ಹತ್ತಾರು ರೊಮ್ಯಾಂಟಿಕ್ ಸಿನಿಮಾಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಲ್ಲಿ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದನ್ನು ಮುಡಿಗೇರಿಸಿಕೊಂಡವರು ಬಾಲಿವುಡ್ ನ ಕಿಂಗ್ ಖಾನ್ ಖ್ಯಾತಿಯ ನಟ ಶಾರುಖ್ ಖಾನ್.ಇದೀಗ ಶಾರುಖ್ ಖಾನ್ ಅಭಿನಯದ ‘ಜವಾನ್’ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಆ ಸಿನಿಮಾದ ‘ಹಯ್ಯೋಡಾ’ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ.
ಅನಿರುದ್ಧ್ ರವಿಚಂದರ್ ಸಂಯೋಜಿಸಿರುವ ಈ ಹಾಡಿಗೆ ಅನಿರುದ್ಧ್ ಮತ್ತು ಪ್ರಿಯಾ ಮಾಲಿ ಧ್ವನಿಯಾಗಿದ್ದಾರೆ. ಈ ಸುಮಧುರ ರೊಮ್ಯಾಂಟಿಕ್ ಹಾಡಿಗೆ ವಿವೇಕ್ ಸಾಹಿತ್ಯ ರಚಿಸಿದ್ದಾರೆ. ಇದೇ ಮೊದಲ ಬಾರಿಗೆ ತೆರೆಯ ಮೇಲೆ ಶಾರುಖ್ ಖಾನ್ ಮತ್ತು ನಯನತಾರಾ ಒಟ್ಟಾಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನ ಜನಪ್ರಿಯ ಕೊರಿಯೋಗ್ರಾಫರ್ ಆಗಿರುವಂತಹ ಫರಾ ಖಾನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದರೆ, ಗೌರವ್ ವರ್ಮಾ ಸಹನಿರ್ಮಾಪಕರಾಗಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶಿಸಿರುವ ಈ ಚಿತ್ರವು ಜಗತ್ತಿನಾದ್ಯಂತ ಸೆಪ್ಟೆಂಬರ್ 7ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಸದ್ಯ ಬಿಡುಗಡೆಯಾಗಿರುವ ‘ಜವಾನ್’ ಸಿನಿಮಾದ ‘ಹಯ್ಯೋಡಾ’ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.