Gowri: ಇಂದ್ರಜಿತ್ ಲಂಕೇಶ್ ನಿರ್ದೇಶನದ, ಇಂದ್ರಜಿತ್ ಪುತ್ರ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯ ಅಯ್ಯರ್ ನಟಿಸಿರುವ ‘ಗೌರಿ’ ಚಿತ್ರದ ‘ಧೂಳ್ ಎಬ್ಬಿಸಾವ’ ಹಾಡು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ಜವಾರಿ ಭಾಷೆ ಶೈಲಿಯ ಹಾಡಿಗೆ ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಖ್ಯಾತ ನಟಿ ಸಂಜನಾ ಆನಂದ್ ಜಬರ್ದಸ್ತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಅನಿರುದ್ಧ್ ಶಾಸ್ತ್ರೀ, ಅನನ್ಯ ಭಟ್ ಹಾಡಿರುವ ಈ ಹಾಡಿಗೆ ಶಿವು ಬೆರ್ಗಿಯವರು ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ‘ಧೂಳ್ ಎಬ್ಬಿಸಾವ.’ ಸಾಂಗ್ ಸಖತ್ ವೈರಲ್ ಆಗುವ ಮೂಲಕ ಜನಮನ ಸೂರೆಗೊಂಡಿದೆ.
ನೈಜ ಘಟನೆ ಆಧರಿಸಿ ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡಿದ್ದು ಬೆಂಗಳೂರು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಅವರ ಮೇಲಿನ ಅಭಿಮಾನದಿಂದ ಇಂದ್ರಜಿತ್ ಲಂಕೇಶ್ ಅವರು ಈ ಚಿತ್ರಕ್ಕೆ ಅಕ್ಕನ ಹೆಸರಿಟ್ಟಿದ್ದಾರೆ. ಯುವ ನಟ ಸಮರ್ಜಿತ್ ಲಂಕೇಶ್ ಹಾಗೂ ನಾಯಕಿ ಸಾನ್ಯಾ ಅಯ್ಯರ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ. ಪ್ರಿಯಾಂಕ ಉಪೇಂದ್ರ, ವಸುಂಧರಾ ದಾಸ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಸಿಹಿ ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಕಾಂತಾರ ಖ್ಯಾತಿಯ ಮಾಲತಿ ಸುಧೀರ್, ಕೆಜಿಎಫ್ ಖ್ಯಾತಿಯ ಸಂಪತ್ ಮೈತ್ರೇಯ, ಚಂದುಗೌಡ ಸೇರಿದಂತೆ ಬಹುದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.