ಮರಿ ಟೈಗರ್ ಖ್ಯಾತಿಯ ನಟ ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ಸಿನಿಮಾ ತೆರೆಗೆ ಬರಲು ರೆಡಿಯಾಗುತ್ತಿದೆ. ಸದ್ಯ ‘ಫೈಟರ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಫಸ್ಟ್ ಟೀಸರ್ ಬಿಡುಗಡೆ ಮಾಡಿದೆ. ನೂತನ್ ಉಮೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಫೈಟರ್’ ಸಿನಿಮಾವನ್ನು ಸೋಮಶೇಖರ್ ಕಟ್ಟಿಗೇನಹಳ್ಳಿ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ನೂತನ್ ಉಮೇಶ್, ‘ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಟೀಸರನ್ನು ನಿರ್ಮಾಪಕರ ತಂದೆಯವರು ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಹೊರಬರಲಿದ್ದು, ಅಕ್ಟೊಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ‘ಫೈಟರ್’ ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ‘ಫೈಟರ್’ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದು ಸಿನಿಮಾದ ಕಥೆಯ ಬಗ್ಗೆ ಮಾಹಿತಿ ನೀಡಿದರು.
’ಫೈಟರ್’ ನಲ್ಲಿ ಬರೀ ಹೋರಾಟ ಹಾಗೂ ಹೊಡೆದಾಟವಿಲ್ಲ. ತಂದೆ- ತಾಯಿ ಹಾಗೂ ಮಗನ ಬಾಂಧವ್ಯದ ಸನ್ನಿವೇಶಗಳು ಎಲ್ಲರ ಮನ ಮುಟ್ಟಲಿದೆ. ಜೊತೆಗೆ ಥ್ರಿಲ್ಲರ್ ಅಂಶಗಳನ್ನ ಒಳಗೊಂಡ ಕೌಟುಂಬಿಕ ಮನರಂಜನೆಯ ಚಿತ್ರ ಇದಾಗಿದೆ. ನನ್ನನ್ನು ನಿರ್ದೇಶಕರು ನನ್ನ ಹಿಂದಿನ ಚಿತ್ರಗಳಿಗಿಂತ ತುಂಬಾನೇ ಸ್ಟೈಲಿಷ್ ಆಗಿ ತೋರಿಸಿದ್ದಾರೆ. ನಿರ್ಮಾಪಕರು ಯಾವುದಕ್ಕೂ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಹೋರಾಡುವ ‘ಫೈಟರ್’ ನಾನು’ ಎಂಬುದು ತಮ್ಮ ಪಾತ್ರದ ಬಗ್ಗೆ ನಾಯಕ ನಟ ವಿನೋದ್ ಪ್ರಭಾಕರ್ ಮಾತು. ‘ಫೈಟರ್’ ಸಿನಿಮಾದ ಹಾಡುಗಳಿಗೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಪಾವನ ಗೌಡ ಹಾಗೂ ಲೇಖ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ಸುಮಾರು ವರ್ಷಗಳ ನಂತರ ಬಹುಭಾಷಾ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ‘ಫೈಟರ್’ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.