ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೈಯೆಸ್ಟ್ ಬಜೆಟ್ನಲ್ಲಿ ತಯ್ಯಾರಾದಂತಹ ಚಿತ್ರ ಅಂದರೆ ಅದು ಕೆಜಿಎಫ್. ಅನಂತರ ಕಬ್ಜ, ವಿಕ್ರಾಂತ್ ರೋಣ ಚಿತ್ರಗಳು ನಿರ್ಮಾಣಗೊಂಡಿವೆ. ಈಗ ಕೆಡಿ, ಮಾರ್ಟಿನ್ ಸೇರಿದಂತೆ ಹತ್ತಾರು ಚಿತ್ರಗಳು ಬಹುಕೋಟಿ ವೆಚ್ಚದಲ್ಲಿ ತಯ್ಯಾರಾಗುತ್ತಿವೆ. ಈ ಮಧ್ಯೆ ಶೆಟ್ಟರ ಕಾಂತಾರ ಪಾರ್ಟ್-2 ಚಿತ್ರದ ಬಜೆಟ್ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ ಚಾಪ್ಟರ್1 ಹಾಗೂ ಚಾಪ್ಟರ್2ಗಿಂತ ಅಧಿಕ ವೆಚ್ಚದಲ್ಲಿ ಕಾಂತಾರ ಪಾರ್ಟ್-2 ನಿರ್ಮಿಸಲು ಸಿದ್ದತೆ ನಡೆದಿದೆಯಂತೆ. ಕಾಂತಾರ ಪಾರ್ಟ್1 ಗಿಂತ ಎಂಟು ಪಟ್ಟು ಅಂದರೆ ಸುಮಾರು 125 ಕೋಟಿ ವೆಚ್ಚದಲ್ಲಿ `ಕಾಂತಾರ’ ಪ್ರೀಕ್ವೆಲ್ ಮೂಡಿಬರಲಿದೆಯಂತೆ. ಈ ಬಗ್ಗೆ ಪಿಂಕ್ ವಿಲ್ಲಾ ಸೇರಿದಂತೆ ಹಲವು ವೆಬ್ಸೈಟ್ಗಳು ವರದಿ ಮಾಡಿವೆ.
ನಿಮಗೆಲ್ಲ ಗೊತ್ತಿರುವಂತೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ `ಕಾಂತಾರ ಚಾಪ್ಟರ್ 1′ ಬರೀ 16 ಕೋಟಿ ವೆಚ್ಚದಲ್ಲಿ ತಯ್ಯಾರಾಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯನ್ನ ಬರೆದಿತ್ತು. ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ತುಳುನಾಡಿನ ದೈವಾರಾಧನೆ ಹಾಗೂ ಕರಾವಳಿ ಮಣ್ಣಿನ ಸೊಗಡಿರುವ `ಕಾಂತಾರ’ ನೋಡಿ ದೇಶಕ್ಕೆ ದೇಶವೇ ಮೆಚ್ಚಿಕೊಂಡಿತ್ತು. ಈಗ ಅದೇ ದೇಶ ಮತ್ತು ಹೊರದೇಶದ ಮಂದಿ `ಕಾಂತಾರ ಪಾರ್ಟ್-2′ ಗಾಗಿ ಕಣ್ಣರಳಿಸಿದ್ದಾರೆ. ಕಾಂತಾರ ಪಾರ್ಟ್-2 ಹೇಗಿರಲಿದೆ? ಯಾವಾಗ ಸೆಟ್ಟೇರಲಿದೆ? ಅಂತ ಕುತೂಹಲದಿಂದ ಎದುರುನೋಡ್ತಿದ್ದಾರೆ.
ಅಂದ್ಹಾಗೇ, ಕಾಂತಾರ ಚಿತ್ರ ಬಿಡುಗಡೆಗೊಂಡು ಹತ್ಹತ್ತಿರ ಒಂದು ವರ್ಷ ಕಳೀತಾ ಬರ್ತಿದೆ. ಈ ಒಂದು ವರ್ಷದಲ್ಲಿ ಹೆಚ್ಚು ಕಮ್ಮಿ ಆರು ತಿಂಗಳು ಕಾಲ ಶೆಟ್ರು ಸಭೆ-ಸಮಾರಂಭ-ಸನ್ಮಾನ ಅಂತ ಭಾಗಿಯಾಗುವುದರಲ್ಲೇ ಕಳೀತು. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ವೇದಿಕೆ ಹತ್ತುವ, ಕನ್ನಡ ಕಂಪನ್ನು ಹರಡುವ ಅವಕಾಶ ಸಿಗ್ತು. ದೇಶ-ವಿದೇಶಗಳಿಂದ ಭರ್ ಪೂರ್ ಪ್ರತಿಕ್ರಿಯೆ ಸಿಗ್ತು. ಕಾಂತಾರ-2 ಮಾಡುವಂತೆ ಒತ್ತಡವೂ ಹೆಚ್ಚಿತು. ಹೀಗಾಗಿ ಶೆಟ್ರು ಪಾರ್ಟ್-2ಗೆ ರೆಡಿಯಾದರು. ಸೀಕ್ವೆಲ್ ಬದಲಿಗೆ ಪ್ರೀಕ್ವೆಲ್ ಮಾಡುವುದಾಗಿ ಅನೌನ್ಸ್ ಮಾಡಿದರು. ಅದರಂತೇ, ಪ್ರೀಕ್ವೆಲ್ ಸ್ಟೋರಿನಾ ಸಿದ್ದಪಡಿಸಿಕೊಂಡು ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರಂತೆ. ಸದ್ಯ ಪ್ರಿಪ್ರೊಡಕ್ಷನ್ ವರ್ಕ್ ನಡೀತಿದ್ದು, ನವೆಂಬರ್ ನಿಂದ ಶೂಟಿಂಗ್ ಹೊರಡಲು ಪ್ಲ್ಯಾನ್ ಮಾಡಿದ್ದಾರಂತೆ. ಫಸ್ಟ್ ಷೆಡ್ಯೂಲ್ಡ್ ಕುಂದಾಪುರದಲ್ಲಿ ನಡೆಯಲಿದ್ದು, ನಂತರ ಮಂಗಳೂರು ಭಾಗದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿರುವುದಾಗಿ ಕೆಲ ವೆಬ್ಸೈಟ್ಗಳ ಜೊತೆ ರಿಷಬ್ ಹೇಳಿಕೊಂಡಿದ್ದಾರೆ.
ಮೊನ್ನೆ ಟೋಬಿ ಟ್ರೇಲರ್ ಲಾಂಚ್ನಲ್ಲೂ ಕಾಂತಾರ-2 ಬಗ್ಗೆ ಮಾತನಾಡಿದ್ದರು. ಈಗಾಗಲೇ ಕಥೆ ಬರೆದು ಮುಗಿಸಿದ್ದೇನೆ, ಸ್ಕ್ರಿಪ್ಟಿಂಗ್ ಹಂತದಲ್ಲೇ ಕಲಾವಿದರು ಹಾಗೂ ಶೂಟಿಂಗ್ ಲೋಕೇಷನ್ ಫೈನಲ್ ಮಾಡಿದ್ದೇನೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಪ್ರೀಕ್ವೆಲ್ ಗಾಗಿ ನಾನು ಹೇಗೆಲ್ಲಾ ಸಿದ್ದತೆ ನಡೆಸಿದ್ದೇನೆ ಅನ್ನೋದನ್ನ ನಾನು ಮೇಕಿಂಗ್ ಮೂಲಕವೇ ತೋರಿಸುತ್ತೇನೆ. ಆದರೆ, ಸಿನಿಮಾ ಮುಹೂರ್ತ ಯಾವಾಗ? ಎಲ್ಲಿ? ಹೇಗಿರುತ್ತೆ? ಎಷ್ಟು ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತೆ? ಇದ್ಯಾವ ಪ್ರಶ್ನೆಗೂ ನನ್ನ ಬಳಿ ಉತ್ತರವಿಲ್ಲ. ಯಾಕಂದ್ರೆ, ಅದನ್ನ ಪ್ರೊಡಕ್ಷನ್ ಹೌಸ್ ನೋಡಿಕೊಳ್ಳುತ್ತೆ. ಹೊಂಬಾಳೆ ಸಂಸ್ಥೆಯೇ ಅಧಿಕೃತವಾಗಿ ಎಲ್ಲವನ್ನೂ ಘೋಷಣೆ ಮಾಡುತ್ತೆ. ಸೋ, ಅಲ್ಲಿವರೆಗೂ ಕುತೂಹಲದಿಂದ ಕಾದು ನೋಡಬೇಕು ಎಂದಿದ್ರು.
ಇದೇ ವೇಳೆ ಮಾತುಮುಂದುವರೆಸಿದ ರಿಷಬ್, ಶೂಟಿಂಗ್ ಇಷ್ಟೇ ದಿನದಲ್ಲಿ ಮುಗುಸ್ಬೇಕು ಅನ್ನೋ ಪ್ಲ್ಯಾನ್ ಏನು ಹಾಕಿಕೊಂಡಿಲ್ಲ. ಕಥೆ ಎಷ್ಟು ದಿನ ಡಿಮ್ಯಾಂಡ್ ಮಾಡುತ್ತೋ, ಅಷ್ಟು ದಿನ `ಕಾಂತಾರ-ಪ್ರೀಕ್ವೆಲ್’ ಕಥೆಯ ಚಿತ್ರೀಕರಣ ಸಾಗುತ್ತೆ. ಅಂದ್ಹಾಗೇ, ಪರಭಾಷೆಯಿಂದಲೂ ನಂಗೆ ಸಾಕಷ್ಟು ಆಫರ್ಸ್ ಬಂದಿವೆ, ಈಗ್ಲೂ ಬರುತ್ತಲೇ ಇವೆ. ಆದರೆ, ನನ್ನ ಮೊದಲ ಆದ್ಯತೆ ಕಾಂತಾರ-2. ಹೀಗಾಗಿ, ನನ್ನ ಸಿನಿಮಾಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ. ನೆಕ್ಸ್ಟ್ ಯಾವ್ ಸಿನಿಮಾ ಮಾಡ್ತೀನಿ? ಏನ್ ಕಥೆ ಗೊತ್ತಿಲ್ಲ. ಸದ್ಯಕ್ಕೆ ಕಾಡುಬೆಟ್ಟು ಶಿವಪ್ಪನಾಗಿ ಕಾಂತಾರ ಝೋನ್ನಲ್ಲಿ ಇರುವುದಾಗಿ ತಿಳಿಸಿದ್ದಾರೆ. ಒಟ್ನಲ್ಲಿ ಕಾಂತಾರ ಎನ್ನುವ ಮೂರಕ್ಷರದ ಮುತ್ತಿನಂತಹ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ರೀಚ್ ಆಗಿರೋ ಶೆಟ್ರು, ಈ ಭಾರಿ ಪ್ಯಾನ್ ವರ್ಲ್ಡ್ ರೀಚ್ ಆಗುವ ಮಹಾ ಪ್ಲ್ಯಾನ್ ಮಾಡಿದ್ದಾರೋ ಏನೋ ಗೊತ್ತಿಲ್ಲ.
ಬಟ್ ಕಾಂತಾರ-2ಗಾಗಿ ಹೊಂಬಾಳೆ ಹೂಡ್ತಿರೋ ಬಜೆಟ್ ನೋಡಿದರೆ ಸಿನಿಮಾ ಪ್ಯಾನ್ ವಲ್ರ್ಡ್ ಲೆವೆಲ್ಗೆ ರೆಡಿಯಾಗೋದಂತೂ ಪಕ್ಕಾ. ಸದ್ಯ ಹೊಂಬಾಳೆ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸಲಾರ್, ಯುವ, ರಿಚರ್ಡ್ ಆ್ಯಂಟನಿ, ಬಘೀರ, ಟೈಸನ್, ರಘುತಾತ ಸೇರಿದಂತೆ ಎಂಟು ಪಿಕ್ಚರ್ ಗಳು ತಯ್ಯಾರಾಗುತ್ತಿವೆ. ಇದರಲ್ಲಿ ಸಲಾರ್ ಗಾಗಿ ಎಷ್ಟು ಮಂದಿ ಕುತೂಹಲದಿಂದ ಕಾಯ್ತಿದ್ದಾರೋ, ಅಷ್ಟೇ ಮಂದಿ ಒಂಟಿಕಾಲಿನಲ್ಲಿ ನಿಂತು ಶೆಟ್ರು ಕಣ್ಣಕ್ಕಿಳಿಯೋದನ್ನ ನೋಡ್ತಿದ್ದಾರೆ. ಎನಿವೇ, ಆದಷ್ಟು ಬೇಗ ಶೆಟ್ರು ಅಖಾಡಕ್ಕೆ ಇಳಿಯಲಿ. 16 ಕೋಟಿ ಹಾಕಿಸಿ 400 ಕೋಟಿ ಬಾಚಿಕೊಟ್ಟ ಡಿವೈನ್ ಸ್ಟಾರ್, 125 ಕೋಟಿ ಇನ್ವೆಸ್ಟ್ ಮಾಡಿಸ್ತಿರೋದು ನಿಜಾನಾ ಇಲ್ಲವಾ ಗೊತ್ತಿಲ್ಲ. ಒಂದ್ವೇಳೆ ನಿಜ ಆದರೆ 1000 ಕೋಟಿ ಟಾರ್ಗೆಟ್ ರಿಷಬ್ ಮುಂದಿದೆ ಅನ್ನೋದ್ರಲ್ಲಿ ತಪ್ಪೇನಿಲ್ಲ.