ಕನ್ನಡಿಗರು ಮಾತ್ರವಲ್ಲ ಪರಭಾಷಿಗರು ಹಾಗೂ ಪ್ಯಾನ್ ಇಂಡಿಯಾ ಪ್ರೇಕ್ಷಕರೆಲ್ಲರೂ ಎದುರುನೋಡ್ತಿರುವ ಸಿನಿಮಾಗಳ ಪೈಕಿ `ಕಾಂತಾರ-2′ ಕೂಡ ಒಂದು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಲಿರುವ ಈ ಚಿತ್ರಕ್ಕಾಗಿ ಆಲ್ ಓವರ್ ಇಂಡಿಯಾದ ಸಿನಿಮಾ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಕಾಂತಾರ ಪ್ರೀಕ್ವೆಲ್ ಕಥೆಗಾಗಿ ಕಣ್ಣರಳಿಸಿದ್ದಾರೆ. ಕಾಡುಬೆಟ್ಟು ಶಿವಪ್ಪನ ಲುಕ್ಕು-ಗೆಟಪ್ಪನ್ನ ಕಣ್ತುಂಬಿಕೊಳ್ಳೋದಕ್ಕೆ ಕಾತುರರಾಗಿದ್ದಾರೆ. ಆ ಕಾತುರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬ್ರೇಕ್ ಬೀಳಲಿದೆ. ಕಾಂತಾರ ಪ್ರೀಕ್ವೆಲ್ ಸ್ಟೋರಿಗೆ ಮುಹೂರ್ತ ಫಿಕ್ಸಾಗಿದ್ದು, ಇದೇ ನವೆಂಬರ್ 27ರಂದು ಸಿಂಪಲ್ಲಾಗಿ ಸಿನಿಮಾ ಸೆಟ್ಟೇರಲಿದೆಯಂತೆ. ಇಂಟ್ರೆಸ್ಟಿಂಗ್ ಅಂದರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಾಂತಾರ-2 ಚಿತ್ರದಲ್ಲಿ ನಟಿಸೋ ಬಗ್ಗೆ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಗೆಳೆಯ ರಿಷಬ್ ಚಾನ್ಸ್ ಕೊಟ್ಟರೆ, ಕಾಂತಾರ ಪ್ರೀಕ್ವೆಲ್ ನಲ್ಲಿ ಭಾಗವಾಗೋದಾಗಿ ತಿಳಿಸಿದ್ದಾರೆ.
ಲೇಟಾದ್ರೂ ಲೇಟೆಸ್ಟ್ ಆಗಿ ಅಖಾಡಕ್ಕೆ ಇಳಿಯುತ್ತಿರೋ ಶೆಟ್ರು, ಡಿಸೆಂಬರ್ನಿಂದ ಶೂಟಿಂಗ್ ಪ್ಲ್ಯಾನ್ ಮಾಡಿದ್ದಾರಂತೆ. ಇತ್ತೀಚೆಗಷ್ಟೇ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮಾವೇಶದಲ್ಲಿ ಮಾತನಾಡಿದ ಶೆಟ್ರು, ಇನ್ನೊಂದು ವರ್ಷ ನನ್ನ ಯಾವುದೇ ಕಾರ್ಯಕ್ರಮಗಳಿಗೆ ಕರಿಬೇಡಿ ಬರೋದಕ್ಕೆ ಆಗುವುದಿಲ್ಲ. ಯಾಕಂದ್ರೆ, ಕಾಂತಾರ ಪ್ರಿಕ್ವೆಲ್ ಶೂಟಿಂಗ್ ಶುರು ಮಾಡ್ತಿದ್ದೇನೆ. ‘ಶೂಟಿಂಗ್ ಮುಗಿದ ಮೇಲೆ ಮತ್ತೆ ಕಾರ್ಯಕ್ರಮಗಳಲ್ಲಿ ಸಿಗುತ್ತೇನೆ ಎಂದಿದ್ದರು. ಇದೀಗ ಸಕಲ ತಯಾರಿ ಮಾಡಿಕೊಂಡು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಪಾತ್ರಕ್ಕಾಗಿ ಲುಕ್-ಗೆಟಪ್ನ ಬದಲಾಯಿಸಿಕೊಂಡಿದ್ದಾರೆ. ಸುಮಾರು 10 ರಿಂದ 11 ಕೆಜಿ ತೂಕ ಇಳಿಸಿಕೊಂಡಿದ್ದು, ಹೇರ್ ಸ್ಟೈಲ್ ಹಾಗೂ ಬಿಯರ್ಡ್ ಸ್ಟೈಲ್ಗೆ ಹೊಸ ಶೇಪ್ ಕೊಟ್ಟಿದ್ದಾರೆ. ದೀಪಾವಳಿ ಹಬ್ಬದಂದು ಕ್ಯಾಮೆರಾಗೆ ಕೊಟ್ಟ ಪೋಸ್ನಲ್ಲಿ ನಯಾ ಲುಕ್ ರಿವೀಲ್ ಆಗಿದೆ.
ಕಾಂತಾರ ಮೊದಲ ಭಾಗದಲ್ಲಿ ಶೆಟ್ರು ಡಬಲ್ ರೋಲ್ ಪ್ಲೇ ಮಾಡಿದ್ದರು. ಕಾಡುಬೆಟ್ಟು ಶಿವಪ್ಪನಾಗಿ ಹಾಗೂ ಶಿವಪ್ಪನ ತಂದೆಯಾಗಿ ಕಮಾಲ್ ಮಾಡಿದ್ದರು. ಈಗ `ಕಾಂತಾರ’ ಪಾರ್ಟ್2 ಪ್ರೀಕ್ವೆಲ್ ಕಥೆಯಾಗಿರುವುದರಿಂದ ಕುತೂಹಲ ಹೆಚ್ಚಿದೆ. ಕೋಲ ಕಟ್ಟಿಕೊಂಡು ಕಾಡೊಳಗೆ ಕಾಣೆಯಾದ ತಂದೆಯ ಪಾತ್ರಕ್ಕೆ ಸ್ವತಃ ರಿಷಬ್ ಅವರೇ ಜೀವ ತುಂಬುತ್ತಾರಾ ಅಥವಾ ಬೇರೆ ಕಲಾವಿದರನ್ನ ಕರೆತರುತ್ತಾರಾ? ಹೀಗೊಂದು ಪ್ರಶ್ನೆ ಎದ್ದಿದೆ. ಈ ಹಿಂದೆ ಕಾಡುಬೆಟ್ಟು ಶಿವಪ್ಪನ ತಂದೆಯ ಪಾತ್ರಕ್ಕೆ ಪಡೆಯಪ್ಪನನ್ನು ಕರೆದುಕೊಂಡು ಬರುತ್ತಾರೆಂದು ಸುದ್ದಿಯಾಗಿತ್ತು. ಕಾಂತಾರ ಸಿನಿಮಾ ನೋಡಿ ಬೆರಗಾದ ತಲೈವಾ ಖುದ್ದಾಗಿ ರಿಷಬ್ಗೆ ಕಾಲ್ ಮಾಡಿ ಮಾತನಾಡಿದ್ದರು. ಚೆನ್ನೈ ಮನೆಗೆ ಕರೆಸಿಕೊಂಡು ಗಂಟೆಗಟ್ಟಲೇ ಕಾಂತಾರ ನಿರ್ಮಾಣಗೊಂಡಿದ್ದರ ಬಗ್ಗೆ ಪ್ರಶ್ನೆ ಮಾಡುತ್ತಾ ಅಚ್ಚರಿ ವ್ಯಕ್ತಪಡಿಸಿದ್ದರು. ಅದೇ ವೇಳೆ ಡಿವೈನ್ಸ್ಟಾರ್ ಕೊರಳಿಗೆ ಬಾಬಾ ಲಾಕೆಟ್ ಹಾಕಿ ಶುಭಹಾರೈಸಿದ್ದರು. ಹೀಗಾಗಿ, ಪಡೆಯಪ್ಪನ ನಿರೀಕ್ಷೆಯಲ್ಲಿದೆ ಪ್ರೇಕ್ಷಕ ಕುಲ
ಇನ್ನೂ, ನನ್ನ ಮೊದಲ ಆದ್ಯತೆ ಕನ್ನಡ ಸಿನಿಮಾ ಮತ್ತು ಕನ್ನಡಿಗರೆಂದು `ಕಾಂತಾರ-2′ ಗೆ ಕೈ ಹಾಕಿರುವ ರಿಷಬ್, ದೈವ ಹಾಗೂ ದೈವರಾಧಕರ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸರಿಯಾದ ಉತ್ತರ ನೀಡಲಿಕ್ಕೆ ಸಜ್ಜಾಗಿದ್ದಾರಂತೆ. ಪಂಜುರ್ಲಿ ಹಾಗೂ ಗುಳಿಗ ದೈವದ ಮೂಲ ಮತ್ತು ದೈವಾರಾಧಕರ ಮಹತ್ವವನ್ನು `ಕಾಂತಾರ’ ಪ್ರೀಕ್ವೆಲ್ ಮೂಲಕ ಬೆಳ್ಳಿತೆರೆ ಮೇಲೆ ಕಟ್ಟಿಕೊಡಲು ಹೊರಟಿದ್ದಾರಂತೆ. ಸುಮಾರು 125ಕೋಟಿ ಬಜೆಟ್ನಲ್ಲಿ ಪಾರ್ಟ್-2 ತಯ್ಯಾರಾಗಲಿದೆಯಂತೆ. ನಿಮಗೆಲ್ಲ ಗೊತ್ತಿರುವಂತೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ ಚಾಪ್ಟರ್ 1′ ಬರೀ 16 ಕೋಟಿ ವೆಚ್ಚದಲ್ಲಿ ತಯ್ಯಾರಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತುಳುನಾಡಿನ ದೈವಾರಾಧನೆ ಹಾಗೂ ಕರಾವಳಿ ಮಣ್ಣಿನ ಸೊಗಡಿರುವ `ಕಾಂತಾರ’ ನೋಡಿ ದೇಶಕ್ಕೆ ದೇಶವೇ ಮೆಚ್ಚಿಕೊಂಡಿತ್ತು.
ಕಾಂತಾರ-2ಗಾಗಿ ಹೊಂಬಾಳೆ ಹೂಡ್ತಿರೋ ಬಜೆಟ್ ನೋಡಿದರೆ ಸಿನಿಮಾ ಪ್ಯಾನ್ ವಲ್ರ್ಡ್ ಲೆವೆಲ್ ಗೆ ರೆಡಿಯಾಗೋದಂತೂ ಪಕ್ಕಾ. ಸದ್ಯ ಹೊಂಬಾಳೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಲಾರ್, ಯುವ, ರಿಚರ್ಡ್ ಆ್ಯಂಟನಿ, ಬಘೀರ, ಟೈಸನ್, ರಘುತಾತ ಸೇರಿದಂತೆ ಎಂಟು ಪಿಕ್ಚರ್ ಗಳು ತಯ್ಯಾರಾಗುತ್ತಿವೆ. ಇದರಲ್ಲಿ ಸಲಾರ್ ಗಾಗಿ ಎಷ್ಟು ಮಂದಿ ಕುತೂಹಲದಿಂದ ಕಾಯ್ತಿದ್ದಾರೋ, ಅಷ್ಟೇ ಮಂದಿ ಒಂಟಿಕಾಲಿನಲ್ಲಿ ನಿಂತು ಶೆಟ್ರು ಕಣ್ಣಕ್ಕಿಳಿಯೋದನ್ನ ನೋಡ್ತಿದ್ದಾರೆ. ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ನವೀನ್ ಡಿ ಪಡೀಲ್, ದೀಪಕ್ ರೈ ಪಾಣಾಜೆ, ಮಾನಸಿ ಸುಧೀರ್, ಪ್ರಕಾಶ್ ತುಮ್ಮಿನಾಡು ಮುಂತಾದವರು ನಟಿಸಿದ್ದರು. ಇದೀಗ ಪಾರ್ಟ್ 2ರಲ್ಲಿ ಇವರಲ್ಲಿ ಯಾರೆಲ್ಲ ಇರಲಿದ್ದಾರೆ? ಯಾರೆಲ್ಲ ಹೊಸದಾಗಿ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇದೆ.