ಸೂಪರ್ ಸ್ಟಾರ್ ತಲೈವಾ ಸಿನಿಮಾಗಳ ಬಗ್ಗೆ ದಿನಕ್ಕೊಂದು ಅಪ್ಡೇಟ್ ಸಿಗ್ತಿದೆ. `ಜೈಲರ್’ ಬ್ಲಾಕ್ಬಸ್ಟರ್ ಹಿಟ್ಟಾದ ಬೆನ್ನಲ್ಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಬಾಬಾ ಸದ್ಯ `170′ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಜೈ ಭೀಮ್ ಖ್ಯಾತಿಯ ಟಿ.ಜೆ ಜ್ಞಾನವೇಲ್ ಕಲ್ಪನೆಯ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಲೈಕಾ ಸಂಸ್ಥೆ ನಿರ್ಮಾಣದಲ್ಲಿ ಬಿಗ್ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಚೆನ್ನೈ, ಮುಂಬೈ ಸೇರಿದಂತೆ ಹಲೆವೆಡೆ ಶೂಟಿಂಗ್ ಪ್ಲ್ಯಾನ್ ಆಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಭರ್ತಿ 33 ವರ್ಷಗಳಾದ್ಮೇಲೆ ತೆರೆಹಂಚಿಕೊಳ್ಳುತ್ತಿದ್ದಾರೆ. ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಫಹಾದ್ ಫಾಸಿಲ್ ಸೇರಿದಂತೆ ಅತೀ ದೊಡ್ಡ ತಾರಾಬಳಗ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಹೀಗಿರುವಾಗಲೇ `ತಲೈವರ್-171′ ಸಿನಿಮಾ ಸ್ಟಾರ್ ಕಾಸ್ಟ್ನಿಂದ ಸದ್ದು ಸುದ್ದಿ ಮಾಡ್ತಿದೆ.
ಹೌದು, ಟೆಂಟೆಟೀವ್ ಟೈಟಲ್ನಲ್ಲಿ ಟಾಕ್ ಆಫ್ ದಿ ಟೌನ್ ಆಗಿರೋ ಸಿನಿಮಾ `ತಲೈವರ್-171′. ಪಡೆಯಪ್ಪ ಅಭಿನಯದ 171ನೇ ಚಿತ್ರ ಇದಾಗಿದ್ದು ಲೋಕೇಶ್ ಕನಗರಾಜ್ ಡೈರೆಕ್ಟ್ ಮಾಡ್ತಿದ್ದಾರೆ. `ಜೈಲರ್’ ಮ್ಯಾಸೀವ್ ಹಿಟ್ ಆದ ಬೆನ್ನಲ್ಲೇ ಶಿವಾಜಿ ಕಾಲ್ ಶೀಟ್ ಪಡೆದ ಸನ್ ಪಿಕ್ಚರ್ಸ್ ಸಂಸ್ಥೆ, `ತಲೈವರ್-171’ಗೆ ಬಂಡವಾಳ ಹೂಡ್ತಿದೆ. ಹೀರೋ ರಜನಿ, ಡೈರೆಕ್ಟರ್ ಲೋಕೇಶ್, ಮ್ಯೂಸಿಕ್ ಡೈರೆಕ್ಟರ್ ಅನಿರುದ್ದ್ ರವಿಚಂದರ್, ಆ್ಯಕ್ಷನ್ ಕೊರಿಯಾಗ್ರಫಿ ಅನ್ಬರಿವ್ ಮಾಸ್ಟರ್ಸ್ ಅಂತ ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ, ಕಾಲಿವುಡ್ ಅಂಗಳದಲ್ಲಿ ಭಾಷಾ ಎದುರು ವಿಲನ್ನಾಗಿ ನಿಲ್ಲಲಿರುವ ನಟರ ಬಗ್ಗೆ ಚರ್ಚೆಯಾಗ್ತಿದೆ. ಸ್ಯಾಂಡಲ್ವುಡ್ ಒಂಟಿಸಲಗ ದುನಿಯಾ ವಿಜಯ್ ನಂತರ ಕಾಲಿವುಡ್ನ ಪ್ರಖ್ಯಾತ ನಟ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್ ಹೆಸರು ಕೇಳಿಬರುತ್ತಿದೆ.
ರಾಘವ ಲಾರೆನ್ಸ್ ಪಡೆಯಪ್ಪನ ಅಪ್ಪಟ ಅಭಿಮಾನಿ. ನಾನು ನೃತ್ಯ ನಿರ್ದೇಶಕನಾಗಲಿಕ್ಕೆ ಬಾಬಾನೇ ಕಾರಣ ಅಂತ ಸಾಕಷ್ಟು ಭಾರಿ ರಾಘವ್ ಹೇಳಿಕೊಂಡಿದ್ದಾರೆ. ಇದೀಗ ಅವ್ರನ್ನೇ ಕರೆತಂದು ಬಾಬಾ ಎದುರು ವಿಲನ್ನಾಗಿ ನಿಲ್ಲಿಸೋದಕ್ಕೆ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂಟ್ರೆಸ್ಟಿಂಗ್ ಅಂದರೆ ದುನಿಯಾ ವಿಜಯ್ ಕೂಡ ತಲೈವಾನ ಗುರು ಸ್ಥಾನದಲ್ಲಿ ನೋಡ್ತಾರೆ. ಇದೀಗ ಅವರಿಗೆ ಶಿವಾಜಿ ಅಪೋಸಿಟ್ ಖಡಕ್ ಖಳನಾಯಕನಾಗಿ ನಿಲ್ಲುವ ಅವಕಾಶ ಬಂದಿದೆಯಂತೆ. ಈ ಬಗ್ಗೆ ಕಳೆದೊಂದು ವಾರದಿಂದ ಗಾಸಿಪ್ ಲೋಕದಲ್ಲಿ ಸಾಕಷ್ಟು ಚರ್ಚೆಯಾಗ್ತಿದೆ. ಟಾಲಿವುಡ್ ನಟಸಿಂಹನ ಎದುರು ಅಬ್ಬರಿಸಿ ಬೊಬ್ಬಿರಿದ ಭೀಮನಿಗೆ ಪರಭಾಷಾ ಅಂಗಳದಲ್ಲಿ ಬೇಡಿಕೆ ಹೆಚ್ಚಿರೋ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
ಮೇಲೆ ಹೇಳಿದಂತೆ ತಲೈವಾ ಈಗ 170 ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾ ಚಿತ್ರೀಕರಣ ಮುಗಿಯುವ ಹೊತ್ತಿಗೆ ನಿರ್ದೇಶಕ ಲೋಕೇಶ್ ಕನಗರಾಜ್ ಸ್ಕ್ರಿಪ್ಟ್ ರೆಡಿಯಿಟ್ಕೊಂಡು ಕಣಕ್ಕಿಳಿಬೇಕು. ಹೀಗಾಗಿ, ಸೋಷಿಯಲ್ ಮೀಡಿಯಾದಲ್ಲಿ ಆರು ತಿಂಗಳು ದೂರ ಇರ್ತಿನಿ. ಕಥೆ -ಚಿತ್ರಕಥೆ ತಯ್ಯಾರಿಯಲ್ಲಿ ನಿರತನಾಗ್ತೀನಿ ಅಂತ ಖುದ್ದಾಗಿ ಹೇಳಿಕೊಂಡಿದ್ದಾರೆ. ಫಾರ್ ದಿ ಫಸ್ಟ್ ಟೈಮ್ ಪಡೆಯಪ್ಪನ ಜೊತೆ ಕೆಲಸ ಮಾಡುವ ಅದೃಷ್ಟ ಲೋಕೇಶ್ಗೆ ಸಿಕ್ಕಿದೆ. ಕೈಥಿ, ಮಾಸ್ಟರ್, ವಿಕ್ರಮ್ ನಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟ ಲೋಕೇಶ್ ಕನಗರಾಜ್ `ಲಿಯೋ’ ಸಿನಿಮಾದಿಂದ ಕೊಂಚ ಸೋಲುಂಡಿದ್ದಾರೆ. ಅಂದುಕೊಂಡ ಮಟ್ಟಿಗೆ ಸಿನಿಮಾ ರೀಚ್ ಆಗಲಿಲ್ಲ ಎನ್ನುವ ಕೊರಗು ಇದ್ದೇ ಇದೆ. ಈ ಮಧ್ಯೆ ಮೈ ಕೊಡವಿಕೊಂಡು ಫೀಲ್ಡಿಗಿಳಿದಿದ್ದಾರೆ. ಎಲ್ಸಿಯೂ ಕಾನ್ಸೆಪ್ಟ್ನಲ್ಲಿ `ತಲೈವರ್-171′ ತೆಗೆಯಲು ಸ್ಕೆಚ್ ರೂಪಿಸಿದ್ದಾರೆ. 2024 ಮಾರ್ಚ್ ಅಥವಾ ಏಪ್ರಿಲ್ ನಿಂದ ಶೂಟಿಂಗ್ ಶುರು ಮಾಡುವ ಪ್ಲ್ಯಾನ್ ಇದೆ. ಇದು ಲೋಕೇಶ್ ಕನಗರಾಜ್ ನಿರ್ದೇಶನದ ಆರನೇ ಚಿತ್ರವಾಗಿದ್ದು, ಕೈಥಿ-2, ರೊಲೆಕ್ಸ್, ವಿಕ್ರಮ್ ಪಾರ್ಟ್-2 ಯೋಜನೆ ಹಾಕ್ಕೊಂಡಿದ್ದಾರೆ.