ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ನಟ ವಿನೋದ್ ಪ್ರಭಾಕರ್ ಅಭಿನಯದ ‘ಫೈಟರ್’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ‘ಫೈಟರ್’ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರತಂಡ ಈ ಯಶಸ್ಸಿನ ಸಂಭ್ರಮವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ.
ಇದೇ ವೇಳೆ ಮಾತನಾಡಿದ ‘ಫೈಟರ್’ ಸಿನಿಮಾದ ನಿರ್ದೇಶಕ ನೂತನ್ ಉಮೇಶ್, ‘ಬಿಡುಗಡೆಯಾದ ದಿನದಿಂದಲೂ ‘ಫೈಟರ್’ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಸಿನಿಮಾದಲ್ಲಿರುವ ಸಾಕಷ್ಟು ಉತ್ತಮ ಅಂಶಗಳು ನೋಡುಗರಿಗೆ ಬಹಳ ಇಷ್ಟವಾಗುತ್ತಿದೆ. ಮಾಲ್ ಗಳಲ್ಲೂ ಫ್ಯಾಮಿಲಿ ಆಡಿಯನ್ಸ್ ಹೆಚ್ಚು ಬರುತ್ತಿದ್ದಾರೆ’ ಎಂದರು.
‘ಒಳ್ಳೆಯ ಕಂಟೆಂಟ್ ಇರುವ ಸಿನಿಮಾವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ‘ಫೈಟರ್’ ಸಿನಿಮಾ ಒಳ್ಳೆಯ ಉದಾಹರಣೆ. ಸಿನಿಮಾದ ಯಶಸ್ಸಿಗೆ ಕಾರಣರಾದ ಸಮಸ್ತರಿಗೂ ನನ್ನ ಧನ್ಯವಾದ. ನಾನು ಈ ಚಿತ್ರದಲ್ಲಿ ರೈತರ ಪರ ಹೋರಾಡುವ ‘ಫೈಟರ್’. ನಮ್ಮ ಸಿನಿಮಾ ರೈತರಿಗೂ ಇಷ್ಟವಾಗಿದೆ. ಸಾಕಷ್ಟು ರೈತ ಮಿತ್ರರು ಫೋನ್ ಮೂಲಕ ಚಿತ್ರ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇಂದಿನಿಂದ ನಾನು ಬೇರೆಬೇರೆ ಊರುಗಳಲ್ಲಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದೇನೆ. ಮೊದಲು ರಾಮನಗರದಿಂದ ಆರಂಭಿಸುತ್ತಿದ್ದೇನೆ. ಆದಷ್ಟು ಬೇಗ ‘ಫೈಟರ್ ಭಾಗ 2’ ಶುರುವಾಗಲಿ’ ಎಂದರು ನಾಯಕ ವಿನೋದ್ ಪ್ರಭಾಕರ್. ನಿರ್ಮಾಪಕ ಸೋಮಶೇಖರ್ ಕಟ್ಟಿಗೇನಹಳ್ಳಿ, ನಾಯಕಿ ಲೇಖಾಚಂದ್ರ ‘ಫೈಟರ್’ ಸಿನಿಮಾಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತಪಡಿಸಿದರು.