ಈ ಜಗತ್ತಿನ ಅದೆಷ್ಟೋ ಜನರ ಮುಂಜಾವಗಳನ್ನು ಸಮದ್ಧಗೊಳಿಸುವ ಮಾಯೆ ಕಾಫಿ. ಈವತ್ತಿಗೆ ಕಾಫಿ ಬೆಳೆಯ ಕುರುಹೂ ಕೂಡಾ ಇಲ್ಲದಿರುವಂಥಾ ದೇಶಗಳಲ್ಲಿಯೂ ಕಾಫಿ ಪ್ರಿಯರಿದ್ದಾರೆ. ನೀವೊಮ್ಮೆ ಸುಮ್ಮನೆ ಗಮನಿಸಿ ನೋಡಿದರೆ, ನಮ್ಮಲ್ಲಿ ಅನೇಕಾನೇಕ ಕಾಫಿಯಂಥಾ ಪೇಯಗಳಿದ್ದಾವೆ. ಆದರೆ, ಪ್ರಧಾನವಾಗಿ ನಮ್ಮೆಲ್ಲರನ್ನು ಆವರಿಸಿಕೊಂಡಿರೋದು ಕಾಫಿ ಮತ್ತು ಟೀ ಮಾತ್ರ. ನಿಜ, ಟೀಗೆ ಕೂಡಾ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಇದೆ. ಅದೂ ಕೂಡಾ ದೇಶ ವಿದೇಶಗಳಲ್ಲಿ ಹಬ್ಬಿಕೊಂಡಿದೆ. ಆದರೆ, ಕಾಫಿಯೆಂಬೋ ಮಾಯೆಯ ಮುಂದೆ ಟೀಯ ಪ್ರಭಾವ ಕೊಂಚ ಸಪ್ಪೆ ಅನ್ನಿಸುತ್ತದೆ. ಕಾಫಿ ಅನ್ನೋದರ ಗುರುತೇ ಇಲ್ಲದವರು ಒಂದು ಸಲ ಕುಡಿದರೂ ಕೂಡಾ ಅದು ಹಾಗೆಯೇ ಆವರಿಸಿಕೊಳ್ಳುತ್ತೆ. ಕಾಫಿಗಿರುವ ಇಂಥಾ ಗುಣವೇ ಅದರ ಜಾಗತಿಕ ಮಾರುಕಟ್ಟೆಯನ್ನು ಹಿರಿದಾಗಿಸಿರೋದು ಸತ್ಯ.
ಈವತ್ತಿಗೆ ಈ ಜಗತ್ತಿನ ಕೆಲವೇ ಕೆಲ ರಾಷ್ಟ್ರಗಳಲ್ಲಿ ಮಾತ್ರವೇ ಕಾಫಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತೆ. ವಿಯೆಟ್ನಾಂ, ಬ್ರೆಜಿಲ್ ಮುಂತಾದ ದೇಶಗಳಲ್ಲಿಯೂ ಕೂಡಾ ಬೇರೆ ಬೇರೆ ಮಾದರಿಗಳಲ್ಲಿ ಅತೀ ಹೆಚ್ಚು ಬೆಳೆ ತೆಗೆಯುವ ಪದ್ಧತಿ ಚಾಲ್ತಿಯಲ್ಲಿದೆ. ಕೀನ್ಯಾದಂಥ ದೇಶಗಳ ಕೆಲ ಭಾಗಗಳಲ್ಲಿಯೂ ಕೂಡಾ ಕಾಫಿ ಬೆಳೆಯಿದೆ. ಆದರೆ ಅವ್ಯಾವುವೂ ಪ್ರಾಕೃತಿಕ ಹೊಡೆತಗಳಿಂದ ಪಾರಾಗಲು ಸಾಧ್ಯವಾಗಿಲ್ಲ. ಕಳೆದ ಎರಡು ವರ್ಷಗಳಿಂದ ವಿಯೆಟ್ನಾಂ ಮತ್ತು ಬ್ರೆಜಿಲ್ಲುಗಳಲ್ಲಿ ಕಾಫಿ ಇಳುವರಿ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಈ ಕಾರಣದಿಂದಲೇ ಭಾರತದ ಕಾಫಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಹೆಚ್ಚಿಕೊಂಡು ಇಲ್ಲಿ ಕಾಫಿಗೆ ಚಿನ್ನದ ಬೆಲೆ ಬಂದಿದೆ. ಹಾಗಂತ ಅದೇನೂ ಪರ್ಮನೆಂಟಾದುದಲ್ಲ. ಈವತ್ತು ವಿಯೆಟ್ನಾಂ ಮತ್ತು ಬ್ರೆಜಿಲ್ಲಿನ ಪರಿಸ್ಥಿತಿ ನಾಳೆ ನಮಗೂ ದಾಟಿಕೊಳ್ಳಬಹುದು. ಅದರಾಚೆಗೆ ಈ ಕಾಫಿ ಎಂಬ ವಿದೇಶಿ ಬೆಳೆ ಮೊದಲು ಭಾರತಕ್ಕೆ ಬಂದಿದ್ದು, ಚಿಕ್ಕಮಗಳೂರಿನಲ್ಲಿ ಮೊಳಕೆಯೊಡೆದು ಹಬ್ಬಿಕೊಂಡಿದ್ದೆಲ್ಲ ನಿಜಕ್ಕೂ ರೋಚಕ ಹಿಸ್ಟರಿ!
ಕಾಫಿ ತವರು ಚಿಕ್ಕಮಗಳೂರು
ಇಡೀ ಭಾರತದಲ್ಲಿ ಭಾರತದಲ್ಲಿ ಕಾಪಿಯ ಹುಟ್ಟು ಮೊದಲು ಆದದ್ದೇ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ. ಸರಿಸುಮಾರು ಮುನ್ನೂರೈವತ್ತು ವರ್ಷಗಳ ಹಿಂದೆ ಬಾಬಾ ಬುಡನ್ ಎಂಬ ಸಂತ ಮೆಕ್ಕಾ ಯಾತ್ರೆಗೆ ಹೋಗಿದ್ದಾಗ ಅಲ್ಲಿಂದ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನ ಬಳಿಯಿರುವ ಚಂದ್ರಗಿರಿ ಬೆಟ್ಟದ ಮೇಲೆ ತಾನಿದ್ದ ಗುಹೆಯ ಮುಂಭಾಗದ ಭೂಮಿ ಹದಗೊಳಿಸಿ ಬಿತ್ತಿದ್ದರಂತೆ. ಆ ಕಾಲದಲ್ಲಿ ಅರಬ್ ರಾಷ್ಟ್ರದಲ್ಲಿ ಕಾಫಿಯನ್ನು ಒಂದಷ್ಟು ಬೆಳೆಯಲಾಗುತ್ತಿತ್ತು. ಅಲ್ಲಿ ಬೆಳೆಯುತ್ತಿದ್ದ ಕಾಫಿಯ ಹಸಿ ಬೀಜಗಳನ್ನು ಹೊರ ಪ್ರದೇಶಗಳಿಗೆ ಯಾವ ಕಾರಣಕ್ಕೂ ಕೊಂಡೊಯ್ಯುವಂತಿರಲಿಲ್ಲ. ಇಂಥಾ ಬಿಗುವಿನ ಕಾನೂನು ಕಟ್ಟಳೆ ಇದ್ದರೂ ಕೂಡಾ ಬಾಬಾ ನಾಜೂಕಿನಿಂದ, ಯಾರಿಗೂ ತಿಳಿಯದಂತೆ ಮೆಕ್ಕಾದಿಂದ ಬರುವಾಗ ಏಳು ಹಸಿ ಕಾಫಿ ಬೀಜಗಳನ್ನು ಭಾರತಕ್ಕೆ ತಂದಿದ್ದರಂತೆ.
ಈ ರೀತಿಯಲ್ಲಿ ಮೊಟ್ಟ ಮೊದಲ ಬಾರಿ ಭಾರತಕ್ಕೆ ಅರಬ್ ದೇಶದಿಂದ ಕಾಫಿ ಆಗಮಿಸಿತ್ತು. ಹೀಗೆ ಇಡೀ ಇಂಡಿಯಾದಲ್ಲಿ ಮೊದಲ ಸಲ ಕಾಫಿ ಬೀಜ ಭಾರತದ ಮಣ್ಣಿಗೆ ಸೇರಿ ಚಿಗುರೊಡೆದದ್ದು ೧೬೭೦ ಸುಮಾರಿನಲ್ಲಿ. ಹಾಗೆ ಮೊದಲ ಸಲ ಕಾಫಿ ಚಿಗುರೊಡೆದದ್ದು ಚಂದ್ರದ್ರೋಣ ಪರ್ವತದ ಇಕ್ಕೆಲದಲ್ಲಿ. ಹಾಗೆ ಬಾಬಾ ಬಿತ್ತಿ ಬೆಳೆದ ಕಾಫಿ ಮತ್ತು ಅದರಿಂದ ತಯಾರಿಸಿದ ಕಷಾಯ ಶಕ್ತಿ ಮತ್ತು ಉಲ್ಲಾಸ ಉಂಟು ಮಾಡುತ್ತದೆ ಎಂಬ ಕಾರಣದಿಂದ ನೋಡ ನೋಡುತ್ತಲೇ ಜನಪ್ರಿಯವಾಗಿತ್ತು. ಆ ನಂತರ ಸದೀರ್ಘ ಕಾಲಾವಧಿಯ ನಂತರದಲ್ಲಿ ಅದು ಮೆಲ್ಲಗೆ ಚಿಕ್ಕಮಗಳೂರು ಜಿಲ್ಲೆಯ ನಾನಾ ಕಡೆಗಳಲ್ಲಿ ಹಬ್ಬಿಕೊಂಡಿದ್ದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಆ ನಂತರ ಅದು ಕೊಡಗಿನಂಥಾ ಆಸುಪಾಸಿನ ಜಿಲ್ಲೆಗಳಿಗೂ ಹಬ್ಬಿಕೊಂಡಿದ್ದರ ಹಿಂದೆಯೂ ನಾನಾ ಕಥೆಗಳಿದ್ದಾವೆ. ಬಳಿಕ ಕಾಫಿ ತೋಟಗಳು ಆ ಕಾಲದ ಕೆಲ ಜಮೀನ್ದಾರರ ಕಡೆಯಿಂದ ಕಾಡುಗಳ ಇಕ್ಕೆಲಗಳಲ್ಲಿ ಸಣ್ಣಗೆ ಕಾಫಿ ತೋಟಗಳು ಸೃಷ್ಟಿಯಾಗಲಾರಂಭಿಸಿದವು.
ರಾಜರೂ ಫಿಧಾ ಆಗಿದ್ದರು
ನಂತರದಲ್ಲಿ ಆ ಕಾಲದ ರಾಜರುಗಳು ಕೂಡಾ ಈ ಕಾಫಿಯ ಕರಾಮತ್ತಿಗೆ ಮನ ಸೋತಿದ್ದರು. ಆ ಕಾಲದಲ್ಲಿಯೇ ಕಾಫಿ ಕಶಾಯದ ಚಮತ್ಕಾರಿ ಗುಣ ಗಳ ಬಗ್ಗೆ ಪಂಡಿತರುಗಳು ಒಂದಷ್ಟು ವಿವರಗಳನ್ನು ನೀಡಿದ್ದರು. ಈ ಕಾರಣದಿಂದಲೇ ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಫಿಯನ್ನು ವಿಸ್ತಾರವಾಗಿ ಬೆಳೆಯುವ ಮೂಲಕ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಅವರು ಕಾಫಿ ಬಗ್ಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ, ಕಾಫಿ ಬೆಳೆಯಲು ದೊಡ್ಡ ಮಟ್ಟದಲ್ಲಿಯೇ ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಈ ಬೆಳೆಯನ್ನು ಬೆಳೆಯುವ ಕುರಿತಾದ ಕೆಲವೊಂದಷ್ಟು ರೀತಿ ರಿವಾಜುಗಳನ್ನೂ ಕೂಡಾ ಕೃಷಿ ಪಂಡಿತರೊಂದಿಗೆ ಚರ್ಚಿಸಿ ಬಿಡುಗಡೆಗೊಳಿಸಿದ್ದರು. ಇನ್ನುಳಿದಂತೆ ಟಿಪ್ಪೂ ಸುಲ್ತಾನ್ ಕೂಡ ಕಾಫಿಗೆ ಫಿದಾ ಆಗಿದ್ದ. ಈ ಬೆಳೆ ಬೆಳೆಯುವುದನ್ನು ಪ್ರೋತ್ಸಾಹಿಸುವ ಸಲುವಾಗಿ ರೈತರಿಗೆ ತೆರಿಗೆಯಿಲ್ಲದೆ ಭೂಮಿ ನೀಡಿದ್ದರೆಂಬ ಉಲ್ಲೇಖ ಇತಿಹಾಸದಲ್ಲಿದೆ.
ಹೀಗೆ ಅಪರೂಪದ ಬೆಳೆಯೊಂದು ಯಾವುದೇ ಭಾಗದಲ್ಲಿ ಬೆಳೆದರೂ ಕೂಡಾ ಅದು ಬೇಗನೆ ಎಲ್ಲರನ್ನೂ ಸೆಳೆಯುತ್ತದೆ. ಅದೇ ರೀತಿಯಲ್ಲಿ ಕಾಫಿ ಬೆಳೆಯುವ ಪದ್ಧತಿ ಕೇರಳ ಮತ್ತು ತಮಿಳುನಾಡಿನಲ್ಲಿಯೂ ಪ್ರಾರಂಭವಾಯಿತು. ಬ್ರಿಟಿಷರ ಆಡಳಿತದ ಕಾಲದಲ್ಲಿ ಕಾಫಿ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಲು ಹೆಚ್ಚಿನ ಪ್ರೋತ್ಸಾಹ ಸಿಕ್ಕಿತ್ತು. ಹೊರದೇಶಗಳಿಗೆ ಕಾಫಿಯನ್ನು ರಫ್ತು ಮಾಡುವ ಪ್ರಮುಖ ದೇಶವಾಗಿ ಭಾರತ ರೂಪುಗೊಂಡಿತು. ಇಂದು ಭಾರತದಿಂದ ಹೊರದೇಶಗಳಿಗೆ ರಫ್ತಾಗುವ ಕಾಫಿಯ ಶೇಖಡಾ ಎಪ್ಪತ್ತರಷ್ಟು ಪಾಲು ನಮ್ಮ ಕರ್ನಾಟಕದ್ದು. ಕೇರಳದ ಪಾಲು ಇಪ್ಪತ್ತರಷ್ಟೂ ಇಲ್ಲ. ಈ ಕಾರಣದಿಂದಲೇ ಕರುನಾಡಿಗೆ ಕಾಫಿಯ ಬೀಡೆಂಬ ಹೆಗ್ಗಳಿಕೆಯೂ ಇದೆ. ವರ್ಷದಿಂದ ವರ್ಷಕ್ಕೆ ಈ ಬೆಳೆ ಕರ್ನಾಟಕದಲ್ಲಿ ಪಾರಂಪರಿಕವಲ್ಲದ ಪ್ರದೇಶಗಳಿಗೂ ಕೂಡಾ ದಾಟಿಕೊಳ್ಳುತ್ತಿದೆ.
ಅದ್ಭುತ ಬೆಳೆ
ಈ ಕಾಫಿ ಬೆಳೆಯ ತಳಿಗಳು ಮತ್ತು ಅವುಗಳ ಗುಣ ಲಕ್ಷಣಗಳು ಕೂಡಾ ರೋಚಕವಾಗಿವೆ. ಕಾಫಿ ಬೆಳೆಯಲ್ಲಿ ಮುಖ್ಯವಾಗಿ ಅರೇಬಿಕಾ, ರೋಬಸ್ಟಾ ಎಂಬ ಎರಡು ಸಾಮಾನ್ಯ ತಳಿಗಳಿದ್ದಾವೆ. ಈ ಎರಡು ತಳಿಗಳ ಉಪ ತಳಿಗಳು ನೂರಾರು ಸಂಖ್ಯೆಯಲ್ಲಿ ಅಭಿವೃದ್ಧಿ ಹೊಂದುತ್ತಲೇ ಇದ್ದಾವೆ. ಈಗಂತೂ ಹೆಚ್ಚು ಬೆಳೆ ಕೊಡುವ ಕುಬ್ಜ ತಳಿಗಳೂ ಆವಿಷ್ಕಾರಗೊಳ್ಳುತ್ತಿದ್ದಾವೆ. ಚಿಕ್ಕಮಗಳೂರಿನ ವಿಚಾರಕ್ಕೆ ಬಂದರೆ, ಇಲ್ಲಿ ಹೆಚ್ಚಾಗಿ ಅರೇಬಿಕಾ ತಳಿಯನ್ನೇ ಬೆಳೆಸಲಾಗುತ್ತೆ. ಇಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದುಕೊಂಡಿರುವಂಥಾ ಕಾಫಿ ಸಂಶೋಧನಾ ಕೇದ್ರವೂ ಇದೆ. ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಇದೀಗ ಇಡೀ ವಿಶ್ವದಲ್ಲಿಯೇ ಹೆಸರುವಾಸಿಯಾಗಿದೆ. ಕಾಫಿ ಬೆಳೆಗೆ ತಗಲುವ ರೋಗಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಸಂಂಬಂಧವಾಗಿ ಇಲ್ಲಿ ಒಂದು ಸಂಶೋಧನಾಲಯ ತಾತ್ಕಾಲಿಕವಾಗಿ ಸ್ಥಾಪಿಸಲ್ಪಟ್ಟಿತು. ಆಗ ಬ್ರಿಟಿಷ್ ಸರ್ಕಾರದ ಆಡಳಿತ ಕೂಡಾ ಇ೮ದಕ್ಕೆ ಉತ್ತೇಜನ ಕೊಡುವ ಸಲುವಾಗಿಯೇ ಒಪ್ಪಿಗೆ ಕೊಟ್ಟಿತ್ತು. ಅದೀಗ ನಾನಾ ಕೊಂಬೆ ಕೋವೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.
ಸಾಮಾನ್ಯವಾಗಿ ಪ್ರತೀ ಬೆಳೆಗಳಿಗೂ ತಮ್ಮದೇ ಆದ ಗುಣ ಲಕ್ಷಣಗಳಿರುತ್ತವೆ. ಆದರೆ ಕಾಫಿ ಗಿಡಗಳು ಅವೆಲ್ಲಕಿಂತಲೂ ತುಸು ಭಿನ್ನ. ಕಾಫಿ ಗಿಡಗಳು ಕೊಂಚ ಅಂಕುಡೊಂಕಾಗಿ ಅನೇಕ ಗಂಟುಗಳಿಂದ ಕೂಡಿರುತ್ತವೆ. ವಯಸ್ಸಾದಂತೆಲ್ಲ ಅದರ ಕಾಂಡ, ಕೊಂಬೆಗಳಲ್ಲಿ ಗಣನೀಯವಾದ ರೂಪಾಂತರಗಳಾಗುತ್ತವೆ. ಹೀಗೆ ಚಿತ್ರವಿಚಿತ್ರ ಗಂಟುಗಳ ಮೂಲಕ ರಚನೆಯಾಗಿರುವ ಈ ಕಾಫಿ ಗಿಡಗಳನ್ನು ನೋಡೋದೇ ಒಂದು ಸೊಗಸು. ಹೊಳಪಾದ ಎಲೆಗಳು ಕೊಂಬೆಯ ತುಂಬಾ ಹಬ್ಬಿಕೊಂಡಿರುತ್ತವೆ. ಸಣ್ಣಗೆ ಮಳೆ ಬಿದ್ದಾಗ ಗಿಡದ ತುಂಬೆಲ್ಲಾ ಬೆಳ್ಳನೆಯ ಆಕರ್ಷಕ ಹೂಗಳು ಮಾಲೆ ಕಟ್ಟಿದಂತೆ ಚಿತ್ತಾರ ಮೂಡಿಸುತ್ತವೆ. ಈ ಹೂಗಳು ಒಂದು ಬಗೆಯ ತೀಕ್ಷ್ಣ ಘಮಲು ಹೊಂದಿರುತ್ತವೆ. ಅವುಗಳು ಇತರೆ ಎಲ್ಲ ಹೂಗಳಿಗಿಂತಲೂ ಬೇಗನೆ ಜೇನು ಹುಳುಗಳನ್ನು ಆಕರ್ಷಿಸುತ್ತವೆ. ಇದರ ಪರಿಮಳ ಅದೆಷ್ಟು ಗಾಢವಾಗಿರುತ್ತದೆಂದರೆ, ಕೆಲವರಿಗೆ ಈ ಹೂವಿನ ವಾಸನೆಯಿಂದ ತಲೆ ನೋವು ಬರುವುದೂ ಇದೆ. ಕಾಫಿ ಗಿಡಗಳು ಹೂ ಬಿಟ್ಟಾಗ ಕಾಫಿ ಎಸ್ಟೇಟ್ ಗಳಲ್ಲಿ ಅದನನು ಸಂಭ್ರಮಿಸುವ ಆಚರಣೆಯೂ ಚಾಲ್ತಿಯಲ್ಲಿದೆ. ಕಾಫಿ ಕಾಯಿಗಳಿಗೂ ನಾನಾ ಗುಣ ಲಕ್ಷಣಗಳಿದ್ದಾವೆ. ಕಾಯಿಗಳು ಗಾಢ ಹಸಿರಾಗಿ ಗೊಂಚಲು ಗೊಂಚಲಾಗಿರುತ್ತವೆ. ಹಣ್ಣಾದಾಗ ಕೆಂಪು ಬಣ್ಣದಲ್ಲಿ ಕಂಗೊಳಿಸುವ ಇವುಗಳು, ಒಣಗಿದಾಗ ಅಷ್ಟೇ ಗಾಢವಾದ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
ಕೃಷಿ ಅಂದರೆ ಧ್ಯಾನ
ಇಂಥಾ ಕಾಫಿ ಬೆಳೆ ಬೆಳೆಯಲು ಅನೇಕ ಕ್ರಮಗಳಿರುತ್ತವೆ. ನೆರಳನ್ನು ಸಂಭಾಳಿಸೋದೇ ಅದರ ಬಹು ದೊಡ್ಡ ಸವಾಲು. ನೆರಳು ಹೆಚ್ಚಾದರೂ ಕಡಿಮೆಯಾದರೂ ಇಳುವರಿಯಲ್ಲಿ ಏರಿಳಿತಗಳಾಗುತ್ತವೆ. ಕಾಫಿ ಬೆಳೆಗೆ ನೆರಳು ನೀಡಲು ಆಯ್ದ ಕೆಲ ಮರಗಳನ್ನು ಬೆಳೆಸುವ ಪ್ರತೀತಿ ನಡೆದುಕೊಂಡು ಬಂದಿದೆ. ಕಾಫಿ ಗಿಡಗಳನ್ನು ಬಲು ಎತ್ತರ ಹೋಗದಂತೆ ಆಗಾಗ ಟ್ರಿಮ್ ಮಾಡುತ್ತಿರಬೇಕು. ಇದಕ್ಕೆ ಸ್ಥಳೀಯವಾಗಿ ಕಸಿ ಮಾಡೋದು ಅಂತ ಕರೆಯಲಾಗುತ್ತೆ. ಕಾಲ ಕಾಲಕ್ಕೆ ಗೊಬ್ಬರ ವಶ್ಯಕ. ಸಮಯಕ್ಕೆ ಸರಿಯಾಗಿ ಮಳೆ ಬರದಿದ್ದರೆ ಸ್ಪ್ರಿಂಕ್ಲರ್ ಮೂಲಕ ನೀರು ಕೊಡಬೇಕಾಗುತ್ತದೆ. ಕಾಫಿ ಹಣ್ಣಾದಾಗ ಸರಿಯಾದ ಹಂತದಲ್ಲಿ ಕೊಯ್ಲು ಮಾಡಬೇಕಿದೆ. ನಂತರ ಅದನ್ನು ಒಣಗಿಸಿ ಸಂಸ್ಕರಿಸುವಲ್ಲಿಯ ವರೆಗೆ ಅನೇಕ ಹಂತಗಳಿದ್ದಾವೆ. ಕಾಫಿ ಎಂಬುದು ನಿಮ್ಮ ಬಟ್ಟಲು ತಲುಪಿಕೊಳ್ಳೋದರ ಹಿಂದೆ ದೊಡ್ಡ ಮಟ್ಟದ ಶ್ರಮ ಇದ್ದೇ ಇದೆ.
ಈಗಂತೂ ಈ ಕಾಫಿ ಬೆಳೆ ಬಹು ಕೋಟಿ ಉದ್ಯಮವಾಗಿ ಬೆಳೆದು ನಿಂತಿದೆ. ಹಾಗಂತ ಅದನ್ನು ನಿರ್ವಹಿಸುವುದು ಸುಲಭವಲ. ವರ್ಷವಿಡೀ ಧ್ಯಾನದಂತೆ ತೋಟಗಳನ್ನು ನಿರ್ವಹಿಸಬೇಕಾಗುತ್ತದೆ. ಈಗಂತೂ ಕೆಲಸದವರು ಸಿಗೋದೇ ಕಷ್ಟವಾಗಿ ಬಿಟ್ಟಿದೆ. ಒಂದು ವೇಳೆ ಸಿಕ್ಕರೂ ದುಬಾರಿ ಸಂಬಳ ತೆರಬೇಕಾಗುತ್ತೆ. ಇದೆಲ್ಲವನ್ನೂ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈ ಸೇರುತ್ತೆ ಅಂದುಕೊಳ್ಳುವಂತಿಲ್ಲ. ಅತಿಯಾದ ಮಳೆ, ಬರಗಾಲ ಸೇರಿದಂತೆ ಎಲ್ಲದರ ನೇರ ಪರಿಣಾಮವನ್ನು ಕಾಫಿ ಬೆಳೆಗಾರರು ಎದುರಿಸಬೇಕಾಗಿ ಬಂದಿದೆ. ಇನ್ನು ಅದೇನೇ ಸಂಶೋಧನೆಗಳು ನಡೆಯುತ್ತಿದ್ದರೂ ಕೂಡಾ ಕೆಲವೊಂದು ರೋಗ ಬಾಧೆಗಳುನ ಕಾಫಿಗೆ ಕಾಯಂ ಎಂಬಂತಾಗಿ ಹೋಗಿದೆ. ಎಷ್ಟೋ ವರ್ಷ ಬೆಳೆ ಅರ್ಧಕ್ಕರ್ಧ ಇಳಿದರೆ ಕಾಫಿ ಪ್ರಿಯರು ರೇಟು ಹೆಚ್ಚಾಯ್ತೆಂದು ಹುಯಿಲಿಡುತ್ತಾರೆ. ಬೆಳೆಗಾರರು ವರ್ಷವಿಡೀ ವನವಾಸ ಅನುಭವಿಸಬೇಕಾಗುತ್ತದೆ.
ಇಂಥಾ ಕಾಫಿ ಬೆಳೆ ಇಲ್ಲಿ ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಟ್ಟಿದೆ. ಮೊದಲೆಲ್ಲ ಕಪ್ಪು ಬೆಲ್ಲ ಕಾಫಿ ಪುಡಿ ಹಾಕಿ ಕುದಿಸಿದ ಕಾಫಿ ಕಷಾಯವನ್ನೇ ಇಲ್ಲಿನ ಜನರು ಕುಡಿಯುತ್ತಿದ್ದರು. ನಿಜವಾದ ಕಾಫಿ ಅಂದರೆ ಅದೇ. ಮನೆಯಲ್ಲಿ ದನ ಸಾಕುವವವರು ಆ ಕಷಾಯಕ್ಕೆ ಹಾಲು ಬೆರೆಸಿ ಕುಡಿಯುತ್ತಿದ್ದರು. ಆ ಬ್ಲಾಕ್ ಕಾಫಿಯನ್ನು ಹೊಟ್ಟು ಕಾಫಿ ಅನ್ನೋದೂ ಇದೆ. ಆ ಬಳಿಕ ಇಂಥಾ ಕಾಫಿಯಲ್ಲಿಯೂ ಕೆಲ ರೂಪಾಂತರಗಳು, ಆವಿಷ್ಕಾರಗಳಾಗಿವೆ. ಫಿಲ್ಟರ್ ಕಾಫಿ, ಸೇರಿದಂತೆ ಒಂದಷ್ಟು ಇನ್ಟಂಟ್ ಕಾಫಿ ವೆರೈಟಿಗಳೂ ಬಂದಿವೆ. ಆದರೆ ಈವತ್ತಿಗೂ ಕೂಡಾ ಒರಿಜಿನಲ್ ಫ್ಲೇವರ್ ಹೊಂದಿರುವ ಕಪ್ಪು ಕಾಫಿ ಬಡ ಬಗ್ಗರಿಗೆ ಮಾತ್ರವೇ ಸೀಮಿತವಾಗಿದೆ. ಇದೆಲ್ಲದರಾಚೆಗೇ ಕಾಫಿಯ ಆಕರ್ಷಣೆ ಯಹಾವತ್ತಿಗೂ ಮುಕ್ಕಾಗದಂತೆ ಮಿನುಗುತ್ತಿದೆ. ನೀವು ಕುಡಿಯುವ ಒಂದು ಕಪ್ ಕಾಫಿಯ ಹಿಂದೆ ರೋಮಾಂಚಕ ಇತಿಹಾಸವಿದೆ. ಕಾಫಿ ಎಂಬ ವಿದೇಶಿ ಬೆಳೆಯೊಂದು ಇಂದು ನಮ್ಮದೇ ಅಂತಾಗಿರೋದರ ಹಿಂದೆ ಶತಮಾನಗಳ ಪರಿಶ್ರಮವೂ ಇದ್ದೇ ಇದೆ!
ಭಾರತಕ್ಕೆ ನಂಬರ್ 2 ಸ್ಥಾನ
ಈವತ್ತಿಗೆ ಭಾರತವೆಂಬುದು ಜಗತ್ತಿನ ಬಹುಮುಖ್ಯವಾದ ಕಾಫಿ ಉತ್ಪಾದಕ ರಾಷ್ಟ್ರವಾಗಿ ಗುರ್ತಿಸಿಕೊಂಡಿದೆ. ಯಾವುದೇ ಒಂದು ಬೆಳೆ ವಾಣಿಜ್ಯಕವಾಗಿ ಮಿಂಚ ಬೇಕೆಂದರೆ ಅದರಲ್ಲೊಂದಿಷ್ಟು ಪ್ರಯೋಗಗಳು ನಡೆಯ ಬೇಕಾಗುತ್ತದೆ., ಉತ್ಪಾದನೆ ಹೆಚ್ಚು ಮಾಡೋದರತ್ತ ಮಾತ್ರವೇ ಗಮನ ಹರಿಸಿದರೆ ಸಾಲೋದಿಲ್ಲ. ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳುವ ತಂತ್ರ ಮತ್ತು ಗುಣಮಟ್ಟವನ್ನು ಕಾಯ್ದಕೊಳ್ಳುವತ್ತಲೂ ಚಿತ್ತ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನೋಡೋದಾದರೆ, ಭಾರತೀಯ ಕಾಫಿ ಜಗತ್ತಿನಲ್ಲಿ ಲಕಾಗಾಯ್ತಿನಿಂದಲೂ ನಾನಾ ಪ್ರಯತ್ನಗಳು ನಡೆಯುತ್ತಾ ಬಂದಿವೆ. ಈವತ್ತಿಗೆ ವಿಶ್ವದ ಒಂದಷ್ಟು ದೇಶಗಳಲ್ಲಿ ಕಾಫಿ ಬೆಳೆಯಲಾಗುತ್ತಿದ್ದರೂ ಕೂಡಾ ಉತ್ಪಾದನೆಯಲ್ಲಿ ಮಾತ್ರವಲ್ಲದೆ ಗುಣಮಟ್ಟದಲ್ಲಿಯೂ ಭಾರತದ ಸ್ಥಾನ ಭದ್ರವಾಗಿದೆ.
ಭಾರತದಲ್ಲಿ ಕಾಫಿ ಬೆಳೆಯೋದು ಮಾತ್ರವಲ್ಲದೇ ಅದರಿಂದ ನಾನಾ ವೆರೈಟಿ ಕಾಫಿಗಳನ್ನು ತಯಾರಿಸುವ ಬಗ್ಗೆಯೂ ಪ್ರಯೋಗಗಳು ನಡೆಯುತ್ತಾ ಬಂದಿದೆ. ಅದರಲ್ಲಿಯೂ ಫಿಲ್ಟರ್ ಕಾಫಿ ಗುಣಮಟ್ಟದಲ್ಲಿ ಭಾರತವೀಗ ವಿಶ್ವದಲ್ಲಿಯೇ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಈ*ಗ ಎಲ್ಲಡೆ ಫಿಲ್ಟರ್ ಕಾಫಿ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಬೇಕಾಗುವ ಪುಡಿ ಸಿದ್ಧ ಪಡಿಸಲು ಅತ್ಯಂತತ ಗುಣ ಮಟ್ಟದ ಆಯ್ದ ಬೀಜಗಳೇ ಬೇಕಾಗುತ್ತವೆ. ದಕ್ಷಿಣ ಭಾರತದಲ್ಲಿ ಬೆಳೆಯುವ ಅರೇಬಿಕಾ ಹಾಗೂ ರೋಬಾಸ್ಟಾ ಕಾಫಿ ಬೀಜಗಳನ್ನು ಸೇರಿಸಿ ಇಂಥಾ ಫಿಲ್ಟರ್ ಕಾಫಿ ಪುಡಿ ತಯಾರಿಸಲಾಗುತ್ತದೆ. ಇದರಿಂದ ತಯಾರಾಗುಜವ ಕಾಫಿಗಿರುವ ಸ್ವಾದ ಮತ್ಯಾವುಜದರಲ್ಲಿಯೂ ಸಿಗಲು ಸಾಧ್ಯವಿಲ್ಲ ಅಂತ ವಿದೇಶಿಗರೇ ಶಹಬ್ಬಾಸ್ ಅನ್ನುತ್ತಿದ್ದಾರೆ.
ಕಾಫಿ ಹುಟ್ಟಿದ್ದೆಲ್ಲಿ?
ಕಾಫಿ ಬೀಜ ಭಾರತಕ್ಕೆ ಬಂದು ಇಲ್ಲಿ ಮೊಳಕೆಯೊಡೆದು ಹಬ್ಬಿಕೊಂಡ ರೀತಿಯ ಬಗ್ಗೆ ಮೇಲೆ ಸವಿವರವಾಗಿ ಹೇಳಲಾಗಿದೆ. ಈ ಮೂಲಕ ಅದೊಂದು ವಿದೇಶಿ ಬೆಳೆ ಎಂಬುದೂ ಕೂಡಾ ನಿಕ್ಕಿಯಾಗಿದೆ. ಆದರೆ ಈ ಕಾಫಿ ಎಂಬ ಬೆಳೆ ಮೊದಲು ಬೆಳೆದದ್ದೆಲ್ಲಿ? ಕಾಫಿ ಕುಡಿಯುವ ಸಂಪ್ರದಾಯವೊಂದು ಶುರುವಾದದ್ದು ಹೇಗೆ? ಈ ಕಾಫಿ ಎಂಬ ಪೇಯದ ಮಾಯಾವಿತನವನ್ನು ಮೊದಲು ಪತ್ತೆ ಹಚ್ಚಿದ್ಯಾರು? ಇಂಥಾ ಹತ್ತಾರು ಪ್ರಶ್ನೆಗಳು ಒಟ್ಟೊಟ್ಟಿಗೇ ಮೂಡಿಕೊಳ್ಳುತ್ತವೆ. ಇದಕ್ಕೂ ಕೂಡಾ ಅತ್ಯತಂತ ಇಂಟರೆಸ್ಟಿಂಗ್ ಅನ್ನಿಸುವ ಉತ್ತರ ಸಿದ್ಧವಿದೆ. ಕಾಫಿಯ ಮೂಲ ಹುಡುಕುತ್ತಾ ಹೋದರೆ ಅದು ಒಂಬತ್ತನೇ ಶತಮಾನಕ್ಕೆ ಕರೆದೊಯ್ದು ನಿಲ್ಲಿಸುತ್ತೆ. ಈ ಕಾಫಿ ಎಂಬುದು ಮೊದಲು ಬೆಳೆದು, ಬಳಕೆಯಾದದ್ದು ಇಥಿಯೋಫಿಯಾ ದೇಶದಲ್ಲಿ. ಈ ಕಾರಣದಿಂದಲೇ ಅಲ್ಲಿನ ಭಾಷೆಗೆ, ಭೂಭಾಗಕ್ಕೆ ಅನುಗುಣವಾದಂಥಾ ಹೆಸರೇ ಅದಕ್ಕೆ ಬಂದಿದೆ.
ಇಥಿಯೋಫಿಯಾದ ಕಾಫ ಎಂಬ ಪ್ರದೇಶದಲ್ಲಿ ಮೊದಲಿಗೆ ಕಾಫಿ ಬೆಳೆ ಬೆಳೆಯಲಾಗಿತ್ತು. ಆ ಕಾರಣದಿಂದಲೇ ಅದಕ್ಕೆ ಅದೇ ಹೆಸರು ನಾಮಕರಣಗೊಂಡು, ಬಳಿಕ ಕಾಫಿಯಾಗಿ ನೆಲೆಗೊಂಡಿದೆ ಎಂಬ ಸಂಶೋಧನೆಗಳು ಈಗಾಗಲೇ ನಡೆದಿವೆ. ಆ ಬಳಿಕ ಅದು ಯೂರೋಪ್ ಈಜಿಪ್ಟುಗಳನ್ನು ದಾಟಿಕೊಂಡು ಪ್ರಪಂಚದ ನಾನಾ ದೇಶಗಳಿಗೆ ಪ್ರಸಾರವಾಗಿತ್ತು. ಒಂಬತ್ತನೇ ಶತಮಾನದಲ್ಲಿ ಇಥಿಯೋಫಿಯಾದಲ್ಲಿ ಹುಟ್ಟಿದ್ದ ಕಾಫಿ ಈಜಿಒಪ್ಟು ದಾಟೋ ಹೊತ್ತಿಗೆಲ್ಲ ಹದಿನೈದನೇ ಶತಮಾನ ಬಂದಿತ್ತು. ಈ ಜಗತ್ತಿನ ಮೊಟ್ಟ ಮೊದಲ ಕಾಫಿ ಶಾಪ್ ಶುರುವಾದದ್ದು ೧೪೭೫ರಲ್ಲಿ. ಹಾಗೊಂದು ಮೊದಲ ಕಾಫಿ ಹೋಟೆಲ್ಲು ಶುರುವಾದದ್ದು ಇಸ್ತಾಂಬುಲ್ನಲ್ಲಿ ಅಂತ ತಜ್ಞರು ಅಭಿಪ್ರಾಯ ಪಡುತ್ತಾರೆ.
ಈ ಕಾಫಿ ಈವತ್ತಿನ ಇತರೇ ಪೇಯಗಳಿಗೆ ಹೋಲಿಸಿದರೆ ಬಹಳಷ್ಟು ಔಷಧೀಯ ಗುಣಗಳನ್ನೂ ಹೊಂದಿದೆ. ಇದರ ನಿಯಮಿತವಾದ ಸೇವನೆಯಿಂದ ಒಂದು ಬಗೆಯ ಮಧುಮೇಹದಿಂದ ಪಾರಾಗಬಹುದು. ಕೆಲವೊಂದಷ್ಟು ಕ್ಯಾನ್ಸರ್ ಕಾಯಿಲೆಯನ್ನೂ ತಡೆಗಟ್ಟಬಹುದೆಂದು ಸಂಶೋಧನೆಗಳು ತಿಳಿಸಿವೆ. ಈಗ ಕಾಫಿಯ ಸ್ವಾದ ಹೆಚ್ಚಿಸುವ ಚಿಕೋರಿ ಬಳಕೆಯಿಂದಾಗಿ ಅದರ ನೈಜ ಔಷಧೀಯ ಗುಣಗಳಿಗೆ ತೊಂದರೆಯಾಗಿದೆ. ಈ ಕಾರಣದಿಂದಲೇ ಅತಿಯಾದ ಕಾಫಿ ಸೇವನೆ ಒಂದಷ್ಟು ಅನಾರೋಗ್ಯಗಳಿಗೆ ಕಾರಣವಾದರೂ ಅಚ್ಚರಿಯೇನಿಲ್ಲ. ಇದೀಗ ವಿಶ್ವದ ಬಹು ದೊಡ್ಡ ವಹಿವಾಟಾಗಿದೆ. ಭಾರತದಲ್ಲಿಯೇ ಪ್ರತೀ ವರ್ಷ ಇಪ್ಪತೈದು ಸಾವಿರ ಕೋಟಿಗಳ ವ್ಯವಹಾರ ನಡೆಯುತ್ತೆ.