ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ(Suriya)ನಟನೆಯ ಮೋಸ್ಟ್ ಅವೈಟೆಡ್ ಚಿತ್ರ ʻಕಂಗುವʼ(Kanguva). ಸಿರುತೈ ಶಿವ ನಿರ್ದೇಶನದ ಈ ಚಿತ್ರ ಶೀರ್ಷಿಕೆಯಿಂದನೇ ಸಖತ್ ಸೌಂಡ್ ಮಾಡಿತ್ತು. ಅನಂತರ ಮೋಷನ್ ಪೋಸ್ಟರ್ ಹಾಗೂ ಗ್ಲಿಂಪ್ಸ್ನಿಂದ ಕಂಗುವ ಬರೀ ಕಾಲಿವುಡ್ ಪ್ರೇಕ್ಷಕರನ್ನ ಮಾತ್ರವಲ್ಲ ಸಮಸ್ತ ಸಿನಿಮಾ ಪ್ರೇಮಿಗಳನ್ನ ಕಣ್ಣರಳಿಸುವಂತೆ ಮಾಡಿತ್ತು. ಆದ್ರೀಗ ಬಿಡುಗಡೆಯಾಗಿರೋ ʻಕಂಗುವʼ (Kanguva) ಟೀಸರ್ ಇಡೀ ಚಿತ್ರಜಗತ್ತಿನ ನಿದ್ದೆಗೆಡಿಸಿದೆ. ಯಾರ್ರೀ ಕಂಗುವ ಅಂತ ಕಣ್ಣುಜ್ಜಿಕೊಂಡು ದಡಕ್ಕನೇ ಎದ್ದುಕೂರುವಂತೆ ಮಾಡಿದೆ.
ಹೌದು, ʻಕಂಗುವʼ (Kanguva) ಟೀಸರ್ ಭೀಕರ-ರಣಭಯಂಕರವಾಗಿದೆ. ಭೀಕರ ಕದನ, ರಣರಕ್ಕಸರ ಆರ್ಭಟ, ರಕ್ತದೋಕುಳಿ, ಹೆಣಗಳ ರಾಶಿಯನ್ನ ಹೊತ್ತು ಬಂದಿರೋ ʻಕಂಗುವʼ (Kanguva) ಟೀಸರ್ ನೋಡುಗರನ್ನ ಮಾತ್ರವಲ್ಲ ಖುದ್ದು ಸಿನಿಮಾಮಂದಿಯನ್ನೇ ಥಂಡಾ ಹೊಡೆಸುತ್ತಿದೆ. ಅದರಲ್ಲೂ ಕಾಲಿವುಡ್ ಸಿಂಘಂ ಸೂರ್ಯ (Suriya) ಅವ್ರ ಲುಕ್ಕಂತೂ ಕಲಾಭಿಮಾನಿಗಳನ್ನ ದಿಗ್ದಿಗ್ಭ್ರಾಂತರನ್ನಾಗಿ ಮಾಡುತ್ತಿದೆ. ಇನ್ನೂ ಅನಿಮಲ್ ಬಾಬಿ ಹಾಗೂ ಕಾಲಿವುಡ್ ಘಜಿನಿ ಮುಖಾಮುಖಿಯಾಗುವ ಸನ್ನಿವೇಶವಂತೂ ರೋಚಕವಾಗಿದೆ. ಎಷ್ಟರ ಮಟ್ಟಿಗೆ ಅಂದರೆ ಹೀಗಿಂದಲೇ ಸಿನಿಮಾಪ್ರೇಮಿಗಳು ಒಂಟಿಕಾಲಿನಲ್ಲಿ ನಿಂತು ʻಕಂಗುವʼ (Kanguva) ಗಾಗಿ ಕಾಯುವಷ್ಟು.
ʻಕಂಗುವʼ ಕೊಚ್ಚಾಮಿ ವಂಶದ ದೊರೆಯ ಕಥೆ. ಇಲ್ಲಿ ʻಕಂಗುವʼ ಪಾತ್ರವನ್ನ ಸೂರ್ಯ (Suriya) ನಿಭಾಯಿಸ್ತಿದ್ದಾರೆ. ದ್ವಿಪಾತ್ರದಲ್ಲಿ ಸಿಂಘಂ ಕಾಣಸಿಗ್ತಾರೆನ್ನುವ ಮಾಹಿತಿ ಇದೆ. ಸದ್ಯ ರಿಲೀಸ್ ಆಗಿರೋ ʻಕಂಗುವʼ ಝಲಕ್ನಲ್ಲಿ ಸೂರ್ಯ ಹಿಂದೆಂದೂ ಕಾಣದ ಅವತಾರ ತಾಳಿದ್ದಾರೆ. ಸೂರ್ಯ (Suriya) ಎದುರು ಬಾಲಿವುಡ್ ಬಾಬಿ ಡಿಯೋಲ್(Bobby Deol) ಘರ್ಜಿಸುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ನಲ್ಲಿ ಬಾಬಿ ಪಾತ್ರ ಎಷ್ಟು ಕ್ರೂರ ಅನ್ನೋದು ಗೊತ್ತಾಗ್ತಿದೆ. ದೇವಿಶ್ರೀ ಪ್ರಸಾದ್ (Devi Sri Prasad)ಕೊಟ್ಟಿರೋ ಮೈ ನವಿರೇಳಿಸೋ ಹಿನ್ನಲೆ ಸಂಗೀತ ʻಕಂಗುವʼ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇನ್ನೂ ಈ ಚಿತ್ರದ ಮೂಲಕ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ (Disha Patani)ತಮಿಳಿಗೆ ಪದಾರ್ಪಣೆ ಮಾಡಿದ್ದಾರೆ. ಜಗಪತಿ ಬಾಬು, ಯೋಗಿ ಬಾಬು, ಕೆ. ಎಸ್, ರವಿಕುಮಾರ್, ಕೋವೈ ಸರಳ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ತೂಕವಿದ್ದು, ಪ್ರತಿ ಪಾತ್ರದ ಕಾಸ್ಟ್ಯೂಮ್, ಅವ್ರ ಲುಕ್ಕು- ಗೆಟಪ್ ಗಮನ ಸೆಳೆಯುತ್ತಿದೆ. ಡಿಫರೆಂಟ್ ಆದಂತಹ ಸೆಟ್ಗಳು ಟೀಸರ್ನಲ್ಲಿ ಹೈಲೈಟ್ ಆಗಿವೆ.
ಎಲ್ಲರೂ ಪ್ಯಾನ್ ಇಂಡಿಯಾ ಕಬ್ಜ ಮಾಡಿಕೊಳ್ಳೋದಕ್ಕೆ ನೋಡಿದರೆ ಕಂಗುವ(Kanguva) ಟೀಮ್ ಹತ್ತು ಹೆಜ್ಜೆ ಮುಂದಿಟ್ಟು ಪ್ಯಾನ್ ವಲ್ರ್ಡ್ ಕಬಳಿಸೋ ಪ್ರಯತ್ನಲ್ಲಿದೆ. ಹೌದು, ಬರೋಬ್ಬರಿ 400 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿರೋ ಕಂಗುವ ಟೀಮ್ 2ಡಿ ಮತ್ತು 3ಡಿಯಲ್ಲಿ ಔಟ್ಫುಟ್ ತೆಗೆಸಿದ್ದಾರೆ. `ಕಂಗುವ'(Kanguva) ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವ್ರು, ಕಂಗುವ ಸಿನಿಮಾವನ್ನ 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ‘ಕಂಗುವ’ (Kanguva) ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್ ಆಗಿತ್ತು. ಆದರೆ ಲೋಕಸಭಾ ಚುನಾವಣೆ ನಿಗದಿ ಆಗಿರುವುದರಿಂದ ‘ಕಂಗುವ’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.