-ಇಂಟರ್ ನ್ಯಾಷನಲ್ ಡ್ರಗ್ಸ್ ದೊರೆಗಳು ಹೇಗಿರ್ತಾರೆ ಗೊತ್ತಾ?
ಈಗಂತೂ ಡ್ರಗ್ಸ್ ದಂಧೆ ಎಂಬುದು ಮಾಮೂಲಿ ಎಂಬಂತಾಗಿ ಬಿಟ್ಟಿದೆ. ಕರ್ನಾಟಕದ ಮಟ್ಟಿಗೂ ಇದು ತಲೆನೋವಾಗಿ ಬಿಟ್ಟಿದೆ. ಇಲ್ಲಿನ ಸಿಸಿಬಿ ಅಧಿಕಾರಿಗಳಂತೂ ಈ ದಂಧೆಯನ್ನ ಥಂಡಾ ಹೊಡೆಸೋ ಸಂಕಲ್ಪದೊಂದಿಗೆ ಕಾರ್ಯಾಚರಣೆ ನಡೆಸ್ತಿದ್ದಾರೆ. ಹಾಗಾದ್ರೆ ಇದರ ಬೇರುಗಳಿರೋದು ಕರ್ನಾಟದಲ್ಲಿ ಮಾತ್ರವಾ? ಯಾಕೆ ಈ ಬಾರಿ ಬರೀ ಕರ್ನಾಟಕದಲ್ಲಿ ಮಾತ್ರವೇ ಇದರ ಸದ್ದಾಗ್ತಿದೆ ಅನ್ನೋ ಹತ್ತಾರು ಪ್ರಶ್ನೆಗಳಿದ್ದಾವೆ. ಆದ್ರೆ ಡ್ರಗ್ಸ್ ದಂಧೆಯ ಆಳ ಅಗಲ ಅರಿಯಬೇಕಾದ್ರೆ ಇಂಟರ್ನ್ಯಾಷನಲ್ ಡ್ರಗ್ಸ್ ಮಾಫಿಯಾದ ಭೀಕರ ಸ್ವರೂಪವನ್ನೊಮ್ಮೆ ಜಾಲಾಡಲೇ ಬೇಕು. ಇದು ಕೇವಲ ಯುವ ಸಮುದಾಯವನ್ನು ಬಲಿ ಬೀಳಿಸೋ ದಂಧೆ ಅಂತೇನಾದರೂ ನೀವಂದುಕೊಂಡರೆ ಅದು ಅರ್ಧ ಸತ್ಯವಷ್ಟೇ. ಅದರಾಳದಲ್ಲಿ ಈ ಜಗತ್ತಿಗೆ ಸಲೀಸಾಗಿ ಕಾಣದ ರೀತಿಯಲ್ಲಿ ಡ್ರಗ್ಸ್ ಜಾಲ ಹಬ್ಬಿಕೊಂಡಿದೆ. ಈ ದಂಧೆಯ ಮಂದಿ ಕೇವಲ ಗಿರಾಕಿಗಳನ್ನು ಹುಡುಕತ್ತಾರೆ ಅಂದುಕೊಳ್ಳುವಂತಿಲ್ಲ. ಈ ಜಗತ್ತಿನೊಳಗಿರುವ ವಿಕ್ಷಿಪ್ತ ರಕ್ಕಸರು ಡ್ರಗ್ಸ್ಗೆ ಭಾವೀ ಗಿರಾಕಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಹುಟ್ಟು ಹಾಕುತ್ತಾರೆ. ಈ ನಿಟ್ಟಿನಲ್ಲಿ ನೋಡ ಹೋದರೆ, ಜಗತ್ತನ್ನೇ ಅರಿಯದ ಎಳೇ ಮಕ್ಕಳೂ ಕೂಡಾ ಡ್ರಗ್ಸ್ ದಂಧೆಯ ಟಾರ್ಗೆಟ್ ಅನ್ನೋ ಭೀಕರ ಸತ್ಯವೊಂದು ಜಾಹೀರಾಗುತ್ತೆ!
ಪ್ರತೀ ಬಾರಿ ಪೊಲೀಸರು ಡ್ರಗ್ಸ್ ದಂಧೆಕೋರರನ್ನು ಬಂಧಿಸಿದಾಗಲೂ ನಾನಾ ವೆರೈಟಿಯ ಡ್ರಗ್ಸ್ಗಳ ಹೆಸರುಗಳು ಕೇಳಿ ಬರುತ್ತವೆ. ಹಾಗಾದ್ರೆ ಇಂಥಾ ಲಕ್ಷ, ಕೋಟಿ ಕಿಮ್ಮತ್ತಿನ ಡ್ರಗ್ಸ್ಗಳು ಎಲ್ಲಿಂದ ಸರಬರಾಜಾಗುತ್ತೆ ಅಂತೊಂದು ಕುತೂಹಲ ಎಲ್ಲರನ್ನೂ ಕಾಡಿರುತ್ತದೆ. ಅದಕ್ಕೆ ಉತ್ತರ ಹುಡುಕುತ್ತಾ ಸಾಗಿದರೆ ಎದುರುಗೊಳ್ಳೋದುಉ ಭಯ ಹುಟ್ಟಿಸುವ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ. ಕೊಕೇನ್, ಮರಿಜುವಾನ ಸೇರಿದಂತೆ ಡ್ರಗ್ಸ್ನಲ್ಲಿ ನಾನಾ ವಿಧಗಳಿದ್ದಾವೆ. ಅದೊಂದು ನಶೆಯೇರಿಸೋ ಮಾಯಾಲೋಕ. ಈವತ್ತಿಗೆ ಕರ್ನಾಟಕದಲ್ಲಿ ಪಡ್ಡೆ ಹುಡುಗರ ಕೈಗೂ ಸಲೀಸಾಗಿ ಸಿಗೋ ಡ್ರಗ್ಸ್ ದೂರದ ದೇಶಗಳಿಂದ ಲೀಲಾಜಾಲವಾಗಿಯೇ ಸರಬರಾಜಾಗುತ್ತೆ. ಇಂದು ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆ ಬಿಗುವಾಗಿದೆ. ಆದ್ರೂ ದೇಶದಿಂದ ದೇಶಕ್ಕೆ ಸಲೀಸಾಗಿ ಅದು ಸಾಗಾಟವಾಗ್ತಿರೋದೇ ಆ ದಂಧೆ ಬೆಳೆದು ನಿಂತಿರೋ ರೀತಿಗೆ ಸಾಕ್ಷಿ.
ಅಂತಾರಾಷ್ಟ್ರೀಯ ಮಾಫಿಯಾ
ಹಾಗೆ ಕಾನೂನು ಕಟ್ಟಳೆಗಳ ಕಣ್ತಪ್ಪಿಸಿ, ಘಟಾನುಘಟಿಗಳನ್ನೇ ಬಲೆಗೆ ಕೆಡವಿಕೊಂಡು ಈ ಮಾಫಿಯಾ ಬೆಳೆದು ನಿಂತಿದೆ. ಆ ಮಾಫಿಯಾ ಜಗತ್ತಿನಲ್ಲಿ ಚಾಣಾಕ್ಷತೆಯೇ ಬೆರಗಾಗುವಂಥಾ ಚಾಣಾಕ್ಷ ಡಾನ್ಗಳಿದ್ದಾರೆ. ಅಂಥಾ ಡಾನ್ಗಳಿಗೆಲ್ಲ ಕೌಟುಂಬಿಕವಾಗಿಯೇ ಸ್ಮಗ್ಲಿಂಗ್ ಹಿನ್ನೆಲೆಯಿರುತ್ತೆ. ಅಂಥವರಿಗೆ ಪೊಲೀಸ್, ಕಾನೂನು, ಕೋರ್ಟು, ಜೈಲುಗಳೆಲ್ಲವೂ ಲೆಕ್ಕಕ್ಕಿಲ್ಲ. ಯಾವ ಪೊಲೀಸರೂ ಅವರನ್ನು ತಹಬಂದಿಯಲ್ಲಿಡೋಕೆ ಈವರೆಗೂ ಸಾಧ್ಯವಾಗಿಲ್ಲ. ಈಗ ಹೇಳ ಹೊರಟಿರೋದು ಅಂಥಾದ್ದೇ ಓರ್ವ ಅಂತಾರಾಷ್ಟ್ರೀಯ ಡ್ರಗ್ಸ್ ಡಾನ್ ಒಬ್ಬನ ಕಥೆ. ಅದರಲ್ಲಿ ಅವನದ್ದೇ ಕಾಲಮಾನದಲ್ಲಿ ಘಟಿಸಿದ್ದ ಭೀಕರ ಗ್ಯಾಂಗ್ ವಾರ್ ಕೂಡಾ ಮಿಳಿತವಾಗಿದೆ.
ಆತ ಜೊವಾಕ್ವಿನ್ ಗುಜ್ಮಾನ್ ಲೋರಾ. ಇವನ ಹೆಸರು ಕೇಳಿದ್ರೇನೇ ಈವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವರ ಅಳ್ಳೆ ಅದುರುತ್ತೆ. ಈತ ಹುಟ್ಟಾ ಸ್ಮಗ್ಲರ್. ಈತ ಮೆಕ್ಸಿಕನ್ ಡ್ರಗ್ ಲಾರ್ಡ್. ಸಿನಾಲೋವಾ ಡ್ರಗ್ ಕಾರ್ಟಲ್ನ ಸಾರಥಿ. ಹೀಗಂದಾಕ್ಷಣ ಭಯಾನಕವಾದ ಆಕೃತಿಯೊಂದು ಯಾರ ಮನಸಲ್ಲಾದ್ರೂ ಮೊಳೆತುಕೊಳ್ಳುತ್ತೆ. ಅಷ್ಟಕ್ಕೂ ಆತನ ಪರಾಕ್ರಮಗಳೇ ಅಂಥಾದ್ದಿದೆ. ಆದರೆ ಈ ಆಸಾಮಿಯನ್ನು ಯಾರೂ ಕೂಡಾ ಆ ಆಕಾರದಲ್ಲಿ ಪತ್ತೆಹಚ್ಚೋಕೆ ಸಾಧ್ಯವೇ ಇಲ್ಲ. ಯಾಕಂದ್ರೆ, ಆತ ಈ ಪಾಟಿ ನಟೋರಿಯಸ್ ಅಂತ ಅವನನ್ನ ನೋಡಿದ ಯಾರಿಗೇ ಆದ್ರೂ ಅನ್ನಿಸೋಕೆ ಸಾಧ್ಯಾನೇ ಇಲ್ಲ. ಐದೂವರೆ ಅಡಿಯ ಈತ ಓರ್ವ ಸಾದಾಸೀದಾ ಸಂಸಾರಸ್ಥನಂತೆಯೇ ಕಾಣಿಸ್ತಾನೆ. ಆದ್ರೆ ಅಂತಾರಾಷ್ಟ್ರೀಯ ಭದ್ರತಾ ವ್ಯವಸ್ಥೆಗೇ ಚಳ್ಳೆಹಣ್ಣು ತಿನ್ನಿಸೋ ಈತನ ಲೀಲೆಗಳು ಮಾತ್ರ ಊಹಾತೀತ.
ಮೆಕ್ಸಿಕೋ ಮೂಲದ ಜೊವಾಕ್ವಿನ್ ಗುಜ್ಮಾನ್ ಲೋರಾ ಹುಟ್ಟಿದ್ದೇ ಸ್ಮಗ್ಲಿಂಗ್ ವಾತಾವರಣದಲ್ಲಿ. ಆತನ ಸಂಬಂಧಿಕನೋರ್ವ ಆ ಕಾಲದಲ್ಲಿಯೇ ಕುಖ್ಯಾತ ಡ್ರಗ್ ಡೀಲರ್ ಆಗಿದ್ದ. ಆತನ ಸಾಹಚರ್ಯದಲ್ಲಿ ಬೆಳೆದ ಜೊವಾಕ್ವಿನ್ ಆ ದಂಧೆಯಲ್ಲಿ ಎಳವೆಯಿಂದ್ಲೇ ಪಳಗಲಾರಂಭಿಸಿದ್ದ. ನಂತರ ಆ ಸಂಬಂಧಿಕ ಈ ದಂಧೆ ತೊರೆದಾಗ ಅದರ ಸಾರಥ್ಯ ವಹಿಸಿಕೊಂಡಿದ್ದವನು ಜೊವಾಕ್ವಿನ್. ಆ ನಂತರದ್ದೆಲ್ಲವೂ ರೋಚಕ ಕಥನ. ಈತ ನೋಡ ನೋಡ್ತಿದ್ದಂತೆಯೇ ಸಿನಾಲೋವಾ ಡ್ರಗ್ ಕಾರ್ಟಲ್ನ ನಾಯಕನಾಗಿ ಬೆಳೆದ. ಈವತ್ತಿಗೂ ಯುನೈಟೆಡ್ ಸ್ಟೇಟ್ಸ್ಗೆ ಭಾರೀ ಮೊತ್ತದ ಡ್ರಗ್ಸ್ ಸಪ್ಲೈ ಆಗುತ್ತೆ. ಅದೆಲ್ಲವನ್ನೂ ಕೂಡಾ ಜೊವಾಕ್ವಿನ್ ಆಪರೇಟ್ ಮಾಡ್ತಾನೆ. ಆತ ನಡೆದು ಬಂದಿರೋ ಹೆಜ್ಜೆ ಜಾಡೇ ರೋಚಕ. ಜೊವಾಕ್ವಿನ್ ಭಯಾನಕವಾದ ಪ್ರತಿರೋಧಗಳನ್ನ ಹಿಮ್ಮೆಟ್ಟಿಸಿಕೊಂಡೇ ಬೆಳೆದು ನಿಂತಿದ್ದ.
ಆತ ಡ್ರಗ್ಸ್ ಲೋಕದ ಡಾನ್
ಮೆಕ್ಸಿಕನ್ ಪ್ರದೇಶದಲ್ಲಿ ಇತ್ತೀಚಿನ ದಶಕಗಳಲ್ಲಿ ಹಲವಾರು ಡ್ರಗ್ ಕಾರ್ಟಲ್ಗಳು ಹುಟ್ಟಿಕೊಂಡಿದ್ವು. ಅದರ ಒಂದೊಂದು ಕಾರ್ಟಲ್ ಅನ್ನೂ ಒಬ್ಬೊಬ್ಬ ಡಾನ್ ಆಳುತ್ತಿದ್ದ. ಆದ್ರೆ ಯಾರೂ ಕೂಡಾ ಜೊವಾಕ್ವಿನ್ನನ್ನು ಹಿಮ್ಮೆಟ್ಟಿಸೋಕೆ ಸಾಧ್ಯವಾಗಿರ್ಲಿಲ್ಲ. ಇದೇ ಹೊತ್ತಿನಲ್ಲಿ ೨೦೦೬ರಲ್ಲಿ ಜೊವಾಕ್ವಿನ್ ಇಷಾರೆಯಂತೆ ಒಂದು ಕಾರ್ಟಲ್ ಮುಖ್ಯಸ್ಥನ ಹೆಣ ಉರುಳಿಸಲಾಗಿತ್ತು. ಅದುವೇ ಡ್ರಗ್ ಕಾರ್ಟಲ್ಗಳ ಮಹಾ ಕದನಕ್ಕೆ ನಾಂದಿ ಹಾಡಿತ್ತು. ಆ ಕದನದಲ್ಲಿ ಅಂದಾಜು ಅರವತ್ತು ಸಾವಿರದಷ್ಟು ಮಂದಿ ಸತ್ತು ಬಿದ್ದಿದ್ರು. ಇದೊಂದು ಸಂಗ್ರಾಮದಿಂದಲೇ ಜೊವಾಕ್ವಿನ್ ಮತ್ತಷ್ಟು ವರ್ಷಸ್ಸು ಬೆಳೆಸಿಕೊಂಡಿದ್ದ. ಅತೀ ಶ್ರೀಮಂತ ಡ್ರಗ್ ಡಾನ್ ಆಗಿಯೂ ಹೆಸರುವಾಸಿಯಾದ. ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿದ್ದ ಅಂದ ಮೇಲೆ ಅವನ ಮೇಲೆ ಭದ್ರತಾ ಪಡೆಗಳ ಕಣ್ಣು ಬೀಳದಿರಲು ಸಾಧ್ಯವೇ? ಆದ್ರೆ ಜೊವಾಕ್ವಿನ್ನನ್ನು ಬಂಧಿಸೋದು ಅಷ್ಟು ಸಲೀಸಿನ ಸಂಗತಿಯಾಗಿರ್ಲಿಲ್ಲ. ಯಾಕಂದ್ರೆ ಅವನ್ ಅಂಥಾ ಪ್ರಳಯಾಂತಕ.
೧೯೯೩ ರಿಂದ ೨೦೦೧ರ ವರೆಗೂ ಹಲವಾರು ಬಾರಿ ಬಂಧಿಸೋ ಪ್ರಯತ್ನಗಳು ನಡೆದಿದ್ವಾದ್ರೂ ಅದು ಸಾಧ್ಯವಾಗಿರ್ಲಿಲ್ಲ. ಕಡೆಗೂ ಒಂದು ಸಲ ಆತನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು. ಇನ್ನು ಈ ಡ್ರಗ್ಸ್ ಡಾನ್ನ ಯುಗಾಂತ್ಯವಾಯ್ತೆಂದೇ ಸುದ್ದಿಯಾಗಿತ್ತು. ವಿರೋಧಿ ಡ್ರಗ್ಸ್ ಕಾರ್ಟಲ್ಗಳು ಖುಷಿಯಿಂದ ಕೇಕೆ ಹಾಕಿದ್ವು. ಆದ್ರೆ ಜೊವಾಕ್ವಿನ್ ಆ ಖುಷಿಯನ್ನ ಹೆಚ್ಚು ಕಾಲ ಬದುಕಲು ಬಿಡಲಿಲ್ಲ.
ಭದ್ರತಾ ಪಡೆಗಳಿಗೇ ಆತ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಕಡೆಗೂ ಆತನನ್ನ ೨೦೧೫ರ ಫೆಬ್ರವರಿ ೨೨ ರಂದು ಬಂಧಿಸಲಾಗಿತ್ತು. ಆಗಂತೂ ಭದ್ರತಾ ಪಡೆಗಳು ಆತನನ್ನು ಮಿಸುಕದಂತೆ ನೋಡಿಕೊಂಡು ಜೈಲಲ್ಲಿಟ್ಟಿದ್ರು. ಅದು ಅತ್ಯಂತ ಬಿಗುವಿನಮ ಸೆಕ್ಯೂರಿಟಿ ಇದ್ದ ಜೈಲು. ಜೊವಾಕ್ವಿನ್ ಮಿಸುಕಾಡಲೂ ಸಾಧ್ಯವಿರಲಿಲ್ಲ. ಆತ ಎಂಥಾ ಪ್ರಳಯಾಂತಕ ಅಂದ್ರೆ ಶವರ್ ಅಡಿಯಲ್ಲಿದ್ದ ಪುಟ್ಟ ಕಿಟಕಿಯನ್ನೇ ದೊಡ್ಡದಾಗಿ ಕೊರೆದು ಪರಾರಿಯಾಗಿದ್ದ. ಹೀಗೆ ಯಾರ ಅಂಕೆಗೂ ಸಿಗದ ಈತನಿಗೀಗ ಅರವತ್ಮೂರು ವರ್ಷ ವಯಸ್ಸು. ಆದರೂ ಯಾರ ಕೈಗೂ ಸಿಗದೆ ಬಚ್ಚಿಟ್ಟುಕೊಂಡಿದ್ದಾನೆ. ಯಥಾಪ್ರಕಾರವಾಗಿಯೇ ದಂಧೆ ನಡೆಸ್ತಿದ್ದಾನೆ. ಆತನ ಪ್ರಧಾನ ಮಾರ್ಕೆಟ್ ಇರೋದೇ ಅಮೆರಿಕಾದಂಥಾ ದೇಶಗಳಲ್ಲಿ. ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಮೆರೆಯೋ ಡೊನಾಲ್ಡ್ ಟ್ರಂಪ್ಗೂ ಕೂಡಾ ಈತನ ಕೂದಲನ್ನು ಕೊಂಕಿಸಲೂ ಸಾಧ್ಯವಾಗ್ತಿಲ್ಲ. ಅದು ಜೊವಾಕ್ವಿನ್ ನಿಜವಾದ ತಾಖತ್ತು. ಅಂದಹಾಗೆ ಈತನ ಬಗ್ಗೆ ಲೆಕ್ಕವಿರದಷ್ಟು ಹಾಲಿವುಡ್ ಸಿನಿಮಾಗಳು ತಯಾರಾಗಿವೆ.
ದಾವೂದ್ ಅಧಿಪತ್ಯ
ಆಧುನಿಕ ಜಗತ್ತಿನಲ್ಲಿ ಹತ್ತಾರು ಡ್ರಗ್ ಕಾರ್ಟಲ್ಲುಗಳಿದ್ದಾವೆ. ಒಂದು ಡ್ರಗ್ ಕಾರ್ಟಲ್ ಅಂದರೆ ಅದೊಂದು ಅಂತಾರಾಷ್ಟ್ರೀಯ ಮಟ್ಟದ ಮಹಾ ಸಾಮ್ರಾಜ್ಯ. ಅಂಥಾದ್ದೊಂದು ಕಾರ್ಟಲ್ ಅನ್ನು ದಶಕಗಟ್ಟಲೆ ಕಾಲ ಯಾವ ಅಡ್ಡಿ ಆತಂಕಗಳೂ ಇಲ್ಲದಂತೆ ಮುಂದುವರೆಸಿಕೊಂಡು ಹೋಗಿದ್ದವನು ದಾವೂದ್ ಇಬ್ರಾಹಿಂ. ಮುಂಬೈನಲ್ಲಿ ನೆಲೆ ಕಂಡುಕೊಂಡು, ಉಗ್ರ ಚಟುವಟಿಕೆಗಳ ರೂವಾರಿಯಾಗಿದ್ದ ದಾವೂದ್ ದಂಧೆ ನ ಡೆಸದ ಕ್ಷೇತ್ರಗಳೇ ಇಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುತ್ತಿದ್ದ ದುಬಾರಿ ಡ್ರಗ್ಸ್ಗಳನ್ನು ಸಲೀಸಾಗಿ ಭಾರತಕ್ಕೆ ತಂದು ಸುರಿದ ಮೊದಲಿಗ ಬಹುಶಃ ಈ ದಾವೂಊದ್ ಇಬ್ರಾಹಿಂ. ಇದೀಗ ಭಾರತದ ಕಾನೂನು ಕುಣಿಕೆಗೆ ಹೆದರಿ ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರೋ ದಾವೂದ್, ಈಗಲೂ ಕೂಡಾ ಅನೇಕ ಡ್ರಗ್ ಕಾಙರ್ಟಲ್ಗಳನ್ನು ತನ್ನ ಬಂಟರ ಮೂಲಕ ನಿರ್ವಹಿಸುತ್ತಿದ್ದಾನೆಂಬ ಮಾತಿದೆ.
೧೯೭೦ರ ಸುಮಾರಿಗೆ ಮುಂಬೈ ಮಹಾ ನಗರಿಯಲ್ಲಿ ದಾವೂದ್ ಇಬ್ರಾಹಿಂ ಮೆರೆದಾಟ ಜೋರಾಗಿತ್ತು. ಆರಂಭದಲ್ಲಿ ಮುಂಬೈನಲ್ಲಿ ಬೇರೆ ಬೇರೆ ದಂಧೆ ನಡೆಸುತ್ತಿದ್ದ ದಾವೂದ್, ಆ ನಂತರದಲ್ಲಿ ಡ್ರಗ್ಸ್ ಮಾಫಿಯಾವನ್ನು ಮುನ್ನಡೆಸಲಾರಂಭಿಸಿದ್ದ. ಡಿ ಕಂಪೆನಿ ಎಂಬ ಸಾಮ್ರಾಜ್ಯ ಸ್ಥಾಪಿಸಿದ್ದ ದಾವೂದ್ ಆ ನಂತರ ಅದರ ಮೂಲಕವೇ ಅಂತಾರಾಷ್ಟ್ರೀಯ ಡ್ರಗ್ ಕಾರ್ಟಲ್ ಒಂದರ ಅಧಿಪತಿಯಾಗಿ ಮೆರೆಯಲಾರಂಭಿಸಿದ್ದ. ಈವತ್ತಿಗೆ ದೇಶದ ನರನಾಡಿಗಳಲ್ಲಿಯೂ ನಶೆ ಹಬ್ಬಿ ತೇಲಾಡಿಸುತ್ತಿದೆ ಎಂದರೆ, ಅದರಲ್ಲಿ ದಾವೂದನ ಪಾಲು ದೊಡ್ಡದಿದೆ. ಅಷ್ಟರ ಮಟ್ಟಿಗೆ ಭಾರತವನ್ನು ನಶೆಯ ತೆಕ್ಕೆಗೆ ಬೀಳಿಸಿದ ಕಾರಣಕ್ಕಾಗಿ ಈ ದೇಶ ಆತನನ್ನು ಯಾವತ್ತಿಗೂ ಕ್ಷಮಿಸುವಂತಿಲ್ಲ.
ಪುಟ್ಟ ಮಕ್ಕಳ ಮೇಲೆ ಪ್ರಯೋಗ
ಡ್ರಗ್ಸ್ ಮಾಫಿಯಾ ಅನ್ನೋದೇ ಮನುಷ್ಯತ್ವದ ಲವಲೇಷವೂ ಇಲ್ಲದ ಜಗತ್ತು. ಡ್ರಗ್ಸ್ ಸೇವಿಸಿದವರು ಯಾವುದಕ್ಕೂ ಹೇಸದ ಸೈಕೋಗಳಾಗಿ ನಾನಾ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗೆ ಡ್ರಗ್ಸ್ ನಶೆಗೆ ವಶವಾಗಿ ಬದುಕು ಹಾಳು ಮಾಡಿಕೊಳ್ಳೋದಲ್ಲದೇ ಈ ಸಮಾಜದ ನೆಮ್ಮದಿಯನ್ನೂ ಹಾಳುಗೆಡವುತ್ತಿರುವ ಸೈಕೋಗಳ ಹಿನ್ನೆಲೆ ಗಮನಿಸಿದರೆ ನಿಜಕ್ಕೂ ಅಚ್ಚರಿಯಾಗುತ್ತೆ. ಯಾರೂ ಕೂಡಾ ಹುಟ್ಟುತ್ತಲೇ ಕೆಟ್ಟೋರಾಗಿರುವುದಿಲ್ಲ. ಹಾದಿ ತಪ್ಪಿರೋದೂ ಇಲ್ಲ. ಇಂಥಾ ಡ್ರಗ್ಸ್ ದಾಸರೆಲ್ಲ ಬಹುತೇಕ ಸಂಸ್ಕಾರವಂತ ಕುಟುಂಬದಿಂದ ಬಂದವರೇ ಆಗಿರುತ್ತಾರೆಂಬುದು ಸತ್ಯ.
ಹಾಗಾದರೆ, ಅವರೆಲ್ಲ ಹೇಗೆ ಡ್ರಗ್ಸ್ ನಶೆಯ ಸೆಳೆತಕ್ಕೆ ಬಿದ್ದರು? ಈ ಚಟ ಅವರಿಗೆಲ್ಲ ಅಂಟಿಕೊಳ್ಳೋದು ಯಾವ ಮೂಲದಿಂದ? ಈ ಡ್ರಗ್ಸ್ ಮಾಫಿಯಾ ಇಂಥಾ ಎಳೇ ಹುಡುಗ ಹುಡುಗೀರನ್ನು ಹೇಗೆ ಸೆಳೆದುಕೊಳ್ಳುತ್ತೆ? ಇಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ಡ್ರಗ್ಸ್ ಮಾಫಿಯಾದ ಭಯಾನಕ ಮುಖವೊಂದು ಸಲೀಸಾಗಿ ಅನಾವರಣಗೊಳ್ಳುತ್ತೆ. ಈ ದಂಧೆಕೋರರು ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಿಗೆ ನಶೆಯ ರುಚಿ ಹತ್ತಿಸುವ ಖತರ್ನಾಖ್ ಹಾದಿ ಕಂಡುಕೊಂಡಿದೆ. ವರ್ಷದ ಹಿಂದೆ ಬೆಂಗಳೂರು, ದಕ್ಷಿಣ ಕನ್ನಡದ ಶಾಲಾ ಆವರಣದಲ್ಲಿ ಒಂದು ಬಗೆಯ ಚಾಕೋಲೇಟ್ ಗಳನ್ನು ಮಾರಲಾಗುತ್ತಿತ್ತು. ನೋಡ ನೋಡುತ್ತಲೇ ಅದನ್ನು ಒಂದು ಸಾರಿ ತಿಂದ ಮಕ್ಕಳು ಮತ್ತೆ ಮತ್ತೆ ಬೇಕೆಂದು ಬಯಸಲಾರಂಭಿಸಿದ್ದವು.
ಬರಬರುತ್ತಾ ಆ ಚಾಕೋಲೇಟ್ ಸಿಗದೇ ಹೋದರೆ ರಚ್ಚೆ ಹಿಡಿದು ರಂಪ ಮಾಡಲಾರಂಭಿಸಿದ್ದವು. ಇಂಥಾ ಚಾಕೋಲೇಟ್ಗಳಲ್ಲಿ ಡ್ರಗ್ಸ್ ಅಂಶ ಬೆರೆಸಲಾಗಿರುತ್ತೆ. ಇಂಥಾ ಅಂಗಡಿಗಳಿಗೆ ಗೊತ್ತೇ ಆಗದಂತೆ ವಿವಿಧ ಹಂತಗಳ ನಶೆ ಹೊಂದಿರೋ ಚಾಕೋಲೇಟ್ಗಳನ್ನು ಸರಬರಾಜು ಮಾಡಲಾಗುತ್ಚತೆ. ಅದನ್ನು ಆಯಾ ಡ್ರಗ್ ಕಾರ್ಟಲ್ಲುಗಳ ಜೊತೆಗೆ ಡ್ರಗ್ ಪೆಡ್ಲರ್ಗಳು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಾ ಬರುತ್ತಿದ್ದಾರೆ. ಇಂಥಾ ಚಾಕೋಲೇಟ್ಗಳನ್ನು ತಿನ್ನುತ್ತಲೇ ಹೈಸ್ಕೂಲು ಹಂತ ತಲುಪೋ ಮಕ್ಕಳಿಗೆ ಆ ಘಟ್ಟದಲ್ಲಿ ಮತ್ತೊಂದು ಹಂತದ ನಶೆಯ ರುಚಿ ಹತ್ತಿಸಲಾಗುತ್ಚತೆ. ಅಂಥಾ ಮಕ್ಕಳು ಬೇರೆ ಲೆವೆಲ್ಲಿನ ನಶೆಗಾಗಿ ಹಾತೊರೆದರೆ ತಕ್ಷಣವೇ ಶಾಲಾ ಕಾಲೇಜುಗಳ ಬಳಿಯೇ ದಂಧೆಕೋರರು ಅದನ್ನು ಪೂರೈಸುತ್ತಾರೆ.
ಮಕ್ಕಳು ಜೋಪಾನ
ಸಾಮಾನ್ಯವಾಗಿ ಪ್ರೌಢಾವಸ್ಥೆ ತಲುಪಿದ, ಯೌವನದ ಹೊಸ್ತಿಲಲ್ಲಿರುವ ಮಕ್ಕಳ ಬಗ್ಗೆ ಪೋಷಕರು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ಎಳೇ ಮಕ್ಕಳ ಚಲನ ವಲನ, ಶಾಲಾ ಆವರಣದಲ್ಲಿನ ಪರಿಸರ ಮುಂತಾದವುಗಳ ಬಗ್ಗೆಯೂ ಸದಾ ಎಚ್ಚರ ವಹಿಸುವ ತುರ್ತು ಈಗ ಮೂಡಿಕೊಂಡಿದೆ. ಯಾಕೆಂದರೆ, ಈ ಡ್ರಗ್ಸ್ ಮಾಫಿಯಾ ಇಂಥಾ ಎಳೇ ಮಕ್ಕಳ ತಾಜಾ ದೇಹಕ್ಕೆ ನಶೆಯ ಗುಂಗು ಹತ್ತಿಸಲು ತಯಾರಾಗಿ ನಿಂತಿದೆ. ಇದಕ್ಕಾಗಿಯೇ ಕಂಡಾಕ್ಷಣವೇ ಸೆಳೆದಯುವಂಥಾ ನಾನಾ ಬಗೆಯ ಚಾಕೋಲೇಟುಗಳು, ತಿಂಡಿ ತಿನಿಸುಗಳ ರೂಪದಲ್ಲಿ ಥರ ಥರದ ಡ್ರಗ್ಸ್ ಬೆರೆಸಿ ಮಾರಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ವರ್ಷದ ಹಿಂದೆ ಇಂಥಾ ಚಾಕೋಲೇಟ್ ಮಾರುವ ಅಂಗಡಿಯನ್ನು ರೇಡಿಗೀಡು ಮಾಡಲಾಗಿತ್ತು. ಆ ನಂತರ ಬೆಂಗಳೂರಿನಲ್ಲಿನ ಶಾಲಾ ಆವರಣದಲ್ಲಿಯೂ ಇಂಥಾ ಚಾಕೋಲೇಟುಗಳ ನಶೆ ಹಬ್ಬಿಕೊಂಡಿತ್ತು. ಹೇಗಾದರೂ ಮಾಡಿ ಕಾಸು ಮಾಡುವ ದುಷ್ಟತನಕ್ಕೆ ಬಿದ್ದಿರುವ ಈ ದಂಧೆಕೋರರ ಪಾಲಿಗೆ ಇಂದಿನ ಮಕ್ಕಳೇ ಮುಂದಿನ ಗ್ರಾಹಕರು. ಸಣ್ಣ ಮಕ್ಕಳನ್ನು ಅವುಗಳಿಗೆ ಗೊತ್ತಾಗದಂತೆ ನಶೆಯ ತೆಕ್ಕೆಗೆ ಬೀಳಿಸಿ ತಲೆ ಮಾರಿಗೆ ತಲೆಮಾರನ್ನೇ ಹಾಳುಗೆಡಹುವ ದುಷ್ಟತನದ ಕಸುಬಿಗೆ ಈ ಮಂದಿ ಕೈ ಹಾಕಿದ್ದಾರೆ. ಹಾಗಂತ ಇದು ಇತ್ತೀಚಿನ ವಿದ್ಯಮಾನ ಅಂದುಕೊಳ್ಳುವಂತಿಲ್ಲ. ಎಪ್ಪತ್ತು ಎಂಬತ್ತರ ದಶಕದಲ್ಲಿಯೇ ಅಂಥಾ ಪ್ರಯೋಗಗಳು ಚಾಲ್ತಿಗೆ ಬಂದಿವೆ.
13ಶತ ಕೋಟಿಯ ದಂಧೆ
ಈ ಡ್ರಗ್ಸ್ ನಲ್ಲಿ ನಾನಾ ನಮೂನೆಗಳಿದ್ದಾವೆ. ಚೂರೇ ಚೂರು ಸರಕಿನಲ್ಲಿ ಭಯಾನಕ ನಶೆಯೂ ಅಡಗಿಕೊಂಡಿರುತ್ತೆ. ಆದರೆ, ಜಾಗತಿಕ ಮಟ್ಟದಲ್ಲಿಮ ಮಇಂಥಾ ಡ್ರಗ್ಸ್ಗಳಿಗೆ ಭಯಾನಕ ಬೇಡಿಕೆ ಇದೆ. ಹಾಗಾದ್ರೆ ಜಾಗತಿಕ ಮಟ್ಟದಲ್ಲಿ ಎಷ್ಟು ಪ್ರಮಾಣದ ಡ್ರಗ್ಸ್ ಮಾರಾಟವಾಗಬಹುದು ಅಂತೊಂದು ಕುತೂಹಲ ಸಹಜವಾಗಿಯೇ ಕಾಡುತ್ತೆ. ಒಂದು ಅಂದಾಜಿನ ಪ್ರಕಾರ ವರ್ಷವೊಂದಕ್ಕೆ ಹತರ್ತತ್ತಿರ ೫೦೦ ಟನ್ ಹೆರಾಯಿನ್ ಜಾಗತಿಕ ಮಟ್ಟದಲ್ಲಿ ಹರಿದಾಡುತ್ತೆ. ಏನಿಲ್ಲವೆಂದರೂ ನಾನೂರು ಚಿಲ್ಲರೆ ಟನ್ನುಗಳಷ್ಟು ಹೆರಾಯಿನ್ ಖರ್ಚಾಗುತ್ತದೆ. ಮ್ಯಾನ್ಮಾರ್ ಮುಂತಾದ ದೇಶಗಳು ೫೦ ಟನ್ನುಗಳಷ್ಟು ಅಫೀಮನ್ನು ಡ್ರಗ್ಸ್ ದಂಧೆಗೆ ಪೂರೈಸುತ್ತವೆ.
ಐನೂರು ಟನ್ನುಗಳಷ್ಟು ಅಫೀಮನ್ನು ಅಫ್ಗಾನ್ ಮೂಲದಿಂದ ಉತ್ಪಾದಿಸಲಾಗುತ್ತೆ. ಅಫ್ಗಾನಿಸ್ತಾನ ಒಂದರಲ್ಲಿಯೇ ಐದು ಟನ್ ಹೆರಾಯಿನ್ನಿಗೆ ಮಾರುಕಟ್ಟರೆ ಇದೆ. ಮಿಕ್ಕುಳಿದ ನಶೆ ಜಲ ಮಾರ್ಗದ ಮೂಲಕ ನೆರೆಯ ದೇಶಗಳಿಗೆಲ್ಲ ಸರಬರಾಜಾಗುತ್ತೆ. ಮುಖ್ಯವಾದ ಡ್ರಗ್ ಕಾರ್ಟಲ್ಲುಗಳು ಅದನ್ನು ಜಗತ್ತಿನಾದ್ಯಂತ ಬಿಕರಿ ಮಾಡುತ್ತವೆ. ಹೀಗೆ ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿಯೂ ಈಗ ಡ್ರಗ್ಸ್ ಜಾಲವಿದೆ. ದಿನದಿಂದ ದಿನಕ್ಕೆ ಇಂಥಾ ಡ್ರಗ್ ಅಡಿಕ್ಟುಗಳ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚಿಕೊಳ್ಳುತ್ತಿದೆ. ಗ್ಯಾಂಗ್ ಸ್ಟರ್ ಗಳನೇಕರು ಈ ದಂಧೆಗಿಳಿಯುತ್ತಿದ್ದಾರೆ. ಇದೆಲ್ಲದರ ಫಲವಾಗಿ ವರ್ಷವೊಂದಕ್ಕೆ ಡ್ರಗ್ಸ್ ಜಗತ್ತಿನಲ್ಲಿ ಹದಿಮೂರು ಶತ ಕೋಟಿಯಷ್ಟು ವ್ಯವಹಾರ ನಡೆಯುತ್ತದೆಯಂತೆ.
ಇಡೀ ಜಗತ್ತಿಗೆ ಏಷ್ಯನ್ ಮೂಲದಿಂದಲೇ ಕೊಕೇನ್ ಮತ್ತು ಹೆರಾಯಿನ್ನುಗಳು ಸರಬರಾಜಾಗುತ್ತವೆ. ೨೦೦೮ರಲ್ಲಿ ಹೆರಾಯಿನ ಬಳಕೆ ವ್ಯಾಪಕವಾಗಿ ಹೆಚ್ಚಿಕೊಂಡಿದ್ದನ್ನು ಅಧ್ಯಯನಗಳು ಸಾಬೀತುಪಡಿಸುತ್ತವೆ. ಪ್ರಪಂಚದಾದ್ಯಂತ ಹದಿನಾರರಿಂದ ಹದಿನೇಳು ಮಿಲಿಯನ್ ಮಂದಿ ಹೆರಾಯಿನ್ ಬಳಕೆದಾರರಿದ್ದಾರೆ. ಅದಕ್ಕೆ ಹೊಸಾ ಗ್ರಾಹಕರನ್ನು ಶಾಲಾ ಕಾಲೇಜು ಮೂಲದಿಂದಲೇ ಸೃಷ್ಟಿಲಾಗುತ್ತಿದೆ. ಒಂದು ವೇಳೆ ಎಚ್ಚರ ತಪ್ಪಿದರೆ ಪ್ರತೀ ಮನಬೆಯಲ್ಲಿಯೂ ಡ್ರಗ್ ಅಡಿಕ್ಟುಗಳು ಹುಟ್ಟಿಕೊಳ್ಳಬಹುದು. ಇದೀಗ ಡ್ರಗ್ಸ್ ಮಾಫಿಯಾಕ್ಕೆ ಸಹಸ್ರ ಕೋಟಿ ಬಲ ಬಂದಿದೆ. ಆ ಜಗತ್ತು ಪುಟ್ಟ ಮಕ್ಕಳನ್ನು ಗುರಿಯಾಗಿಸಿಕೊಳ್ಳುವ ಮಾರುಕಟ್ಟೆ ತಂತ್ರ ಅನುಸರಿಸುತ್ತಿದೆ. ಈ ಹೊತ್ತಿನಲ್ಲಿ ನಮ್ಮ ಮಕ್ಕಳು ಮಾತ್ರವಲ್ಲದೆ ಎಲ್ಲ ಮಕ್ಕಳ ರಕ್ಷಣೆಯೂ ನಮ್ಮೆಲ್ಲರ ಆದ್ಯತೆಯಾಗಬೇಕಿದೆ…