ಡಾರ್ಲಿಂಗ್ ಪ್ರಭಾಸ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಡೆಡ್ ಸಿನಿಮಾಗಳ ಪೈಕಿ `ಕಲ್ಕಿ 2898ಎಡಿ’ ಕೂಡ ಒಂದು. ಅಚ್ಚರಿ ಅಂದರೆ ಈ ಚಿತ್ರಕ್ಕಾಗಿ ಬರೀ ದಕ್ಷಿಣ ಭಾರತವಲ್ಲ ಇಡೀ ವಿಶ್ವ ಸಿನಿದುನಿಯಾವೇ ಕಾದು ಕುಳಿತಿದೆ. ಅಮೆರಿಕದಲ್ಲಿ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಸಮಾರಂಭದಲ್ಲಿ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ‘ಕಲ್ಕಿ 2898 ಎಡಿ’ ಚಿತ್ರತಂಡ ಹೊಸ ದಾಖಲೆ ಬರೆದಿದೆ. ಕೇವಲ ಒಂದು ಕಾಲು ನಿಮಿಷದ ಗ್ಲಿಂಪ್ಸ್ ಮೂಲಕವೇ `ಕಲ್ಕಿ’ ಚಿತ್ರತಂಡ ಆಲ್ ಓವರ್ ಇಂಡಿಯಾ ಕಲಾಭಿಮಾನಿಗಳ ಕಣ್ಣರಳಿಸಿದೆ. ಹೀಗಿರುವಾಗಲೇ ಅದೊಂದು ಸುದ್ದಿ ಸಮಸ್ತ ಸಿನಿಮಾ ಪ್ರೇಮಿಗಳನ್ನ ಕಣ್ಣುಜ್ಜಿಕೊಳ್ಳುವಂತೆ ಮಾಡಿದೆ. ಕಲ್ಕಿಗೆ ಮೌಳಿ ಪವರ್ ಎನ್ನುವ ಸುದ್ದಿ ಪ್ರೇಕ್ಷಕ ಮಹಾಷಯರನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ಅಷ್ಟಕ್ಕೂ, ಈ ಸುದ್ದಿ ಎಷ್ಟು ನಿಜ? ಎಷ್ಟು ಸುಳ್ಳೋ ಗೊತ್ತಿಲ್ಲ. ಆದರೆ, `ಕಲ್ಕಿ 2898ಎಡಿ’ ಚಿತ್ರದಲ್ಲಿ ಎಸ್.ಎಸ್.ರಾಜಮೌಳಿ ಸ್ಪೆಷಲ್ ಅಪಿಯರೆನ್ಸ್ ಇರುತ್ತೆಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಸೇಲ್ ಆಗ್ತಿದೆ. ನಿರ್ದೇಶಕ ನಾಗ್ ಅಶ್ವಿನ್ ಅವರು ರಾಜಮೌಳಿಯವರನ್ನು ಅಪ್ರೋಚ್ ಮಾಡಿರುವುದಾಗಿ, ಶೀಘ್ರದಲ್ಲೇ ದೃಶ್ಯಬ್ರಹ್ಮ `ಕಲ್ಕಿ’ ತಂಡ ಸೇರಿಕೊಳ್ಳುವುದಾಗಿಯೂ ಚರ್ಚೆಯಾಗ್ತಿದೆ. ಒಂದ್ವೇಳೆ ಈ ಸುದ್ದಿ ನಿಜ ಆದರೆ ಅಮರೇಂದ್ರ ಬಾಹುಬಲಿಯ `ಕಲ್ಕಿ’ಗೆ ವಿಶೇಷವಾದ ಶಕ್ತಿ ಬರುವುದಂತೂ ಸತ್ಯ.
ನಿಮಗೆಲ್ಲ ಗೊತ್ತಿರುವಂತೆ ಪ್ರಭಾಸ್ ಸೋಲಿನ ಸುಳಿಗೆ ಸಿಲುಕಿದ್ದಾರೆ. ಬಾಹುಬಲಿ ನಂತರ ತೆರೆಗೆ ಬಂದ ಸಾಹೋ, ರಾಧೆಶ್ಯಾಮ್, ಆದಿಪುರುಷ್ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಮುಗ್ಗರಿಸಿದ್ದರಿಂದ ಅಮರೇಂದ್ರ ಬಾಹುಬಲಿ ಅಂಗಾತ ಮಲಗುವಂತಾಗಿದೆ. ಸದ್ಯ ಸಲಾರ್ ಹಾಗೂ ಕಲ್ಕಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಡಾರ್ಲಿಂಗ್, ಒಂದೇ ಒಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಹೊತ್ತಲ್ಲಿ ಶಿಷ್ಯನನ್ನು ಕೈಹಿಡಿಯಲು ಗುರು ರಾಜಮೌಳಿ ಬಂದೇ ಬರುತ್ತಾರೆನ್ನುವ ಭರವಸೆ ಅಭಿಮಾನಿಗಳದ್ದು.
ಅಷ್ಟಕ್ಕೂ, ಮೌಳಿ ಸಾಹೇಬ್ರಿಗೆ ನಟನೆಯೇನು ಹೊಸದಲ್ಲ. ಈ ಹಿಂದೆ, ಮಗಧೀರ, ಬಾಹುಬಲಿ, ಆರ್ ಆರ್ ಆರ್‍ನಲ್ಲಿ ಮೌಳಿ ಬಣ್ಣ ಹಚ್ಚಿದ್ದಾರೆ. ಮಾಸ್ಟರ್ ಸ್ಟೋರಿ ಟೆಲ್ಲರ್ ಪಟ್ಟಕ್ಕೇರಿರುವ ಮೌಳಿ ಬಾಸು, ಮುಖಕ್ಕೆ ಬಣ್ಣ ಹಚ್ಚಿಯೂ ಕಮಾಲ್ ಮಾಡಿದ್ದಾರೆ. ಹೀಗಾಗಿಯೇ, `ಕಲ್ಕಿ’ ಬಳಗ ದೃಶ್ಯಬ್ರಹ್ಮನಿಗೆ ಗಾಳ ಹಾಕಿರಬಹುದು. ಕ್ಯಾಮಿಯೋ ರೋಲ್ ಗಾಗಿ ಜಕ್ಕಣ್ಣನಿಗೆ ರೆಡ್‍ಕಾರ್ಪೆಟ್ ಹಾಸಿರಬಹುದು ಎನ್ನುವ ಚರ್ಚೆ ಎಲ್ಲಾ ಕಡೆ ಶುರುವಾಗಿದೆ.
ಅಂದ್ಹಾಗೇ, `ಕಲ್ಕಿ 2898ಎಡಿ’ ಎಫಿಕ್ ಸೈನ್ಸ್ ಫಿಕ್ಷನ್ ಸಿನಿಮಾ. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವು ದಿಗ್ಗಜರು ಸಮಾಗಮ ಇಲ್ಲಾಗಿದೆ. ದುಲ್ಕರ್ ಸಲ್ಮಾನ್ ಸ್ಪೆಷಲ್ ರೋಲ್ ನಲ್ಲಿ ಕಾಣಸಿಗ್ತಾರೆನ್ನುವ ಸುದ್ದಿ ಇದೆ. ಸುಮಾರು 600 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ತಯ್ಯಾರಾಗುತ್ತಿರುವ ಈ ಸಿನಿಮಾ, ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಅತೀ ದುಬಾರಿ ಚಿತ್ರವೆಂಬ ಖ್ಯಾತಿ ಪಡೆದಿದೆ. ತೆಲುಗು ಹಾಗೂ ಹಿಂದಿ ಎರಡು ಭಾಷೆಯಲ್ಲಿ ಏಕಕಾಲಕ್ಕೆ ತಯ್ಯಾರಾಗುತ್ತಿದ್ದು, ಇಂಟರ್ ನ್ಯಾಷನಲ್ ಟೆಕ್ನಿಷಿಯನ್ಸ್‍ಗಳು ಈ ಸಿನಿಮಾಗಾಗಿ ವರ್ಕ್ ಮಾಡ್ತಿದ್ದಾರೆ. ಮಹಾನಟಿ ಖ್ಯಾತಿಯ ಅಶ್ವಿನ್ ನಾಗ್ ನಿರ್ದೇಶನ ಚಿತ್ರಕ್ಕಿದ್ದು, ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ `ಕಲ್ಕಿ’ ಕಣ್ಣಿಗೆ ಕುಕ್ಕುವ ಹಾಗೇ ತಯ್ಯಾರಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜನವರಿ 12 2024ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.