ಒಂದ್ಯಾವುದೋ ಅಪರೂಪದ ಪರಿಮಳ ಅಚಾನಕ್ಕಾಗಿ ಮೂಗಿಗೆ ಬಡಿದಂತಾಗುತ್ತೆ. ಅದೊಂದು ಪರಿಮಳ ನಮ್ಮನ್ನು ಬದುಕಿನ ಯಾವುದೋ ಇರುಕ್ಕು ಗಲ್ಲಿಗಳಲ್ಲಿ ಸುತ್ತಾಡಿಸುವಷ್ಟು ಶಕ್ತವಾಗಿರುತ್ತೆ. ಮೆದುಳೆಂಬುದು ಸೀದಾ ನಮ್ಮನ್ನು ಬಾಲ್ಯಕ್ಕೋ, ಶಾಲಾ ದಿನಗಳಿಗೋ ಕೊಂಡೊಯ್ದು ನಿಲ್ಲಿಸಿ ಬಿಡುತ್ತೆ. ಅಂಥಾ ಅಗೋಚರ ಪರಿಮಳಗಳೇ ಎಳೇ ಮಕ್ಕಳನ್ನಾಗಿಸಿ ಅಜ್ಜಿಯ ಸೆರಗಿನ ಚುಂಗು ಹಿಡಿದು ಅಲೆದಾಡಿಸುತ್ತೆ. ಅಜ್ಜಿಯ ಸುಕ್ಕುಗಟ್ಟಿದ ಕೈಯ ಸ್ಪರ್ಶದ ತಾಜಾ ಅನುಭೂತಿಯನ್ನೂ ಎದೆಗೆ ನಾಟಿಸಿ ಬಿಡುತ್ತೆ. ಜೀವನದ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರನ್ನೂ ಇಂಥಾ ಅನೂಹ್ಯ ಪರಿಮಳಗಳು ಅಚ್ಚರಿಗೀಡು ಮಾಡುತ್ತವೆ.
ಅರೇ… ಈ ಪರಿಮಳಕ್ಕೆ ನೆನಪಿನ ಗರ್ಭಕ್ಕೇ ಕೊಂಡೊಯ್ದು ಬಿಡೋ ತಾಕತ್ತಿದೆಯಾ? ಇದು ನಮ್ಮ ಭ್ರಮೆಯಾ ಅಥವಾ ಅದಕ್ಕೆ ವಾಸ್ತವದ ಭೂಮಿಕೆಯೇನಾದರೂ ಇದೆಯಾ ಅನ್ನೋ ಪ್ರಶ್ನೆ ಸೂಕ್ಷ್ಮ ಮನಸ್ಥಿತಿಯ ಮಂದಿಯನ್ನು ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡುತ್ತೆ. ಇಂಥಾ ಪರಿಮಳಗಳ ಮ್ಯಾಜಿಕ್ಕಿಗೆ ವಿಜ್ಞಾನ ನಿಖರವಾದ ಸಾಕ್ಷ್ಯಗಳನ್ನೇ ಕೊಡುತ್ತೆ. ಅಂದಹಾಗೆ ಅದರ ಮೂಲವಿರೋದು ನಮ್ಮ ಮೂಗಿನಲ್ಲಿ ಮತ್ತು ನಮ್ಮದೇ ಮೆದುಳಿಗಿರೋ ಅಗಾಧವಾದ ಶಕ್ತಿಯಲ್ಲಿ!
ಮನುಷ್ಯರ ಮೂಗಿಗಿರೋ ಆಗ್ರಾಣಿಸುವ ಶಕ್ತಿಯೇ ಅದ್ಭುತ. ನಮ್ಮ ಮೂಗು ಬರೋಬ್ಬರಿ ಐವತ್ತು ಸಾವಿರ ಬಗೆಯ ಪರಿಮಳಗಳನ್ನು ಸಲೀಸಾಗಿ ನೆನಪಿಟ್ಟುಕೊಳ್ಳುವ ತಾಕತ್ತು ಹೊಂದಿದೆ. ಯಾವುದೇ ವಾಸನೆಗಳು ಮೂಗಿಗೆ ಅಡರಿದಾಗ ಅದು ಒಂದಷ್ಟು ಸಂದೇಶಗಳನ್ನ ಮೆದುಳಿಗೆ ರವಾನಿಸುತ್ತೆ. ಆ ಸಂದೇಶಗಳು ಮೆದುಳಿನ ಕೋಶಗಳನ್ನು ತಲುಪಿದಾಗ ಆ ವಾಸನೆಗೆ ಸಂಬಂಧಿಸಿದ ನೆನಪುಗಳು ಗರಿಬಿಚ್ಚಿಕೊಳ್ಳುತ್ತವೆ. ಅಂಥಾ ವಾಸನೆಗಳು ಎಳೇ ವಯಸ್ಸಿನಲ್ಲಿ ನಿಮ್ಮ ಅಪ್ಪ ಬಳಸುತ್ತಿದ್ದ ಶೇವಿಂಗ್ ಕ್ರೀಮಿನ ಸುತ್ತಾ ಗಿರಕಿ ಹೊಡೆಯಬಹುದು. ಅಲ್ಲಿಂದ ಬಾಲ್ಯದ ಒಂದಷ್ಟು ಚಿತ್ರಗಳು ಕಣ್ಣ ಮುಂದೆ ಹಾದು ಹೋಗಬಹುದು. ಒಬ್ಬೊಬ್ಬರ ನೆನಪುಗಳನ್ನು ಆಧರಿಸಿ ವಾಸನೆಗಳು ಏನಕ್ಕೆ ಬೇಕಾದರೂ ಕನೆಕ್ಟಾಗೋ ಶಕ್ತಿ ಹೊಂದಿವೆಯಂತೆ. ನಿಖರವಾಗಿ ಹೇಳಬೇಕಂದ್ರೆ ನಮ್ಮ ನರನಾಡಿಗಳಲ್ಲಿಯೂ ನೆನಪುಗಳ ಪರಿಮಳ ಅಡಗಿದೆ!
ಪೆನ್ ಕ್ಯಾಪ್ಗಳ ಮೇಲೇಕೆ ತೂತು?
ನಾವು ಎಷ್ಟೇ ಹೈಟೆಕ್ ಆಗಿರಬಹುದು. ಆದರೆ ಕಾಗದ ಪೆನ್ಗಳಿಲ್ಲದೆ ಇರಲಾದೀತೇ? ಪೆನ್ಗಳು ನಮ್ಮ ದೈನಂದಿನ ಅಗತ್ಯವಸ್ತುಗಳಲ್ಲಿ ಒಂದು. ಅದರಲ್ಲೂ ಡಾಟ್ಪೆನ್ಗಳು ಹೆಚ್ಚು ಆಪ್ಯಾಯಮಾನ. ಆದರೆ ಇಂತಹ ಡಾಟ್ ಪೆನ್ಗಳ ಕ್ಯಾಪ್ಗಳ ಮೇಲೇಕೆ ತೂತು ಎಂದು ಬಹುತೇಕರು ಯೋಚಿಸಿರುವುದು ಅಪರೂಪವೇ ಸರಿ. ಇಂಕ್ ಒಣಗಿ – ಹೆಚ್ಚು ಪೆನ್ ಖರೀದಿ ಮಾಡಲೆಂದೇ… ಕ್ಯಾಪ್ ಮೇಲಿನ ಹೊಳ್ಳೆ(ಗಳ) ಮೂಲಕ ಗಾಳಿಯಾಡಿ ದರೆ ಇಂಕ್ ಒಣಗುತ್ತಾ ಹೋಗಲಿದೆ. ಹಾಗೆ ಒಣಗುತ್ತಾ ಹೋದಲ್ಲಿ ರಿಫಿಲ್ ಬೇಗ ಖಾಲಿಯಾಗಿ ಹೆಚ್ಚಿನ ಪೆನ್ಗಳನ್ನು ಖರೀದಿ ಮಾಡಲೆಂಬ ಉದ್ದೇಶವೇ? ಖಂಡಿತ ಅಲ್ಲ. ಸಮಾನಾಂತರ ಒತ್ತಡ… ಕ್ಯಾಪ್ಮೇಲೆ ಸಣ್ಣ ತೂತುಗಳಿದ್ದರೆ ಪೆನ್ ಕ್ಯಾಪ್ ತೆಗೆದು ಹಾಕಿ ಮಾಡುವುದು ಸುಲಭವಾಗಲಿದೆ.
ಒಂದು ವೇಳೆ ತೂತಿಲ್ಲದ ಕ್ಯಾಪ್ ಬಳಸಿದರೆ ಹಾಕಿ ತೆಗೆದು ಮಾಡುವುದು ಕಷ್ಟವಾಗಲಿದೆ. ಗಾಳಿಯ ಸಮಾನಾಂತರ ಒತ್ತಡಕ್ಕಾಗಿ ಮುಚ್ಚಳ ಮೇಲೆ ಹೊಳ್ಳೆ ಮಾಡಿರುತ್ತಾರೆಂಬ ವಾದವೂ ಇದೆ. ನೈಜ ಸತ್ಯವೇನು? ಹಿಂದೆಲ್ಲಾ ಪೆನ್ಗಳ ಕ್ಯಾಪ್ಗಳ ಮೇಲೆ ದೊಡ್ಡ ಮಣಿಯನ್ನು ಇರಿಸಲಾಗುತ್ತಿತ್ತು. ಪೆನ್ ಅಂದ ಹೆಚ್ಚಿಸುವ ಉದ್ದೇಶದೊಂದಿಗೆ ಆಕಸ್ಮಿಕವಾಗಿ ನುಂಗದಿರಲು ಹೀಗೆ ಮಾಡಲಾಗುತ್ತಿತ್ತು. ಈಗ ಮಣಿಯಾಕಾರದ ಬದಲಿಗೆ ತೂತು ಕ್ಯಾಪಿನ ಪೆನ್ಗಳನ್ನು ತಯಾರಿಯಾಗುತ್ತಿದೆ. ನುಂಗಿದರೆ ಗಂಟಲಿನ ಗಾಳಿ ನಳಿಕೆಯಲ್ಲಿ ಕ್ಯಾಪ್ ಸಿಲುಕಿದರೂ ಅದರಲ್ಲಿನ ತೂತುಗಳ ಮೂಲಕ ಉಸಿರಾಟಕ್ಕೆ ಅನುಕೂಲವಾಗಲಿದೆ. ಪ್ರಾಣಾಪಾಯದಿಂದ ಪಾರಾಗಬಹುದು. ಹೀಗಾಗಿ ಪೆನ್ ಕ್ಯಾಪ್ಗಳ ಮೇಲೆ ತೂತು ಅಗತ್ಯ. ನೀತಿ: ಮುಚ್ಚಿದ ತೂತು ತರಲಿದೆ ಆಪತ್ತು!
ನೀರಿಗೆ ಬಾಯಿ ಹಾಕದಿರಿ!
ಹೌದು! ಹೋಟೆಲ್ ಗಳಲ್ಲಿ ಕೊಳ್ಳುವ ವಾಟರ್ ಬಾಟಲಿಗಳು ದುಬಾರಿಯಾಗಲಿದೆ. ಗರಿಷ್ಠ ಮಾರಾಟ ಬೆಲೆ (ಎಂಆರ್ ಪಿ)ಗಿಂತಲೂ ಇಂತಹ ವಾಟರ್ ಬಾಟಲ್ ಗಳನ್ನು ಮಾರಾಟ ಬಹುದಾಗಿದೆ. ಅರೆ ಇದು ತಪ್ಪಲ್ಲವೇ? ಇಲ್ಲವೆನ್ನುತ್ತದೆ ಸುಪ್ರೀಂ ಕೋರ್ಟ್. `ಹೋಟೆಲ್ ಗೆ ತೆರಳುವವರು ಕೇವಲ ನೀರು ಕುಡಿಯಲಿಕ್ಕೆ ಮಾತ್ರವೇ ಹೋಗುವುದಿಲ್ಲ’ ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್? ಹೋಟೆಲ್ನವರು ಪೀಠೋಪಕರಣ ಸೇರಿದಂತೆ ದುಬಾರಿ ಹೂಡಿಕೆ ಮಾಡಿರುತ್ತಾರೆ. ಹೀಗಾಗಿ ಎಂಆರ್ಪಿಗಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದೆಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ. ಹಾಗದರೆ ವಾಣಿಜ್ಯ ಮತ್ತು ತೆರಿಗೆ ಇಲಾಖೆಯವರು ವಿಧಿಸುವ ತೆರಿಗೆಗೆ ಎಲ್ಲಿದೆ ಕಿಮ್ಮತ್ತು? ಬಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನಮ್ಮಲ್ಲಿಲ್ಲ!
ಕಿತ್ತ ಹಲ್ಲು ಮತ್ತೆ ಬೇರಿಳಿಸುತ್ತಂತೆ!
ಹಲಲ್ಲೆಂಬುದು ಅತ್ಯಂತ ಅಗತ್ಯದ ಅಂಗ. ಅದುವೇ ಒಂದಿಡೀ ದೇಹದ ಆರೋಗ್ಯ ಮೂಲವೂ ಹೌದು. ಇಂಥಾ ಹಲ್ಲುಗಳ ಆರೋಗ್ಯದ ಬಗ್ಗೆ ಇದೀಗ ನಾನಾ ಥರದಲ್ಲಿ ಜಾಗೃತಿ ಮೂಡಿಕೊಂಡಿದೆ. ಆದರೆ ಹಲ್ಲಿನ ವೈವಿಧ್ಯಗಳ ಬಗ್ಗೆ, ಅದರ ಸೂಕ್ಷ್ಮಾತಿ ಸೂಕ್ಷ್ಮವಾದ ಅಂಶಗಳ ಬಗ್ಗೆ ವಿಚಾರ ವಿನಿಮಯವಾಗೋದು ಅತೀ ವಿರಳ. ಆದ್ರೆ ಒಂದಷ್ಟು ಸಂಶೋಧನೆಗಳು, ನಮ್ಮ ನಡುವೆಯೇ ಇರೋ ಒಂದಷ್ಟು ನಂಬಿಕೆಗಳು ಹಲ್ಲುಗಳಿಗಿರೋ ಶಕ್ತಿ ಸಾಮರ್ಥ್ಯಗಳಿಗೆ ಕನ್ನಡಿ ಹಿಡಿದಂತಿದೆ. ಸಾಮಾನ್ಯವಾಗಿ ಒಂದು ಸಲ ಹಲ್ಲನ್ನು ಕಿತ್ತರೆ ಮತ್ತೆ ಅದು ಉಪಯೋಗಕ್ಕೆ ಬರೋದಿಲ್ಲ ಅನ್ನೋದು ನಮ್ಮೆಲ್ಲರ ನಂಬಿಕೆ. ಆದರೆ ವಾಸ್ತವ ಅನ್ನೋದು ಅದಕ್ಕೆ ವಿರುದ್ಧವಾಗಿದೆ. ಯಾಕಂದ್ರೆ ಕಿತ್ತ ಹಲ್ಲನ್ನು ಮತ್ತೆ ಅದೇ ಜಾಗದಲ್ಲಿಟ್ಟುಕೊಂಡರೆ ವಾರದೊಪ್ಪತ್ತಿನಲ್ಲಿಯೇ ಅದು ಮತ್ತೆ ಬೇರು ಬಿಟ್ಟುಕೊಳ್ಳುತ್ತಂತೆ. ಆದರೆ ಅಂಥಾ ತಾಳ್ಮೆ ಮತ್ತು ನೋವನ್ನು ತಡೆದುಕೊಳ್ಳೋ ಶಕ್ತಿ ಯಾರಿಗಿದೆಯೋ, ಯಾರ ಬಾಯಲ್ಲಿ ಕಿತ್ತ ಹಲ್ಲು ಬೇರಿಳಿಸಿದೆಯೋ ಗೊತ್ತಿಲ್ಲ. ಆದ್ರೆ ಹಲ್ಲಿಗೆ ಅಂಥಾದ್ದೊಂದು ಶಕ್ತಿ ಇರೋದಂತೂ ಹೌದಂತೆ.
ಚೇಳುಗಳ ಬೆರಗಿನ ಲೋಕ!
ಚೇಳು ಅನ್ನೋ ಹೆಸರು ಕಿವಿಗೆ ಬಿದ್ದಾಕ್ಷಣವೇ ಗಾಬರಿಯಾಗಿ ಬೆವರಾಡುವವರೇ ಹೆಚ್ಚು. ತುಸು ಕಾಡಿನ ಪ್ರದೇಶವೂ ಸೇರಿದಂತೆ ನಾನಾ ಭಾಗಗಳಲ್ಲಿ ಚೇಳುಗಳ ಇರುವಿಕೆ ಇದ್ದೇ ಇರುತ್ತೆ. ಸಣ್ಣಗೊಂದು ಮಳೆ ಹನಿದಾಗ ಬೆಚ್ಚಗಿನ ಜಾಗ ಹುಡುಕಿಕೊಂಡು ಇದು ಮನೆಯ ಆಸುಪಾಸಿಗೇ ಬಂದು ಬಿಡೋದಿದೆ. ಆದ್ದರಿಂದಲೇ ಹಳ್ಳಿ ಭಾಗಗಳಲ್ಲಿ ಆದಷ್ಟು ಮನೆ ಸುತ್ತಲ ವಾತಾವರಣವನ್ನು ನೀಟಾಗಿಟ್ಟುಕೊಳ್ತಾರೆ. ಒಂದು ವೇಳೆ ಈ ಚೇಳುಗಳೇನಾದ್ರೂ ಕಚ್ಚಿ ಬಿಟ್ಟರೆ ಒಂದೆರಡು ದಿನಗಳ ಕಾಲ ನರಕ ಯಾತನೆ ಖಚಿತ. ಆ ನೋವು ಅನುಭವಿಸಿದವರಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಅಷ್ಟಾದರೂ ಅದರ ಗಾಯ ಬೇಗನೆ ವಾಸಿಯಾಗುವಂಥಾದ್ದಲ್ಲ. ಹೀಗೆ ನಮಗೆ ಚೇಳಿನ ವಿಷದ ಉಪದ್ರವದ ಬಗ್ಗೆ ಮಾತ್ರ ಗೊತ್ತಿದೆ. ಆದ್ರೆ ಅವುಗಳ ಜೀವನಕ್ರಮ, ಪ್ರಬೇಧಗಳ ಬಗೆಗಿನ ಮಾಹಿತಿ ನಿಜಕ್ಕೂ ಬೆರಗಾಗಿಸುವಂತಿದೆ.
ಚೇಳೆಂದರೆ ಹೈರಾಣಾಗಿಸೋ ವಿಷದ ಜೀವಿ ಎಂದೇ ನಾವು ನಂಬಿದ್ದೇವೆ. ನಮ್ಮ ಸುತ್ತಲಿರುವ ಒಂದಷ್ಟು ಪ್ರಬೇಧದ ಚೇಳುಗಳು ಅದನ್ನೂ ಪುಷ್ಟೀಕರಿಸುವಂತಿರೋದು ಸುಳ್ಳಲ್ಲ. ಆದ್ರೆ ಅಂಥಾ ಚೇಳುಗಳೂ ಕೂಡಾ ತಮ್ಮ ಮರಿಗಳಿಗಾಗಿ ಎಂಥಾ ತ್ಯಾಗಕ್ಕೂ ಸಿದ್ಧವಿರುತ್ತವೆ. ಅದ್ರಲ್ಲಿಯೂ ತಾಯಿ ಚೇಳು ತನ್ನೊಳಗೆ ಎಷ್ಟೇ ವಿಷವಿದ್ದರೂ ತನ್ನ ಮರಿಗಳಿಗೆ ಮಾತ್ರ ಅಮೃತವನ್ನೇ ಉಣ ಬಡಿಸುತ್ತೆ. ಚೇಳುಗಳು ಮೊಟ್ಟೆಯಿಡೋದಿಲ್ಲ. ಮರಿ ಹಾಕುತ್ತವೆ. ಹೆಚ್ಚಿನ ಸಂಖ್ಯೆಯ ಮರಿಗಳಿದ್ರೂ ಕೂಡಾ ತಾಯಿ ಚೇಳು ಹತ್ತು ದಿನ ಅವುಗಳನ್ನ ಬೆನ್ನ ಮೇಲಿಟ್ಟುಕೊಂಡೇ ಬದುಕುತ್ತೆ. ಕೆಲ ಸೀಜ಼ನ್ನುಗಳಲ್ಲಿ ಅವುಗಳಿಗೆ ಆಹಾರದ ಅಭಾವವುಂಟಾಗುತ್ತೆ. ಅಂಥಾ ಹೊತ್ತಲ್ಲಿ ಮರಿಗಳು ಹುಟ್ಟಿಕೊಂಡ್ರೆ ಅವುಗಳನ್ನು ಸಾಕೋದು ಕಷ್ಟವಾಗುತ್ತೆ. ಹೊರಗೆಲ್ಲೂ ಆಹಾರ ಸಿಗದಿದ್ರೆ ತನ್ನ ದೇಹವನ್ನೇ ತಾಯಿ ಚೇಳು ಮರಿಗಳಿಗೆ ಆಹಾರವಾಗಿಸಿ ಬದುಕಿಸುತ್ತೆ. ಆ ಮೂಲಕ ತಾಯಿ ಚೇಳು ಮರಿಗಳಿಗಾಗಿಯೇ ಜೀವ ಬಿಡುತ್ತೆ.
ನಾವು ಚೇಳುಗಳ ಸಂಕುಲವೇ ವಿಷಕಾರಿ ಅನ್ನೋ ನಂಬಿಕೆಯಿಂದಿದ್ದೇವೆ. ಅದು ಅಕ್ಷರಶಃ ತಪ್ಪು. ಒಟ್ಟಾರೆ ಚೇಳುಗಳಲ್ಲಿ ಕಾಲಭಾಗದಷ್ಟು ಮಾತ್ರ ವಿಷಕಾರಿಯಾಗಿರುತ್ತವೆ. ಹಾಗಂತ ಅವುಗಳ ಸಮೂಹವೇನು ಸಾಮಾನ್ಯದಲ್ಲ. ಒಂದು ಅಧ್ಯಯನದ ಪ್ರಕಾರ ಈ ಜಗತ್ತಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಬೇಧದ ಚೇಳುಗಳಿದ್ದಾವೆ. ಅವುಗಳಲ್ಲಿ ಜನರಿಗೆ ಪರಿಚಯವಿರೋದು ಕೆಲವೇ ಕೆಲ ಪ್ರಬೇಧಗಳು ಮಾತ್ರ. ಇಂಥಾ ಚೇಳುಗಳು ೪೩೫ ಮಿಲಿಯನ್ ವರ್ಷಗಳಿಂದ ಈ ಭೂಮಿ ಮೇಲಿವೆ ಅನ್ನಲಾಗ್ತಿದೆ.
ಇಂಥಾ ಚೇಳುಗಳು ಹೆಚ್ಚೆಂದರೆ ಹತ್ತು ವರ್ಷದ ವರೆಗೆ ಬದುಕುತ್ತವೆ. ಅಷ್ಟಕ್ಕೂ ಅವುಗಳ ಜೀವನ ಕ್ರಮವೇ ಇತರೇ ಜೀವ ಕೋಟಿಗಿಂತ ವಿಶಿಷ್ಟವಾಗಿವೆ. ಇವುಗಳ ಸಂತಾನೋತ್ಪತ್ತಿ ಮತ್ತು ಮಿಲನದ ಪ್ರಕ್ರಿಯೆಯೂ ವಿಭಿನ್ನ. ಇವು ಪ್ರಣಯ ಕಾಲದಲ್ಲಿ ವಿಶೇಷವಾದೊಂದು ನೃತ್ಯದಂಥಾದ್ದನ್ನ ಮಾಡೋ ಮೂಲಕ ಸಂಗಾತಿಯ ಗಮನ ಸೆಳೆಯುತ್ತವೆ. ಆ ಬಳಿಕ ಗರ್ಭಗಟ್ಟೋ ಹೆಣ್ಣು ಚೇಳಿಗೆ ಗಂಡು ಚೇಳಿನ ಕಡೆಯಿಂದ ಆರೈಕೆಯೂ ಸಿಗುತ್ತೆ. ಆದ್ರೆ ಆಹಾರದ ಅಭಾವವಾದ ಪಕ್ಷದಲ್ಲಿ ಹೆಣ್ಣು ಚೇಳಿನ ಜೀವನ ಮರಿಯಾದ ನಂತರ ಕೊನೆಗೊಳ್ಳುತ್ತೆ.
ಕಸ ಗುಡಿಸೋ ಕಸುಬು ಖಾಯಂ!
ಆಯಾ ವಯಸಲ್ಲಿ ಏನೇನು ಮಾಡಬೇಕು, ಯಾವ್ಯಾವ ಜವಾಬ್ದಾರಿಗಳನ್ನೆಲ್ಲ ನಿಭಾಯಿಸಿಕೊಂಡು ಮುಂದುವರೆಯಬೇಕು ಎಂಬುದಕ್ಕೆಲ್ಲ ನಿಖರವಾದ ರೀತಿ ರಿವಾಜುಗಳಿದ್ದಾವೆ. ಅದರಲ್ಲಿಯೂ ಈ ಮದುವೆ ಅನ್ನೋದೊಂದು ತೀರಾ ಮುಖ್ಯವಾದ ಘಟ್ಟ ಎಂಬ ನಂಬಿಕೆ ನಮ್ಮಲ್ಲಿದೆ. ಈಗಂತೂ ಮದುವೆ ಅನ್ನೋದೇ ಶಾಶ್ವತ ಬಂಧನ ಎಂಬ ಮನಸ್ಥಿತಿ ಇರೋದರಿಂದ ನಮ್ಮಲ್ಲಿ ಯುವ ಸಮೂಹ ಅದರಿಂದ ಪಾರಾಗೋ ದಾರಿ ಹುಡುಕುತ್ತಿದೆ. ನಮ್ಮ ದೇಶದಲ್ಲಿ ಹಾಗೆ ಮದುವೆಯಾಗದೆ ಉಳಿದರೆ ಒಂದಷ್ಟು ಮೂದಲಿಕೆಗಳು, ರೂಮರುಗಳು ಮಾತ್ರವೇ ಉತ್ಪತ್ತಿಯಾಗುತ್ತವೆ. ಆದರೆ ಅದೊಂದು ದೇಶದಲ್ಲಿ ಮದುವೆ ಆಗದೆ ಉಳಿದ ಗಂಡೈಕಳನ್ನ ಬೀದಿಗೆ ತಂದು ನಿಲ್ಲಿಸುವಂಥಾದ್ದೊಂದು ಸಂಪ್ರದಾಯವಿದೆ. ಆ ಥರದ್ದೊಂದು ವಿಕ್ಷಿಪ್ತವಾದ ಸಂಪ್ರದಾಯ ಚಾಲ್ತಿಯಲ್ಲಿರೋದು ಜರ್ಮನಿಯ ಕೆಲ ಪ್ರದೇಶಗಳಲ್ಲಿ. ಅಲ್ಲಿಯೂ ಇಪ್ಪತೈದರ ॒
ನೋವಿನ ಕಥೆ!
ನೋವೆಲ್ಲವನ್ನೂ ಎದೆಯಲ್ಲಿಯೇ ಹುಗಿದಿಟ್ಟುಕೊಂಡು ನಗುತ್ತಾ ಬದುಕೋದಿದೆಯಲ್ಲಾ? ಅದು ಸಾಮಾನ್ಯರಿಗೆ ಸಿದ್ಧಿಸೋ ಸಂಗತಿಯೇನಲ್ಲ. ಅದರಲ್ಲೂ ಅಂಥ ನೋವಿಟ್ಟುಕೊಂಡು ನಗಿಸೋದನ್ನೇ ಬದುಕಾಗಿಸಿಕೊಳ್ಳೋದೊಂದು ಸಾಹಸ. ನೀವೇನಾದ್ರೂ ಕಮೇಡಿಯನ್ನುಗಳಾಗಿ ಗೆದ್ದವರ ಬದುಕಿನ ಹಿನ್ನೆಲೆ ಹುಡುಕಿದ್ರೆ ಅಲ್ಲೊಂದು ನೋವಿನ ಕಥೆ ಇದ್ದೇ ಇರುತ್ತೆ. ಈಗ ಹೇಳ ಹೊರಟಿರೋ ಕಥೆ ಕೂಡಾ ಅಂಥದ್ದೆ.
ಜಿಮ್ ಕ್ಯಾರಿ ಈ ಕಥೆಯ ನಾಯಕ. ಈತ ಕೆನಡಿಯನ್, ಅಮೆರಿಕನ್ ನಟ. ಇತ್ತೀಚಿನ ದಿನಗಳಲ್ಲಿ ಸ್ಟ್ಯಾಂಡಪ್ ಕಮೆಡಿಯನ್ ಆಗಿಯೂ ಬಲು ವಿಖ್ಯಾತಿ ಗಳಿಸಿಕೊಂಡಿರುವಾತ. ಈವತ್ತಿಗೆ ಆತ ಖ್ಯಾತಿಯ ಉತ್ತುಂಗವೇರಿದ್ದಾನೆ. ಆರ್ಥಿಕವಾಗಿಯೂ ಸಾಕಷ್ಟು ಬಲಾಢ್ಯನಾಗಿದ್ದಾನೆ. ಆದರೆ ಆತನ ಕಾಮಿಡಿ ಪ್ರೋಗ್ರಾಮುಗಳನ್ನು ನೋಡಿದವರ್ಯಾರೂ ಆತ ನಡೆದು ಬಂದು ಕಡು ಕಷ್ಟದ ಹಾದಿಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಜಗತ್ತಿನ ಅದೃಷ್ಟವಂತ ಮಕ್ಕಳೆಲ್ಲ ಬದುಕನ್ನು ಬೆರಗಿಂದ ನೋಡೋ ಕಾಲದಲ್ಲಿಯೇ ಜಿಮ್ ಪಾಲಿಗೆ ದುರಾದೃಷ್ಟ ವಕ್ಕರಿಸಿಕೊಂಡಿತ್ತು. ಆತನದ್ದು ತೀರಾ ಬಡತನದ ಫ್ಯಾಮಿಲಿ. ಅಪ್ಪ ಹೇಗೋ ಕಷ್ಟಪಟ್ಟು ಒಂದು ಕೆಲಸ ಮಾಡುತ್ತಾ ಸಂಸಾರವನ್ನ ನಿಭಾಯಿಸ್ತಿದ್ದ. ಆದ್ರೆ ಅದೊಂದು ದಿನ ಇದ್ದೊಂದು ಕೆಲಸವೂ ಕೈತಪ್ಪಿ ತಂದೆ ದಿಕ್ಕು ತೋಚದಂತಾಗಿ ಕ್ರಮೇಣ ಹಾಸಿಗೆ ಹಿಡಿದು ಬಿಟ್ಟಿದ್ದ.
ಆ ಹೊತ್ತಿನಲ್ಲಿ ಇಡೀ ಸಂಸಾರ ನಿಭಾಯಿಸುವ ಜವಾಬ್ದಾರಿ ಕಿಮ್ನ ಹೆಗಲೇರಿಕೊಂಡಿತ್ತು. ಆತ ಕೆಲಸಕ್ಕಾಗಿ ಅಲ್ಲಿಲ್ಲಿ ಅಡ್ಡಾಡಿ ಕಡೆಗೂ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ. ಅದರ ನಡುವೆಯೇ ಓದನ್ನೂ ಮುಂದುವರೆಸಿದ್ದ. ಹಾಗೆ ಕಷ್ಟ ಹೆಗಲೇರಿಕೊಳ್ಳೋ ಕಾಲದಲ್ಲಿ ಕಿಮ್ಗೆ ಕೇವಲ ಹದಿನಾಲಕ್ಕು ವರ್ಷ. ಅಂಥಾ ಕಷ್ಟವಿದ್ದರೂ ಕೂಡಾ ಕಿಮ್ ಶೋ ಒಂದರಲ್ಲಿ ಪರ್ಫಾರ್ಮೆನ್ಸ್ ನೀಡಿ ನಂತರ ನಟನಾಗಿ ಹೊರಹೊಮ್ಮಿದ್ದೊಂದು ಸ್ಫೂರ್ತಿದಾಯಕ ಕಥೆ.
ವೈರಸ್ಸು ಹೊಂಚಿ ಕೂತಿರುತ್ತೆ!
ಎಲ್ಲಿ ಮಡಿವಂತಿಕೆ ಅಧಿಕವಾಗಿರುತ್ತೋ ಅಲ್ಲಿಯೇ ನಾನಾ ಬಯಕೆಗಳು ಥರ ಥರದ ಮುಖವಾಡ ತೊಟ್ಟು ಕೂತಿರುತ್ವೆ. ಭಾರತದಲ್ಲಿಯಂತೂ ನಾನಾ ವಿಚಾರಗಳಲ್ಲಿ ಇಂಥಾ ಮಡಿವಂತಿಕೆ ತೀವ್ರವಾಗಿದೆ. ಹಾಗಿರುವಾಗ ಕಾಮದ ಬಗ್ಗೆ ಇಲ್ಲಿ ಬಿಡು ಬೀಸಾಗಿ ಮಾತಾಡೋದು ಕೊಂಚ ಕಷ್ಟ. ಆದ್ರೆ ಜನಸಂಖ್ಯೆ ಮಾತ್ರ ಇಡೀ ವಿಶ್ವಕ್ಕೇ ಸೆಡ್ಡು ಹೊಡೆಯುವಂತೆ ಬೆಳೆಯುತ್ತಲೇ ಇದೆ. ಇದರಾಚೆಗೆ ಮೈಥುನದ ಬಗ್ಗೆ ಅತೀವ ಆಸಕ್ತಿ ಹೊಂದಿರೋ ಮಂದಿಯ ಪಾಲಿಗೆ ಇತ್ತೀಚಿನ ದಿನಗಳಲ್ಲಿ ನೀಲಿ ಚಿತ್ರಗಳು ವರದಾನವಾಗಿವೆ.
ಇಂಥಾ ನೀಲಿ ಚಿತ್ರಗಳನ್ನ ಹುಡುಕಾಡಿ ನೋಡೋ ದೇಶಗಳ ಲಿಸ್ಟಿನಲ್ಲಿ ನಮಗೂ ಅಗ್ರ ಸ್ಥಾನವಿದೆ. ಅದರಲ್ಲಿ ಲಿಂಗಾಧಾರಿತ ಸರ್ವೆಗಳು ನಡೆದಾಗ ಹೆಂಗಳೆಯ ಪಾಲೂ ಮಹತ್ತರವಾಗಿರೋ ವಿಚಾರ ಬಯಲಾಗಿದೆ. ಅದರರ್ಥ ನೀಲಿ ಚಿತ್ರಗಳತ್ತ ವಯೋಮಾನದ ಹಂಗಿಲ್ಲದೆ ಜನ ವಾಲಿಕೊಂಡಿದ್ದಾರನ್ನೋದು. ಹೀಗೆ ನೀಲಿ ಚಿತ್ರಗಳನ್ನ ನೋಡೋದನ್ನೇ ಚಟವಾಗಿಸಿಕೊಂಡರೆ ಅದರಿಂದ ಮನೋ ದೈಹಿಕವಾಗಿ ಒಂದಷ್ಟು ಅಡ್ಡಪರಿಣಾಮಗಳಾಗುತ್ತವೆ.
ಹಾಗಂತ ನೀಲಿ ಚಿತ್ರಗಳಿಂದ ಮನಸಿಗೆ, ದೇಹಕ್ಕೆ ಮಾತ್ರವೇ ಪರಿಣಾಮವಾಗುತ್ತೆ ಅಂದುಕೊಳ್ಳುವಂತಿಲ್ಲ. ಅದರಿಂದ ನಿಮ್ಮ ಮೊಬೈಲು, ಕಂಪ್ಯೂಟರ್, ಲ್ಯಾಪ್ಟಾಪ್ಗಳು ವೈರಸ್ ದಾಳಿಗೀಡಾಗಬಹುದು. ನಿಮ್ಮ ಫೈಲುಗಳೆಲ್ಲ ಸರ್ವನಾಶವಾಗಿ ಜುಟ್ಟು ಕೆದರಿಕೊಳ್ಳುವ ಸ್ಥಿತಿಯೂ ಎದುರಾಗಬಹುದು. ಇತ್ತೀಚೆಗೆ ನಡೆದಿರೋ ಕೆಲ ಶೋಧನೆಗಳು ಇಂಥಾದದ್ದೊಂದು ಎಚ್ಚರಿಕೆಯನ್ನ ರವಾನಿಸಿವೆ.
ಇಂಥಾ ಪಾರ್ನ್ ಸೈಟ್ಗಳು ನಾಯಿ ಕೊಡೆಗಳಂತೆ ಹಬ್ಬಿಕೊಂಡಿವೆ. ಅಂಥವೆಲ್ಲ ಭಾರೀ ಪ್ರಮಾಣದಲ್ಲಿ ಕಮಾಯಿಯನ್ನೂ ಮಾಡಿಕೊಳ್ಳುತ್ತಿವೆ. ಇಂಥವಕ್ಕೆ ಕಾನೂನು ಕಟ್ಟಳೆಗಳ ಬಂಧವಿದ್ದರೂ ಬಿಂದಾಸಾಗಿಯೇ ಕಾರ್ಯ ನಿರ್ವಹಿಸುತ್ತಿವೆ. ಇಂಥವೆಲ್ಲ ಬೇಕೆಂದೇ ವೈರಸ್ ಹಬ್ಬಿಸೋ ಕೆಲಸವನ್ನೂ ಮಾಡ್ತಿವೆಯಂತೆ. ಈ ಮೂಲಕವೇ ಆಂಟಿ ವೈರಸ್ ಕಂಪೆನಿಗಳಿಗೆ ಸಹಕಾರಿಯಾಗಿಯೂ ನಡೆದುಕೊಳ್ತಿವೆಯಂತೆ. ಇಂಥಾ ಪಾರ್ನ್ ವೆಬ್ಸೈಟ್ಗಳಲ್ಲಿ ಕೆಲವೊಮ್ಮೆ ಸಿಸ್ಟಮ್ ಅನ್ನು ಸರ್ವನಾಶ ಮಾಡಿ ಬಿಡಬಲ್ಲ ರಕ್ಕಸ ವೈರಸ್ಗಳೂ ದಾಳಿಯಿಡುತ್ತವೆ ಅಂತ ವರದಿಗಳು ಹೇಳುತ್ತಿವೆ.