ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಲಿರೋ ʻರಿಚರ್ಡ್ ಆಂಟನಿʼ ಸಿನಿಮಾದ ಬಗ್ಗೆ ನೂರೆಂಟು ನಿರೀಕ್ಷೆಯಿದೆ. ಉಳಿದವರು ಕಂಡಂತೆ ಸಿನಿಮಾದ ಸೀಕ್ವೆಲ್ ಎನ್ನುವ ಕಾರಣಕ್ಕೆ ಚಿತ್ರಪ್ರೇಮಿಗಳು ಕುತೂಹಲಭರಿತರಾಗಿ ಕಾಯ್ತಿದ್ದಾರೆ. ಶೆಟ್ರು ರಿಚರ್ಡ್ ಆಂಟನಿಯಾಗಿ ಕಣಕ್ಕಿಳಿಯೋ ಗಳಿಗೆಗೆ ಎದುರುನೋಡ್ತಿದ್ದಾರೆ. ಹೀಗಿರುವಾಗ ʻರಿಚರ್ಡ್ ಆಂಟನಿʼ ಸಿನಿಮಾ ಡ್ರಾಪ್ ಆಗಿದೆ. ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ಈ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಂಬಾಳೆ ಸಂಸ್ಥೆಯ ವಿಕ್ಕಿಪೀಡಿಯಾ ಪೇಜ್ ಹಾಗೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟರ ವಿಕ್ಕಿಪೀಡಿಯಾ ಪೇಜ್ ನಿಂದ ʻರಿಚರ್ಡ್ ಆಂಟನಿʼ ಹೆಸರು ಮಾಯವಾಗಿದೆ. ಇದರರ್ಥ ಇಬ್ಬರು ಈ ಸಿನಿಮಾವನ್ನ ಕೈ ಬಿಟ್ಟಿದ್ದಾರಾ? ಅಥವಾ ಗೂಗಲ್ ಮಾಡಿರೋ ಎಡವಟ್ಟಾ ಗೊತ್ತಿಲ್ಲ. ಆದರೆ, ಬಜಾರ್‌ನಲ್ಲಿ ಹಬ್ಬಿರೋ ಗಾಸಿಪ್‌ಗೂ, ಗೂಗಲ್ ತೋರಿಸ್ತಿರೋ ಅಪ್‌ಡೇಟ್‌ಗೂ ಸಿಂಕ್ ಆಗ್ತಿದೆ. ರಿಚರ್ಡ್ ಆಂಟನಿ ಸಿನಿಮಾ ಟೇಕಾಫ್ ಆಗೋದು ಡೌಟ್ ಎನ್ನುವ ಅನುಮಾನವಂತೂ ಸೃಷ್ಟಿಯಾಗಿದೆ. ಈ ಮಧ್ಯೆ ಮಿಣುಕು ದೀಪದಂತೆ ಅದೊಂದು ಸುದ್ದಿ ಕಣ್ಣರಳಿಸುವಂತೆ ಮಾಡಿದೆ. ಉಳಿದವರು ಕಂಡಂತೆ ಸಿನಿಮಾದ ದಶಕದ ಸಂಭ್ರಮಕ್ಕೆ ರಿಚರ್ಡ್ ಆಂಟನಿ ಸಿನಿಮಾದ ಮುಹೂರ್ತ ಸಾಕ್ಷಿಯಾಗಲಿದೆಯಂತೆ
ಹೌದು, ಇದೇ ಮಾರ್ಚ್ 28ಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾ ತೆರೆಕಂಡು 10 ವರ್ಷ ಆಗಲಿದೆ. ಆ ಹಿನ್ನೆಲೆಯಲ್ಲಿ ‘ರಿಚರ್ಡ್ ಆಂಟನಿ’ ಸಿನಿಮಾಗೆ ಅದೇ ದಿನ ಮುಹೂರ್ತ ಮಾಡೋದಕ್ಕೆ ಸರ್ವರೀತಿಯಲ್ಲೂ ತಯಾರಿ ನಡೆಸುತ್ತಿದ್ದಾರಂತೆ. ಹೀಗೊಂದು ಸುದ್ದಿ ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ. ಹೊಂಬಾಳೆ ಸಂಸ್ಥೆಯೇ ಬಂಡವಾಳ ಹೂಡ್ತಿರೋ ಬಗ್ಗೆಯೂ ಸುದ್ದಿ ಹರಿದಾಡ್ತಿದೆ. ಅಟ್ ದಿ ಸೇಮ್ ಟೈಮ್ ರಿಚರ್ಡ್ ಆಂಟನಿ ಚಿತ್ರವನ್ನ ಹೊಂಬಾಳೆ ಕೈ ಬಿಟ್ಟಿರೋ ಬಗ್ಗೆಯೂ ಟಾಕ್ ಇದೆ. ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ, ಪ್ರಭಾಸ್ ನಟನೆಯ ‘ಸಲಾರ್’ ಕೂಡ ‘ಕೆಜಿಎಫ್ 2’ ರೇಂಜ್‌ಗೆ ಯಶಸ್ಸು ಸಾಧಿಸಿಲ್ಲ. ಹೀಗಾಗಿ, ರಿಚರ್ಡ್ ಆಂಟನಿಗೆ 100 ಕೋಟಿ ಇನ್ವೆಸ್ಟ್ ಮಾಡೋದಕ್ಕೆ ಹೊಂಬಾಳೆ ಹಿಂದೇಟು ಹಾಕುತ್ತಿರುವ ಬಗ್ಗೆ ವದಂತಿ ಹಬ್ಬಿದೆ.
ಅಷ್ಟಕ್ಕೂ, ಗಲ್ಲಿ ಗಾಸಿಪ್ ಅಂಗಳದಲ್ಲಿ ಹರಿದಾಡ್ತಿರೋ ಸುದ್ದಿಗಳಲ್ಲಿ ಯಾವುದು ಸತ್ಯ? ಯಾವುದು ಮಿಥ್ಯ ಗೊತ್ತಿಲ್ಲ?̤ ಹತ್ತು ವರ್ಷಗಳ ನಂತರ ನಿರ್ದೇಶನಕ್ಕೆ ಮರಳ್ತಿರೋ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಿಚರ್ಡ್ ಆಂಟನಿ ಸಿನಿಮಾದ ಸಂಪೂರ್ಣ ಜವಬ್ದಾರಿ ಹೊರುತ್ತಾರಾ? ನಿರ್ದೇಶನ, ನಟನೆಯ ಜೊತೆಗೆ ನಿರ್ಮಾಣಕ್ಕೂ ಕೈ ಹಾಕುತ್ತಾರೆ? ತಮ್ಮ ಪರಂವಃ ಬ್ಯಾನರ್ ಅಡಿಯಲ್ಲೇ ರಿಚರ್ಡ್ ಆಂಟನಿ ಚಿತ್ರ ನಿರ್ಮಿಸ್ತಾರಾ? ಹೀಗೊಂದಿಷ್ಟು ಪ್ರಶ್ನೆಗಳು ಸದ್ಯಕ್ಕೆ ಹುಟ್ಟಿಕೊಂಡಿರೋದು ಸತ್ಯ. ಯಾಕಂದ್ರೆ, ಶೆಟ್ರು ಈಗ ಬರಿ ನಟರಾಗಿ, ನಿರ್ದೇಶಕರಾಗಿ ಉಳಿದಿಲ್ಲ. ಬದಲಾಗಿ ಸಾಕಷ್ಟು ಯುವಪ್ರತಿಭೆಗಳ ಸಿನಿಮಾಗಳಿಗೆ ಬಂಡವಾಳ ಹೂಡ್ತಿದ್ದಾರೆ. ಒಂದ್ವೇಳೆ, ಬಿಗ್ ಬಜೆಟ್ ಎನ್ನುವ ಕಾರಣಕ್ಕೆ ಹೊಂಬಾಳೆ ರಿಚರ್ಡ್ ಆಂಟನಿನಾ ಕೈ ಬಿಟ್ಟರೆ, ಬೇರೊಬ್ಬ ಅನ್ನದಾತ ಆ ಚಿತ್ರವನ್ನ ಟೇಕಾಫ್ ಮಾಡದೇ ಹೋದರೆ, ಶೆಟ್ರು ಹೊಸ ಸಾಹಸಕ್ಕೆ ಕೈ ಹಾಕಬಹುದೇನೋ? ತಮ್ಮದೇ ಬ್ಯಾನರ್‌ನಲ್ಲಿ ಅದ್ದೂರಿ ಸಿನಿಮಾ ಮಾಡಲು ಮುಂದಾಗಬಹುದೇನೋ? ಯಾರಿಗೆ ಗೊತ್ತು. ಎಲ್ಲದಕ್ಕೂ ಮಾರ್ಚ್ 28ರವರೆಗೆ ಕಾಯಬೇಕು. ಕೂತೂಹಲದಿಂದ ಎದುರುನೋಡಬೇಕು ಅಷ್ಟೇ.