ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ `ಸಲಾರ್’ ರಿಲೀಸ್ ಡೇಟ್ ಫಿಕ್ಸಾಗುತ್ತಿದ್ದಂತೆ ಧಮಾಕೇದಾರ್ ಸಮಾಚಾರಗಳು ಒಂದೊಂದಾಗಿ ಹೊರಬರುತ್ತಿವೆ. ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲದ ಹಾಗೇ ತಯಾರಾಗಿರೋ `ಸಲಾರ್’ ಚಿತ್ರದಲ್ಲಿ, ಇಂಗ್ಲೀಷ್ ಸಿನಿಮಾದ ಆ್ಯಕ್ಷನ್ ಸೀಕ್ವೆನ್ಸ್ ಮೀರಿಸೋ ಹಂತಕ್ಕೆ ಅದೊಂದು ಆ್ಯಕ್ಷನ್ ಬ್ಲಾಕ್ ಕ್ಯಾಪ್ಟರ್ ಆಗಿದೆಯಂತೆ. ಅದಕ್ಕಾಗಿ 750 ಟ್ರಕ್, ಜೀಪ್, ಟ್ಯಾಂಕರ್ ಗಳನ್ನ ಬಳಕೆ ಮಾಡಿಕೊಂಡು ದಂಗುಬಡಿಸುವ ವಾರ್ ಸನ್ನಿವೇಶವೊಂದನ್ನ ನಿರ್ದೇಶಕ ಪ್ರಶಾಂತ್ ನೀಲ್ ಸೃಷ್ಟಿಮಾಡಿದ್ದಾರಂತೆ. ಅದೊಂದು ಕ್ರೂಷಿಯಲ್ ಸೀನ್ ಸಿನಿಮಾ ಪ್ರೇಮಿಗಳನ್ನ ಸೀಟಿನ ತುದಿಗೆ ತಂದು ಕೂರಿಸುತ್ತಂತೆ. ಸದ್ಯ, ಹೀಗೊಂದು ಸುದ್ದಿ ಹೊರಬಿದ್ದಿದ್ದು ಪ್ರೇಕ್ಷಕ ಮಹಾಷಯರು ಬೆರಗುಗಣ್ಣಿನಿಂದ `ಸಲಾರ್’ ಕಡೆ ನೋಡ್ತಿದ್ದಾರೆ.
`ಸಲಾರ್’ ಸಿನಿಮಾದಲ್ಲಿ ನಂದು ಸಿಕ್ಕಾಪಟ್ಟೆ ವೈಲೆನ್ಸ್ ಇರೋ ಕ್ಯಾರೆಕ್ಟರ್. ಈ ಹಿಂದೆಂದೂ ಈ ರೀತಿಯ ಪಾತ್ರಕ್ಕೆ ಬಣ್ಣ ಹಚ್ಚಿರಲಿಲ್ಲ. ಫಾರ್ ದಿ ಫಸ್ಟ್ ಟೈಮ್ ಇಷ್ಟೊಂದು ಕ್ರೂರವಾಗಿ ಕಾಣಿಸಿಕೊಂಡಿದ್ದೇನೆ ಅಂತ ರೆಬೆಲ್ ಸ್ಟಾರ್ ಪ್ರಭಾಸ್ ಹೇಳಿಕೊಂಡಿದ್ದಾರೆ. ಮಿರ್ಚಿ ಹೀರೋನಾ ಮತ್ತಷ್ಟು ಮಾಸ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್ . ಇನ್ನೂ 250 ಕೋಟಿ ಬಂಡವಾಳ ಸುರಿದು `ಸಲಾರ್’ ನಿರ್ಮಿಸಿರೋ ಹೊಂಬಾಳೆ ಸಂಸ್ಥೆ, ಸಮುದ್ರದ ಮಧ್ಯೆ ನಡೆಯುವ 20 ನಿಮಿಷದ ಆ್ಯಕ್ಷನ್ ಬ್ಲಾಕ್ ಗೆ 10 ಕೋಟಿ ಬಂಡವಾಳ ಹೂಡಿದೆ. ಈಗ 750ಕ್ಕೂ ಹೆಚ್ಚು ವೆಹಿಕಲ್ ಬಳಕೆ ಮಾಡಿಕೊಂಡು ಹಾಲಿವುಡ್ ಮಾಧರಿಯಲ್ಲಿ ಯುದ್ದದ ಸೀಕ್ವೆನ್ಸ್ ಚಿತ್ರೀಕರಿಸಿಕೊಂಡು ಚಿತ್ರಜಗತ್ತು ನಿಬ್ಬೆರಗಾಗುವಂತೆ ಮಾಡಿದೆ.
ಅಂದ್ಹಾಗೇ, ಸಲಾರ್ ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ವಿಶ್ವಸಿನಿದುನಿಯಾವೇ ಕಣ್ಣರಳಿಸಿ ಕಾಯ್ತಿರೋ ಸಿನಿಮಾ. ಅಮರೇಂದ್ರ ಬಾಹುಬಲಿ ಡಾರ್ಲಿಂಗ್ ಪ್ರಭಾಸ್ ಅಭಿನಯದ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಕೆಜಿಎಫ್ ಸೃಷ್ಟಿಕರ್ತ ಕೆತ್ತಿರೋ ಹೊಸ ಲೋಕ ಎನ್ನುವ ಕಾರಣಕ್ಕೆ ಸಲಾರ್ ಮೇಲೆ ನಿರೀಕ್ಷೆ ಹೆಚ್ಚಿದೆ. ಟೀಸರ್ ನೋಡಿ ಬೆಚ್ಚಿಬಿದ್ದು ದಢಕ್ಕನೇ ಎದ್ದುಕೂತಿರೋ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಟ್ರೇಲರ್ ಗಾಗಿ ಕಣ್ಣರಳಿಸಿದೆ. ದೀಪಾವಳಿ ಹಬ್ಬಕ್ಕೆ ಬೆಂಕಿನುಂಡೆಯಂತಹ ಟ್ರೇಲರ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಟೀಸರ್ ಆಲ್ ಇಂಡಿಯಾ ಸಿನಿಮಾಗಳ ರೆಕಾರ್ಡ್ನ ಬ್ರೇಕ್ ಮಾಡಿ ಯೂಟ್ಯೂಬ್ನಲ್ಲಿ ಹೊಸ ದಾಖಲೆ ಬರೆದಿದೆ. `ಸಲಾರ್’ ಟ್ರೈಲರ್ ಹೇಗಿರಬಹುದು ಎನ್ನುವ ಕ್ಯೂರಿಯಾಸಿಟಿಯೇ ಕಲಾಭಿಮಾನಿಗಳನ್ನು ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯುವಂತೆ ಮಾಡಿದೆ. ಪೃಥ್ವಿರಾಜ್ ಸುಕುಮಾರನ್, ಶ್ರುತಿಹಾಸನ್, ಟಿನ್ನು ಆನಂದ್, ಜಗಪತಿ ಬಾಬು, ಶ್ರೀಯಾರೆಡ್ಡಿ, ಈಶ್ವರಿ ರಾವ್ ಸೇರಿದಂತೆ ಸ್ಟಾರ್ ನಟ-ನಟಿಯರ ಸಮಾಗಮ ಇಲ್ಲಾಗಿದೆ. ಪ್ರಮೋದ್ ಅಲಿಯಾಸ್ ಪಂಜು, ಕೆಜಿಎಫ್ ಖ್ಯಾತಿಯ ಗರುಡ ರಾಮ್, ಮಧುಗುರುಸ್ವಾಮಿ ಜೊತೆಗೆ ವಜ್ರಂಗ್ ಶೆಟ್ಟಿ ಕೂಡ ಧಗಧಗಿಸಿದ್ದಾರೆನ್ನುವ ಸುದ್ದಿಯಿದೆ.
4k ಐಮ್ಯಾಕ್ಸ್ ಸಿನಿಮ್ಯಾಟಿಕ್ ವರ್ಷನ್ ನಲ್ಲಿ, ಡಿಸಿಟಿ ಥೀಮ್ ನಲ್ಲಿ ಸಲಾರ್ ಕ್ಯಾಪ್ಚರ್ ಮಾಡಲಾಗಿದೆ. ರವಿಬಸ್ರೂರ್ ಮ್ಯೂಸಿಕ್, ಭವನ್ ಗೌಡ ಸಿನಿಮಾಟೋಗ್ರಫಿ, ಶಿವಕುಮಾರ್ ಕಲಾನಿರ್ದೇಶನದಲ್ಲಿ ನೀಲ್ ಸಾಹೇಬ್ರು ಹೊಸ ಪ್ರಪಂಚ ಕಟ್ಟಿದ್ದಾರೆ. ಹೊಂಬಾಳೆ ಮಾಲೀಕರು ನೀರಿನಂತೆ ಹಣ ಚೆಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ, ಫಾರ್ ದಿ ಫಸ್ಟ್ ಟೈಮ್ ಪ್ರಭಾಸ್ ಹಾಗೂ ಕಿಂಗ್ ಖಾನ್ ಶಾರುಖ್ ಮುಖಾಮುಖಿಯಾಗ್ತಿದ್ದಾರೆ. ಭರ್ತಿ 250 ಕೋಟಿ ಸುರಿದು ಕೆಂಡದಂತಹ ಸಿನಿಮಾ ಮಾಡಿರುವ ಹೊಂಬಾಳೆ ಮಾಲೀಕರು ಡಿಸೆಂಬರ್ 22ರಂದು ಕಿಂಗ್ ಖಾನ್ ಡಂಕಿ ಮುಂದೆ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ. ಕೆಜಿಎಫ್ ಮುಂದೆ ಕಿಂಗ್ ಖಾನ್ ಜೀರೋ ಚಿತ್ರ ಮಕಾಡೆ ಮಲಗಿತ್ತು. ಇದೀಗ ಮತ್ತೊಮ್ಮೆ ಹೊಂಬಾಳೆ ಮಾಲೀಕರ ಸಲಾರ್ ಎದುರು ಬಾಕ್ಸ್ ಆಫೀಸ್ ಕಿಂಗ್ ಶಾರುಖ್ ಡಂಕಿ ಸೆಣಸಬೇಕಿದೆ. ಬಾಹುಬಲಿ ಬಂತರ ಸಾಲು ಸಾಲು ಸೋಲುಂಡಿರೋ ಪ್ರಭಾಸ್ ಬಾಲಿವುಡ್ ಬಾದ್ಷಾನ ಬೆಳ್ಳಿಭೂಮಿ ಅಂಗಳದಲ್ಲಿ ಬಗ್ಗುಬಡಿತಾರಾ? ಬಾಕ್ಸ್ ಆಫೀಸ್ನಲ್ಲಿ ಕಿಂಗ್ ಖಾನ್ ಹಿಂದಿಕ್ಕಿ ಇತಿಹಾಸ ಸೃಷ್ಟಿಸ್ತಾರಾ? ಡಿಸೆಂಬರ್ 22ರವರೆಗೆ ಕಾದುನೋಡಬೇಕು.