ಒಲವೇ ಮಂದಾರ, ಬೆಲ್ ಬಾಟಮ್, ಬ್ಯೂಟಿಫುಲ್ ಮನಸುಗಳಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಜಯತೀರ್ಥ ಈ ವಾರ `ಕೈವ’ ಸಿನಿಮಾವನ್ನ ಕಲಾಭಿಮಾನಿಗಳ ಮಡಿಲಿಗೆ ಹಾಕಿದ್ದಾರೆ. 1983ರಲ್ಲಿ ನಡೆದ ಸತ್ಯ ಘಟನೆಯನ್ನ ಸಿನಿಮಾ ಪ್ರೇಮಿಗಳ ಮುಂದೆ ಹರವಿಟ್ಟಿದ್ದಾರೆ. ಗಂಗಾರಾಂ ಕಟ್ಟಡ ದುರಂತ, ತಿಗಳರಪೇಟೆಯ ಭಯಾನಕ ರಕ್ತಪಾತ, ಕರಗದ ವೈಭವ, ದ್ವೇಷದ ಜ್ವಾಲೆ ಜೊತೆಗೆ ಅಪರೂಪದ ಪ್ರೇಮಕಥೆ `ಕೈವಾ’ ಮೂಲಕ ಅನಾವರಣಗೊಂಡಿದ್ದು ಪ್ರೇಕ್ಷಕಪ್ರಭು ಬಹುಪರಾಕ್ ಹಾಕ್ತಿದ್ದಾರೆ.
ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆನಾ ನಿರ್ದೇಶಕರು ಭೂಗತ ಜಗತ್ತಿನೊಂದಿಗೆ ಬೆಸೆದು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸತ್ಯಕಥೆಗೆ ಮಾಸ್ ಟಚ್ ಕೊಟ್ಟು ಜಯತೀರ್ಥ ಕೈವಾ ಸಿನಿಮಾ ಮಾಡಿದ್ದಾರೆ. ಶೋಕ್ದಾರ್ ಧನ್ವೀರ್ `ಕೈವ’ ಪಾತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದು, ಸಲ್ಮಾ ಪಾತ್ರದಲ್ಲಿ ಜೊತೆಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘಾಶೆಟ್ಟಿ ಗಮನ ಸೆಳೆದಿದ್ದಾರೆ. ದಿನಕರ್ ತೂಗುದೀಪ್, ರಾಘು ಶಿವಮೊಗ್ಗ, ಉಗ್ರಂ ಮಂಜು, ರಮೇಶ್ ಇಂದಿರಾ, ಮಹಂತೇಶ್ ಹಿರೇಮಠ್, ನಂದಗೋಪಾಲ್, ಗಿರಿರಾಜ್ ಪಾತ್ರವರ್ಗದಲ್ಲಿದ್ದು, ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶ್ವೇತಪ್ರಿಯ ಅವರ ಛಾಯಾಗ್ರಹಣ ಅಜನೀಶ್ ಲೋಕನಾಥ್ ಕೈವಾ ಸಿನಿಮಾದ ತೂಕ ಹೆಚ್ಚಿಸಿದೆ. ಒಂದೇ ಮಾತಲ್ಲಿ ಹೇಳ್ಬೇಕು ಅಂದ್ರೆ ಕೈವಾ ಪಕ್ಕ ಪೈಸಾ ವಸೂಲ್ ಸಿನಿಮಾ..ಈ ವರ್ಷದ ಬೆಸ್ಟ್ ಎಂಟರ್ ಟೈನರ್ ಅನ್ನೋದು ಸಿನಿಮಾ ನೋಡಿದವರ ಓಪನಿಯನ್.
ಅಂದ್ಹಾಗೇ, ಬೆಲ್ ಬಾಟಮ್ ಸಿನಿಮಾ ಟೈಮ್ನಲ್ಲಿ ನಿರ್ದೇಶಕ ಜಯತೀರ್ಥ ಅವರು ಚಿತ್ರೀಕರಣ ನಿಮಿತ್ತ ಒಮ್ಮೆ ಶವಾಗಾರಕ್ಕೆ ಭೇಟಿಕೊಡ್ತಾರೆ. ಆ ಟೈಮ್ ನಲ್ಲಿ ಪ್ರೇಮಪ್ರಕರಣ ಸಂಬಂಧ ಭೀಕರ ಹತ್ಯೆಯಾಗಿರುವವರ ಮರಣೋತ್ತರ ಪರೀಕ್ಷೆ ನಡೆಯುತ್ತಿರುತ್ತೆ. ಈ ಬಗ್ಗೆ ಸಹಜವಾಗಿ ವಿಚಾರಣೆ ನಡೆಸಿದ ನಿರ್ದೇಶಕರು ಕೊನೆಗೆ ಆ ಮರ್ಡರ್ ಮಿಸ್ಟ್ರಿಯ ಬೆನ್ನತ್ತಿ ಹೊರಡ್ತಾರೆ. ಆಗ ಹುಟ್ಟಿಕೊಂಡಿದ್ದೇ `ಕೈವ’ ಕಥೆಯಂತೆ. ಈಗಲೂ `ಕೈವ’ ಕಥೆಗೆ ಸ್ಪೂರ್ತಿಯಾಗಿರುವ ಆ ಜೋಡಿ ಬದುಕಿದೆಯಂತೆ. ಆದರೆ, ಆ ಜೋಡಿ ಯಾರು? ಏನು? ಎಲ್ಲಿದ್ದಾರೆ? ಹೇಗಿದ್ದಾರೆ? ಇದೆಲ್ಲವನ್ನೂ ಗೌಪ್ಯವಾಗಿಟ್ಟಿದ್ದಾರೆ. ಹೆಸರು ಬದಲಾಯಿಸಿ `ಕೈವ’ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಿನಿಮಾಗೆ ಸ್ಪೂರ್ತಿಯಾದ ರಿಯಲ್ ಲೈಫ್ ಜೋಡಿಯ ಪ್ರೇಮಕಥೆ ತಿಳಿದುಕೊಳ್ಳಬೇಕು ಅಂದರೆ ಚಿತ್ರಮಂದಿರಕ್ಕೆ ಹೋಗಿ ನೀವೊಮ್ಮೆ ಸಿನಿಮಾ ನೋಡಲೇಬೇಕು.
ಇಂಟ್ರೆಸ್ಟಿಂಗ್ ಅಂದರೆ ಈ ಸಿನಿಮಾನ ಅಪ್ಪು ಸರ್ ಮಾಡಬೇಕಿತ್ತು. ನಿರ್ದೇಶಕ ಜಯತೀರ್ಥ ಅವರು ಕಥೆ ಕೂಡ ಹೇಳಿಯಾಗಿತ್ತು. ಆದರೆ, ಆ ವಿಧಿಯ ಕೈವಾಡ ಬೇರೆಯದ್ದೇ ಆಗಿದ್ದರಿಂದ ದೊಡ್ಮನೆ ರಾಜಕುಮಾರ ಈ ಭೂಗತ ಜಗತ್ತಿನ ಪ್ರೇಮಕಥೆಗೆ ಬಣ್ಣ ಹಚ್ಚಲಾಗಲಿಲ್ಲ. ಕೊನೆಗೆ ಆ ಸಿನಿಮಾ ಧನ್ವೀರ್ ಕೈ ಸೇರಿತು. ಮಾಸ್ ಹೀರೋ ಆಗಿ ಮಗದೊಂದು ಮಜಲನ್ನು ನೋಡುವ ಅವಕಾಶ ಈ ಸಿನಿಮಾದಿಂದ ಸಿಗ್ತು. ಸದ್ಯ ಶೋಕ್ದಾರ್ ಕೈವನಾಗಿ ಖದರ್ ತೋರಿಸುತ್ತಿದ್ದಾರೆ. 80ರ ದಶಕದಲ್ಲಿ ತಯಾರಾಗಿರೋ ಕೈವ ಕಲಾಭಿಮಾನಿಗಳ ಗಮನ ಸೆಳೆಯುತ್ತಿದೆ. ಬಜಾರ್ ಹುಡುಗನ ನಯಾ ಖದರ್ ಗೆ ಬಹುಪರಾಕ್ ಹಾಕ್ತಿದೆ.