ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ‘ಅಜ್ಞಾತ ವಾಸಿ’ ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗಧಿಯಾಗಿದೆ.
ಗುಲ್ಟು ಸಿನೆಮಾ ಖ್ಯಾತಿಯ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ನಿರ್ದೇಶನ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಅಜ್ಞಾತವಾಸಿ’ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ನಿರೀಕ್ಷೆಗಳಿಗೆ ಇನ್ನಷ್ಟು ಇಂಬು ನೀಡಲು ಟೀಸರ್ ಇದೇ ಏಪ್ರಿಲ್ 7ರಂದು ರಿಲೀಸ್ ಆಗಲಿದೆ.
ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅಜ್ಞಾತ ವಾಸಿ ಯಲ್ಲಿ ನಟಿ ಪಾವನ ಗೌಡ ಹಾಗೂ ಸಿದ್ದು ಮೂಲಿಮನಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಈ ಕುರಿತು ಮಾತನಾಡಿದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ, ‘ನನ್ನ ಗುರುಗಳಾದ ಕೃಷ್ಣರಾಜ್ ಅವರು ಕಥೆ ಬರೆದಿದ್ದಾರೆ. 1997 ರಲ್ಲಿ ಮಲೆನಾಡಿನಲ್ಲಿ ನಡೆದ ಕೊಲೆಯೊಂದರ ಸುತ್ತ ಈ ಕಥೆ ಹೆಣೆಯಲಾಗಿದೆ. ಅವರು ಕಥೆ ಹೇಳಿದ ರೀತಿ ತುಂಬಾ ಹಿಡಿಸಿತು. ನನಗೆ ತಿಳಿದ ಹಾಗೆ ಇದೊಂದು ಕನ್ನಡದಲ್ಲಿ ಈವರೆಗೂ ಬಂದಿರದ ಮರ್ಡರ್ ಮಿಸ್ಟರಿ ಅನ್ನಬಹುದು. ಆನಂತರ ಹೇಮಂತ್ ರಾವ್ ಅವರನ್ನು ಭೇಟಿಯಾಗಿ ಕಥೆ ಹೇಳಿದಾಗ ಕೇವಲ ಅರ್ಧಗಂಟೆಯಲ್ಲಿ ನಿರ್ಮಾಣಕ್ಕೆ ಒಪ್ಪಿಕೊಂಡರು. ಎಂದು ಸಿನೆಮಾ ಶುರುವಾದ ಹಿನ್ನಲೆಯ ಬಗ್ಗೆ ಹಂಚಿಕೊಂಡರು.
ಅದ್ವೈತ ಛಾಯಾಗ್ರಹಕರಾಗಿ ಹಾಗೂ ಚರಣ್ ರಾಜ್ ಸಂಗೀತ ನಿರ್ದೇಶಕರಾಗಿರುವ ಅಜ್ಞಾತ ವಾಸಿ ಯಲ್ಲಿ ರಂಗಾಯಣ ರಘು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೊಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದ್ದು, ಜನಾರ್ದನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹೇಮಂತ್ ಕುಮಾರ್ ಚಿತ್ರ ನಿರ್ಮಾಣ ಮಾಡಿ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.