ಖ್ಯಾತ ಲೇಖಕ, ಹೆಸರಾಂತ ಗೀತ ರಚನೆಕಾರ ಜಯಂತ ಕಾಯ್ಕಿಣಿ(Jayant Kaikini) ಬರವಣಿಗೆಯ ಸವಿ ಆಸ್ವಾದಿಸದೇ ಇರುವವರು ಯಾರಿದ್ದಾರೆ ಹೇಳಿ. ಇಂತಹ ಚಿರಪರಿಚಿತ ಬರಹಗಾರರ ಮನೆಯಂಗಳದಿಂದ ಸಂಗೀತದ ಸಪ್ತ ಸ್ವರಗಳನ್ನು ಉಣ ಬಡಿಸಲು ಯುವ ಪ್ರತಿಭೆಯೊಂದು ಚಂದನವನಕ್ಕೆ ಬರುತ್ತಿದೆ. ಹೌದು, ಜಯಂತ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ(Ritwik Kaikini) ಸಂಗೀತ ನಿರ್ದೇಶಕನಾಗಿ ಹೊರ ಹೊಮ್ಮುತ್ತಿದ್ದಾರೆ. ರೂಪ ರಾವ್ ನಿರ್ಮಾಣದಲ್ಲಿ ಸಹದೇವ್ ಕೆಲವಡಿ ನಿರ್ದೇಶನದ ʻಕೆಂಡʼ(Kenda) ಸಿನಿಮಾ ಮೂಲಕ ಈ ಯುವ ಪ್ರತಿಭೆ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಬಗ್ಗೆ ರಿತ್ವಿಕ್(Ritwik Kaikini) ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮನೆಯಲ್ಲಿ ಸಂಗೀತ ಕಲಿಕೆಗೆ ಸೃಷ್ಟಿಯಾಗಿದ್ದ ಪೂರಕ ವಾತಾವರಣ, ತಂದೆ, ತಾಯಿ, ಸಹೋದರಿಯ ಉತ್ತೇಜನ ಎಲ್ಲವೂ ಸಂಗೀತದ ಬಲವಾದ ಮೋಡಿಗೆ ಒಳಗಾಗುವಂತೆ ಮಾಡಿತು. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವಾಗ ಅನುಭವಿ ಗಿಟಾರ್ ವಾದಕ ಹಮೀದ್ ಹಸನ್ ಜಿ ಮಾರ್ಗದರ್ಶನದಲ್ಲಿ ಗಿಟಾರ್ ಕಲಿಕೆಗೆ ಆರಂಭಿಸಿದೆ. ಆ ಕಲಿಕೆ ಜೊತೆ ಜೊತೆಗೆ ಅವರಿಂದ ಸಂಗೀತದ ಬಗ್ಗೆ ಹಲವು ವಿಷಗಳನ್ನು ತಿಳಿದುಕೊಂಡೆ. ಇದೆಲ್ಲವೂ ಸಂಗೀತ ಸಂಯೋಜನೆಯತ್ತ ಒಲವು ಮೂಡಿಸಿತು ಎನ್ನುತ್ತಾರೆ ರಿತ್ವಿಕ್.
ಸೋಶಿಯಲ್ ಮೀಡಿಯಾದಲ್ಲಿ ನಾನು ಸಂಯೋಜಿಸಿದ್ದ ಕೆಲ ಸಂಗೀತದ ತುಣುಕುಗಳನ್ನು ಗಮನಿಸಿ ರೂಪ(Roopa Rao) ರಾವ್ ʻಕೆಂಡʼ(Kenda) ಸಿನಿಮಾಗೆ ಆಹ್ವಾನ ನೀಡಿದ್ರು. ಸಿನಿಮಾ ಕಥೆ, ಅದರಲ್ಲಿದ್ದ ಹೊಸತನ ಎಲ್ಲವೂ ಹಿಡಿಸಿ ಸಂಗೀತ ಸಂಯೋಜನೆಗೆ ಒಪ್ಪಿಕೊಂಡೆ. ಈ ಚಿತ್ರ `ಸಿನಿಮಾ ಸಂಗೀತದ’ ಹಲವು ಮಜಲುಗಳನ್ನು ಕಲಿಸಿಕೊಟ್ಟಿದೆ. ಹಿನ್ನೆಲೆ ಸಂಗೀತ ಮಾಡುವಾಗ ಸರಿ ತಪ್ಪುಗಳ ಅಮೂಲ್ಯ ಪಾಠವೂ ಸಿಕ್ಕಿದೆ ಎಂದು ಮೊದಲ ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ.
ತಂದೆಯವರ ವ್ಯಕ್ತಿತ್ವ ನನ್ನ ಹಾಗೂ ಸಹೋದರಿ ಮೇಲೆ ಅಪಾರ ಪ್ರಭಾವ ಬೀರಿದೆ. ಅವರಿಂದಾಗಿಯೇ ಇಂದು ಬೇರೆ ಬೇರೆ ಕ್ಷೇತ್ರದ ಮೇಲೆ ಏಕಕಾಲದಲ್ಲಿ ಗಮನ ಹರಿಸಲು ಸಾಧ್ಯವಾಗಿದೆ. ಕಲೆ ಬಗ್ಗೆ ವಿಶೇಷ ಆಸಕ್ತಿ ಬೆಳೆದು ಅದರ ಭಾಗವಾಗಿದ್ದೇವೆ ಎಂದು ಹೆಮ್ಮೆ ಪಡುತ್ತಾರೆ ರಿತ್ವಿಕ್ ಕಾಯ್ಕಿಣಿ(Ritwik Kaikini). ವೃತ್ತಿಯಲ್ಲಿ ಫಿಲಾಸಫಿ ಆಫ್ ಸೌಂಡ್ & ಸೈನ್ಸ್ ಕಮ್ಯುನಿಕೇಶನ್ ಶಿಕ್ಷಕನಾಗಿರುವ ಇವರಿಗೆ ಪ್ರವೃತ್ತಿಯಲ್ಲಿ ಸಂಗೀತ ಕ್ಷೇತ್ರದಲ್ಲೂ ಮುಂದುವರೆಯಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ. ಹಾಡುಗಳ ಸಂಯೋಜನೆ, ವಿಭಿನ್ನ ರೀತಿಯ ಹಿನ್ನೆಲೆ ಸಂಗೀತದ ಜೊತೆಗೆ ಬೇರೆ ದೇಶಗಳ ಜನಪದ ಸಂಗೀತಗಾರರೊಂದಿಗೆ ಕೆಲಸ ಮಾಡುವ ಕನಸು ಇವರದ್ದು.