ಇದು ಆನ್ ಲೈನ್ ಜಮಾನ. ನಮ್ಮ ಒಂದಿಡೀ ಬದುಕೇ ಮೊಬೈಲ್ ಎಂಬ ಮಾಯೆಯ ಸೆಳವಿಗೆ ಸಿಕ್ಕ ಪರಿಣಾಮವಾಗಿ ಖಾಸಗೀತನವೆಂಬುದೇ ಮರೀಚಿಕೆಯಾಗಿ ಬಿಟ್ಟಿದೆ. ಪ್ರತಿಯೊಬ್ಬರ ಮೊಬೈಲಿನಲ್ಲಿ ಎಲ್ಲ ಮಾಹಿತಿಗಳೂ ಇರೋದರಿಂದ ಬೇರೆ ಬೇರೆ ವೇಷಗಳಲ್ಲಿ ಅದಕ್ಕೆ ಕನ್ನ ಹಾಕಿ, ನೆಮ್ಮದಿಗೆ ಕೊಳ್ಳಿ ಇಡುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಅದರಲ್ಲಿಯೂ ಮಕ್ಕಳ ಕೈಗೆ ಆಂಡ್ರಾಯ್ಡ್ ಮೊಬೈಲು ಸಿಕ್ಕರಂತೂ ಆ ಕುಟುಂಬದ ನೆಮ್ಮದಿ ಮೂರಾಬಟ್ಟೆಯಾಗಿ ಬಿಡುವ ಸಾಧ್ಯತೆಗಳೇ ಸದ್ಯದ ಮಟ್ಟಿಗೆ ಹೆಚ್ಚಾಗಿವೆ. ಪಬ್ ಜಿಯಂಥಾ ಗೇಮುಗಳನ್ನು ಆಡುವ ಮೂಲಕ ಟೀನೇಜ್ ಹುಡುಗರು ಹಾಳಾಗುತ್ತಿದ್ದಾರೆಂಬ ಮಾತು ಇದೀಗ ಹಳೇದಾಗಿದೆ. ಬೇಕೆಂದಾಕ ಸಾಲ ನೀಡೋ ಮೊಬೈಲ್ ಆಪ್ ಗಳ ಹಾವಳಿ ಬಂದ ಮೇಲೆ ಇಂಥಾ ಹುಡುಗರು ಅದರತ್ತ ಆಕರ್ಷಿತರಾಗಿದ್ದಾರೆ. ಇನ್ನು ಜವಾಬ್ದಾರಿ ಹೊತ್ತವರ ಪಾಲಿಗೆ ಇಂಥಾ ಮೈಕ್ರೋ ಫೈನಾನ್ಸ್ ಕಂಪೆನಿಗಳು ಆಸರೆಯಂತೆ ಕಾಣಿಸಿದ್ದದ್ದು ಸತ್ಯ. ಆದರೆ, ಕೊಂಚ ಯಾಮಾರಿದರೂ ನಿಮ್ಮ ಖಾಸಗೀ ಬದುಕು ಬಯಲಾಗಿ, ಬೆತ್ತಲೆ ಫೋಟೋಗಳ ಪ್ರಹಾರದ ಮೂಲಕ ಜೀವ ತೆಗೆದು ಬಿಡುವಷ್ಟು ಈ ವ್ಯವಹಾರ ಮಾಫಿಯಾ ಸ್ವರೂಪ ಪಡೆದುಕೊಂಡಿದೆ!
ಈ ಮೈಕ್ರೋ ಫೈನಾನ್ಸ್ ಎಂಬುದು ಪಿಡುಗಿನಂತೆ ಇದೀಗ ದೇಶಾದ್ಯಂತ ಹಬ್ಬಿಕೊಂಡಿದೆ. ದೇಶದ ಪ್ರತೀ ರಾಜ್ಯಗಳ ಹಳ್ಳಿ ಹಳ್ಳಿಗೂ ಈ ಮಾಫಿಯಾ ಮೊಬೈಲ್ ಮೂಲಕ ದಾಂಗುಡಿ ಇಟ್ಟಿದೆ. ಯುವಕರು ಸೇರಿಕದಂತೆ ಅದೆಷ್ಟೋ ಮಂದಿ ಮಾನಕ್ಕಂಜಿ ಆತ್ಮಹತ್ಯೆ ಮಾಡಿಕೊಂಡಿದ್ದೂ ನಡೆದಿದೆ. ಈಗೊಂದು ವರ್ಷದಿಂದೀಚೆಗೆ ಕರ್ನಾಟಕದಲ್ಲಿಯೂ ಕೂಡಾ ಇಂಥಾ ಅನಾಹುತಗಳು ಅವ್ಯಾಹತವಾಗಿ ನಡೆಯಲಾರಂಭಿಸಿವೆ. ಇತ್ತೀಚೆಗಂತೂ ಅಂಥಾ ಸಾವು ನೋವಿನ ಸಂಖ್ಯೆ ಅಧಿಕವಾಗಿದೆ. ಹೀಗಿರೋದರಿಂದಲೇ ಕರ್ನಾಟಕ ಸರ್ಕಾರ ಕಡೆಗೂ ಈ ಮೈಕ್ರೋ ಫೈನಾನ್ಸ್ ದಂಧೆಯನ್ನು ಮಟ್ಟ ಹಾಕಲು ಮುಂದಾಗಿದೆ. ಈ ಕ್ರಮದ ಬಗ್ಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಯಾಕೆಂದರೆ, ಕರ್ನಾಟಕ ಮಾತ್ರವಲ್ಲದೇ ಎಲ್ಲ ರಾಜ್ಯಗಳಲ್ಲಿಯೂ ಮೈಕ್ರೋ ಫೈನಾನ್ಸ್ ಮಾಫಿಯಾದ ವಿರುದ್ಧ ಕಾನೂನಾತ್ಮಕ ಸಮರ ಸಾರದಿದ್ದರೆ ಖಂಡಿತವಾಗಿಯೂ ಅದು ದೊಡ್ಡ ಮಟ್ಟದಲ್ಗಲಿ ಜೀವ ಬಲಿ ಪಡೆಯೋದು ಗ್ಯಾರಂಟಿ!
ಕಡೆಗೂ ಕಡಿವಾಣ!
ಈ ಮೈಕ್ರೊ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿ ನೂರಾರು ಜನ ಪ್ರಾಣ ಕಳೆದುಕೊಂಡಿರುವುದು ದುಃಖದ ಸಂಗತಿ. ರಾಜ್ಯ ಸರಕಾರ ಕಡೆಗೂ ಸುಗ್ರೀವಾಜ್ಞೆ ಮೂಲಕ ಈ ವ್ಯವಹಾರಕ್ಕೆ ಕಡಿವಾಣ ಹಾಕಲಿದೆಯಂತೆ. ಸ್ವತಃ ಸಿಎಂ ಈ ಕುರಿತು ಮಾತನಾಡಿ “ಮೈಕ್ರೋ ಫೈನಾನ್ಸ್ ಹಾವಳಿಗೆ ಸರ್ಕಾರ ಅಂಕುಶ ಹಾಕಲಿದೆ. ಕಿರುಕುಳ ನೀಡಿ, ಬಲವಂತವಾಗಿ ಸಾಲ ವಸೂಲಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ನೀಡಲಾಗುವುದು. ಜೊತೆಗೆ ಸಾಲಗಾರರ ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸರ್ಕಾರದಿಂದ ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಇದು ಶೀಘ್ರವೇ ಕಾರ್ಯಗತವಾಗಲಿ ಎಂಬುದೇ ಎಲ್ಲ ನೊಂದವರ ಹಾರೈಕೆಯಾಗಿದೆ. ನಾವು ಮೈಕ್ರೋ ಫೈನಾನ್ಸ್‌ನವರ ಕಳ್ಳದಂಧೆಯ ಕುರಿತು ಹೇಳಲು ಹೊರಟಿಲ್ಲ. ಬದಲಿಗೆ ಅಷ್ಟೇ ಭೀಕರವಾದ ಡಿಜಿಟಲ್ ಸಾಲದ ಕೂಪಗಳ ಕುರಿತು ಹೇಳಲು ಹೊರಟಿದ್ದೇವೆ. ಮೈಕ್ರೋ ಫೈನಾಶಿಯರ್ಸ್‌ಗಳಿಗೆ ಕಡಿವಾಣ ಹಾಕಬಹುದು. ಆದರೆ ಈ ಡಿಜಿಟಲ್ ಸಾಲದ ಆಪ್‌ಗಳಿಗೆ ಕಡಿವಾಣ ಹಾಕುವುದು ಸುಲಭವಲ್ಲ. ಇವರ ಹಿಂದೆ ಬಹುದೊಡ್ಡ ಮಾಫಿಯಾನೇ ಇದೆ ಎನ್ನಲಾಗುತ್ತಿದ್ದು, ಕೋಟ್ಯಾಂತರ ವಹಿವಾಟು ನಡೆಸುತ್ತಿರುವುದಾಗಿ ವರದಿಗಳು ಹೇಳುತ್ತವೆ!
ಸಾವಿರಾರು ಕೋಟಿಯ ದಂಧೆ
ಮೈಕ್ರೋ ಫೈನಾನ್ಸ್ ನದ್ದೇ ಒಂದು ಬಗೆಯ ದಂಧೆಯಾದರೆ, ಈ ಡಿಜಿಟಲ್ ಸಾಲದ ದಂಧೆಕೋರರದ್ದು ಭಯಾನಕ ಮಾಫಿಯಾ. ಕೊರೋನಾ ಕಾಲದಲ್ಲಿ ಜನರ ಅನಿವಾರ್ಯತೆಯಲ್ಲೇ ಸುಗ್ಗಿ ಮಾಡಿದ್ದ ಈ ಮಾಫಿಯಾ ಮಂದಿ ಭಾರತದ ಸೈಬರ್ ಕ್ರೈಂ ವಿಭಾಗವೇ ಕಂಗಾಲಾಗುವಂತೆ ಬೆಳೆದು ನಿಂತಿದೆ. ತಾಂತ್ರಿಕವಾಗಿಯೂ ಕೂಡಾ ಪ್ರಳಯಾಂತಕ ನಡೆ ಅನುಸರಿಸುತ್ತಿದೆ. ಡಿಜಿಟಲ್ ಸಾಲದ ವ್ಯವಹಾರ ರಾಷ್ಟ್ರದಲ್ಲಿ ೨೦೨೨ ರಲ್ಲಿ ಸುಮಾರು ೨೨ಸಾವಿರ ಕೋಟಿ ಮೌಲ್ಯದ್ದಾಗಿತ್ತು. ೨೦೨೩ ರಲ್ಲಿ ೩೨ಸಾವಿರ ಕೋಟಿಯನ್ನು ತಲುಪಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಸೂಕ್ತ ಡಿಜಿಟಲ್ ಸಾಕ್ಷರತೆ ಇಲ್ಲದೆ ಡಿಜಿಟಲೀಕರಣ ಮತ್ತು ಕಟ್ಟುನಿಟ್ಟಾದ ಡಿಜಿಟಲ್ ಸಾಲ ನೀತಿಗಳು ಮತ್ತು ಚೌಕಟ್ಟಿನ ಕೊರತೆ ಇಂತಹ ಸಾಲದ ಬಲೆಗಳಿಗೆ ಕಾರಣವಾಗುತ್ತದೆ.
ಮೊಬೈಲ್ ಫೋನ್‌ಗಳ ಮೂಲಕ ಆಪ್‌ಸ್ಟೋರ್‌ಗಳ ಮೂಲಕ ಅತ್ಯಂತ ಸಲೀಸಾಗಿ ಸಾಲ ನೀಡುವ ನೂರಾರು ಅಪ್ಲಿಕೇಶನ್‌ಗಳವಿದೀಗ ದೊಡ್ಡ ಮಟ್ಟದಲ್ಲಿಯೇ ಚಾಲ್ತಿಯಲ್ಲಿವೆ. ಅರೆ ಶಿಕ್ಷಿತರು, ಶಿಕ್ಷಿತರು ಹಿಂದೆ ಮುಂದೆ ಯೋಚಿಸದೆ ಇವುಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಈ ಆಪ್‌ಗಳು ಅಥವಾ ಅಪ್ಲಿಕೇಶನ್‌ಗಳು ಕ್ಲೈಮ್ ಪ್ರಕ್ರಿಯೆಯ ವೇಳೆ, ಗೌಪ್ಯತಾ ನಿಯಮಗಳನ್ನು ಉಲ್ಲಂಘಿಸಿ ಮೊಬೈಲ್ ಬಳಕೆದಾರನ ಸಂಪರ್ಕ ಪಟ್ಟಿಯನ್ನು ಗಮನಿಸುತ್ತಲೇ ಇರುತ್ತವೆ. ನೀವು ಆ ಆಪ್‌ನೊಳ ಹೋಗಿ ಸಾಲ ತೆಗೆದುಕೊಳ್ಳಲು ಅರ್ಹರಾಗುವ ಹೊತ್ತಿಗೆಲ್ಲ ಈ ಪ್ರಳಯಾಂತಕರು ನಿಮ್ಮ ಅಷ್ಟೂ ಕಾಂಟ್ಯಾಕ್ಟ್ ನಂಬರ್‍ಸ್, ಫೋಟೋಗಳು ಸೇರಿದಂತೆ ಖಾಸಗಿ ಮಾಹಿತಿಗಳನ್ನು ಗೋರಿಕೊಂಡಿರುತ್ತಾರೆ. ಇವುಗಳನ್ನು ಬಳಸುವವರಿಗೆ ತ್ವರಿತ ಸಾಲದ ಅವಶ್ಯಕತೆ ಇರಲಿದೆ ಎಂಬುದನ್ನು ಪತ್ತೆ ಹಚ್ಚಿ, ಪದೇ ಪದೇ ದೂರವಾಣಿ ಮಾಡಿ, ಸಾಲ ತೆಗೆದುಕೊಳ್ಳುವಂತೆ ಗೋಗರೆಯುತ್ತಾರೆ. ಒಮ್ಮೆ ಇವರ ಸಾಲಕ್ಕೆ ಕೈ ಚಾಚಿದರೆ ಅಲ್ಲಿಗೆ ‘ಕುರಿ ಹಳ್ಳಕ್ಕೆ ಬಿತ್ತು’ ಎಂದೇ ಅರ್ಥ!
ದುರಂತ ಅಂತ್ಯ!
ಇಪ್ಪತ್ಮೂರು ವರ್ಷದ ಅರವಿಂದ್ ಸಾಲ ನೀಡುವ ಒಂದು ಆಪ್ ಮೂಲಕ ಕೇವಲ ಮೂರು ಸಾಲಪಡೆದಿದ್ದ. ಅದನ್ನು ತೀರಿಸಲಾಗದೆ, ನಂತರದಲ್ಲಿ ಆತ್ಮ ಹತ್ಯೆ ಮಾಡಿಕೊಂಡ. ಈ ಬಗ್ಗೆ ಪೊಲೀಸರು ತನಿಖೆಗಿಳಿದಾಗ ಅನೇಕಾನೇಕ ಆಘಾತಕರ ಅಂಶಗಳು ಪತ್ತೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಮೊಬೈಲ್‌ನಲ್ಲಿ ಅನೇಕ ಅವಹೇಳನಕಾರಿ ಸಂದೇಶಗಳು ಪತ್ತೆಯಾಗಿದ್ದವು. ಅದರಲ್ಲೂ, ತನ್ನ ತಾಯಿ, ಹೆಂಡತಿ, ಮಗಳು ಹಾಗೂ ಸಹೋದರಿಯನ್ನು ವೇಶ್ಯೆಯ ಕೆಲಸಕ್ಕೆ ಕಳುಹಿಸುತ್ತಾನೆ. ಅವರು ಗಳಿಸಿದ ಹಣದಿಂದ ಬದುಕುತ್ತಾನೆ ಎಂಬ ಗಂಭೀರ ಆರೋಪಗಳೊಂದಿಗೆ ಸಂದೇಶಗಳು ಇದ್ದವು. ಇವು ದುಃಖ ತರಿಸಿ ಅವನನ್ನು ಸಾವಿನ ಕೂಪಕ್ಕೆ ತಳ್ಳಲು ಕಾರಣವಾಗಿರಬಹುದು ಎಂಬ ಅನುಮಾನವಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಮಧ್ಯಪ್ರದೇಶದಲ್ಲಿ ಇಪ್ಪತೈದು ಸಾವಿರ ಸಾಲವನ್ನು ತೀರಿಸಲು ಸಾಧ್ಯವಾಗದೆ, ಯುವ ದಂಪತಿ ತೀವ್ರ ಮನೋವ್ಯಥೆಗೆ ಒಳಗಾದರು. ಸಾಲ ನೀಡುವ ಅಪ್ಲಿಕೇಶನ್‌ನ ಕಿರುಕುಳ ಮತ್ತು ನಿರಂತರ ಒತ್ತಡ ಅವರ ಬದುಕನ್ನು ಹಿಂಡಿ ಹಿಪ್ಪೆ ಮಾಡಿತು. ಆ ದಂಪತಿ ತಮ್ಮ ಅಮಾಯಕರಾದ ಮಕ್ಕಳ ಜೀವವನ್ನೂ ಬಲಿ ಕೊಟ್ಟು, ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ನಡೆದು ಹೋಯಿತು. ಓರ್ವ ರೈತ ಸತ್ತರೆ… ಅವನಿಗೆ ದಯಮಯಿ ರಾಜ್ಯ ಸರ್ಕಾರ ಕುಟುಂಬಕ್ಕೆ ಪರಿಹಾರ ನೀಡಬಹುದು. ಆದರೆ ಡಿಜಿಟಲ್ ಸಾಲಕ್ಕೆ ಸತ್ತವರದ್ದು ದುರಂತ ಅಂತ್ಯವಷ್ಟೆ. ಬಾಳಿ ಬದುಕ ಬೇಕಾದವರು ಯಾವುದೋ ಅನಿವಾರ್ಯತೆಗೆ ಬಿದ್ದು ತರಗೆಲೆಗಳಂತೆ ಉದುರಿ ಹೋಗುತ್ತಿರೋದು ನಿಜಕ್ಕೂ ದುರಂತ.
೨೦೨೨ ರಿಂದ ವೈಯಕ್ತಿಕ ಮಾಹಿತಿ (ಡೇಟಾ)ಯ ದುರುಪಯೋಗ ಮತ್ತು ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್ಗಳ ಕಿರುಕುಳದಿಂದ ಅರವತ್ತಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. ಸಾಲ ಮರುಪಾವತಿಸಲಾಗದೆ ಮನೋವ್ಯಥೆಗೆ ಒಳಗಾಗಿರುವವರ ಹಾಗೂ ವರದಿಯಾಗದ ಪ್ರಕರಣಗಳು ಮತ್ತು ಆಘಾತಕ್ಕೊಳಗಾದ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿರಬಹುದು. ಇದು ಸತ್ತವರ ಕಥೆಯಾದರೆ, ಮನೆಯ ಕಡೆಯಿಂದ, ಸಮಾಜದಿಂದ ನಾನಾ ಮೂದಲಿಕೆಗಳನ್ನು ಅನುಭವಿಸುತ್ತಾ ಸತ್ತಂತೆ ಬದುಕುತ್ತಿರುವವರ ಬಹು ದೊಡ್ಡ ಗುಂಪೊಂದು ಭಾರತದಲ್ಲಿದೆ. ಅವರೆಲ್ಲ ಈ ಕ್ಷಣಕ್ಕೂ ಸಾವಿನ ದವಡೆಗೆ ಸಿಕ್ಕಂತೆ ನಲುಗುತ್ತಿದ್ದಾರೆ. ಅಂಥವರ ಸಂಖ್ಯೆ ನಮ್ಮ ರಾಜ್ಯದಲ್ಲಿಯೂ ಹೆಚ್ಚಿದೆ ಅನ್ನೋದೇ ನಿಜಕ್ಕೂ ದುರಂತದ ಸಂಗತಿ.
ಆಮಿಷವೇ ಅಸ್ತ್ರ!
ಶೀಘ್ರ ಸಾಲಗಳು, ವೇಗದ ಸಾಲಗಳು, ಡಾಕ್ಯುಮೆಂಟ್‌ಗಳೇ ಇಲ್ಲ, ಒಂದು ಕ್ಲಿಕ್‌ನಲ್ಲಿ ಸಾಲ ಇತ್ಯಾದಿ ಆಕರ್ಷಕ ಭರವಸೆಗಳ ಮೂಲಕ ಜನರನ್ನು, ವಿಶೇಷವಾಗಿ ಯುವಕರನ್ನು, ತನ್ನ ಜಾಲಕ್ಕೆ ಸೆಳೆಯುತ್ತದೆ. ಒಂದು ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಎನ್ನುತ್ತಾರೆ. ಡೌನ್‌ಲೋಡ್ ಮಾಡಿಕೊಂಡರೆ ಸಾಲದ ಚಕ್ರದಲ್ಲಿ ಸಿಲುಕಿಸುತ್ತಾರೆ. ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಜಡಿಯುತ್ತಾರೆ. ಪ್ರಾಮಾಣಿಕವಾಗಿ ತೀರಿಸುತ್ತಾ ಹೋದರು ಅದು ಮುಗಿಯದಷ್ಟು ಎತ್ತರಕ್ಕೆ ಒಯ್ಯುತ್ತಾರೆ. ತಪ್ಪಿಸಿಕೊಳ್ಳುವ ಮಾತೇ ಇಲ್ಲ. ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದ ಆಪ್ ಇವರ ಚಹರೆಯನ್ನು ತಿಳಿಸುತ್ತಾ ಹೋಗುತ್ತದೆ!
ಡಿಜಿಟಲ್ ಸಾಲನೀಡುವ ಮಂದಿ ನಿರಂತರವಾಗಿ ವ್ಯಕ್ತಿಗಳ ಗೌಪ್ಯತೆಯನ್ನು ಉಲ್ಲಂಘಿಸಿ, ಮೊಬೈಲ್ ಬಳಕೆದಾರನ ಹಣಕಾಸಿನ ಮಾಹಿತಿಯನ್ನು ಕದಿಯುತ್ತಲೇ ಇರುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕುಗಳಲ್ಲಿ ಸಾಲಕ್ಕೆ ಹೆಚ್ಚಿನ ಬಡ್ಡಿಯಿರದು. ಪಾವತಿಸುತ್ತಾ ಹೋದಲ್ಲಿ ಅವರು ಕಾಟ ಕೊಡುವುದೂ ಇಲ್ಲ. ನಿಗದಿತ ಕಾಲಾವಕಾಶದಲ್ಲಿ ಎಲ್ಲವೂ ಮುಗಿದು ಹೋಗಲಿದೆ. ಅನೇಕರು ಸಾಲ ಪಡೆದು ಹಿಂತಿರುಗಿಸಿ, ಬಾಳು ಹಸನು ಮಾಡಿಕೊಂಡಿದ್ದಾರೆ. ಈಚಿನ ದಿನಗಳಲ್ಲಿ ಬ್ಯಾಂಕುಗಳಿಂದ ಸಾಲು ಪಡೆಯುವುದು ಸುಲಭವಾಗಿಲ್ಲ. ಆಧಾರ್, ಪ್ಯಾನ್, ಕೆವೈಸಿ, ಶೂರಿಟಿ, ಪ್ಯೂರಿಟಿ… ಮತ್ತೊಂದು ನೀಡಿದರು ಸಾಲ ಸಿಗಲಿದೆ ಎಂಬುದರ ಬಗೆಗೆ ಖಾತರಿಯಿಲ್ಲ. ಆಸ್ತಿ, ಪಾಸ್ತಿ ಅಡವಿಟ್ಟು ಪಡೆಯಬೇಕು. ಅದು ಕೂಡ ಕ್ಲುಪ್ತ ಅವಧಿಯಲ್ಲಿ ಸಿಗದು. ಕೆಲವೊಮ್ಮೆ ಲಂಚ-ಋಷುವತ್ತುಗಳು ನೀಡಬೇಕು.
ಅನಿವಾರ್ಯತೆಯೆಂಬ ಕುಣಿಕೆ
ದೇಶಬಿಟ್ಟು ಓಡಿ ಹೋಗುವ ಮಂದಿಗೆ ಕುಳಿತಲ್ಲೇ ಸಾಲ ದೊರೆಯಲಿದೆ. ಆದರೆ ಬಡವರಿಗೆ, ಮಧ್ಯಮ ವರ್ಗದವರಿಗೆ, ಯುಕವರಿಗೆ ಸಾಲ ಎಂಬುದು ಮರೀಚಿಕೆ ಎಂಬಂತಾಗಿದೆ. ಹೀಗಾಗಿ ಅನ್ಯಮಾರ್ಗವಿಲ್ಲದೆ ಡಿಜಿಟಲ್ ಸಾಲದ ಆಪ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಅಕ್ರಮ ಸಾಲ ನೀಡುವ ಆಪ್‌ಗಳಲ್ಲಿ ಹೆಚ್ಚಿನವು ಯಾವುದೇ ನಿರ್ಬಂಧಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ದುರಾಸೆ ಮತ್ತು ಹಾನಿಕಾರಕ ಪರಿಣಾಮಗಳನ್ನು ಹೊಂದಿವೆ. ಸುಳ್ಳು ಭರವಸೆಗಳನ್ನು ನೀಡುವ ಈ ಅಪ್ಲಿಕೇಶನ್‌ಗಳು ಗ್ರಾಹಕರ ಗೌಪ್ಯತೆಯನ್ನು ಎಗ್ಗಿಲ್ಲದೆ ಉಲ್ಲಂಘಿಸುತ್ತಿವೆ. ದೇಶದ ಯುವ ಜನತೆಯ ಜೊತೆಗೆ ಆರ್ಥಿಕವಾಗಿ ದುರ್ಬಲ ಜನರನ್ನು ಸಾಲದ ಬಲೆಯೊಳಗೆ ಸಿಲುಕಿಸುತ್ತಿವೆ.
ಭಾರತವನ್ನು ಆವರಿಸಿಕೊಂಡಿರುವ ಡಿಜಿಟಲೀಕರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರೂ, ಡಿಜಿಟಲ್ ಅರಿವು ಮತ್ತು ಸಾಕ್ಷರತೆಯ ಕೊರತೆಯಿಂದ ಡಿಜಿಟಲ್ ವೇದಿಕೆಗಳಿಂದ ಸಂಭವಿಸುತ್ತಿರುವ ವಂಚನೆಗಳು, ಮೋಸಗಳು, ಮತ್ತು ಲೂಟಿಗಳನ್ನು ತಡೆಯುವ ಪ್ರಯತ್ನಗಳು ಅತ್ಯಲ್ಪವಾಗಿವೆ. ಚೀನಾ ಮೂಲದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ರೀತಿಯ ಕೂಗು ಮತ್ತು ಪ್ರಚಾರವು, ಈ ಅಪಾಯಕಾರಿ ಸಾಲ ಅಪ್ಲಿಕೇಶನ್‌ಗಳಿಗೆ ಅನ್ವಯಿಸುತ್ತಿಲ್ಲ. ಮಾಧ್ಯಮಗಳು ಸಾಲದ ಬಲೆಗೆ ಸಿಕ್ಕು ಬಲಿಯಾದ ವ್ಯಕ್ತಿಗಳ ಹೃದಯವಿದ್ರಾವಕ ಕಥೆಗಳನ್ನು ವರದಿ ಮಾಡುತ್ತಿದ್ದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳಿಗೆ ಸೂಕ್ತ ಪ್ರಚಾರವೇ ದೊರೆಯುತ್ತಿಲ್ಲ. ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುವುದೇ ಇಲ್ಲ. ಅಷ್ಟರ ಮಟ್ಟಿಗೆ ಈ ಡಿಜಿಟಲ್‌ಸಾಲ ನೀಡುವ ಮಂದಿ ಪ್ರಭಾವಿಗಳು!
ಈ ಸಮಸ್ಯೆ ಕೇವಲ ಸಾಲ ಅಪ್ಲಿಕೇಶನ್‌ಗಳಿಗೇ ಸೀಮಿತವಿಲ್ಲ. ಗೇಮಿಂಗ್ ಆಪ್‌ಗಳಲ್ಲಿಯೂ ಯುವಕರು ಅಷ್ಟೇ ಅಪಾಯದ ಬಲೆಗೆ ಸಿಲುಕುತ್ತಿದ್ದಾರೆ. ಗೇಮಿಂಗ್ ವ್ಯಸನದಿಂದಾಗಿ ಅನೇಕರು ತಮ್ಮ ಹಣ ಮತ್ತು ಪ್ರಾಣಗಳನ್ನು ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತ್ವರಿತವಾಗಿ ಬೆಳೆಯುತ್ತಿರುವ ಸಾಲ ನೀಡುವ ಅಪ್ಲಿಕೇಶನ್‌ಗಳ ಕುರಿತು ಕಳವಳ ವ್ಯಕ್ತಪಡಿಸಿದೆ. ಆದರೆ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಏನಾಗಿದೆ ಎಂಬುದು ತಿಳಿಯದು!
ಡಿಜಿಟಲ್ ಸಾಲಗಳ ಬೆದರಿಕೆಯನ್ನು ನಿಲ್ಲಿಸುವ ಜವಾಬ್ದಾರಿ ಕೇವಲ ಆರ್‌ಬಿಐಗೂ ಸೀಮಿತವಾಗಿರಬಾರದು. ‘ಡಿಜಿಟಲ್ ಇಂಡಿಯಾ’ ಅಭಿಯಾನದ ಯಶಸ್ಸಿನ ಬಗ್ಗೆ ತನ್ನ ಬೆನ್ನುತಟ್ಟಿಕೊಳ್ಳುತ್ತಿರುವ ಕೇಂದ್ರ ಸರಕಾರ ಆಪ್ ಸ್ಟೋರ್‌ಗಳಲ್ಲಿನ್ಲ ಲಭ್ಯವಿರುವ ಪ್ರಮುಖ ಸಾಲ ಅಪ್ಲಿಕೇಶನ್‌ಗಳಿಗೆ ಕಟ್ಟುನಿಟ್ಟಾದ ಪರವಾನಗಿ ಪ್ರಕ್ರಿಯೆ ಒದಗಿಸಲು ಮತ್ತು ಅವುಗಳನ್ನು ಸಮಗ್ರವಾಗಿ ಪರಿಶೀಲಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಇದಲ್ಲದೆ, ಅನಧಿಕೃತ, ಕಾನೂನುಬಾಹಿರ ಮತ್ತು ಮೋಸದ ಅಪ್ಲಿಕೇಶನ್’ಗಳಿಂದ ಜನರು ಬಲಿಯಾಗುವ ಮುನ್ನವೇ, ಸಾಲ ನೀಡುವಿಕೆ ಮತ್ತು ಮರುಪಡೆಯುವಿಕೆ ಸಂಬಂಧಿತ ಮಾರ್ಗಸೂಚಿಗಳನ್ನು ಜಾರಿಗೆ ತರಲು ಕ್ರಮ ತೆಗೆದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಹೇಗೆ ಮೈಕ್ರೋ ಫೈನಾನ್ಸ್‌ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆಯೋ ಅದೇ ಮಾದರಿಯಲ್ಲಿ ಕೇಂದ್ರ ಹಾಗೂ ಉಳಿದ ರಾಜ್ಯಗಳು ಕ್ರಮಕೈಗೊಳ್ಳಬೇಕಿದೆ.
ವ್ಯವಸ್ಥಿತ ಹುನ್ನಾರ
ನಮ್ಮ ಆಪ್‌ಡೌನ್‌ಲೋಡ್ ಮಾಡಿಕೊಳ್ಳಿ. ಕುಳಿತಲ್ಲೇ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ. ಹಣಕಾಸಿನ ನೆರವು ಅರಿತುಕೊಳ್ಳಿ ಎಂದು ಬ್ಯಾಂಕುಗಳು ನಿತ್ಯ ತುತ್ತೂರಿ ಊದುತ್ತವೆ. ರಾಜ್ಯ ಸರ್ಕಾರಗಳು ಮತ್ತು ಸಾಲ ನೀಡುವ ಇತರ ಎಲ್ಲ ಅಪ್ಲಿಕೇಶನ್‌ಗಳು ಮೊಬೈಲ್ ಫೋನ್‌ಗಳಿಗೆ ಪ್ರವೇಶವನ್ನು ನೀಡುತ್ತಿವೆ, ಮತ್ತು ಅನಧಿಕೃತ ಸಾಲ ನೀಡುವ ಅಪ್ಲಿಕೇಶನ್‌ಗಳನ್ನು ಪ್ರಚೋದಿಸಲು ಆಪ್ ಸ್ಟೋರ್‌ಗಳನ್ನು ಬಳಸುತ್ತಿರುವುದು ವಂಚಕ ಆಪ್‌ಗಳಿಗೆ ಅನುಕೂಲವೇ ಆಗಿದೆ. ಡಿಜಿಟಲ್ ಇಂಡಿಯಾ ಬಗ್ಗೆ ಜನರ ವಿಶ್ವಾಸವನ್ನು ಬಲಪಡಿಸಲು, ಸೈಬರ್ ಅಪರಾಧಗಳು ಮತ್ತು ವಂಚನೆಗಳ ವಿರುದ್ಧ ಡಿಜಿಟಲ್ ಜಾಗೃತಿಯನ್ನು ಹೆಚ್ಚಿಸಲು ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಕ್ರಮಗಳನ್ನು ತ್ವರಿತವಾಗಿ ಹಮ್ಮಿಕೊಳ್ಳಬೇಕಿದೆ.
ಮೋಲು ನೋಟಕ್ಕಿದು ಯಾರೋ ಲೋನ್ ಆಪ್‌ಗಳಿಂದ ಹಣ ಇಸಿದುಕೊಂಡು ತೀರಿಸಲಾರದೆ ಅನುಭವಿಸುವ ಯಾತನೆಯಂತೆ ಕಾಣಿಸಬಹುದು. ಯುವ ಸಮುದಾಯದ ವಿಚಾರದಲ್ಲಿ ಅದು ಒಂದಷ್ಟು ನಿಜವೂ ಇರಬಹುದು. ಆದರೆ ಇದುವರೆಗೂ ಈ ಲೋನ್ ಆಪ್ ಅಥವಾ ಡಿಜಿಟಲ್ ಸಾಲದ ದಂಧೆಯ ಸುತ್ತಾ ನಡೆದಿರುವ ಒಂದಷ್ಟು ಅಧ್ಯಯನಗಳು, ವಿಶ್ಲೇಷಣಾ ವರದಿಗಳು ಮಾತ್ರ ಭಯಾನಕ ವಿಚಾರಗಳನ್ನು ಬಿಚ್ಚಿಡುತ್ತಿವೆ. ಈ ಲೋನ್ ಆಪ್‌ಗಳಿಗೆ ಭಾರತದ ಮಂದಿ ಬಲಿ ಬೀಳಲಾರಂಭಿಸಿರೋದು ಕೊರೋನಾ ಬಾಧೆಯ ನಂತರದ ದಿನಗಳಲ್ಲಿ. ಕೊರೋನಾ ಕಾಲದ ನಂತರದಲ್ಲಿ ಅನೇಕರು ವ್ಯವಹಾರ, ವಹಿವಾಟುಗಳಲ್ಲಿ ಮುಗ್ಗರಿಸಿದ್ದಾರೆ. ಆದರೆ ಸಾಂಸಾರಿಕ ಜವಾಬ್ದಾರಿಗಳು, ಹಣದ ಅವಶ್ಯಕತೆಗಳು ಮಾತ್ರ ಯಾರನ್ನೂ ಬಿಡುವುದಿಲ್ಲ.
ಇದುವರೆಗೂ ಈ ಲೋನ್ ಆಪ್‌ಗಳಿಂದ ಪಡಿಪಾಟಲು ಅನುಭವಿಸುತ್ತಿರುವ ಬಹುಪಾಲು ಮಂದಿ ಇಂಥಾ ಅನಿವಾರ್ಯ ಸ್ಥಿತಿ ಒತ್ತಡ ತಾಳಲಾರದೆ ಲೋನ್ ಆಪ್‌ಗಳ ಮೊರೆ ಹೋಗಿದ್ದಾರೆ. ಹುಡುಕಲು ನಿಂತರೆ ಒಬ್ಬೊಬ್ಬರ ಹಿಂದೆಯೂ ಇಂಥಾ ಕರುಣಾಜನಕ ಕಥೆಗಳಿದ್ದಾವೆ. ಆದರೆ, ಲೋನ್ ಆಪ್‌ಗಳನ್ನು ಲೀಡ್ ಮಾಡುವ ಕಿರಾತಕರಿಗೆ ಅದ್ಯಾವ ಕಣ್ಣೀರಿನ ಕಥೆಗಳೂ ತಾಕುವುದಿಲ್ಲ. ಅವರೊಂದು ರೀತಿ ಮನುಷ್ಯತ್ವವೇ ಇಲ್ಲದ ಪಾಪಿಷ್ಟರಿದ್ದಂತೆ. ಇಂಥಾ ಲೋನ್ ಆಪ್‌ಗಳಲ್ಲಿ ಕೆಲವೇ ಕೆವ ಆಪ್‌ಗಳು ನ್ಯಾಯಯುತವಾಗಿ ಕಾರ್ಯನಿರ್ವಹಸಿಸುತ್ತಿದ್ದಾವೆ. ಅದು ಬಿಟ್ಟರೆ ಪ್ಲೇ ಸ್ಟೋರಿನಲ್ಲಿ ಪಿತಗುಡುವವೆಲ್ಲವೂ ಚೀನಾ ಮೇಡ್ ಪ್ರಳಯಾಂತಕ ಸರಕುಗಳೇ.
ಗಮನೀಯ ಅಂಶವೆಂದರೆ, ಇಂಥಾ ಆಪ್‌ಗಳನ್ನು ಭಾರತದಲ್ಲಿ ಉತ್ತರ ಭಾರತದ ಹಿಂದಿ ಮಂದಿಯೇ ನಡೆಸುತ್ತಿದ್ದಾರೆ. ಇವರ ಕೈಗೇನಾದರೂ ಸಿಕ್ಕಿ ಬಿಟ್ಟರೆ ಕಥೆ ಮುಗಿಯಿತೆಂದೇ ಅರ್ಥ. ಸಾಮಾನ್ಯವಾಗಿ ನ್ಯಾಯಯುಉತ ಆಪ್‌ಗಳಲ್ಲಿ ಸಿಬಿಲ್ ಸ್ಕೋರು ಕಡಿಮೆ ಇದ್ದರೆ ಸಾಲ ಸಿಗೋದಿಲ್ಲ. ಆದರೆ ಇಂಥಾ ದೋಖಾ ಆಪ್‌ಗಳಲ್ಲಿ ಮಾತ್ರ ಐದು ಸಾವಿರದೊಳಗಿನ ಮೊತ್ತವನ್ನು ಸಲೀಸಾಗಿ ಅಕೌಂಟಿಗೆ ಹಾಕುತ್ತಾರೆ. ಇನ್ನೂ ಮುಖ್ಯ ವಿಚಾರವೆಂದರೆ ಇಂಥಾ ದೋಖಾ ಆಪ್‌ಗಳು ಹೆಜ್ಜೆ ಹೆಜ್ಜೆಗೂ ಶಾಕ್ ನೀಡುತ್ತವೆ. ಒಂದು ತಿಂಗಳ ಅದ್ಯಾವುಉದೋ ತಾರೀಕು ಮರು ಪಾವತಿ ಇರುತ್ತದೆ. ಆದರೆ ಸಾಲ ಪಡೆದು ಸರಿಯಾಗಿ ಒಂದು ವಾರದೊಳಗೆ ಕರೆ ಶುರುವಾಗುತ್ತೆ.
ಒಂದು ವೇಳೆ ನ್ಯಾಯಯುತವಾಗಿ ಮಾತಾಡಿದರೆ ತಕ್ಷಣವೇ ಬ್ಲಾಕ್ ಮೇಲ್ ತಂತ್ರ ಶುರುವಾಗುತ್ತೆ. ಅದಾಗಲೇ ನಿಮ್ಮ ಗ್ಯಾಲರಿಯಿಂದ ತೆಗೆದ ಫೋಟೋಗಳನ್ನು ಮಾರ್ಫಿಂಗ್ ಮೂಲಕ ಬೆತ್ತಲೆ ಚಿತ್ರಗಳಾಗಿ ಮಾಡಿ ನಿಮ್ಮದೇ ವಾಟ್ಸಾಪ್‌ಗೆ ಕಳಿಸಲಾಗುತ್ತೆ. ಒಂದು ವೇಳೆ ಇಂದೇ ಹಂ ಪಾವತಿಸದೇ ಹೋದರೆ ಕಾಂಟ್ಯಾಕ್ಟಿನಲ್ಲಿರುವ ಎಲ್ಲರಿಗೂ ಅದನ್ನು ಕಳಿಸೋದಾಗಿ ಬೆದರಿಕೆ ಹಾಕಲಾರಂಭಿಸುತ್ತಾರೆ. ಹೇಗೋ ಕಷ್ಟಪಟ್ಟು ಒಂದಷ್ಟು ಸಾವಿರ ಹೆಚ್ಚೇ ಕಟ್ಟಿ ಕಂಟಕ ಕಳೆಯಿತೆಂದು ನಿರಾಳವಾಗುವ ಮುನ್ನವೇ ಮತ್ತೆ ಶಾಕ್ ಎದುರಾಗುತ್ತೆ. ಈ ಫೇಕುಗಳ ಅಸಲೀ ಆಟ ಶುರುವಾಗೋದೇ ಅಲ್ಲಿಂದ. ಮತ್ಯಾವನೋ ಕರೆ ಮಾಡಿ ಕಳ್ಳ ಬಾಕಿ ಮಲೆಕ್ಕ ತೋರಿಸುತ್ತಾನೆ. ಅದನ್ನು ಕಟ್ಟದಿದ್ದರೆ ಮತ್ತೆ ಬ್ಲಾಕ್ ಮೇಲ್ ಶುರುವಾಗುತ್ತೆ.
ಈ ಖದೀಮರು ಡೇಟಾ ಸಂಗ್ರಹಿಸಿಟ್ಟುಕೊಂಡು ತಮ್ಮ ತಂಡಕ್ಕೆ ಹಂಚುತ್ತಾರೆ. ಯಾವಾಗಲೋ ಅತ್ತಲಿಂದ ಒಂದೆರಡು ಸಾವಿರ ನಿಮ್ಮ ಅಕೌಂಟಿಗೆ ಹಾಕುತ್ತಾರೆ. ವಾರ ಕಳೆಯೋದರೊಳಗೆ ದುಪ್ಪಟ್ಟಾಗಿ ವಾಪಾಸು ಕೇಳುತ್ತಾರೆ. ಒಂದು ವೇಳೆ ಜೋರು ಧ್ವನಿಯಲ್ಲಿ ಮಾತಾಡಿದರೆ ಮತ್ತದೇ ಬ್ಲಾಕ್ ಮೇಲ್ ದಂಧೆ ಶುರುವಾಗುತ್ತೆ. ಹೆಚ್ಚಾಗಿ ಶಾಲಾ ಮಕ್ಕಳು ಇಂಥಾ ಲೋನ್ ಆಪ್‌ಗಳ ಸಹವಾಸ ಮಾಡಿ ನೆಮ್ಮದಿ ಕೆದಿಸಿಕೊಂಡಿದ್ದೂ ಇದೆ. ಎಳೇ ಹುಡುಗರು ಆತ್ಮಹತ್ಯೆ ಮಾಡಿಕೊಂಡ ಪ್ರಸಂಗಗಳೂ ಕೂಡಾ ನಡೆದಿದ್ದಾವೆ. ನೀವು ಮಕ್ಕಳ ಕೈಗೆ ಮೊಬೈಲು ಕೊಡುವ ಮುನ್ನ ಬಲು ಎಚ್ಚರಿಕೆಯಿಂದಿರಬೇಕಿದೆ. ಒಂದು ವೇಳೆ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಇನ್ನು ಇದರ ಆಘಾತ ಮಕ್ಕಳಿಗೆ ಮಾತ್ರವಲ್ಲ. ಅದೆಂಥಾ ಅನಿವಾರ್ಯತೆ ಇದ್ದರೂ ಇಂಥಾ ಫೇಕ್ ಆಪ್ ಗಳಿಂದ ಸಾಲ ತೆಗೆದುಕೊಳ್ಳದಿರೋದೇ ವಾಸಿ. ಯಾಕಂದ್ರೆ ಈ ಖದೀಮರಿಗೆ ಒಂದು ಸಲ ನಿಮ್ಮ ದೇಟಾ ಸಿಕ್ಕರೆ ತಿಂಗಳು ಗಟ್ಟಲೆ ಆಟವಾಡಿಸುತ್ತಾರೆ. ಕಾಡಿಸುತ್ತಾರೆ. ಇಂಥವರ ಆಟಸದ ಮುಂದೆ ಸೈಬರ್ ಕ್ರೈಂ ವಿಭಾಗವೂ ಸುಸ್ತೆದ್ದು ಹೋಗಿದೆ ಎಂದರೆ ಅದರ ಖರಾಬು ದಂಧೆ ಎಂಥಾದ್ದಿರಬಹುದೆಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ!