸಿ ಕರೆ ತಂದಿತ್ತು. ಆದರೆ ಬೆಂಗಳೂರಿಗೆ ಬರುತ್ತಲೇ ನಡೆದದ್ದೇ ಬೇರೆ. ಕಿಷ್ಕಿಂಧೆಯಂಥಾ ಗಲೀಜು ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಅದು ದಂಧೆಯ ಮನೆ ಅನ್ನೋದು ಗೊತ್ತಾಗುತ್ತಲೇ ಆ ಪಾಪದ ಹೆಣ್ಣು ಮಕ್ಕಳು ಜೀವದಾಸೆಯನ್ನೂ ತೊರೆದು ಅದರಿಂದ ತಪ್ಪಿಸಿಕೊಂಡಿದ್ದರೂ. ಹಾಗೆ ನೋಡಿದರೆ, ಈ ಮೂವರೇ ಭಾಗ್ಯಂತರು. ಇನ್ನುಳಿದ ಪಾಪದ ಹೂವುಗಳಿಗೆ ಆ ಕೂಪದಿಂದ ಬಚಾವಾಗೋ ಅವಕಾಶವೇ ಸಿಗೋದಿಲ್ಲ. ಮೈಯಲ್ಲಿನ ಕಸುವು ತೀರುತ್ತಾ ಬಂದಾಗ ಈ ದಂಧೆಕೋರರೇ ಆ ಹುಡುಗೀರನ್ನು ಬೀದಿಗೆಸೆಯುತ್ತಾರೆ. ಆ ನಂತರ ಅವರ ಪಾಲಿಗುಳಿಯೋದು ನಗರಗಳಲ್ಲಿ ಕತ್ತಲಲ್ಲಿ ನಿಂತು ಗಿರಾಕಿಗಳಿಗಾಗಿ ಕೈಚಾಚೋ ಅವಕಾಶವಷ್ಟೇ.
ಘೋರ ಅಪರಾಧ

ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಇಂಥಾ ದಂಧೆಗಿಳಿಸೋದು ಘೋರ ಅಪರಾದ. ಕಾನೂನಿನ ನೆಲೆಗಟ್ಟಿನಲ್ಲಿ ಮಾತ್ರವಲ್ಲ; ಮನುಷ್ಯತ್ವದ ಭೂಮಿಕೆಯಿಂದಲೂ ಅದು ರಕ್ಕಸ ಕೃತ್ಯ. ಆದರೆ ಅದನ್ನೇ ಕಾಸು ಗೆಬರುವ ಉದ್ದಿಮೆಯಂತೆ ಮಾಡಿಕೊಂಡ ಮಾಫಿಯಾ ನೆಟ್‌ವರ್ಕ್‌ಗಳು ದೇಶಾದ್ಯಂತ ಹಬ್ಬಿಕೊಂಡಿವೆ. ಈ ಮಂದಿ ಹೆಚ್ಚಾಗಿ ಎಳೇ ಪ್ರಾಯದ, ಹದಿನೆಂಟರ ಆಸುಪಾಸಿನ ಹುಡುಗೀರನ್ನೇ ಟಾರ್ಗೆಟ್ ಆಗಿಸಿಕೊಳ್ಳುತ್ತಾರೆ. ಅಂಥವರನ್ನು ಅಪಹರಣ, ಆಮಿಷಗಳ ಮೂಲಕ ವೇಶ್ಯಾ ದಂಧೆಗೆ ನೂಕುತ್ತಾರೆ. ಹೊರಜಗತ್ತನ್ನು ನೋಡಲೂ ಆಸ್ಪದ ಕೊಡದೆ ವರ್ಷಗಟ್ಟಲೆ ಕೊಠಡಿಯಲ್ಲಿ ನರಳಿಸಿ ವಿಕೃತಿ ಮೆರೆಯುತ್ತಾರೆ. ಇಂಥಾ ಹೆಣ್ಣುಮಕ್ಕಳನ್ನು ರಕ್ಷಿಸಿರುವ ಎನ್‌ಜಿಓ ಮಂದಿಯ ಮಾಹಿತಿಯ ಪ್ರಕಾರ ಹೇಳೋದಾದರೆ, ಈ ದಂಧೆಯ ಮಂದಿ ಇಪ್ಪತೈದು ವರ್ಷವಾದ ನಂತರ ಇಂಥಾ ಹುಡುಗೀರನ್ನು ಬೀದಿಗೆಸೆಯುತ್ತಾರೆ.
ಹಾಗೆ ಎಸೆಯಲ್ಪಟ್ಟ ಯಾರದ್ದೋ ಮನೆಯ ಮುದ್ದಿನ ಹೆಣ್ಮಕ್ಕಳು ಮತ್ತದೇ ನರಕದ ಬದುಕನ್ನೇ ಮುಂದುವರೆಸುವ ಅನಿವಾರ್ಯತೆ ಎದುರಾಗುತ್ತೆ. ಬೆಂಗಳೂರು ಸೇರಿದಂತೆ, ನಾನಾ ಭಾಗಗಳಲ್ಲಿ ಗಿರಾಕಿಗಳಿಗಾಗಿ ಅರಸಿ ಅಡ್ಡಾಡುವ ಹೆಂಗಸರಿರುತ್ತಾರಲ್ಲಾ? ಅವರಲ್ಲಿಯೂ ಇಂಥಾ ನರಕ ಕಂಡವರು ಇದ್ದೇ ಇರುತ್ತಾರೆ. ಅದು ಭಾವನೆಗಳೆಲ್ಲ ಘಾಸಿಗೊಂಡು ಸತ್ತೇ ಹೋದ ಬರೀಯ ದೇಹಗಳು ಮಾತ್ರ. ಈ ನಾಗರಿಕ ಮುಖವಾಡದ ಮಂದಿ ಆ ದೇಹಗಳ ಮೇಲೆ ಮಬ್ಬಿನಲ್ಲಿ ಸವಾರಿ ನಡೆಸುತ್ತಾರೆ. ಬೆಳಕಲ್ಲಿ ಅವರನ್ನೇ ಸೂಳೆಯರೆಂದು ಅಸಹ್ಯ ಪಡುತ್ತಾರೆ. ಇಂಥಾ ದುಷ್ಟ ಮಡಿವಂತಿಕೆಯ ನಡುವೆ ಆ ಹೆಣ್ಣುಮಕ್ಕಳ ಸಂಕಟ, ತೊಳಲಾಟಗಳೆಲ್ಲವೂ ಕಳೇದು ಹೋಗಿ ಬಿಡುತ್ತವೆ. ಹೀಗೆ ಪಾಪದ ಲೋಕದಲ್ಲಿ ನಿತ್ಯ ನರಳುವ ಒಂದೊಂದು ಜೀವಗಳ ಕಥೆ ಕೇಳಿದರೂ ಈ ಸಮಾಜದ ಮೇಲೊಂದು ಅಸಹ್ಯವಷ್ಟೇ ಉಳಿದುಕೊಳ್ಳುವಂತಾಗುತ್ತೆ. ಪೊಲೀಸ್ ವ್ಯವಸ್ಥೆ ಇಷ್ಟು ಬಲಗೊಂಡಿದ್ದರೂ, ಕಾನೂ ಕಟ್ಟಳೆಗಳು ಬಿಗಿಯಾಗಿದ್ದರೂ ಇಂಥಾ ರೌರವ ನರಕದಿಂದ ಹೆಂಗಳೆಯರನ್ನು ಪಾರು ಮಾಡಲಾಗಿಲ್ಲವೆಂದರೆ, ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರ?ಯಾವುದಿದೆ?
ಅದು ವಿಕೃತ ಜಗತ್ತು

ಅದು ಯಾರ ಕಣ್ಣೀರಿಗೂ, ಯಾವ ಯಾಚನೆಗೂ ಕರಗದ ಅಪ್ಪಟ ಕಲ್ಲು ಮನಸಿನವರ ವಿಕೃತ ಲೋಕ. ದೇಶ ವಿದೇಶಗಳ ತುಂಬೆಲ್ಲ ಹಬ್ಬಿಕೊಂಡಿರೋ ಮಾನವ ಕಳ್ಳ ಸಾಗಣೆಯ ಜಾಲವಿದೆಯಲ್ಲಾ? ಅದರ ಒಂದೊಂದು ಮಾಹಿತಿಗಳೂ ಎದೆ ಅದುರಿಸುತ್ತವೆ. ಅದರ ಮುಂದೆ ಇದುವರೆಗೆ ಬಂದ ಅಷ್ಟೂ ಸಿನಿಮಾ ಸೀನುಗಳು ಡಲ್ಲು ಹೊಡೆಯುತ್ತವೆ. ಅಂಥಾ ಅಮಾನವೀಯ, ರಕ್ಕಸರ ಮಾಫಿಯಾ ಲೋಕವದು. ನಮ್ಮ ಸುತ್ತಾ ಆಗಾಗ ಮಿಸ್ಸಿಂಗ್ ಕೇಸುಗಳು ಘಟಿಸುತ್ತಿರುತ್ತವೆ. ಮಕ್ಕಳು ಕಾಣೆಯಾಗುತ್ತವೆ. ಹೆಣ್ಣು ಮಕ್ಕಳು ಕಣ್ಮರೆಯಾಗುತ್ತವೆ. ಹೆಂಗಸರು ಸುಳಿವಿಲ್ಲದಂತೆ ಕಣ್ಮರೆಯಾಗಿ ಬಿಡುತ್ತವೆ. ಅದರ ಸುತ್ತ ಜನರಿಗೆ ತೋಚಿದಂಥಾ ರೂಮರ್‌ಗಳು ಹಬ್ಬಿಕೊಳ್ಳುತ್ತವೆ. ಆದರೆ ನಮ್ಮ ನಡುವಿಂದಲೇ ಹಾಗೆ ಕಾಣೆಯಾದವರು ಮಾನವ ಕಳ್ಳ ಸಾಗಣೆದಾರರ ವಿಷವ್ಯೂಹದಲ್ಲಿ ಸಿಕ್ಕು ಒದ್ದಾಡುತ್ತಿರಬಹುದೆಂಬ ಸಣ್ಣ ಕಲ್ಪನೆಯೂ ನಮಗಿರೋದಿಲ್ಲ.
ಈ ಮಾನವ ಕಳ್ಳ ಸಾಗಣೆಯದ್ದು ಸಾಗರದಷ್ಟು ವಿಶಾಲವಾದ ವ್ಯಾಪ್ತಿ ಇದೆ. ಅದರಲ್ಲಿ ಮಕ್ಕಳ ಕಿಡ್ನಾಪ್ ಮತ್ತು ಮಾರಾಟ ಜಾಲದ್ದೊಂದು ಭೀಕರ ಮಜಲು. ನಾಲಕ್ಕರಿಂದ ಹತ್ತರ ಪ್ರಾಯದ ಮಕ್ಕಳೇ ಈ ದಂಧೆಕೋರರ ಪ್ರಧಾನ ಟಾರ್ಗೆಟ್. ಆ ಪ್ರಾಯದ ಮಕ್ಕಳು ಹೆತ್ತವರ ಕಿರುಬೆರಳು ತಪ್ಪಿಸಿಕೊಂಡು ಕೊಂಚ ಮರೆಯಾದರೂ ಕಂಗಾಲಾಗುತ್ತವೆ. ಅಪರಿಚಿತರ ಮುಂದೆ ಬೆದರಿ ನಿಲ್ಲುತ್ತವೆ. ಅಂಥಾ ಅಸಹಾಯಕ ಮುಗ್ಧತೆಯೇ ಈ ಮಾಫಿಯಾ ಮಂದಿಯ ಬಂಡವಾಳ. ಈ ವಯೋಮಾನದ ಮಕ್ಕಳನ್ನು ಅಪಹರಿಸೋ ಜಾಲ ಬಹು ಹಿಂದಿನಿಂದಲೂ ಇತ್ತು. ನೀವೇನಾದರೂ ತೊಂಭತ್ತರ ದಶಕದ ಕೂಸುಗಳಾಗಿದ್ದರೆ, ಆ ಕಾಲದಲ್ಲಿ ಮಕ್ಕಳ ಕಳ್ಳರ ಬಗ್ಗೆ ಹಬ್ಬಿಕೊಂಡಿದ್ದ ಅಂತೆಕಂತೆಗಳ ಅರಿವಿರುತ್ತೆ. ಆವತ್ತಿಗೆ ಅದು ಯಾರೋ ಕಿಡಿಗೇಡಿಗಳು ಹಬ್ಬಿಸಿದ ರೂಮರ್ ಅಂದುಕೊಂಡವರಿದ್ದರು.
ತೊಂಬತ್ತರ ದಶಕದಲ್ಲಿ…

ಆದರೆ, ನಿಜಕ್ಕೂ ಮಕ್ಕಳ ಕಳ್ಳ ಸಾಗಣೆಯ ದಂಧೆ ಆರಂಭವಾಗಿದ್ದು ಆ ಕಾಲಘಟ್ಟದಲ್ಲಿಯೇ. ಇಂಥಾದ್ದೊಂದು ದಂಧೆ ಚಾಲ್ತಿಯಲ್ಲಿದೆ ಅನ್ನೋ ಸತ್ಯ ಜಗತ್ತಿಗೆ ತೆರೆದುಕೊಂಡಿದ್ದು ತೊಂಭತ್ತರ ದಶಕದಲ್ಲಿಯೇ. ಆ ದಿನಗಳಲ್ಲಿ ಒಂದು ಮೂಲೆಯಿಂದ ಮಕ್ಕಳನ್ನು ಕದ್ದೊಯ್ದು ಮತ್ಯಾವುದೋ ಮೂಲೆಯಲ್ಲಿ ಥರ ಥರದ ಹಿಂಸೆಗೆ ತಳ್ಳುತ್ತಿದ್ದರು. ಇಂಥಾ ಮಕ್ಕಳು ತೊಂಭತ್ತರ ದಶಕದ ನಡುಗಾಲದಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದು ಕುದುರೆ ರೇಸಿನ ಹಣವಂತರ ಹುಚ್ಚಿಗೆ. ಗಲ್ಫ್ ದೇಶಗಳ ಹಣವಂತರಿರುತ್ತಾರಲ್ಲಾ? ಅವರಿಗೆ ಇಂಥಾ ಮಕ್ಕಳನ್ನು ದಂಧೆಕೋರರು ಮಾರಾಟ ಮಾಡುತ್ತಿದ್ದರು. ಹಾಗೆ ಈ ಮಕ್ಕಳನ್ನು ಖರೀದಿಸಿದ ಹಣವಂತ ರಕ್ಕಸರು ಜಗವರಿಯದ ಪುಟ್ಟ ಕಂದಮ್ಮಗಳಿಗೆ ತೋರಿಸುತ್ತಿದ್ದದ್ದು ಅಕ್ಷರಶಃ ನರಕವನ್ನೇ.
ನಿಮಗೆ ಅಚ್ಚರಿಯಾಗಬಹುದು, ಈ ಮಕ್ಕಳಿಗೂ ಕುದುರೇ ರೇಸಿಗೂ ಅದ್ಯಾವ ಸಂಬಂಧ ಎಂಬ ಪ್ರಶ್ನೆಯೂ ಕಾಡಬಹುದು. ಅದಕ್ಕೆ ಸಿಗುವ ಉತ್ತರದಲ್ಲಿ ಅಮಾನವೀಯ ವಾಸ್ತವ ಅಡಗಿದೆ. ಗಲ್ಫ್ ರಾಷ್ಟ್ರಗಳ ಕುಳಗಳು ಅಗಾಧ ಮಟ್ಟದಲ್ಲಿ ಕುದುರೆ ರೇಸಿನ ಹುಚ್ಚು ಹತ್ತಿಸಿಕೊಂಡಿರುತ್ತಾರೆ. ಅವರೆಲ್ಲ ಇಂಥಾ ಬಡಪಾಯಿ ಮಕ್ಕಳನ್ನು ಕುದುರೆಯ ಬಾಲಕ್ಕೆ ಕಟ್ಟುತ್ತಿದ್ದರು. ಬಾಲಕ್ಕೇನೋ ಕಟ್ಟಿದ ಅರಿವಾಗುತ್ತಲೇ ಕುದುರೆಗಳು ಹುಚ್ಚೆದ್ದು ಓಡಲಾರಂಭಿಸುತ್ತಿದ್ದವು. ಈ ಮಕ್ಕಳು ಭಯದಿಂದ ಕಿರುಚಿದಷ್ಟೂ ಕುದುರೆಯ ವೇಗವೂ ಹೆಚ್ಚಾಗುತ್ತಿತ್ತಂತೆ. ಒಂದು ವೇಳೆ ಕುದುರೆಯ ಬಾಲಕ್ಕೆ ಕಟ್ಟಿದ ಕೂಸು ನಡುವಲ್ಲೇ ಬಿದ್ದರೆ ಸತ್ತೇ ಹೋಗುತ್ತಿತ್ತು. ಗಾಯಗೊಂಡು ಬದುಕುಳಿದವುಗಳಿಗೆ ಯಾವ ಆರೈಕೆಯೂ ಸಿಗುತ್ತಿರಲಿಲ್ಲ. ಕೇವಲ ಕುದುರೆ ರೇಸಿಗೆ ಮಾತ್ರವಲ್ಲದೆ, ಹಣವಂತ ಕಾಮಪಿಪಾಸುಗಳು ಲೈಂಗಿಕವಾಗಿಯೂ ಬಳಸಿಕೊಳ್ಳುತ್ತಿದ್ದರೆಂಬ ಆಘಾತಕರ ಸಂಗತಿಯನ್ನೂ ಕೆಲ ತನಿಖೆಗಳು ಬಯಲಾಗಿಸಿವೆ.
ನರಕದ ಹೆಬ್ಬಾಗಿಲು
ಅದರಲ್ಲಿಯೂ ಈ ಜಾಲಕ್ಕೆ ಸಿಕ್ಕ ಹೆಣ್ಣು ಮಕ್ಕಳಿಗಂತೂ ಥರ ಥರದ ನರಕದರ್ಶನ ಖಾಯಂ. ಒಂದಷ್ಟು ಕಾಲ ಕೂಲಿ ಕೆಲಸ, ಗಾರೆ ಕೆಲಸದಂಥವುಗಳಿಗೆ ಬಳಸಿಕೊಂಡು ಆ ಮೇಲೆ ವೇಶ್ಯಾ ದಂಧೆಯ ಕೂಪಕ್ಕೆ ತಳ್ಳಲಾಗುತ್ತಿತ್ತು. ಕೆಲ ಮಹಿಳೆಯರನ್ನು ಹೊತ್ತೊಯ್ದು ಯಾರೋ ತೃಷೆ ಹೊಂದಿರೋ ಹಣವಂಗತರಿಗೆ ಮಾರಿ ಬಿಡುತ್ತಿದ್ದರು. ಇಂದಿಗೂ ಕೂಡಾ ಈ ದಂಧೆ ನಾನಾ ರೂಪಗಳಲ್ಲಿ ಚಾಲ್ತಿಯಲ್ಲಿದೆ. ಇದಕ್ಕೆ ಮೊನ್ನೆ ದಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಸಿಕ್ಕ ಬಾಂಗ್ಲಾ ಮೂಲದ ಮಹಿಳೆಯರಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಆದರೂ ಕೂಡಾ ಈ ದುಷ್ಟ ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಈ ಮಾಫಿಯಾಗೆ ಪ್ರಭಾವಿಗಳ ನೆರಳಿದೆ. ಅದೆಲ್ಲವನ್ನೂ ಮಟ್ಟ ಹಾಕದಿದ್ದರೆ, ಕಾನೂನು ಕಟ್ಟಳೆಗಳಿಗಾಗಲಿ, ಮನುಷ್ಯತ್ವಕ್ಕಾಗಲಿ ಯಾವ ಕಿಮ್ಮತ್ತೂ ಉಳಿಯುವುದಿಲ್ಲ.