ಕಳೆದ ಒಂದು ವಾರದಿಂದ ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ನಡೆಸುತ್ತಿದ್ದ ‘ಉಸಿರು’ ಚಿತ್ರತಂಡ ಇಂದು ಮಕ್ಕಂಧೂರು ಬಳಿ ಟೆಂಟ್ ಹಾಕಿತ್ತು. ನಾಯಕ ಸಂತೋಷ್ ಮತ್ತು ನಾಯಕಿ ಅಪೂರ್ವರವರ ಬೈಕ್ ಓಡಿಸುವ ದೃಶ್ಯ ಸೆರೆಹಿಡಿಯುವಲ್ಲಿ ಚಿತ್ರತಂಡ ನಿರತವಾಗಿತ್ತು. ಈ ವೇಳೆ, ಆಯಾ ತಪ್ಪಿ ಜಾರಿದ ಪರಿಣಾಮ ನಾಯಕ ಮತ್ತು ನಾಯಕಿ ಇಬ್ಬರ ಕಾಲುಗಳಿಗೆ ಪೆಟ್ಟಾಗಿದ್ದು ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಹತ್ತಿರದ ಮಾದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆಯಂತೆ. ಈ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಪನೆಮ್ ಪ್ರಭಾಕರ್ ರವರು, ಇಂದಿನ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿರುವುದಾಗಿಯೂ ತಿಳಿಸಿದ್ದಾರೆ.