ಗಂಧದಗುಡಿಯಲ್ಲಿ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರು ಕೆತ್ತಿರೋ ಇತಿಹಾಸ ಯಾರೂ ತಿಕ್ಕಿ ಅಳಿಸಲಾಗದ್ದು. ಕನ್ನಡ ಚಿತ್ರರಂಗಕ್ಕೆ ದಾದಾ ಕೊಟ್ಟಿರೋ ಕೊಡುಗೆ ಸೂರ್ಯ-ಚಂದ್ರರಿರೋ ತನಕ ಜೀವಂತ. ಅಷ್ಟಕ್ಕೂ, ಈ ಕ್ಷಣ ಸ್ಯಾಂಡಲ್ವುಡ್ ಯಜಮಾನರನ್ನು ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಸಿಂಹದ ಮರಿ. ಅಪ್ಪಾಜಿಯ ಅಪ್ಪುಗೆಯಲ್ಲಿ ಬೆಳೆದ ಈ ಮರಿ ಈಗ ಬೆಳೆದು ದೊಡ್ಡವನ್ನಾಗಿದ್ದಾನೆ. ಸೂರ್ಯವಂಶವನ್ನು ಬೆಳಗುವುದರ ಜೊತೆಗೆ ಬೆಳ್ಳಿಪರದೆಯನ್ನು ಬೆಳಗುವ ಭರವಸೆ ಮೂಡಿಸಿದ್ದಾನೆ. ಅಷ್ಟಕ್ಕೂ, ನಾವು ಮಾತನಾಡ್ತಿರುವುದು ಬೇರಾರ ಬಗ್ಗೆಯೂ ಅಲ್ಲ ಅನಿರುದ್ಧ್ ಅವರ ಸುಪುತ್ರ ಜೇಷ್ಠವರ್ಧನ್
ವಿಷ್ಣುದಾದ ಅಳಿಯ, ಅನಿರುದ್ಧ್ ಜಟ್ಕರ್ ಪುತ್ರ ಜೇಷ್ಠವರ್ಧನ್ ಪರಿಚಯ ನಿಮಗೆ ಇದ್ದೇ ಇರುತ್ತೆ. ಯಾಕಂದ್ರೆ, ಅಪ್ಪ ಅನಿರುದ್ಧ್ ಜೊತೆ ಜೇಷ್ಠ ರೀಲ್ಸ್ ಮಾಡಿ ಫೇಮಸ್ ಆಗಿದ್ದಾನೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು ಅಖಾಡಕ್ಕೆ ಇಳಿಯುವ ಮುನ್ನವೇ ಅಭಿಮಾನಿ ಬಳಗವನ್ನ ಸಂಪಾದನೆ ಮಾಡಿದ್ದಾನೆ. ಮೊನ್ನೆ ಮೊನ್ನೆಯಷ್ಟೇ ಅಪ್ಪನ ಹೆಗಲೇರಿ ಪ್ರಪಂಚ ನೋಡ್ತಿದ್ದವನ್ಹಂಗೆ ಕಾಣುತ್ತಿದ್ದ ಜೇಷ್ಠ ಈಗ ಅಪ್ಪನಿಗಿಂತ ಒಂದಿಂಚು ಉದ್ದ ಬೆಳೆದು ನಿಂತಿದ್ದಾನೆ. ಹೈಟು-ಪರ್ಸನಾಲಿಟಿ ಎಲ್ಲದರಲ್ಲೂ ಪಕ್ಕಾ ಇರುವ, ಹ್ಯಾಂಡ್ಸಮ್ ಲುಕ್ನಿಂದಲೂ ಹೀರೋ ಮೆಟಿರಿಯಲ್ ಎನಿಸಿಕೊಂಡಿರೋ ಜೇಷ್ಠ, ಹೊಸ ಫೋಟೋಶೂಟ್ ಮೂಲಕ ಬಜಾರ್ನಲ್ಲಿ ಸುದ್ದಿಯಾಗಿದ್ದಾನೆ.
ಆಗಾಗ ಕ್ಯಾಮೆರಾಗೆ ಪೋಸ್ ಕೊಡುವ ಜೇಷ್ಠ, ರೀಸೆಂಟಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾನೆ. ಬ್ಲಾಕ್ ಶರ್ಟ್ ಜೊತೆ ಆರೇಂಜ್ ಕೋಟ್ ಧರಿಸಿ ಕೈಯಲ್ಲಿ ಸನ್ಗ್ಲಾಸ್ ಇಡ್ಕೊಂಡು ಸ್ಟೈಲಿಷ್ ಆಗಿ ಪೋಸ್ ಕೊಟ್ಟಿದ್ದಾನೆ. ಜೇಷ್ಠವರ್ಧನ್ ಲುಕ್ಕು-ಗೆಟಪ್ ನೋಡಿ ಕ್ಲೀನ್ಬೋಲ್ಡ್ ಆಗಿರೋ ಫ್ಯಾನ್ಸ್ `ಸಿಂಹದ ಮರಿ’ ಅಂತ ಕೊಂಡಾಡ್ತಿದ್ದಾರೆ. ಅಚ್ಚರಿ ಅಂದರೆ, ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರನ್ನ ಅಭಿಮಾನಿಗಳು ಮಾತ್ರವಲ್ಲ ಸ್ವತಃ ಬೆಳ್ಳಿಪರದೆಯೇ ಮಿಸ್ ಮಾಡಿಕೊಳ್ತಿದೆ. ಇಷ್ಟು ದಿನ ಅಭಿಮಾನಿಗಳು ವಿಷ್ಣುದಾದರನ್ನ ಅವರ ಅಳಿಯ ಅನಿರುದ್ಧ್ ಅವ್ರಲ್ಲಿ ಕಾಣುತ್ತಿದ್ದರು. ಈಗ ಅವರ ಪುತ್ರ ಜೇಷ್ಠನ ಕಣ್ಣಲ್ಲಿ ಕೋಟಿಗೊಬ್ಬನನ್ನು ನೋಡುವ ಇಂಗಿತ ವ್ಯಕ್ತಪಡಿಸ್ತಿದ್ದಾರೆ. ಹಿಂದೊಮ್ಮೆ ಅಪ್ಪಾಜಿ ಕೈ ಖಡಗವನ್ನು ತೊಟ್ಟು, ಖಡಕ್ ಲುಕ್ಕು ಕೊಟ್ಟಿದ್ದ ಜೇಷ್ಠ ದಾದಾ ಭಕ್ತಬಳಗ ಕಣ್ಣರಳಿಸಿ ನೋಡುವಂತೆ ಮಾಡಿದ್ದ. ಈಗ ಹೊಸ ಪೋಟೋಶೂಟ್ ಮಾಡಿಸಿ ಕರ್ಣನ ಭಕ್ತರ ಕಣ್ಣಲ್ಲಿ ದಸರಾ ಹಾಗೂ ದೀಪಾವಳಿ ಸಂಭ್ರಮ ಕಳೆಗಟ್ಟುವಂತೆ ಮಾಡಿದ್ದಾನೆ.
ಸದ್ಯ ಜೇಷ್ಠ ವಿದ್ಯಾಭ್ಯಾಸದ ಕಡೆ ಗಮನ ಕೊಡ್ತಿದ್ದಾನೆ. ಎಜುಕೇಷನ್ ಕಂಪ್ಲೀಟ್ ಮಾಡ್ಕೊಂಡು ಮೇಕಪ್ ಹಾಕೋ ಪ್ಲ್ಯಾನಂತೂ ಜೇಷ್ಠಗಿದೆ. ಅದಕ್ಕಿಂತ ಮುನ್ನವೇ ಒಳ್ಳೆ ಆಫರ್ ಬಂದರೆ ಕಣಕ್ಕಿಳಿದರೂ ಇಳಿಯಬಹುದು. ಅಷ್ಟಕ್ಕೂ, ಸೂರ್ಯವಂಶದ ಕುಡಿಯನ್ನ ಇಂಟ್ರುಡ್ಯೂಸ್ ಮಾಡುವ ಅವಕಾಶ ಯಾರಿಗೆ ಸಿಗುತ್ತೆ, ವಿಷ್ಣುದಾದರ ಮೊಮ್ಮಗನನ್ನ ಲಾಂಚ್ ಮಾಡಲು ಯಾರು ಮುಂದೆ ಬರ್ತಾರೆ ಅನ್ನೋದನ್ನ ಕಾದುನೋಡಬೇಕಿದೆ. ಒಟ್ನಲ್ಲಿ ಯಜಮಾನರ ಮೊಮ್ಮಗನ ಮೇಲೆ ನಿರೀಕ್ಷೆಯಿದೆ. ಕನ್ನಡ ಚಿತ್ರರಂಗಕ್ಕೆ ಜೇಷ್ಠ ಎಂಟ್ರಿಕೊಡುವ ಗಳಿಗೆಗಾಗಿ ಕುತೂಹಲದಿಂದ ಕಾಯುವಂತಾಗಿದೆ.