Jr.NTR: ಟಾಲಿವುಡ್ ಸಿನಿದುನಿಯಾದ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿನ ಮ್ಯಾನ್ ಆಫ್ ಮಾಸಸ್ Jr.NTRಗಿಂದು ಹುಟ್ಟುಹಬ್ಬದ ಸಂಭ್ರಮ. ನೆಚ್ಚಿನ ನಟನ ಬರ್ತ್ ಡೇ ಅಭಿಮಾನಿಗಳ ಮನದಲ್ಲೂ ಸಂಭ್ರಮ ತಂದಿದೆ. ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದು, ದೇವರ ಮೊದಲ ಹಾಡು ಹಾಗೂ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಅಪ್ಡೇಟ್.
‘ಆರ್ಆರ್ಆರ್’ ಸಿನಿಮಾ ಮೂಲಕ ಟಾಲಿವುಡ್ ಅಂಗಳದ ತಾರಕ್ ಖ್ಯಾತಿ ವರ್ಲ್ಡ್ ವೈಡ್ ಹಬ್ಬಿದೆ. ಅಭಿಮಾನಿ ಗಣವೂ ದೊಡ್ಡದಾಗಿದೆ. ಮಾಸ್ ನಟನ ಮಾಸ್ ಸಬ್ಜೆಕ್ಟ್ ಚಿತ್ರ ದೇವರ ಮೇಲೂ ನಿರೀಕ್ಷೆ ಹೆಚ್ಚಿದೆ. ಸಿನಿಜಗತ್ತು ಕೂಡ ಈ ಸಿನಿಮಾ ಮೇಲೆ ಕೌತುಕದ ಕಣ್ಣಿಟ್ಟಿದೆ. ಇದೀಗ ಸಿನಿಮಾದ ಮೊದಲ ಹಾಡು ಕೇಳಿ, ಸಿನಿಮಾದ ಒಂದಿಷ್ಟು ಗ್ಲಿಂಪ್ಸ್ ನೋಡಿ ಥ್ರಿಲ್ ಆಗಿರೋ ಟಿಟೌನ್ ಪಂಡಿತರು ಸಿನಿಮಾ ಸಕ್ಸಸ್ ಬಗ್ಗೆ ಈಗಲೇ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ.
ದೇವರ ಹಾಡಿಗಾಗಿ ಚಾತಕ ಪಕ್ಷಿಯಂತೆ ಕಾದಿತ್ತು ತಾರಕ್ ಮಾಸ್ ಫ್ಯಾನ್ಸ್. ದೇವರ ಕಾಲರ್ ಎತ್ಕ್ಕೊಂಡು ನೋಡೋ ಸಿನಿಮಾ ಎಂದು ಜೂ.NTR ಭಾಷೆ ಕೊಟ್ಟ ಮೇಲಂತೂ ಇನ್ನಿಲ್ಲದ ಕ್ರೇಜ಼್ ಸೃಷ್ಟಿಯಾಗಿತ್ತು. ಭಕ್ತಗಣದ ಬೇಡಿಕೆಯಂತೆ ಒಂದು ದಿನ ಮುಂಚಿತವಾಗಿಯೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಅನಿರುದ್ದ್ ರವಿಚಂದ್ರನ್ ಮಾಸ್ ಮ್ಯೂಸಿಕ್ ಮ್ಯಾಜಿಕ್ನಲ್ಲಿ ಮೂಡಿ ಬಂದ ಫಿಯರ್ ಸಾಂಗ್ ಲಕ್ಷಗಟ್ಟಲೇ ವೀವ್ಸ್ ಪಡೆಯುತ್ತ ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿದೆ. ಫಿಯರ್ ಸಾಂಗ್ ರಿಧಮ್, ಬೀಟ್ಸ್, ಮ್ಯೂಸಿಕ್ಗೆ ನಶೆ ಏರಿಸಿಕೊಂಡು ರಿಪೀಟ್ ಮೂಡ್ನಲ್ಲಿ ಕೇಳುತ್ತಾ ಕಿಕ್ಕೇರಿಸಿಕೊಂಡಿದ್ದಾರೆ ಟೈಗರ್ ಫ್ಯಾನ್ಸ್.
ಒಂದ್ ಕಡೆ ಫಿಯರ್ ಸಾಂಗ್ ಕಿಕ್ಕಾದ್ರೆ ಇನ್ನೊಂದು ಕಡೆ ಹೊಸ ಸಿನಿಮಾದ ಅಪ್ಡೇಟ್ ತಾರಕ್ ಅಭಿಮಾನಿಗಳ ಹರುಷೋದ್ಘಾರವನ್ನು ದುಪ್ಪಟ್ಟು ಮಾಡಿದೆ. ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್, ಮ್ಯಾನ್ ಆಫ್ ಸಿನಿಮಾ ಯಾವಾಗ ಎನ್ನುವುದೇ ಭಕ್ತಗಣದ ಮಿಲಯನ್ ಡಾಲರ್ ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ತಾರಕ್ ಹುಟ್ಟುಹಬ್ಬದ ದಿನವೇ ಉತ್ತರ ಸಿಕ್ಕಿದೆ. ಸೂಪರ್ ಹಿಟ್ ಕಾಂಬೋ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡುತ್ತಿದ್ದು, ಆಗಸ್ಟ್ನಲ್ಲಿ ಪವರ್ ಫುಲ್ ಪ್ರಾಜೆಕ್ಟ್ ಚಿತ್ರೀಕರಣ ಆರಂಭವಾಗಲಿದೆ. ಒಂದೇ ದಿನ ನೆಚ್ಚಿನ ನಟನಿಂದ ಎರಡೆರಡು ಜಾಕ್ ಪಾಟ್ ಸುದ್ದಿ ಸಿಕ್ಕ ಖುಷಿಯಲ್ಲಿದೆ ಅಭಿಮಾನಿ ವೃಂದ.