ಕನ್ನಡ ಚಿತ್ರರಂಗಕ್ಕೆ ‘ಮುಂಗಾರು ಮಳೆ’ ಸಿನಿಮಾದ ಮೂಲಕ ನಾಯಕ ನಟಿಯಾಗಿ ಪರಿಚಯವಾದ ಚೆಲುವೆ ಪೂಜಾಗಾಂಧಿ. ಮೊದಲ ಸಿನಿಮಾದಲ್ಲೇ ಕನ್ನಡ ಸಿನಿ ಪ್ರಿಯರ ಮನ ಸೆಳೆಯಲು ಯಶಸ್ವಿಯಾದ ಪೂಜಾ ಗಾಂಧಿ, ಆರಂಭದಲ್ಲಿಯೇ ಒಂದಷ್ಟು ಸ್ಟಾರ್ರ್ಸ್ ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಂಡಾಕೆ.
ಆದರೆ, ನಂತರ ಏನಾಯಿತೋ ಏನೋ…, ಪೂಜಾ ಗಾಂಧಿ ನಾಯಕಿಯಾಗಿ ನಟಿಸಿದ ಸಿನಿಮಾಗಳು ನಿಧಾನವಾಗಿ ಒಂದರ ಹಿಂದೊಂದರಂತೆ, ಸೋಲಲು ಆರಂಭಿಸಿದವು. ಈ ಸೋಲಿನಿಂದ ಪೂಜಾ ಗಾಂಧಿ ಬೇಡಿಕೆ ಕೂಡ ಕಡಿಮೆಯಾಗಲು ಶುರುವಾಯಿತು. ಆಗ ಸೆಕೆಂಡ್ ಇನ್ನಿಂಗ್ಸ್ ಎಂಬಂತೆ ಪೂಜಾ ಗಾಂಧಿ ಆಯ್ಕೆ ಮಾಡಿಕೊಂಡಿದ್ದೇ ರಾಜಕೀಯ ಕ್ಷೇತ್ರವನ್ನು.
ಪ್ರಾರಂಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಾಯಕ ನಟಿಯಾಗಿದ್ದವರು ಎಂಬ ಕಾರಣಕ್ಕೆ, ರಾಜಕೀಯ ರಂಗದಲ್ಲಿ ಪೂಜಾ ಗಾಂಧಿಗೆ ಭರ್ಜರಿ ಸ್ವಾಗತ ಸಿಕ್ಕಿತು. ರಾಜಕೀಯ ಪಕ್ಷಗಳಲ್ಲಿ ರಾಜ್ಯ ಮಟ್ಟದ ಸ್ಥಾನಮಾನ ಕೂಡ ದೊರಕಿತು. ಆದರೆ, ಚುನಾವಣಾ ರಾಜಕೀಯದ ವಿಷಯದಲ್ಲಿ ಮಾತ್ರ ಪೂಜಾ ಗಾಂಧಿ ಅಂದುಕೊಂಡಂತೆ ನಡೆಯಲಿಲ್ಲ. ಪೂಜಾ ಗಾಂಧಿ ವರ್ಚಸ್ಸು ಚುನಾವಣಾ ಕಣದಲ್ಲಿ ಮತಗಳಾಗಿ ಪರಿವರ್ತನೆಯಾಗಲಿಲ್ಲ.
ಯಾವಾಗ ರಾಜಕೀಯ ರಂಗದಲ್ಲಿ ಪೂಜಾ ಗಾಂಧಿ ಕಮಾಲ್ ನಡೆಯಲಿಲ್ಲವೊ, ರಾಜಕೀಯ ರಂಗದಲ್ಲೂ ಪೂಜಾ ಬಗೆಗಿದ್ದ ಒಲವು ಕಡಿಮೆಯಾಯಿತು. ಇತ್ತ ರಾಜಕೀಯ ಅಂಗಳದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದ ಪೂಜಾ ಗಾಂಧಿ, ಅತ್ತ ಸಿನಿಮಾ ಇಲ್ಲದೇ, ಇತ್ತ ರಾಜಕೀಯವೂ ಇಲ್ಲದೆ ತ್ರಿಶಂಕು ಸ್ಥಿತಿ ಎನ್ನುವಂತಾಯಿತು.
ತಮ್ಮ ಜೀವನದಲ್ಲಿ ಸಿನಿಮಾ ನಟಿಯಾಗಿರುವಾಗಲೇ ರಾಜಕೀಯ ಪ್ರವೇಶಿಸಿರುವುದು ಎಂಬ ಅರಿವು ಈಗ ಪೂಜಾ ಗಾಂಧಿ ಅವರಿಗೆ ಆಗಿದೆ. ಈ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ‘ನಮಗೆ ಗೊತ್ತಿಲ್ಲದ ಕೆಲಸವನ್ನ ಮಾಡುವಾಗ ನೂರು ಬಾರಿ ಯೋಚಿಸಬೇಕು. ನನ್ನ ಪ್ರಕಾರ ನಮಗೆ ಗೊತ್ತಿಲ್ಲದ ಕ್ಷೇತ್ರಕ್ಕೆ, ಅದರ ಬಗ್ಗೆ ತಿಳಿದುಕೊಳ್ಳದೇ ಪ್ರವೇಶಿಸುವುದು ದೊಡ್ಡ ತಪ್ಪು. ಯಾವುದೇ ಕ್ಷೇತ್ರ ಪ್ರವೇಶಿಸುವ ಮೊದಲು ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳಬೇಕು. ಅಲ್ಲಿ ಒಂದಷ್ಟು ಕೆಲಸ ಮಾಡಿ ಅನುಭವ ಪಡೆದುಕೊಳ್ಳಬೇಕು. ಇಲ್ಲದಿದ್ದರೆ, ನಾವು ಅಲ್ಲಿ ಗೆಲ್ಲಲಾಗುವುದಿಲ್ಲ. ನನ್ನ ಜೀವನದ ರಾಜಕೀಯ ಪ್ರವೇಶದ ವಿಷಯದಲ್ಲಿ ಇದು ನಾನು ಕಲಿತ ಪಾಠ. ನಾನು ರಾಜಕೀಯ ಪ್ರವೇಶಿಸಿದ್ದು, ನನ್ನ ಜೀವನದಲ್ಲಿ ನಾನು ಮಾಡಿ ದೊಡ್ಡ ತಪ್ಪು. ಮುಂದೆ ಎಂದಿಗೂ, ಇಂಥ ತಪ್ಪು ಮಾಡಲಾರೆ’ ಎಂದಿದ್ದಾರೆ.