ಚಂದನವನದ ಚಿರಯುವಕ ಅಂತಲೇ ಕರೆಸಿಕೊಳ್ಳುವ ಹಿರಿಯ ನಟ ಅನಂತ್‍ನಾಗ್ ಅವರಿಗೆ ಇಂದು ಜನುಮ ದಿನದ ಸಂಭ್ರಮ. 75 ವರ್ಷ ಮುಗಿಸಿ 76ನೇ ವಸಂತಕ್ಕೆ ಕಾಲಿಟ್ಟಿರುವ ಕನ್ನಡ ಚಿತ್ರರಂಗದ ಈ ಎವರ್ ಗ್ರೀನ್ ಹೀರೋಗೆ, ಅಖಂಡ ಅಭಿಮಾನಿ ಬಳಗ ಶುಭಕೋರುತ್ತಿದೆ. ದೇಶದ ಮೂಲೆಮೂಲೆಯಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ವಿಶೇಷ ಅಂದರೆ ನಟ ಅನಂತ್‍ನಾಗ್ ಅವರು ಚಿತ್ರರಂಗಕ್ಕೆ ಬಂದು ಭರ್ತಿ 50 ವರ್ಷಗಳು ಕಳೆದಿವೆ. 1973ರಲ್ಲಿ ಸಂಕಲ್ಪ ಚಿತ್ರದಿಂದ ಸಿನಿಮಾಲೋಕ ಪ್ರವೇಶಿಸಿದ್ದರು. ಇಲ್ಲಿಂದ ಶುರುವಾದ ಸಿನಿಮಾ ಪಯಣ ಬಹದೂರ ಸಾಗಿಬಂದಿದ್ದು, ಬಣ್ಣದ ಲೋಕದಲ್ಲಿ ಯಶಸ್ವಿ 50 ವರ್ಷಗಳನ್ನ ಪೂರೈಸುವ ಅವಕಾಶ ಸಿಗ್ತು. ಐದು ದಶಕಗಳ ಕಾಲ ರಜತಪರದೆಯನ್ನ ಬೆಳಗುವ ಅದೃಷ್ಟ ಅನಂತ್‍ನಾಗ್ ಅವರಿಗೆ ಒದಗಿಬಂತು.
ರಂಗಭೂಮಿ ಹಿನ್ನಲೆಯಿಂದ ಬೆಳ್ಳಿಭೂಮಿಗೆ ಬಂದಿದ್ದ ಅನಂತ್ ನಾಗ್ ಅವರು ತರಹೇವಾರಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಂತಹದ್ದೇ ಪಾತ್ರ ಕೊಟ್ಟರೂ ಕೂಡ ನಿರಾಯಾಸವಾಗಿ ಅಭಿನಯಿಸಿದ್ದಾರೆ. ನಿರ್ದೇಶಕನ ಕಲ್ಪನೆಯ ಪ್ರತಿಪಾತ್ರದೊಳಗೂ ಪರಕಾಯ ಪ್ರವೇಶ ಮಾಡಿ ಕಲಾಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದಾರೆ. ಈಗಲೂ ತಮ್ಮ ಇಳಿವಯಸ್ಸಿನಲ್ಲೂ ಕೂಡ ತನ್ನನ್ನು ಅರಸಿಕೊಂಡು ಬರುವ ಪ್ರತಿ ಪಾತ್ರಕ್ಕೂ ನ್ಯಾಯ ಒದಗಿಸುತ್ತಾರೆ.
ಕಳೆದ ಐದು ದಶಕಗಳ ಸಿನಿಯಾನದಲ್ಲಿ ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಪರಭಾಷೆಯಲ್ಲೂ ಮಿಂಚು ಹರಿಸಿದ್ದಾರೆ. ಸರಿಸುಮಾರು 300 ಸಿನಿಮಾಗಳಿಗೆ ಬಣ್ಣ ಹಚ್ಚಿ ಪಾತ್ರವೇ ತಾವಾಗಿದ್ದಾರೆ. ಬಯಲುದಾರಿ, ನಾನಿನ್ನ ಬಿಡಲಾರೆ, ಚಂದನದ ಗೊಂಬೆ, ಬೆಂಕಿಯ ಬಲೆ, ಹೆಂಡ್ತಿಗೇಳ್ಬೇಡಿ, ಗಣೇಶನ ಮದುವೆ, ಗೌರಿ ಗಣೇಶ, ಅರುಣರಾಗ, ಮುಂಗಾರು ಮಳೆ, ಗೋದಿಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೆಜಿಎಫ್ ಹೀಗೆ ಅನೇಕ ಬ್ಲಾಕ್‍ಬಸ್ಟರ್ ಸಿನಿಮಾಗಳ ಯಶಸ್ಸಿಗೆ ಕಾರಣರಾಗಿದ್ದಾರೆ.
ಇತ್ತೀಚೆಗೆ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಲೆಜೆಂಡರಿ ಆ್ಯಕ್ಟರ್ ಅನಂತ್ ನಾಗ್ ಅವರು, ತಮ್ಮ ಸಿನಿಮಾ ಜರ್ನಿ ಬಗ್ಗೆ ಮೆಲುಕುಹಾಕ್ತಾ ಅದೊಂದು ಮಾತನ್ನ ಹಂಚಿಕೊಂಡಿದ್ದಾರೆ. ಕೆಲಸಕ್ಕಾಗಿ ಯಾವತ್ತೂ ಯಾರ ಮನೆಯ ಕದವನ್ನೂ ತಟ್ಟಲಿಲ್ಲ ಎಂದಿದ್ದಾರೆ. ಇದು ನಟ ಅನಂತ್‍ನಾಗ್ ಅವರ ಸ್ವಾಭಿಮಾನವನ್ನ ಎತ್ತಿತೋರಿಸುವುದರ ಜೊತೆಗೆ ಕಲಾಸರಸ್ವತಿ ಮೇಲೆ ಅವರಿಗಿದ್ದ ನಂಬಿಕೆ ಮತ್ತು ಅವರಿಗಿದ್ದ ಬೇಡಿಕೆಯ ಇನ್ನೆಷ್ಟಿತ್ತು ಅನ್ನೋದನ್ನ ಸೂಚಿಸುತ್ತೆ. ಅಪ್‍ಕೋರ್ಸ್ ಅನಂತ್‍ನಾಗ್ ಅವರು ಬಹುಬೇಡಿಕೆಯ ನಟರಾಗಿದ್ದರು. ಒಂದೇ ತರಹದ ಕ್ಯಾರೆಕ್ಟರ್‍ಗೆ ಅಂಟಿಕೊಳ್ಳದೇ ಪ್ರತಿ ಪಾತ್ರದ ಮೂಲಕವೂ ಪ್ರಯೋಗಗಳನ್ನ ಮಾಡುತ್ತಿದ್ದರು. ಹೊಸತನಕ್ಕಾಗಿ ಹಂಬಲಿಸುತ್ತಿದ್ದರು. ಚಾಲೆಂಜಿಂಗ್ ರೋಲ್‍ಗಳನ್ನ ಆಯ್ಕೆಮಾಡಿಕೊಂಡು ತನ್ನೊಳಗಿರುವ ಕಲಾವಿದನ ಶಕ್ತಿಯನ್ನು ಬೆಳ್ಳಿತೆರೆ ಮೇಲೆ ಅನಾವರಣ ಮಾಡುತ್ತಿದ್ದರು. ಹೀಗಾಗಿಯೇ ಎಲ್ಲರೂ ಕೂಡ ನಟ ಅನಂತ್ ನಾಗರಕಟ್ಟೆಯ ಕಾಲ್‍ಶೀಟ್‍ಗಾಗಿ ಅವರ ಮನೆಮುಂದೆ ಕ್ಯೂ ನಿಲ್ಲಬೇಕಾಗಿ ಬರುತ್ತಿತ್ತು.
ಇನ್ನೂ ನಟ ಅನಂತ್‍ನಾಗ್ ಅವರು ಸಿನಿಮಾಗಳನ್ನು ಹೆಚ್ಚಾಗಿ ನೋಡುವುದಿಲ್ಲವಂತೆ. ಅದರಲ್ಲೂ ಅವರ ಸಿನಿಮಾಗಳನ್ನ ಮತ್ತೆ ಮತ್ತೆ ನೋಡುವುದಕ್ಕೆ ಹೋಗಲ್ವಂತೆ. ಕಾರಣ, ಒಂದು ಸಿನಿಮಾ ಒಪ್ಪಿಕೊಂಡಾಗ ಆ ಪಾತ್ರದೊಳಗೆ ತಿಂಗಳಾನುಗಟ್ಟಲೇ ಜೀವಿಸಿರುತ್ತೇವೆ. ಮತ್ಯಾಕೆ ಅದನ್ನು ನೋಡೋದಕ್ಕೆ ಸಿನಿಮಾ ಹಾಲ್‍ಗೆ ಹೋಗಬೇಕು. ಅಷ್ಟಕ್ಕೂ, ನಮ್ಮ ಸಿನಿಮಾಗಳನ್ನ ನೋಡಿ ನಾವು ಜಡ್ಜ್ ಮಾಡೋದಲ್ಲ. ನಮ್ಮ ಪಾತ್ರಗಳನ್ನ ನೋಡಿ ನಮ್ಮ ಕೆಲಸಕ್ಕೆ ಪ್ರೇಕ್ಷಕರಿಂದ ಮಾನ್ಯತೆ ಸಿಕ್ಕರೆ ಅಷ್ಟೇ ಸಾಕು. ನಾನು ಅದನ್ನೇ ಬಯಸಿದ್ದೇನೆ, ಮುಂದೆಯೂ ಅದನ್ನೇ ನಿರೀಕ್ಷೆ ಮಾಡುತ್ತೇನೆ ಎಂದಿದ್ದಾರೆ.
ಹಾಗೆಯೇ ಮಾತು ಮುಂದುವರೆಸಿ ಓಟಿಟಿಗಳಿಂದ ಥಿಯೇರಿಟಿಕಲ್ ಎಕ್ಸ್ ಪೀರಿಯನ್ಸ್ ಕೊಡುವುದಕ್ಕೆ ಆಗಲ್ಲ. ಈ ಹಿಂದೆ ಮನೆಮನೆಗೆ ಟಿವಿ ಬಂದಾಗ ಥಿಯೇಟರ್ ಗಳು ಇನ್ಮೇಲೆ ಮುಚ್ಚಿಹೋಗುತ್ತವೆ ಎನ್ನುವ ಮಾತು ಕೇಳಿಬಂದಿತ್ತು. ಹಾಗಾಯ್ತಾ? ಆಗಲಿಲ್ಲ ಅಲ್ಲವೇ? ಸೋ ಈಗ್ಲೂ ಓಟಿಟಿಯಿಂದ ಚಿತ್ರಮಂದಿರಗಳಿಗೆ ಸಮಸ್ಯೆ ಆಗಲ್ಲ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿದಾಗ ಸಿಗುವ ಅನುಭವ ಓಟಿಟಿ ಫ್ಲಾಟ್‍ಫಾರ್ಮ್‍ಗಳಿಂದ ಸಿಗುವುದಿಲ್ಲ ಎಂದಿದ್ದಾರೆ. ಇತ್ತೀಚೆಗೆ ಗುಡ್ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿದ್ದು, ಆಡಿಯನ್ಸ್ ಗೆ ತಲುಪಿಸುವ ಕೆಲಸ ಆಗ್ತಿದೆ. ಅದು ಮುಂದುವರಿಬೇಕು, ಆಗ ಮಾತ್ರ ಥಿಯೇಟರ್ ಕಡೆ ಮುಖ ಮಾಡುವವರ ಸಂಖ್ಯೆ ಹೆಚ್ಚುತ್ತೆ ಎಂದಿದ್ದಾರೆ. ಈಗಲೂ ಒಳ್ಳೊಳ್ಳೆ ಪಾತ್ರಗಳ ಮೂಲಕ ಜನರ ಮುಂದೆ ಬರುವ ತುಡಿತ ನಟ ಅನಂತ್‍ನಾಗ್ ಅವರಿಗಿದೆ. ಇಂತಿಪ್ಪ ಹಿರಿಯ ನಟರಿಗೆ ಆ ಕಲಾಸರಸ್ವತಿಯ ಕೃಪೆ, ಆಶೀರ್ವಾದ ಸದಾ ಇರಲಿ. ನೂರಾರು ವರ್ಷಗಳ ಕಾಲ ಕಲಾಸೇವೆ ಮಾಡುವ, ಸುಖವಾಗಿ ಬಾಳುವ ಅವಕಾಶ ಆ ಭಗವಂತ ಕೊಡಲಿ ಅನ್ನೋದೇ ಅವರ ಅಭಿಮಾನಿಗಳ ಕೋರಿಕೆ