ಭಾರತದಲ್ಲಿರುವಂಥಾ ಸಂಕೀರ್ಣವಾದ ಧಾರ್ಮಿಕ ನಂಬಿಕೆಗಳು ಈ ವಿಶ್ವದ ಬೇರ್‍ಯಾವ ದೇಶಗಳಲ್ಲಿಯೂ ಕಾಣ ಸಿಗಲು ಸಾಧ್ಯವಿಲ್ಲ. ಇಂದು ಇಂಥಾ ನಂಬಿಕೆಗಳು ಟಿಸಿಲೊಡೆದು ಒಂದಷ್ಟು ಪ್ರಶ್ನಾರ್ಹ ಸ್ವರೂಪ ಪಡೆದುಕೊಂಡಿದೆ. ಅದರ ನಡುವಲ್ಲೊಂದಿಷ್ಟು ಮೂಢ ನಂಬಿಕೆಗಳೂ ಆಶ್ರಯ ಪಡೆದುಕೊಂಡಿವೆ. ಆದರೆ, ಭಾರತದ ಒರಿಜಿನಲ್ ಆಧ್ಯಾತ್ಮಿಕ ನಂಬಿಕೆಗಳು, ಅದಕ್ಕೆ ಹೊಸೆದುಕೊಂಡಿರುವ ನಾನಾ ಪುರಾಣಗಳು ನಿಜಕ್ಕೂ ಅಚ್ಚರಿದಾಯಕವಾಗಿವೆ. ದೇವರೆಂಬಾತ ಕೇವಲ ಗುಡಿಯಲ್ಲಿರುತ್ತಾನೆಂಬ ಪರಿಧಿ ದಾಟಿ, ಈ ಜಗತ್ತಿನ ಚರಾಚರಗಳಲ್ಲಿಯೂ ದೇವರಿದ್ದಾನೆಂಬಂಥಾ ಅಗಾಧ ವಿಸ್ತಾರವನ್ನು ಭಾರತದ ಅಧ್ಯಾತ್ಮಿಕತೆ ಹೊಂದಿದೆ. ಅದರ ಫಲವಾಗಿಯೇ ಇಲ್ಲಿ ಬದುಕಲು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಅವಕಾಶ ಮಾಡಿಕೊಟ್ಟ ಪ್ರತಿಯೊಂದನ್ನೂ ಪೂಜಿಸುವ ಪರಿಪಾಠ ಈ ನೆಲದಲ್ಲಿದೆ.
ಈ ಕಾರಣದಿಂದಲೇ ಪ್ರಕೃತಿ, ಅದರ ಭಾಗವಾದ ನದಿಗಳು ಭಾರತೀಯರ ಪಾಲಿಗೆ ದೇವರಷ್ಟೇ ಶ್ರೇಷ್ಠತೆ ಹೊಂದಿರುವ ಅಂಶವಾಗಿ ಕಾಣಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ, ನಮ್ಮ ದೇಶದಲ್ಲಿರುವ ಪ್ರಧಾನ ಪುಣ್ಯಕ್ಷೇತ್ರಗಳೆಲ್ಲ ನದಿ ತಟದಲ್ಲಿಯೇ ಇರುವಂಥಾ ಅಚ್ಚರಿಯೊಂದಿದೆ. ಗೆಂಗೆಯಂಥಾ ನಡಿ ನೀರಿನಲ್ಲಿ ಸ್ನಾನ ಮಾಡಿದರೆ ಪಾಪವೆಲ್ಲ ಕಳೆಯುತ್ತದೆಂಬ ನಂಬಿಕೆಯಂತೂ ನಮ್ಮೆಲ್ಲರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಅದೇನೇ ವೈಜ್ಞಾನಿಕ ತಿಳುವಳಿಕೆ, ಆವಿಷ್ಕಾರ, ಸಂಶೋಧನೆಗಳು ನಡೆದರೂ ಕೂಡಾ ಈ ನೆಲದಲ್ಲಿಯೇ ಬೆರೆತು ಹೋಗಿರುವ ಅಧ್ಯಾತಿಕ ಬೇರುಗಳನ್ನು ಒಣಗಿಸಲು ಸಾಧ್ಯವಿಲ್ಲ. ಬಹುಶಃ ಇಂಥಾ ನಂಬಿಕೆಗಳು ಸದಾ ಹಸಿರಾಗಿ ನಳನಳಿಸುತ್ತಿರಬೇಕೆಂಬ ಕಾರಣದಿಂದಲೇ ಪವಿತ್ರ ಕ್ರೇತ್ರಗಳು ನದಿಯ ತಟದಲ್ಲಿ ತಲೆಯೆತ್ತಿವೆಯೇನೋ ಅನ್ನಿಸೋದು ಸಹಜ!
ಏಳು ನದಿಗಳ ವಿಸ್ಮಯ
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ… ಈ ಏಳು ನದಿಗಳು ಭಾರತದ ಮಟ್ಟಿಗೆ ಪುಣ್ಯ ನದಿಗಳೆಂದು ಬಿಂಬಿಸಿಕೊಂಡಿದೆ. ಆಯಾ ರಾಜ್ಯಗಳಲ್ಲಿ ಇಂಥಾದ್ದೇ ನಂಬಿಕೆ ಕೆಲ ನದಿಗಳಿಗಿದ್ದರೂ ಕೂಡಾ ಈ ಏಳು ನದಿಗಳ ಉಲ್ಲೇಖ ಮಾತ್ರ ವೇದ ಪುರಾಣಗಳಲ್ಲಿಯೂ ವ್ಯಾಪಕವಾಗಿವೆ. ಯಾಕಂದ್ರೆ, ಈ ಏಳು ನದಿಗಳ ತಟದಲ್ಲಿಯೇ ಹಿಂದೂ ಧರ್ಮದ ಮಹತ್ವದ ದೇವಸ್ಥಾನಗಳಿದ್ದಾವೆ. ಅಂಥಾ ಪ್ರತೀ ದೇವಸ್ಥಾನಗಳಿಗೂಊ ಜೀವಿತದಲ್ಲಿ ಒಮ್ಮೆಯಾದರೂ ಭೇಟಿ ಕೊಡಬೇಕು, ಆ ಏಳೂ ನದಿ ನೀರಲ್ಲಿ ಮಿಂದೆದ್ದು ಪುನೀತರಾಗಬೇಕೆಂಬುದು ಪ್ರತೀ ಆಸ್ತಿಕರ ಜೀವಮಾನದ ಕನಸಾಗಿರುತ್ತದೆ. ಈ ನದಿಗಳು ಈವತ್ತಿಗೂ ಮನುಷ್ಯನ ಪಾಪ ಕಳೆಯುವ ಅಗೋಚರ ಶಕ್ತಿಯನ್ನು ಹೊಂದಿವೆ ಎಂಬ ಗಾಢ ನಂಬಿಕೆ ಭಾರತೀಯರಲ್ಲಿದೆ.
ಸುಮ್ಮನೊಮ್ಮೆ ಹುಡುಕಾಡಿದರೂ ಸಾಕು, ಈ ಏಳೂ ನದಿಗಳ ಹಿಂದೆ ಲೆಕ್ಕಕ್ಕೆ ನಿಲುಕದಷ್ಟು ಕಥಾನಕಗಳು ಗರಿ ಬಿಚ್ಚಿಕೊಳ್ಳುತ್ತವೆ. ಈ ಏಳೂ ನದಿಗಳ ತಟಗಳಲ್ಲಿ ನಮ್ಮ ದೇಶದ ಪವಿತ್ರ, ಪ್ರಖ್ಯಾತ ದೇವಸ್ಥಾನಗಳಿವೆ. ಅವು ನಮ್ಮ ಪಾಲಿಗೆ ಪುಉಣ್ಯ ಕ್ಷೇತ್ರಗಳೆಂದು ಬಿಂಬಿಸಿಕೊಂಡಿವೆ. ಅಂಥಾ ಪುಣ್ಯ ಕ್ಷೇತ್ರಗಳ ಬಿಂದುವಿನಿಂದಲೇ ಕೋಟ್ಯಾಂತರ ಕಿಮ್ಮತ್ತಿನ ಪ್ರವಾಸೋದ್ಯಮ ಚಟುವಟಿಕೆಗಳೂ ನಡೆಯುತ್ತಿವೆ. ವರ್ಷವೊಂದಕ್ಕೆ ಕೋಟ್ಯಾಂತರ ಭಕ್ತರು ಅಂಥಾ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಈ ಮೂಲಕ ಭಕ್ತಿ ಭಾವವೆಂಬುದು ನಮ್ಮ ದೇಶದ ಆರ್ಥಿಕತೆಗೂ ಬಹುದೊಡ್ಡ ಕೊಡುಗೆ ಕೊಡುತ್ತಿದೆ. ಒಟ್ಟಾರೆಯಾಗಿ ಲೆಕ್ಕ ಹಾಕಿದರೆ, ನದಿ ತಟದಲ್ಲಿರುವ ಇಂಥಾ ಪುಣ್ಯ ಕ್ಷೇತ್ರಗಳಿಂದ ಹುಟ್ಟುತ್ತಿರುವ ಆರ್ಥಿಕ ಆಮದನಿ ನಿಜಕ್ಕೂ ಬೆರಗಾಗಿಸುವಂತಿದೆ. ಅದು ಈ ಏಳು ಪುಣ್ಯ ನದಿಗಳ ಚಮತ್ಕಾರವೂ ಹೌದು.
ನದಿಗಳಿಗೇಕೆ ಇಂಥಾ ಪಾವಿತ್ರ್ಯ?
ಆಧುನಿಕ ಇತಿಹಾಸಗಳಲ್ಲಿಯೂ ಕೂಡಾ ನದಿಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ನದಿಗಳೆಂದರೆ ಸಕಲ ಜೀವ ರಾಶಿಗಳಿಗೂ ಉಸಿರು ನೀಡೋ ಮಾತೃತ್ವ ಹೊಂದಿರುವ ಮಾಯೆಯೆಂದೂ ಹೇಳಲಾಗುತ್ತೆ. ಈ ಜಗತ್ತಿನ ಬಹುತೇಕ ನಾಗರೀಕತೆಗಳು ಉಗಮವಾದದ್ದೇ ನದಿಯ ತಟಗಳಲ್ಲಿ ಅಂತ ಆಧುನಿಕ ಸಂಶೋಧನೆಗಳು ಸಾಕ್ಷೀಕರಿಸುತ್ತವೆ. ಇದೇ ನದಿಗಳಿಗೆ ಧಾರ್ಮಿಕ ವಾತಾವರಣದ ಮೂಲಕ ದೈವೀಕ ಅಂಶಗಳು ಹಬ್ಬಿಕೊಂಡಿವೆ. ಹಾಗಂತ ಈಗ ಉಲ್ಲೇಖಿಸಿರುವ ಏಳು ನದಿಗಳು ಮಾತ್ರವೇ ಪವಿತ್ರ ಅಂದುಕೊಳ್ಳುವಂತಿಲ್ಲ. ಈ ನಾಡಿನ ನರನಾಡಿಗಳಂತೆ ಹರಿಯುತ್ತಿರೋ ಸಣ್ಣ ಸಣ್ಣ ಝರಿಗಳು, ತೊರೆಗಳು, ಹಳ್ಳ ಕೊಳ್ಳಗಳೆಲ್ಲವೂ ಪವಿತ್ರ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಒಂದು ವೇಳೆ ಯಾವುದೇ ನದಿ, ಹಳ್ಳ ಕಲುಶಿತಗೊಂಡಿದ್ದರೆ ಅದಕ್ಕೆ ಕಾರಣ ಮನುಷ್ಯರೇ ಹೊರತು, ಪ್ರಕೃತಿಯಲ್ಲ.
ನಿಂತ ನೀರು ಅದೆಷ್ಟೇ ಶುದ್ಧವಾಗಿದ್ದರೂ ಮಲೆತು ಹೋಗುತ್ತೆ. ಹರಿವೆಂಬುದು ಜೀವಂತಿಕೆಯ ಲಕ್ಷಣ. ಅದೆಷ್ಟೋ ಫರ್ಲಾಂಗುಗಳ ದೂರ ನಿರಂತರವಾಗಿ ಹರಿಯುತ್ತಲೇ ಇರುವ ನದಿಯ ಒಡಲಿಗೆ ಯಾವ ವಿಷವೂ ಮುಟ್ಟುವುದಿಲ್ಲ. ನಿರಂತರ ಹರಿಯುವಿಕೆಯೇ ನದಿಯೊಂದನ್ನು ತಾಜಾತನದಿಂದಿರಿಸುತ್ತದೆ. ಹೀಗೆ ಹರಿಯುತ್ತಲೇ ಅದೇಷ್ಟೋ ಜೀವರಾಶಿಗಳನ್ನು ಜೀವಂತವಾಗಿಡುವ ಇಂಥಾ ನದಿಗಳು ಒಂದ್ಯಾವುದೋ ಬಿಂದುಉವಿನಲ್ಲಿ ಸಂಧಿಸುತ್ತವೆ. ಈವತ್ತಿಗೆ ಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಕೂಡಾ ಅಂಥಾದ್ದೊಂದು ಸಂಗಮ ಸ್ಥಳವೇ. ಹೀಗೆ ಹರಿಯೋ ಏಳು ನದಿಗಳ ಸುತ್ತಾ ವೇದ, ಪುರಾಣಗಳ ಕಥನಗಳು ಹಬ್ಬಿಕೊಂಡಿವೆ. ಕೋಟಿ ಕೋಟಿ ಮಂದಿ ಜಮಾಯಿಸಿ, ಸ್ನಾನ ಮಾಡಿದರೂ, ಒಂದಷ್ಟು ಕಸ ಸೃಷ್ಟಿಸಿದರೂ ಮತ್ತೆ ಶುದ್ಧವಾಗಿ ಹರಿಯುವ ಇಂಥಾ ನದಿಗಳಿಗೆ ಸಹಜವಾಗಿಯೇ ಪಾವಿತ್ರ್ಯ ಮೆತ್ತಿಕೊಂಡಿದೆ.
ಅವಳು ಗಂಗಾ ಮಾತೆ!
ಇಂಥಾ ಪವಿತ್ರ ನದಿಗಳು ದೈವ ಸೃಷ್ಟಿಯೆಂದೇ ಹೇಳಲಾಗುತ್ತೆ. ಪ್ರತೀ ನದಿಗಳ ಹುಟ್ಟಿನ ಹಿಂದೆಯೂ ಒಂದೊಂದು ಪುರಾಣ ಕಥೆಗಳಿದ್ದಾವೆ. ಈವತ್ತಿಗೂ ಅದನ್ನು ಮನಸಾರೆ ನಂಬುತ್ತಾ, ದೈವ ಸೃಷ್ಟಿಯಾದ ನದಿಗಳನ್ನು ಪೂಜಿಸುವ ಮನಃಸ್ಥಿತಿ ಭಾರತೀಯರಲ್ಲಿದೆ. ಮೊದಲನೆಯದ್ದಾಗಿ ಪವಿತ್ರ ನದಿಗಳಲ್ಲಿ ಒಂದೆಂದು ಕರೆಸಿಕೊಳ್ಳುವ ಗಂಗಾ ನದಿಯ ಬಗ್ಗೆ ಹೇಳೋದಾದರೆ, ಇದನ್ನು ಗಂಗಾ ಮಾತೆಯೆಂದೇ ಭಾವಿಸಲಾಗುತ್ತದೆ. ಗಂಗೆಯ ನೀರಿಗೆ ತೀರ್ಥದಂಥಾ ಗುಣ ಇದೆ ಎಂದೂ ಹೇಳಲಾಗುತ್ತೆ. ಇಂಥಾದ್ದೊಂದು ದೈವೀಕ ನಂಬಿಕೆಗೆ ಕಾರಣವಾಗಿರೋದು ಗಂಗಾ ಮಾತೆಯ ಹುಟ್ಟಿನ ಬಗೆಗೆ ಜನಜನಿತವಾಗಿರುವಂಥಾ ಪುರಾಣ ಕಥೆಗಳು.
ಪುರಾಣ ಕಥೆಗಳ ಪ್ರಕಾರವಾಗಿ ಹೇಳೋದಾದರೆ ಗಂಗಾ ಮಾತೆ ಸಾಕ್ಷಾತ್ತು ಸ್ವರ್ಗದಿಂದಲೇ ಧರೆಗಿಳಿದು ಬಂದವಳು. ಈ ಗಂಗಾ ಮಾತೆಯ ಉಗಮದ ಬಗ್ಗೆ ವಿಶಿಷ್ಟವಾದೊಂದು ಕಥೆಯಿದೆ. ಅದೊಂದು ಹಂತದಲ್ಲಿ ಕಪಿಲ ಮಹರ್ಷಿಗಳು ಕಠಿಣವಾದ ತಪಸ್ಸು ನಡೆಸುತ್ತಿದ್ದರು. ಆದರೆ ಸಾಗರ ಎಂಬೊಬ್ಬ ರಾಜನ ಅರವತ್ತು ಸಾವಿರ ಮಕ್ಕಳು ಮಹರ್ಷಿಗಳ ತಪಸ್ಸಿಗೆ ಭಂಗವುಂಟು ಮಾಡಲು ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದರು. ಕಡೆಗೂಊ ಇದರಿಂದ ತಪೋಭಂಗಕ್ಕೀಡಾದ ಕಪಿಲ ಮಹರ್ಷಿಳು ಆ ಎಲ್ಲ ಮಕ್ಕಳ ವಿರುದ್ಧ ಕೋಪಗೊಂಡು ಭಸ್ಮ ಮಾಡಿ ಬಿಟ್ಟಿದ್ದರು. ನಂತರ ಆ ಮಕ್ಕಳ್ಯಾರಿಗೂ ಮೋಕ್ಷ ಸಿಗದೆ ಪರಿತಪಿಸಲಾರಂಭಿಸಿದ್ದರು. ಕಡೇಗೆ ತಮ್ಮ ವಂಶಜನೇ ಆದ ಭಗೀರಥ ಮಹಾರಾಜನ ಕನಸಲ್ಲಿ ಬಂದು ತಮ್ಮ ವೇದನೆಯನ್ನು ಹೇಳಿಕೊಂಡಿದ್ದರು.
ಸ್ವರ್ಗದಲ್ಲಿರುವ ಗಂಗೆಯ ಒಡಲಲ್ಲಿ ತಮ್ಮ ಭಸ್ಮವನ್ನು ವಿಸರ್ಜಿಸಿದರೆ ಮಾತ್ರವೇ ತಮಗೆ ಮೋಕ್ಷ ಸಿಗುತ್ತದೆಂದು ಹೇಳಿಕೊಂಡ ಸಾಗರ ರಾಜನ ಮಕ್ಕಳು, ಗಂಗೆಯನ್ನು ಹೇಗಾದರೂ ಮಾಡಿ ಭೂಮಿಗೆ ಅವತರಿಸುವಂತೆ ಮಾಡಿ ತಮಗೆ ಮೋಕ್ಷ ಸಿಗುವಂತೆ ಮಾಡಿಕೊಡಬೇಕೆಂದು ದುಂಬಾಲು ಬಿದ್ದಿದ್ದವು. ಭಗೀರತ ತನ್ನ ವಂಶಜರಿಗೆ ಮೋಕ್ಷ ಕೊಡಿಸುವ ಸಲುವಾಗಿ ಶಿವನ ಧ್ಯಾನದಲ್ಲಿ ಭಯಂಕರವಾದ ತಪಸ್ಸು ಮಾಡಲಾರಂಭಿಸಿದ್ದ. ಸುದೀರ್ಘ ಕಾಲದ ತಪಸ್ಸಿನ ತರುವಾಯ ಕಡೆಗೂ ಶಿವ ಮೆಚ್ಚಿಕೊಂಡಿದ್ದ. ಹಾಗೆ ಶಿವ ತನ್ನ ಮುಂದೆ ಪ್ರತ್ಯಕ್ಷನಾಗುತ್ತಲೇ ಭಗೀರಥ ಮಹಾರಾಜ, ಗಂಗಾ ಮಾತೆ ಸ್ವರ್ಗದಿಂದ ಬಂದು ಭೂಮಿ ಮೇಲೆ ಹರಿಯಬೇಕೆಂಬ ಮನವಿ ಸಲ್ಲಿಸಿದ್ದ.
ಒಂದು ವೇಳೆ ಗಂಗೆ ನೇರವಾಗಿ ಭೂಮಿ ಮೇಲೆ ಹರಿದರೆ, ಆಕೆಯ ರಭಸದಿಂದಾಗಿ ಜಲಪ್ರಳಯವಾಗುತ್ತದೆ. ಆದ್ದರಿಂದ ಸಾಕ್ಷಾತ್ತು ಶಿವನೇ ಆಕೆಯನ್ನು ತನ್ನ ಜಟೆಯಲ್ಲಿ ಬಂಧಿಸಿಡುವಂತೆ ಕೇಳಿಕೊಂಡಿದ್ದ. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ಶಿವ ಸ್ವರ್ಗದಿಂದ ಭೂಮಿಯ ಮೇಲೆ ಹರಿಯುವಂತೆ ಗಂಗೆಯನ್ನು ಶಿವ ಕೇಳಿಕೊಂಡಿದ್ದ. ಅದರ ಫಲವಾಗಿಯೇ ಗಂಗಾ ಮಾತೆ ಭೂಮಿಯ ಮೇಲೆ ಹರಿಯಲಾರಂಭಿಸಿದ್ದಳು. ಹೀಗೆ ಸ್ವರ್ಗದ ದೇವತೆ ಗಂಗಾ ಮಾತೆ ಭೂಮಿಗಿಳಿದು ಬರುವಲ್ಲಿ ಭಗೀರಥನ ಪಾತ್ರ ಮಹತ್ವದ್ದಾಗಿದೆ. ಈ ಕಾರಣದಿಂದಲೇ ಹಿಮಾಲಯದಿಂದ ಉದ್ಭವವಾಗಿ ಹರಿಯುವ ಗಂಗೆಯನ್ನು ಭಾಗೀರಥಿ ಎಂದೂ ಕರೆಯಲಾಗುತ್ತದೆ. ಹೀಗೆ ಗಂಗಾ ಮಾತೆ ಅವತರಿಸಿದ್ದನ್ನು ಮೇ ಅಂತ್ಯ ಭಾಗದಲ್ಲಿ ಉತ್ತರ ಭಾರತದ ವಾರಣಾಸಿಯಲ್ಲಿ ಗಂಗಾರತಿಯ ಮೂಲಕ ಸ್ಮರಿಸಿ ಗೌರವಿಸುವ ಪರಿಪಾಠ ಬೆಳೆದು ಬಂದಿದೆ.
ದೇವಪ್ರಯಾಗ
ಹೀಗೆ ಭಗೀರಥನ ತಪಸ್ಸಿನ ಫಲವಾಗಿ, ಸಾಕ್ಷಾತ್ತು ಶಿವನ ಆಣತಿಯಂತೆ ಗಂಗಾ ಮಾತೆ ಹಿಮಾಲಯ ಪರ್ವತದ ಒಡಲಿನಿಂದ ಧುಮ್ಮಿಕ್ಕಿದ್ದಳು. ಹಾಗೆ ಹುಟ್ಟು ಪಡೆದ ಈ ನದಿ ಉತ್ತರಾಖಂಡದ ಗೋಮುಖ ಎಂಬಲ್ಲಿಯವರೆಗೂ ಪ್ರಚನ್ನವಾಗಿ ಹರಿದು ಬರುತ್ತದೆ. ಇಷ್ಟೂ ದೂರದವರೆಗೂ ಈ ನದಿಯನ್ನು ಭಾಗೀರಥಿ ನಅಂತಲೇ ಕರೆಯಲಾಗುತ್ತೆ. ಗೋಮುಖ ಎಂಬಲ್ಲಿಯಿಂದ ಇಳಿದು ಬರುವ ಭಾಗೀರಥಿ ದೇವಪ್ರಯಾಗದಲ್ಲಿ ಅಲಕಾನಂದ ನದಿಯೊಂದಿಗೆ ಸಂಗಮಿಸುತ್ತದೆ. ಅಲ್ಲಿಯವರೆಗೂ ಸಣ್ಣ ಸ್ವರೂಪದಲ್ಲಿ, ಪರಿಶುದ್ಧವಾಗಿ ಹರಿದು ಕೆಳಗಿಳಿದು ಬರುವ ಭಾಗೀರಥಿ, ದೇವಪ್ರಯಾಗ ತಲುಪಿದ ನಂತರ ಗಂಗೆಯೆಂದು ಕರೆಸಿಕೊಳ್ಳುತ್ತಾಳೆ.
ಹಾಗೆ ಭಾಗೀರಥಿ ಅಲಕಾನಂದ ನದಿಯೊಂದಿಗೆ ಸೇರಿ ಗಂಗೆಯಾಗಿ ರೂಪಾಂತರಗೊಂಡ ಸ್ಥಳದಲ್ಲಿಯೇ ದೇವಪ್ರಯಾಗವಿದೆ. ಉತ್ತರಾಖಂಡ್ ರಾಜ್ಯದ ತೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ ಪಂಚ ಪ್ರಯಾಗಗಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಈ ದೇವಪ್ರಯಾಗ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಭಕ್ತಿ ಭಾವಗಳನ್ನು ಪಡೆದುಕೊಂಡಿದೆ. ಗಂಗಾ ನದಿಯ ತಟದಲ್ಲಿರುವ ದೇವಪ್ರಯಾಗದಲ್ಲಿ ಹತ್ತಾರು ದೇವಾಲಯಗಳಿದ್ದಾವೆ. ಆದರೆ, ಅದೆಲ್ಲದರಲ್ಲಿ ಭಕ್ತ ಗಣವನ್ನು ಪ್ರಧಾನವಾಗಿ ಸೆಳೆಯುವುದು ರಘುನಾಥ ದೇವಾಲಯ. ಇದು ರಾಮನ ಮಂದಿರ. ಆದ್ದರಿಂದಲೇ ಪ್ರತೀ ವರ್ಷ ಲಕ್ಷಾಂತರ ಭಕ್ತರು ಗಂಗೆಯಲ್ಲಿ ಮಿಂದು ರಘುನಾಥನ ದರ್ಶನ ಮಾಡಿ ಪುನೀತರಾಗುತ್ತಾರೆ.
ಹರಿಧ್ವಾರ
ಗಂಗಾನದಿ ವಿಶಾಲವಾದ ಹರಿವನ್ನು ಹೊಂದಿರುವಂಥಾದ್ದು. ವಿಶೇಷವೆಂದರೆ ಗಂಗಾಮಾತೆ ಹರಿಯುವ ಎಡೆಗಳಲ್ಲೆಲ್ಲ ಹಿಂದೂ ಸಂಪ್ರದಾಯದ ದೈವೀಕ ದೇವಸ್ಥಾನಗಳಿದ್ದಾವೆ. ಹಿಮಾಲಯದ ಒಡಲಿಂದ ಉದ್ಭವಿಸಿ ಗೋಮುಖದವರೆಗೆ ಒಂಟಿಯಾಗಿ ಹರಿಯುವ ಭಾಗೀರಥಿ, ದೇವಪ್ರಯಾಘದಲ್ಲಿ ಅಲಕಾನಂದೆಯನ್ನು ಕೂಡುವ ಮೂಲಕ ಹಿರಿದಾಗುತ್ತಾಳೆ. ಅಲ್ಲಿಂದಾಚೆಗೆ ಈಕೆ ಹರಿದಲ್ಲೆಲ್ಲ ತೀರ್ಥ ಕ್ಷೇತ್ರಗಳನ್ನು ಸೃಷ್ಟಿದ್ದಾಳೆ. ಆ ನಂತರ ಮತ್ತಷ್ಟು ಮೈದುಂಬಿಕೊಂಡು ಹರಿಯುವ ಗಂಗೆ ಬಂಗಾಳದ ಬಳಿ ಇರುವ ಗಂಗಾ ನದಿ ಮುಖಜ ಭೂಮಿಯನ್ನು ಪ್ರವೇಶಿಸುತ್ತಾಳೆ. ಆ ಮೂಲಕವೇ ಬಂಗಾಳಕೊಲ್ಲಿಯಲ್ಲಿ ಅಂತರ್ಧಾನ ಹೊಂದುತ್ತಾಳೆ.
ಹೀಗೆ ಹಿಮಾಲಯದಿಂದ ಹರಿದು ಬರುವ ಗಂಗಾ ನದಿ ದೇವಪ್ರಯಾಗ ದಾಟಿಕೊಂಡು ಹರಿಧ್ವಾರವನ್ನು ಸಂಧಿಸುತ್ತದೆ. ಈ ಹರಿಧ್ವಾರ ಉತ್ತರಾಖಂಡದ ಒಂದು ಅತ್ಯಂತ ಪ್ರಾಚೀನ ನಗರ. ಹಿಮಾಲಯದಿಂದ ಸರಿಸುಮಾರು ಇನ್ನೂರ ಐವತ್ಮೂರು ಕಿಲೋಮೀಟರ್ ಹರಿದ ನಂತರ ಗಂಗಾ ನದಿ ಹರಿಧ್ವಾರದ ಮೂಲಕವೇ ಉತ್ತರ ಭಾರತವನ್ನು ಪ್ರವೇಶಿಸುತ್ತದೆ. ಈ ಕಾರಣದಿಂದಲೇ ಹರಿಧ್ವಾರವನ್ನು ಗಂಗಾಧ್ವಾರ ಅಂತಲೂ ಕರೆಯಲಾಗುತ್ತದೆ. ಈ ಹರಿಧ್ವಾರ ಪುರಾಣ ಪ್ರಸಿದ್ಧವಾದ ನಗರ. ಗರುಡ ಪುರಾಣದಲ್ಲಿಯೂ ಕೂಡಾ ಇದರ ಉಲ್ಲೇಖವಿದೆ. ಭಾರತದ ಏಳು ಪವಿತ್ರ ನಗರಗಳ ಪೈಕಿ ಒಂದಾಗಿ ಗುರುತಿಸಿಕೊಂಡಿರುಉವ ಹರಿಧ್ವಾರವನ್ನು ಗರುಢ ಪುರಾಣದಲ್ಲಿ ಮಾಯಾ ಎಂಬ ಹೆಸರಿನಿಂದ ಕರೆಯಲಾಗಿದೆ.
ಅಯೋಧ್ಯಾ, ಮಥುರಾ, ಉಜ್ಜಯಿನಿ, ಕಾಶಿಯಂಥಾ ಪ್ರಾಚೀನ, ಪೌರಾಣಿಕ ಹಿನ್ನೆಲೆಯ ನಗರಗಳಲ್ಲಿ ಹರಿಧ್ವಾರ ಪ್ರಧಾನವಾಗಿ ಗುರುತಿಸಿಕೊಳ್ಳುತ್ತದೆ. ಪೌರಾಣಿಕ ಕಥೆಗಳಲ್ಲಿಯೂ ಕೂಡಾ ಅಡಿಗಡಿಗೆ ಹರಿಧ್ವಾರಾ ನಗರದ ಉಲ್ಲೇಖಗಳಿದ್ದಾವೆ. ಪೌರಾಣಿಕ ಕಥೆಯ ಆಧಾರದಲ್ಲಿ ಹೇಳೋದಾದರೆ, ಸಮದ್ರ ಮಂಥನದ ಅಮೃತವನ್ನು ಗರುಡ ಕೊಂಡೊಯ್ಯುವಾಗ ಅದರ ನಾಲಕ್ಕು ಹನಿಗಳು ನಾಲಕ್ಕು ಭೂಭಾಗಗಳಲ್ಲಿ ಬಿದ್ದಿದ್ದವು. ಹಾಗೆ ಬಿದ್ದ ಸ್ಥಳಗಳೆಲ್ಲವೂ ಪವಿತ್ರವಾದ ತೀರ್ಥ ಕ್ಷೇತ್ರಗಳಾಗಿವೆ. ಉಜ್ಜಯಿನಿ, ನಾಸಿಕ್, ಪ್ರಯಾಗ್ ಮತ್ತು ಹರಿಧ್ವಾರ ಅಮೃತದ ಹನಿಗಳಿಂದ ಪಾವಿತ್ರ್ಯತೆ ಪಡೆದ ನಗರವೆಂದು ಇಂದಿಗೂ ನಂಬಲಾಗಿದೆ.
ಹೀಗೆ ಅಮೃತದ ಹನಿ ಬಿದ್ದ ಸ್ಥಳಗಳಲ್ಲಿಯೇ ಪ್ರಸಿದ್ಧವಾದ ಕುಂಭ ಮೇಳಗಳು ನಡೆಯುತ್ತಾ ಬಂದಿವೆ. ಈ ಬಾರಿ ಮಹಾ ಕುಂಭ ಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಕೂಡಾ ಅಂಥಾದ್ದೇ ಒಂದು ಅಮೃತದಿಂದ ಸೃಷ್ಟಿಯಾದ ಪುಣ್ಯ ಕ್ಷೇತ್ರ. ಅದೇ ರೀತಿ ಹರಿಧ್ವಾರದಲ್ಲಿ ಅಮೃತ ಬಿದ್ಧ ಸ್ಥಳವನ್ನು ಹರ್ ಕಿ ಪೌರಿ ಅಂತ ಕರೆಯಲಾಗುತ್ತದೆ. ಈ ಹಿಂದೆ ಹರಿಧ್ವಾರವನ್ನು ಕಪಾಲಿಸ್ಥಾನ, ಗಂಗಾಧ್ವಾರ, ಮಾಯಾಪುರಿ ಎಂದೂ ಕರೆಯಲಾಗುತ್ತಿತ್ತು. ಈ ಪವಿತ್ರ ಹೃಷಿಕೇಶ ನೆಲೆ ಕಂಡುಕೊಂಡಿರೋದು ಕೂಡಾ ಪವಿತ್ರವಾದ ಗಂಗಾ ನದಿಯ ತಟದಲ್ಲಿಯೇ. ಈ ಕಾರಣದಿಂದಲೇ ಇದು ಆಸ್ತಿಕರನ್ನು ಸದಾ ಸೆಳೆಯುವ ಧಾರ್ಮಿಕ ಕ್ಷೇತ್ರವಾಗಿದೆ. ಮೊದಲು ಇಲ್ಲಿಗೆ ಭೇಟಿ ನೀಡಿ, ಹಿಮಾಲಯದ ಅಗಾಧತೆಯನ್ನು ಕಣ್ತುಂಬಿಕೊಂಡು ನಂತರ ಇತರೇ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಪ್ರತೀ ವರ್ಷ ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸುತ್ತಾರೆ.
ಈ ಹೃಷಿಕೇಶ ಕ್ಷೇತ್ರಕ್ಕೆ ಇಂಥಾದ್ದೊಂದು ಕಾರಣೀಕ ಇರೋದಕ್ಕೆ ಪ್ರಧಾನ ಕಾರಣವೇ ಗಂಗಾ ಮಾತೆ ಎಂದೂ ಹೇಳಲಾಗುತ್ತದೆ. ಯಾಕೆಂದರೆ ಹೃಷಿಕೇಶ ಗಂಗೆಯ ತಟದಲ್ಲಿದೆ. ಗಂಗೆಯಲ್ಲಿ ಮಿಂದರೆ ಪಾಪವೆಲ್ಲ ಪರಿಹಾರವಾಗುತ್ತದೆಂಬ ನಂಬಿಕೆ ಇರೋದರಿಂದ ಭಕ್ತರು ಗಂಗೆಯಲ್ಲಿ ಮುಳುಗೆದ್ದು ಆ ನಂತರ ಪುನೀತರಾಗಿ ದೇವಭೂಮಿಯಲ್ಲಿ ಅಡ್ಡಾಡುತ್ತಾರೆ. ಈ ಮೂಲಕ ಜನುಮಕ್ಕಾಗುವಷ್ಟು ದೈವೀಕ ಅನುಭೂತಿ ತುಂಬಿಕೊಂಡು ಹೊರಡುತ್ತಾರೆ. ಹಿಮಾಲಯದ ಪದತಲದಲ್ಲಿರುವ ಹೃಷಿಕೇಶದಲ್ಲಿ ಅನೇಕ ಆಶ್ರಮಗಳಿವೆ. ಅವೆಲ್ಲವಕ್ಕೂ ಪೌರಾಣಿಕ ಹಿನ್ನೆಲೆ ಇದೆ. ಈ ದೈವೀಕ ವಾತಾವರಣದಲ್ಲಿ ಧ್ಯಾನ ಕೇಂದ್ರ ಗಳೂ ಇದ್ದಾವೆ. ಅಲ್ಲಿನ ಪ್ರಕೃತಿಯೇ ಧ್ಯಾನಸ್ಥ ಸ್ಥಿತಿಗೆ ತಲುಪಿಸೋದರಿಂದ ಹೃಷಿಕೇಶ ಎಲ್ಲರಿಗೂ ದಿವ್ಯಾನುಭೂತಿ ನೀಡುತ್ತದೆ.
ಹೃಷಿಕೇಶದ ತುಂಬೆಲ್ಲ ಪೌರಾಣಿಕ ಕಥೆಗಳಿಗೆ ಪುರಾವೆಯಂಥಾ ಕುಉರುಹುಗಳು ಈವತ್ತಿಗೂ ಉಳಿದುಕೊಂಡಿವೆ. ರಾಮಾಯಣದ ಪ್ರಕಾರವಾಗಿ ಹೇಳೋದಾದರೆ, ರಾವಣನನ್ನು ಸಂಹಾರ ಮಾಡಿದ ಬಳಿಕ ಶ್ರೀರಾಮಚಂದ್ರ ಇದೇ ಜಾಗದಲ್ಲಿ ಧ್ಯಾನಸ್ಥನಾಗಿದ್ದನಂತೆ. ರಾಮ ಧ್ಯಾನಕ್ಕೆ ಕೂತ ಸ್ಥಳವನ್ನು ಸೇತುವೆಯ ಮೂಲಕ ದಾಟಿ ಬಂದ ಲಕ್ಷ್ಮಣ ಸಂಧಿಸಿದ ಬಗ್ಗೆಯೂ ರಾಮಾಯಣದಲ್ಲಿ ವಿವರಣೆಗಳಿದ್ದಾವೆ. ಅದಕ್ಕೆ ಪುರಾವೆಯಂತೆ ಇಲ್ಲಿ ಲಕ್ಷಣ ಜೂಲಾ ಎಂಬ ತೂಗುಉ ಸೇತುವೆಯಿದೆ. ಮಂದಿ ಅದರಲ್ಲಿ ಒಂದು ಸಲ ಅಡ್ಡಾಡಲು ಹಾತೊರೆಯುತ್ತಾರೆ. ಸಾಕ್ಷಾತ್ತು ಲಕ್ಷಣನೇ ನಡೆದಾಡಿದ್ದ ಆ ಸೇತುವೆಯ ಮೇಲೆ ಪಾದವೂರಿ ರೋಮಾಂಚಿತರಾಗುತ್ತಾರೆ.
ಹೃಷಿಕೇಶ ಎಂಬುದು ಹಲವಾರು ಪುರಾಣ ಪ್ರಸಿದ್ಧ ದೇವಸ್ಥಾನಗಳನ್ನು ಒಡಲಲ್ಲಿಟ್ಟುಕೊಂಡಿದೆ. ಅದರಲ್ಲಿ ಕುಂಜಾಪುರಿ ದೇವಸ್ಥಾನ ಮಹತ್ವದ್ದು. ಭಾರತದ ಮತ್ತೆಲ್ಲಿಯೂ ಈ ಬಗೆಯ ದೇವಸ್ಥಾನ ಕಾಣ ಸಿಗುವುದಿಲ್ಲ. ಇದು ಸತಿ ದೇವತೆಗೆ ಅರ್ಪಿಸಲ್ಪಟ್ಟಿರುವ ಪುರಾತನವಾದ ದೇವಾಲಯ. ಶಿವ ಸತಿದೇವತೆಯನ್ನು ಕೈಲಾಸಕ್ಕೆ ಕೊಂಡೊಯ್ಯುವಾಗ ಆಕೆಯ ದೇಹದ ಭಾಗವೊಂದು ಬಿದ್ದಿತ್ತೆಂಬ ಪುರಾವೆ ಇದೆ. ಆ ಭಾಗ ಬಿದ್ದ ಪ್ರದೇಶವನ್ನೇ ಈ ದೇವಾಲಯವಾಗಿ ಇಲ್ಲಿ ಕಾಣ ಬಹುದಾಗಿದೆ. ಇಂಥಾ ಅತ್ಯಂತ ಅಪರೂಪದ, ಅಚ್ಚರಿದಾಯಕ ಹಿನ್ನೆಲೆ ಹೊಂದಿರುವಂಥಾ ಹದಿಮೂರು ದೇವಸ್ಥಾನಗಳು ಹೃಷಿಕೇಶದಲ್ಲಿವೆ. ಅದರ ಇಕ್ಕೆಲದಲ್ಲಿಯೇ ಗಂಗೆ ಹರಿಯುವುದರಿಂದ ಅದಕ್ಕೆ ಮತ್ತಷ್ಟು ದೈವೀಕ ಪ್ರಭೆ ಹಬ್ಬಿಕೊಂಡಿದೆ.
ಗಂಗೆಯ ಸೆರಗಲ್ಲೊಂದು ವಾರಣಾಸಿ
ಮೊದಲೇ ಹೇಳಿದಂತೆ ತಾಯಿ ಗಂಣಗೆ ಹರಿದು ಹೋದಲ್ಲೆಲ್ಲ ಭಾರತದ ಅಧ್ಯಾತ್ಮಿಕ ಚಹರೆಗಳೂ ಹಬ್ಬಿಕೊಂಡಿವೆ. ಗಂಗೆಯ ಬಗ್ಗೆ ಪುರಾಣಗಳಲ್ಲಿರುವಂಥಾ ಪವಿತ್ರವಾದ ನಂಬಿಕೆಗಳು ಈ ಮೂಲಕ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಜೀವಂತಿಕೆ ಪಡೆದುಕೊಂಡಿವೆ. ಹಾಗೆ ಗಂಗೆಯ ತಟದಲ್ಲಿ ಮೈಚಾಚಿಕೊಂಡಿರುವ ಭಾರತದ ಮತ್ತೊಂದು ಪುರಾಣ ಪ್ರಸಿದ್ಧವಾದ ಸ್ಥಳ ವಾರಣಾಸಿ. ಕಾಶಿ, ಬನಾರಾಸ್ ಅಂತಲೂ ಕರೆಸಿಕೊಳ್ಳುವ ಈ ವಾರಣಾಸಿ ಶಿವನ ನೆಚ್ಚಿನ ನಗರವೆಂಬ ಖ್ಯಾತಿಯನ್ನೂ ಒಳಗೊಂಡಿದೆ. ಹೀಮದೂ ಧರ್ಮದಲ್ಲಿ ಪ್ರಧಾನ ಸ್ಥಾನ ಗಳಿಸಿಕೊಂಡಿರುವ ವಾರಾಣಾಸಿಯ ನಿಜವಾದ ಇತಿಗಹಾಸವೆಂಬುದು ಮನುಷ್ಯ ಮಾತ್ರರ ಅಂದಾಜು ಮೀರಿ ಹಬ್ಬಿಕೊಂಡಿದೆ. ಆಧುನಿಕ ಜಗತ್ತಿನಲ್ಲಿರುವ ಎಲ್ಲ ಧರ್ಮಗಳೂ ಕೂಡಾ ವಾರಣಾಸಿಯ ಇತಿಹಾಸದ ಮುಂದೆ ಕುಬ್ಜವಾಗಿ ಕಾಣಿಸುತ್ತವೆ.
ಪ್ರತೀ ಹಿಂದೂ ಧರ್ಮಿಯರೂ ಕೂಡಾ ಜೀವಿತದಲ್ಲೊಮ್ಮೆ ವಾರಣಾಸಿಯನ್ನು ನೋಡಲು ಹಾತೊರೆಯುತ್ತಾರೆ. ಇದು ವಿಶ್ವರ ಅತೀ ಪುರಾತತನ ಊರಾಗಿಯೂ ವಿದೇಶಿಗರನ್ನೇ ಸೆಳೆಯುತ್ತಿದೆ. ಹಿಂದೂ ಧರ್ಮದಲ್ಲಿ ಸಪ್ತ ಪುರಿಗಳನ್ನು ಪವಿತ್ರವೆಂದು ಹೇಳಲಾಗುತ್ತೆ. ಅದರಲ್ಲಿ ವಾರಣಾಸಿಗೆ ಪ್ರಧಾನ ಸ್ಥಾನವಿದೆ. ಯಾಕೆಂದರೆ ಈ ನಗರದಲ್ಲಿ ನಾಕವೇ ಧರೆಗಿಳಿದಂತೆ ಭಾಸವಾಗುತ್ತದೆ. ನಾವೆಲ್ಲ ಪುರಾಣ ಕಥೆಗಳನ್ನುಉ ಕೇಳಿಕೊಂಡೇ ಬೆಳೆದವರು. ಅದರ ಒಂದಷ್ಟು ಕಲ್ಪನೆಗಳನ್ನು ಸಿನಿಮಾ, ನಾಟಕಗಳಂಥಾ ಪ್ರಾಕಾರಗಳ ಮೂಲಕ ಕಣ್ತುಂಬಿಕೊಂಡಿದ್ದೇವೆ. ಅದರಾಚೆಗೆ ಒಂದು ಕಲ್ಪನೆ ಎಲ್ಲರೊಳಗೂ ಇರುತ್ತದೆ. ವಾರಣಾಸಿಯ ಒಡಲಲ್ಲೊಮ್ಮೆ ಅಡ್ಡಾಡಿದರೆ ಪುರಾಣ ಪರ್ವವೊಂದನ್ನು ಹೊಕ್ಕು ಹೊರ ಬಂದ ಅನುಭವ ಯಾರಿಗಾದರೂ ಆಗದಿರೋದಿಲ್ಲ.
ವಾರಣಾಸಿ ಹಿಂದೂ ಸಂಪ್ರದಾಯದಲ್ಲಿ ಬೆರೆತಿರುವ ಪರಿಯೇ ಅದ್ಭುತ. ಇಲ್ಲಿ ಗಂಗೆ ಹರಿಯುವುದರಿಂದ ಜನರೆಲ್ಲರ ಪಾಪ ತೊಳೆಯುತ್ತಾಳೆಂಬ ನಂಬಿಕೆ ಇದೆ. ಸತ್ತವರ ಅಂತ್ಯ ಕ್ರಿಯೆಯನ್ನು ಗಂಗೆಯ ತಟದಲ್ಲಿ ಮಾಡಿದರೆ ಮೋಕ್ಷ ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಅನೇಕರಲ್ಲಿದೆ. ಈಗಲೂ ಆ ಪ್ರಕ್ರಿಯೆ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ನೋಡ ಹೋದರೆ, ವಾರಣಾಸಿ ಎಂಬುದು ಮೋಕ್ಷದ ದಾರಿಯಾಗಿಯೂ ಕಾಣಿಸುತ್ತದೆ. ಇಲ್ಲಿ ಥರ ಥರದ ಪೂಜೆಗಳು ನಡೆಯುತ್ತವೆ. ಅಂಥಾ ಎಲ್ಲ ಪೂಜೆಗಳಿಗೂ ಮುನ್ನ ಕಾಶಿಯ ಮಹಾರಾಜ ನರೇಶನ ಪೂಊಜೆಯೂ ತಪ್ಪದೇ ನಡೆಯುತ್ತೆ. ಇಂಥಾ ಸ್ಥಳದಲ್ಲಿ ಕಾಶಿ ವಿಶ್ವನಾಥನ ದೇವಸ್ಥಾನ ಎಲ್ಲರ ಭಕ್ತಿಯ ಭಾಗವಾಗಿದೆ. ಪ್ರತೀ ದಿನ ಸಾವಿರಾರು, ಲಕ್ಷಾಂತರ ಭಕ್ತರು ವಿಶ್ವನಾಥನ ದರ್ಶನ ಪಡೆದು ಧನ್ಯರಾಗುತ್ತಾರೆ.
ನದಿಗಳು ಜೀವಂತಿಕೆಯ ಸಂಕೇತವೂ ಹೌದು. ಗಂಗೆಯಂಥಾ ಪವಿತ್ರ ನದಿಗಳು ಮೋಕ್ಷದ ವಾಹಕಗಳೂ ಹೌದು. ಈ ಕಾರಣದಿಂದಲೇ ಹಿಂದೂ ಸಂಪ್ರದಾಯದಲ್ಲಿ ಮರಣಾ ನಂತರದ ವಿಧಿ ವಿಧಾನಗಳು ನದಿ ದಂಡೆಯಲ್ಲಿಯೇ ನಡೆಯುತ್ತದೆ. ಭಾರತದ ತುಂಬೆಲ್ಲ ಅನೇಕ ನದಿ ಪಾತ್ರಗಳಲ್ಲಿ ಇಂಥಾ ಕಾರ್ಯಗಳು ನಡೆಯುತ್ತವಾದರೂ ವಾರಣಾಸಿ ಎಂಬುದು ಅದೆಲ್ಲದಕ್ಕೂ ಮೂಲವೆಂದು ನಂಬಲಾಗಿದೆ. ಅಲಹಾಬಾದ್ ಪ್ರಯಾಗ್ ಕೂಡಾ ನದಿ ದಂಡೆಯಲ್ಲಿದೆ. ಇನ್ನುಳಿದಂತೆ ಯಮುನಾ ಗೋದಾವರಿ ಮುಂತಾದ ನದಿಗಳ ತಟದಲ್ಲಿಯೂ ಹಿಂದೂ ಪರಂಪರೆಯ ಪೌರಾಣಿಕ ಸ್ಥಳಗಳಿವೆ. ಜೀವಮಾನದಲ್ಲೊಮ್ಮೆ ನೋಡಲೇ ಬೇಕಾದ ದೇವಸ್ಥಾನಗಳಿದ್ದಾವೆ.