ಗಜಪಡೆ ಕಾತುರಕ್ಕೆ ತೆರೆಬಿದ್ದಿದೆ. ಕರುನಾಡ ತುಂಬೆಲ್ಲಾ ಕಾಟೇರನ ಕಾರುಬಾರು ಶುರುವಾಗಿದೆ. ಕಾಟೇರ ದರ್ಶನವಾಗ್ತಿದ್ದಂತೆ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡು ಅಪ್ಪಿಕೊಂಡು ಕೊಂಡಾಡ್ತಿದೆ. ಯಾಕಂದ್ರೆ ಡಿಪಡೆಗೆ ಕಾಟೇರ ಬಹಳ ವಿಶೇಷವಾದ ಸಿನಿಮಾ..ದಚ್ಚು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗೆ ಈ ಸಿನಿಮಾ ಮೂಲಕ ಡಬ್ಬಲ್ ಟ್ರೀಟ್ ಕೊಟ್ಟಿದ್ದಾರೆ. ಅಂದ್ರೆ ಎರಡು ಪಾತ್ರಗಳಲ್ಲಿ ದಾಸ ಕಾಣಿಸಿಕೊಂಡಿದ್ದು, ಮಾಸ್ ಮತ್ತು ಕ್ಲಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಒನ್‌ಮ್ಯಾನ್ ಶೋನಂತೆ ಅಬ್ಬರಿಸಿರುವ ದರ್ಶನ್, ಬಹಳ ದಿನಗಳ ನಂತರ ನಟನೆಗೆ ಹೆಚ್ಚು ಒತ್ತು ಇರುವ ಪಾತ್ರವನ್ನು ಆಯ್ಕೆ ಮಾಡಿ ಅಕ್ಷರಶಃ ಜೀವಿಸಿದ್ದಾರೆ. ಕಥೆಯ ಗೇಜ್ ಅರಿತು, ತಮ್ಮ ಇಮೇಜ್ ಅನ್ನು ಪಕ್ಕಕ್ಕಿಟ್ಟು ಕಾಟೇರನ ಪಾತ್ರ ಮಾಡಿದ್ದಾರೆ. ಕುಲುಮೆಯಲ್ಲಿ ಮಚ್ಚು ತಟ್ಟುವ, ಎದುರಾಳಿಗಳ ಎದುರು ತೊಡೆ ತಟ್ಟುವ, ಭಾವುಕ ಸನ್ನಿವೇಶಗಳಲ್ಲಿ ಕಣ್ಣೀರು ಹಾಕಿಸುವ ಯಜಮಾನ ವ್ಹಾವ್ ಎನ್ನಿಸಿಬಿಡುತ್ತಾರೆ. ಪ್ರೇಕ್ಷಕರನ್ನು ಕಣ್ಣೀರಿಡುವಂತೆ ಮಾಡಿಬಿಡ್ತಾರೆ.
ಕಾಟೇರ ಕಾಡುವ ಸಿನಿಮಾ..70ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಯ ಚಿತ್ರ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲಿಮೆ ಕೆಲಸ ಮಾಡುವ ಯುವಕ ಕಾಟೇರ..ದುಡಿಮೆಯೇ ದೇವರು ಎಂದು ನಂಬಿರುವ ವ್ಯಕ್ತಿ. ಆದ್ರೆ ಅದೇ ಊರಿನಲ್ಲಿರುವ ಜಮಿನ್ದಾರನ ದಬ್ಬಾಳಿಕೆಯಿಂದ ಇಡೀ ಗ್ರಾಮದ ಜನತೆ ಬೇಸತ್ತು ಹೋಗಿರುತ್ತದೆ. ಇಡೀ ದೇಶಕ್ಕೆ ಅನ್ನ ನೀಡುವ ರೈತ ತಾವು ಬದುಕುವುದೇ ಕಷ್ಟವಾಗಿರುತ್ತದೆ. ರೈತರ ಪರ ಕಾಟೇರ ಹೇಗೆ ಹೋರಾಡ್ತಾನೆ ಅನ್ನೋದೇ ಸಿನಿಮಾದ ಕಥೆ.. ಇದು ಕೇಳೋದಿಕ್ಕೆ ಸಿಂಪಲ್ ಕಥೆ ಅನಿಸಿದ್ರೂ ಕಾಟೇರದಲ್ಲಿ ಬರುವ ಒಂದಷ್ಟು ಅಂಶಗಳು ನೋಡುಗರನ್ನು ಥಿಯೇಟರ್ ನಿಂದ ಹೊರಗಡೆ ಬಂದ್ರು ಕಾಡುತ್ತಿರುತ್ತವೆ. 70ರ ಸಾಮಾಜಿಕ ಪಿಡುಗಗಳನ್ನು ತರುಣ್ ಸುಧೀರ್ ಬಹಳ ಬುದ್ದಿವಂತಿಕಯಿಂದ ಪ್ರೇಕ್ಷಕರಿಗೆ ಮನಮುಟ್ಟಿಸಿದ್ದಾರೆ. ಯಾವುದೂ ಅತಿಯಾಗದಂತೆ ಎಷ್ಟು ಬೇಕೋ ಅಷ್ಟೂ ಒತ್ತು ನೀಡಿ ದರ್ಶನ್ ನಂತಹ ಒಬ್ಬ ಸ್ಟಾರ್ ನ್ನ ಪ್ರಯೋಗಕ್ಕೆ ಒಡ್ಡಿ ತರುಣ್ ಸಕ್ಸಸ್ ಕಂಡಿದ್ದಾರೆ. ಈ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ.
ಕಾಟೇರ ಸಿನಿಮಾದ ಶಕ್ತಿ ದರ್ಶನ್..ಅದೇ ರೀತಿ ಸಿನಿಮಾದ ಮೂರು ಯುಕ್ತಿಗಳ ಬಗ್ಗೆ ಹೇಳಲೇಬೇಕು. ಕಥೆಯಲ್ಲಿ ಜಡೇಶ್ ಹಂಪಿ, ನಿರ್ದೇಶನದಲ್ಲಿ ತರುಣ್ ಹಾಗೂ ಸಂಭಾಷಣೆಯಲ್ಲಿ ಮಾಸ್ತಿ,..ಈ ಮೂವರು ತ್ರಿಮೂರ್ತಿಗಳು ಮ್ಯಾಜಿಕ್ ಮಾಡಿದ್ದಾರೆ..ಜಡೇಶ್ ತೂಕದ ಕಥೆಯನ್ನು ಸೊಗಸಾಗಿ ತರುಣ್ ತೆರೆಗೆ ತಂದ್ರೆ ಅದಕ್ಕೆ ತಕ್ಕನಾದ ಮಾತುಗಳನ್ನು ಪೊಣಿಸುವಲ್ಲಿ ಮಾಸ್ತಿ ಕೆಲಸ ದೊಡ್ಡದಿದೆ. ವಿ ಹರಿಕೃಷ್ಣ ಮ್ಯೂಸಿಕ್ ಕಿಕ್, ಸುಧಾಕರ್ ಕ್ಯಾಮೆರಾ ವರ್ಕ್ ಕಾಟೇರ ಸಿನಿಮಾದ ಫ್ಲಸ್ ಪಾಯಿಂಟ್. ಸ್ಟಾರ್ ಇಮೇಜ್ ಪಕ್ಕಕ್ಕಿಟ್ಟು ನಟಿಸಿರುವ ದರ್ಶನ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗ್ತಾರೆ. ದಾಸನ ಸಿನಿಕರಿಯರ್ ನ 55 ಸಿನಿಮಾಗಳು ಒಂದು ತೂಕವಾದ್ರೆ 56ನೇ ಸಿನಿಮಾ ಕಾಟೇರ ಬೇರೆಯದ್ದೇ ತೂಕ ಅನ್ನೋದು ಸಿನಿಮಾ ಪ್ರೇಮಿಗಳ ಮಾತು. ಕಾಟೇರನ ಮನದನ್ನೆ ಪ್ರಭಾವತಿ ಪಾತ್ರದಲ್ಲಿ ಮಿಂಚಿರುವ ಆರಾಧನಾ ನಟನೆ ಕೂಡ ಅದ್ಭುತವಾಗಿದೆ. ಆರಾಧನಾ ಶಾನುಭೋಗನ ಮಗಳಾಗಿ, ದರ್ಶನ್ ಕತ್ತಿಗೆ ಮಚ್ಚಿಟ್ಟು ಬೆದರಿಸುವ ದೃಶ್ಯಗಳು ಪಸಂದಾಗಿವೆ. ಮೊದಲ ಸಿನಿಮಾ ಅನ್ನದೇ ಪಳಗಿರುವ ನಾಯಕಿಯಂತೆ ಮಿಂಚಿರುವ ಜೂನಿಯರ್ ಕನಸಿನ ರಾಣಿ ಫ್ಯೂಚರ್ ಸ್ಯಾಂಡಲ್ ವುಡ್ ಕ್ವೀನ್ ಆಗುವುದು ಪಕ್ಕ.
ಜಗಪತಿ ಬಾಬು, ಶೃತಿ, ಅವಿನಾಶ್, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್ ಹೀಗೆ ಎಲ್ಲಾ ಕಲಾವಿದರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಕಾಟೇರ ಮಾಸ್ ಪ್ರಿಯರಿಗೆ ಭರ್ಜರಿ ಬಾಡೂಟ ಬಡಿಸಿದಂತಿದೆ. ಹಾಗಂತ ಬರೀ ಮಾಸ್ ಅಷ್ಟೇ ಅಲ್ಲ ಎಮೋಷನ್ ಕೂಡ ಸಿನಿಮಾದಲ್ಲಿದೆ. ಮಸ್ತ್ ಮನರಂಜನೆ ಕೊಡುವ ಕಾಟೇರ ಕನ್ನಡದಲ್ಲೊಂದು ಹೊಸ ಪ್ರಯೋಗವೇ ಸರಿ..ನಮ್ಮಲ್ಲಿ ಇಂತಹ ಸಿನಿಮಾಗಳು ಯಾಕೆ ಮಾಡಲ್ಲ ಅಂತಾ ಪರಭಾಷಾ ಸಿನಿಮಾಗಳನ್ನು ನೋಡಿ ಮಾತನಾಡುವ ಮಂದಿ ಒಮ್ಮೆ ಕಾಟೇರನ ದರ್ಶನ ಮಾಡ್ಕೊಂಡು ಬಂದುಬಿಡಿ. ಸಂದೇಶದ ಜೊತೆಗೆ ಮನರಂಜನೆ ನೀಡುವ ಕಾಟೇರ ಈ ವರ್ಷ್ಯಾಂತಕ್ಕೊಂದು ಬೊಂಬಾಟ್ ಸಿನಿಮಾ.