ಎಲ್ಲೋ ಇದ್ದವರನ್ನ ಪರಸ್ಪರ ಪರಿಚಯ ಮಾಡಿಸಿ, ಸ್ನೇಹ-ಪ್ರೀತಿ ಬೆಳೆಯುವಂತೆ ಮಾಡಿ, ಮದುವೆ -ಮಕ್ಕಳು ಮಾಡ್ಕೊಂಡು ಸಂಸಾರ ಮಾಡುವುದಕ್ಕೂ ಅವಕಾಶ ಮಾಡಿಕೊಡುವ ಭಗವಂತ, ಕೊನೆತನಕ ಒಟ್ಟಿಗೆ ಬಾಳೋದಕ್ಕೆ ಯಾಕೇ ಅಡ್ಡಿಯಾಗ್ತಾನೆ? ನಡು ನಡುವಲ್ಲೇ ಯಾಕೇ ಬೆರೆತ ಹೃದಯಗಳನ್ನು ಬೇರ್ಪಡಿಸ್ತಾನೆ? ಒಟ್ಟಿಗೆ ಬದುಕಬೇಕು, ಬಾಳಬೇಕು ಅಂತ ಜೀವನದ ಮೇಲೆ ನೂರೆಂಟು ಕನಸು ಕಟ್ಟಿಕೊಳ್ಳುವ ಜೋಡಿಗಳನ್ನೇಕೆ ಅಗಲಿಸಿ ಗಹಗಹಿಸ್ತಾನೆ? ಬಲಗೈನಲ್ಲಿ ಕೊಟ್ಟು ಎಡಗೈನಲ್ಲಿ ಕಿತ್ಕೊಂಡು ಅದ್ಯಾಕೆ ಕೇಕೆ ಹಾಕ್ತಾನೆ. ಹಾಲು-ಜೇನಿನಂತೆ ಬೆರೆತು ಬಾಳುವ ಮನಸ್ಸುಗಳನ್ನ ದೂರ ದೂರ ಮಾಡೋದ್ರಿಂದ ಏನ್ ಸಿಗುತ್ತೆ. ಈ ಎಲ್ಲಾ ಪ್ರಶ್ನೆಗಳನ್ನ ಕಣ್ಣಿಗೆ ಕಾಣಿಸದೇ ಅಲೆಲ್ಲೋ ಕುಂತಿರೋ ಆ ಭಗವಂತನಿಗೆ ಕೇಳಲೆಬೇಕು. ಚಿನ್ನಾರಿ ಮುತ್ತನ ಪತ್ನಿ ಸ್ಪಂದನಾರನ್ನ ಏಕಾಏಕಿ ಹೊತ್ತೊಯ್ದಿದ್ದೇಕೆ ಆ ವಿಧಿ? ಈ ಪ್ರಶ್ನೆಗೆ ಆ ಭಗವಂತ ಉತ್ತರ ಕೊಡ್ಲೆಬೇಕು. ಆದರೆ, ಆತ ಕೊಡಲ್ಲ, ನಾವು ಆತನಿಗೆ ಹಿಡಿಶಾಪ ಹಾಕೋದನ್ನ ನಿಲ್ಲಿಸಿಲ್ಲ.
ಅದ್ಯಾವ ಕೆಟ್ಟ ಕಣ್ಣು ಬಿತ್ತು ಏನೋ ಈ ಜೋಡಿ ಮೇಲೆ ವಿಜಯ್ ಕೊನೆಗೆ ಒಬ್ಬಂಟಿಯಾಗಿಬಿಟ್ಟರು. ಪತ್ನಿ ಸ್ಪಂದನಾ ಅವ್ರನ್ನ ಕಳೆದುಕೊಂಡು ಈ ಕ್ಷಣ ಅನಾಥವಾಗಿದ್ದಾರೆ. ಇಂತಹದ್ದೊಂದು ಕ್ಷಣ ನನ್ನ ಜೀವನದಲ್ಲಿ ಬರಬಹುದು ಎಂದು ಸ್ವತಃ ವಿಜಯ್ ನಿರೀಕ್ಷೆ ಮಾಡಿರಲಿಲ್ಲ. ನನ್ನ ಕಣ್ಣ ಮುಂದೆಯೇ ನನ್ನ ಪತ್ನಿ ಕಣ್ಮುಚ್ಚುತ್ತಾಳೆ ಅಂತ ಚಿನ್ನಾರಿ ಮುತ್ತ ಕನಸಲ್ಲೂ ಎಣಿಸಿರಲಿಲ್ಲ. ಆದರೆ, ಆ ವಿಧಿಯಾಟದಿಂದ ವಿಜಯ್ ಕಣ್ಮುಂದೆಯೇ ಸ್ಪಂದನಾ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತೆಯರ ಜೊತೆ ಬ್ಯಾಂಕಾಕ್ಗೆ ತೆರಳಿದ್ದ ಸ್ಪಂದನಾ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿನಾ ನಮ್ಮಗಳ ಕೈಯಲ್ಲೇ ಈ ಕ್ಷಣಕ್ಕೂ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಅಂತದ್ರಲ್ಲಿ ನಟ ವಿಜಯ ರಾಘವೇಂದ್ರ ಅದ್ಹೇಗೆ ಪತ್ನಿಯ ಅಗಲಿಕೆಯನ್ನ ಒಪ್ಪಿಕೊಳ್ಳುತ್ತಾರೋ ಏನೋ ಗೊತ್ತಿಲ್ಲ.
ವಿಜಯ್ ನಮ್ಮ ಪತ್ನಿಯನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಚಿನ್ನಾ.. ಚಿನ್ನಾ.. ಚಿನ್ನಾ ಅಂತ ಬಾಯ್ತುಂಬ ಕರೆಯುತ್ತಿದ್ದರು. ನನ್ನ ಜೀವ, ಜೀವನ ಎಲ್ಲವೂ ನೀನೆ. ನನ್ನ ಬಾಳು ಇಷ್ಟೊಂದು ಸುಂದರವಾಗಲಿಕ್ಕೆ ಕಾರಣಾನೇ ನೀನು ಮತ್ತು ನಿನ್ನ ನಗು. ನನ್ನ ಬಾಳಲ್ಲಿ ನೀನಿರುವಾಗ ಮತ್ತೇನು ಬಯಸಲಿ ನಾನು. ನಿನ್ನ ಪ್ರೀತಿ ಹೊರೆತು ಮತ್ತೇನು ಬೇಕಾಗಿಲ್ಲ ನಂಗೆ. ನೀನೊಬ್ಬಳು ನನ್ನ ಜೊತೆ ಇರು ಚಿನ್ನಾ ಅಂತ ಪತ್ನಿ ಮುಂದೆ ಹೇಳಿಕೊಳ್ಳುತ್ತಿದ್ದರು. ಬಹುಷಃ ಇವರಿಬ್ಬರ ಪ್ರೀತಿಯನ್ನ ನೋಡಿ ಆ ಭಗವಂತನಿಗೆ ಸಹಿಸಿಕೊಳ್ಳೋದಕ್ಕೆ ಆಗಲಿಲ್ಲ ಅನ್ಸುತ್ತೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಬದುಕುತ್ತಿದ್ದ ವಿಜಯ್-ಸ್ಪಂದನ ಸಂಸಾರವನ್ನ ನೋಡಿ ಆ ವಿಧಿಗೂ ಹೊಟ್ಟೆ ಕಿಚ್ಚಾಯ್ತು ಅನ್ಸುತ್ತೆ. ಹೀಗಾಗಿನೇ ಚಿನ್ನಾರಿ ಮುತ್ತನ ಪ್ರೀತಿನಾ, ನಗುನಾ ಕಿತ್ಕೊಂಡಬಿಟ್ಟ. ವಿಜಯ್ ಬಾಳಲ್ಲಿ ಕತ್ತಲೆ ಆವರಿಸುವಂತೆ ಮಾಡಿಬಿಟ್ಟ.
ಅಷ್ಟಕ್ಕೂ, ಈ ರಾಮ-ಸೀತೆಯಂತಿದ್ದ ದಂಪತಿಗಳನ್ನ ದೂರ ಮಾಡಿದ್ರಿಂದ ಆ ದೇವರಿಗೇನು ಸಿಗುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ, ಸ್ವತಃ ಭಗವಂತನದ್ದು ಪಾಪದ ಕೊಡವಂತೂ ತುಂಬುತ್ತೆ. ವಿಜಯ್-ಸ್ಪಂದನ ಮುದ್ದಿನ ಮಗನ ಹಿಡಿಶಾಪವೂ ಆ ಭಗವಂತನಿಗೆ ತಟ್ಟುತ್ತೆ. ಯಸ್, ವಿಜಯ್ ಹಾಗೂ ಸ್ಪಂದನಾಗೆ ಒಬ್ಬನೇ ಒಬ್ಬ ಮಗ ಇದ್ದಾನೆ. ನಟ ಚಿನ್ನಾರಿ ಮುತ್ತನ ಪಾಲಿಗೆ ಮಗ ಒಂದು ಕಣ್ಣಾದರೆ, ಪತ್ನಿ ಇನ್ನೊಂದು ಕಣ್ಣಾಗಿದ್ದರು. ಹೀಗ ಅದರಲ್ಲಿ ಒಂದು ಕಣ್ಣನ್ನ ವಿಜಯ್ ಕಳೆದುಕೊಂಡಿದ್ದಾರೆ. ಸದ್ಯಕ್ಕೆ ಅವರ ಪರಿಸ್ಥಿತಿ ಹೇಗಿರುತ್ತೆ ಅಂತ ಊಹಿಸಿಕೊಳ್ಳೋದಕ್ಕೂ ಅಸಾಧ್ಯ. ಇಂತಹದ್ದೊಂದು ಕ್ಷಣ ಯಾವ ಶತ್ರುಗೂ ಬರಬಾರದು.
ಅಂದ್ಹಾಗೇ, ಇದೇ ತಿಂಗಳಲ್ಲಿ ಚಿನ್ನಾರಿ ಮುತ್ತ ಹಾಗೂ ಸ್ಪಂದನಾ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಬೇಕಿತ್ತು. ಆಗಸ್ಟ್ 26ಕ್ಕೆ ಇವರಿಬ್ಬರು ಮದುವೆಯಾಗಿ 16 ವರ್ಷಗಳು ಕಳೆಯುತ್ತಿದ್ದವು. ಆದರೆ, ಆ ದಿನ ಬರುವ ಮೊದಲೇ ಸತಿಪತಿಗಳನ್ನ ಆ ಕ್ರೂರ ವಿಧಿ ದೂರ ಮಾಡ್ಬಿಟ್ಟಿದ್ದಾನೆ. ಜೀವನದಲ್ಲಿ ಜಗಳ ಆಡದೇ, ಕೋಪ ಮಾಡಿಕೊಳ್ಳದೇ, ಪರಸ್ಪರ ಅರ್ಥ ಮಾಡ್ಕೊಂಡು ಸಂತೋಷದಿಂದ ಜೀವನ ಮಾಡುತ್ತಿದ್ದ ಚಿನ್ನಾರಿ ಮುತ್ತನ ಸಂಸಾರವನ್ನ ಆ ಜವರಾಯ ಹೊಡೆದುರುಳಿಸಿದ್ದಾನೆ. ಅವತ್ತು ಪುನೀತ್ ಪರಮಾತ್ಮ ಅಂತ ಗೊತ್ತಿಲ್ಲದೇ ಅಪ್ಪುನಾ ಕಿತ್ಕೊಂಡ. ಇವತ್ತು ಸ್ಪಂದನಾ ದೇವತೆ ಅನ್ನೋ ವಿಚಾರ ಗೊತ್ತಿಲ್ಲದೇ ಕಿತ್ಕೊಂಡಿದ್ದಾನೆ. ಮುಂದೊಂದು ದಿನ ಅದಕ್ಕೆ ಸ್ವತಃ ವಿಧಿ ಹಾಗೂ ದೇವರೇ ಪಶ್ಚತಾಪ ಪಡುವಂತಹ ಸಮಯ ಬರುತ್ತೆ. ಅಲ್ಲಿವರೆಗೂ ಹಿಡಿಶಾಪ ಹಾಕುತ್ತಲೇ ಇರೋಣ ನಾವೆಲ್ಲ.
ಇನ್ನೊಂದು ವಿಚಾರ ಈ ಕ್ಷಣ ಹೇಳಲೆಬೇಕು. `ದೇವರ ವರವೋ ಪುಣ್ಯದ ಫಲವೋ ಕಾಣೆನು ನಿನ್ನ ನಾ ಪಡೆದೆನು’ ಹೀಗಂತ ವಿಜಯ್ ತಮ್ಮ ಪತ್ನಿ ಸ್ಪಂದನಾಗೆ 2021ರ ವರ್ಷ ವೆಡ್ಡಿಂಗ್ ಆ್ಯನಿವರ್ಸರಿ ದಿನ ಹೇಳಿದ್ದರು. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿ ಒಂದು ಫೋಟೋ ಹಂಚಿಕೊಂಡಿದ್ರು. ಅದ್ರಲ್ಲಿ `ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ ಜೀವನ ಸಾಗದು’ ಹೀಗೊಂದು ಕ್ಯಾಪ್ಶನ್ ಬರೆದಿದ್ರು. ಆದರೆ ಈಗ ವಿಧಿಯಾಟಕ್ಕೆ ಸಿಕ್ಕಿ ಸ್ಪಂದನಾ ಬದುಕು ಮುಗಿಸಿದ್ದು ರಾಘು ಒಬ್ಬಂಟಿಯಾಗಿದ್ದಾರೆ. ಪತ್ನಿಯ ಮೃತದೇಹ ತರಲು ಫ್ಲೈಟ್ ಏರಿ ಬ್ಯಾಂಕಾಕ್ಗೆ ತೆರಳಿದ್ದಾರೆ. ಇಂದು ಸಂಜೆ ಅಷ್ಟರಲ್ಲಿ ಸ್ಪಂದನಾ ಪಾರ್ಥೀವ ಶರೀರ ಬೆಂಗಳೂರಿಗೆ ಬರಲಿದ್ದು, ನಾಳೆ ಅಂತ್ಯಸಂಸ್ಕಾರ ನಡೆಯಲಿದೆ.