ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾವೀಗ ತೆಲುಗಿನತ್ತ ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ‘ಬಾಯ್ಸ್ ಹಾಸ್ಟೆಲ್’ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗುತ್ತಿದೆ. ಈಗಾಗಲೇ ತೆಲುಗಿನಲ್ಲಿ ಈ ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಇದೇ ತಿಂಗಳ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಸಿನಿಮಾ ಪ್ರದರ್ಶನವಾಗುತ್ತಿದೆ.
ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ‘ಬಾಯ್ಸ್ ಹಾಸ್ಟೆಲ್’ ಟೈಲಟ್ ನಡಿ ತೆಲುಗು ಭಾಷೆಗೆ ಡಬ್ ಆಗ್ತಿರೋದು ಖುಷಿ ವಿಚಾರ. ‘ಚಾಯ್ ಬಿಸ್ಕೆಟ್ ಫಿಲಂಸ್’ ಮತ್ತು ‘ಅನ್ನಪೂರ್ಣ ಸ್ಟುಡಿಯೋಸ್’ ಜಂಟಿಯಾಗಿ ತೆಲುಗಿನಲ್ಲಿ ’ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ‘ಪರವಃ ಪಿಕ್ಚರ್ಸ್’ ಬ್ಯಾನರ್ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ.
‘ಗುಲ್ಮೊಹರ್ ಫಿಲಂಸ್’ ಮತ್ತು ‘ವರುಣ್ ಸ್ಟುಡಿಯೋಸ್’ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೆ ಕನ್ನಡದಲ್ಲಿ ಗೆಲುವಿನ ನಗು ಬೀರಿರುವ ‘ಹಾಸ್ಟೆಲ್ ಹುಡುಗರು’ ತೆಲುಗಿನಲ್ಲಿ ಎಷ್ಟರ ಮಟ್ಟಿಗೆ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗಲಿದ್ದಾರೆ ಎಂಬುದು ಆಗಸ್ಟ್ ತಿಂಗಳ ಕೊನೆಗೆ ಗೊತ್ತಾಗಲಿದೆ.