ಪ್ರಕೃತಿಯ ವೈಚಿತ್ರ್ಯಗಳಿಗೆ ಕೊನೆಯೆಂಬುದಿಲ್ಲ. ವಿಜ್ಞಾನ ಅದೆಷ್ಟೇ ಆವಿಷ್ಕಾರಗಳನ್ನ ನಡೆಸಿದರೂ ಅದರ ಕಣ್ಣು ತಪ್ಪಿಸಿಕೊಂಡಿರೋ ಅದೆಷ್ಟೋ ಅದ್ಭುತಗಳು ಈ ಜಗತ್ತಿನಲ್ಲಿವೆ. ನಾವು ಪ್ರಕೃತಿಯನ್ನ ನಮ್ಮ ದೃಷ್ಟಿಗೆ ಸೀಮಿತಗೊಳಿಸಿ ನೋಡುತ್ತೇವೆ. ಆದರೆ ಅದರ ನಿಗೂಢಗಳು ಕಣ್ಣಳತೆಯನ್ನ ಮೀರಿದಂತಿವೆ. ನದಿ ನೀರೆಂದರೆ ತಣ್ಣಗಿರುತ್ತದೆಂಬುದು ನಮ್ಮ ನಂಬಿಕೆ. ಅದನ್ನ ಸುಳ್ಳು ಮಾಡುವಂಥಾ ವರತೆಯೊಂದು ನಮ್ಮದೇ ದೇಶದಲ್ಲಿದೆ. ಆದ್ರೆ ಅಮೇಜಾನಿನ ದಟ್ಟ ಕಾಡಿನ ಒಡಲಲ್ಲೊಂದು ನದಿ ಕೊತ ಕೊತನೆ ಕುದಿಯುತ್ತಾ ಅದೆಷ್ಟೋ ಕಾಲದಿಂದ ಹರಿಯುತ್ತಿದೆ.
ಅದು ದಟ್ಟವಾದ ಅಮೇಜಾನ್ ಕಾಡಿನ ಗರ್ಭದಲ್ಲಿರೋ ಅಚ್ಚರಿ. ಆಂಡ್ರ್ಯೂ ರೋಜ಼ೋ ಎಂಬ ಉತ್ಸಾಹಿ ಯುವ ವಿಜ್ಞಾನಿ ಪ್ರಯತ್ನಿಸದಿದ್ದರೆ ಆ ನದಿ ನಿಗೂಢವಾಗಿಯೇ ಉಳಿದು ಬಿಡುತ್ತಿತ್ತೇನೋ… ಆದ್ರೆ ಆತನ ಪರಿಶ್ರಮ, ಕುತೂಹಲದ ಕಾರಣದಿಂದ ಇಂಥಾದ್ದೊಂದು ಪರಮಾಚ್ಚರಿ ಜಗತ್ತಿನೆದುರು ಅನಾವರಣಗೊಂಡಿದೆ. ಅಂಥಾ ಅಪರೂಪದ ನದಿಯ ಗುಣಲಕ್ಷಣಗಳನ್ನ ನೋಡಿದ್ರೆ ಯಾರೇ ಆದ್ರೂ ಅವಾಕ್ಕಾಗದಿರೋಕೆ ಸಾಧ್ಯವೇ ಇಲ್ಲ. ಅಮೇಜಾನ್ ಕಾಡೆಂದರೆ ಅಪಾರ ಜೀವರಾಶಿ, ಯಾವ ಲೆಕ್ಕಕ್ಕೂ ನಿಲುಕದ ಸಸ್ಯ ಸಂಪತ್ತಿನಿಂದ ಕೂಡಿದ ಪ್ರದೇಶ. ಆ ದಟ್ಟಡವಿಯ ತುಂಬಾ ನಿಗೂಢಗಳದ್ದೇ ದಟ್ಟಣೆಯಿದೆ. ಅಂಥಾ ಕಾಡಿನ ಒಂದು ಭಾಗದಲ್ಲಿ ಕೊತಕೊತನೆ ಕುದಿಯೋ ನದಿ ಸದ್ದಿಲ್ಲದೆ ಹರಿಯುತ್ತೆ.
ಅದರ ನೀರು ಅದೆಷ್ಟು ಬಿಸಿಯಿರುತ್ತದಂದ್ರೆ ಆಯ ತಪ್ಪಿ ಒಂದು ಆನೆ ನೀರೊಳಗೆ ಬಿದ್ದರೂ ಬೆಂದೇ ಹೋಗುತ್ತೆ. ಆ ಪಾಟಿ ಬಿಸಿ ನೀರು ಧುಮ್ಮಿಕ್ಕಿ ಹರಿಯುತ್ತದೆಂದರೆ ಬೆರಗಾಗದಿರೋಕೆ ಸಾಧ್ಯವೇ? ಅಮೇಜಾನ್ ಕಾಡು ಅನ್ವೇಷಕರ ಪಾಲಿನ ಸ್ವರ್ಗ. ಅದರ ದೆಸೆಯಿಂದಲೇ ಸಾಕಷ್ಟು ವಿಚಾರಗಳು ಜಗತ್ತಿನ ಮುಂದೆ ಜಾಹೀರಾಗಿವೆ. ಆದರೆ ಜಾಹೀರಾಗಿರೋ ಅಂಶಗಳು ಅಮೇಜಾನ್ ಒಡಲಲ್ಲಿರೋ ನಿಗೂಢಗಳ ಮುಂದೆ ಸೊನ್ನೆ. ಆ ಮಾತಿಗೆ ತಕ್ಕುದಾದ ಅನ್ವೇಷಣೆಯನ್ನ ವಿಜ್ಞಾನಿ ಆಂಡ್ರ್ಯೂ ರೋಜ಼ೋ ಮಾಡಿದ್ದಾರೆ. ಆಂಡ್ರ್ಯೋ ತಾತ ಅಮೇಜಾನ್ ಕಾಡಿನ ಒಡಲಲ್ಲಿ ಕುದಿಯೋ ನದಿಯಿರುವ ಸುಳಿವು ಕೊಟ್ಟಿದ್ದರಂತೆ. ಅದರ ಆಧಾರದಲ್ಲಿ ತಿಂಗಳುಗಟ್ಟಲೆ ಅಮೇಜಾನ್ ಕಾಡಿನಲ್ಲಿ ಅಂಡಲೆದಿದ್ದ ಆಂಡ್ರ್ಯೋ ಕಡೆಗೂ ಕುದಿಯೋ ನದಿಯನ್ನ ವರ್ಷದ ಹಿಂದೆ ಪತ್ತೆಹಚ್ಚಿದ್ದಾರೆ.
ಕಿವಿ ಕೀಳಿಸಿಕೊಂಡ!
ಈ ಜಗತ್ತಿನಲ್ಲಿ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೆ ಪರಡಾಡುವ ಕೋಟ್ಯಂತರ ಜೀವಗಳಿದ್ದಾವೆ. ಅದರಾಚೆಗೆ ಕಪ್ಪು, ಕುರೂಪಗಳೆಂಬ ಕೀಳರಿಮೆಯ ಕುಲುಮೆಯಲ್ಲಿ ಮತ್ತಷ್ಟು ಜೀವಗಳು ಬೇಯುತ್ತಿದ್ದಾವೆ. ಇಂಥಾದ್ದರ ನಡುವೆ ಕೆಲ ಮಂದಿ ನಾನಾ ಥರದ ಶೋಕಿಗಳಿಗಾಗಿಯೇ ಬದುಕುತ್ತಿದ್ದಾರೆ. ಪ್ರಾಕೃತಿಕವಾಗಿ ಸಿಕ್ಕ ಸೌಂದರ್ಯವನ್ನೂ ಕೂಡಾ ಕಷ್ಟಪಟ್ಟು, ದುಡ್ಡು ಖರ್ಚು ಮಾಡಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥಾದ್ದೇ ಮನಸ್ಥಿತಿಯ ಹುಚ್ಚನೊಬ್ಬ ಇರುವ ಸೌಂದರ್ಯವನ್ನ ಕುರೂಪ ಮಾಡಿಕೊಳ್ಳಲು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚಿನ ಹಣವನ್ನ ಮುಡಿಪಾಗಿಟ್ಟಿದ್ದಾನೆ.
ಅಂಥಾದ್ದೊಂದು ಹುಚ್ಚುತನದ ಮೂಲಕವೇ ಕುಖ್ಯಾತಿ ಗಳಿಸಿರುವಾತ ಜರ್ಮನಿ ದೇಶದ ಸ್ಯಾಂಡ್ರೋ. ಈತನ ಹುಚ್ಚಾಟದ ಬಗ್ಗೆ ಒಂದಷ್ಟು ಮಂದಿ ಉಗಿದು ಉಪ್ಪಾಕಲಾರಂಭಿಸಿದ್ದಾರೆ. ಅಷ್ಟಕ್ಕೂ ಈ ಆಸಾಮಿಗಿದ್ದದ್ದು ವಿಚಿತ್ರವಾದ ಬಯಕೆ. ತನ್ನ ದೇಹವನ್ನು ಥೇಟು ಅಸ್ಥಿಪಂಜರದ ಆಕಾರದಲ್ಲಿ ರೂಪಿಸಬೇಕನ್ನೋದು ಅವನ ಬಯಕೆ. ಇದಕ್ಕಾಗಿ ಅಸ್ಥಿಪಂಜರದಂತೆ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದ. ಆತನ ಹುಚ್ಚು ಅದ್ಯಾವ ಪರಿ ಇತ್ತೆಂದರೆ ಲಕ್ಷಾಂತರ ಖರ್ಚು ಮಾಡಿ ಕಿವಿಗಳನ್ನೂ ಶಾಶ್ವತವಾಗಿ ಕೀಳಿಸಿಕೊಂಡಿದ್ದಾನೆ. ಈ ಪ್ರಪಂಚದಲ್ಲಿ ಇನ್ನೂ ಎಂತೆಂಥ ಹುಚ್ಚರಿದ್ದಾರೋ…
ಅಳಿಸಲು ಹರಸಾಹಸ !
ನಾವೆಲ್ಲ ಪುಟ್ಟ ಮಕ್ಕಳು ಅಳದಂತೆ ನೋಡಿಕೊಳ್ಳಲು ಹರಸಾಹಸ ಪಡ್ತೀವಿ. ಚಿಕ್ಕ ಮಕ್ಕಳು ತುಸು ಅತ್ತರೂ ಅದನ್ನು ಸಮಾಧಾನಿಸಲು ಮನೆ ಮಂದಿಯೆಲ್ಲ ಹರಸಾಹಸ ಪಡ್ತಾರೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಎಲ್ಲ ದೇಶಗಳಲ್ಲಿಯೂ ಅಂಥಾದ್ದೇ ಮನಸ್ಥಿತಿ ಇದೆ. ಯಾರಾದ್ರೂ ಪುಟ್ಟ ಮಕ್ಕಳು ಅಳೋದನ್ನ, ಅಬೋಧ ಕಣ್ಣುಗಳಲ್ಲಿ ನೀರು ತುಂಬಿಕೊಂಡು ದೈನ್ಯದಿಂದ ನೋಡೋದನ್ನ ಬಯಸ್ತಾರಾ? ಬಯಸೋದಿಲ್ಲ ಅಂತಲೇ ನಾವೆಲ್ಲ ಅಂದ್ಕೊಂಡಿರ್ತೀವಿ. ಆದ್ರೆ ಅದು ಶುದ್ಧ ಸುಳ್ಳು. ಆಪಾನ್ ದೇಶದಲ್ಲಿ ಅಖಂಡ ನಾನೂರು ವರ್ಷಗಳಿಂದ ರೂಢಿಯಲ್ಲಿರೋ ಸಂಪ್ರದಾಯದ ಕಥೆ ಕೇಳಿದ್ರೆ ನಿಮಗೂ ಹಾಗನ್ನಿಸದಿರೋದಿಲ್ಲ. ನಾವು ಮಗು ಅಳದಂತೆ ನೋಡಿಕೊಳ್ಳಲು ಹಣಗಾಡ್ತೀವಲ್ಲ? ಜಪಾನಿಗರು ಮಕ್ಕಳನ್ನು ಭೋರಿಟ್ಟು ಅಳುವಂತೆ ಮಾಡಲು ಅಷ್ಟೇ ಹರಸಾಹಸ ಪಡ್ತಾರಂತೆ. ಇದು ವಿಚಿತ್ರ ಅನ್ನಿಸಿದ್ರೂ ನಂಬಲೇ ಬೇಕಾದ ಸತ್ಯ.
ಅದು ಗಂಡು ಮಗುವಾಗಿದ್ರೂ ಹೆಣ್ಣು ಮಗುವಾಗಿದ್ರೂ ಎಷ್ಟು ಅತ್ತರೂ ಜಪಾನ್ ಮಂದಿಗೆ ಸಮಾಧಾನವಿರೋದಿಲ್ಲ. ಯಾಕಂದ್ರೆ ಹೆಚ್ಚು ಅತ್ತಷ್ಟೂ ಅವು ಮುಂದಿನ ಜೀವನದಲ್ಲಿ ಹೆಚ್ಚು ಖುಷಿಯಾಗಿರತ್ತವೆಂಬ ನಂಬಿಕೆ ಅವರಲ್ಲಿದೆ. ಆ ನಂಬಿಕೆಗೆ ಸರಿಸುಮಾರು ನಾಲಕ್ಕುನೂರು ವರ್ಷಗಳಾಗಿವೆ. ಆದ್ದರಿಂದಲೇ ಹೆಚ್ಚಿನ ಜಪಾನ್ ಪೋಶಕರು ಮಕ್ಕಳನ್ನ ಹೆಚ್ಚೆಚ್ಚು ಅಳಿಸಲು ಪ್ರಯತ್ನಿಸ್ತಾರೆ. ಅಲ್ಲಿನ ತಾಯಿ ತನ್ನ ಪುಟ್ಟ ಕಂದ ಹೆಚ್ಚು ಅತ್ತಷ್ಟೂ ಸಂಭ್ರಮಿಸ್ತಾಳಂತೆ. ಈ ನಂಬಿಕೆ ಅದೆಷ್ಟು ಬಲವಾಗಿ ಬೇರೂರಿದೆ ಅಂದ್ರೆ ಮಗುವನ್ನು ಅಳಿಸಲೆಂದೇ ಜಪಾನಿಗರು ಒಂದಷ್ಟು ತಂತ್ರಗಳನ್ನ ಪಾಲಿಸ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸುಮೋಗಳಿಗೆ ಮಕ್ಕಳನ್ನು ಅಳಿಸೋ ಭಾರವೂ ವರ್ಗಾವಣೆಗೊಂಡಿದೆ. ಇಲ್ಲಿನ ಪೋಶಕರು ತಮ್ಮ ಮಕ್ಕಳನ್ನು ಅಳಿಸಲೆಂದೇ ದೈತ್ಯ ದೇಹಿ ಸುಮೋಗಳ ವಶಕ್ಕೊಪ್ಪಿಸ್ತಾರೆ. ಸುಮೋಗಳು ಪುಟ್ಟ ಮಗುವನ್ನೆತ್ತಿಕೊಂಡು ಲಗಾಟಿ ಹೊಡೆದು ಅಳುವಂತೆ ಮಾಡ್ತಾರೆ. ಆಗ ಮಗು ಜೋರಾಗಿ ಅತ್ತರ ಹೆತ್ತವರ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಜಿನುಗಲಾರಂಭಿಸುತ್ತೆ.
ಜೇನು ನೊಣಗಳ ಶಕ್ತಿ
ಈ ಜಗತ್ತನ್ನ ತುಂಬಿಕೊಂಡಿರೋ ಬೆರಗುಗಳು ನಿಜಕ್ಕೂ ಅಕ್ಷಯಪಾತ್ರೆಯಂಥವು. ನಾವು ತಿಳಿದುಕೊಂಡೆವೆಂದು ಬೀಗೋ ಮುನ್ನವೇ ತಿಳಿಯದೇ ಉಳಿದ ನಿಗೂಢಗಳು ಅಣಿಕಿಸುತ್ವೆ. ಅಂಥಾ ಅನ್ವೇಷಣೆಯ ಕಾಲುದಾರಿಯಲ್ಲಿ ಹೆಜ್ಜೆಯಿಟ್ರೆ ಅದು ಸೀದಾ ಹೆದ್ದಾರಿಗೇ ಕರೆದೊಯ್ದು ತಬ್ಬಿಬ್ಬುಗೊಳಿಸುತ್ತೆ. ಒಟ್ಟಾರೆಯಾಗಿ ಈ ಜಗತ್ತಿನ ಬೆರಗುಗಳು ಮೊಗೆದು ಮುಗಿಯುವಂಥವುಗಳಲ್ಲ. ಅದರಲ್ಲೊಂದು ಅಚ್ಚರಿಯ ಹನಿ ನಮಗೆಲ್ಲ ತೀರಾ ಪರಿಚಿತವಾಗಿರೋ ಜೇನು ನೊಣಗಳ ಬಗೆಗಿದೆ. ಜೇನು ನೊಣಗಳ ಜೀವನಕ್ರಮ, ಅವುಗಳ ಬದುಕಿನ ರೀತಿ ನಿಜಕ್ಕೂ ಅಚ್ಚರಿ. ಅವು ಗೂಡು ಕಟ್ಟೋ ಶಿಸ್ತು, ಅದರ ಇಂಜಿನೀರಿಂಗು, ಜೀವನ ಕ್ರಮಗಳೆಲ್ಲವೂ ಅಪರಿಮಿತ ಆನಂದ ಮೂಡಿಸುತ್ತೆ. ಈಹ ಹೇಳ ಹೊರಟಿರೋದು ಅವುಗಳ ಮತ್ತೊಂದು ಬಗೆಯ ಸಮ್ಮೋಹಕ ಸಾಮರ್ಥ್ಯದ ಬಗ್ಗೆ.
ನಮ್ಮ ದೇಶದ ವೈಚಿತ್ರ್ಯಗಳ ಆಗರದಂತಿರೋ ಮೌಂಟ್ ಎವರೆಸ್ಟ್ ಜಗತ್ತಿನ ಅತೀ ಎತ್ತರದ ಪರ್ವತ. ನಮ್ಮ ಕಣ್ಣಿಗೆ ತುಂಬಾ ಪುಟ್ಟದಾಗಿ ಕಾಣಿಸೋ ಜೇನ್ನೊಣಗಳು ಮೌಂಟ್ ಎವರೆಸ್ಟಿಗಿಂತಲೂ ಎತ್ತರಕ್ಕೆ ಹಾರುತ್ತವೆ ಅಂದ್ರೆ ಅದೇನು ಸುಮ್ಮನೆ ಮಾತಲ್ಲ. ಲಾಗಾಯ್ತಿನಿಂದಲೂ ಜೇನು ನೊಣಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಅದರ ಭಾಗವಾಗಿಯೇ ಅವುಗಳ ಮಹಾ ಶಕ್ತಿಯೂ ಅನಾವರಣಗೊಂಡಿದೆ. ಭಾರತದಲ್ಲಿ ಇನ್ನೂರೈವತ್ತಕ್ಕೂ ಹೆಚ್ಚು ಬಗೆಯ ಜೇನ್ನೊಣಗಳಿವೆ ಅಂತ ಅಂದಾಜಿಸಲಾಗಿದೆ. ಅದರಲ್ಲಿ ಜಂಬಲ್ಬೀ ಅನ್ನೋ ವರ್ಗ ಅತ್ಯಂತ ಅಪರೂಪದ ಪ್ರಬೇಧವಾಗಿ ಗುರುತಿಸಿಕೊಂಡಿದೆ. ಇದೀಗ ಅಳಿವಿನಂಚಿನಲ್ಲಿರೋ ಜಂಬಲ್ಬೀ ಜಾತಿಯ ಜೇನ್ನೊಣಗಳಿಗೆ ಮೌಂಟ್ ಎವರೆಸ್ಟನ್ನು ಮೀರಿ ಹಾರೋ ಅದ್ಭುತ ಸಾಮರ್ಥ್ಯ ಇದೆಯಂತೆ.
ಚಿನ್ನದುಂಗುರ ಸಿಕ್ಕಿದ್ದೆಲ್ಲಿ?
ಕೆಲವೊಮ್ಮೆ ಜೀವನದಲ್ಲಿ ತುಂಬಾ ಇಷ್ಟಪಟ್ಟಿದ್ದನ್ನೇ ಕಳೆದುಕೊಳ್ಳೋ ಸಂದರ್ಭಗಳೆದುರಾಗುತ್ವೆ. ಅದರೊಂದಿಗೆ ಭಾವನೆಗಳು, ನೆನಪುಗಳನ್ನೂ ಕಳೆದುಕೊಂಡಂತೆ ಒದ್ದಾಡೋ ಸಂದರ್ಭಗಳೂ ಸೃಷ್ಟಿಯಾಗುತ್ವೆ. ಹೆಚ್ಚಿನಾದಾಗಿ ಅಂಥಾ ಸಂದಭರ್ಧ ಸೃಷ್ಟಿಯಾಗೋದು ಚಿನ್ನಾಭರಣಗಳ ರೂಪದಲ್ಲಿ. ಒಂದು ಉಂಗುರ, ಮೂಗಿನ ನತ್ತು, ಕಿವಿಯೋಲೆಗಳಲ್ಲಿಯೂ ಇಂಥಾ ಸೆಂಟಿಮೆಂಟುಗಳಿರುತ್ತವೆ. ಅವೇನಾದ್ರೂ ಕಳೆದು ಹೋಗಿ ಸಿಗದಿದ್ರೆ ಹೆಂಗಳೆಯರು ಹೆಜ್ಜೆ ಹೆಜ್ಜೆಗೂ ಕೊರಗ್ತಾರೆ. ಆದ್ರೆ ಹೆಚ್ಚಿನವ್ರಿಗೆ ಕೊರಗೇ ಖಾಯಂ. ಆದ್ರೆ ಇಲ್ಲೊಬ್ಬಳು ಅದೃಷ್ಟವಂತ ಮಹಿಳೆಯ ಪಾಲಿಗೆ ಪವಾಡ ಸದೃಷವಾಗಿ ಕಳೆದು ಹೋದ ರಿಂಗು ವಾಪಾಸಾಗಿದೆ. ಅರೇ ಒಂದು ಚಿನ್ನದ ಉಂಗುರ ಕಳೆದು ಹೋಗಿ ಮತ್ತೆ ಸಿಗೋದ್ರಲ್ಲಿ ಪವಾಡ ಏನಿರತ್ತೆ ಅಂತ ಅಂದ್ಕೋತೀರೇನೋ… ಈ ಪ್ರಕರಣವನ್ನ ವಿಶೇಷವಾಗಿಸಿರೋದು ಅದು ಮರಳಿ ಸಿಕ್ಕ ಅಚ್ಚರಿದಾಯಕ ರೀತಿ. ಅದರ ವಿವರ ಕೇಳಿದರೆ ಯಾರೇ ಆದ್ರೂ ಥ್ರಿಲ್ ಆಗದಿರೋಕೆ ಸಾಧ್ಯವೇ ಇಲ್ಲ.
ಇಂಥಾದ್ದೊಂದು ಅಪರೂಪದ ವಿದ್ಯಮಾನ ಘಟಿಸಿರೋದು ಸ್ವೀಡನ್ನಿನಲ್ಲಿ. ಅಲ್ಲಿನ ಮಹಿಳೆಯೊಬ್ಬಾಕೆ ೧೯೯೫ರಲ್ಲಿ ಇಷ್ಟದ ಚಿನ್ನದುಂಗುರವನ್ನ ಕಳೆದುಕೊಂಡಿದ್ಲು. ಆ ವರ್ಷ ಕ್ರಿಸ್ಮಸ್ಗೆ ಅಡುಗೆ ತಯಾರಿ ಮಾಡುವಾಗ ಆ ರಿಂಗ್ ಬೆರಳಿಂದ ಕಳಚಿಕೊಂಡು ಕಣ್ಮರೆಯಾಗಿತ್ತು. ಹೇಳಿಕೇಳಿ ಅದು ಆಕೆಯ ಮದುವೆಯಲ್ಲಿ ಹಾಕಿದ್ದ ಉಂಗುರ. ಅಡುಗೆಮನೆ ಸೇರಿದಂತೆ ಎಲ್ಲೆಡೆ ಹುಡುಕಿದ್ರೂ ಅದು ಸಿಕ್ಕಿರಲಿಲ್ಲ. ಒಂದಷ್ಟು ದಿನಗಳ ಕಾಲ ಹುಡುಕಾಡಿದ ಆ ಮಹಿಳೆ ಕ್ರಮೇಣ ಅದರ ಆಸೆ ಬಿಟ್ಟಿದ್ದಳು. ಹೆಚ್ಚೂ ಕಡಿಮೆ ಆ ರಿಂಗಿನ ನೆನಪೂ ಕೂಡಾ ಮಾಸಲಾಗ್ತಾ ಬಂದಿತ್ತು. ಅದಾಗಿ ಹದಿನೇಳು ವರ್ಷ ಅಂದ್ರೆ ೨೦೧೨ರಲ್ಲಿ ಮಾತ್ರ ಆಕೆ ಊಹಿಸದಂಥಾ ಪವಾಡವೊಂದು ಘಟಿಸಿತ್ತು. ಆ ವರ್ಷ ಆ ಮಹಿಳೆ ಕೈದೋಟದಲ್ಲಿ ಕ್ಯಾರೆಟ್ ಬೀಜ ಹಾಕಿದ್ದಳು. ತಿಂಗಳುಗಳ ಕಳೆದ ನಂತ್ರ ಕ್ಯಾರೆಟ್ ಅನ್ನು ಕಟಾವು ಮಾಡಿದ್ದಳು. ನಂತ್ರ ಕ್ಯಾರೆಟ್ಟುಗಳನ್ನ ತೊಳೆಯುವಾಗ ಆಕೆಗೊಂದು ಅಚ್ಚರಿ ಕಾದಿತ್ತು. ಯಾಕಂದ್ರೆ ಅದ್ರಲ್ಲೊಂದು ಕ್ಯಾರೆಟ್ ಹದಿನೇಳು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಉಂಗುರವನ್ನ ಧರಿಸಿಕೊಂಡಿತ್ತು. ಅದು ತನ್ನದೇ ಅಂತ ಗುರುತು ಹಿಡಿದ ಆ ಮಹಿಳೆ ತನ್ನ ನೆನಪುಗಳೆಲ್ಲವೂ ಹಿಂತಿರುಗಿದಷ್ಟೇ ಸಂಭ್ರಮಿಸಿದ್ದಳಂತೆ. ಇಂಥಾ ಅದೃಷ್ಟ ಜಗತ್ತಿನಲ್ಲಿ ಬೇರ್ಯಾರಿಗೂ ಸಿಕ್ಕಿರಲಿಕ್ಕಿಲ್ಲವೇನೋ…
ಪಾದವೆಂಬ ಅದ್ಭುತ
ನಮ್ಮೆಲ್ಲರದ್ದು ಜಂಜಾಟಗಳ ಬದುಕು. ಅದರ ನಡುವಲ್ಲಿಯೇ ಒಂದಷ್ಟು ವಿಚಾರಗಳನ್ನ ತಿಳಿದುಕೊಳ್ಳೋಕೆ ಪ್ರಯತ್ನಿಸುವವರಿದ್ದಾರೆ. ಆದ್ರೆ ಅವ್ರ ಗಮನವೆಲ್ಲ ದೊಡ್ಡ ದೊಡ್ಡ ವಿಚಾರಗಳನ್ನ ಅರಿತುಕೊಳ್ಬೇಕು ಅನ್ನೋದ್ರತ್ತಲೇ ಇರುತ್ತೆ. ಈ ಭರಾಟೆಯಲ್ಲಿ ತೀರಾ ಸಣ್ಣಪುಟ್ಟ ಅಂಶಗಳು ಅರಿವಿಗೆ ಬರೋದೇ ಇಲ್ಲ. ಬೇರೆಲ್ಲಾ ಒತ್ತಟ್ಟಿಗಿರ್ಲಿ; ಮನ್ನದೇ ದೇಹದ ಗುಣ ಲಕ್ಷಣಗಳ ಬಗ್ಗೆ ನಮಗೇ ತಿಳಿದಿರೋದಿಲ್ಲ. ಹಾಗೊಂದುವೇಳೆ ನಿಮಗೊಂದಷ್ಟು ತಿಳಿದಿದೆ ಅಂತಿಟ್ಕೊಳ್ಳಿ… ನಿಮ್ಮದೇ ಪಾದಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹೀಗೊಂದು ಪ್ರಶ್ನೆ ಎದುರಾದ್ರೆ ನೀವಲ್ಲ; ಯಾರೇ ಆದ್ರೂ ತಡವರಿಸಬೇಕಾಗುತ್ತೆ. ನಮ್ಮ ಪಾದಗಳು ನಮ್ಮಿಡೀ ದೇಹದಲ್ಲಿ ಎಂಥಾ ಶಕ್ತಿಯುತ ಅನ್ನೋದನ್ನ ತಿಳ್ಕೊಳ್ಳೋದಕ್ಕೆ ಕಾಮನ್ಸೆನ್ಸ್ ಸಾಕು. ಆದ್ರೆ ಅದನ್ನ ಮೀರಿದ ವಿಸ್ಮಯಗಳು ಪಾದಗಳಲ್ಲಿವೆ. ಅದಕ್ಕೆ ಪ್ರಾಕೃತಿಕವಾಗಿಯೇ ಅಂಥಾ ಶಕ್ತಿ ದಕ್ಕಿದೆ. ಇಡೀ ದೇಹದ ಭಾರವನ್ನು ಹೊತ್ತುಕೊಳ್ಳಲು ಅನುವಾಗುವಂತೆ ಅದರ ರಚನೆಯಿದೆ. ಈ ಕಾರಣದಿಂದಲೇ ನಮ್ಮ ದೇಹದಲ್ಲಿರೋ ಒಟ್ಟಾರೆ ಮೂಳೆಗಳ ಹೆಚ್ಚಿನ ಪಾಲು ಪಾದಗಳಲ್ಲಿದೆ. ಮನುಷ್ಯನ ದೇಹದೊಳಗೆ ಸಾಮಾನ್ಯವಾಗಿ ೨೦೬ ಮೂಳೆಗಳಿರುತ್ತವೆ. ಅದರಲ್ಲಿ ಸಣ್ಣದು, ದೊಡ್ಡವುಗಳೆಲ್ಲ ಸೇರಿಕೊಂಡಿರುತ್ವೆ. ಆ ಒಟ್ಟಾರೆ ಮೂಳೆಗಳಲ್ಲಿ ಪಾದಗಳಲ್ಲಿಯೇ ಬರೋಬ್ಬರಿ ಐವತ್ತೆರಡು ಮೂಳೆಗಳಿವೆಯಂತೆ. ಆ ಅಷ್ಟೂ ಮೂಳೆಗಳು ಇತರವುಗಳಿಗಿಂತಲೂ ತುಂಬಾ ಸ್ಟ್ರಾಂಗ್ ಆಗಿರುತ್ತವೆ. ಇದರಿಂದಾಗಿಯೇ ನಾವೆಲ್ಲರೂ ಕುಣಿದು ಕುಪ್ಪಳಿಸಲು, ಮನ ಬಂದಂತೆ ಹಾರಲು, ದೇಹದಲ್ಲಿ ಮಣಗಟ್ಟಲೆ ಬೊಜ್ಜು ತುಂಬಿಕೊಂಡಿದ್ದರೂ ಸಲೀಸಾಗಿ ದೇಹವನ್ನ ಮ್ಯಾನೇಜ್ ಮಾಡಲು ಸಾಧ್ಯವಾಗಿದೆ.
ಅವನು ಛಲದ ಕಣಜ!
ಕೈ ಕಾಲು ಸೇರಿದಂತೆ ಎಲ್ಲವೂ ಸರಿಯಾಗಿದ್ದವರಿಗೆ ಸಾವಿರ ಕೊರಗುಗಳಿರುತ್ತವೆ. ಪದೇ ಪದೆ ಬೇರೆಯವರನ್ನ ನೋಡಿ, ಅವ್ರೊಂದಿಗೆ ಹೋಲಿಸಿಕೊಂಡು ಕೊರಗೋ ಖಾಯಿಲೆಯಿರುತ್ತೆ. ಸೋಂಭೇರಿತನಕ್ಕೆ ನಾನಾ ಸೋಗುಗಳ ಮುಖವಾಡ, ಸ್ವಯಂಕೃತಾಪರಾಧಗಳಿಗೆ ಥರಥರದ ಸಮಜಾಯಿಷಿ… ನಮ್ಮದೇ ತಪ್ಪಿನಿಂದಾದ ಹಿನ್ನಡೆಗಳಿಗೆ ನಾಚಿಕೆ ಬಿಟ್ಟು ಬೇರೆಯವರತ್ತ ಬೆರಳು ತೋರಿಸ್ತೇವೆ. ಇಂಥಾ ಅತೃಪ್ತ ಭಾವದಿಂದ ಇಡೀ ಬದುಕನ್ನೇ ಸವೆಸಿ ಕಳೆದು ಹೋದವರು ಅದೆಷ್ಟು ಜನರಿದ್ದಾರೋ… ನಾವೆಲ್ಲರೂ ಕೂಡಾ ಒಂದಲ್ಲ ಒಂದು ಘಟ್ಟದಲ್ಲಿ ಅಂಥಾ ಕೊರಗಿಗೆ, ಕುಂಟು ನೆಪಗಳಿಗೆ ವಶವಾದವರೇ. ಆದ್ರೆ ಈಗ ಹೇಳಲಿರೋ ವಿಶೇಷ ವ್ಯಕ್ತಿಯೋರ್ವರ ಕಥೆ ಕೇಳಿದರೆ ಯಾರೊಳಗೇ ಆದರೂ ಛಲದ ಛಳುಕು ಹುಟ್ಟದಿರೋದಿಲ್ಲ. ಆತ ಕ್ಲಾವ್ಡಿಯೋ ವೆಲಿವೇರಿಯಾ. ಅಂಗಾಂಗ ಊನಗೊಂಡವರನ್ನ ನಮ್ಮಲ್ಲಿ ವಿಕಲ ಚೇತನ ಅಂತೀವಲ್ಲ? ಆದರೀತ ವಿಶೇಷದಲ್ಲಿಯೇ ವಿಶೇಷ ಚೇತನ. ಆತನ ಅಸಲೀ ಕಥೆ ಕೇಳಿದ್ರೆ ಯಾರೇ ಆದ್ರೂ ಈ ಮಾತನ್ನ ಒಪ್ಪಿಕೊಳ್ಳದಿರೋಕೆ ಸಾಧ್ಯವಾಗೋದಿಲ್ಲ.
ಬ್ರೆಜಿಲ್ ದೇಶದ ಕ್ಲಾವ್ಡಿಯೋ ವೆಲಿವೇರಿಯಾನ ದೈಹಿಕ ಸ್ಥಿತಿ ನೋಡಿದರೆ ಆತ ನಲವತ್ತು ವರ್ಷಗಳನ್ನ ದಾಟಿಕೊಂಡಿದ್ದರ ಬಗೆಗೇ ಅಚ್ಚರಿ ಮೂಡುತ್ತೆ. ಈತನ ತಲೆ ಸಂಪೂರ್ಣವಾಗಿ ಬೆನ್ನಿಗೆ ನೇತು ಬಿದ್ದಂತಿದೆ. ಅದನ್ನ ಆಚೀಚೆ ಅಲುಗಾಡಿಸಲೂ ಸಾಧ್ಯವಿಲ್ಲ. ಸಂಪೂರ್ಣ ವಿಕಲಗೊಂಡಿರೋ ಕಾಲುಗಳಿಗೆ ನಡೆದಾಡೋ ತ್ರಾಣವಿಲ್ಲ. ಕೈಗಳದ್ದೂ ಅದೇ ಸ್ಥಿತಿ. ಆದರೆ ಅಂಥಾ ಹೀನಾಯ ಸ್ಥಿತಿಯನ್ನ ಮೀರಿಕೊಂಡು ಆತ ತಲುಪಿರೋ ಎತ್ತರದ ಮುಂದೆ ಎಲ್ಲ ಸರಿ ಇರುವವರೂ ಕುಬ್ಜರಂತೆನಿಸ್ತಾರೆ. ಕ್ಲಾವ್ಡಿಯೋ ವೆಲಿವೇರಿಯಾ ಹುಟ್ಟುತ್ತಲೇ ಇಂಥಾ ಸ್ಥಿತಿಯಲ್ಲಿದ್ದ. ಆ ಅವಸ್ಥೆ ನೋಡಿದ ವೈದ್ಯರು ತಾಯಿಯ ಬಳಿ ಮಗು ಬದುಕೋ ಛಾನ್ಸಿಲ್ಲ ಅಂತ ಅನೌನ್ಸ್ ಮಾಡಿದ್ದರು. ಒಂದು ವೇಳೆ ಬದುಕಿದರೂ ಜೀವಂತ ಶವದಂತಾಗೋದರಿಂದ ಉಸಿರು ನಿಲ್ಲಿಸಲು ಅನುಮತಿಸುವಂತೆ ಕೇಳ್ಕೊಂಡಿದ್ರು. ಆದ್ರೆ ಆ ತಾಯಿ ಮಾತ್ರ ಅದಕ್ಕೊಪ್ಪಲಿಲ್ಲ. ಈ ಹುಡುಗ ಅದೇ ಸ್ಥಿತಿಯಲ್ಲಿ ಉಸಿರಾಡುತ್ತಾ ಎಳವೆಯಿಂದಲೇ ವೈಖಲ್ಯ ಮೀರಿಕೊಂಡು ಬೆಳೆದ.
ಓದಿನಲ್ಲಿಯೂ ಚುರುಕಾಗಿದ್ದು ಉನ್ನತ ವ್ಯಾಸಂಗ ಪಡೆದುಕೊಂಡ. ನಂತರ ಎಲ್ಲರೂ ಅಚ್ಚರಿ ಪಡುವಂತೆ ಅಕೌಂಟೆಂಟ್ ಕೆಲಸ ಗಿಟ್ಟಿಸಿಕೊಂಡ. ಹಾಗೆ ನಲವತ್ತು ವರ್ಷಗಳನ್ನು ತುಂಬು ಪ್ರೀತಿಯಿಂದ ದಾಟಿಕೊಂಡಿರೋ ಕ್ಲಾವ್ಡಿಯೋ ವೆಲಿವೇರಿಯಾ ತನ್ನ ಜೀವನಾನುಭವದ ಬಗೆಗೊಂದು ಪುಸ್ತಕ ಬರೆದಿದ್ದಾರೆ. ಅದೂ ಕೂಡಾ ಕೈಯಿಂದಲ್ಲ, ಬಾಯಿಯಿಂದ. ಸ್ಫೂರ್ತಿದಾಯಕ ಮಾತುಗಳೊಂದಿಗೆ ಭಾಷಣಕಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ಆತ್ಮಬಲವೊಂದಿದ್ದರೆ ಎಂಥಾ ಸ್ಥತಿಯನ್ನೂ ಜೈಸಿಕೊಳ್ಳಬಹುದನ್ನೋದಕ್ಕೆ ಈತ ಜೀವಂತ ಉದಾಹರಣೆ. ಕ್ಲಾವ್ಡಿಯೋ ವೆಲಿವೇರಿಯಾರ ಫೋಟೋ ಮತ್ತು ಅವರ ಸಾಧನೆಯ ವಿವರಗಳನ್ನ ಥಳುಕು ಹಾಕಿ ನೋಡಿ… ನಿಮ್ಮಳಗೆ ಖಂಡಿತಾ ಏನಾದರೂ ಸಾಧಿಸೋ ಛಲದ ಛಳುಕು ಮೂಡದಿದ್ದರೆ ಕೇಳಿ…
ಹಲ್ಲಿರೋ ಮೀನು
ವಿಜ್ಞಾನ ಅನ್ವೇಷಣೆಯ ಆಳಕ್ಕಿಳಿದಷ್ಟೂ ಪ್ರಕೃತಿಯ ಅಚ್ಚರಿಗಳ ಮತ್ತಷ್ಟು ಪಾತಾಳಕ್ಕಿಳಿಯುತ್ತವೆ. ಮತ್ತಷ್ಟು ಆಳಕ್ಕಿಳಿದು ಹುಡುಕಲು ಪ್ರೇರೇಪಿಸುತ್ತೆ. ಅದಕ್ಕಡೆ ತಕ್ಕುದಾಗಿ ವಿಜ್ಞಾನ ಜಗತ್ತು ಪಾತಾಳಗರಡಿ ಹಾಕಿ ಮತ್ತಷ್ಟು ವೈಚಿತ್ರ್ಯಗಳನ್ನ ಬಗೆದು ಹೊರ ಹಾಕುತ್ತಿರುತ್ತೆ. ಅದೆಲ್ಲವನ್ನ ನೋಡಿದರೆ ಹೌಹಾರದೆ ಬೇರೆ ವಿಧಿಯಿಲ್ಲ. ಅಮೆರಿಕಾದ ಉತ್ತರ ಭಾಗದ ನದಿಗಳಲ್ಲಿ ಮತ್ತು ಅಮೇಜಾನ್ ಕಾಡಿನ ತಿಳಿ ನೀರಿನಲ್ಲಿ ಬದುಕೋ ಪಕು ಎಂಬ ಮೀನಿನ ವಿಚಿತ್ರ ಅವತಾರದ ಬಗ್ಗೆ ತಿಳಿದರೆ ನಿಮಗೂ ಕೂಡಾ ಶಾಕ್ ಆಗದಿರೋದಿಲ್ಲ. ಮೀನುಗಳಲ್ಲಿ ನಾನಾ ವೆರೈಟಿಗಳಿವೆ. ಮೀನು ಪ್ರಿಯರ ಪಾಲಿಗೆ ಅದರ ಒಂದಷ್ಟು ಬಗೆಗಳ ಪರಿಚಯವಿರುತ್ತೆ. ಆದರೆ ಅದನ್ನು ಮೀರಿಸುವಂಥಾ ಅದೆಷ್ಟೋ ಬಗೆಯ ಮೀನುಗಳು ಈ ಜಗತ್ತಿನಲ್ಲಿವೆ.
ಆದ್ರೆ ಪಕುವಿನಷ್ಟು ವಿಚಿತ್ರವಾದ ಮೀನು ಈ ಜಗತ್ತಿನಲ್ಲಿ ಬೇರೊಂದು ಸಿಗಲಿಕ್ಕಿಲ್ಲ. ಯಾಕಂದ್ರೆ ಈ ಮೀನಿಗೆ ಥೇಟು ಮನುಷ್ಯರ ಹಲ್ಲಿನಂಥಾದ್ದೇ ಹಲ್ಲುಗಳಿದ್ದಾವೆ. ಸಾಧಾರಣ ಗಾತ್ರದ ಈ ಮೀನುಗಳ ಹಲ್ಲುಗಳು ಡಿಟ್ಟೋ ಮನುಷ್ಯರ ಹಲ್ಲುಗಳನ್ನೇ ಹೋಲುತ್ತವೆ. ಅವು ಮನುಷ್ಯರ ಹಲ್ಲಿಗಳ ರಚನೆಯಂತೆಯೇ ಇವೆ. ಈ ಮೀನುಗಳು ಅಮೆರಿಕಾದ ಕೆಲ ಭಾಗ, ಸ್ಪೀಡನ್ನಂಥಾ ರಾಷ್ಟ್ರಗಳಲ್ಲಿ ಕಾಣ ಸಿಗುತ್ತವೆ. ಅಮೇಜಾನ್ ಕಾಡಿನ ಒಡಲ ನದಿಗಳಲ್ಲಿಯೂ ಪಕು ಸಂತತಿ ಇದೆ. ಹಲ್ಲಿರೋ ಈ ಮೀನುಗಳನ್ನ ಕೆಲ ಮಂದಿ ಕೆರೆಯಲ್ಲಿ ಬೆಳೆಸೋ ಕ್ರೇಜ್ ಹೊಂದಿದ್ದಾರೆ. ಅಂಥಾ ಸಂದರ್ಭದಲ್ಲಿ ಈ ಮೀನುಗಳು ಮನುಷ್ಯರಿಗೆ ಮನುಷ್ಯರಂತೆಯೇ ಕಚ್ಚಿ ಬೆಚ್ಚಿ ಬೀಳಿಸಿವೆಯಂತೆ.