ಯುವ ನಟ ವಿಹಾನ್ ಹಾಗೂ ಅಂಕಿತಾ ಅಮರ್ ಜೋಡಿಯಾಗಿ ಅಭಿನಯಿಸುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿದೆ. ಇದೀಗ ಸಿನಿಮಾ ತಂಡದ ಕಡೆಯಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾಕ್ಕೆ ತೆಲುಗಿನ ‘ಗೀತಾಂಜಲಿ’ ಖ್ಯಾತಿಯ ಗಿರಿಜಾ ಶೆಟ್ಟರ್ ಆಗಮನವಾಗುತ್ತಿದೆ. ತೆಲುಗಿನಲ್ಲಿ ‘ಗೀತಾಂಜಲಿ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ, 90ರ ದಶಕದ ಜನಪ್ರಿಯ ನಟಿ ಗಿರಿಜಾ ಶೆಟ್ಟರ್, ಈಗ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇತ್ತೀಚೆಗೆ ಈ ಸುದ್ದಿಯನ್ನು ಖಚಿತಪಡಿಸಿರುವ ಚಿತ್ರತಂಡ, ಗಿರಿಜಾ ಶೆಟ್ಟರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಅವರಿಗೆ ಸ್ವಾಗತ ಕೋರಿದೆ.
‘ಪರಂವಃ ಸ್ಟುಡಿಯೋಸ್’ ಲಾಂಛನದಲ್ಲಿ ಜಿ.ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ ಸುಮಧುರ ಪ್ರೇಮಕಾವ್ಯದಲ್ಲಿ ಕಥಾಹಂದರ ಹೊಂದಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನವಿದೆ. ಸಿನಿಮಾದ ಹಾಡುಗಳಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದು, ಚಿತ್ರಕ್ಕೆ ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ ಹಾಗೂ ರಕ್ಷಿತ್ ಕಾಪ್ ಸಂಕಲನವಿದೆ. ಇನ್ನು ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾದಲ್ಲಿ ಗಿರಿಜಾ ಶೆಟ್ಟರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರೂ, ಸಿನಿಮಾದ ಅವರ ಪಾತ್ರದ ಬಗ್ಗೆ ಹೆಚ್ಚೇನೂ ಗುಟ್ಟು ಬಿಟ್ಟುಕೊಟ್ಟಿಲ್ಲ.