‘ಕಾಗೆಯೊಂದು ಹಾರಿ ಬಂದುವಮರದ ಮೇಲೆ ಕುಳಿತುಕೊಂಡು ಫಿಲ್ಟರ್ ತುಂಡು ಹುಡುಕತೊಡಗಿತು!’ ಇದೇನು ಶಿಶುಪದ್ಯನಾ? ಅಲ್ಲಾ ‘ಶಿಷ್ಯ’ರ ಪದ್ಯ. ಸಿಗರೇಟ್ ಸೇದಿ ಫಿಲ್ಟರ್ ತುಂಡುಗಳನ್ನು ರಸ್ತೆಯಲ್ಲಿ ಎಸೆಯುವುದು ಮಾಮೂಲಿ. ಇವುಗಳನ್ನು ಹೆಕ್ಕಿ ತೆಗೆದು ಡಸ್ಟ್‌ಬಿನ್‌ಗೆ ಹಾಕಲಿದೆ ತರಬೇತಿ ಪಡೆದ ಕಾಗೆಗಳು. ಪಕ್ಷಿಗಳಲ್ಲೇ ಬುದ್ಧಿವಂತ ಎಂದರೆ ಕಾಗೆಗಳು. ಅಂತಹ ಕಾಗೆಗಳ ಕುರಿತು ‘ಕಾಗೆ ಹಾರಿಸುತ್ತೀರಾ?’ ಇಲ್ರಿ ಖಂಡಿತವಾಗಿಯೂ ನಿಜ. ಶನಿವಾಹನಕ್ಕೆ ಇನ್ನು ಸಿಗರೇಟ್ ತುಂಡುಗಳು ಹೆಕ್ಕುವ ‘ಉದ್ಯೋಗ ಭಾಗ್ಯ’ ದೊರೆಯಲಿದೆ.
ನೆದರ್‌ಲ್ಯಾಂಡ್ ದೇಶದ ಆಮ್ಸ್ಟರ್ಡ್ ಡ್ಯಾಂನ ತರಬೇತಿದಾರರು ಈ ನಿಟ್ಟಿನಲ್ಲಿ ಯಶಸ್ವಿಯಾಗಿರುವ ವರದಿಗಳು ಬಂದಿವೆ. ಒಂದು ಕಾಲಕ್ಕೆ ಕೈಗಾರಿಕಾ ವಿನ್ಯಾಸಕಾರರಾಗಿದ್ದ ರುಬೆನ್ ವ್ಯಾನ್‌ಡರ್ ವಿಯುಟೆನ್ ಹಾಗೂ ಬಾಬ್ ಸ್ಪಕ್ ಮ್ಯಾನ್ ಅವರುಗಳು ಈ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ರೊಬೊಗಳನ್ನು ಹಿಡಿದು ಈ ಕೆಲಸ ಮಾಡಿಸುತ್ತಿದ್ದರು. ಆದರೆ ರೊಬಳಿಗೆ ತರಬೇತಿ ನೀಡುವುದಕ್ಕಿಂತಲೂ ಶನಿವಾಹನವೇ ಸೂಕ್ತವೆಂದು ಅರಿತಿದ್ದಾರೆ. ಸುಮಾರು ೩ ವರ್ಷಗಳಿಂದ ಹಲವು ಕಾಗೆಗಳಿಗೆ ತರಬೇತಿ ನೀಡುವುದೇ ಇವರ ಉದ್ಯೋಗ. ಕಾಗೆ ಸಂಗ್ರಹಿಸಿದ ತುಂಡುಗಳನ್ನು ಸಂಗ್ರಹಿಸಲು ವಿಶಿಷ್ಟವಾದ ಉಪಕರಣಗಳನ್ನೂ ರೂಪಿಸಿದ್ದಾರೆ. ಸಿಗರೇಟ್‌ಗಳನ್ನೇ ಹೆಕ್ಕುತ್ತಾ ಹೋದರೆ ರೈತಮಿತ್ರನಾಗಿರುವ ಕಾಗೆ ಹುಳು ಹುಪ್ಪಟ್ಟೆಗಳನ್ನು ಹೆಕ್ಕಿ ತಿನ್ನದೇ ಹೋಗುವ ಅಪಾಯಗಳಿವೆಯಲ್ಲವೇ? ಹೌದು. ಆದರೆ ಜಗತ್ತಿನ ಎಲ್ಲಾ ಕಾಗೆಗಳಿಗೂ ಈ ಶಿಕ್ಷಣ ನೀಡಲಾಗದಲ್ಲವೇ? ಏನೋ ಹೊತ್ತು ಹೋಗಲ್ಲ… ಚೇಷ್ಟೆ ಮಾಡುತ್ತಿದ್ದಾರೆ ಮಾಡಲಿ ಬಿಡಿ…!
ಮೈಚೀಲ
ಕೆಲವರು ಕಾಲುಚೀಲ ತೊಟ್ಟರೆ ಶೂ ಒಳಗೇ ಮುಳುಗಿ ಹೋಗಿರುತ್ತದೆ. ಇನ್ನು ಕೆಲವರು ತೊಟ್ಟರೆ ಮೊಣಕಾಲಿನವರೆಗೆ ಇರಲಿದೆ. ಮತ್ತೊಂದಿಷ್ಟು ಮಂದಿ ತೊಡೆಯವರೆಗೂ ಧರಿಸಿರುತ್ತಾರೆ…ಆದರೆ, ಈಕೆ ನೋಡಿ ಇಡೀ ಬಾಡಿಗೆ ಸಾಕ್ಸು ತೊಟ್ಟು ಅಡ್ಡಾಡುತ್ತಿದ್ದಾಳೆ. ಪೂರ್ತಿ ಉಣ್ಣೆದಾರದಿಂದ ಈ ಮೈ ಚೀಲವನ್ನು ನೇಯ್ದಿದ್ದಾಳೆ. ೨೧೦ ಪೌಂಡ್ಸ್‌ಗಳ ಖರ್ಚು ಇದಕ್ಕೆ ಬಂದಿದೆ. ರೊಕ್ಕ ಕೊಟ್ಟರೆ ನೇಯ್ದುಕೊಡುತ್ತಾಳಂತೆ ಬಲ್ಗೇರಿಯಾದ ದುಕನ್ಯಾ. ಕಣ್ಣಿಗೆ ಕಂಡಿದ್ದು ಕಾಲಿಗೆ ನಿಜವಲ್ಲ. ಸೀದಾ-ಸಾದಾ ಮಾರ್ಗವಿದ್ದರೆ ಜನ ಜನ ದಡ ಬಡಾ ನಡೆಯುತ್ತಾರೆ. ಸ್ಪೀಡ್ ಹೆಚ್ಚಿದಂತೆ ಅಪಘಾತ ನಿಶ್ಚಿತ. ಅದೇ ಅಂಕು ಡೊಂಕಿದ್ದರೆ ಅಪಾಯ ಗಟ್ಟಿ ಎಂದು ನಿಧಾನವಾಗಿ ನಡೆಯುತ್ತಾರೆ. ಅಲ್ವಾ? ಅದನ್ನು ಗ್ರಹಿಸಿಯೇ ಇರಬೇಕು. ಇಂಗ್ಲೇಂಡ್‌ನ ಕ್ಯಾಸಾ ಸೆರಾಮಿಕಾ ಎಂಬ ಅಂಕುಡೊಂಕಿನಂತಿರುವ ಟೈಲ್ಸ್‌ಗಳನ್ನು ಉತ್ಪಾದಿಸುತ್ತಿದೆ. …ಸುಮಾರು ೪೦೦ ಟೈಲ್ಸ್‌ಗಳನ್ನು ಬಳಸಿ ಈ ಕಾರಿಡಾರ್‌ಗೆ ಹಾಸಿದ್ದಾರೆ. ಬೇಕಿದ್ದರೆ ಈ ಚಿತ್ರವನ್ನೇ ನೋಡಿ…
ಆ ತುದಿಯಿಂದ ನೋಡಿದರೆ ಹಳ್ಳ ಈ ತುದಿಯಿಂದ ಕಂಡರೆ ದಿಣ್ಣೆ…ನಿಜಕ್ಕೂ ಹೀಗೆ ಅಳವಡಿಸಿದ್ದಾರೆಯೇ? ಅಳವಡಿಸಿರುವುದು ದಿಟ. ಆದರೆ ನಿಮ್ಮ ಕಣ್ಣುಗಳು ಮೋಸ ಮಾಡುತ್ತಿವೆ! ಅಂಕು-ಡೊಂಕಿನಂತೆ ಗೋಚರಿಸುತ್ತದೆ ಅಷ್ಟೇ. ಏರಿಳಿತ ಇಲ್ಲ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಕಣ್ಣಿಗೆ ಕಂಡಿದ್ದು ಕಾಲಿಗೆ ನಿಜವಲ್ಲ! ನಡೆದಾಡುವಾಗ ಜಾಗರೂಕರಾಗಿ ಚಲಿಸಲಿ ಎಂಬ ಸೂಚನೆಯಿದು. ನಿತ್ಯ ಓಡಾಡುವವರಿಗೆ ಜಾಗದ ಪರಿಚಯವಾಗಿರುತ್ತದೆ. ಮರು ದಿನ ವೇಗವಾಗಿ ನಡೆದು ಈ ಅಪಾಯವಾಗಿ ಬಿದ್ದು ಹಣೆ ಜಜ್ಜಿಕೊಂಡರೆ?
‘ಕುರುಡಾದ’ ಬಯಕೆ!
ಹುಟ್ಟಿನಿಂದ ಅಥವಾ ಅಪಘಾತವಾಗಿ ಕುರುಡಾಗುವುದು ಗೊತ್ತು. ಆದರೆ ಬೇಕೆಂದೇ ಕುರುಡಾಗುವವರೂ ಇದ್ದಾರೆ. ಇಲ್ಲಿದೆ ಕೃತಕ ಕುರುಡಿಗೊಂದು ಉತ್ತಮ ಉದಾಹರಣೆ. ‘ಎನ್ನ ಕುರುಡನ್ನಾ ಮಾಡಯ್ಯ ತಂದೆ-ಎನ್ನ ಕಿವುಡನ್ನಾ ಮಾಡಯ್ಯ ತಂದೆ’ ಎಂದು ನಮ್ಮ ದಾಸರು ಹಾಡಿದ್ದನ್ನು ಜ್ಯುಯಲ್ ಶುಪ್ಪಂಗ್ ಕದ್ದು ಕೇಳಿರಬೇಕು! ಕುರುಡಿಯಾಗುವ ತೆವಲು ಇವಳಿಗಿತ್ತು. ಹಠತೊಟ್ಟು ಸಾಕಾರಗೊಳಿಸಿಕೊಂಡಿದ್ದಾಳೆ. ಟಾಯ್ಲೆಟ್ ಕ್ಲೀನರ್ ದ್ರಾವಣವನ್ನು ಕಣ್ಣಿಗೆ ಹಾಕಿಕೊಂಡು ದಾಸವಾಣಿಯಂತೆ ಕುರುಡಿಯಾಗಿದ್ದಾಳೆ. ಅಂಧತ್ವ ಮೆಟ್ಟಿ ಅಂದದ ಜಗ ಕಾಣುವ ತವಕ ಅಂಧರಿಗಿರಲಿದೆ. ಆದರೆ ಜ್ಯುಯಲ್‌ಗೆ ಅಂಧತ್ವವೇ ಅಂದವಾಗಿದೆಯಂತೆ. ‘ಕಣ್ಣು ಕುರುಡಾದ್ರು ಬಾಯಿ ಕುರುಡೆ’ ಎನ್ನುತ್ತಾ ಕತ್ತಲಬಾಳಿಗೆ ಶುಪ್ಪಾಂಗ್ ಜಾರಿರುವುದು ನಿಜಕ್ಕೂ ವಿಚಿತ್ರ ಖಯಾಲಿ.
ಅಂಗಾಂಗಗಳನ್ನು ಊನ ಮಾಡಿಕೊಳ್ಳುವುದೂ ಒಂದು ಮನೋ ವ್ಯಾಧಿಯಂತೆ. ಜಾಗತಿಕಮಟ್ಟದಲ್ಲಿ ಈ ರೋಗ ಹೆಚ್ಚಾಗುತ್ತಿದೆ. ಈ ವ್ಯಾಧಿಗೆ ಸಮಗ್ರ ದೇಹ ಗುರುತಿಸುವಿಕೆಯ ಅಸ್ವಸ್ಥತೆ ಅಥವಾ ‘ಃoಜಥಿ Iಟಿಣegಡಿiಣಥಿ Iಜeಟಿಣiಣಥಿ ಆisoಡಿಜeಡಿ (ಃIIಆ)’ ಎಂದು ಮನೋವೈದ್ಯರು ಈ ತೆವಲಿಗೊಂದು ಹೆಸರು ಸೂಚಿಸಿದ್ದಾರೆ. ‘ಕಾಣೋಕಣ್ಣಿಗಿಂತ ಕುರುಡ್ಗಣ್ಣೇವಾಸಿ’ ಎಂಬ ನೂತನ ಗಾದೆ ಹೇಳುವ ಜ್ಯುಯಲ್ ಶುಪ್ಪಂಗ್ ಅಮೆರಿಕದ ಉತ್ತರ ಕ್ಯಾರೊಲಿನಾದಲ್ಲಿದ್ದಾಳೆ. ಈ ಕೃತಕ ಕುರುಡಿಗೆ ಪ್ರೀತಿಸುವ ಗಂಡ ಆರೈಕೆ ಮಾಡುತ್ತಿದ್ದಾನೆ. ನಾಳೆ ಸೋಡಾ ಚೀಟಿ ಎಸೆದು ಹೋದರೆ ಇವಳ ಬದುಕೇ ಕುರುಡಾಗಲಿದೆ.
ಕಂದನೊಂದಿಗೆ ಕುಣಿತ!
‘ಅಂಬಾ’ ಅನ್ನುವ ಕಂದನೊಂದಿಗೆ ‘ಮುಂಬಾ’ ಎಂಬ ಕುಣಿತವಿದು. ಬೆಲ್ಲಿಡ್ಯಾನ್ಸ್, ಏರೋಬಿಕ್ಸ್‌ಗಳೊಂದಿಗೆ ಒಂದಿಷ್ಟು ವ್ಯಾಯಾಮ ಮಾಡುವ ಯೋಗಾ’ಯೋಗ’ವೂ ಹೌದು. ಕ್ಷಣಹೊತ್ತು ಕರುಳಬಳ್ಳಿಯನ್ನು ಬಿಟ್ಟಿರಲಾಗದ ಬಾಣಂತಿಯರು ಹೆತ್ತ ಕಂದನನ್ನು ಎದೆಗವುಚಿಕೊಂಡೇ ಮುಂಬಾಡಬಹುದು. ಮುಂಬಾಟ – ಬೊಂಬಾಟ್ ಅಲ್ಲದಿದ್ದರೂ ತಾಯಿಗೆ ಕುಲುಕಾಟ-ಮಗುವಿಗೆ ಮುಲುಕಾಟವಾಗಿ, ಮೋಜಿನಾಟವಾಗಿ, ಒಂದಿಷ್ಟು ಕಸರತ್ತಾಗಲಿದೆ. ‘ಮುಂಬಾ’ಯಿಂದ ಸೈಜ್ ಜೀರೋ ಆಗದಿದ್ದರೂ ಎಕ್ಸೈಜ್ ಜೀರೋ ಆಗದು.
ನಮ್ಮಲ್ಲಿ ಬಾಣಂತಿಯರಿಗೆ ತಲೆಗೆ ಬಟ್ಟೆ, ಕಾಲಿಗೆ ಚೀಲ, ಮೈಗೆ ಸ್ವೆಟರ್ ಹಾಕಿ ಆರೈಕೆ ಮಾಡುತ್ತೇವೆ. ಸೂರ್ಯ ರಶ್ಮಿಯೂ ತಾಕದಂತೆ ಎಚ್ಚರಿಕೆ ವಹಿಸುತ್ತೇವೆ. ತೈಲ, ಲೇಹ್ಯಗಳೂ ಅವಳ ಉದರಕ್ಕೆ ಹಾಕುತ್ತೇವೆ. ಕಾಯಿಲೆಗಳು ಕಾಡದಿರಲೆಂಬ ಎಚ್ಚರಿಕೆ ಇದು. ಆದರೆ ಹಾಂಕಾಂಗ್‌ನಲ್ಲಿ ಮುಂಬಾ ಡ್ಯಾನ್ಸ್ ಆಡಿಸುತ್ತಾ ಬಸುರಿಯರನ್ನು ಬಸವಳಿಯುವಂತ ಮಾಡುತ್ತಿದ್ದಾರೆ. ಪಾಪ ಅಲ್ವಾ? ಇಲ್ಲ! ಹೀಗೆ ಮಾಡುವುದರಿಂದ ಮಗು-ತಾಯಿ ಇಬ್ಬರಿಗೂ ವ್ಯಾಯವಾಗಲಿದೆ. ಮಗುವಿಗೂ ಕೊಂಚ ಮನರಂಜನೆ-ತಾಯಿಗೂ ಲವಲವಿಕೆ ಮೂಡಲಿದೆ. ಮನೆಯಲ್ಲಿ ಕೂಡಿ ಹಾಕುವುದಕ್ಕಿಂತಲೂ ಇದು ಉತ್ತಮ.
ಕೂಸಿದ್ದಾಗಲೇ ಕುಣಿಯುವದನ್ನು ಅಭ್ಯಾಸ ಮಾಡಿಕೊಂಡ ಕಾರಣ ಸಹಜವಾಗಿಯೇ ತಾಯಿಯರನ್ನು ಈ ಡ್ಯಾನ್ಸ್‌ಗೆ ಒತ್ತಾಯ ಮಾಡುತ್ತಿವೆ. ಶಾಲೆಗೆ ದಾಖಲಾಗುವವರೆಗೂ ಅಂಬಾ ಜತೆಯಲ್ಲಿ ಮಕ್ಕಳು ಮುಂಬಾಡುತ್ತಾ… ಆಕೆ ಸಪೂರ ದೇಹದವಾಳುವಂತೆ ಮಾಡುತ್ತಿವೆ. ಮಕ್ಕಳೊಂದಿಗೆ ತಾಯಿ ಕೂಡ-ತಾಯಿಯೊಂದಿಗೆ ಮಕ್ಕಳು ಕೂಡ ಕುಣಿದಾಟ ಹೇಳಿಕೊಡುವ ಮುಂಬಾ ಡ್ಯಾನ್ಸ್ ಶಾಲೆಗಳಿವೆ.
ಬ್ಲೇಡಿಲ್ಲದೆ ಶೇವ್!
ನೀರಿಲ್ಲದೆ ಶೇವ್ ಮಾಡುವ ಬಗ್ಗೆ ಚೇಡಿಕೆ ಮಾತು ಕೇಳಿದ್ದೇವೆ. ಆದರೆ ಬ್ಲೇಡ್ ಇಲ್ಲದೆ ಶೇವ್ ಮಾಡುವ ಸಮಯ ಬಂದಿದೆ. ಇದೇನು ಕುಚೋದ್ಯವಲ್ಲ. ‘ಸ್ಕಾರ್‍ಪ್’ ಹೆಸರಿನ ಈ ರೇಜರ್ ಸೂಸುವ ಲೇಸರ್ ಕಿರಣಗಳು ಬುಡದವರೆಗೂ ಇಳಿದು ಕೂದಲನ್ನು ಕೆಡವುತ್ತದೆ. ಹೀಗಾಗಿ ಶೇವ್ ಮಾಡಿದರೆ ಗಾಯ, ರಕ್ತ, ಗೀಟು, ಕೆರೆತ ಏನೂ ಆಗದು. ನೋಡಲು ಥೇಟಾನು ಥೇಟು ಮಾಮೂಲಿ ರೇಜರ್‌ನಂತಿದೆ. ಸೋಪ್, ಶಾಂಪು, ಕ್ರೀಮ್‌ಗಳಿಲ್ಲದೆಯೂ ಬಳಸಬಹುದು. ಸದ್ಯ ಸ್ವೀಡನ್‌ನಲ್ಲಿ ಚಾಲೂ ಆಗಿದೆ. ಭಾರತಕ್ಕೆ ಬಂದಲ್ಲಿ ಏನಾಗಬಹುದು?
ಇಲ್ಲಿನ ಬ್ಲೇಡ್ ಕಂಪೆನಿಗಳು, ಶೇವಿಂಗ್ ಕ್ರೀಂ, ಸೋಪು, ಶೇವಿಂಗ್ ಶಾಂಪುಗಳನ್ನು ಉತ್ಪಾದಿಸುವ ಕಂಪೆನಿಗಳಿಗೆ ಬೀಗ ಬೀಳಬಹುದು. ಅಷ್ಟೇ ಅಲ್ಲದೆ ಶೇವಿಂಗ್ ಮಾಡಿಕೊಳ್ಳಲು ಅಂಜುವ ಎಳೆ ಗಂಡುಗಳು ಕೂಡ ಸುಲಭವಾಗಿ ಮನೆಯಲ್ಲಿಯೇ ಮೋಚಿಕೊಳ್ಳುವರು. ಹೀಗಾಗಿ ಶೇವಿಂಗ್ ಸಲೂನ್‌ನವರ ವ್ಯಾಪಾರಕ್ಕೂ ಕುತ್ತು ಬೀಳುವ ಸಂಭವಗಳಿವೆ. ಬಹುಕೋಟಿ ಉದ್ಯಮವಾಗಿರುವ ಸೋಪು, ಶೇವಿಂಗ್ ಕ್ರೀಮ್ ತಯಾರಿಕಾ ಸಂಸ್ಥೆಗಳು ‘ಸ್ಕಾರ್‍ಪ್ ಬಳಸಿದರೆ ಚರ್ಮದ ಕ್ಯಾನ್ಸರ್, ಚರ್ಮರೋಗ ಬಂದೀತು’ ಎಂಬ ಪುಕಾರು ಹಬ್ಬಿಸಿದರೂ ಅಚ್ಚರಿಯಿಲ್ಲ.
ತಲೆದೂಗಬೇಕು…ಈತನ ‘ತಾ’ಕತ್ತಿಗೆ!
ಕ್ಲೌಡಿಯಾ ವಯಾರಿ ಡಿ ಒಲಿವೆರಾನ ಮಾತುಗಳನ್ನು ಕೇಳುತ್ತಿದ್ದರೆ ತಲೆದೂಗಬೇಕೆನಿಸುತ್ತದೆ. ಈತ ವಶೀಕರಣ ಮಾಡುವವರಂತೆ ಮಾತನಾಡಬಲ್ಲ. ವ್ಯಕ್ತಿತ್ವ ವಿಕಸನದ ತರಗತಿಗಳನ್ನು ನಡೆಸಿ, ಹಲವರನ್ನು ಸನ್ನಡತೆಯತ್ತ ನಡೆಸಿದ್ದಾನೆ. ಉತ್ತಮ ವೈದ್ಯರಾಗಲು ಅನೇಕ ಕಾಲೇಜುಗಳಿವೆ. ಉತ್ಕೃಷ್ಟ ಲಾಯರ್ ಆಗಲು ಹಲವಾರು ಕಾನೂನು ವಿದ್ಯಾಲಯಗಳಿವೆ. ಅದೇ ರೀತಿ ಎಂಜಿನಿಯರ್, ಮತ್ತೊಂದು ಮಗದೊಂದು ಆಗಲು ಶಿಕ್ಷಣ ಸಂಸ್ಥೆಗಳು ಸಾಕಷ್ಟಿವೆ. ಆದರೆ ಉತ್ತಮ ಪ್ರಜೆಯಾಗಬೇಕು, ಸದಾಚಾರಿ ಆಗಬೇಕೆಂದರೆ ಕಾಲೇಜುಗಳು ಎಲ್ಲಿವೆ? ಮೌಲ್ವಿಕ ಶಿಕ್ಷಣ ಎಲ್ಲಿ ದೊರೆಯುತ್ತದೆ ಅಲ್ವಾ? ಆ ಕೊರತೆಯನ್ನು ನೀಗಿಸುವ ಕೆಲಸವನ್ನು ವಯಾರಿ ಡಿ ಒಲಿವೆರಾ ಮಾಡುತ್ತಿದ್ದಾನೆ.
ಇವನ ಮೌಲ್ಯಯುತ ಮಾತುಗಳಿಗೆ ತಲೆದೂಗದವರೇ ಇಲ್ಲ. ಆದರೆ ಈತ ಮಾತ್ರ ಇಂದಿಗೂ ತಲೆ ತಗ್ಗಿಸಿಲ್ಲ.ಕಾರಣ? ಈತ ಹುಟ್ಟು ಅಂಗವಿಕಲ. ಕತ್ತು ಬೆನ್ನಿನ ಕಡೆಗೆ ಬಾಗಿದೆ. ರಿಪೇರಿ ಅಸಾಧ್ಯವೆಂದರು ವೈದ್ಯರು. ಹೆತ್ತಮ್ಮನಿಗೂ ಇವನನ್ನು ಉಳಿಸಿಕೊಳ್ಳಲು ಇಷ್ಟವಿರಲಿಲ್ಲ. ಕುರೂಪಿ ಪುತ್ರ ಉಳಿದರೆ ಉಳಿಯಲಿ ಹೋದರೆ ಹೋಗಲಿ ಎಂಬ ಧೋರಣೆಯಲ್ಲಿಯೇ ಆರೈಕೆ ಮಾಡುತ್ತಿದ್ದಳು. ಒಂದರ್ಥದಲ್ಲಿ ಅಮ್ಮನೇ ಮಲತಾಯಿ. ಆದರೇನು ಈತನ ಇಚ್ಛಾಶಕ್ತಿ, ಬದುಕಬೇಕೆಂಬ ಛಲದ ಮುಂದೆ ಎಲ್ಲವೂ ನಗಣ್ಯವಾಯಿತು.
ಒಲಿವೆರಾ ಓದಿ ಶಿಕ್ಷಿತನಾಗಿ, ಪದವೀಧರನಾಗಿದ್ದಾನೆ. ಉತ್ತಮ ಭಾಷಣಕಾರ. ಹಲವರ ಬದುಕಿಗೆ ಈತನೇ ದಾರಿ ದೀಪ. ವಿಶ್ವಾದ್ಯಾಂತ ಹಲವರ ಅಭಿಮಾನಗಳಿಸಿದ್ದಾನೆ. ವ್ಯಕ್ತಿತ್ವ ವಿಕಾಸನದ ಕುರಿತು ಹಲವು ಗ್ರಂಥಗಳ ಕತೃಕೂಡ. ಕ್ಲೌಡಿಯಾ ವಯಾರಿ ಡಿ ಒಲಿವರಾ ಬ್ರೆಜಿಲ್‌ನಲ್ಲಿ ಚಿರಪರಿಚಿತ. ಅಂಗವೈಕಲ್ಯ ಶಾಪವಲ್ಲ-ವರ ಎಂಬುದಕ್ಕೆ ಈತ ಉತ್ತಮ ಉದಾಹರಣೆ.
ಬೆರಳು ಬಾಯೊಳಗೆ – ಟೆನ್ಶನ್ ಹೊರಗೆ!
೫ವರ್ಷದ ನಂತರ ಮಕ್ಕಳು ಬೆರಳು ಚೀಪೋಲ್ಲ ಎನ್ನುವುದು ನಂಬಿಕೆ. ಆದರೆ ಬೆಳೆದ ನಂತರವೂ ಹಲವರು ಬೆರಳ್ ಪೋಕರು. ಪ್ರತಿ ೧೦ ಪ್ರೌಢರಲ್ಲಿ ಒಬ್ಬ ಬೆರಳ್ ಚೀಪುಗನಂತೆ. ಇದು ವಿಶ್ವದ ಸಾಮಾನ್ಯ ರೇಟಿಂಗ್. ನಮ್ಮಲ್ಲಿ ಇನ್ನು ಅಧಿಕವಾಗಿದ್ದರೂ ಅಚ್ಚರಿಯಿಲ್ಲ. ಕೆಲವರು ಎಲ್ಲರ ಎದುರಿಗೆ ಚೀಪರು. ಒಂಟಿಯಾಗಿದ್ದಾಗ… ಯಾರೂ ನೋಡುತ್ತಿಲ್ಲ ಎನ್ನುವುದು ಖಾತ್ರಿಯಾದಾಗ ಖಂಡಿತ ಬಾಯಿಗೆ ಬೆರಳು ಇಟ್ಟು ಬೆರಳಿನ ಸವಿ ಸವೆಯುತ್ತಾರೆ! ಇನ್ನು ಕೆಲವರು ತಿಂಡಿ ಎದುರಿಗಿಸಿಕೊಂಡು, ಅದನ್ನು ಸವಿಯುತ್ತಿರುವ ನಾಟಕವಾಡಿ, ಕಡೆಗೆ ಬೆರಳು ಬಾಯಿಗೆ ಇಡುತ್ತಾರೆ!
ಇನ್ನು ಕೆಲವರು ಉಗುರು ಕಡಿಯುವವರಂತೆ ಫೋಸ್ ಕೊಟ್ಟು ತಮ್ಮಿಷ್ಟದ ತೋರ್ ಅಥವಾ ಹೆಬ್ಬೆಟ್ಟನ್ನು ಸವಿಯುತ್ತಾರೆ. ಇಸ್ಸೀ ಅನ್ನಬೇಡಿ. ಹಾಗೆ ಚೀಪುವುದು ತಪ್ಪಿಲ್ಲವಂತೆ. ತಾಯಿಯ ಗರ್ಭದಲ್ಲೇ ಈ ಅಭ್ಯಾಸವಾಗಿರಲಿದೆ. ಆತಂಕ, ಭಯ, ವಿಹ್ವಲಗಳು ತಗ್ಗುತ್ತವಂತೆ. ಕೆಲವರಿಗೆ ಬೆರಳು ಚೀಪುವುದರಿಂದ ಯಥೇಚ್ಛ ಹಾಲು, ಹಣ್ಣಿನ ರಸ ಸವಿದ ಅನುಭವವಾಗಲಿದೆಯಂತೆ. ಇದೀಗ ಅಮೆರಿಕದ ವಿಜ್ಞಾನಿಗಳು ಕೂಡ ಬೆರಳು ಚೀಪಿ ತಪ್ಪಲ್ಲ. ಆದರೆ ನಿಮ್ಮದೇ ಆಗಿರಲಿ ಎನ್ನುತ್ತಾರೆ. ಕುಚೋದ್ಯ: ಬೆರಳು ಚೀಪುವುದರಿಂದ ಕನಿಷ್ಠ ಆ ಬೆರಳಾದರೂ ಶುಭ್ರವಾಗಿರುತ್ತದೆ! ಅಷ್ಟಕ್ಕೂ ಬೆರಳು ತೊಳೆಯಲು ಅತಿ ಸನಿಹದಲ್ಲಿರುವ ‘ಕಲ್ಯಾಣಿ’ ಎಂದರೆ ಬಾಯೇ ಅಲ್ಲವೇ?!
‘ಆಧಾರ’ವಿದೆ!
ಅವನು ಆಧಾರವಿದ್ದ ಶ್ರೀಮಂತ ಆದರೆ ಭಿಕ್ಷಕನಂತೆ ಅಲೆಯುತ್ತಿದ್ದ. ಇವನ ಅಸಲಿಯತ್ತು ಬಹಿರಂಗವಾಗಿದ್ದು ಆಧಾರ್ ಕಾರ್ಡ್‌ನಿಂದ. ಏನದು ಕಥೆ ಅದರ ಹಿಂದಿನ ವ್ಯಥೆ ಇಲ್ಲಿದೆ ವಿವರ… ಮುತ್ತಯ್ಯ ನಡಾರ್ ಓರ್ವ ಶ್ರೀಮಂತ ಉದ್ಯಮಿ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ನೆಲೆಸಿದ್ದ. ಇವರ ಕುಟುಂಬ ಇದೇ ಜೂನ್ ತಿಂಗಳಲ್ಲಿ ಉತ್ತರ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಮುತ್ತಯ್ಯ ಕಣ್ಮರೆಯಾದರು. ಅಂದಿನಿಂದಲೂ ಇವರನ್ನು ಕುಟುಂಬ ತಲಾಶ್ ಮಾಡುತ್ತಲೇ ಇತ್ತು. ಪತ್ತೆಯಾಗಿರಲಿಲ್ಲ. ಕುಟುಂಬಸ್ತರು ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ನಾಪತ್ತೆಯಾಗಿದ್ದ ವೇಳೆಯಲ್ಲಿ ಯಾರೋ ಮುತ್ತಯ್ಯಗೆ ಅಮಲಿನ ಇಂಜಕ್ಶನ್ ನೀಡಿರಬಹುದು. ಹೀಗಾಗಿ ಹಿಂದಿನ ನೆನಪು ಮೂಡಿರಲಿಲ್ಲವೆಂದು ಹೇಳಲಾಗುತ್ತಿದೆ.
ಅಲೆಯುತ್ತಾ ಮುತ್ತಯ್ಯ ಕಡೆಗೆ ರಾಯ್‌ಬರೇಲಿಗೆ ಬಂದರು. ಅಲ್ಲಿ ಪ್ರಬೋದ್ ಪರಮಹಂಸ ಕಾಲೇಜಿನ ಸ್ವಾಮಿ ಭಾಸ್ಕರ್ ಎಂಬುವರ ಕಣ್ಣಿಗೆ ಬಿದ್ದರು. ಹಸಿದಿದ್ದ ನಾಡಾರ್‌ಗೆ ಊಟ ಉಪಚಾರ ಮಾಡಿಸಿದರು. ಹೇರ್ ಕಟಿಂಗ್ ಮಾಡಿಸಿ, ಶುಭ್ರಗೊಳಿಸಿದರು. ಸ್ನಾನಕ್ಕೆ ತೆರಳಿದಾಗ ಇವರ ನೈಜ ಮುಖದ ಅರಿವಾಯಿತು. ಇವರ ಕಿಸೆಯಲ್ಲಿ ರೂ. ೧,೬೩,೯೩,೦೦೦ ಠೇವಣಿ ಇರುವುದು ಪತ್ತೆಯಾಯಿತು. ಜತೆಗೆ ಆಧಾರ್ ಕಾರ್ಡಿತ್ತು. ಕಾರ್ಡಿನಲ್ಲಿದ್ದ ದೂರವಾಣಿ ನಂಬರ್‌ಗೆ ಫೋನ್ ಮಾಡಿ, ಕುಟುಂಬಸ್ಥರನ್ನು ರಾಯಬರೇಲಿಗೆ ಕರೆಸಿಕೊಂಡರು. ಮುತ್ತಯ್ಯ ಈಗ ತನ್ನ ಕುಟುಂಬದೊಂದಿಗೆ ತಿರುನಲ್ವೇಲಿಯಲ್ಲಿ ನೆಲೆಸಿದ್ದಾರೆ. ಭಿಕ್ಷಕನಲ್ಲ – ಶ್ರೀಮಂತ ಎಂಬ ಸತ್ಯ ಆಧಾರ್‌ನಿಂದ ಬಹಿರಂಗವಾಗಿದೆ.
ನಿಂತ ಕೂದಲು
ರಂಗಾಯಣ ರಘು ಅವರ ‘ಪೌಡ್ರು ಹಾಕೊಳ್ಳಿ ತಲೆ ಬಾಚ್ಕೊಳ್ಳಿ’ ಡೈಲಾಗ್ ಕನ್ನಡದಲ್ಲಿ ಬೇಜಾನ್ ಪಾಪ್ಯುಲರ್. ಆದರೆ ಈ ಮಾತುಗಳು ಶಿಲಾಹ್ ಕಾಲ್ವರ್‍ಟಿನ್‌ಳ ಮುಂದೆ ನಡೆಯದು. ಎಷ್ಟೇ ತಿಕ್ಕಿ-ತೀಡಿದರೂ ಅವಳ ಕೂದಲು ಶಾಶ್ವತವಾಗಿ ನಿಮಿರಿರುತ್ತದೆ. ಎಣ್ಣೆ ಹಚ್ಚಿ, ನೀರು ಬಳಿದು ತಲೆ ಬಾಚಬಹುದಲ್ಲಾ? ಹೌದು. ಕೆಲವು ಕ್ಷಣ ಸರಿಯಿರಲಿದೆ. ನಂತರ ನಾಯಿ ಬಾಲ ಡೊಂಕು ಎನ್ನುವಂತೆ ಇವಳ ಕೂದಲು ನೆಟ್ಟಗಾಗುತ್ತದೆ! ಒಂದು ರೀತಿಯಲ್ಲಿ ಇವಳು ಬೆದರಿದ ಕೂದಲ ವಿಜ್ಞಾನಿ ಐನ್‌ಸ್ಟೈನ್‌ಳನ್ನು ಹೋಲುತ್ತಾಳೆ!
ಕಾಷ್ಟದಂತ ಕೂದಲಿನ ೭ರ ಕೂಸು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿದ್ದಾಳೆ. ಅಲ್ಲಾ ಪುಟ್ಟಿ ಹೀಗೆ ನಿಮಿರಿದ ಕಾಷ್ಟದ ಕೂದಲು ನಿನಗೆ ಕಷ್ಟವಾಗಿಲ್ವಾ? ‘ಖಂಡಿತ ಇಲ್ಲ…ಬದಲಿಗೆ ಪ್ರತಿಯೊಬ್ಬರಿಗೂ ನನ್ನ ಹೆಸರು ಗೊತ್ತಾಗಿದೆ. ಶಾಲೆಯಲ್ಲಿ ನಮ್ಮ ರಸ್ತೆಯಲ್ಲಿ ನಾನು ಫೇಮಸ್’ ಎನ್ನುತ್ತಾಳೆ ಈ ಪೋರಿ. ಮಕ್ಕಳು ರೇಗಿಸಿದಾಗ, ತಮಾಷೆ ಮಾಡಿದಾಗ ಸಹೋದರ ಸಹಾಯಕ್ಕೆ ಬರುತ್ತಾನೆ ಎನ್ನುವಳು. ವೈದ್ಯರ ಸಲಹೆ ಏನು? ಹೌದು… ಹಲವು ವೈದ್ಯರ/ತಜ್ಞ ವೈದ್ಯರ ಸಹೆ ಪಡೆಯಲಾಗಿದೆ. ಅವರ ಅಭಿಪ್ರಾಯದಲ್ಲಿ ಇದೊಂದು ವಿಲಕ್ಷಣವಂತೆ. ಪಿಎಡಿ೧೩, ಟಿಜಿಎಂ೩, ಟಿಸಿಹೆಚ್‌ಹೆಚ್‌ಗಳೆಂಬ ಜೀನ್ಸ್‌ಗಳಲ್ಲಿನ ರೂಪಾಂತರವೇ ಈ ಅವಾಂತರಕ್ಕೆ ಕಾರಣ ಎನ್ನುತ್ತಾರೆ. ಗುಣಪಡಿಸಲಾಗದಂತೆ. ಜೀವನದ ಉದ್ದಕ್ಕೂ ಇರಲಿದೆಯಂತೆ. ಕೂದಲು ಹೇಗಾದರೂ ಇರ್‍ಲಿ… ಮಗು ಆರೋಗ್ಯವಾಗಿದೆ. ಕಲಿಕೆಯಲ್ಲಿ ಚುರುಕು ಎನ್ನುತ್ತಾಳೆ ತಾಯಿ ಶಿಲಾಹಿನ್.
ನಾಯಿ ಮೂರ್ಚೆ ಹೋದರೇ…?
ವಾಸನೆ ರಹಿತ ಕಾಲಿದ್ದರೆ ‘ಹನ್-ಚಾನ್’ ಬಾಲ ಆಡಿಸಿ ಸ್ವಾಗತಿಸುತ್ತದೆ. ಅಲ್ಪ ಪ್ರಮಾಣದ ವಾಸನೆ ಇದ್ದರೆ ಬೊಗಳೀತು. ದುರ್ಗಂಧ ಬೀರುವ ಕಾಲಿದ್ದರೆ ಮೂರ್ಚೆ ಬೀಳಲಿದೆ. ಅಂತಹ ವಿಶಿಷ್ಟ ಶ್ವಾನವಿದು. ನಿಜವಾ? ಹೌದು. ಆದರೆ ಇದು ಜೀವಂತ ನಾಯಿಯಲ್ಲ. ಬದಲಿಗೆ ಕಾಲ್ಗುಣ ಪತ್ತೆ ಹಚ್ಚಲೆಂದೇ ಜಪಾನೀಯರು ಸೃಷ್ಟಿಸಿರುವ ಕೃತಕ ಕುತ್ತೆಯಿದು. ಈ ಸಂಶೋಧನೆ ಏಕೆ? ಪಾದಗಳಿಂದ ಅತಿ ಬೆವರು ಬಂದಲ್ಲಿ ಅಂತಹವರು ಶೂ ಧರಿಸಿದ್ದರೆ ಗಬ್ಬುನಾಥ ಬರಲಿದೆ. ಸೂಕ್ಷ್ಮ ಮೂಗಿನ ಹೈಟೆಕ್ ಜನರಿಗೆ ಇದು ವಾಕರಿಕೆ ತರಿಸಲಿದೆ. ಹೀಗಾಗಿ ಶೂ ಧರಿಸಿ ಬರುವವರೆಂದರೆ ಇವರಿಗೆ ಅಲರ್ಜಿ. ‘ಪಾದಬೆವರಿಗಳು’ ಮೀಟಿಂಗ್‌ಗೆ ಬಂದರೆ ಕುಳಿತು ಭೋಜನ/ಚರ್ಚೆ ಮಾಡುವುದು ಹೇಗೆ? ಈ ‘ಸೂಕ್ಷ್ಮಮೂಗಿಗಳು’ ಇಂತಹ ಶ್ವಾನಗಳ ಸಂಶೋಧನೆಗೆ ಸುಪಾರಿ ಕೊಟ್ಟಿದ್ದಾರೆ.
ನಾಯಿ ‘ಬಾಲಆಡಿಸಿ’ ಸ್ವಾಗತ ಹೇಳುವ ಮಂದಿಗೆ ಮಣೆಹಾಕುತ್ತಾರೆ. ಬೊಗಳಿಸಿ ಕೊಂಡವರಿಗೆ ಶೂ ರಹಿತವಾಗಿ ಬರಲು ಸೂಚಿಸುತ್ತಾರೆ. ನಾಯಿ ಮೂರ್ಚೆ ಹೋದವರಿಗೆ ಆಚೆಯೇ ನಿಲ್ಲುವಂತೆ ಅಪ್ಪಣೆ ಮಾಡುತ್ತಾರೆ! ಯಾರದ್ದು ಈ ಆವಿಷ್ಕಾರ?ಜಪಾನ್‌ನ ‘ರಾಷ್ಟ್ರೀಯ ತಾಂತ್ರಿಕ ಸಂಸ್ಥೆ’ ಈ ರೋಬೋ ನಾಯಿಯ ಸೃಷ್ಟಿಕರ್ತರಾಗಿದ್ದಾರೆ. ಇವುಗಳಲ್ಲಿ ವಾಸನೆ ಗ್ರಹಿಸಿ-ಸ್ಪಂಧಿಸುವ ‘ಸೆನ್ಸಾರ್’ಗಳನ್ನು ಅಳವಡಿಸಲಾಗಿದ್ದು ಅದೇ ಇವುಗಳ ಚೇತನ.