ಕೊರೋನಾ ಸಮಯದಲ್ಲಿ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಹಾಗೆ ಡ್ರಗ್ಸ್ ವಿರುದ್ಧ ಸಮರ ಸಾರಿದ್ದ ಸಿಸಿಬಿ ಅಧಿಕಾರಿಗಳು ಈವತ್ತಿಗೂ ಡ್ರಗ್ಸ್ ದಂಧೆಕೋರರ ಬೇಟೆಯನ್ನು ಮುಂದುವರೆಸಿದ್ದಾರೆ. ಅಷ್ಟಕ್ಕೂ ಖಡಕ್ ಪೊಲೀಸ್ ಅಧಿಕಾರಿಗಳು ಬಗೆದು ಹೊರಗಿಟ್ಟಿರೋದು ಅಂತಿಂಥಾ ಮಾಫಿಯಾವನ್ನಲ್ಲ. ಅದು ಒಂದಿಡೀ ಕರ್ನಾಟಕವನ್ನೇ ಅಪಾದಮಸ್ತಕ ಆವರಿಸಿಕೊಂಡಿರೋ ಭೀಕರ ನಶೆಯ ಕಿಸುರು. ಈ ಸಿನಿಮಾ ರಂಗದ ಮಂದಿ ಡ್ರಗ್ಸ್ ಕೇಸಲ್ಲಿ ಬಂಧಿಯಾಗೋದೆಲ್ಲ ಒಟ್ಟಾರೆ ನಶೆಯ ಒಂದು ಮುಖ ಮಾತ್ರ. ಸಿನಿಮಾ ರಂಗದ ಝಗಮಗದಾಚೆಗೆ ಹಬ್ಬಿಕೊಂಡಿರೋ ನಶೆಯ ವಿಷಯ ಯಾರೇ ಆದರೂ ಗಾಬರಿ ಬೀಳುವಂತಿದೆ. ಅದು ಕಾರ್ಯ ನಿರ್ವಹಿಸುತ್ತಿರೋ ಪರಿ ಕಂಡರೆ ಎಂಥವರೂ ಬೆಚ್ಚಿ ಬೀಳೋದು ಗ್ಯಾರೆಂಟಿ!
ಗಾಂಜಾ ಮಾಫಿಯಾ ಕರ್ನಾಟಕಕ್ಕೆ ಕಾಲಿಟ್ಟಿರೋದೇನು ಇಂದು ನಿನ್ನೆಯಲ್ಲ. ಅದ್ಯಾರದ್ದೋ ನರನಾಡಿಗಳಲ್ಲಿ ಹಬ್ಬಿಕೊಂಡು ಹಬೆಯಾಡೋ ನಶೆಗಿಲ್ಲಿ ಭದ್ರವಾದ ಬೇರುಗಳಿವೆ. ಅದಕ್ಕೆ ಈ ನೆಲದ ಕ್ಷುದ್ರ ರಾಜಕಾರಣ, ಹಣದ ಮದಗಳೆಲ್ಲವೂ ಸೊಂಪಾಗಿ ನೀರುಣಿಸಿ ಪೋಶಿಸುತ್ತಲೇ ಬಂದಿವೆ. ಅದಿಲ್ಲದೇ ಹೋಗಿದ್ದರೆ ಮಂಗಳೂರು ಸೀಮೆಯ ಹುಡುಗಿಯ ಕಳೇಬರದಲ್ಲಿ ಗಾಂಜಾ ಘಾಟು ಹೊಮ್ಮುತ್ತಿರಲಿಲ್ಲ. ಎಳೇ ಜೀವಗಳೆಷ್ಟೋ ದಾರುಣ ಸಾವು ಸಾಯಬೇಕಿರಲಿಲ್ಲ. ಅದೆಷ್ಟೋ ಕುಟುಂಬಗಳಲ್ಲಿ ಶಾಶ್ವತ ದುಃಖ ಬಿಡಾರ ಹೂಡುತ್ತಲೂ ಇರಲಿಲ್ಲ. ನಿಮಗೆ ಅಚ್ಚರಿಯಾಗಬಹುದೇನೋ… ಈವತ್ತಿಗೆ ಈ ಡ್ರಗ್ಸ್ ಮಾಫಿಯಾ ಅನ್ನೋದು ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರೆ, ಹಳೇ ಗ್ರಾಹಕರನ್ನು ನಾನಾ ನಶೆ ಹಂಚುತ್ತಾ ತೃಪ್ತಿ ಪಡಿಸುತ್ತಲೇ, ಇತ್ತ ಹೊಸಾ ಗ್ರಾಹಕರನ್ನೂ ಕೂಡಾ ಅತ್ಯಂತ ವ್ಯವಸ್ಥಿತವಾಗಿ ಸೃಷ್ಟಿಸಿಕೊಳ್ಳುತ್ತಿದೆ. ಅದರ ಸಂಪೂರ್ಣ ರೂಪುರೇಷೆಗಳನನು ನೋಡಿ ಖುದ್ದು ಹಿರಿಯ ಅಧಿಕಾರಿಗಳೇ ಕಂಗಾಲಾಗಿ ಹೋಗಿದ್ದಾರೆ!
ಭೀಕರ ಮುಖ
ಈವತ್ತಿಗೆ ಹೈಫೈ ಜನರನ್ನೆಲ್ಲ ನಶೆಯ ದಾಸರನ್ನಾಗಿಸುತ್ತಿರೋದು ಇಂಥಾ ಲಗಾಮಿಲ್ಲದ ಲೈಫ್‌ಸ್ಟೈಲ್ ಅಲ್ಲದೇ ಬೇರೇನಲ್ಲ. ಇಂದು ನಶೆಯ ಫೋಕಸ್ಸು ಸಿನಿಮಾ ರಂಗದ ಮೇಲಿದೆ. ಈ ಸುದ್ದಿಗಳನ್ನ ನೋಡಿದವ್ರು `ಹೇ ಬಿಡ್ರೀ ಅದೆಲ್ಲ ಕಾಸಿರೋ ಬಡ್ಡೀಮಕ್ಳ ಶೋಕಿ’ ಅಂದ್ಕೋಬಹುದು. ಆದ್ರೆ ನಶೆಯ ಪರಿಧಿ ಅಷ್ಟೊಂದು ಚಿಕ್ಕದಲ್ಲ. ಅದು ಅಷ್ಟು ಸಲೀಸಾದದ್ದೂ ಅಲ್ಲ. ನಿಜ ಹೇಳ್ಬೇಕಂದ್ರೆ ನಶೆಯ ನೈಜ ದುರಂತಗಳಿರೋದೇ ಇಂಥಾ ಹೈ ಫೈ ಸರಹದ್ದಿನಾಚೆ. ನಶೆಯ ಆ ಮುಖವಿದೆಯಲ್ಲಾ? ಅದು ನಿಜಕ್ಕೂ ಭೀಕರ… ಸಾಮಾನ್ಯವಾಗಿ ಪಬ್ಬುಗಳಲ್ಲಿ ಕುಣಿಯುವ, ಪಾರ್ಟಿಗಳಲ್ಲಿ ಕೆನೆಯುವ ಮಂದಿ ಮಾತ್ರವೇ ಇಂಥಾ ಡ್ರಗ್ಸ್ ಚಟಗಳನ್ನು ಅಚಿಟಿಸಿಕೊಳ್ಳುತ್ತಾರೆಂಬಂಥಾ ನಂಬಿಕೆ ಇದೆ. ಆದರೆ ವಾಸ್ತವ ಮಾತ್ರ ಅದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿರೋದು ಸುಳ್ಳಲ್ಲ.
ದಶಕಗಳಷ್ಟು ಹಿಂದೆ ಮಂಗಳೂರಿನ ವಿದ್ಯಾರ್ಥಿನಿಯೊಬ್ಳು ಆತ್ಮಹತ್ಯೆ ಮಾಡ್ಕೋತಾಳೆ. ಅದ್ರ ಜಾಡು ಹಿಡಿದು ಹೊರಟ ಪೊಲೀಸರು ಹೊರ ಹಾಕಿದ್ದ ಒಂದೊಂದು ಮಾಹಿತಿಯೂ ಎದೆ ಅದುರಿಸುವಂತಿತ್ತು. ಆಕೆ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದ ಹುಡುಗಿ. ಗಾಂಜಾ, ಅಫೀಮು ಹಾಳು ಬಿದ್ದುಹೋಗ್ಲಿ, ಸಿಗರೇಟು ಬೀಡಿಯ ಘಾಟೂ ಕೂಡಾ ಉಸಿರುಗಟ್ಟಿಸುವಂಥಾ ಮಡಿವಂತಿಕೆಯ ಕುಟುಂಬವದು. ಅಂಥಾ ಹಿನ್ನೆಲೆಯ ಆ ಹುಡುಗಿಯನ್ನ ಬಲಿ ಪಡೆದುಕೊಂಡಿದ್ದದ್ದು ಡ್ರಗ್ಸ್ ಚಟ. ಆ ಕಾಲಕ್ಕೆ ಈ ಹುಡುಗಿ ಇಂಥಾ ಚಟ ಅಂಟಿಸಿಕೊಂಡಿದ್ದನ್ನು ಕಂಡು ಬಹುತೇಕ ಎಲ್ಲರೂ ಬೆಚ್ಚಿ ಬಿದ್ದಿದ್ದರು. ತೀರಾ ಮರ್ಯಾದಸ್ಥ, ಸಂಪ್ರದಾಯಸ್ಥ ಕುಟುಂಬದ ಹುಡುಗಿಯೊಬ್ಬಳು ಇಂಥಾ ದುರಂತ ಮಾಡಿಕೊಂಡಳೆಂದರೆ ಯಾರಿಗಾದರೂ ಶಾಕ್ ಆಗದಿರಲು ಸಾಧ್ಯವೇ?
ಈ ವಿಚಾರ ಯಾರಲ್ಲೇ ಆದ್ರೂ ಭಯ ಹುಟ್ಟಿಸದಿರೋಕೆ ಸಾಧ್ಯಾನ? ಹಾಗಾದ್ರೆ ಒಂದು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಆಕೆಯ ಕೈಗೆ ಹೇಗೆ ಡ್ರಗ್ಸ್ ಸಿಕ್ತು? ಆ ಪಾಪದ ಹುಡುಗಿ ಅದು ಹೇಗೆ ನಶೆಗೆ ವಶವಾದಳು? ದಕ್ಷಿಣಕನ್ನಡದ ಮೂಲೆಯೊಂದಕ್ಕೆ ನಶೆಯ ರಕ್ಕಸ ಪಾದಗಳು ಅಡಿಯಿರಿಸಿದ್ದು ಹೇಗೆ? ಇಷ್ಟೆಲ್ಲ ಪ್ರಶ್ನೆಗಳು ಆಕೆಯ ಸಾವಿನ ಸೂತಕದಲ್ಲಿಯೇ ಕಳೆದುಹೋಗಿ ಬಿಟ್ಟಿದ್ವು. ಗಮನಿಸಲೇ ಬೇಕಾದ ವಿಚಾರವೆಂದರೆ, ಇಷ್ಟೊಂದು ಗಂಭೀರವಾದ ವಿಚಾರದ ಬಗ್ಗೆ ಹೆಚ್ಚು ಕಾಲ ಸುದ್ದಿಯಾಗದಂತೆಯೂ ಕೂಡಾ ಇದೇ ಮಾಫಿಯಾ ನೋಡಿಕೊಂಡಿತ್ತು. ಈವತ್ತಿಗೂ ಕೂಡಾ ಇಂಥಾದ್ದೊಂದು ಭಯಾನಕ ಸಂಚುಗಳನ್ನು ಮಾಡುತ್ತಲೇ ಈ ದಂಧೆ ಚಾಲ್ತಿಯಲ್ಲಿದೆ.
ನಶೆಯ ಜಾಡು ನಿಗೂಢ!
ಡ್ರಗ್ಸ್ ಮಾಫಿಯಾ ಶಾಲಾ ಕಾಲೇಜು ಹುಡುಗ ಹುಡುಗೀರನ್ನೇ ಟಾರ್ಗೆಟ್ ಮಾಡಿಕೊಂಡಿವೆ. ಅದು ಆ ದಂಧೆಯ ತಳಹದಿಯೂ ಹೌದು. ಅದಕ್ಕೆ ಈಗಾಗಲೇ ಕರ್ನಾಟಕದಲ್ಲಿ ಒಂದಷ್ಟು ಬಲಿಗಳಾಗಿವೆ. ಅಂಥಾ ಸಾವುಗಳಾದಾಗ ನಶೆಯ ಹೆಜ್ಜೆ ಜಾಡು ಹಿಡಿದು ಅದರ ಬೇರುಗಳನ್ನೆಲ್ಲ ಕಿತ್ತು ಬಿಸಾಡಬಹುದಿತ್ತಲ್ಲಾ? ಯಾಕೆ ಈ ಹಿಂದೆ ಆದ ಬಲಿಗಳು ಈವತ್ತಿನಷ್ಟು ಸದ್ದು ಮಾಡಿಲ್ಲ? ಇಂಥಾ ಪ್ರಶ್ನೆಗಳಿಗೆಲ್ಲ ಉತ್ತರವೆಂಬುದು ನಶೆಯಷ್ಟೇ ನಿಗೂಢ. ಯಾಕಂದ್ರೆ ಅದೊಂದು ಮಾಫಿಯಾ. ಈವತ್ತು ಗಾಂಜಾ ವಿಚಾರವಾಗಿ ಬಾಯಿ ಬಡಿದುಕೊಳ್ತಿರೋ ಲಜ್ಜೆಗೇಡಿ ರಾಜಕಾರಣಿಗಳೇ ನಶೆಗೆ ನೆರಳಾಗಿದ್ದಾರನ್ನೋದು ಕಠೋರ ವಾಸ್ತವ. ಅದ್ಯಾವುದೋ ದೇಶಗಳಿಂದ ಸರಬರಾಜಾಗೋ ನಶೆಯ ಐಟಮ್ಮುಗಳು ಇಲ್ಲಿನವರ ಸಾಥ್ ಇಲ್ಲದೆ ಈ ಪರಿ ಹಬ್ಬೋದು ಅಸಾಧ್ಯ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥವಿದೆ. ಯಾಕಂದ್ರೆ ಅದೊಂದು ದೊಡ್ಡ ಮಟ್ಟದ ಉಧ್ಯಮದ ಸ್ವರೂಪ ಪಡೆದುಕೊಂಡಿದೆ.
ಈ ಗಾಂಜಾ, ಅಫೀಮು, ಹೆರಾಯಿನ್ನುಗಳದ್ದೊಂದು ವಿಕ್ಷಿಪ್ತ, ವಿಲಕ್ಷಣ ಲೋಕ. ಅದಕ್ಕೆ ವಶವಾದ ಮಂದಿ ಮೃಗದಂತಾಗೋದೂ ಇದೆ. ಸಿಗರೇಟು, ಬೀಡಿಯಂಥಾ ನಿಕೋಟಿನ್ ಐಟಮ್ಮುಗಳು ದೇಹದೊಳಗೊಂದು ಅಲಾರ್ಮ್ ಫಿಕ್ಸ್ ಮಾಡಿ ಬಿಟ್ಟಿರುತ್ವೆ. ಆದ್ರೆ ಅವು ಡ್ರಗ್ಸ್ ನಶೆಯ ಅಲಾರ್ಮ್‌ನಷ್ಟು ಸಲೀಸಾದದ್ದಲ್ಲ. ಗಾಂಜಾದಂಥ ನಶೆಗೆ ವಶವಾದವ್ರು ಆಯಾ ಕಾಲಕ್ಕದು ಸಿಗದಿದ್ರೆ ಸತ್ತೇ ಹೋಗುವಷ್ಟು ಚಡಪಡಿಸ್ತಾರೆ. ಆ ಸಂದರ್ಭದಲ್ಲವರು ಗಲ್ಲಿ ಗಟಾರಗಳನ್ನೆಲ್ಲ ತಡಕಾಡ್ತಾರೆ. ಇದಕ್ಕೆ ತಕ್ಕುದಾಗಿಯೇ ಗಾಂಜಾ ಮಾಫಿಯಾ ಒಂದಷ್ಟು ವ್ಯವಸ್ಥೆಗಳನ್ನೂ ಮಾಡಿಕೊಂಡಿರುತ್ತೆ ಅನ್ನಲಾಗ್ತಿದೆ. ಬೆಂಗಳೂರಿನಂಥ ಮಹಾ ನಗರಗಳಲ್ಲಿ ಹುಚ್ಚರು, ನಿರ್ಗತಿಕರನ್ನ ಗಾಂಜಾ ಮಾರಾಟಗಾರರನ್ನಾಗಿ ತಯಾರು ಮಾಡಿರೋ ಗುಮಾನಿಗಳೂ ಇದ್ದಾವೆ. ಪೊಲೀಸ್ ಅಧಿಕಾರಿಗಳು ಇದರತ್ತಲೂ ಒಂದು ಕಣ್ಣಿಟ್ಟರೆ ನಶೆಯ ಒಂದಷ್ಟು ಬೇರುಗಳನ್ನಾದ್ರೂ ಕಿತ್ತೆಸೆಯೋದು ಸುಲಭವಾಗಬಹುದೇನೋ…
ಅಂಡರ್‌ವರ್ಲ್ಡ್ ಲಿಂಕ್!
ಯಾವುದೇ ಮಾಫಿಯಾ ಆದ್ರೂ ಆಯಾ ಪ್ರದೇಶಗಳ ಹಲಾಲು ದಂಧೆಕೋರರನ್ನೇ ಅಸ್ತ್ರವಾಗಿ ಬಳಸಿಕೊಳ್ಳೋದು ಮಾಮೂಲು. ಭಾರತಕ್ಕೆ ವಿದೇಶದಿಂದ ಬರೋ ಡ್ರಗ್ಸ್ ದಂಧೆಕೋರರು ಕೂಡಾ ಅದೇ ಫಾರ್ಮುಲಾವನ್ನೇ ಅನುಸರಿಸಿಕೊಂಡು ಬರ್‍ತಿದ್ದಾರೆ. ಅಂದಹಾಗೆ ಈವತ್ತಿಗೆ ದೇಶಾದ್ಯಂತ ಹಬ್ಬಿರೋ ಡ್ರಗ್ಸ್ ದಂಧೆಯ ಪಾಲಿಗೆ ಬಾಂಬೆ ಅನ್ನೋದು ಕರ್ಮಭೂಮಿಯಿದ್ದಂತೆ. ಬಾಂಬೆ ಇಂಡಿಯಾದ ಅತೀ ದೊಡ್ಡ ವಾಣಿಜ್ಯ ನಗರಿ. ಅದರ ಗರ್ಭದಲ್ಲಿರೋ ದಂಧೆ ದಗಲ್ಬಾಜಿಗಳೂ ಕೂಡಾ ಊಹಾತೀತ. ಆ ನಗರವನ್ನ ಈವತ್ತಿಗೂ ನಾನಾ ಬಗೆಯ ಭೂಗತ ಜೀವಿಗಳು ಆಳ್ತಿದ್ದಾರೆ. ಈ ಭೂಗತದಿಂದಲೇ ಅನೇಕಾನೇಕ ಸಮಾಜ ಬಾಹಿರ ದಂಧೆಗಳೂ ನಡೀತಿವೆ. ಆ ಒಂದಿಡೀ ಅಂಡರ್‌ವರ್ಲ್ಡ್‌ನ ವ್ಯವಹಾರ ವಹಿವಾಟು ನಿಂತಿರೋದೇ ಡ್ರಗ್ಸ್ ಮಾಫಿಯಾದ ಮೇಲೆ.
ಅಲ್ಲಿ ಡ್ರಗ್ಸ್ ದಂಧೆಯ ಕಾರಣಕ್ಕೇ ಗ್ಯಾಂಗ್ ವಾರ್‌ಗಳು ನಡಿಯುತ್ವೆ. ಮಾರಾಮಾರಿಗಳಾಗಿ ಹೆಣಗಳೂ ಉರುಳುತ್ವೆ. ಅಲ್ಲಿ ವೈಷಮ್ಯ, ಪ್ರತಿಷ್ಠೆ ಮುಂತಾದ ಯಾವ ಮುಖವಾಡಗಳಿದ್ರೂ ಅದರ ಹಿನ್ನೆಲೆಯಲ್ಲಿ ಡ್ರಗ್ಸ್ ವ್ಯವಹಾರವೇ ಇರುತ್ತೆ. ಹಾಗೆ ಮುಂಬೈ ಅಂಡರ್‌ವರ್ಲ್ಡ್ ಮೂಲಕವೇ ಭಾರತದ ಉದ್ದಗಲಕ್ಕೂ ನಶೆಯ ವಿಷ ಪ್ರವಹಿಸುತ್ತೆ. ದಕ್ಕೆ ಸಿನಿಮಾ ನಂಟು, ಹಸೀ ಹಾದರದ ಬೆಸುಗೆಯೂ ಬೆಸೆದುಕೊಳ್ಳುತ್ತೆ. ಇಂಥಾ ದಂಧೆಕೋರರ ಪಾಲಿಗೆ ಸಿನಿಮಾ ಜಗತ್ತಿನ ಮಂದಿ ಖಾಯಂ ಗಿರಾಕಿಗಳು. ಇಲ್ಲಿಂದಲೇ ನಟ ನಟಿಯರೊಂದಿಗೆ ನೇರಾನೇರ ಸಂಪರ್ಕ ಹೊಂದಿರೋ ಡ್ರಗ್ ಡೀಲರ್‌ಗಳು ಹುಟ್ಟಿಕೊಳ್ತಾರೆ. ಆ ಕಾಸಿನ ಬಲ ಯಾಪಾಟಿ ಇರುತ್ತಂದ್ರೆ ಅವರೇ ಸಿನಿಮಾ ನಿರ್ಮಾಣದಲ್ಲಿ ನಶೆಯ ಕಾಸು ಹೂಡಿ ದುಪ್ಪಟ್ಟಾಗಿ ಬಾಚಿಕೊಳ್ತಾರೆ.
ಇವಳ್ಯಾರೋ ನಟಿಯರ ಬಂಧನ ಡ್ರಗ್ಸ್ ಮಾಫಿಯಾದ ಒಂದು ಬಿಂದುವನ್ನೂ ಕದಲಿಸೋದಿಲ್ಲ. ಡ್ರಗ್ ಡೀಲರ್‍ಗಳು, ಪೆಡ್ಲರ್‌ಗಳನ್ನ ಹೆಡೆಮುರಿ ಕಟ್ಟಿದಂತೆಯೇ ಅದರ ಕಿಂಗ್‌ಪಿನ್‌ಗಳನ್ನ ಮಟ್ಟ ಹಾಕ್ಬೇಕಿದೆ. ನಶೆಯನ್ನೇ ಬಂಡವಾಳವಾಗಿಸ್ಕೊಂಡಿರೋ ಭೂಗತದ ಬೇರುಗಳನ್ನ ಕಿತ್ತೆಸೆಯದ ಹೊರತು ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಸಾಧ್ಯವಿಲ್ಲ. ಅದು ಸಾಧ್ಯವಾಗೋ ವರೆಗೂ ರಾಗಿಣಿಯಂಥವರು ಶೋಕಿಗೆ ಬಿದ್ದು ನಶೆಯಲ್ಲಿ ಮಿಂದೇಳ್ತಾರೆ. ಆ ಕಾಸಿಂದಲೇ ಡ್ರಗ್ಸ್ ಸಾಮ್ರಾಜ್ಯ ವಿಸ್ತಾರವಾಗುತ್ತೆ. ಅದು ನಾಡಿನ ಹಳ್ಳಿ ಹಳ್ಳಿಗೂ ವಿಸ್ತರಿಸಿ ಬಾಳಿ ಬದುಕ ಬೇಕಾದ ಎಳೇ ಜೀವಗಳನ್ನ ಬಲಿ ಹಾಕುತ್ತೆ. ರಾಜ್ಯ ಗಾಂಜಾ ಗಿರಾಕಿಗಳ ಗುಜರಿಯಂಗಡಿಯಂತಾಗೋ ಅಪಾಯವೂ ಇದೆ. ಅದೆಷ್ಟೋ ಕುಂಬಗಳನ್ನ ಕಣ್ಣೀರಲ್ಲಿ ಮುಳುಗಿಸುತ್ತೆ. ಸಹನೀಯ ಅಂಶ ಅಂದ್ರೆ ಕರ್ನಾಟಕದ ಖಾಕಿ ಪಡೆ ಈ ಮಾಫಿಯಾದ ಬೆಂಬಿದ್ದಿದೆ. ಕರ್ನಾಟಕ ಪೊಲೀಸ್ ಇಲಾಖೆ ಮನಸು ಮಾಡಿಡ್ರೆ ನಶಾ ಕಂಟಕದಿಂದ ಪಾರಾಗೋದೇನು ಕಷ್ಟವಲ್ಲ.
ಇಂಟರ್ ನ್ಯಾಷನಲ್ ಮಾಫಿಯಾ
ಈಗ ಎಲ್ಲಿ ನೋಡಿದ್ರೂ ಬರೀ ಡ್ರಗ್ಸ್‌ನದ್ದೇ ಸುದ್ದಿ. ಕರ್ನಾಟಕದಲ್ಲಿ ಅದ್ಯಾವ ಕಾಲದಿಂದ್ಲೋ ಹಬ್ಬಿಕೊಂಡಿದ್ದ ಡ್ರಗ್ಸ್ ದಂಧೆಯ ಬೇಸಿಗೇ ಈಗ ಬೆಂಕಿ ಬಿದ್ದಿದೆ. ಸಿಸಿಬಿ ಅಧಿಕಾರಿಗಳಂತೂ ಈ ಬಾರಿ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್‌ನ್ಯಾಷನಲ್ ಡ್ರಗ್ಸ್ ಮಾಫಿಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು.
ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್‌ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.
ಹಾಗೆ ಕಾನೂನು ಕಟ್ಟಳೆಗಳ ಕಣ್ತಪ್ಪಿಸಿ, ಘಟಾನುಘಟಿಗಳನ್ನೇ ಬಲೆಗೆ ಕೆಡವಿಕೊಂಡು ಈ ಮಾಫಿಯಾ ಬೆಳೆದು ನಿಂತಿದೆ. ಆ ಮಾಫಿಯಾ ಜಗತ್ತಿನಲ್ಲಿ ಚಾಣಾಕ್ಷತೆಯೇ ಬೆರಗಾಗುವಂಥಾ ಚಾಣಾಕ್ಷ ಡಾನ್‌ಗಳಿದ್ದಾರೆ. ಅಂಥಾ ಡಾನ್‌ಗಳಿಗೆಲ್ಲ ಕೌಟುಂಬಿಕವಾಗಿಯೇ ಸ್ಮಗ್ಲಿಂಗ್ ಹಿನ್ನೆಲೆಯಿರುತ್ತೆ. ಅಂಥವರಿಗೆ ಪೊಲೀಸ್, ಕಾನೂನು, ಕೋರ್ಟು, ಜೈಲುಗಳೆಲ್ಲವೂ ಲೆಕ್ಕಕ್ಕಿಲ್ಲ. ಯಾವ ಪೊಲೀಸರೂ ಅವರನ್ನು ತಹಬಂದಿಯಲ್ಲಿಡೋಕೆ ಈವರೆಗೂ ಸಾಧ್ಯವಾಗಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಓರ್ವ ಅಂತಾರಾಷ್ಟ್ರೀಯ ಡ್ರಗ್ಸ್ ಡಾನ್ ಒಬ್ಬನ ಕಥೆ. ಅದರಲ್ಲಿ ಅವನದ್ದೇ ಕಾಲಮಾನದಲ್ಲಿ ಘಟಿಸಿದ್ದ ಭೀಕರ ಗ್ಯಾಂಗ್ ವಾರ್ ಕೂಡಾ ಮಿಳಿತವಾಗಿದೆ.
ಆತ ಡ್ರಗ್ಸ್ ದಾನ್
ಆತ ಜೊವಾಕ್ವಿನ್ ಗುಜ್ಮಾನ್ ಲೋರಾ. ಇವನ ಹೆಸರು ಕೇಳಿದ್ರೇನೇ ಈವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವರ ಅಳ್ಳೆ ಅದುರುತ್ತೆ. ಈತ ಹುಟ್ಟಾ ಸ್ಮಗ್ಲರ್. ಈತ ಮೆಕ್ಸಿಕನ್ ಡ್ರಗ್ ಲಾರ್ಡ್. ಸಿನಾಲೋವಾ ಡ್ರಗ್ ಕಾರ್ಟಲ್‌ನ ಸಾರಥಿ. ಹೀಗಂದಾಕ್ಷಣ ಭಯಾನಕವಾದ ಆಕೃತಿಯೊಂದು ಯಾರ ಮನಸಲ್ಲಾದ್ರೂ ಮೊಳೆತುಕೊಳ್ಳುತ್ತೆ. ಅಷ್ಟಕ್ಕೂ ಆತನ ಪರಾಕ್ರಮಗಳೇ ಅಂಥಾದ್ದಿದೆ. ಆದರೆ ಈ ಆಸಾಮಿಯನ್ನು ಯಾರೂ ಕೂಡಾ ಆ ಆಕಾರದಲ್ಲಿ ಪತ್ತೆಹಚ್ಚೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ, ಆತ ಈ ಪಾಟಿ ನಟೋರಿಯಸ್ ಅಂತ ಅವನನ್ನ ನೋಡಿದ ಯಾರಿಗೇ ಆದ್ರೂ ಅನ್ನಿಸೋಕೆ ಸಾಧ್ಯಾನೇ ಇಲ್ಲ. ಐದೂವರೆ ಅಡಿಯ ಈತ ಓರ್ವ ಸಾದಾಸೀದಾ ಸಂಸಾರಸ್ಥನಂತೆಯೇ ಕಾಣಿಸ್ತಾನೆ. ಆದ್ರೆ ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆಗೇ ಚಳ್ಳೆಹಣ್ಣು ತಿನ್ನಿಸೋ ಈತನ ಲೀಲೆಗಳು ಮಾತ್ರ ಊಹಾತೀತ.
ಮೆಕ್ಸಿಕೋ ಮೂಲದ ಜೊವಾಕ್ವಿನ್ ಗುಜ್ಮಾನ್ ಲೋರಾ ಹುಟ್ಟಿದ್ದೇ ಸ್ಮಗ್ಲಿಂಗ್ ವಾತಾವರಣದಲ್ಲಿ. ಆತನ ಸಂಬಂಧಿಕನೋರ್ವ ಆ ಕಾಲದಲ್ಲಿಯೇ ಕುಖ್ಯಾತ ಡ್ರಗ್ ಡೀಲರ್ ಆಗಿದ್ದ. ಆತನ ಸಾಹಚರ್ಯದಲ್ಲಿ ಬೆಳೆದ ಜೊವಾಕ್ವಿನ್ ಆ ದಂಧೆಯಲ್ಲಿ ಎಳವೆಯಿಂದ್ಲೇ ಪಳಗಲಾರಂಭಿಸಿದ್ದ. ನಂತರ ಆ ಸಂಬಂಧಿಕ ಈ ದಂಧೆ ತೊರೆದಾಗ ಅದರ ಸಾರಥ್ಯ ವಹಿಸಿಕೊಂಡಿದ್ದವನು ಜೊವಾಕ್ವಿನ್. ಆ ನಂತರದ್ದೆಲ್ಲವೂ ರೋಚಕ ಕಥನ. ಈತ ನೋಡ ನೋಡ್ತಿದ್ದಂತೆಯೇ ಸಿನಾಲೋವಾ ಡ್ರಗ್ ಕಾರ್ಟಲ್‌ನ ನಾಯಕನಾಗಿ ಬೆಳೆದ. ಈವತ್ತಿಗೂ ಯುನೈಟೆಡ್ ಸ್ಟೇಟ್ಸ್‌ಗೆ ಭಾರೀ ಮೊತ್ತದ ಡ್ರಗ್ಸ್ ಸಪ್ಲೈ ಆಗುತ್ತೆ. ಅದೆಲ್ಲವನ್ನೂ ಕೂಡಾ ಜೊವಾಕ್ವಿನ್ ಆಪರೇಟ್ ಮಾಡ್ತಾನೆ. ಆತ ನಡೆದು ಬಂದಿರೋ ಹೆಜ್ಜೆ ಜಾಡೇ ರೋಚಕ. ಜೊವಾಕ್ವಿನ್ ಭಯಾನಕವಾದ ಪ್ರತಿರೋಧಗಳನ್ನ ಹಿಮ್ಮೆಟ್ಟಿಸಿಕೊಂಡೇ ಬೆಳೆದು ನಿಂತಿದ್ದ.
ಮೆಕ್ಸಿಕನ್ ಡ್ರಗ್ಸ್ ಕಾರ್ಟಲ್
ಮೆಕ್ಸಿಕನ್ ಪ್ರದೇಶದಲ್ಲಿ ಇತ್ತೀಚಿನ ದಶಕಗಳಲ್ಲಿ ಹಲವಾರು ಡ್ರಗ್ ಕಾರ್ಟಲ್‌ಗಳು ಹುಟ್ಟಿಕೊಂಡಿದ್ವು. ಅದರ ಒಂದೊಂದು ಕಾರ್ಟಲ್ ಅನ್ನೂ ಒಬ್ಬೊಬ್ಬ ಡಾನ್ ಆಳುತ್ತಿದ್ದ. ಆದ್ರೆ ಯಾರೂ ಕೂಡಾ ಜೊವಾಕ್ವಿನ್‌ನನ್ನು ಹಿಮ್ಮೆಟ್ಟಿಸೋಕೆ ಸಾಧ್ಯವಾಗಿರ್‍ಲಿಲ್ಲ. ಇದೇ ಹೊತ್ತಿನಲ್ಲಿ ೨೦೦೬ರಲ್ಲಿ ಜೊವಾಕ್ವಿನ್ ಇಷಾರೆಯಂತೆ ಒಂದು ಕಾರ್ಟಲ್ ಮುಖ್ಯಸ್ಥನ ಹೆಣ ಉರುಳಿಸಲಾಗಿತ್ತು. ಅದುವೇ ಡ್ರಗ್ ಕಾರ್ಟಲ್‌ಗಳ ಮಹಾ ಕದನಕ್ಕೆ ನಾಂದಿ ಹಾಡಿತ್ತು. ಆ ಕದನದಲ್ಲಿ ಅಂದಾಜು ಅರವತ್ತು ಸಾವಿರದಷ್ಟು ಮಂದಿ ಸತ್ತು ಬಿದ್ದಿದ್ರು.
ಇದೊಂದು ಸಂಗ್ರಾಮದಿಂದಲೇ ಜೊವಾಕ್ವಿನ್ ಮತ್ತಷ್ಟು ವರ್ಷಸ್ಸು ಬೆಳೆಸಿಕೊಂಡಿದ್ದ. ಅತೀ ಶ್ರೀಮಂತ ಡ್ರಗ್ ಡಾನ್ ಆಗಿಯೂ ಹೆಸರುವಾಸಿಯಾದ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿದ್ದ ಅಂದ ಮೇಲೆ ಅವನ ಮೇಲೆ ಭದ್ರತಾ ಪಡೆಗಳ ಕಣ್ಣು ಬೀಳದಿರಲು ಸಾಧ್ಯವೇ? ಆದ್ರೆ ಜೊವಾಕ್ವಿನ್‌ನನ್ನು ಬಂಧಿಸೋದು ಅಷ್ಟು ಸಲೀಸಿನ ಸಂಗತಿಯಾಗಿರ್‍ಲಿಲ್ಲ. ಯಾಕಂದ್ರೆ ಅವನ್ ಅಂಥಾ ಪ್ರಳಯಾಂತಕ. ೧೯೯೩ ರಿಂದ ೨೦೦೧ರ ವರೆಗೂ ಹಲವಾರು ಬಾರಿ ಬಂಧಿಸೋ ಪ್ರಯತ್ನಗಳು ನಡೆದಿದ್ವಾದ್ರೂ ಅದು ಸಾಧ್ಯವಾಗಿರ್‍ಲಿಲ್ಲ. ಕಡೆಗೂ ಒಂದು ಸಲ ಆತನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಇನ್ನು ಈ ಡ್ರಗ್ಸ್ ಡಾನ್‌ನ ಯುಗಾಂತ್ಯವಾಯ್ತೆಂದೇ ಸುದ್ದಿಯಾಗಿತ್ತು. ವಿರೋಧಿ ಡ್ರಗ್ಸ್ ಕಾರ್ಟಲ್‌ಗಳು ಖುಷಿಯಿಂದ ಕೇಕೆ ಹಾಕಿದ್ವು. ಆದ್ರೆ ಜೊವಾಕ್ವಿನ್ ಆ ಖುಷಿಯನ್ನ ಹೆಚ್ಚು ಕಾಲ ಬದುಕಲು ಬಿಡಲಿಲ್ಲ.
ಭದ್ರತಾ ಪಡೆಗಳಿಗೇ ಆತ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಕಡೆಗೂ ಆತನನ್ನ ೨೦೧೫ರ ಫೆಬ್ರವರಿ ೨೨ ರಂದು ಬಂಧಿಸಲಾಗಿತ್ತು. ಆಗಂತೂ ಭದ್ರತಾ ಪಡೆಗಳು ಆತನನ್ನು ಮಿಸುಕದಂತೆ ನೋಡಿಕೊಂಡು ಜೈಲಲ್ಲಿಟ್ಟಿದ್ರು. ಅದು ಅತ್ಯಂತ ಬಿಗುವಿನಮ ಸೆಕ್ಯೂರಿಟಿ ಇದ್ದ ಜೈಲು. ಜೊವಾಕ್ವಿನ್ ಮಿಸುಕಾಡಲೂ ಸಾಧ್ಯವಿರಲಿಲ್ಲ. ಆತ ಎಂಥಾ ಪ್ರಳಯಾಂತಕ ಅಂದ್ರೆ ಶವರ್ ಅಡಿಯಲ್ಲಿದ್ದ ಪುಟ್ಟ ಕಿಟಕಿಯನ್ನೇ ದೊಡ್ಡದಾಗಿ ಕೊರೆದು ಪರಾರಿಯಾಗಿದ್ದ.
ಹೀಗೆ ಯಾರ ಅಂಕೆಗೂ ಸಿಗದ ಈತನಿಗೀಗ ಅರವತ್ಮೂರು ವರ್ಷ ವಯಸ್ಸು. ಆದರೂ ಯಾರ ಕೈಗೂ ಸಿಗದೆ ಬಚ್ಚಿಟ್ಟುಕೊಂಡಿದ್ದಾನೆ. ಯಥಾಪ್ರಕಾರವಾಗಿಯೇ ದಂಧೆ ನಡೆಸ್ತಿದ್ದಾನೆ. ಆತನ ಪ್ರಧಾನ ಮಾರ್ಕೆಟ್ ಇರೋದೇ ಅಮೆರಿಕಾದಂಥಾ ದೇಶಗಳಲ್ಲಿ. ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಮೆರೆಯೋ ಡೊನಾಲ್ಡ್ ಟ್ರಂಪ್‌ಗೂ ಕೂಡಾ ಈತನ ಕೂದಲನ್ನು ಕೊಂಕಿಸಲೂ ಸಾಧ್ಯವಾಗ್ತಿಲ್ಲ. ಅದು ಜೊವಾಕ್ವಿನ್ ನಿಜವಾದ ತಾಖತ್ತು. ಅಂದಹಾಗೆ ಈತನ ಬಗ್ಗೆ ಲೆಕ್ಕವಿರದಷ್ಟು ಹಾಲಿವುಡ್ ಸಿನಿಮಾಗಳು ತಯಾರಾಗಿವೆ.