ಇದು ಡಿಜಿಟಲ್ ಯುಗ. ಕ್ಯಾಮರಾ, ಟಿ.ವಿ., ಕಂಪ್ಯೂಟರ್ ಎಲ್ಲವು ಡಿಜಿಟಲ್ ಮಯ. ಇದೀಗ ನುಂಗುವ ಮಾತ್ರೆಯೂ ಡಿಜಿಟಲ್ ಆಗಿದೆ. ಒಟ್ಸುಕಾ ಫಾರ್ಮಸುಟಿಕಲ್ಸ್ ಕಂಪನಿ ತಯಾರಿಸಿರುವ ಅಬಿಲಿಫಿ ಮೈಸಿಟೆ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ (ಎಫ್ಡಿಎ)ಅನುಮತಿ ನೀಡಿದೆ. ಸ್ಕೀರೆಫ್ರೇನಿಯಾ ಎಂಬ ಮನೋ ಶಾರಿರಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾತ್ರೆ ಸಿದ್ಧಪಡಿಸಲಾಗಿದೆ. ತಾನು ರೋಗಿಯ ಹೊಟ್ಟೆ ಸೇರಿರುವುದನ್ನು ಮತ್ತು ಯಾವ ಪ್ರಮಾಣದಲ್ಲಿ ಸೇರಿದ್ದೇನೆ ಎಂಬ ಮಾಹಿತಿ ಸ್ವತಃ ಮಾತ್ರೆಯೇ ರೋಗಿಗೆ, ಅವರ ಸಂಬಂಧಿಕರಿಗೆ ಮತ್ತು ವೈದ್ಯರಿಗೆ ನೀಡುತ್ತದೆ. ರೋಗಿ ಮಾತ್ರೆ ಸೇವಿಸಿದ್ದಾರೆಯೇ ಇಲ್ಲವೇ, ಎಂದು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
ಅಬಿಲಿಫಿ ಮಾತ್ರೆಯಲ್ಲಿ ಸಣ್ಣದೊಂದು ಚಿಪ್ ಇರುತ್ತದೆ. ಅದು ಹೊಟ್ಟೆಯೊಳಗಿನ ಆಮ್ಲಗಳ ಜೊತೆ ಸೇರಿಕೊಂಡಾಕ್ಷಣ, ರೋಗಿಯ ಸ್ಮಾರ್ಟ್ ಫೋನ್ಗೆ ಮಾಹಿತಿ ರವಾನಿಸುತ್ತದೆ. ರೋಗಿ ಔಷಧಿ ಸೇವಿಸಿದ ಸಮಯ, ಪ್ರಮಾಣ ಎಲ್ಲವೂ ಪಕ್ಕಾ ದಾಖಲಾಗುತ್ತದೆ. ಬಳಿಕ ಮಾತ್ರೆಯ ಜೊತೆಗೆ ಇದ್ದ ಚಿಪ್ ಮಲದ ಮೂಲಕ ದೇಹದಿಂದ ಹೊರಹೋಗುತ್ತದೆ. ರೋಗಿಗೆ ಈ ಚಿಪ್ನಿಂದ ಯಾವುದೇ ತೊಂದರೆಯೂ ಇರುವುದಿಲ್ಲ. ಸಿಲಿಕಾ, ಮ್ಯಾಗ್ನೇಷಿಯಂ ಮತ್ತು ತಾಮ್ರವನ್ನು ಬಳಸಿ ಈ ಚಿಪ್ ತಯಾರಿಸಲಾಗಿದೆ. ಕೆಲವೊಂದು ರೋಗದಿಂದ ಬಳಲುತ್ತಿರುವವರು ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವುದನ್ನು ಮರೆಯುತ್ತಾರೆ. ಅಂತಹವರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಕಷ್ಟವಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ರೋಗಿಯ ಮಾಹಿತಿ ಪೂರ್ಣವಾಗಿ ಮೊಬೈಲ್ಗೆ ರವಾನೆಯಾಗುವ ಕಾರಣ, ಮೇಲ್ಕಂಡ ಸಮಸ್ಯೆಯಿಂದ ಪಾರಾಗಬಹುದು.
ಟೊಮೊಟೊ ವೈನ್
ಬಾಗಲಕೋಟೆಯಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಟೊಮೆಟೊ ವೈನ್ ಮಾಡಿ ಯಶಸ್ವಿಯಾಗಿದ್ದಾರೆ. ಇದು ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ. ಕೆಚಪ್, ಜ್ಯೂಸ್ಗಳಿಗೆ ಟೊಮೊಟೊ ಬಳಕೆಯಾಗುತ್ತಿದ್ದರು ಅಲ್ಪ ಪ್ರಮಾಣದಲ್ಲಿ ಮಾತ್ರವೇಯಿದೆ. ಟಮೊಟೊವನ್ನು ‘ವೈನಾಗಿ’ಸಿದರೆ ಅದರಿಂದ ಬೆಳೆದ ರೈತರು ರಸ್ತೆಯಲ್ಲಿಯೇ ಸುರಿದು ಪ್ರತಿಭಟಿಸುವುದು ತಪ್ಪಲಿದೆ. ಟೊಮೆಟೊ ಹಣ್ಣಿನಲ್ಲಿ ಗರಿಷ್ಠ ಶೇ ೫ರಿಂದ ೬ರಷ್ಟು ಸಿಹಿ ಅಂಶ ಇರಲಿದೆ. ವೈನ್ ಮಾಡಲು ಹಣ್ಣಿನಲ್ಲಿ ಶೇ ೨೨ರಿಂದ ೨೪ರಷ್ಟು (ಡಿಗ್ರಿ ಬ್ರಿಕ್ಸ್) ಸಿಹಿ ಅಂಶ ಬೇಕಾಗುತ್ತದೆ. ಹಾಗಾಗಿ ಟೊಮೆಟೊ ಹಣ್ಣಿನ ಜೊತೆಗೆ ಕೃತಕ ಸಕ್ಕರೆಯನ್ನು ಬಳಕೆ ಮಾಡಿಕೊಂಡು ವೈನ್ ಮಾಡಬಹುದೆಂದು ತಜ್ಞರು ಅಂದಾಜಿಸಿದ್ದಾರೆ.
ಟೊಮೆಟೊ ವೈನ್ ಕರ್ನಾಟಕದಲ್ಲಿ ಹೊಸತು. ರಾಜ್ಯದಲ್ಲಿ ದ್ರಾಕ್ಷಿ ಬಿಟ್ಟರೆ ಬೇರೆ ಯಾವುದೇ ಹಣ್ಣಿನ ವೈನ್ ಮಾರಾಟಕ್ಕೆ ಅಬಕಾರಿ ಇಲಾಖೆ ಪರವಾನಗಿ ನೀಡಿಲ್ಲ. ಆದರೆ ದೇಶದ ವಿವಿಧೆಡೆ ಈಗಾಗಲೇ ೪ರಿಂದ ೫ ವಾಣಿಜ್ಯ ಉದ್ದೇಶದ ಟೊಮೆಟೊ ವೈನ್ ತಯಾರಿಕೆ ಘಟಕಗಳಿವೆ. ದ್ರಾಕ್ಷಿ ರೀತಿಯೇ ಟೊಮೆಟೊ ತಿರುಳಿಗೆ ಈಸ್ಟ್ ಸೇರಿಸಿ ೭ರಿಂದ ೧೪ ದಿನಗಳ ಕಾಲ ಕೊಳೆಯುವಿಕೆ (ಫರ್ಮಂಟೇಶನ್), ಫಿಲ್ಟರ್ ಹಾಗೂ ಕೂಲಿಂಗ್ ಪ್ರಕ್ರಿಯೆಗೆ ಒಳಪಡಿಸಿದರೆ ವೈನ್ ಸಿದ್ಧವಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಪ್ರತಿವರ್ಷ ಟೊಮೆಟೊ ಬೆಲೆ ಕುಸಿದು ಟನ್ಗಟ್ಟಲೇ ಹಣ್ಣನ್ನು ರಸ್ತೆಗೆ ಸುರಿಯುತ್ತಾರೆ. ಅಥವಾ ದನಕರುಗಳಿಗೆ ಮೇವಾಗುತ್ತದೆ. ಈ ತಂತ್ರಜ್ಞಾನ ರೈತ ಗುಂಪುಗಳು, ಸಹಕಾರಿ ಸಂಘಗಳಿಗೆ ಪರಿಚಯಿಸಿದರೆ ಸ್ಥಳೀಯವಾಗಿ ವೈನ್ ಉತ್ಪಾದನೆ ಮಾಡಲು ಸಾಧ್ಯವಿದೆ ಹೂಭರಣ
ಕೆಳಗೊಂದು ತಟ್ಟೆ ಮೇಲೆ ಹೂವಿಟ್ಟೆ ಸಂಜೆಗೆ ಹೂ ಒಣಗಿಉಳಿದಿತ್ತು ಬರೀ ತಟ್ಟೇ… ತಟ್ಟೇ…! ಎನ್ನುವ ಕವನಕ್ಕೆ ಇನ್ನು ಅರ್ಥವಿಲ್ಲ. ಏಕೆಂದರೆ ಹೂವಿನ ಆಭರಣ ಅಲಿಯಾಸ್ ‘ಹೂ’ಭರಣವನ್ನು ಧರಿಸಿದರೆ ಎರಡರಿಂದ ನಾಲ್ಕುವಾರಗಳಾದರೂ ಬಾಡದು. ಓ… ಪ್ಲಾಸ್ಟಿಕ್/ಅಥವಾ ಕಾಗದದ್ದಾ? ದೇವರಾಣೆಗ್ಲೂ ಅಲ್ಲ…ಬಾಡದ ಹೂಗಳನ್ನು ಸಂಶೋಧಿಸಲಾಗಿದೆ. ಸಾಮಾನ್ಯವಾಗಿ ಧರಿಸಿದ ಹೂಗಳು ಬಾಡುತ್ತಾ ಹೋಗಲಿದೆ. ಆದರೆ ಇದು ಅರಳುತ್ತಾ ಹೋಗಲಿದೆ. ಸುಲಭಕ್ಕೆ ಕೆಡದು.
ಅದರಲ್ಲೂ ನಮ್ಮ ಬೆಂಗಳೂರಿನ ಈ ತಣ್ಣನೆಯ ವಾತಾವರಣಕ್ಕೆ ಎರಡು ವಾರಗಳಿಗಳಿಗೂ ಹೆಚ್ಚುಕಾಲ ಕೆಡದೆ ಉಳಿದೀತು. ಲೋಹದ ಆಭರಣದ ಮೇಲೆ ಪೋಣಿಸಿದ ಈ ಹೂಗಳು ಗಿಡವಾಗಲಿದೆ. ಆಗ ಇದು ಧರಿಸಲು ಯೋಗ್ಯವಾಗದೆಂದು ತಿಳಿಯಬೇಕು. ಅಂದಹಾಗೆ ಬಾಡದ ಹೂಗಳನ್ನು ಪತ್ತೆ ಹಚ್ಚಿ ಆಭರಣಗಳನ್ನಾಗಿಸಿದ ಮಹಿಳೆ ಸೂಸನ್ ಮ್ಯಾಕ್ಲಿಯಾರೆ ಅಮೆರಿಕದಲ್ಲಿದ್ದಾಳೆ. ಉಂಗುರ, ಕಂಠೀಹಾರ, ಕಡಗ, ಕಿವಿವೋಲೆ ಎಲ್ಲವನ್ನೂ ಇವಳೇ ತಯಾರಿಸಿದ್ದಾಳೆ. ಇವಳ ಈ ಹೂಭರಣ ಆನ್ಲೈನ್ನಲ್ಲೂ ಮಾರಾಟಕ್ಕಿಟ್ಟಿದ್ದಾಳೆ ಡಾಲರ್ ೨೦ರಿಂದ ಡಾಲರ್ ೩೦೦ರವರೆಗೂ ಧಾರಣೆ ಇಟ್ಟಿದ್ದಾಳೆ. ಹೂ ಎತ್ತಿದಷ್ಟೇ ಸಲೀಸಾಗಿ ಡಾಲರ್ ಬಾಚುತ್ತಿದ್ದಾಳೆ ಮ್ಯಾಕ್ಲಿಯಾರೆ.
ಮೇಕೆ ಮರವೇರುತಿದೆ ಕಂಡಿರಾ…?
ಹಕ್ಕಿ ಹಾರುತಿದೆ ನೋಡಿದಿರಾ…? ಎಂಬಂತೆ ಮೇಕೆ ಮರ ಏರುತಿದೆ ಕಂಡಿರಾ? ಎನ್ನಬೇಕು. ಮೇಕೆ ಏಕೆ ಹೀಗೆ ಮಾಡುತ್ತವೆ ಅಂದರೆ ಮೇಧ್ಯ ಹುಡುಕಿ ಮರವೇರುತ್ತವೆ. ಮೇಕೆ ಮುಟ್ಟದ ಸೊಪ್ಪಿಲ್ಲ ಎನ್ನುವಂತಿರುವಾಗ ಇವುಗಳೇಕೆ ಹೀಗೆ? ‘ಆರ್ಗಾನ್’ ವೃಕ್ಷದ ಹಣ್ಣುಗಳೆಂದರೆ ಮೇಷಗಳಿಗೆ ಆಪ್ಯಾಯಮಾನ. ಜಿಹ್ವಾಚಾಪಲ್ಯಕ್ಕೆ ಮನಸೋತು ಮರವೇರುವುದನ್ನು ಕರಗತ ಮಾಡಿಕೊಂಡಿವೆ. ಹಣ್ಣು ಕೀಳಲು ಹವಣಿಸುವ ಮೇಕೆಗೆ ಉಳಿದ ಮೇಕೆಗಳು ಸಾಥ್ ನೀಡುತ್ತವೆ. ನಮ್ಮ ಹುಡುಗರು ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಮೊಸರಿನ ಗಡುಗೆ ಒಡೆಯುತ್ತಾರಲ್ಲಾ ಹಾಗೆ…ತುದಿಗೇರಿದ ಮೇಕೆ ಕೊಂಬೆ ಆಡಿಸಿ ಹಣ್ಣುಗಳನ್ನು ಉದುರಿಸುವುದು ಉಂಟಂತೆ.
ಕೊಂಬೆಗಳ ಮೇಲೆ ಚಮತ್ಕಾರಿಕ ಕೌಶಲ್ಯಗಳನ್ನು ಮೆರೆದಾಗ ಉದುರುವ ಹಣ್ಣುಗಳೇ ಇನ್ನಷ್ಟು ಮೇಕೆಗಳಿಗೆ ಆಹಾರವಾಗಲಿದೆ. ಅಂಬರೀಶ್ ಅಣ್ಣ ಈ ದೃಶ್ಯ ಕಂಡರೆ ‘ಕೊಂಬೆ ಆಡ್ಸೋನು ಮ್ಯಾಲೆ ಕುಂತವ್ನೋ…’ ಎಂದು ಹಾಡಬಹುದು. ಆದರೆ ಅವು ಹಾಗೆ ಮಾಡುವುದನ್ನೇ ಕಾದಿದ್ದು ಅವುಗಳ ಮಾಲೀಕ ಕೆಳಗೆ ಬಿದ್ದ ಹಣ್ಣುಗಳನ್ನು ಬಳಿದು ಹೋಗಿರುವ ಉದಾಹರಣೆಗಳಿವೆ. ಹೀಗಾಗಿ ಅವುಗಳು ಸಾಮೂಹಿಕವಾಗಿ ಮರ ಏರುವುದನ್ನು ಚಾಳಿ ಮಾಡಿಕೊಂಡಿವೆ. ಮರವೇರುವ ಮೇಷಗಳು ಮೊರೆಕಾದೇಶದ ತಾಮರಿ ಪ್ರದೇಶದಲ್ಲಿವೆ. ಮರವೇರಿದ ಮೇಕೆ ಆದರೂ ಅಷ್ಟೇ ಗರಿಕೆ ತಿಂದು ಬೆಳೆದ ಮೇಕೆಯಾದರೂ ಅಷ್ಟೇ ಅವುಗಳಿಗೆಲ್ಲಾ ಮಾನವರ ಉದರದಲ್ಲೇ ಸಂಸ್ಕಾರ! ಪುಷ್ಪೋದ್ಯಮದ ಹೊಸ ‘ಅರ್ಥ’ ವಿದು. ಕ್ಯಾನ್ಸರ್ ಮಾಸು!
ಛೀ… ಅನಾಗರಿಕ… ಅಶೌಚ… ಎಂದು ನಿಂದಿಸದೆ ಮುಂದೆ ಓದಿ… ಹೂಸಿನವಾಸನೆ ಕ್ಯಾನ್ಸರ್, ಹೃದಯಾಘಾತ, ಬುದ್ಧಿಮಾಂಧ್ಯತೆ ನಿವಾರಿಸಲು ಸಹಕಾರಿಯಂತೆ. ಕರುಳಿನಲ್ಲಿ ಆಹಾರ ಹಾದುಬರುವಾಗ ಬ್ಯಾಕ್ಟೀರಿಯಾಗಳಿಂದ ಉತ್ಪನ್ನವಾಗುವ ‘ವಾಯು’ವಿನಲ್ಲಿ ಹೈಡ್ರೋಜನ್ ಸಲ್ಫೈಡ್ ಕೂಡ ಒಂದು. ಇದು ವಿಷಕಾರಿ ಅನಿಲವಾದರೂ ಅಲ್ಪ ಪ್ರಮಾಣದಲ್ಲಿ ಆಘ್ರಾಣಿಸಿದರೆ ಮೇಲಿನ ರೋಗಗಳಿಗೆ ಕಾರಣವಾಗುವ ರೋಗಾಣುಗಳ ವಿರುದ್ಧ ಕಾದಾಡುತ್ತವೆ! ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಯಾರೋ ತಲೆಕೆಟ್ಟೋನೇ ಹೇಳಿರಬೇಕು? ಇಲ್ಲ. ಇಂಗ್ಲೆಂಡ್ನ ಎಕ್ಸೇಟರ್ ವಿಶ್ವವಿದ್ಯಾಲಯದ ಅಧ್ಯಯನದ ಫಲವಿದು.
ದಿನಾಲು ಎಷ್ಟು ಕಾಲ ಈ ‘ನಾಥ’ವನ್ನು ಮೂಸಬೇಕು. ಯಾವ ಸಮಯದಲ್ಲಿ ಮೂಗರಳಿಸಬೇಕು? ಹೆಚ್ಚು ಮೂಸಿದರೆ ಆಗುವ ಅಡ್ಡ ಪರಿಣಾಮಗಳೇನು? ಒಂದು ವೇಳೆ ಕ್ಯಾನ್ಸರ್ ಉಳ್ಳವನೇ ಹೂಸಿದರೆ ಅದು ಮೂಸಲು ಯೋಗ್ಯವೇ…?! ಎಂಬ ಮಾಹಿತಿ ಲಭ್ಯವಾಗಿಲ್ಲ. ಹೂಸಿನ ಕುರಿತು ಹೇಳುವ ‘ಢರ್ ಭರ್, ಭಯಂ ನಾಸ್ತಿ! ಠಸ್ ಪುಸ್ ಪ್ರಾಣ ಹಾನಿಃ!’ ಸಂಸ್ಕೃತ ಮಾತಿಗೆ ಇಂದಿನಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕುಚೋದ್ಯ: ಪ್ರಾಯಶಃ ಈ ಸಂಶೋಧನೆ ಮಾಡಿದವನೇ ಆಗಾಗ ಹೂಸಬಹುದು. ಆ ಶಬ್ಧ ಅನೇಕರಿಗೆ ಮುಜುಗರ/ಬೇಸರ ತರಿಸಿರಬಹುದು. ಅದನ್ನು ತಪ್ಪಿಸಿಕೊಳ್ಳಲು ಹೀಗೆ ಸುಳ್ಳು ಹೇಳುತ್ತಿರಬಹುದಾ?! ಬು’ಗುರಿ’
ಇವರು ಗುರಿ ತಪ್ಪದಂತೆ ಬುಗುರಿ ಬೀಸುತ್ತಾರೆ… ಮಗು ಹಿಡಿದ ತಟ್ಟೆಯಲ್ಲಿ, ಭುಜ ಹಾಗೂ ತಲೆ ಮೇಲೆ ಫಿಕ್ಸ್ ಮಾಡಿದ ತಟ್ಟೆಗಳಲ್ಲಿ ಗಿರ ಗಿರನೆ ಬುಗುರಿ ತಿರುಗುತ್ತದೆ. ೧೨ ಅಡಿ ಎತ್ತರದ ಕಂಬದ ಮೇಲೆ ತಿರುಗುವ ಬಂಗುರಕ್ಕೆ ಮಕ್ಕಳಿಂದ ಮುದುಕರವರೆಗೂ ವಿಸ್ಮಿತರಾಗುತ್ತಾರೆ. ಮಿರ ಮಿರನೆ ಮಿಂಚುವ ಮಾಲೆಯಾಕಾರದಲ್ಲಿ ಭದ್ರಪಡಿಸಿರುವ ತಟ್ಟೆಯಲ್ಲಿ ಬುಗುರಿ ತಿರುಗುತ್ತದೆ. ೧೦-೧೨ ಅಡಿ ದೂರದಲ್ಲಿ ಚಾವಟಿ ಸುತ್ತಿ (ಬು)ಗುರಿ ಬೀಸಿದರೆ ಗುರಿ ತಪ್ಪುವುದಿಲ್ಲ. ಒಮ್ಮೆಗೆ ೧೮ ಬುಗುರಿಯನ್ನು ಆಡಿಸಿ ಕೈ ಚಳಕ ತೋರುತ್ತಾರೆ. ಅದೆಲ್ಲಕ್ಕಿಂತಲೂ ವಿಸ್ಮಯವಾಗುವುದೆಂದರೆ ಗಾಳಿ ಊದಿ ತುಂಬಿದ ಬೆಲೂನ್ಗಳ ಮೇಲೆ ಬುಗುರಿ ತಿರುಗಿಸುತ್ತಾರೆ. ಬೆಲೂನ್ ಒಡೆಯದು. ಬುಗುರಿ ಬೀಳದು!ಗಾಳಿಯಲ್ಲಿ ತೇಲಿಕೊಂಡು ಹೋಗಿ ಗುರಿಹಿಡಿದಾತ ಸೂಚಿಸಿದ ಜಾಗದಲ್ಲಿ ಗಿರಗಿರನೆ ತಿರುಗುತ್ತದೆ.
ಅವಸಾನದ ಅಂಚಿನಲ್ಲಿರುವ ಈ ಬುಗುರಿ ಕಲೆಯನ್ನು ಕಾಣಬೇಕಿದ್ದರೆ ತೈವಾನ್ಗೆ ತೆರಳಬೇಕು. ಅಲ್ಲಿ ಸ್ಯಾಂಕ್ಸಿಯ ಸ್ಪಿನ್ನಿಂಗ್ ಟಾಪ್ ಮಾಸ್ಟರ್ಸ್ಗಳಿರುವರು. ಇವರು ವಿಶ್ವ ಪ್ರಸಿದ್ಧರು. ಸುಮಾರು ೨೫ ಕಲಾವಿದರ ತಂಡದಲ್ಲಿದ್ದು ಒಬ್ಬರಿಗಿಂತ ಒಬ್ಬರು ಬುಗುರಿ ತಿರುಗಿಸುವುದರಲ್ಲಿ ಪರಿಣಿತರು. ಬುಗುರಿ ಆಡಿಸುವುದನ್ನೂ ಕಲಿಸುತ್ತಾರೆ. ಸ್ಪಿನ್ನಿಂಗ್ ಟಾಪ್ ಕಲಾವಿದರು ಅಚ್ಚರಿ ಎನಿಸಬಹುದು. ಆದರೆ ನಮ್ಮ ರಾಜಕಾರಣಿಗಳಿಗೆ ಇವರು ವಿಶೇಷವಾಗಿ ಕಾಣಿಸುವುದಿಲ್ಲ ಏಕೆಂದರೆ ನಮ್ಮ ರಾಜಕಾರಣಿಗಳಂತೆ ಚಾವಟಿಯೇ ಇಲ್ಲದೆ ಬುಗುರಿ ತಿರುಗಿಸಲಾರರು! ಕೇಶ ಕಪ್ಪಾಗಿಸಲಿದೆ ಕ್ಯಾನ್ಸರ್ ಔಷಧ!
ನಮ್ಮ ಜನ ಬುದ್ಧಿವಂತರೋ…ದಡ್ಡರೋ… ಅಜ್ಞಾನಿಗಳೋ…ಗೊತ್ತಿಲ್ಲ! ನೆಗಡಿ ಗುಣಪಡಿಸುವ ಗುಳಿಗೆಯನ್ನು ಬಳಸಿ ಗಡದ್ದಾಗಿ ನಿದ್ದೆಗೆ ಜಾರುತ್ತಾರೆ. ಕೆಮ್ಮಿನ ಸಿರಪ್ನ್ನು ನಶೆ ಏರಿಸಿಕೊಳ್ಳಲು ಬಳಸುತ್ತಾರೆ! ಇನ್ನು ಕೆಲವರು ಆಂಟಿಬಯಾಟಿಕ್ಗಳನ್ನು ಬಳಸಿ ಮನೆ ಸ್ವಚ್ಛಗೊಳಿಸುತ್ತಾರೆ…! ಹೇಗೆ? ಯಾವುದೋ ಮದ್ದು ಇನ್ನಾವುದಕ್ಕೋ ಬಳಕೆ. ಈ ಪಟ್ಟಿಗೆ ಈಗ ಕ್ಯಾನ್ಸರ್ ಔಷಧಿ ಸೇರ್ಪಡೆಯಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್ ಗುಣವಾದ ಬಗೆಗೆ ಖಚಿತ ಮಾಹಿತಿ ಇಲ್ಲ. ಆದರೆ ಕೇಶ ಕಪ್ಪಾಗುವುದಂತೆ! ಇದು ನಮ್ಮ ಜನರೇ ಪರೀಕ್ಷೆ ಮಾಡಿ ತಿಳಿದ ಸತ್ಯವಲ್ಲ. ಬದಲಿಗೆ ನಮ್ಮ ಜನರ ಪ್ರೇರಣೆ ಇಲ್ಲದೆಯೂ ಸ್ಪ್ಯಾನಿಶ್ ವೈದೈರು ಸಂಶೋಧನೆ ಮಾಡಿ ಅರಿತಿದ್ದಾರೆ!
ಏeಥಿಣಡಿuಜಚಿ, ಔಠಿಜivo ಚಿಟಿಜ ಖಿeಛಿeಟಿಣಡಿiq ಔಷಧಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಕ್ಯಾನ್ಸರ್ ಗುಣಪಡಿಸುತ್ತದೋ ತಿಳಿಯದು. ಆದರೆ ಕೂದಲು ಕಪ್ಪಾಗಿಸುತ್ತದೆ. ೫೨ಜನರ ಮೇಲೆ ನಡೆಸಿದ ಪ್ರಯೋಗದಲ್ಲಿ ೧೪ ಮಂದಿಯಲ್ಲಿ ಪ್ರಯೋಗ ಯಶಸ್ವಿಯಾಗಿದೆಯಂತೆ! ಕೇಶ ಕಪ್ಪಾಗಿಸಲು ಈ ಔಷಧಕ್ಕೆ ಡಿಮ್ಯಾಂಡ್ ಹೆಚ್ಚಾಗಬಹುದು. ಅದರಲ್ಲೂ ಕಪ್ಪು ಕೇಶದ ಮೋಹವುಳ್ಳ ಭಾರತದಲ್ಲಿ ಈ ಗುಳಿಗೆ ಚಾಲ್ತಿಗೆ ಬರಲು ಹೆಚ್ಚು ಕಾಲಬೇಕಿಲ್ಲ. ವೈದ್ಯರ ಸಲಹೆ ಇಲ್ಲದೆ ಬಳಸದಿರಿ. ಸೇವಿಸದಿರಿ. ಸವರದಿರಿ. ತೆಪ್ಪಗಿರಿ. ಕೂದಲು ಬೆಳ್ಳಗಿದ್ದರೂ ಬೇಡ ವರಿ!
ಲೀಫ್ ಲೇಡಿ
‘ಎಲೆ ಹೆಣ್ಣೇ’ ಎಂದರೆ ಈಕೆಗೆ ಕೋಪಬಾರದು… ಏಕೆಂದರೆ ಈಕೆ ಧರಿಸಿರುವುದು ಎಲೆಗಳನ್ನೇ. ಹಾಗಾದರೆ ಇವಳು ‘ಆದಿ ಮಾನವಳಾ?’ ಅಲ್ಲ. ಪತ್ರೆಗಳ ಪೆಣ್ಣು… ಯಾಕೆ ಇವಳಿಗೆ ಬಟ್ಟೆ ಗತಿಯಿಲ್ಲವಾ? ಇದೆ ರೀ…! ಆದರೆ ಶೋಕಿ ಬಿಡಬೇಕಲ್ಲಾ… ತನ್ನ ಸ್ಟೈಲ್ಗಾಗಿ ಈಕೆ ಎಲೆ ಧರಿಸಿಕೊಂಡು ಅಡ್ಡಾಡಿದ್ದಾಳೆ. ಅಂದಹಾಗೆ ಈ ಎಲೆ ಡ್ರೆಸ್ ಸುಖಾ ಸುಮ್ಮನೆ ಆಗಿದ್ದರೂ ಇವಳೊಂದಿಗೆ ಇನ್ನೂ ನಾಲ್ವರು ಕೂಡಿ ೬ ತಿಂಗಳಲ್ಲಿ ಎಲೆ ಆಯ್ದು, ಜೋಪಾನ ಮಾಡಿ, ಗೌನು ಹೆಣೆದಿದ್ದಾರೆ. ಪೂರಾ ಹಳದಿ ಎಲೆಗಳೇ ಇಲ್ಲಿ ಕಂಡಾವು.
ಹಸಿರೆಲೆಗಿಂತಲೂ ಹಣ್ಣಾದ ಹಳದಿ ಏಕೆ ಎಂದು ಕೇಳಿದರೆ ‘ಹಸಿರು ಎಲೆಗಳು ನನ್ನಂತೆ ಬಣ್ಣ ಬದಲಿಸುತ್ತವೆ!’ ಬಣ್ಣ ಕಳೆದುಕೊಂಡಿರುವ ಹಳದಿ ಎಲೆಗಳೇ ಶ್ರೇಷ್ಠ ಎನ್ನುತ್ತಾಳೆ. ‘ಯಲ್ಲೋ… ಯಲ್ಲೋ… ಡರ್ಟಿ ಫೆಲೋ…’ ಎಂದರೆ ಏನುಗತಿ? ‘ನಾನು ಫೆಲೋ ಅಲ್ಲ.. ಫೆಮಿನಾ’ ಎನ್ನುತ್ತಾಳೆ ಈ ಮಿಟಕುಲಾಡಿ. ಅಂದಹಾಗೆ ಈ ಡ್ರಸ್ ಧರಿಸಿ ಅಡ್ಡಾಡುವುದೇ ಆನಂದ ಎನ್ನುತ್ತಾಳೆ. ಅಡ್ಡಾಡುವಾಗ ಮೇಕೆ ಇವಳ ಗೌನಿಗೆ ಬಾಯಿ ಹಾಕಿದರೆ ಪರಮಾನಂದ ಎನ್ನುತ್ತಾರೆ ಪಡ್ಡೆಗಳು. ಚೀನಾದ ಹೀಫಿ ವಿಶ್ವವಿದ್ಯಾಲಯದಲ್ಲಿ ಅಂತಹ ಸೀನೇ ಇಲ್ಲವೆನ್ನುತ್ತಾಳೆ ‘ಎಲೆ ಹೆಣ್ಣು’
ಪಿಜ್ಜಾ ತಿಂದಲ್ಲಿ ಹೋದೀತು ಪ್ರಜ್ಞಾ !
‘ಈ ಖಾದ್ಯವನ್ನು ನಾನೇ ಸ್ವತಃ ತಿನ್ನಲು ಬಯಸಿದ್ದೇನೆ. ನನಗೆ ಇದನ್ನು ಸೇವಿಸಲು ಯಾರೂ ಪ್ರಲೋಭನೆ ಮಾಡಿಲ್ಲ. ಆಮಿಷ, ಬೆದರಿಕೆ ಒಡ್ಡಿಲ್ಲ. ಇದು ಸತ್ಯ, ಸತ್ಯ ಹಾಗೂ ಸತ್ಯವೇ ಆಗಿದ್ದು ಮುಂದಿನ ಎಲ್ಲ ಅನಾಹುತಗಳಿಗೂ ನಾನೇ ಜವಾಬ್ದಾರಿ!’ ಎಂದು ಮುಚ್ಚಳಿಕೆ ಬರೆದುಕೊಡಬೇಕು. ಇಬ್ಬರ ಸಾಕ್ಷಿ ಇರಬೇಕು. ನಂತರ ವೈದ್ಯರು, ಆಪ್ತರ ಸಮ್ಮುಖದಲ್ಲಿ ತಿನ್ನಬೇಕು! ಏನದು ತಿಂಡಿ?
ವಿಶ್ವದ ಅತಿ ಖಾರದ ಪಿಜ್ಜಾ. ವಿಶೇಷ ಥಳಿಯ ಮೆಣಸಿನ ಕಾಯಿಯಿಂದ ತಯಾರಿಸಲಾಗಿದೆ. ಬೇಯಿಸುವ ಬಾಣಸಿಗ ಮಾಸ್ಕ್ ಧರಿಸಿದ್ದಲ್ಲಿ ಬಚಾವ್. ಇಲ್ಲವಾದಲ್ಲಿ ಆತನ ಗತಿ ಏನಾಗುವುದೋ ತಿಳಿಯದು! ಅಂದಹಾಗೆ ಇದನ್ನು ಬಾಯಿಗಿಟ್ಟರೆ ಹುಣ್ಣಾಗಿ, ರಕ್ತ ಚಿಮ್ಮಲಿದೆ. ಬಿ.ಪಿಯುಳ್ಳವರು, ಹೃದ್ರೋಗಿಗಳು ಪ್ರಯತ್ನಿಸಿದರೆ ‘ಗೊಟಕ್’ ಎನ್ನುವ ಅಪಾಯವಿದೆ. ಸದೃಡರು ಬಾಯಿಗಿಟ್ಟರೆ ಪ್ರಜ್ಞಾಹೀನರಾದರೂ ಅಚ್ಚರಿಯಿಲ್ಲ. ಟಿಯರ್ಗ್ಯಾಸ್ಗಿಂತಲೂ ಅಪಾಯಕಾರಿ. ಇಷ್ಟೆಲ್ಲಾ ರಿಸ್ಕ್ ಇರುವ ಪಿಜ್ಜಾ ತಿಂದು ತೇಗಿದರೆ ಏನಾದರೂ ಬಹುಮಾನವಿದೆಯಾ? ಇದೆ. ಗೆದ್ದವರಿಗೆ ೨೦ ಪೌಂಡ್ಗಳ ಬಹುಮಾನ. ಸೋತವರಿಗೆ ‘ಖಾರ್’ಕೋಟದ ಸವಿ ನಿಶ್ಚಿತ! ರಿಸ್ಕ್ ತೆಗೆದುಕೊಂಡು ಸೇವಿಸ ಬಯಸುವಿರಾದರೆ ಇಂಗ್ಲೆಂಡ್ನ ಲಿಂಕ್ಲಾನ್ ಶೈರ್ಗೆ ತೆರಳಬೇಕು.
ಬಾಟ್ಲಾಲಯ
ಬೀರ್ ‘ತೀರ್ಥ’ವಾದರೇ… ಬಾಟಲಿ? ದೇವಸ್ಥಾನ! ಏನ್ರೀ ದೇವಸ್ಥಾನಗಳ ಬಗೆಗೆ ಕಿಂಡಲ್ ಮಾಡಿದರೆ ಹರಕುಬಾಯಿಯ ಅನಂತಕುಮಾರ್ ಹೆಗಡೆ ಜನ್ಮ ಜಾಲಾಡುತ್ತಾನೆ. ಸತ್ಯವಾಗಲೂ ದೇವಸ್ಥಾನ ಬೇಕಿದ್ದರೆ ನೀವೇ ನೋಡಿ…ಥಾಯ್ಲೆಂಡ್ ದೇಶದಲ್ಲಿ ಬೀರ್ಬಾಟಲ್ಗಳಿಂದ ‘ಟೆಂಪಲ್ ಆಫ್ ಮಿಲಿಯನ್ ಬಾಟಲ್ಸ್’ ಆಲಯ ನಿರ್ಮಿಸಿದ್ದಾರೆ. ದೇವಸ್ಥಾನದ ಸಮುಚ್ಛಯದಲ್ಲಿ ೨೦ ಕಟ್ಟಡಗಳಿವೆ ಎಲ್ಲವೂ ಬಾಟ್ಲೆ! ಅಂದರೆ ಬೀರ್ ಬಾಟಲಿಗಳಿಂದಲೇ ನಿರ್ಮಿಸಲಾಗಿದೆ.
ಅಬ್ಬಾ ಅದೆಷ್ಟು ಕುಡುಕರ ತ್ಯಾಗದ ಫಲವೋ… ಅದೆಷ್ಟು ಕುಟುಂಬಗಳ ಕಣ್ಣೀರೋ… ತ್ಯಾಗ ಮೂರ್ತಿ ಬುದ್ಧನ ಆಲಯವನ್ನು ಬಾಟಲಿಗಳಿಂದ ನಿರ್ಮಿಸಿದ್ದಾರೆ! ಅದೆಲ್ಲಾ ಏನಾದ್ರೂ ಆಗಲಿ ರೀ… ಬೀರ್ ಬಾಟಲಿಗಳ ಮುಚ್ಚಳ ಏನು ಮಾಡಿದರು? ಬಿಸಾಡಿಲ್ಲ. ಬುದ್ಧನ ವಿಗ್ರಹಕ್ಕೆ ಪ್ರಭಾವಳಿ ಮಾಡಿದ್ದಾರೆ. ಪ್ರಬುದ್ಧನಾಗಿದ್ದ ಬುದ್ಧ ಕುಡಿತಕ್ಕೆ ಬದ್ಧನಾಗಿರಲಿಲ್ಲ. ಬುದ್ಧ ತತ್ವಕ್ಕೆ ಬದ್ಧರಾಗಿದ್ದವರು ಖಂಡಿತ ಇಂತಹ ದೇವಸ್ಥಾನ/ಪಗೋಡ ನಿರ್ಮಿಸುತ್ತಿರಲಿಲ್ಲ. ‘ಬೀರ್ ಬಿಡಿ-ಬಾಟಲಿ ಕೊಡಿ’ ಎಂಬ ಚಳವಳಿ ಮಾಡಿ ಬಾಟಲಿ ಸಂಗ್ರಹಿಸಿದ್ದರೆ ಭೇಷ್ ಎನ್ನಬಹುದು. ಆದರೆ ಹಾಗೆ ಮಾಡಿರುವ ಬಗೆಗೆ ವರದಿಗಳಿಲ್ಲ. ಜ್ಞಾನ ಸಿದ್ದಿಗಾಗಿ ಬುದ್ಧ ತಪಸ್ಸು ಮಾಡಿದ. ಬುದ್ಧ ಭಕ್ತರು ೧.೫ದಶಲಕ್ಷ ಖಾಲಿ ಬಾಟಲಿಗಾಗಿ ೩೦ ವರ್ಷ ತಪಸ್ಸು ಮಾಡಿ, ಈ ಆಲಯವನ್ನು ನಿರ್ಮಿಸಿದ್ದಾರೆ. ಇಂತಹದ್ದೇ ಆಲಯವನ್ನು ನಮ್ಮಲ್ಲೂ ಸ್ಥಾಪಿಸಿದರೆ ಹೇಗೆ? ಸಂಘಿಗಳು, ಜನಸಂಘಿಗಳು ಇಂತಹದ್ದೊಂದು ಆಲಯ ನಿರ್ಮಿಸಲು ಮುಂದಾದರೆ ತಪ್ಪಾಗದು. ಆದರೆ ‘ಕಾಂಘಿ’ ಗಳು ‘ಜೆಡಿ’ಗಳು ಈ ಕೆಲಸ ಮಾಡಿದರೆ ನಮ್ಮ ಅನಂ’ಥೂ’ ತರಹದವರು ಸುಮ್ಮನಿರುವುದಿಲ್ಲ!