ಈಗಾಗಲೇ ‘ಅನ್ ಲಾಕ್ ರಾಘವ’ ಸಿನಿಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಮಿಲಿಂದ್ ಗೌತಮ್, ಈಗ ತಮ್ಮ ಎರಡನೇ ಸಿನಿಮಾ ‘ಹುಲಿನಾಯಕ’ಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ‘ಹುಲಿ ನಾಯಕ’ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇತ್ತೀಚೆಗೆ ‘ಹುಲಿ ನಾಯಕ’ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆಯಾಯಿತು.
ನಟ ಕಿಚ್ಚ ಸುದೀಪ್ ‘ಹುಲಿ ನಾಯಕ’ ಸಿನಿಮಾದ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟರಾದ ವಸಿಷ್ಠ ಸಿಂಹ, ಧನಂಜಯ, ಪ್ರೇಮ್, ನಟಿಯರಾದ ಪೂಜಾಗಾಂಧಿ, ಅನಿತಾ ಭಟ್, ಸಂಜನಾ ಗಲ್ರಾನಿ, ಖ್ಯಾತ ನಿರ್ದೇಶಕ ಚೇರನ್ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ‘ಹುಲಿ ನಾಯಕ’ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಸಾಥ್ ನೀಡಿದರು.
‘ಮಯೂರ ಮೋಶನ್ ಪಿಕ್ಚರ್ಸ್’ ಬ್ಯಾನರಿನಲ್ಲಿ ಮಂಜುನಾಥ್ ಡಿ. ನಿರ್ಮಾಣ ಮಾಡುತ್ತಿರುವ ‘ಹುಲಿ ನಾಯಕ’ ಸಿನಿಮಾಕ್ಕೆ ಡಿ. ಜೆ. ಚಕ್ರವರ್ತಿ ನಿರ್ದೇಶನವಿದೆ. ‘ಹುಲಿ ನಾಯಕ’ ಸಿನಿಮಾದ ಐದು ಹಾಡುಗಳಿಗೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಕರಿಬಸವ ತಡಕಲ್ ಟೈಟಲ್ ಸಾಂಗ್ ಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಯೋಗೇಶ್ವರನ್ ಛಾಯಾಗ್ರಹಣ, ಮಧು ತುಂಬನಕೆರೆ ಸಂಕಲನವಿದೆ. ಸದ್ಯ ‘ಹುಲಿ ನಾಯಕ’ ಸಿನಿಮಾದ ಚಿತ್ರೀಕರಣಕ್ಕೆ ಪೂರ್ವ ತಯಾರಿ ಭರದಿಂದ ಸಾಗಿದ್ದು, ಇದೇ ತಿಂಗಳ ಅಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.