ಪವರ್ ಸ್ಟಾರ್ ಪುನೀತ್‌ರಾಜಕುಮಾರ್ ನಟನೆಯ ’ಪೃಥ್ವಿ’, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ಉಪೇಂದ್ರ ಅಭಿನಯದ ’ಕಬ್ಜ’ ಮುಂತಾದ ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದ ಜಾನ್ ಕೊಕ್ಕೆನ್ ಈಗ ‘ದಿ ಫ್ರೀ ಲ್ಯಾನ್ಸರ್’ ವೆಬ್ ಸರಣಿಯ ಮೂಲಕ ಓಟಿಟಿ ಗೂ ಎಂಟ್ರಿಯಾಗಿದ್ದಾರೆ.
ಶಿರಿಶ್ ಥೋರಟ್ ಅವರ ’ಎ ಟಿಕೆಟ್ ಟು ಸಿರಿಯಾ’ ಪುಸ್ತಕವನ್ನು ಆಧರಿಸಿದ ಈ ವೆಬ್ ಸೀರಿಸ್ ಅನ್ನು ಭಾವ್ ಧುಲಿಯಾ ನಿರ್ದೇಶನದಲ್ಲಿ, ‘ಫ್ರೈಡೇ ಸ್ಟೊರಿ ಟೆಲ್ಲರ‍್ಸ್’ ನಿರ್ಮಾಣ ಮಾಡಿದೆ. ಸಿರಿಯಾದ ಯುದ್ದ ಹಾನಿಗೊಳಗಾದ ಪ್ರತಿಕೂಲ ವಾತಾವರಣದಲ್ಲಿ ಬಂದಿಯಾಗಿರುವ ಯುವತಿ, ಅವಳು ಈ ಸಾವಿನ ಪ್ರಪಂಚದಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬುದರ ಸುತ್ತ ಈ ‘ದಿ ಫ್ರೀ ಲ್ಯಾನ್ಸರ್’ ಸರಣಿಯ ಕಥೆ ಸಾಗುತ್ತದೆ.
‘ದಿ ಫ್ರೀ ಲ್ಯಾನ್ಸರ್’ ಸರಣಿಯಲ್ಲಿ ಜಾನ್ ಕೊಕ್ಕೆನ್ ಗುಪ್ತಚರ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಪ್ರಮುಖ ಪಾತ್ರದಲ್ಲಿ ಮೋಹಿತ್ ರೈನಾ, ಅನುಪಮ್ ಖೇರ್, ಸುಶಾಂತ್‌ಸಿಂಗ್, ಗೌರಿ ಬಾಲಾಜಿ, ನವನೀತ್ ಮಲಿಕ್, ಮಂಜಿರಿಫಡ್ನಿಸ್, ಸಾರಾಜೇನ್ ಡಯಾಸ್ ಮುಂತಾದವರು ನಟಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ನಟ ಜಾನ್ ಕೊಕ್ಕೆನ್, ‘ಈ ಥರದ ಪಾತ್ರ ಖುಷಿ ತಂದಿದೆ. ಮೃದು ಮಾತು, ಹೆಚ್ಚು ದೇಹ ಭಾಷೆ ಇರುವುದರಿಂದ ಸಂಪೂರ್ಣ ಹೊಸತನದಿಂದ ಕೂಡಿತ್ತು. ಈ ಪಾತ್ರಕ್ಕೆ ನಟ ಕೇ ಕೇ ಮೆನನ್ ಅವರಿಂದ ಪ್ರೇರಣೆ ಪಡೆದಿದ್ದೇನೆ. ಅವರ ನುಡಿ, ನಗುವ ರೀತಿ ಎಲ್ಲವನ್ನೂ ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ. ಅಂದಹಾಗೆ, ‘ದಿ ಫ್ರೀ ಲ್ಯಾನ್ಸರ್’ ಸರಣಿ ಸೆಪ್ಟಂಬರ್ 1ರಿಂದ ಡಿಸ್ನಿ ಪ್ಲಸ್ ಮತ್ತು ಹಾಟ್‌ಸ್ಟಾರ್ ಓಟಿಟಿಯಲ್ಲಿ ಪ್ರಸಾರವಾಗುತ್ತಿದೆ.