ದೊಡ್ಮನೆಯ ದೊಡ್ಡ ಭರವಸೆ, ಅಪ್ಪು ಉತ್ತರಾಧಿಕಾರಿ, ಜೂನಿಯರ್ ಪವರ್ ಸ್ಟಾರ್, ಪವರ್ ಪ್ರಿನ್ಸ್ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ರಾಘಣ್ಣನ ಮಗ ಯುವರಾಜ್‌ಕುಮಾರ್ (Yuva) ಅಭಿನಯದ ಚೊಚ್ಚಲ ಸಿನಿಮಾ ʻಯುವʼ ಬಿಡುಗಡೆಗೆ ಸಜ್ಜಾಗಿದೆ. ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿರೋ ಸಂತೋಷ್ ಆನಂದ್ ರಾಮ್ ಹಾಗೂ ಯುವ ಕಾಂಬಿನೇಷನ್‌ನ ಈ ಚಿತ್ರ ಇದೀಗ ಹಾಡುಗಳ ಮೂಲಕ ಗಂಧದಗುಡಿಯಲ್ಲಿ ದೊಡ್ಡ ಅಲೆಯನ್ನ ಎಬ್ಬಿಸಿದೆ. ಒಬ್ಬನೇ ಶಿವ… ಒಬ್ಬನೇ ಯುವ.. ಹಾಡಿನ ನಂತರ ಯುವ ಹಾಗೂ ಸಪ್ತಮಿ ನಡುವಿನ ರೊಮ್ಯಾಂಟಿಕ್ ಸಾಂಗ್ ಕಲಾಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಇದೀಗ ಬಿಡುಗಡೆಯಾಗಿರೋ ʻಅಪ್ಪುʼಗೆ ಹಾಡು ದೊಡ್ಮನೆ ಭಕ್ತರನ್ನ ಮಾತ್ರವಲ್ಲ ಸಮಸ್ತ ಕರುನಾಡ ಜನತೆಯನ್ನ ಭಾವುಕರನ್ನಾಗಿಸಿದೆ. ದೊಡ್ಮನೆಯ ಪುಟ್ಟರಾಜಕುಮಾರ ಅಪ್ಪು (Puneeth Rajkumar) ಜೊತೆಗೆ ತಮಗೆ ಜೀವ ಕೊಟ್ಟು ಭೂಮಿಗೆ ತಂದ ಅಪ್ಪನನ್ನು ಕಣ್ಮುಂದೆ ತಂದು ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡಿದೆ.
ಹೌದು, ʻಯುವʼ (Yuva) ಸಿನಿಮಾ ತಂಡ ಸಮಸ್ತ ಅಪ್ಪಂದಿರಿಗೆ ʻಅಪ್ಪುʼಗೆ ಹೆಸರಲ್ಲಿ ಒಂದು ಸಾಂಗ್‌ನ ಡೆಡಿಕೇಟ್ ಮಾಡಿದೆ. ʻಕೈ ಹಿಡಿದು ನಡೆಸೋ, ಬೆನ್ನತಟ್ಟಿ ಬೆಳೆಸೋ, ನಮಗಾಗಿ ಶ್ರಮಿಸೋ ಆ ದುಡಿಮೆ ಜೀವನʼ ಎಂದು ಸಾಗುವ ಈ ಹಾಡನ್ನ ಯುವ ಚಿತ್ರದ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಅವರೇ ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ. ವಿಶೇಷ ಅಂದರೆ ಈ ಹಾಡನ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವ್ರ ಪುತ್ರಿ ವಂದಿತಾ ರಿಲೀಸ್ ಮಾಡಿಕೊಟ್ಟಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡಿದ ವಂದಿತಾಗೆ ಚಿತ್ರತಂಡದಿಂದ ಅಪ್ಪು ಫೋಟೋ ಉಡುಗೊರೆಯಾಗಿ ನೀಡಿದ್ದು, ಅಪ್ಪನ ಫೋಟೋ ನೋಡಿ ವಂದಿತಾ ಭಾವುಕರಾಗಿದ್ದಾರೆ.
ಅಪ್ಪುಗೆ (Puneeth Rajkumar) ಮಗಳು ವಂದಿತಾ ಮೇಲೆ ಬಹಳಷ್ಟು ಪ್ರೀತಿ. ಬ್ಯುಸಿ ಷೆಡ್ಯೂಲ್ಡ್ ಶೂಟಿಂಗ್ ನಡುವೆಯೂ ರಾತ್ರಿ ಹೊತ್ತು ಮನೆಗೆ ಬಂದು ಮಗಳಿಗೆ ಕೈ ತುತ್ತು ತಿನಿಸಿ ತಮ್ಮ ಮಡಿಲಲ್ಲಿ ಮಲಗಿಸಿಕೊಳ್ತಿದ್ದರು. ಅಪ್ಪ ಬರೋವರೆಗೂ ಮಗಳು ವಂದಿತಾ ಊಟ ಮಾಡದೇ ಅಪ್ಪು ಬರುವ ದಾರಿಗಾಗಿ ಕಾಯ್ತಿದ್ದರು ಅನ್ನೋ ವಿಚಾರವನ್ನ ಸ್ವತಃ ಅಪ್ಪುನೇ ಹೇಳಿಕೊಂಡಿದ್ದರು. ಆದರೆ, ಆ ವಿಧಿಯಾಟಕ್ಕೆ ಅಪ್ಪು ಮುಂದೆದೂ ತಿರುಗಿ ಬಾರದ ಲೋಕಕ್ಕೆ ಹೋಗಿಬಿಟ್ಟರು. ಈಗ, ಅಪ್ಪು ಮಕ್ಕಳಿಗೆ ಅಪ್ಪನ ಅಪ್ಪುಗೆ ಕಾಡ್ತಿದೆ. ಅದರಲ್ಲೂ ಯುವ ಸಿನಿಮಾದ ಹಾಡನ್ನ ಕೇಳಿಸಿಕೊಂಡ್ಮೇಲಂತೂ ವಂದಿತಾ ಹಾಗೂ ದೃತಿ ಇಬ್ಬರು ಕೂಡ ಅಪ್ಪನನ್ನ ತುಂಬಾನೇ ಮಿಸ್ ಮಾಡಿಕೊಳ್ತಿದ್ದಾರೆ. ಅಮ್ಮನಲ್ಲೇ ಅಪ್ಪನನ್ನ ಕಾಣುತ್ತಾ ಬದುಕು ಮುನ್ನಡೆಸುತ್ತಿದ್ದಾರೆ
ಇನ್ನೂ, ಯುವ (Yuva) ಸಿನಿಮಾಗೆ ಬರೋದಾದರೆ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಆಕ್ಷನ್, ಡ್ಯಾನ್ಸ್ ಮೂ ನಲ್ಲಿ ಥೇಟ್ ಅಪ್ಪುನೇ ಹೋಲುವ ಯುವ ಮೇಲೆ ಪವರ್ ಫ್ಯಾನ್ಸ್ ನೂರೆಂಟು ನಿರೀಕ್ಷೆ ಇಟ್ಕೊಂಡು ಕಾಯ್ತಿದ್ದಾರೆ. ದೊಡ್ಮನೆ ದೊಡ್ಡ ಭರವಸೆನಾ ಬಿಗ್‌ಸ್ಕ್ರೀನ್‌ಗೆ ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡಿಕೊಳ್ಳೋದಕ್ಕೆ, ಅಪ್ಪು ಉತ್ತರಾಧಿಕಾರಿಗೆ ಪಟ್ಟ ಕಟ್ಟೋದಕ್ಕೆ ಎಲ್ಲಾ ತಯ್ಯಾರಿ ನಡೆದಿದೆ. ಇನ್ನೇನಿದ್ರೂ ಮಾರ್ಚ್ 29ಕ್ಕಾಗಿ ನಾವೆಲ್ಲರೂ ಕಾಯಬೇಕು. ಅದೇ ದಿನ ಬೆಳ್ಳಿತೆರೆಗೆ ಯುವನ ಆಗಮನವಾಗಲಿದೆ. ಈಗಾಗಲೇ ಕಟೀಲು ದುರ್ಗಾ ಪರಮೇಶ್ವರಿಯ ಆಶೀರ್ವಾದ ಪಡೆದು ಬಂದಿರೋ ಯುವ ಬಳಗ, ರಾಜ್ಯಾದ್ಯಂತ ಅದ್ದೂರಿಯಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ದೊಡ್ಮನೆಯ ದೊಡ್ಡ ಭರವಸೆನಾ ಕರುನಾಡ ಜನತೆಯ ಮಡಿಲಿಗೆ ಹಾಕಲು ಹೊಂಬಾಳೆ ಮಾಲೀಕರು ಕೂಡ ಅದ್ದೂರಿಯಾಗಿಯೇ ಯುವ (Yuva) ಸಿನಿಮಾ ನಿರ್ಮಿಸಿದ್ದಾರೆ. ಸೋ ಹೇಗಿದ್ದಾನೆ ಯುವ, ಹೇಗಿರಲಿದೆ ಯುವನ ಅಬ್ಬರ-ಆರ್ಭಟ ಕಾದುನೋಡೋಣ.