ಕನ್ನಡ ನಾಡು ಅನೇಕ ಪ್ರತಿಭಾನಿವಿತರು, ಪ್ರಾತಃಸ್ಮರಣೀಯರ ನೆಲೆವೀಡು. ಹುಡುಕುತ್ತಾ ಹೋದರೆ, ಒಂದು ಸಲಕ್ಕೆ ಕಟ್ಟಿ ಕೊಡಲಾಗದಷ್ಟು ಮಹಿನೀಯರು ಈ ನೆಲದಲ್ಲಿ ಬಾಳಿ ಬದುಕಿದ್ದಾರೆ. ಈ ಭೂಮಿ ಇರುವವರೆಗೂಊ ಸ್ಮರಿಸುವಂಥಾ ಮೌಲಿಕ ಕೊಡುಗೆಗಳನ್ನೂ ಕೊಟ್ಟು ಹೋಗಿದ್ದಾರೆ. ಅಧಿಕಾರ ಕೇಂದ್ರಕ್ಕೆ ಹೇಗಾದರೂ ನುಸುಳಿಕೊಂಡು, ತಮ್ಮ ಪ್ರತಿಭೆ ಮತ್ತು ಪಾಂಡಿತ್ಯವನ್ನು ಸ್ವಂತದ ಸಾಮ್ರಾಜ್ಯ ಕಟ್ಟಲು ಬಳಸಿಕೊಂಡವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈವತ್ತಿಗೂ ಅಂಥಾ ಸಂತಾನಿಗರ ಸಂಖ್ಯೆ ಸಾಕಷ್ಟಿದೆ. ಅಂಥವರೆಲ್ಲ ಆಯಾ ಕಾಲಘಟ್ಟದಲ್ಲಿ ಕಾಸು ಮಾಡಿಕೊಳ್ಳಬಹುದು, ಮೆರೆದಾಡಲೂ ಬಹುದು. ಆದರೆ ಇತಿಹಾಸಲ್ಲಿ ಕಸಗಳಿಗಿಂತ ಕಡೆಯಾಗಿ ಕಳೆದು ಹೋಗುತ್ತಾರಷ್ಟೆ. ಇಂಥವರ ನಡುವೆ ದೊಡ್ಡ ಹುದ್ದೆಗಳನ್ನು ಈ ನಾಡಿಗೆ ಸಹಕಾರಿಯಾಗುವಂತೆ ಬಳಸಿಕೊಂಡವರೂ ಇದ್ದಾರೆ. ಅಂಥವರನ್ನೆಲ್ಲ ಈ ನಾಡಿನ ಇತಿಹಾಸ ಮಹನೀಯರೆಂದು ಗೌರವಿಸುತ್ತೆ. ಆ ಮಹನೀಯರ ಸಾಲಿನಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿರುವವವರು ಸರ್ ಎಂ ವಿಶ್ವೇಶ್ವರಯ್ಯ.
ಬ್ರಿಟೀಶ್ ಕಾಲಾವಧಿಯಲ್ಲಿ ಕಾರ್ಯನಿರ್ವಹಿಸಿದ್ದ ವಿಶ್ವೇಶ್ವರಯ್ಯನವರ ಅದ್ಭುತ ಪಾಂಡಿತ್ಯ ಈವತ್ತಿಗೂ ವಿಶ್ವವನ್ನು ಅಚ್ಚರಿಗೀಡು ಮಾಡುತ್ತಿದೆ. ಬೇರೆಲ್ಲಕ್ಕಿಂತಲೂ ಅವರ ಮೆದುಳಿನ ಸುತ್ತ ಹಬ್ಬಿಕೊಂಡಿರುವಂಥಾ ಕಥೆಗಳೇ ನೂರಾರಿವೆ. ಅದಕ್ಕೆ ಪುರಾವೆಯಂಥಾ ಅನೇಕ ಅಣೆಕಟ್ಟೆಗಳು, ಕಟ್ಟಡಗಳು ಈವತ್ತಿನ ಇಂಜಿನಿಯರುಗಳನ್ನು ಬೆರಗಾಗಿಸುತ್ತಿವೆ. ಓರ್ವ ಮನುಷ್ಯ ಹೇಗೆ ಒಂದು ನಾಡಿನ ಅಸ್ಮಿತೆಯನ್ನು ಸದಾ ಕಾಡುವಂತೆ ಬದುಕಲು ಸಾಧ್ಯ? ಓರ್ವನ ಪ್ರತಿಭೆ, ಪರಿಶ್ರಮ ತಲೆಮಾರುಗಳಾಚೆಗೆ ಹೇಗೆಲ್ಲ ಹಬ್ಬಿಕೊಳ್ಳುತ್ತೆಂಬುದಕ್ಕೆ ವಿಶ್ವೇಶ್ವರಯ್ಯ ಎಂಬ ಹೆಸರೇ ಸಾರ್ವಕಾಲಿಕ ಉತ್ತರದಂತಿದೆ. ಅವರು ಸೃಷ್ಟಿಸಿದ ಅದ್ಭುತಗಳು ಹತ್ತಾರಿವೆ. ಕೇವಲ ಕನ್ನಂಬಾಡಿ ಕಟ್ಟೆ ಒಂದೇ ಸಾಕು; ವಿಶ್ವೇಶ್ವರಯ್ಯನವರ ಒಟ್ಟಾರೆ ಕಸುವಿನ ದಿಗ್ಧರ್ಶನವಾಗಿ ಬಿಡುತ್ತೆ!
ಶ್ರೇಷ್ಠ ಇಂಜಿನಿಯರ್
ವಿಶ್ವೇಶ್ವರಯ್ಯನವರು ಜಗತ್ತು ಕಂಡ ಸರ್ವ ಶ್ರೇಷ್ಠ ಇಂಜಿನಿಯರ್ ಆಗಿ ಶಾಶ್ವತವಾಗಿ ನೆಲೆ ಕಂಡುಕೊಂಡಿದ್ದಾರೆ. ಇಂದಿಗೂ ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಹುತೇಕರ ಮನೆಗಳ ದೇವರ ಮನೆಗಳಲ್ಲಿ ದೇವರ ಚಿತ್ರಗಳ ಜೊತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂವಿ ಭಾವಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶವಾಗಿದ್ದರೂ ಮಳೆಗಾಲದ ಹೊರತಾಗಿ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೇ ತತ್ತರಿಸುತ್ತಿದ್ದಂತಹ ಕಾಲದಲ್ಲಿ ಕಾವೇರಿ ನದಿಗೆ ಕನ್ನಂಬಾಡಿಯಲ್ಲಿ ಅಣೆಕಟ್ಟೆ ಕಟ್ಟಿ, ವರ್ಷಪೂರ್ತಿ ನದಿಯ ನೀರನ್ನು ಸದ್ಬಳಕೆ ಮಾಡಿಕೊಟ್ಟ ಧೀಮಂತ ವ್ಯಕ್ತಿ ವಿಶ್ವೇಶ್ವರಯ್ಯ. ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಗೊಂಡಿದ್ದರ ಹಿಂದಿರುವ ಏಕೈಕ ಶಕ್ತಿ ವಿಶ್ವೇಶ್ವರಯ್ಯ ಎಂಬುದು ನಿರ್ವಿವಾದ.
ಶಿಂಷಾ ನದಿ
ಮಂಡ್ಯ ಜಿಲ್ಲೆಯಲ್ಲಿ ಹರಿಯುವ ಬಹುಮುಖ್ಯವಾದ ನದಿ ಶಿಂಷಾ. ತುಮಕೂರಿನ ಬಳಿಯ ದೇವರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಹುಟ್ಟುವ ಶಿಂಷಾ ನದಿ ಕಾವೇರಿ ನದಿಯ ಉಪನದಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಅದು ಸುಮಾರು ಎಂಟೂವರೆ ಚದರ ಕಿಲೋಮೀಟರ್ ಜಲಾನಯನ ಪ್ರದೇಶವನ್ನು ಹೊಂದಿದೆ. ನ್ನೂರ ಇಪ್ಪತ್ತೊಂದು ಕಿಲೋಮೀಟರ್ ದೂರವನ್ನು ಕ್ರಮಿಸಿ ಚಾಮರಾಜನಗರ ಜಿಲ್ಲೆಯ ಗಡಿಯ ಭಾಗದಲ್ಲಿ ಕಾವೇರಿ ನದಿಯೊಂದಿಗೆ ವಿಲೀನವಾಗುತ್ತದೆ. ಇಂಥಾ ಶಿಂಷಾ ನದಿಗೆ ಮದ್ದೂರಿನ ಬಳಿಯ ಶಿವನ ಸಮುದ್ರದ ಬಳಿ ಗಗನ ಚುಕ್ಕಿ ಮತ್ತು ಭರಚುಕ್ಕಿ ಎಂಬ ಹೆಸರಿನ ಜಲಪಾತಗಳಲ್ಲಿ ಧುಮ್ಮಿಕ್ಕುವ ಸ್ಥಳದಲ್ಲಿ ಇಡೀ ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಗಿತ್ತು.
ಈ ರೀತಿಯಾಗಿ ಶಿವನ ಸಮುದ್ರದಲ್ಲಿ ಆರಂಭವಾದ ವಿದ್ಯುತ್ ಯೋಜನೆ ಕೇವಲ ಮಳೆಗಾಲದಲ್ಲಿ ಮಾತ್ರವೇ ಚಾಲ್ತಿಯಲ್ಲಿದ್ದು ಉಳಿದ ಸಮಯದಲ್ಲಿ ನೀರಿಲ್ಲದೇ ಒಣಗುತ್ತಿರುತ್ತೆ. ಇನ್ನು ಮೈಸೂರು ಮತ್ತು ಮಂಡ್ಯ ಪ್ರದೇಶ ಕಾವೇರಿ ಜಲಾನಯನ ಪ್ರದೇಶವಾಗಿದ್ದರೂ ಐತಿಹಾಸಿಕವಾಗಿ ಬೇಸಿಗೆಯ ಕಾಲದಲ್ಲಿ ಕೃಷಿಗಿರಲಿ, ಕುಡಿಯಲೂ ನೀರಿಲ್ಲದೆ ಬಳಲುವ ವಾತಾವರಣ ಒಂದು ಕಾಲದಲ್ಲಿತ್ತು. ಬ್ರಿಟಿಷ್ ಸರ್ಕಾರವಿದ್ದ ಕಾಲದಲ್ಲಿ ಅಲ್ಲಿ ಸಂಭವಿಸಿದ ತೀವ್ರ ಬರಗಾಲದಿಂದಾಗಿ ಮೈಸೂರು ಸಾಮ್ರಾಜ್ಯದ ಜನಸಂಖ್ಯೆಯ ಐದನೇ ಒಂದು ಭಾಗ ನಾಶವಾಗಿದ್ದನ್ನು ಮನಗಂಡ ಮೈಸೂರು ಸಂಸ್ಥಾನ ಇದಕ್ಕೊಂದು ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯಲೇ ಬೇಕೆಂಬ ನಿರ್ಧಾರಕ್ಕೆ ಬಂದಿತ್ತು. ಬಹುಶಃ ಕನ್ನಂಬಾಡಿ ಕಟ್ಟೆಗೆ ಶ್ರೀಕಾರ ಬಿದ್ದಿದ್ದು ಅಲ್ಲಿಂದಲೇ!
ಶುರುವಿನಲ್ಲೇ ಮಹಾ ದುರಂತ
ಹೇಗಾದರೂ ಮಾಡಿ ಜಲಾಶಯ ನಿರ್ಮಾಣ ಮಾಡಲು ಅಂದಿನ ಮೈಸೂರು ಮಹಾರಾಜರು ಆಸಕ್ತಿ ವಹಿಸಿ ಅದಕ್ಕಾಗಿ ಕ್ಯಾಪ್ಟನ್ ಡೇವ್ಸ್ ಎಂಬ ಇಂಜೀನಿಯರ್ ನೇತೃತ್ವದ ಒಂದು ತಂಡವನ್ನು ಕಟ್ಟಿದರು. ಜಲಾಶಯದ ಆರಂಭಿಕ ಎತ್ತರ ಸುಮಾರು ಎಪ್ಪತ್ತು ಅಡಿ ಮತ್ತು ನಂತರ ಎರಡನೇ ಹಂತದಲ್ಲಿ ನೂರಾ ಹದಿನೈದು ಅಡಿಗಳಿಗೆ ವಿಸ್ತರಿಸಬಹುದು ಎಂದು ಅಂದಿನ ಉಪ ಮುಖ್ಯ ಎಂಜಿನಿಯರ್ ಕ್ಯಾಪ್ಟನ್ ಡಾವ್ಸ್ ಸೂಚಿಸಿದ್ದರು. ಸಮೀಕ್ಷೆಯ ನಂತರ, ಯೋಜನೆಯನ್ನು ಅಂತಿಮವಾಗಿ ಅನುಮೋದಿಸಲಾಯಿತು. ನಂತರ ಡೇವ್ಸ್ ಮತ್ತು ಅವರ ತಂಡ ಜಿಲ್ಲೆಯ ಕಾವೇರಿ ನದಿಯ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣ ತೀರ್ಥಗಳ ಸಂಗಮದ ಬಳಿಯ ಬೆಳಗೊಳದ ಬಳಿ ಭೂವಿ ಗುರುತಿಸಿತ್ತು. ಭೂವಿಜ್ಞಾನಿಗಳನ್ನು ಸಂಪರ್ಕಿಸಿ ಅವರಿಂದಲೂ ಅನುಮೋದನೆ ಪಡೆದುಕೊಳ್ಳಲು ಮೂರ್ನಾಲಕ್ಕು ವರ್ಷ ಹಿಡಿದಿತ್ತು. ಕಡೆಗೂ ಅಣೆಕಟ್ಟೆಯ ಅಡಿಭಾಗದ ಕಾಮಗಾರಿಗೆ ಚಾಲನೆ ಸಿಕ್ಕಿತ್ತು.
ಹೀಗೆ ಹಲವಾರು ವರ್ಷಗಳ ಶ್ರಮದ ಫಲವಾಗಿ ಅಣೆಕಟ್ಟಿನ ಕೆಲಸ ನಡೆಯುತ್ತಿದ್ದ ಘಳಿಗೆಯಲ್ಲಿಯೇ ಮಹಾ ದುರಂತವೊಂದು ಸಂಭವಿಸಿತ್ತು. ಕಾಮಗಾರಿ ನಡೆಯುತ್ತಿರುವಾಗಲೇ ಭಾರಿ ಪ್ರವಾಹ ಬಂದು ಅನೇಕ ಕಾರ್ಮಿಕರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಕೊಚ್ಚಿ ಹೋಗುತ್ತಿದ್ದ ಕಾರ್ಮಿಕರನ್ನು ರಕ್ಷಿಸಲು ಕ್ಯಾಪ್ಟನ್ ಡೇವ್ಸ್ ಮುಂದಾಗಿದ್ದರು. ಆದರೆ ಅಚಾನಕ್ಕಾಗಿ ಕೆಳಕ್ಕೆ ಬಿದ್ದ ಡೇವ್ಸ್ ರೌದ್ರಾವತಾರ ತಾಳಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋದಾಗ ಈ ಭಾಗದ ಮಂದಿ ಭೋರಿಟ್ಟು ಅತ್ತಿದ್ದರು. ಹೀಗೆ ಮೈಸೂರು ಸಂಸ್ಥಾನದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆರಂಭದಲ್ಲೇ ತೊಡಕಾಗಿದ್ದರಿಂದ ಮಹಾರಾಜರು ನೊಂದಿದ್ದರು. ಹೇಗಾದರೂ ಈ ಯೋಜನೆಯನ್ನು ಸಂಪೂರ್ಣಗೊಳಿಸಲು ಸಮರ್ಥವಾದ ಇಂಜಿನೀಯರ್ ಹುಡುಕಲು ಅಂದಿನ ಮೈಸೂರಿನ ದಿವಾನರಾಗಿದ್ದ ಮಾಧವರಾವ್ ಅವರಿಗೆ ಸೂಚಿಸಿದರು.
ಆ ಕಾಲದಲ್ಲಿ ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಮೂಲದ ಇಂಜೀನಿಯರ್ ಆಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ವಿದೇಶ ಪ್ರವಾಸದಲ್ಲಿದ್ದರು. ಆ ಹಂತದಲ್ಲಿ ಹೈದರಾಬಾದಿನ ನಿಜಾಮ ಅಲ್ಲಿಯ ಮೂಸಿ ನದಿ ಪದೇ ಪದೇ ಉಕ್ಕಿ ಹರಿದು ಪ್ರವಾಹಗಳಿಂದಾಗಿ ಅಲ್ಲಿನ ಜನ ಬಾಧೆಗೀಡಾಗೋದನ್ನು ತಪ್ಪಿಸಲು ಸಹಾಯ ಮಾಡಬೇಕೆಂದು ವಿಶ್ವೇಶ್ವರಯ್ಯನವರನ್ನು ಕೋರಿಕೊಂಡಿದ್ದರು. ಅದನ್ನು ಅನುಮೋದಿಸಿ ತಮ್ಮ ವಿದೇಶ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೈದರಾಬಾದಿಗೆ ಬಂದ ವಿಶ್ವೇಶ್ವರಯ್ಯನವರು ಅಲ್ಲಿನ ವಿಶೇಷ ಸಲಹಾ ಇಂಜಿನಿಯರ್ ಆಗಿ ನೇಮಕಗೊಂಡು ತಮ್ಮ ಪ್ರಸಿದ್ಧ ಸೈಫನ್ ಸಿದ್ಧಾಂತದ ಆಧಾರದ ಮೇಲೆಯೇ ಕ್ರೆಸ್ಟ್ ಗೇಟ್ ಅಳವಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡಿದ್ದರು. ಈ ವಿಷಯವನ್ನರಿತ ದಿವಾನ್ ಮಾಧವರಾವ್ ಕನ್ನಡಿಗರೇ ಆದ ವಿಶ್ವೇಶ್ವರಯ್ಯನವರನ್ನು ಕೂಡಲೇ ಸಂಪರ್ಕಿಸಿದ್ದರು. ಅದಾಗಲೇ ಅಲ್ಲಿ ತಲೆದೋರಿದ್ದ ಸಮಸ್ಯೆ, ಆದ ಅನಾಹುತವನ್ನು ಮನವರಿಕೆ ಮಾಡಿ ಕೊಟ್ಟಿದ್ದರು.
ಕರಗಿದ ಹೃದಯ
ತಾವು ಹುಟ್ಟಿದ ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಸರ್ ಎಂವಿ ಹೃದಯ ತಮ್ಮ ಜನಗಳಿಗಾಗಿ ಕರಗಿತ್ತು. ಅದರ ಫಲವಾಗಿಯೇ ಕಡೆಗೂ ಸಂಸ್ಥಾನಕ್ಕೆ ಮುಖ್ಯ ಇಂಜೀನಿಯರ್ ಆಗಿ ನೇಮಕಗೊಂಡು ಅನೇಕ ಉದ್ಯಮಗಳಿಗೆ ಕಾರಣರಾದರು. ಆರು ವರ್ಷಗಳ ಕಾಲ ಮೈಸೂರಿನ ದಿವಾನರಾಗಿಯೂ ಸೇವೆ ಸಲ್ಲಿಸಿದ್ದರು. ವಿಶ್ವೇಶ್ವರಯ್ಯನವರು ಕನ್ನಂಬಾಡಿ ಅಣೆಕಟ್ಟು ಯೋಜನೆಯ ಮುಖ್ಯ ಎಂಜಿನಿಯರ್ ಆಗಿ ನೇಮಕಗೊಂಡ ನಂತರ ಮತ್ತೊಮ್ಮೆ ಇಡೀ ಯೋಜನೆಯನ್ನು ಪರಿಶೀಲನೆಗೊಡ್ಡಿದ್ದರು. ಬಳಿಕ ನೀಲ ನಕ್ಷೆಯನ್ನು ಸಿದ್ಧಪಡಿಸಿ ಅದನ್ನು ಮೈಸೂರು ಸಂಸ್ಥಾನಕ್ಕೆ ಒಪ್ಪಿಸಿದ್ದರು. ಆದರೆ ವಿಶ್ವೇಶ್ವರಯ್ಯನವರ ಈ ಬೇಡಿಕೆಗೆ ಅಂದಿನ ಮೈಸೂರಿನ ಹಣಕಾಸು ಸಚಿವಾಲಯ ಆರ್ಥಿಕ ವಿರೋಧ ವ್ಯಕ್ತಪಡಿಸಿತ್ತು. ವಿಶ್ವೇಶ್ವರಯ್ಯನವರು ಕೊಂಚ ಕಸಿವಿಸಿಗೊಂಡು ಇದರ ಮರುಪರಿಶೀಲನೆಗಾಗಿ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ರನ್ನು ಕೇಳಿಕೊಂಡಿದ್ದರು. ನಂತರ, ಒಡೆಯರ್ ಒಪ್ಪಿಗೆ ನೀಡಿ, ಅದಕ್ಕಾಗಿ ಎಂಬತ್ತೊಂದು ಲಕ್ಷವನ್ನು ನಿಗಧಿಪಡಿಸಿದ್ದರು. ಈ ಮೂಲಕ ಈ ಯೋಜನೆಗೆ ಆರಂಭಿಕ ಯಶ ಸಿಕ್ಕಿತ್ತು.
ವಿಶ್ವೇಶ್ವರಯ್ಯನವರು ಖುದ್ದಾಗಿ ಮದ್ರಾಸ್ ಪ್ರೆಸಿಡೆನ್ಸಿಯವರನ್ನು ಭೇಟಿ ಮಾಡಿ ಈ ಯೋಜನೆಯ ಬಗ್ಗೆ ವಿವರಿಸಿದ್ದರು. ಕೇವಲ ಮೈಸೂರು ಮಂಡ್ಯ ಪ್ರದೇಶಗಳು ಮಾತ್ರವಲ್ಲ; ಕಾವೇರಿ ಜಲಾನಯನದ ಕರ್ನಾಟಕ ಮತ್ತು ತಮಿಳು ನಾಡಿನ ಲಕ್ಷಾಂತರ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗುತ್ತದೆ ಅನ್ನೋದನ್ನು ಮನವರಿಕೆ ಮಾಡಿ ಕೊಟ್ಟಿದ್ದರು. ವಿನಾಕಾರಣ ಪೋಲಾಗುವ ನೀರನ್ನು ಕುಡಿಯುವ ನೀರು ಹಾಗೂ ವಿದ್ಯುತ್ ತಯಾರಿಕೆಗೆ ಬಳಸಿಕೊಳ್ಳಬಹುದು ಎಂಬ ವಿಷಯವನ್ನು ಮನದಟ್ಟು ಮಾಡಿದ ನಂತರ ಮದ್ರಾಸ್ ಪ್ರೆಸಿಡೆನ್ಸಿಯವರು ಒಪ್ಪಿಗೆ ಕೊಟ್ಟಿದ್ದರು. ಗಮನಾರ್ಹ ಅಂಶವೆಂದರೆ, ಹೀಗೆ ಒಪ್ಪಿಗೆ ಗಿಟ್ಟಿಸಿಕೊಳ್ಳುವಲ್ಲಿಯೂ ವಿಶ್ವೇಶ್ವರಯ್ಯನವರು ಪ್ರಧಾನ ಪಾತ್ರ ವಹಿಸಿದ್ದರು.
ಹಣಕಾಸಿನ ಕೊರತೆ
ವರ್ಷಗಟ್ಟಲೆ ಕಷ್ಟಪಟ್ಟು ಎಲ್ಲವೂ ಸರಿಯಾದರೂ ಕೂಡಾ ಮೈಸೂರು ಸಂಸ್ಥಾನದಲ್ಲಿ ಹಣದ ಕೊರತೆ ತಾಂಡವವಾಡಿತ್ತು. ಈ ಯೋಜನೆಗೆ ಆ ಪರಿಯಾಗಿ ಹಣ ಹೊಂದಿಸಲು ಮೈಸೂರು ಅರಸರ ಬಳಿ ಹಣ ಇರಲಿಲ್ಲ. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ಹಣವನ್ನು ಹೊಂಚಲು ಮೈಸೂರಿನ ಮಹಾರಾಜರು ತಮ್ಮ ರಾಣಿಯ ಚಿನ್ನಾಭರಣ, ಖಜಾನೆಯ ಬೆಳ್ಳಿಯ ನಾಣ್ಯಗಳು, ಮುತ್ತು, ವಜ್ರ ವೈಢೂರ್ಯಗಳನ್ನು ಸುಮಾರು ನಾಲ್ಕು ಮೂಟೆಯಲ್ಲಿ ಕೊಂಡೊಯ್ದು ದೂರದ ಬಾಂಬೆಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸುಮಾರು ಹಣ ಹೊಂದಿಸಿದ್ದರು. ಅದರ ಫಲವಾಗಿಯೇ ಕನ್ನಂಬಾಡಿ ಕಟ್ಟೆಗೆ ವಿಶ್ವೇಶ್ವರಯ್ಯನವರ ಸಾರಥ್ಯದಲ್ಲಿ ಚಾಲನೆ ಸಿಕ್ಕಿತ್ತು.
ಹಾಗಂತ ಆ ನಂತರ ಎಲ್ಲವೂ ಸುಗಮವಾಗಿ ನಡೆಯಿತು ಅಂದುಕೊಳ್ಳುವಂತಿಲ್ಲ. ಆ ಬಳಿಕ ಹೆಜ್ಜೆ ಹೆಜ್ಜೆಗೂ ಅಡಚಣೆಗಳು ಎದುರಾಗಿದ್ದವು. ಅಣೆಕಟ್ಟೆಗೆ ಬೇಕಾಗುವಷ್ಟು ಸಿಮೆಂಟ್ ಭಾರತದಲ್ಲಿ ಸಿಗಲು ಸಾಧ್ಯವೇ ಇರಲಿಲ್ಲ. ಆದರೆ ಅದನ್ನು ವಿದೇಶದಿಂದ ಆಮದು ಮಾಡಿಕೊಂಡರೂ ಮತ್ತಷ್ಟು ದಿಬಾರಿಯಾಗಿ ಒಟ್ಟಾರೆ ನಿರ್ಮಾಣ ವೆಚ್ಚ ಅಧಿಕವಾಗುತ್ತಿತ್ತು. ಇದಕ್ಕೆ ವಿಶ್ವೇಶ್ವರಯ್ಯನವರು ಮತ್ತೊಂದು ಮಾಸ್ಟರ್ ಪ್ಲಾನು ಮಾಡಿದ್ದರು. ಸಿಮೆಂಟ್ ಬದಲಿಗೆ ಸುಣ್ಣ, ಮರಳು, ಜೇಡಿಮಣ್ಣು ಮತ್ತು ಇಟ್ಟಿಗೆ, ಕಲ್ಲಿನ ಧೂಳಿನ ಮಿಶ್ರಣದ ಸುರ್ಕಿಯನ್ನು ಆಯ್ದುಕೊಂಡಿದ್ದರು. ಅದು ಉಷ್ಣ ನಿರೋಧಕವಾಗುವುದಲ್ಲದೇ, ನೀರಿನ ಸೋರಿಕೆಯನ್ನು ತಡೆಯುತ್ತದೆ ಎಂಬುದು ವಿಶ್ವೇಶ್ವರಯ್ಯನವರ ಉದ್ದೇಶವಾಗಿತ್ತು. ಈ ಅಣೆಕಟ್ಟೆಗೆ ಬೇಕಾಗುವ ಕಲ್ಲನ್ನು ಆರಂಭದಲ್ಲಿ ಮಾಗಡಿಯಿಂದ ತರಲು ನಿರ್ಧರಿಸಲಾಗಿತ್ತಾದರೂ ಅದು ತುಂಬಾ ದುಬಾರಿಯಾಗುತ್ತದೆ ಎಂಬ ಅರಿವಾಗಿತ್ತು. ಚಾಮುಂಡಿ ತಪ್ಪಲಲ್ಲಿರುವ ಕಲ್ಲನ್ನೇ ಬಳಸಲು ತೀರ್ಮಾನಿಸಿದ್ದರು. ಧರ್ಮವಾರಪಲ್ಲಿ ವೆಂಕಟರಾಮಣ್ಣನವರ ನೇತೃತ್ವದಲ್ಲಿ ಕೋಲಾರ ಜಿಲ್ಲೆಯಿಂದ ಸುಮಾರು ನಾಲ್ಕೂವರೆ ಸಾವಿರ ಕಾರ್ಮಿಕರನ್ನು ಎತ್ತಿನ ಗಾಡಿಗಳ ಮೂಲಕ ಕರೆಸಿಕೊಂಡಿದ್ದರು. ನಂತರ ಅತ್ಯಂತ ವ್ಯವಸ್ಥಿತವಾಗಿ ಅವರಿಂದ ಕೆಲಸ ಮಾಡಿಸಿಕೊಂಡಿದ್ದರು.
ಎಲ್ಲವೂ ಅವರ ಕೈಚಳಕ
ಹಣಕಾಸಿನ ಮುಗ್ಗಟ್ಟಿನ ಅರಿವಿದ್ದ ವಿಶ್ವೇಶ್ವರಯ್ಯನವರು ಎಲ್ಲವನ್ನೂ ಕಡಿಮೆ ಖರ್ಚಿನಲ್ಲಿ, ಸದೃಢವಾಗಿ ಮಾಡುವ ತೀರ್ಮಾನಕ್ಕೆ ಬಂದಿದ್ದರು. ಅಣೆಕಟ್ಟುಗಳ ಮೇಲ್ಬಾಗಕ್ಕೆ ಸ್ಟೀಲ್ ವೇಗಳ ಬದಲಿಗೆ, ಜಲಾಶಯದ ನೀರಿನ ಮಟ್ಟದ ಆಧಾರದಲ್ಲ್ಲಿ ತೆರೆಯುವ ಮತ್ತು ಮುಚ್ಚುವ ನಲವತ್ತೆಂಟು ಸ್ವಯಂಚಾಲಿತ ಗೇಟ್ಗಳನ್ನು ಆರು ಸೆಟ್ಗಳಲ್ಲಿ ಬಳಸಿದರು. ಪ್ರತಿ ಗೇಟ್ ಒಂದು ಸಿಲ್, ಲಿಂಟೆಲ್ ಮತ್ತು ಅಡ್ಡ ಚಡಿಗಳನ್ನು ಮತ್ತು ಫಲಕಗಳನ್ನು ಒಳಗೊಂಡಿದೆ. ಸಮತೋಲನ ತೂಕ, ಫ್ಲೋಟ್, ಸರಪಳಿಗಳು ಮತ್ತು ಪುಲ್ಲಿಗಳು ಮತ್ತು ಒಳಹರಿವು ಮತ್ತು ಔಟ್ಲೆಟ್ ಪೈಪ್ಗಳು, ಗೇಟ್ಗಳನ್ನು ಎರಕಹೊಯ್ದ ಕಬ್ಬಿಣದಿಂದ ಮಾಡಲಾಗಿದೆ. ಇದನ್ನು ಭದ್ರಾವತಿಯಲ್ಲಿರುವ ಅವರದ್ದೇ ಕನಸಿನ ಕೂಸಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿಯೇ ತಯಾರಿಸಲಾಗಿತ್ತು. ಹೀಗೆ ಒಂದಕ್ಕೊಂದು ಪೂರಕವಾಗಿ, ಅತ್ಯಂತ ಚಾಣಾಕ್ಷತೆಯಿಂದ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆಯನ್ನು ರೂಪಿಸಿದ್ದರು.
ಕಡೆಗೂ ಈ ಅಣೆಕಟ್ಟಿನ ಅಡಿಪಾಯದ ಕೆಲಸ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟೆ ನಿರ್ಮಿಸುವ ಹಂತಕ್ಕೆ ಬಂದು ನಿಂತಿತ್ತು. ಇದೇ ಸಮಯದಲ್ಲಿ ಈ ಯೋಜನೆಯಿಂದಾಗಿ ಆ ಅಣೆಕಟ್ಟೆಯ ಸುತ್ತಮುತ್ತಲಿನ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳು ಪರಿಸ್ಥಿತಿ ಬಂದಾಗ, ವಿಶ್ವೇಶ್ವರಯ್ಯನವರ ನೇತೃತ್ವದಲ್ಲೇ ಪಕ್ಕದ ಪ್ರದೇಶಗಳಲ್ಲಿ ಕೃಷಿ ಭೂಮಿಯೊಂದಿಗೆ ಪುನರ್ವಸತಿ ಕಲ್ಪಿಸಿಕೊಟ್ಟಿದ್ದರು. ೧೯೩೧ ರಲ್ಲಿ ಇಡೀ ಯೋಜನೆ ಪೂರ್ಣಗೊಂಡು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೃಷಿ ನೀರಾವರಿಯಲ್ಲದೇ, ಮೈಸೂರು, ಮಂಡ್ಯ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರೋ ಕನ್ನಂಬಾಡಿ ಕಟ್ಟೆ ತಲೆಯೆತ್ತಿ ನಿಂತಿತ್ತು. ಈ ಅಣೆಕಟ್ಟಿನಿಂದ ಬಿಡುಗಡೆಯಾದ ನೀರು ಶಿಂಶಾ ಜಲವಿದ್ಯುತ್ ಯೋಜನೆಗೂ ಬಳಕೆಯಾಗಿ, ಅಲ್ಲಿಂದ ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ. ಅದು ಈಗಲೂ ಕೂಡಾ ತಮಿಳು ನಾಡಿನ ಜೀವನಾಡಿಯಾಗಿದೆ. ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದೆ.
ಹೀಗೆ ನಿರ್ಮಾಣಗೊಂಡ ಕನ್ನಂಬಾಡಿ ಕಟ್ಟೆಯ ಕಾರ್ಯ ನಿಜಕ್ಕೂ ಸವಾಲಿನದ್ದಾಗಿತ್ತು. ಮಹಾರಾಜರು ಹೊಂದಿಸಿದ್ದ ಕಾಸೆಲ್ಲವೂ ನೀರಿನಂತೆ ಖರ್ಚಾಗಿತ್ತು. ಕೆಲಸದವರಿಗೆ ಕೂಲಿ ನೀಡಲೂ ತತ್ವಾರ ಎದುರಾಗಿತ್ತು. ಹೀಗೆ ಆರಂಭದಲ್ಲೇ ಅಡ್ಡಿ ಎದುರಿಸಿದ್ದ ಕನ್ನಂಬಾಡಿ ಕಟ್ಟೆ ಯೋಜನೆ ಸಾಕಾರಗೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು ವಿಶ್ವೇಶ್ವರಯ್ಯನವರಲ್ಲದೆ ಬೇರ್ಯಾರೂ ಅಲ್ಲ. ವಿಶ್ವೇಶ್ವರಯ್ಯ ಜನಾನುರಾಗಿಯಾಗು ಗುರುತಿಸಿಕೊಂಡಿದ್ದಾರೆ. ಅಣೆಕಟ್ಟೆಯ ನಿರ್ಮಾಣಕ್ಕೆ ಬೇಕಾಗಿದ್ದ ಕೆಲಸಗಾರನ್ನೂ ಕೂಡಾ ಶ್ರಮದಾನದ ಮೂಲಕ ಉತ್ತೇಜಿಸಿದ್ದು, ಆ ಮೂಲಕವೇ ಕಲೆಲಸವಾಗುವಂತೆ ನೋಡಿಕೊಂಡಿದ್ದು ಅವರ ಹೆಚ್ಚುಗಾರಿಕೆ. ಕಡೆಗೆ ಮೈಸೂರು ಸಂಸ್ಥಾನದ ಅಧಿಕಾರದಿಂದ ದೂರ ಸರಿದರೂ ಕೂಡಾ ಅಣೆಕಟ್ಟೆ ಸಂಪೂರ್ಣವಾಗಿ ನಿರ್ಮಾಣವಾಗಿ, ಉದ್ಘಾಟನೆಯಾಗುವವರೆಗೂ ಸಂಬಳವಿಲ್ಲದೆಯೆ ಅದರ ಸಾರಥ್ಯ ವಹಿಸಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಕೊಡುಗೆಯನ್ನು ಈ ನಾಡು ಯಾವತ್ತಿಗೂ ಮರೆಯುವಂತಿಲ್ಲ.