ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯಲ್ಲಿ ‘ರಾಜ ವೀರಮದಕರಿ ನಾಯಕ’ ಸಿನಿಮಾ ಬರಬೇಕಿತ್ತು ಎನ್ನುವ ವಿಚಾರ ನಿಮಗೆಲ್ಲ ಗೊತ್ತೆಯಿದೆ. ಆದರೆ, ಆ ಸಿನಿಮಾ ಏಕಾಏಕಿ ನಿಂತು ಹೋಗಿತ್ತು. ಯಾಕೇ? ಏನು ? ಎನ್ನುವ ಸುದ್ದಿ? ಸತ್ಯ ಇಲ್ಲಿತನಕ ಹೊರಬಂದಿರಲಿಲ್ಲ. ಇದೇ ಮೊದಲ ಭಾರಿಗೆ ಸಾರಥಿ ಆ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ರಾಜ ವೀರಮದಕರಿ ನಾಯಕ’ ಚಿತ್ರ ಅರ್ಧಕ್ಕೆ ನಿಂತು ಹೋಗಿದ್ಯಾಕೆ ಎನ್ನುವ ವಿಚಾರವನ್ನು ಖುದ್ದು ದಾಸನೇ ಹೇಳಿಕೊಂಡಿದ್ದಾರೆ.
ಕಾಟೇರ ಸಿನಿಮಾದ ಬಗ್ಗೆ ತಮ್ಮದೇ ಅಭಿಮಾನಿಗಳ ಸಂಘದ ಡಿ ಕಂಪೆನಿ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ದರ್ಶನ್, ವೀರ ಮದಕರಿ ನಾಯಕ ಸಿನಿಮಾ ನಿಲ್ಲಲ್ಲು ಕಾರಣ ಯಾರು? ಯಾಕೆ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಯಿತು ಎನ್ನುವ ಕುರಿತು ಬಹಿರಂಗ ಪಡಿಸಿದ್ದಾರೆ. ಹತ್ತು ದಿನಗಳ ಕಾಲ ಶೂಟಿಂಗ್ ಮಾಡಲಾದ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ.
ಸಿನಿಮಾ ಯಾಕೋ ಹಿಡಿತಕ್ಕೆ ಸಿಗಲಿಲ್ಲ. ಹತ್ತು ದಿನಗಳ ಕಾಲ ಶೂಟಿಂಗ್ ಕೂಡ ಆಗಿತ್ತು. ವೀರ ಮದಕರಿ ನಾಯಕ ಒಂದು ಜನಾಂಗದ ದೇವರು. ಅವರಿಗೆ ಅಪಚಾರ ಮಾಡಬಾರದು. ಹಾಗಾಗಿ ನಾನೇ ಸಿನಿಮಾ ನಿಲ್ಲಿಸುವಂತೆ ಹೇಳಿದೆ. ಹೇಗೇಗೋ ಸಿನಿಮಾ ಮಾಡಿ ಬೈಯಿಸಿಕೊಳ್ಳೋಕ್ಕಿಂತ ಹಿಡಿತಕ್ಕೆ ಸಿಕ್ಕಾಗ ಮಾಡೋಣ ಅಂತ ಹೇಳಿದೆ ಎಂದಿದ್ದಾರೆ ದರ್ಶನ್. ಈ ಮೂಲಕ ಸಿನಿಮಾ ನಿಲ್ಲಲು ನಾನೇ ಕಾರಣವೆಂದು ಒಪ್ಪಿಕೊಂಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಾಟೇರ ಸಿನಿಮಾಗೂ ಮೊದಲು ‘ರಾಜ ವೀರಮದಕರಿ ನಾಯಕ’ ಸಿನಿಮಾ ರೆಡಿ ಆಗಬೇಕಿತ್ತು. ದರ್ಶನ್ (Darshan) ಅವರಿಗಾಗಿಯೇ ರಾಜೇಂದ್ರ ಸಿಂಗ್ ಬಾಬು (Rajendra Singh Babu)ಸ್ಕ್ರಿಪ್ಟ್ ಬರೆದು, ನಿರ್ದೇಶನಕ್ಕೆ ಮುಂದಾಗಿದ್ದರು. ರಾಕ್ ಲೈನ್ ವೆಂಕಟೇಶ್ (Rock Line Venkatesh) ಈ ಸಿನಿಮಾದ ನಿರ್ಮಾಪಕರು. ಅಂದ್ಹಾಗೇ ಈ ಚಿತ್ರ ನಾನಾ ಕಾರಣಗಳಿಂದಾಗಿ ಸದ್ದು ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಈ ಸುದ್ದಿ ಭಾರೀ ವಿವಾದಕ್ಕೂ ಕಾರಣವಾಗಿತ್ತು. ಈ ಸಿನಿಮಾವನ್ನು ಸುದೀಪ್ ಮಾಡಬೇಕು ಎಂದು ವಾಲ್ಮೀಕಿ ಗುರುಪೀಠದ ಸ್ವಾಮೀಜಿ ಮಾತನಾಡಿದ್ದರು. ಆದರೆ, ದರ್ಶನ್ ಅವರು ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ, ಸಿನಿಮಾ ಆಗಲೇ ಇಲ್ಲ.