ರೀ ನೀವು ಬಹಳ ಹಾಡು ಹೇಳ್ತೀರಾ…ಟಿ.ವಿ./ರೇಡಿಯೋದಲ್ಲೇಕೆ ಹಾಡಬಾರದು? ಹೌದಾ…ನಾನು ಅಷ್ಟು ಸೊಗಸಾಗಿ ಹಾಡ್ತೀನಾ…? ಇಲ್ಲ… ಟಿ.ವಿ./ರೇಡಿಯದಲ್ಲಿ ಹಾಡಿದರೆ ಬಂದ್ ಮಾಡಬಹುದು. ನಗುಬಾರದ ಮೇಲಿನ ಜೋಕ್ ರೀತಿಯಲ್ಲಿಯೇ ಇಲ್ಲೊಂದು ಸುದ್ದಿಯಿದೆ… ಗರ್ಲ್ ಫ್ರೆಂಡ್ ಇದ್ದರೆ ಒಂದೇ ಸಮನೆ ಮಾತನಾಡಿ ಬೋರ್ ಹೊಡೆಸುತ್ತಾಳೆ ರೀ…ಅಥವಾ ಸಿನಿಮಾ, ಶಾಪಿಂಗ್ ಅಂತಾ ಬೋಳಿಸುತ್ತಾಳೆ. ಅದೇ ಗರ್ಲ್ ಫ್ರೆಂಡ್ ದಿಂಬುಗಳಿದ್ದರೆ ಬೇಡವೆನಿಸಿದಾಗ ಆಫ್ ಮಾಡಿ ನಿದ್ದೆಗೆ ಜಾರಬಹುದು. ಬೇಕೆನಿಸಿದರೆ ಹರಟೆ ಮುಂದುವರೆಸಬಹುದು!
ಕೊಯಿಚಿ ಉಚಿಮಾರೋ ಎಂಬಾತನ ಆವಿಷ್ಕಾರದಿಂದ ಮಾತನಾಡುವ ದಿಂಬುಗಳಿವು. ಅರೆ ಇದು ನಿಶ್ಚಿತ ಮಾತುಕಥೆ ಮಾತ್ರ ಸಾಧ್ಯ ಅಲ್ಲವೇ? ಇಲ್ಲ! ‘ಇಟಾ-ಸುಪೊ’ ಹೆಸರಿನ ಈ ಪಿಲ್ಲೋಗಳನ್ನು ಸ್ಮಾರ್ಟ್ ಫೋನ್ ಮೂಲಕ ಬೆಸೆದುಕೊಂಡು, ಅನಿಯಮಿಯತ ಅವಧಿವರೆಗೆ ಮಾತನಾಡಬಹುದು. ಹೀಗೆ ಹರಟೆ ಹೊಡೆಯಲು ಆಪ್ ಬಂದಿದ್ದು, ಹುಡುಗಿಯರಿಂದ ‘ತೋಪ್’ ಆಗಲು ತಪ್ಪಿಸಿಕೊಳ್ಳಬಹುದು. ಹುಡುಗರೊಡನೆ ಚಾಟ್ ಮಾಡುತ್ತಾ… ಕಾಸು ಕಮಾಯಿಸುತ್ತಿದ್ದ ಕನ್ಯಾಮಣಿಗಳಿಗೆ ಈ ಪಿಲ್ಲೋಗಳು ಕಾಂಪಿಟೇಷನ್ ನೀಡುತ್ತಿವೆ. ಈ ಪಿಲ್ಲೋಗಳನ್ನು ಹಿಂಪಡೆಯುವಂತೆ ಮಿಟಕಲಾಡಿಯರು ಧರಣಿ, ಸತ್ಯಾಗ್ರಹ ಮಾಡಿ ಬಂದ್ ಮಾಡಿಸಿದರೆ ಪಡ್ಡೆಗಳಿಗೆ ಕಷ್ಟ ಬಂದೀತು. ಅಷ್ಟರಲ್ಲಿ ‘ಗಂಡ್ ಬಾಯ್ಸ್’ ಈ ದಿಂಬುಕೊಂಡು ‘ದಿಂಬ್ ಬಾಯ್ಸ್’ ಆಗಲು ಅಡ್ಡಿಯಿಲ್ಲ.
‘ಬೂಟ್’ ಫುಲ್ ‘ಶೂ’ರ್ಪಣಕಿ!
‘ಶೂವೇ… ಶೂವೇ… ನನ್ನೀ ಅಂದಕೆ ಕಾರಣ ನೀನೇ…!’ ಎಂದು ಹಾಡುತ್ತಾ ‘ಶೋ’ಕೊಡುತ್ತಿರುವ ಈಕೆ ಶೂ ಅಂಗಡಿಯಲ್ಲಿ ಕೂತಿಲ್ಲ. ಬದಲಿಗೆ ‘ಶೂ’ರ್ಪಣಕಿಯಂತೆ ತನ್ನ ನಿವಾಸದಲ್ಲಿಯೇ ಇದ್ದಾಳೆ. ಅದ್ಯಾಕ್ರೀ ಪಾಪ… ಸುಂದರಿಯನ್ನು ಶೂರ್ಪಣಕಿ ಎನ್ನುವಿರಿ…? ಇವಳ ಹಳೇ ಗಂಡ ಇವಳನ್ನು ‘ಡ’ಗಾರ್ ಎಂದೇ ನಿಂದಿಸುತ್ತಿರುವಾಗ ನಾವು ಶೂರ್ಪಣಕಿ ಎಂದರೆ ತಪ್ಪಿಲ್ಲ ಬಿಡಿ… ಅಂದಹಾಗೆ ನಾವು ಹೇಳುತ್ತಿರುವಾಗ ಮಧ್ಯದಲ್ಲಿ ತೊಂದರೆ ಕೊಡದೆ ಸೈಲೆಂಟ್ ಓದುತ್ತಾ ಹೋಗಿ…ಈಕೆ…’ಬೂಟ್ಫುಲ್’ ಎನಿಸಿಕೊಳ್ಳಲು ಪೂರಾ ೧,೨೦೦ ಜೊತೆಗೂ ಹೆಚ್ಚು ಶೂಗಳನ್ನು ಕೊಂಡಿದ್ದಾಳೆ. ಬಿಟ್ಟಿ ಸಿಕ್ಕ ಗಂಡನಿಂದ ೬,೪೦,೦೦೦ ಪೌಂಡ್ (ರೂ.೪೮,೦೦,೦೦,೦೦)ಗಳನ್ನು ಬೋಳಿಸಿದ್ದಾಳೆ. ಒಬ್ಬನೊಂದಿಗೆ ‘ಶೂ’ ಮತ್ತೊಬ್ಬನೊಂದಿಗೆ ‘ಶೋಕಿ’ ಮಾಡುತ್ತಾ ಅವನನ್ನೇ ಕಲ್ಯಾಣವಾಗಿದ್ದಾಳೆ.
ಒಟ್ಟಾರೆಯಾಗಿ ಇವಳ ಬಳಿಯಲ್ಲಿ ಸುಮಾರು ೧ ಕೋಟಿ ಡಾಲರ್ಗಳಷ್ಟು ಮೊತ್ತದ ಶೂ/ಚಪ್ಪಲಿಗಳಿವೆ. ಬೇಸ್ತು ಬಿದ್ದ ಹಳೇ ಗಂಡ ‘ಶೂ’ರ್ಪಣಕಿಯನ್ನು ಬಿಡುವುದಿಲ್ಲ. ಎನ್ನುತ್ತಾ ಕನಿಷ್ಠ ೩೫%ಶೂಗಳನ್ನಾದರೂ ನನಗೆ ಕೊಡಿಸಿ ಎಂದು ಗೋಗರೆದಿದ್ದಾನೆ. ಕಳೆದ ವರ್ಷ ಇವಳ ಮನೆಯಲ್ಲಿ ಶೂಗಾಗಿಯೇ ಕಳ್ಳತನವಾಗಿತ್ತು! ಅದರ ಹಿಂದೆ ಹಳೇ ಗಂಡನ ಕೈವಾಡದ ಶಂಕೆಯೂ ಇದೆಯಂತೆ. ಹಳೇಗಂಡ-ಡೇನಿಯಲ್ಗೆ ಶಾಕ್ ಕೊಟ್ಟವಳ ಹೆಸರು ಬೆತ್ಶಾಕ್. ಹೊಸ ಮಿಕ ಬೆನ್ಕುಕ್ನ ಬೆನ್ನಿಗೆ ಅದೇನು ಕುಕ್ಕುತ್ತಾಳಾ? ಎಂದು ನ್ಯೂಯಾರ್ಕ್ನ ಜನ ಕದನ ಕುತೂಹಲದಿಂದ ಕಾಯುತ್ತಿದ್ದಾರೆ. ಕಳ್ಳರು ಇವಳ ಮನೆಗೆ ನುಗ್ಗಿ ಯಾವಾಗ ಶೂ/ಚಪ್ಪಲಿ ಕದಿಯುವುದೆಂದು ಕಾಯುತ್ತಿದ್ದಾರೆ. ಕೈಗಳ ಕರಾಮತ್ತು
ಇಂದಿನ ಮಕ್ಕಳು ಎರಡು ಕಿವಿಗಳಿಂದ ಪಾಠ ಕೇಳಿ, ಎರಡು ಕಣ್ಣಿನಿಂದ ಓದಿದರೆ ಸಾಲ್ದು. ಎರಡು ಕೈಗಳಿಂದ ಬರೆಯುವಂತಾಗಬೇಕು. ಆಗ ಹೆಚ್ಚಿನ ಅಂಕಗಳು ಬಂದೀತು…ಎನ್ನುವ ಅಪೇಕ್ಷೆ ಹಲವಷ್ಟು ಪೋಷಕರಿಗೆ ಇದೆ. ತಂದೆತಾಯಿಯರ ತೆವಲಿಗೆ ತಕ್ಕಂತೆ ಇಲ್ಲೊಂದು ಶಾಲೆ ಇದೆ… ಇಲ್ಲಿ ೩ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಎರಡೂ ಕೈಗಳಲ್ಲಿ ಬರೆಯಲು ಕಲಿಸುತ್ತಾರೆ. ೧೯೯೯ರಲ್ಲಿ ಈ ಶಾಲೆ ಆರಂಭಿಸಲಾಯಿತು. ಇದರ ಪ್ರಿನ್ಸಿಪಾಲ್ ವಿ. ಪಿ. ಶರ್ಮ ಈ ಶರ್ಮ ಈ ಪ್ರಯೋಗಕ್ಕೆ ಮುಂದಾದಾಗ ಹಲವರು ವಿರೋಧ ಮಾಡಿದರು. ಮೊದಲು ಪೋಷಕರಿಗೆ ನಂತರ ಮಕ್ಕಳಿಗೆ ತಿಳಿ ಹೇಳತೊಡಗಿದರು. ಇದೀಗ ಇದೊಂದು ಅನನ್ಯ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ. ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಹೀಗೆ ಎರಡೂ ಕೈಗಳಲ್ಲಿ ಬರೆಯುತ್ತಿದ್ದರೆಂಬ ಸಂಗತಿ ತಿಳಿದ ನಂತರ ಶರ್ಮಾ ಅವರಿಗೆ ಅದೇ ಪ್ರೇರಣೆಯಾಯಿತು. ಅದು ಪ್ರಯೋಗವಾಯಿತು.
ಹಿಮ್ಮುಖಿ
ನೀನು ನಡೆದ ಬಂದ ದಾರಿಯನ್ನು ಎಂದಾದರೂ ಹಿಂತಿರುಗಿ ನೋಡಿದಿಯಾ…? ಎಂದು ಯಾರೂ ಈತನನ್ನು ಕೇಳಿಲ್ಲ. ಆದರೂ ಈತ ಹಿಂತಿರುಗಿ ನೋಡುತ್ತಲೇ ನಡೆಯುತ್ತಾನೆ. ನಡಿಗೆ ಮುಂದೆ-ಮುಖ ಹಿಂದೆ ಇರಿಸಿರುವ ಇವನು ಹಿಮ್ಮುಖಿ! ೨೯ ವರ್ಷಗಳಿಂದಲೂ ಮುಖ ಬೆನ್ನಿಗೆ ಮಾಡಿ ನಡಿತಿದ್ದಾನೆ. ಈ ‘ನಡವಳಿಕೆ’ಗೇನು ಕಾರಣ? ೧೯೮೯ರಲ್ಲಿ ಈತನ ಹುಟ್ಟೂರು ಅಗ್ರಹಾರಂನಲ್ಲಿ ಮತೀಯ ಗಲಭೆಗಳು ಜರುಗಿತ್ತು. ಅದು ಇವನನ್ನು ಅಪಾರವಾಗಿ ಕಾಡಿತ್ತು. ಅದೇ ವರ್ಷ ಜೂನ್ ೧೪ರಿಂದ ‘ಭಯೋತ್ಪಾದನೆ ತಗ್ಗಬೇಕು. – ವಿಶ್ವಶಾಂತಿ ನೆಲೆಸಬೇಕು’ ಎಂಬ ಆದರ್ಶ ಗುರಿ ಇರಿಸಿಕೊಂಡು ಈತ ಹಿಮ್ಮುಖಿಯಾದ
ಜೀವನ ನಿರ್ವಹಣೆಗೆ ಮೊಬೈಲ್ ರಿಪೇರಿ ಶಾಪ್ ಇರಿಸಿಕೊಂಡಿರುವ ಈ ಇವನ ಪೂರ್ಣ ಹೆಸರು ಮಣಿ ಮಣಿಥನ್. ರಸ್ತೆದಾಟುವಾಗ, ಮೆಟ್ಟಿಲೇರುವಾಗ, ಸಾರ್ವಜನಿಕ ಬಸ್ ಏರುವಾಗ ಮನೆಯಲ್ಲಿ… ಎಲ್ಲೆಡೆ ಇವನ ‘ಹಿನ್ನೋಟಿ’ಯೇ. ಈ ವ್ರತ ಕೈಗೊಳ್ಳುವ ಮುನ್ನ ತನ್ನ ಹುಟ್ಟೂರು ಅಗ್ರಹಾರಂನಿಂದ ಚೆನ್ನೈವರೆಗೆ ಪೂರಾ ೩೦೦ ಮೈಲಿವರೆಗೆ ಹುಟ್ಟುಡುಗೆಯಲ್ಲಿಯೇ ಕ್ರಮಿಸಿದ್ದ. ಈಗ ‘ಆಮ್-ಆದ್ಮಿಯ’ ವೇಷಧಾರಿಯಾಗಿ ಬೆಳೆದಿದ್ದಾನೆ. ಲೋಕಕ್ಕೆ ಬೆನ್ನು ಮಾಡಿ- ಲೋಕಲ್ನಿಂದ ಲೋಕಕ್ಕೆ ಸುದ್ದಿ ಯಾಗಿರುವ ಮಣಿ ಮಣಿಥನ್ನ ಬೆನ್ನು ಹತ್ತುವುದು ಸುಲಭವಲ್ಲ!
ಹಲ್ ಕಿರಿಯುವ ಬಳೆಗಳೇ…
ಕೃದಂತದ ಈ ಹಲ್ಬಳೆಯನ್ನು ಮದನಾರಿ ತೊಟ್ಟರೆ ಮುದವಾದೀತು. ಮಾಟಗಾತಿಯ ಮೊಣಕೈ ಏರಿದರೆ ಮಹಾಭಯ ಆವರಿಸೀತು.! ಆನಂದ-ಆತಂಕದ ಸಾಹಿತ್ಯ ಇಲ್ಲೇಕೆ ಎಂದು ಯೋಚಿಸದೆ ಮುಂದೆ ಓದಿ…ಅಮೆರಿಕದ ಕೆಶಸ್ ಜ್ಯೂಯೆಲರಿ ಲೈನ್ ಅವರ ನೂತನ ಆಭರಣವಿದು. ಲಲನೆಯರ ಗಮನ ಸೆಳೆದಿದೆ. $೩೦ರಿಂದ ಆರಂಭಿಸಿ $೭೫೦ಗಳವರೆಗೂ ಧಾರಣೆ ಇದೆ. ಮುಖದ ಮೇಲೆ ನಗುವಿಲ್ಲದಿದ್ದರೂ ಬಳೆ ಧರಿಸಿದಾಗ ಹಲ್ಲು ಕಿರಿದಂತೆ ಗೋಚರಿಸುತ್ತದೆ!
ಫಿಂಗರ್ಗೆ ‘ಉಂಗುರ್’ ಕೂಡ ಇದ್ದಿದ್ದರೆ ಚೆನ್ನಿತ್ತು ಅಂದ್ರಾ… ಯೆಸ್. ಅದು ಕೂಡ ಬಂದಿದೆ. ಬೆರಳಿಗೆ ಧರಿಸಿ ಅದನ್ನು ನೋಡುತ್ತಲೇ ಹಲ್ಲು ಕಿರಿಯಬಹುದು. ಕನ್ನಡ್ಕ, ಸಿಕ್ಕಟ್ಟಿಗೆ ಅಲಿಯಾಸ್ ಬಾಚಣಿಗೆ… ಹೀಗೆ ಕೃದಂತದ ಹಲವು ವಸ್ತುಗಳು ಮಾರುಕಟ್ಟೆಗೆ ಬಂದಿದೆ. ಇದೆಲ್ಲವನ್ನೂ ಗಮನಿಸುತ್ತಿದ್ದರೆ ‘ವಿಕೃತಾನಂದ’ ಎನಿಸುವುದಿಲ್ಲವೇ? ಅವರವರ ಭಾವಕ್ಕೆ ಅವರವರ ಆನಂದ! ಅಮೆರಿಕಿಗಳ ಈ ‘ದಂತಾನಂದ’ ನಮ್ಮ ಭಾರತಕ್ಕೂ ಬಂದಿದೆ. ಕೃತಕ ಹಲ್ಲಿನ ಬಳೆಗಳ ಬದಲು ನೈಜ ನಗುವ ಹಲ್ಲಿನ ಬಳೆಗಳು ಬೇಕಾದಲ್ಲಿ ಏನುಮಾಡಬೇಕು? ನಮ್ಮ ರಾಜಕಾರಣಿ ಸದಾನಂದ ಗೌಡ ಅಥವಾ ಸ್ವಾಮಿ ನಿತ್ಯಾನಂದನ ಹಲ್ಲುಗಳನ್ನು ಕಿತ್ತು ಅದರಿಂದ ಬಳೆ ಮಾಡಿಸಿಕೊಳ್ಳಬೇಕು. ಅಂದಹಾಗೆ ಈ ‘ದಂತಕಥೆ’ಯನ್ನು ಲತಾ ಹಂಸಲೇಖ ಕಂಡು ಕೇಳಿದರೇ… ‘ಹಲ್ ಕಿರಿಯುವ ಬಳೆಗಳೇ… ಈ ಕೈಗಳಿಗೆ ಶೃಂಗಾರವೇ…’ ಎಂದು ಹಾಡು ಬರೆಯುತ್ತಿದ್ದರೋ ಏನೋ…!?
ಮುಖ ಬಿಗಿತ
‘ಬಿಗು ಮುಖದಲ್ಲಿ ಸುಖವಿರದು. ನಗು ಮುಖದಲ್ಲಿ ನೋವು ಕಾಣದು!’ ದ್ವಿಪದಿಯ ಈ ಕವನದ ಹಿಂದೊಂದು ಸಂಗತಿಯಿದೆ… ಫಸ್ಪ್ ಆಫ್ ಆಲ್ …ಮೇಲಿನ ಕವನವೇ ಸುಳ್ಳಗಿಸುತ್ತಾನೆ ನ್ಯೂಜಿಲೆಂಡ್ನ ಮಾಂತ್ರಿಕ ಶಾಹಿಹೊರೆ. ಈತನಿಗೆ ಬಿಗು ಮುಖ ಹೊರೆ ಎನಿಸಿಲ್ಲ. ಇವನಿಗೆ ಸುಖ ಕೊಟ್ಟಿದೆ. ಜೀವ – ಜೀವನ ಕೊಟ್ಟಿದೆ. ಹೇಗಪ್ಪಾ ಅಂದರೇ…. ಶಾಹಿ ತನ್ನ ಮುಖಕ್ಕೆ ನೂರಾರು ರಬ್ಬರ್ ಬ್ಯಾಂಡ್ಗಳನ್ನು ಬಿಗಿದುಕೊಳ್ಳುತ್ತಾನೆ. ವಿಚಿತ್ರನಾಗುತ್ತಾನೆ. ಅಷ್ಟಾವಕ್ರನ ಅಪರಾವತಾರಿಯಾಗುತ್ತಾನೆ. ಮಕ್ಕಳಿಗೆ ಇವನೆಂದರೆ ಆಪ್ಯಾಯ. ಹಿರಿಯರಿಗೆ ಕೌತುಕ. ನಮ್ಮ ಹಾವಾಡಿಗರು ಹಾವು ಆಡಿಸುವಾಗ ಏನೇನೋ ಗಿಮಿಕ್ಗಳನ್ನು ಮಾಡುವಂತೆ ಈತನೂ ಮ್ಯಾಜಿಕ್ ಮಾಡುತ್ತಾನೆ…ಎಂಟರ್ಟೈನ್ಮೆಂಟ್ ನೀಡುತ್ತಾನೆ.
ಆದರೆ ಹೆಚ್ಚಾಗಿ ಈತ ರಬ್ಬರ್ ಬ್ಯಾಂಡ್ ಬಿಗಿದುಕೊಂಡು ಮಾಡುವ ಕಲೆ ವಿಶ್ವ ಪ್ರಸಿದ್ಧಿ ತಂದಿದೆ. ಆತ ಧರಿಸುವ ಒಂದು ರಬ್ಬರ್ ಬ್ಯಾಂಡ್ ಕೂಡ ಸಾಮಾನ್ಯರು ಧರಿಸುವುದು ಕಷ್ಟ. ಅಂತಿರುವಾಗ ನೂರಾರು ಬ್ಯಾಂಡ್ ಧಾರಿಯಾಗಿ ನೃತ್ಯಮಾಡುತ್ತಾನೆ. ಹಾಡುತ್ತಾನೆ. (ಈತ ಮಾಡಿದಂತೆ ಮಾಡಲು ಹೋದರೆ ಅಪಾಯ ಖಚಿತ ಎಂಬುದು ತಿಳಿದಿರಲಿ) ತನ್ನ ಈ ‘ಬ್ಯಾಂಡ್’ ಕಲೆಯನ್ನು ೨೫ ದೇಶಗಳಲ್ಲಿ ಪ್ರದರ್ಶನ ಮಾಡಿದ್ದಾನೆ. ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಶಾಹಿ ಹೊರೆಯೆಂಬ ಹೆಸರಿದ್ದರೂ ‘ರಬ್ಬರ್ ಬ್ಯಾಂಡ್ ಬಾಯ್’ ಎಂದೇ ಪ್ರಸಿದ್ಧಿಗಳಿಸಿದ್ದಾನೆ.
ಖೈದಿ ಬ್ಯಾಂಡ್
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಮುಂತಾದ ವೇಳೆ ಪೊಲೀಸರು ಬ್ಯಾಂಡ್ ಬಾರಿಸುವುದು ಗೊತ್ತು. ಖೈದಿಗಳು ಹಾಗೆ ಮಾಡಿದರೇ…? ಒದೆ ಬಿದ್ದಾವು. ನೊ… ನೊ….ನಿಮ್ಮ ಊಹೆ ತಪ್ಪು. ಏಷ್ಯಾದ ಅತಿ ದೊಡ್ಡ ತಿಹಾರ್ ಜೈಲ್ನಲ್ಲಿ ನಿತ್ಯ ಬೆಳಿಗ್ಗೆ ೭ಕ್ಕೆ ರೂಮ್ ನಂಬರ್ ಬಳಿಗೆ ತೆರಳಿದರೆ ಖೈದಿ ಬ್ಯಾಂಡ್ ಕೇಳ/ಕಾಣಬಹುದು. ನುರಿತ ಗಾಯಕರಂತೆ ಇವರು ಹಾಡುತ್ತಾರೆ. ಉತ್ತಮ ಕಛೇರಿ ನೀಡಲು ಇವರೆಲ್ಲಾ ಶಿಕ್ಷಣ, ಅಭ್ಯಾಸ ಪಡೆಯುತ್ತಿದ್ದಾರೆ. ಈಗಾಗಲೇ ಬಹಳಷ್ಟು ಯಶಸ್ಸು ಕೂಡ ಗಳಿಸಿದ್ದಾರೆ. ಇದು ತಿಹಾರ್ನ ಚೊಚ್ಚಲ ಬ್ಯಾಂಡ್ ಆಗಿದ್ದು ಈ ಖೈದಿಗಳು ‘ ಫಸ್ಟ್ ರಾಕ್ ಬ್ಯಾಂಡ್ ಆಫ್ ತಿಹಾರ್’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ. ಕೆಲವೇ ದಿನಗಳಲ್ಲಿ ಜೈಲಿನಾಚೆಗೂ ಕಛೇರಿ ನೀಡುವ ಅಪೇಕ್ಷೆ ಅವರದ್ದು. ಅಧಿಕಾರಿಗಳು ಕೂಡ ಸಮ್ಮತಿಸಿದ್ದಾರೆ. ಆದರೆ ಪೊಲೀಸರ ಭದ್ರ ಕಾವಲಿನಲ್ಲಿ
ಈ ಹಿಂದೆ ಪಾಟ್ನಾದಲ್ಲೂ ಇದೇ ರೀತಿ ಖೈದಿಗಳಿಗೆ ಈಗ ಬ್ಯಾಂಡ್ ಶಿಕ್ಷಣ ನೀಡಲಾಗುತ್ತಿದೆ. ೨೦ ಲಕ್ಷ ರೂಪಾಯಿಗಳಲ್ಲಿ ಸಂಗೀತದ ಪರಿಕರಗಳನ್ನು ತರಿಸಿ ಆಲಾಪ ಆರಂಭಿಸಿದ್ದರು. ಆಗ ೨೪ ‘ಜೈಲು ಹಕ್ಕಿಗಳು’ ಗೋಷ್ಠಿಗೆ ಅಣಿಗೊಂಡಿದ್ದರು. ಅಂದಿನ ಪಾಟ್ನಾದ ಕೇಂದ್ರೀಯ ಕಾರಾಗೃಹದ ಮುಖ್ಯ ಅಧೀಕ್ಷರ ಉಮೇದಿನಂತೆ ಈ ಕಾರ್ಯವಾಗಿತ್ತು ಆದಾದ ನಂತರ ಇದೀಗ ತಿಹಾರ್ ಜೈಲಿನಲ್ಲಿ ಉತ್ತಮ ಪ್ರಯತ್ನ ಸಾಗಿದೆ. ಈ ಪ್ರಯತ್ನ ಇಲ್ಲೇಕೆ ಆಗಿಲ್ಲ? ನಮ್ಮ ಖೈದಿಗಳು ‘ಅಪರಾಧಿ ನಾನಲ್ಲ… ಅಪರಾಧ ಎನಗಿಲ್ಲ…’ ಎಂಬ ಗೀತೆ ಹಾಡಿ ಅನುಕಂಪ ಗಿಟ್ಟಿಸಿಕೊಳ್ಳಬಹುದು. ಆ ಭಯ ನಮ್ಮ ಪೊಲೀಸರನ್ನು ಕಾಡುತ್ತಿರಬೇಕು….?!
ಕೋಳಿಕಾಲು…
ಕೆಟ್ಟ ಅಕ್ಷರ ಬರೆದವರನ್ನು ಕೋಳಿಕಾಲಿನ ಅಕ್ಷರ ಎಂದು ಚೇಡಿಸುವುದು ಮಾಮೂಲಿ. ಹಾಗಾದರೆ ಕೋಳಿಕಾಲಿಗೆ ಬೆಲೆನೇ ಇಲ್ವಾ? ಕೋಳಿಕಾಲಿಗೆ ಈಗ ಬೆಲೆ ಬಂದಿರೋದು. ಬೇಕಿದ್ದರೆ ನೋಡಿ…ಈ ಕೋಳಿಯ ಒಂದೊಂದು ಕಾಲುಗಳು ಮನುಷ್ಯರ ಮಣಿಕಟ್ಟಿನಷ್ಟಿದೆ. ಬಲಿತ ಕೋಳಿಯನ್ನು ತೂಗಿದರೆ ೪ರಿಂದ ೬ ಕಿಲೋಗ್ರಾಂಗಳಾಗಲಿದೆ. ರುಚಿಯಲ್ಲಿ ಸೂಪರ್ – ಕೊಳ್ಳೋನು ಪಾಪರ್. ಎನ್ನಬಹುದು-ಅಷ್ಟು ದುಬಾರಿ ಇದು. ಸಾಮಾನ್ಯ ದಿನಗಳಲ್ಲಿ ೬೦೦-೭೦೦ ಡಾಲರ್ಗಳು. ಹೊಸವರ್ಷ, ಹಬ್ಬಗಳ ಸಮಯದಲಿ ೧,೫೦೦-೨೫೦೦ ಡಾಲರ್ಗಳಿರಲಿವೆ. ವಿಯಟ್ನಾಂನ ಡಾಂಗ್ತೊ ತಳಿಯ ಕೋಳಿಗಳ ಕಾಲ್ಗುಣವೇ ಈ ರೇಟ್ ಬರಲು ಕಾರಣ. ಕೋಳಿಗೂ ‘ಕಾಲ’ ಬರುತ್ತದೆ ಅಂದ್ರೆ ನಂಬಲೇಬೇಕು.
ಮೂಗುಗಿಂತ ಮೂಗುತಿ ಭಾರ ಎಂಬಂತೆ ಕೋಳಿಗಿಂತಲೂ ಅದರ ಕಾಲೇ ಭಾರ ಎನ್ನಬೇಕು. ಮುಖ ನೋಡಿ ಮಣೆ ಹಾಕುವ ಮನುಷ್ಯರು ಕೋಳಿಗಾದರೆ ಕಾಲು ನೋಡಿ ಧಾರಣೆ ಫಿಕ್ಸ್ ಮಾಡುತ್ತಾರೆ. ಕಾಲಿನ ಹೊರತಾಗಿ ಉಳಿದಂತೆ ಮಾಮೂಲಿಯಾಗಿಯೇ ಈ ಕೋಳಿ ಗೋಚರಿಸುತ್ತದೆ.ಈ ಕೋಳಿಸಾಕಾಣಿಕೆ ಸುಲಭವಲ್ಲ. ಮಾಮೂಲಿ ಕೋಳಿಗಿಂತಲೂ ಹೆಚ್ಚಿನ ಆಹಾರ ಸೇವಿಸಲಿದೆ. ಬೆಳೆದ ಕೋಳಿಯ ಪಾದಗಳು ೫-೬ವರ್ಷದ ಮಕ್ಕಳ ಪಾದಗಳಷ್ಟು ಉದ್ದ ಇರಲಿದೆ. ಕೆಲವು ಕೋಳಿಗಳ ಪಾದಗಳು ೧೦ ಇಂಚು ಕೂಡ ಇವೆಯಂತೆ. ಪಾದಗಳಲ್ಲಿ ಹೂಕೊಸಿನ ರೀತಿಯಲ್ಲಿ ಗೆಡ್ಡಗಳಿದ್ದು ಇದು ಸೇವಿಸಲು ಬಲು ರುಚಿ. ಅಲ್ಲದೆ ಮಾಗಿದ ಕೋಳಿ ಎನಿಸಿಕೊಳ್ಳಲು ಸುಮಾರು ೮ ತಿಂಗಳಿಂದ ಒಂದು ವರ್ಷವಾದರೂ ಆಗಿರಬೇಕು… ಕೋಳಿಗೆ ಏನ್ ಕಾಲಿದ್ದರೇನು? ಕಡೆಗೆ ಅದು ಆಗಲೇಬೇಕು ಮನುಜರಪಾಲು ಐ ಥಿಂಕ್….
ಮಕ್ಕಳಿಂದ ಮುದುಕರವರೆಗೂ ಹಲವರು ಆಗಾಗ ‘ಮೂಡ್’ ಇಲ್ಲ ಎಂದು ದೂರುತ್ತಾರೆ. ಮೂಡ್ ಇಲ್ಲಾಂದ್ರೆ ಕೆಲವರಿಗೆ ಏನು ಆಲೋಚನೆಯೇ ‘ಮೂಡ’ದು. ಎಂಥ ಮೂಢನಾದರೂ ಮೂಡ್ ನೆಟ್ಟಗಿರಿಸಿಕೊಳ್ಳಬೇಕೆಂದರೆ ಏನು ಮಾಡಬೇಕು? ಉತ್ತರ ಇಲ್ಲಿದೆ…`ಮೂಡ್ ಬಾಡೋಕ್ಕೆ ಮೊದಲೇ ‘ಥಿಂಕ್’ ಧರಿಸಿದರೆ ಬೇಕಿದ್ದ ಮೂಡ್ ಮೂಡಲಿದೆ. ಪಕ್ಕಾ ಮೂಡನಂಬಿಕೆ ತಾನೆ? ಮೌಡ್ಯವಲ್ಲ-ವಿಜ್ಞಾನ ಅಲಿಯಾಸ್ ತಂತ್ರಜ್ಞಾನ. ಶಾಂತ, ಸಂತಸ, ಉತ್ಸಾಹ… ಹೇಗೆ ಬೇಕೋ ಹಾಗೆ ಚಿತ್ತವನ್ನು ಉದ್ದೀಪನಗೊಳಿಸಬಹುದು. ಕನ್ನಡಕದಂತೆ ಮುಂದಲೆಗೆ ಥಿಂಕ್ ಉಪಕರಣ ಧರಿಸಿಕೊಂಡು ಸ್ಮಾರ್ಟ್ಫೋನಲ್ಲಿ ನಮ್ಮ ಮೂಡ್ಗೆ ಅಗತ್ಯದ ಸಂದೇಶವನ್ನು ಟೈಪ್ ಮಾಡಿದರೆ ಸಾಕು. ಫೋನು-ಥಿಂಕ್ ಅಲ್ಟ್ರಾಸೌಂಡ್ ತರಂಗಗಳ ಮೂಲಕ ಬೆಸೆದು ಚಿತ್ತವನ್ನು ತಿಕ್ಕಿ ತೀಡುತ್ತದೆ. ನರಕೋಶಗಳ ಆಳದವರೆಗೂ ಇಳಿದು ‘ಥಿಂಕ್’ ಕಾರ್ಯಾಚರಣೆ ಮಾಡಲಿದೆ.
ತಲೆ ಶೂಲೆ, ಮುಂದಲೆ ನೋವು, ಮೈಗ್ರೇನ್ ಸೇರಿದಂತೆ ಮನೋಶಾರೀರಿಕ ಸಮಸ್ಯೆಗಳು ಉಂಟಾಗಬಹುದಾ? ಇಲ್ಲ! ಅಂತಹ ಯಾವುದೇ ಸೂಚನೆಗಳು ಲಭ್ಯವಾಗಿಲ್ಲವೆನ್ನುತ್ತಾರೆ ಆವಿಷ್ಕಾರ ಮಾಡಿದವರು. ಇದರ ಬೆಲೆ, ಕೊಳ್ಳುವ ಬಗೆ, ಲಭ್ಯತೆಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯ, ಮಿಚಿಗನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಹಾರ್ವಡ್ ವಿಶ್ವವಿದ್ಯಾಲಯಗಳ ಸಂಯುಕ್ತ ಸಂಶೋಧನೆಯ ಫಲವಿದು. ಎಲ್ಲಾ ಓ.ಕೆ. ಥಿಂಕ್ ಧರಿಸಲಿಕ್ಕೇ ಮೂಡ್ ಬರದಿದ್ದರೇ? ಐ ‘ಥಿಂಕ್’ ಈ ಪ್ರಶ್ನೆಗೆ ಉತ್ತರವಿಲ್ಲ!
ಆಸ್ಪತ್ರೆಯಲ್ಲಿ ಕಲ್ಯಾಣ!
ಅವಳು ಹೀತರ್ ಮೊಶೆರ್ ಇವನು ಡೇವಿಡ್. ಇಬ್ಬರೂ ನೃತ್ಯಪಟುಗಳಾಗಲು ಬಯಸಿದರು. ನೃತ್ಯ ಶಾಲೆಯಲ್ಲಿ ಮುಲಾಕಾತ್ ಆಯಿತು. ಅವನಲ್ಲಿ ಅನುರಾಗ ಮೂಡಿತು. ಇವಳಲ್ಲಿ ಪ್ರೀತಿ ಅರಳಿತು. ಅದು ೨೦೧೬ರ ದಿನಗಳು ‘ಒ ಲವ್ವೇ’ ಬದುಕು ಎಂದ ಡೇವಿಡ್. ‘ಓಮನಸೆ’ ಎಂದಳು ಹೀತರ್. ಕಲ್ಯಾಣವಾಗುವುದು ಅವನ ನಿರ್ಧಾರವಾಗಿತ್ತು. ಕ್ರಿಸ್ಮಸ್ ಹಿಂದಿನ ದಿನ ವಿಷಯವಿಟ್ಟ. ‘ಅಸ್ತು’ ಎಂದಳು ಆಕೆ. ಸ್ವರ್ಗಕ್ಕೆ ಮೂರೇ ಮೆಟ್ಟಿಲು ಎಂಬ ಕನಸು ಕಂಡ ಡೇವಿಡ್. ಆದರೆ ಕ್ಯಾನ್ಸರ್ ಎಂಬ ಮಾರಕ ರೋಗ ಅವಳಲ್ಲಿ ಚಿಗುರೊಡೆದಿತ್ತು. ಡೇವಿಡ್ ಕಾಯುತ್ತಲೇ ಇದ್ದ. ವರ್ಷ ಉರುಳಿತು. ದಿನದಿಂದ ದಿನಕ್ಕೆ ಅರ್ಬುದ ರೋಗ ಅಡರದೆ, ಶರೀರದಲ್ಲಿ ಮಾಗತೊಡಗಿತು.
೨೦೧೭ರ ಕ್ರಿಸ್ಮಸ್ ವೇಳೆಗೆ ಕಲ್ಯಾಣದ ಕನಸು ಕಂಡಿದ್ದ ಡೇವಿಡ್ಗೆ ಕೆಲವೇ ದಿನಗಳಲ್ಲಿ ತನ್ನ ‘ಪ್ರೀತಿ’ ಯಮನ ಪಾಲಾಗಲಿದೆ ಎಂಬ ಅಚ್ಚರಿ ಕಾದಿತ್ತು. ಆದರೂ ಅವಳಲ್ಲಿ ಬದುಕಿನ ಆಸೆ ಮೂಡಿಸಲು ಡಿಸೆಂಬರ್ ೨೭ಕ್ಕೆ ವಿವಾಹದ ನಿಶ್ಚಯ ಮಾಡಿದ. ಆಗಲ್ಲಾ ಎಂದರು ಪುರೋಹಿತರು ಅಲಿಯಾಸ್ ವೈದ್ಯರು. ಅಲ್ಲಿಯವರೆವಿಗೂ ಆಕೆ ಇರುವುದು ಅನುಮಾನವಾಗಿತ್ತು. ೨೩ನೇ ಡಿಸೆಂಬರ್ ೨೦೧೭ರಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಯೇ ವಿವಾಹವದರು. ಕೈ ಎತ್ತಿ ಚೀರಿದಳು ಹೀತರ್ ಅಷ್ಟೇ… ಮಾತಿಲ್ಲ ಕಥೆಯಿಲ್ಲ. ಕ್ರಿಸ್ಮಸ್ ಉದಯಿಸುವ ಮುನ್ನವೇ ಆಕೆ ಕ್ರಿಸ್ತನಪಾದಗಳಲ್ಲಿ ಲೀನವಾಗಿ ಹೋದಳು. ಆದರೆ ಅವನಲ್ಲಿ ಪ್ರೀತಿ ಉಳಿಸಿ ಹೋದಳು.
ಸ್ಮಾರ್ಟ್ ಫೋನ್ನ ತೆವಲು ತಗ್ಗಿಸಲು…
ಈ ‘ಮೊಬೈಲ್’ನ ಬೆಲೆ ನಿಗದಿಯಾಗಿಲ್ಲ. ೫.೫ ಇಂಚುಗಳ ಉದ್ಧವಿದೆ. ೨.೬ ಇಂಚಿನ ಅಗಲವಿರುವ ‘ಸಬ್ಸ್ಟ್ಯೂಟ್’ ಫೋನ್. ೦.೨೯ ಇಂಚುಗಳ ದಪ್ಪವಿದೆ. ಬ್ಯಾಟರಿ ರಹಿತವಾಗಿದ್ದು, ವಾಟರ್ಪ್ರೂಫ್, ಶಟ್ಟರ್ ಪ್ರೂಫ್ ಆಗಿದೆ… ನೋಡುತ್ತಿದ್ದರೇ…. ಕೊಳ್ಳಬೇಕೆನಿಸುತ್ತಿದೆ. ಸ್ಕ್ರಾಲಿಂಗ್, ಜೂಮಿಂಗ್, ಸ್ವೈಪಿಂಗ್ ಮಾಡಬಹುದಾ? ಓ.ಎಸ್.! ಮಾತನಾಡಬಹುದಾ?ಖಂಡಿತ. ನಿಮ್ಮೊಂದಿಗೆ ನೀವು ಎಷ್ಟು ಬೇಕಿದ್ದರೂ ಮಾತನಾಡಬಹುದು. ಫೋನ್ ಅಲ್ಲದ ಫೋನಿದು. ಆಸ್ಟ್ರಿಯಾದ ಕ್ಲೆಮೆನ್ ಶ್ವಿಂಗ್ಲರ್ ಎಂಬಾತನ ಸಂಶೋಧನೆ ಇದು. ಯಾಕೆ ಬೇಕಪ್ಪಾ ಈ ಮಕ್ಕಳಾಟದ ಫೋನು?
ಇದನ್ನು ಬಳಸುವುದರಿಂದ ಸ್ಮಾರ್ಟ್ ಫೋನಿನ ಹುಚ್ಚು ತಗ್ಗಲಿದೆ. ಕಣ್ಣು ಹಾಳಾಗುವುದು, ಬುದ್ಧಿ ಮಂದವಾಗುವುದು ತಪ್ಪಲಿದೆ ಎನ್ನುತ್ತಾನೆ ಶ್ವಿಂಗ್ಲೆರ್. ಇಟಲಿಯ ತತ್ವಜ್ಞಾನಿಯೊಬ್ಬ ತನ್ನ ಸಿಗರೇಟಿನ ಚಟದಿಂದ ಪಾರಾಗಲು ನಕಲಿ ಸಿಗರೇಟ್ ರೀತಿಯ ಕಡ್ಡಿಗಳನ್ನು ಬಳಸಿ, ಚಟತೊರೆದ. ಅದೇ ನನಗೆ ಸ್ಪೂರ್ತಿ ಎನ್ನುತ್ತಾನೆ ಶ್ವಿಂಗ್ಲೆರ್. ಹಾಗೆಂದು ಇಂತಹ ಫೋನ್ ಇದೇ ಮೊದಲಲ್ಲ. ೨ ವರ್ಷದ ಹಿಂದೆ ಡಚ್ ವಿನ್ಯಾಸತಜ್ಞ ಇಂಗ್ ಮಾರ್ಸನ್ ಎಂಬಾತ ‘ನೋ ಫೋನ್’ ರೂಪಿಸಿದ್ದ. ಅವನ ಉದ್ದೇಶವೂ ಸ್ಮಾರ್ಟ್ ಫೋನ್ ಹುಚ್ಚು ಇಳಿಸುವುದೇ ಆಗಿತ್ತು. ಈಗ ಶ್ವಿಂಗ್ಲರ್ ಫೀಲ್ಢಿಗಿಳಿದಿದ್ದಾನೆ. ಹೌದೂ ‘ನೋ ಫೋನ್’ದೇ ತೆವಲು ತಗಲಿಕೊಂಡರೇ ತೊರೆಯುವುದು ಹೇಗೆ? ಸಿಂಪಲ್… ಸ್ಮಾರ್ಟ್ ಫೋನ್ ಬಳಸಿ…!