ಇರಾನಿ ಗ್ಯಾಂಗ್ ಮತ್ತು ಬಾವರಿಯಾ ಗ್ಯಾಂಗ್… ಈ ಎರಡು ಹೆಸರು ಕೇಳಿದೇಟಿಗೆ ಖುದ್ದು ಪೊಲೀಸರೇ ಕೊಂಚ ಕಸಿವಿಸಿಗೊಳಗಾಗುತ್ತಾರೆ. ಹಣ ಮಾಡಲು ಕಳ್ಳತನ ಮತ್ತು ದರೋಡೆಯ ಮಾರ್ಗ ಆರಿಸಿಕೊಂಡಿರುವ ಈ ಎರಡೂ ಗ್ಯಾಂಗುಗಳ ಹೆಸರು ರಾಷ್ಟ್ರ ಮಟ್ಟದಲ್ಲಿ ಕುಖ್ಯಾತಿ ಗಳಿಸಿ ಬಹಳಷ್ಟು ವರ್ಷಗಳೇ ಸಂದಿವೆ. ಆದರೆ ಇದೀಗ ಕರ್ನಾಟಕದಲ್ಲಿಯೂ ಇದರ ಪ್ರತಾಪದ ಪತಾಕೆ ಪಟಪಟಿಸಲಾರಂಭಿಸಿದೆ. ಈ ಎರಡೂ ತಂಡಗಳೂ ಸಹ ಒಂದನ್ನೊಂದು ಮೀರಿಸುವಂತಿವೆ. ಕಾರ್ಯಾಚರಣೆಯ ರೀತಿ ರಿವಾಜುಗಳು ಬೇರೆಯದ್ದಾದರೂ ಉದ್ದೇಶ ಒಂದೇ. ಕದ್ದ ಕಾಸಲ್ಲೇ ಬದುಕುವ ಈ ಮಂದಿಯ ಅಟಾಟೋಪ, ಖಯಾಲಿ, ಕಿಲಾಡಿ ಬುದ್ಧಿ ಮತ್ತು ವಿಲಕ್ಷಣ ನಡವಳಿಕೆಗಳೆಲ್ಲವೂ ಪೊಲೀಸ್ ಇಲಾಖೆಗೇ ಸವಾಲಾದರೆ ಜನಸಾಮಾನ್ಯರಿಗೆ ಭಯ ಮತ್ತು ಬೆರಗು ಹುಟ್ಟಿಸಿವೆ. ಅಂದಹಾಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ವಿಜೃಂಭಿಸಿದ್ದ ಸರಣಿ ಸರಗಳ್ಳತನದ ಹಿನ್ನೆಲೆಯಲ್ಲಿ ಈ ಪ್ರಳಯಾಂತಕ ಗ್ಯಾಂಗಿನ ಕೆಲ ಸದಸ್ಯರು ಪೊಲೀಸರಿಗೆ ತಗುಲಿಕೊಂಡಿದ್ದಾರೆ. ಈ ಮೂಲಕವೇ ಈ ಚೋರರ ಭಯಾನಕ ವೃತ್ತಾಂತಗಳೂ ಬಯಲಾಗಿವೆ!
ಮುಂಬೈ ಸ್ಲಂನಿಂದ…
ಮುಂಬಯಿಯಲ್ಲಿರುವ ಪುಟ್ಟ ಸ್ಲಂ ಪ್ರದೇಶವಾದ ಅಂಬಿವಲಿಯಲ್ಲಿರುವ ಇರಾನಿ ಕಾಲೊನಿ ಅಂದರೆ ಜನ ಸಾಮಾನ್ಯರಿರಲಿ ಪೊಲೀಸರೂ ಒಂದು ಮಟ್ಟಕ್ಕೆ ಭಯ ಬೀಳುತ್ತಾರೆ. ಇತ್ತೀಚೆಗೆ ಬೆಂಗಳೂರನ್ನು ಕಂಗಾಲು ಮಾಡಿದ್ದರಲ್ಲಾ ಸರಗಳ್ಳರು? ಅವರಿಗೆಲ್ಲ ಈ ಇರಾನಿ ಕಾಲೊನಿಯೇ ಸೇಫಾದ ಬಿಲವಿದ್ದಂತೆ. ಇದರ ಕಾರ್ಯವಲಯ ಇಡೀ ಭಾರತದ ತುಂಬಾ ಹರಡಿಕೊಂಡಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಇರಾನಿ ಗ್ಯಾಂಗ್ ನಿರಂತರವಾಗಿ ಸರಗಳ್ಳತನ ಮಾಡುತ್ತಿದೆ. ಈ ಗ್ಯಾಂಗ್ ಹಿಂಸಾತ್ಮಕ ಮಾರ್ಗ ಅನುಸರಿಸದೆ ಒಡವೆಗಳನ್ನು ಅಪಹರಿಸುತ್ತದೆ. ಆದರೆ ಇವರ ಕಳ್ಳತನದ ಪಟ್ಟುಗಳು ಮಾಮೂಲಿ ಕಳ್ಳರಂತಿರೋದಿಲ್ಲ. ಇವರೆಲ್ಲ ಭಲೇ ಚಾಲಾಕಿಗಳು. ಮಹಾ ಕ್ರಿಮಿನಲ್ ಹುಳುಗಳು. ಈ ಇರಾನಿ ಕಾಲೋನಿಯಲ್ಲಿ ಅದಾಗ ತಾನೇ ಬುದ್ಧಿ ಬಲಿತ ಮಗುವೂ ಸಹ ಕಳ್ಳತನದ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುತ್ತದೆ.
ಹಾಗಂತ ಇವರೇನು ಇರಾನಿನಿಂದ ಇದೀಗ ತಾನೇ ಬಂದಿಳಿದವರಲ್ಲ. ಇರಾನಿಗೂ ಇವರಿಗೂ ಅಂಥಾ ಸಂಬಂಧಗಳೂ ಇಲ್ಲ. ಅನಾದಿ ಕಾಲದಿಂದಲೂ ಭಾರತದಲ್ಲಿದ್ದ ಈ ಜನಕ್ಕೆ ಈಗಿನ ಇರಾನಿ ಕಾಲೊನಿಯಲ್ಲಿ ಸರ್ಕಾರವೇ ಆಶ್ರಯ ನೀಡಿತ್ತು. ಆಸುಪಾಸಿನವರ ಮಟ್ಟಿಗೆ ಸಭ್ಯರೆಂದೇ ಗುರುತಿಸಿಕೊಳ್ಳುತ್ತಿದ್ದ ಇವರ ಅಸಲೀ ದಂಧೆ ಏನೆಂಬುದು ಜನರಿಗೆ ತಿಳಿದದ್ದು ತೀರಾ ಇತ್ತೀಚೆಗೇ. ಇವರು ಏನು ಕೆಲಸ ಮಾಡುತ್ತಾರೆ ಎಂಬ ವಿಚಾರ ಮುಂಬೈ ಪೊಲೀಸರಿಗೂ ಗೊತ್ತಿರಲಿಲ್ಲ ಅಂದರೆ ನಿಮಗೆ ಅಚ್ಚರಿಯಾದೀತೇನೋ. ಅದಕ್ಕೆ ಕಾರಣ ಇವರ ಚಾಲಾಕಿತನ. ಯಾಕೆಂದರೆ, ಅನ್ಯ ರಾಜ್ಯಗಳಲ್ಲಿ ಕಳವು ಮಾಡುತ್ತಿದ್ದ ಈ ತಂಡ ಅಪ್ಪಿತಪ್ಪಿಯೂ ಮುಂಬೈನಲ್ಲಿ ಬಾಲ ಬಿಚ್ಚುತ್ತಿರಲಿಲ್ಲ. ಆದರೆ ಬೇರೆ ಬೇರೆ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಮಾತ್ರ ಮೆಲ್ಲಗೆ ತಮ್ಮಲ್ಲಿ ನಡೆದ ಕಳ್ಳತನದ ಜಾಡು ಹಿಡಿದು ಈ ಇರಾನಿ ಕಾಲೋನಿಯತ್ತ ಬರಕಲಾರಂಭಿಸಿದ್ದರು. ಇಡೀ ದೇಶ ಇರಾನಿ ಕಾಲೊನಿಯತ್ತ ದೃಷ್ಟಿ ನೆಟ್ಟಿದ್ದು ಆವಾಗಲೇ!
ಪೊಲೀಸರಿಗೇ ನಡುಕ!
ಹಾಗಂತ ಕಳ್ಳರು ಈ ಕಾಲೋನಿಯೊಳಗೇ ಇದ್ದಾರೆಂದರೂ ಸಲೀಸಾಗಿ ಬಂಧಿಸುವಂತಿಲ್ಲ. ಎಲ್ಲರೂ ಸೇರಿ ಪೊಲೀಸರನ್ನೇ ಥರಥರದಲ್ಲಿ ಕಂಗಾಲು ಮಾಡಿ ಹಾಕುತ್ತಾರೆ. ಇಂಥಾ ನಟೋರಿಯಸ್ ಗ್ಯಾಂಗಿಗೆ ಒಬ್ಬ ಮುಖ್ಯಸ್ಥ ಇರಲೇ ಬೇಕಲ್ಲ? ಆತ ಲಾಲಾ ಸಮೀರ್ ಜಾಫರ್ ಹುಸೇನ್. ಪಕ್ಕಾ ಪೊಲೀಸರಂತೆ ವೇಷ ಧರಿಸಿ ನಿರ್ಜನ ರಸ್ತೆಗಳಲ್ಲಿ ನಿಲ್ಲುವ ಈ ಖದೀಮರು ಯಾವುದೇ ಹಿಂಸೆ ನಡೆಸದೇ ನಾಜೂಕಿನಿಂದ ಮಹಿಳೆಯರ ಒಡವೆ ಕದ್ದು ಪರಾರಿಯಾಗುತ್ತಾರೆ. ನೂರಾರು ಮೈಲಿ ದೂರವಿರುವ ಮುಂಬೈನಿಂದ ಮೂವತ್ತು ತಾಸುಗಳಲ್ಲಿ ಉದ್ಯಾನಗರಿಗೆ ಓರ್ವ ಮಹಿಳೆ ಸೇರಿ ಏಳು ಜನರ ತಂಡ ಬಂದು ಕೆಲವೇ ತಾಸುಗಳಲ್ಲಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆಂದರೆ ಈ ತಂಡ ಅದಿನ್ನೆಂಥಾ ಚಾಲಾಕಿಯಿರಬಹುದೆಂದು ಅರಿವಾಗುತ್ತದೆ. ಯಾವುದೇ ಬಾಲಿವುಡ್ ಚಲನಚಿತ್ರಕ್ಕೂ ಕಡಿಮೆ ಇಲ್ಲದಂತೆ ಕಾರು ಹಾಗೂ ಬೈಕ್‌ನಲ್ಲಿ ನಗರಕ್ಕೆ ಆಗಮಿಸಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೂಟಿ ಮಾಡಿ ಪರಾರಿಯಾಗುವ ಹಾಗೂ ಬೆಂಗಳೂರು ಪೊಲೀಸರಿಗೆ ತಲೆ ನೋವಾಗಿರುವ ಈ ಇರಾನಿ ಗ್ಯಾಂಗ್ ಈಗಲೂ ಪೊಲೀಸರ ಪಾಲಿಗೆ ತಲೆನೋವೇ.
ಮುಂಬೈ ನಗರದ ಗ್ರಾಮಾಂತರದ ಥಾಣೆಯ ಕಲ್ಯಾಣ ಪ್ರದೇಶದಲ್ಲಿ ಅಂಬಾವಾಡಿ ಹಾಗೂ ಬಿಪ್ಪಾಂಡಿ ಎಂಬ ಬಡವಾಣೆಗಳಿವೆ. ಈ ಪ್ರದೇಶಗಳಿಂದ ಬರುವ ಖದೀಮರೇ ಬೆಂಗಳೂರಲ್ಲಿಯೂ ಕೈಚಳಕ ತೋರಿಸುತ್ತಾರೆ. ಮಧ್ಯಾಹ್ನದ ಹೊತ್ತಿಗೆ ಕಾರು ಹಾಗೂ ಎರಡು ಬೈಕ್‌ಗಳಲ್ಲಿ ಏಳರಿಂದ ಎಂಟು ಮಂದಿ ಸದಸ್ಯರ ಇರಾನಿ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತದೆ. ಈ ತಂಡದಲ್ಲಿ ಚಾಲಕ, ಇಬ್ಬರು ಬೈಕ್ ರೈಡರ್, ನಾಲ್ವರು ಫೀಲ್ಡ್‌ಗೆ ಇಳಿಯುವವರು ಹಾಗೂ ದೋಚಿದ ವಸ್ತುಗಳನ್ನು ಸಾಗಿಸಲು ಒಬ್ಬ ಮಹಿಳೆ ಇರುತ್ತಾರೆ. ಮುಂಬೈನಿಂದ ಹೊರಟ್ಟವರು ಊಟ-ತಿಂಡಿಗೆ ಹೊರತುಪಡಿಸಿ ಎಲ್ಲೂ ಕೂಡ ವಿಶ್ರಾಂತಿಗೆ ನಿಲ್ಲದೆ ಪ್ರಯಾಣಿಸುತ್ತಾರೆ. ಬೆಳಗ್ಗೆ ಉದ್ಯಾನ ನಗರಿಗೆ ಕಾಲಿಡುವ ಈ ತಂಡ, ನಗರದ ಹೊರವರ್ತುಲ ರಸ್ತೆಗಳಲ್ಲಿ ಕಾರು ನಿಲ್ಲಿಸುತ್ತದೆ. ನಂತರ ಬೈಕ್‌ನಲ್ಲಿ ನಾಲ್ಕು ಮಂದಿ ತಕ್ಷಣವೇ ಕಾರ್ಯಾಚರಣೆ ಆರಂಭಿಸುತ್ತಾರೆ. ಕೆಲವೇ ತಾಸುಗಳು ಅಂದರೆ ಒಂದು ಗಂಟೆಯಿಂದ ಎರಡು ಗಂಟೆಯೊಳಗೆ ಲಕ್ಷಾಂತರ ರೂ ಮೌಲ್ಯದ ಚಿನ್ನದ ಒಡವೆ ದೋಚಿಗಳನ್ನು ಅಷ್ಟೇ ಬಿರುಸಾಗಿ ನಗರದಿಂದ ಪರಾರಿಯಾಗುತ್ತಾರೆ. ಈ ಕೃತ್ಯ ಎಸಗಿದ ಬಳಿಕ ತಮ್ಮ ತಂಡ ಸದಸ್ಯೆಯ ಸುಪರ್ದಿಗೆ ದೋಚಿದ ಒಡವೆಗಳನ್ನು ಕೊಟ್ಟು, ಆಕೆಯನ್ನು ಮುಂಬೈಗೆ ಬಸ್ ಹತ್ತಿಸುತ್ತಾರೆ. ನಂತರ ಈ ಖದೀಮರು ದಾಖಲೆ ಪಕ್ಕಾ ಇರೋ ಕಾರಿನಲ್ಲಿ ಮಿಂಚಿನಂತೆ ಮರೆಯಾಗುತ್ತಾರೆ!
ದೋಚೋದೇ ಕುಲಕಸುಬು!
ಇರಾನಿ ತಂಡ, ಕೆಲಸ ಮುಗಿದ ಬಳಿಕ ತಪ್ಪಿಸಿಕೊಳ್ಳಲು ಅನುಕೂಲವಾಗುವುದಕ್ಕಾಗಿಯೇ ರಿಂಗ್ ರೋಡ್‌ನ ಹತ್ತಿರದ ಪ್ರದೇಶಗಳನ್ನೇ ತಮ್ಮ ಕಾರ್ಯ ಕ್ಷೇತವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗೆ ಐವತ್ತು ವರ್ಷ ದಾಟಿದವರೇ ಈ ಗ್ಯಾಂಗ್‌ನ ಪ್ರಮುಖ ಟಾರ್ಗೆಟ್ ವಂಚಿಸುವುದು ಇರಾನಿ ಸಮುದಾಯದ ಕುಲ ವೃತ್ತಿ. ದೇಶದ ಎಲ್ಲಡೆ ಅವರು ನೆಲೆಗೊಂಡು ತಮ್ಮ ವೃತ್ತಿಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಇರಾನಿ ಗ್ಯಾಂಗ್ ರಾಷ್ಟ್ರದ ಪೊಲೀಸರ ಪಾಲಿಗೂ ಸವಾಲಾಗಿದೆ. ಈ ತಂಡಕ್ಕೂ, ಕೆಲ ನೀತಿ ರಿವಾಜುಗಳಿವೆ. ಜನರಿಗೆ ದೈಹಿಕವಾಗಿ ತೊಂದರೆಯುಂಟು ಮಾಡದೆ ವಂಚಿಸಿ ಲಾಭ ಮಾಡುವುದು ನಿಯಮ. ಹೀಗಾಗಿ ಅವರು ಗಮನ ಬೇರೆಡೆ ಸೆಳೆದು ವಂಚಿಸುತ್ತಾರೆ ಹೊರತು ಹಣಕ್ಕಾಗಿ ಕೊಲೆಯಂತಹ ಕೃತ್ಯ ಕೈ ಹಾಕುವುದಿಲ್ಲ. ಆದರೆ, ಈಚಿನ ಆ ಸಮುದಾಯದ ಯುವಕರು ದರೋಡೆ ಕೃತ್ಯಗಲ್ಲಿಯೂ ಪಾಲ್ಗೊಂಡು ಸಂಪ್ರದಾಯ ಮುರಿಯುತ್ತಿದ್ದಾರೆ.
ಈ ಸರಗಳ್ಳತನದಲ್ಲಿ ಇರಾನಿ ಗ್ಯಾಂಗನ್ನೇ ಮೀರಿಸುವಂತಿರುವುದು ಬಾವರಿಯಾ ಗ್ಯಾಂಗ್. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾಣ ತಾಲೂಕಿನ ಜಿಂಜಾಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಗಳಲ್ಲಿ ಈ ಗ್ಯಾಂಗ್‌ನ ಸದಸ್ಯರಿದ್ದಾರೆ. ಬಾವರಿಯಾ ಗ್ಯಾಂಗ್ ಒಂದು ಬಾರಿ ಕಳ್ಳತನ ನಡೆಸಿ ವಾಪಾಸ್ ಉತ್ತರ ಪ್ರದೇಶಕ್ಕೆ ಹೋಗಿ ನೆಲೆಸಿಬಿಡುತ್ತದೆ. ಒಂದು ವೇಳೆ ಉತ್ತರ ಪ್ರದೇಶದಲ್ಲೇನಾದರೂ ಅಪರಾಧ ನಡೆಸಿದರೆ, ಬೆಂಗಳೂರಿಗೆ ಬಂದು ತಲೆ ಮರೆಸಿಕೊಳ್ಳುತ್ತದೆ. ಈ ಗ್ಯಾಂಗ್ ಕೆಲ ಸಂದರ್ಭದ್ಲ್ಲಿ ಎಂಥಾ ಹಿಂಸೆಯನ್ನಾದರೂ ನಡೆಸಿ ಕಳ್ಳತನ ಮಾಡುತ್ತದೆ. ಈ ವಿಚಾರದಲ್ಲಿ ಬವಾಶವರಿಯಾ ಗ್ಯಾಂಗುಇನದ್ದು ಇರಾನಿ ಗ್ಯಾಂಗಿಗಿಂತಲೂ ನಟೋರಿಟಿ ತುಸು ಹೆಚ್ಚೇ.
ಕರ್ನಾಟದಲ್ಲೂ ಕರಿನೆರಳು
ಇದೀಗ ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯದ ತುಂಬಾ ಈ ಗ್ಯಾಂಗ್ ಪಸರಿಸಿದೆ. ಒಳಪ್ರದೇಶಗಳಲ್ಲಿ ನೆಲೆಯನ್ನೂ ಕಂಡುಕೊಂಡಿದೆ. ಈ ತಂಡವನ್ನು ಬಗ್ಗು ಬಡಿಯಲು ಪೊಲೀಸ್ ಆಯುಕ್ತರಾದ ಎಂಎನ್ ರೆಡ್ಡಿಯವರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಸೂಪರ್ ಕಾಪ್‌ಗಳ ಸಿಸಿಬಿ ತಂಡವೂ ಅಖಾಡಕ್ಕಿಳಿದಿದೆ. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಹರಿಶೇಖರನ್ ಅವರೂ ಈ ಬಗ್ಗೆ ವ್ಯಾಪಕ ಕ್ರಮ ಕೈಗೊಳ್ಳುತ್ತಿದ್ದಾರೆ. ತುಸು ಕಾಲದ ಬಳಿಕ ಸಡಿಲ ಬಿಡದೇ ಕಾರ್ಯಾಚರಣೆ ಮಾಡಿದರೆ ನಾಗರಿಕರ ನೆಮ್ಮದಿ ಉಳಿದೀತು.
ಗೋವಾದಲ್ಲೂ ಗಂಡಾಗುಂಡಿ
ಇರಾನಿ ಗ್ಯಾಂಗ್’ ಎಂಬ ಹೆಸರಿನಲ್ಲಿ ಪಾತಕಿಗಳು ದೇಶಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಯಾ ಭಾಗದ ಸ್ಥಳೀಯ ಪೊಲೀಸ್ ವೇಷ ಧರಿಸಿ ವೃದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಆಭರಣ ದೋಚುವ ಪ್ರಕರಣಗಳು ನಾನಾ ರಾಜ್ಯಗಳಲ್ಲಿ ನಿತ್ಯೋತ್ಸವ ಆಚರಿಸುತ್ತಿವೆ. ಬೈಕ್ ಮೂಲಕ ದಾಂಗುಡಿ ಇಡುವ ಕಳ್ಳರು, ಸಾರ್ವಜನಿಕರಲ್ಲಿ ಕಳ್ಳರ ಬಗ್ಗೆ ಎಚ್ಚರಿಕೆ ಮೂಡಿಸುವ ನಾಟಕವಾಡುತ್ತಾರೆ. ನಿಮ್ಮ ಆಭರಣ, ನಗ ನಾಣ್ಯಗಳನ್ನು ಕರ್ಚೀಫಿನಲ್ಲಿ ಕಟ್ಟಿಡಿ. ನಾವು ನಿಮಗೆ ರಕ್ಷಣೆ ಒದಗಿಸುತ್ತೇವೆ ಎಂದು ನಂಬಿಸಿ ಬಿಡುತ್ತಾರೆ. ನಕಲಿ ಆಭರಣಗಳನ್ನು ಇಟ್ಟು, ಅಸಲಿ ಮಾಲು ಎತ್ತಿಕೊಂಡು ಗಾಯಬ್ ಆಗಿ ಬಿಡುತ್ತಾರೆ.
ಇಂಥಾ ಭಯಾನಕ ಗ್ಯಾಂಗ್ ಗೋವಾ ರಾಜ್ಯದ ಜೊತೆಗೆ ನೆರೆಯ ಕರ್ನಾಟಕ, ಮಹಾರಾಷ್ಟ್ರದಲ್ಲೂ ಬಲವಾದ ನೆಟ್ ವರ್ಕ್ ಹೊಂದಿದೆ. ಇಂಥಾ ದರೋಡೆ ಪ್ರಕರಣದಲ್ಲಿ ಭಾಗಿಯಾಗೋ ಸದಸ್ಯರಿಗೆ ಈ ಗ್ಯಾಂಗ್ ಡಾನ್ ಗಳು ದಿನವೊಂದಕ್ಕೆ ಸಾವಿರಾರು ರೂಪಾಯಿಗಳನ್ನು ಕೊಡುತ್ತಾರೆ. ಕೆಲ ವರ್ಷಗಳ ಹಿಂದೆ ಬಲೂಚಿಸ್ತಾನದಿಂದ ಬಂದ ಬುಡಕಟ್ಟು ಜನಾಂಗದವರು ದಕ್ಷಿಣ ಭಾರತದಲ್ಲಿ ಕಾಲೋನಿಗಳಲ್ಲಿ ಬದುಕಲಾರಂಭಿಸಿದ್ದರು. ಪುಣೆ, ಔರಂಗಾಬಾದ್, ಅಂಬರ್ ನಾಥ್ ಹಾಗೂ ಬೀದರ್ ಪ್ರದೇಶದಲ್ಲಿ ಈ ಜನಾಂಗ ಹೆಚ್ಚಾಗಿ ಈವತ್ತಿಗೂ ಕಂಡು ಬರುತ್ತದೆ. ಪುಣೆ, ಸಿಂಧುದುರ್ಗ, ಕರ್ನಾಟಕದ ಪೊಲೀಸರ ನೆರವಿನಿಂದ ಇರಾನಿ ಗ್ಯಾಂಗ್‌ನ ದುಷ್ಕೃತ್ಯಗಳನ್ನು ಮಟ್ಟ ಹಾಕಲು ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರಾದರೂ ಈ ಕ್ಷಣಕ್ಕೂ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೈಚಳಕ ತೋರಿಸುತ್ತಿದೆ.