ನಿರ್ದೇಶಕ ಆಟ್ಲೀ ಕಾಲಿವುಡ್‍ನ ಯಂಗ್ ಡೈರೆಕ್ಟರ್. ಥೇರಿ, ಮರ್ಸಲ್, ಬಿಗಿಲ್ ನಂತಹ ಸೂಪರ್ ಹಿಟ್ ಸಿನಿಮಾಗಳ ಸಾರಥಿ. ಸದ್ಯ `ಜವಾನ್’ ಚಿತ್ರದ ರುವಾರಿಯಾಗಿದ್ದಾರೆ. ಇದೇ ಮೊದಲ ಭಾರಿಗೆ ಬಾಲಿವುಡ್ ಕಿಂಗ್ ಖಾನ್‍ಗೆ ಆ್ಯಕ್ಷನ್ ಕಟ್ ಹೇಳಿರುವ ಆಟ್ಲೀ, `ಜವಾನ್’ ಸಿನಿಮಾ ಆಡಿಯೋ ಲಾಂಚ್ ವೇಳೆ ಅಚ್ಚರಿಯ ವಿಚಾರಗಳನ್ನ ಹೊರಹಾಕಿದ್ದಾರೆ. ಅದೊಂದು ದಿನ ಮನ್ನತ್ ಮನೆಯ ಗೇಟ್ ಮುಂದೆ ನಿಂತುಕೊಂಡು ಫೋಟೋ ತಗೊಂಡಿದ್ದೆ. ಆದರೆ, ಅದೇ ಮನೆಯ ಗೇಟು ನನಗಾಗಿ ಮುಂದೊಂದು ದಿನ ತೆರೆಯಬಹುದೆಂದು ಊಹಿಸಿರಲಿಲ್ಲ. ಹೀಗನ್ನುತ್ತಾ ಹಳೆಯ ನೆನಪುಗಳಿಗೆ ಜಾರಿದ ಆಟ್ಲೀ ಕಣ್ಣೀರಾಗಿದ್ದಾರೆ.
ಅದು 2008ರ ಸಮಯ. ಸಿನಿಮಾ ಜಗತ್ತಿನ ಮೇಲೆ ನೂರೆಂಟು ಕನಸು ಕಟ್ಟಿಕೊಂಡು ಆಟ್ಲೀ ಬಣ್ಣದ ಲೋಕಕ್ಕೆ ಬಂದಿಳಿದರು. ಅದ್ಹೇಗೋ ಏನೋ ಗೊತ್ತಿಲ್ಲ ಎಸ್ ಶಂಕರ್ ನಿರ್ದೇಶನದ `ಎಂಥಿರನ್’ ಸಿನಿಮಾಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುವ ಅವಕಾಶ ಸಿಗುತ್ತೆ. ರೋಬೋ ಆದ್ಮೇಲೆ ಮತ್ತದೇ ನಿರ್ದೇಶಕರ ನನ್ಬನ್ ಸಿನಿಮಾಗೆ ವರ್ಕ್ ಮಾಡುವ ಚಾನ್ಸ್ ದಕ್ಕುತ್ತೆ. ಹೀಗೆ, ಶಂಕರ್ ಅವರ ಪಿಕ್ಚರ್ ಗಳಿಗೆ ಅಸಿಸ್ಟೆಂಟ್ ಆಗಿ ದುಡಿಯುತ್ತಾ, ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುತ್ತಾ ಸಾಗುತ್ತಿದ್ದ ಆಟ್ಲೀ, 2013ರ ಹೊತ್ತಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು `ರಾಜರಾಣಿ’ ಸಿನಿಮಾ ಡೈರೆಕ್ಟ್ ಮಾಡ್ತಾರೆ. ಇಲ್ಲಿಂದ ಸ್ವತಂತ್ರ ನಿರ್ದೇಶಕನಾಗಿ ಸಿನಿಕೃಷಿ ಆರಂಭಿಸಿದ ಆಟ್ಲೀ, 2016ರಲ್ಲಿ ಫಸ್ಟ್ ಟೈಮ್ ದಳಪತಿ ವಿಜಯ್‍ಗೆ ಆ್ಯಕ್ಷನ್ ಕಟ್ ಹೇಳಿದರು. ಬ್ಯಾಕ್ ಟು ಬ್ಯಾಕ್ ವಿಜಯ್ ಜೊತೆಯೇ ಕೈ ಜೋಡಿಸಿ ಥೇರಿ, ಮರ್ಸಲ್, ಬಿಗಿಲ್‍ನಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನ ಕಾಲಿವುಡ್‍ಗೆ ಕಾಣಿಕೆಯನ್ನಾಗಿ ನೀಡಿದರು.
ಬಿಗಿಲ್ ನಂತರ ಸುಮಾರು 3 ವರ್ಷಗಳ ಕಾಲ ನಿರ್ದೇಶನದಿಂದ ದೂರ ಇದ್ದರು. ಕೊನೆಗೆ ಕಿಂಗ್ ಖಾನ್ ಜೊತೆ `ಜವಾನ್’ ಸಿನಿಮಾ ಘೋಷಣೆ ಮಾಡಿ, ಸೌತ್-ನಾರ್ತ್ ಸಿನಿಮಾಮಂದಿ ಬೆಕ್ಕಸ ಬೆರಗಾಗುವಂತೆ ಮಾಡಿದರು. ಇದೀಗ `ಜವಾನ್’ ಬಿಡುಗಡೆಗೆ ಸಜ್ಜಾಗಿದೆ. ಇದೇ ಸೆಪ್ಟೆಂಬರ್ 07ರಂದು ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಪ್ಯಾನ್ ಇಂಡಿಯಾ ತುಂಬೆಲ್ಲಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗ್ತಿದೆ. ರೆಡ್ ಚಿಲ್ಲಿಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಗೌರಿಖಾನ್ ನಿರ್ಮಾಣದಲ್ಲಿ ಗ್ರ್ಯಾಂಡ್ ಆಗಿ ರೆಡಿಯಾಗಿರೋ ಜವಾನ್, ಟೀಸರ್, ಟ್ರೇಲರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರನ್ನ ಹುಚ್ಚೆಬ್ಬಿಸಿದೆ. ಬಾದ್‍ಷಾ ಲುಕ್ಕು-ಗೆಟಪ್ಪು, ಭಿನ್ನ-ವಿಭಿನ್ನ ಶೇಡ್ಸ್, ಆಟ್ಲೀ ಕೈಚಳಕ `ಜವಾನ್’ ಚಿತ್ರದ ಮೂಲಕ ವರ್ಕ್ ಆಗುವ ಸೂಚನೆ ಸಿಗ್ತಾಯಿದೆ. ದಳಪತಿ ವಿಜಯ್, ವಿಜಯ್ ಸೇತುಪತಿ, ದೀಪಿಕಾ, ಸಂಜಯ್ ದತ್ತ್ ಸೇರಿದಂತೆ ಸೌತ್-ನಾರ್ತ್ ಸ್ಟಾರ್‍ಗಳ ಸಂಗಮ ಈ ಚಿತ್ರದಲ್ಲಾಗಿರುವುದರಿಂದ ನಿರೀಕ್ಷೆ ಸಾಗರದಷ್ಟಿದೆ.
ಈಗಾಗಲೇ ಸಿನಿಮಾ ತಂಡ ಭರ್ಜರಿಯಾಗಿ ಪ್ರಚಾರ ಕಾರ್ಯ ಆರಂಭಿಸಿದೆ. ಬುರ್ಜ್ ಖಲೀಫಾದಲ್ಲಿ ಟ್ರೇಲರ್ ತೋರಿಸಿರೋ `ಜವಾನ್’ ಟೀಮ್, ಚೆನ್ನೈನಲ್ಲಿ ಅದ್ದೂರಿಯಾಗಿ ಆಡಿಯೋ ಲಾಂಚ್ ಮಾಡಿ ದಕ್ಷಿಣ ಭಾರತೀಯ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದೆ. ಇದೇ ಕಾರ್ಯಕ್ರಮದಲ್ಲೇ ನಿರ್ದೇಶಕ ಆಟ್ಲೀ ಮಾತನಾಡುತ್ತಾ ಜವಾನ್ ಸಿನಿಮಾ ಆಗುವುದಕ್ಕೆ ಪ್ರಮುಖ ಕಾರಣ ದಳಪತಿ ವಿಜಿಯಣ್ಣ ಎಂದರು. ಮಾತು ಮುಂದುವರೆಸಿ ಹಳೆಯ ನೆನಪುಗಳಿಗೆ ಜಾರಿದ ಜವಾನ್ ಸಾರಥಿ, ಎಂಥಿರನ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶಾರುಖ್ ಖಾನ್ ಮನೆ ಮುಂದೆ ಒಂದು ಫೋಟೋ ತೆಗೆಸಿಕೊಂಡಿದ್ದೆ. ಒಬ್ಬ ಅಭಿಮಾನಿಯಾಗಿ ಆ ಫೋಟೋ ನೋಡಿ ಅದೆಷ್ಟು ಸಂಭ್ರಮಿಸುತ್ತಿದ್ದೆ ಅನ್ನೋದು ನನಗೆ ಮಾತ್ರ ಗೊತ್ತು. ಅಷ್ಟಕ್ಕೂ, ಮುಂದೊಂದು ದಿನ ನನಗಾಗಿ ಮನ್ನತ್ ಮನೆಯ ಗೇಟು ಓಪನ್ ಆಗುತ್ತೆ, ಬಾದ್ ಷಾ ಮನೆಯೊಳಗೆ ಕಾಲಿಡುವ ಅವಕಾಶ ಸಿಗುತ್ತೆ ಅಂತ ನಾನು ಕನಸು ಮನಸಲ್ಲೂ ಎಣಿಸಿರಲಿಲ್ಲ. ಬಟ್, ಜವಾನ್ ಸಿನಿಮಾ ನನಗೆ ಅಂತಹ ಅವಕಾಶ ಮಾಡಿಕೊಡ್ತು, ಮನ್ನತ್ ಗೇಟ್ ಓಪನ್ ಆಯ್ತು. ಬಾಜೀಘರ್ ಹೀರೋಗೆ ಆ್ಯಕ್ಷನ್ ಕಟ್ ಹೇಳುವ ಅದೃಷ್ಟ ನಂಗೆ ಸಿಗ್ತು ಅಂತ ಹೃದಯತುಂಬಿ ಹೇಳಿಕೊಂಡರು. ಶಾರುಖ್ ಖಾನ್ ಅವರು ನನ್ನ ತಂದೆಯ ಸ್ಥಾನದಲ್ಲಿ ನಿಂತಿದ್ದಾರೆಂತಲೂ ತಿಳಿಸಿದರು.
ಅಷ್ಟಕ್ಕೂ, ಇಂತಹ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಸ್ಟಾರ್ ನಟರುಗಳ ಎಷ್ಟೋ ಜನ ಅಭಿಮಾನಿಗಳಿಗೆ ಅವರ ನೆಚ್ಚಿನ ನಟನನ್ನು ಭೇಟಿಯಾಗುವುದಕ್ಕೂ ಚಾನ್ಸ್ ಸಿಗಲ್ಲ. ಅಂತದ್ರಲ್ಲಿ, ಶಾರುಖ್ ಅಭಿಮಾನಿಯಾಗಿರುವ ಆಟ್ಲೀಗೆ ಕಿಂಗ್ ಖಾನ್‍ನ ಭೇಟಿ ಮಾಡುವುದರ ಜೊತೆಗೆ ಡೈರೆಕ್ಷನ್ ಮಾಡುವ ಆಪರ್ಚುನಿಟಿಯೂ ಸಿಕ್ಕಿದೆ. 13 ವರ್ಷಗಳ ಹಿಂದೆ ಅವರ ಮನೆಮುಂದೆ ನಿಂತಿದ್ದರು. ಅದೇ 13 ವರ್ಷಗಳ ನಂತರ ಶಾರುಖ್ ಮುಂದೆಯೇ ನಿಂತಿದ್ದಾರೆ. ಅವತ್ತು ಲಾಂಗ್ ಶಾಟ್‍ನಲ್ಲಿ ಮನ್ನತ್ ಮನೆಯ ಸೆಲ್ಫಿ ತಗೊಂಡ ಡೈರೆಕ್ಟರ್ ಆಟ್ಲೀ, ಇವತ್ತು ಅದೇ ಮನ್ನತ್ ಮನೆಯ ಯಜಮಾನ, ಸಾವಿರಾರು ಕೋಟಿ ಕುಬೇರ, ಕೋಟ್ಯಾಂತರ ಭಕ್ತರ ಆರಾಧ್ಯದೈವನಿಗೆ ಕ್ಲೋಸಪ್ ಶಾಟ್ ಇಟ್ಟು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಅಚೀವ್‍ಮೆಂಟ್ ಮತ್ತೊಂದು ಇರಬಹುದು. ಆದರೆ, ಒಬ್ಬ ಅಭಿಮಾನಿಯಾಗಿ ತನ್ನ ನೆಚ್ಚಿನ ನಟನಿಗೆ ಸಿನಿಮಾ ಡೈರೆಕ್ಟ್ ಮಾಡುವುದು ದೊಡ್ಡ ಸಾಧನೆಯೇ. ಎನಿವೇ, ಗುಡ್ ಲಕ್ ಆಟ್ಲೀ.