ಕಳೆಗ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿಜೇತ, ಕನ್ನಡದ ರಾಕ್ ಸ್ಟಾರ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಅಭಿನಯದ ಹೊಸ ಸಿನಿಮಾಕ್ಕೆ ‘ಅಧಿಪತ್ರ’ ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಅನೌನ್ಸ್ ಆಗಿತ್ತು.ನಟ ರೂಪೇಶ್ ಜನ್ಮದಿನದ ಅಂಗವಾಗಿ ಬಿಡುಗಡೆಯಾಗಿದ್ದ ‘ಅಧಿಪತ್ರ’ ಟೈಟಲ್ ಪೋಸ್ಟರ್ ಸಿನಿಮಾ ಪ್ರಿಯರಲ್ಲಿ ಒಂದಷ್ಟು ಕುತೂಹಲ ಮೂಡಿಸಲೂ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಈಗ ‘ಅಧಿಪತ್ರ’ ಸಿನಿಮಾದ ಅಂಗಳದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಅದೇನೆಂದರೆ, ‘ಅಧಿಪತ್ರ’ ಸಿನಿಮಾಕ್ಕೆ ಈಗ ಜಾಹ್ನವಿ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಅಧಿಪತ್ರ’ ಸಿನಿಮಾ ಮೂಲಕ ಜಾಹ್ನವಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಸುದ್ದಿ ಮನೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸಿದ್ದ ಜಾಹ್ನವಿ, ಕನ್ನಡದ ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋ ನಲ್ಲಿ ತನ್ನ ಅಭಿನಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಈಗ ‘ಅಧಿಪತ್ರ’ ಸಿನಿಮಾದ ನಾಯಕಿಯಾಗಿ ಜಾಹ್ನವಿ ಕಿರುತೆರೆಯಿಂದ ಹಿರಿತೆರೆಗೆ ಅಡಿಯಿಡುತ್ತಿದ್ದಾರೆ.
‘ಅಧಿಪತ್ರ’ ಸಿನಿಮಾಕ್ಕೆ ಚಯನ್ ಶೆಟ್ಟಿ ಎಂಬುವರು ನಿರ್ದೇಶನ ಮಾಡುತ್ತಿದ್ದು, ‘ಕೆ. ಆರ್ ಸಿನಿಕಂಬೈನ್ಸ್’ ಬ್ಯಾನರ್ ನಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ. ‘ಅಧಿಪತ್ರ’ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿದ ಸಿನಿಮಾವಾಗಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದ ‘ಅಧಿಪತ್ರ’ ಸಿನಿಮಾವನ್ನು ಮಂಗಳೂರು, ಉಡುಪಿ ಸುತ್ತಮುತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇದೇ ಆ. 23 ರಂದು ‘ಅಧಿಪತ್ರ’ ಸಿನಿಮಾದ ಮುಹೂರ್ತ ಸಮಾರಂಭ ನಡೆಯಲಿದ್ದು, ಇದೇ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.