ಆಕ್ಟರ್ ಮಕ್ಕಳು ಆಕ್ಟರ್ ಆಗ್ತಾರೆ, ಡಾಕ್ಟರ್ ಮಕ್ಕಳು ಡಾಕ್ಟರ್ರೇ ಆಗ್ತಾರೆ ಅನ್ನೋ ಮಾತಿದೆ. ಆದರೆ, ಇದಕ್ಕೆ ಅಪವಾದವೆಂಬಂತೆ ಕೆಲವರ ಮಕ್ಕಳು ಬೇರೆ ಬೇರೆ ಫೀಲ್ಡ್‌ನ ಚೂಸ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ನಾವು ಇವತ್ತು ನಿಮಗೆ ಹೇಳಲಿಕ್ಕೆ ಹೊರಟಿರೋದು ಭಾರತೀಯ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ಅಂತಾನೇ ಕರೆಸಿಕೊಳ್ಳುವ ತಲೈವಾ ರಜನಿಕಾಂತ್ ಅವರ ಮೊಮ್ಮಗ, ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಮಗನ ಬಗ್ಗೆ. ಯಸ್, ಕಾಲಿವುಡ್ ನಟ ಧನುಷ್ ಹಾಗೂ ಐಶ್ವರ್ಯಾಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಇಬ್ಬರು ಬೆಳೆದು ದೊಡ್ಡವರಾಗಿದ್ದಾರೆ. ಧನುಷ್ ಹಾಗೂ ಐಶ್ ಡಿವೋರ್ಸ್ ಪಡೆದುಕೊಂಡರೂ ಕೂಡ, ಮಕ್ಕಳು ಮಾತ್ರ ತಂದೆ ಹಾಗೂ ತಾಯಿ ಇಬ್ಬರ ಆಶ್ರಯದಲ್ಲೂ ಬೆಳೆಯುತ್ತಿದ್ದಾರೆ. ಅವರಲ್ಲಿ ದೊಡ್ಡ ಮಗ ಯಾತ್ರಾ ಬಣ್ಣದ ಜಗತ್ತಿಗೆ ಎಂಟ್ರಿಕೊಡಲು ಸಜ್ಜಾಗಿದ್ದಾನೆ. ಆದರೆ, ಅಜ್ಜ ಹಾಗೂ ಅಪ್ಪನಂತೆ ನಟನಾಗಿ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡದೇ ಸಿನಿಮಾಟೋಗ್ರಾಫರ್ ಆಗಿ ಚಿತ್ರರಂಗಕ್ಕೆ ಪರಿಚಯಗೊಳ್ಳಲು ಸಿದ್ದನಿದ್ದಾನೆ ಎನ್ನುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ.
ಯಸ್, ಸದ್ಯ ಕಾಲಿವುಡ್ ಅಂಗಳದಲ್ಲಿ ಜೋರಾಗಿ ಹಬ್ಬಿರುವ ಸುದ್ದಿ ಪ್ರಕಾರ ಧನುಷ್ ಪುತ್ರ ಯಾತ್ರಾ ಸಿನಿಮಾಟೋಗ್ರಾಫರ್ ಆಗಿ ಸಿನಿಮಾಲೋಕಕ್ಕೆ ಇಂಟ್ರುಡ್ಯೂಸ್ ಆಗಲು ತಯಾರಿ ನಡೆಸಿದ್ದಾರಂತೆ. ಅದು ಅಪ್ಪನ ಕನಸಿನ ಸಿನಿಮಾ ಎಂದೇ ಕರೆಸಿಕೊಳ್ತಿರುವ ರಾಯನ್ ಚಿತ್ರದ ಮೂಲಕ ಅನ್ನೋದು ಇಂಟ್ರೆಸ್ಟಿಂಗ್ ಸಂಗತಿ. ಯಸ್, ರಾಯನ್…ಧನುಷ್ ನಿರ್ದೇಶಿಸಿ ನಟಿಸುತ್ತಿರುವ ಚಿತ್ರ. ಇದು ಧನುಷ್ ನಟನೆಯ 50ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ಸುಮಾರು 7 ವರ್ಷಗಳ ನಂತರ ಧನುಷ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಪಾ ಪಾಂಡಿ ಚಿತ್ರ ಆದ್ಮೇಲೆ ಎರಡನೇ ಭಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಆಕ್ಷನ್ ಥ್ರಿಲ್ಲರ್ ಜಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೇ ರಿವೀಲ್ ಮಾಡಲಾಗಿದ್ದು, ಧನುಷ್ ನಯಾ ಅವತಾರ ಕಂಡು ಅಭಿಮಾನಿಗಳ ಜೊತೆಗೆ ಸೌತ್ ಸಿನಿದುನಿಯಾ ಬೆಕ್ಕಸ ಬೆರಗಾಗಿದೆ. ಇದೀಗ ಈ ಚಿತ್ರಕ್ಕೆ ಧನುಷ್ ಪುತ್ರ ಯಾತ್ರಾ ಕ್ಯಾಮರಾ ಕಣ್ಣಾಗಲಿದ್ದಾರೆನ್ನುವ ಸುದ್ದಿ ಧನುಷ್ ಅಭಿಮಾನಿಗಳನ್ನ ಹುಚ್ಚೆಬ್ಬಿಸಿದೆ. ಯಾತ್ರಾ ಫಿಕ್ಸ್ ಮಾಡುವ ಫ್ರೇಮ್‌ನಲ್ಲಿ ಧನುಷ್ ಹೇಗ್ ಕಾಣ್ತಾರೆ. ಅಪ್ಪನನ್ನ ಮಗ ಎಷ್ಟು ಚೆಂದ ತೋರಿಸ್ತಾರೆನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮನೆಮಾಡಿದೆ.
ಅಂದ್ಹಾಗೇ, ಧನುಷ್ ಪುತ್ರ ಯಾತ್ರಾಗೆ ಇದು ಡೆಬ್ಯೂ ಚಿತ್ರ. ಇಷ್ಟು ದಿನ ಅಜ್ಜ ಹಾಗೂ ಅಪ್ಪನ ಸಿನಿಮಾಗಳನ್ನ ನೋಡಿಕೊಂಡು ಬೆಳೆದಿರುವ ಯಾತ್ರಾ, ನಟನಾಗಬಯಸದೇ ಸಿನಿಮಾಟೋಗ್ರಾಫರ್ ವೃತ್ತಿಯನ್ನ ಆಯ್ಕೆಮಾಡಿಕೊಂಡಿದ್ದಾರೆ. ತಾಂತ್ರಿಕ ಕೆಲಸದಿಂದ ಗುರ್ತಿಸಿಕೊಳ್ಳಬೇಕು ಅಂತ ಹೊರಟಿದ್ದಾರೆ. ಇದಕ್ಕೆ ಅಜ್ಜ ಹಾಗೂ ಅಪ್ಪನ ಬೆಂಬಲ ಸಿಕ್ಕಿದ್ದು, ರಾಯನ್ ಚಿತ್ರದ ಮೂಲಕವೇ ಸಿನಿಮಾರಂಗಕ್ಕೆ ಇಂಟ್ರುಡ್ಯೂಸ್ ಮಾಡಿಸಬೇಕು ಅಂತ ಹೊರಟಿದ್ದಾರಂತೆ. ಅಷ್ಟಕ್ಕೂ, ಈ ಸುದ್ದಿನಾ ಧನುಷ್ ಆಗಲೀ, ಪ್ರೊಡಕ್ಷನ್ ಹೌಸ್ ಆಗಲೀ ಕನ್ಫರ್ಮ್ ಮಾಡಿಲ್ಲ. ಆದರೆ, ಯಾತ್ರಾ ಸಿನಿಮಾ ಎಂಟ್ರಿ ಸುದ್ದಿ ಮಾತ್ರ ಕೇಕೆ ಹಾಕ್ತಿದೆ.
ಅಷ್ಟಕ್ಕೂ, ರಾಯನ್ ಸಾಧಾರಣ ಸಿನಿಮಾ ಅಲ್ಲ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರ. ಧನುಷ್ ಜೊತೆಗೆ ಕಾಳಿದಾಸ್ ಜಯರಾಮ್, ಸಂದೀಪ್ ಕಿಶನ್, ಪ್ರಕಾಶ್ ರಾಜ್, ಎಸ್‌ಜೆ ಸೂರ್ಯ, ಸೆಲ್ವರಾಘವನ್, ವರಲಕ್ಷ್ಮಿ ಶರತ್ ಕುಮಾರ್, ಅಪರ್ಣ ಬಾಲಮುರುಳಿ, ಸರವಣನ್ ಹೀಗೆ ದೊಡ್ಡ ದೊಡ್ಡ ಸ್ಟಾರ್ ಕಲಾವಿದರು ಚಿತ್ರದಲ್ಲಿದ್ದಾರೆ. ಇವರಿಗೆಲ್ಲಾ ಕ್ಯಾಮರಾ ಫ್ರೇಮ್ ಇಡೋದು ತಮಾಷೆ ಮಾತಲ್ಲ. ಆದರೆ, ಅಪ್ಪನೇ ಡೈರೆಕ್ಷನ್ ಜವಾಬ್ದಾರಿ ಹೊತ್ತಿರೋದ್ರಿಂದ, ಆಕ್ಷನ್, ಕಟ್ ಹೇಳೋಕೆ ಅಪ್ಪ ಪಕ್ಕದಲ್ಲಿ ಇರೋದ್ರಿಂದ ಯಾತ್ರಾಗೆ ಸಿನಿಮಾಟೋಗ್ರಫಿ ಸುಲಭ ಆಗಬಹುದು. ಯಾವುದಕ್ಕೂ ಧನುಷ್ ಕಡೆಯಿಂದ ಕ್ಲ್ಯಾರಿಟಿ ಸಿಗಬೇಕಿದೆ. ಯಾಕಂದ್ರೆ, ರಾಯನ್ ಸಿನಿಮಾಗೆ ಓಂ ಪ್ರಕಾಶ್ ಸಿನಿಮಾಟೋಗ್ರಫಿ ಮಾಡ್ತಿದ್ದಾರೆನ್ನುವ ಸುದ್ದಿಯಿದೆ. ಎಆರ್ ರೆಹಮಾನ್ ಸಂಗೀತ, ಪ್ರಸನ್ನ ಜಿಕೆ ಸಂಕಲನ ಸಿನಿಮಾಗಿದ್ದು, ಸನ್ ಪಿಕ್ಚರ್ಸ್ ಬ್ಯಾನರ್ ಬಂಡವಾಳ ಹೂಡಿದೆ. ಇದೇ 2024ನಲ್ಲಿ ರಾಯನ್ ರಾಯಲ್ಲಾಗಿ ಬೆಳ್ಳಿತೆರೆ ಪ್ರವೇಶಿಸಲಿದೆ.