ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

karaga festival: ಬೆಂಗಳೂರು ಕರಗವೆಂಬ ಬೆರಗಿನ ಆಚರಣೆ!

Majja Webdeskby Majja Webdesk
02/03/2025
in Lifestyle, Majja Special
Reading Time: 1 min read
karaga festival: ಬೆಂಗಳೂರು ಕರಗವೆಂಬ ಬೆರಗಿನ ಆಚರಣೆ!

-ಆಧುನಿಕತೆಗೂ ಕರಗದ ಅದ್ಭುತ ಆಚರಣೆ!

-ದ್ರೌಪದಿ ಸೃಷ್ಟಿಸಿದ ವೀರಕುಮಾರರ ಕಥನ!  

 

ಇನ್ನೇನು ಈ ತಿಂಗಳು ಕಳೆದರೆ ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ನಡೆಯಲಿದೆ. ಬೆಂಗಳೂರಿನಂಥಾ ಮಹಾ ನಗರಿಯಲ್ಲೂ ಕೂಡಾ ನೆಲಮೂಲದ ಘಮ ಹೊಂದಿರುವ ಇಂಥಾ ಆಚರಣೆಯೊಂದು ಅಸ್ತಿತ್ವ ಹುಡುಕಿಕೊಂಡಿರುವುದೇ ಅಚ್ಚರಿಯಾಗಿ ಕಾಣಿಸುತ್ತೆ. ಇಂಥಾ ಕರಗ ಉತ್ಸವಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆದಿಶಕ್ತಿಯನ್ನು ಗುರುತಿಸಿ ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಕರಗ ಮಹೋತ್ಸವವೂ ಒಂದಾಗಿ ದಾಖಲಾಗಿದೆ. ಹಾಗಾದರೆ, ಈ ಕರಗ ಅಂದರೇನು? ಆ ಹೆಸರು ಹೇಗೆ ಬಂತು? ಅದರ ಪದಮೂಲ ಯಾವುದು? ಹೀಗೆ ಕರಗದ ಸುತ್ತ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈ ನಿಟ್ಟಿನಲ್ಲಿ ಹೇಳೋದಾದರೆ ಕರಗ ಎಂಬ ಪದಕ್ಕೆ ಕುಂಭ ಎಂಬ ಅರ್ಥ ಇರುವ ಅಂಶ ಪತ್ತೆಯಾಗುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಕರಗದ ಒಂದೊಂದು ಅಕ್ಷರವೂ ಒಂದೊಂದು ಅರ್ಥ ಹೊಂದಿದೆ ಎಂದು ಪ್ರಾಜ್ಞರು ಹೇಳುತ್ತಾರೆ.


ಈ ಕರಗಕ್ಕೆ ಪಕ್ಕದ ತಮಿಳುನಾಡಿನ ನೆಲದ ನಂಟೂ ಇದೆ. ಇಂಥಾ ಕರಗ ಉತ್ಸವಗಳು ತಮಿಳುನಾಡಿನಲ್ಲಿ ಬಹು ಹಿಂದಿನಿಂದಲೂ ವೈಭವದಿಂದ ನಡೆದುಕೊಂಡು ಬರುತ್ತಿದೆ. ಕರ್ನಾಟಕ ಮಟ್ಟಿಗೆ ಹೇಳೋದಾದರೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ಕೆಲ ಭಾಗಗಳಲ್ಲಿ ಇಂಥಾ ಆಚರಣೆಗಳು ರೂಢಿಯಲ್ಲಿವೆ. ವಹ್ನಿಕುಲ ಕ್ಷತ್ರಿಯ ಜನಗಂಗಾದವರು ಮಹಾಭಾರತ ಕಥಾನಾಯಕಿಯಾದ ದ್ರೌಪದಿಯನ್ನು ಅಗ್ನಿಯಿಂದ ಉದಯಿಸಿ ಬಂದ ಆದಿಶಕ್ತಿಯೆಂದು ನಂಬಿಕೊಂಡು ಬಂದಿದ್ದಾರೆ. ತಮ್ಮ ಜನಾಂಗ ದ್ರೌಪದಿಯ ಮಾನಸ ಪುತ್ರರೆಂಬ ನಂಬಿಕೆಯಿಂದ ಆ ಜನಾಂಗದಲ್ಲಿ ಒಂದಷ್ಟು ಆಚರಣೆಗಳಿವೆ. ಈ ಕಾರಣದಿಂದಲೇ ದ್ರೌಪದಿಯನ್ನು ದೇವತೆ ಎಂಬಂತೆ, ಅಮ್ಮನೆಂಬಂತೆ ಪೂಜಿಸುತ್ತಾರೆ.

ಪಾಂಡವರ ನಂಟು 


ಮೇಲೆ ಹೇಳಿದಂತೆ ಬೆಂಗಳೂರಿನಲ್ಲಿ ನಡೆಯುವ ಅದ್ದೂರಿ ಕರಗಕ್ಕೂ ಪಾಂಡವರಿಗೂ ನಂಟಿದೆ. ಮಹಾಭಾರತದ ಸ್ವರ್ಗಾರೋಹಣ ಪರ್ವದಲ್ಲಿ ಪಾಂಡವರು ರಾಜ್ಯ ಆಡಳಿತವನ್ನು ಮುಗಿಸಿ ಧಾರ್ಮಿಕ ವಿಧಿವಿಧಾನಗಳನ್ನು ಮುಗಿಸಿಕೊಂಡ ನಂತರ ಶ್ವೇತವಸ್ತ್ರಧಾರಿಗಳಾಗಿ ದ್ರೌಪದಿ ಸಮೇತ ಸ್ವರ್ಗದ ಹಾದಿಯಲ್ಲಿ ಮಪಾಂಡವರು ಸಾಗುತ್ತಿರುತ್ತಾರೆ. ದ್ರೌಪದಿಮಾತ್ರ ತನ್ನ ಭೂಲೋಕದ ಗತಜೀವನದ ಬಗ್ಗೆ ಆಲೋಚಿಸುತ್ತಾ ವನವಾಸ ಕಾಲದಲ್ಲಿ ಎದುರಾಗಿದ್ದ ತಿಮಿರಾಸುರನ ಸಂಹಾರದ ಬಗ್ಗೆಲೋಚನಾ ಮಗ್ನಳಾಗಿರುತ್ತಾಳೆ. ಈ ಹಂತದಲ್ಲಿ ತಿಮಿರಾಸುರ ದ್ರೌಪತಿಯನ್ನು ಅಡ್ಡಗಟ್ಟಿ ತನ್ನೊಡನೆ ಬಾಳುವಂತೆ ಕಾಡಿಸುತ್ತಾನೆ. ಈ ಹಂತದಲ್ಲಿಯೂ ಸೈರಣೆ ಕಳೆದುಕೊಳ್ಳದ ದ್ರೌಪದಿ ಅವನಿಗೆ ಬುದ್ಧಿವಾದ ಹೇಳುತ್ತಾಳೆ. ಆದರೆ, ಯಾವುದೋ ಭ್ರಾಮಕ ಲೋಕದಲ್ಲಿ ಮಿಂದೇಳುತ್ತಿದ್ದ ಆತ ದ್ರೌಪದಿಗೆ ಮತ್ತಷ್ಟು ಕಾಟ ಕೊಡುತ್ತಾನೆ. ಇದರಿಂದ ಕಂಗೆಟ್ಟ ದ್ರೌಪದಿ ಕೃಷ್ಣನನ್ನು ಸ್ಮರಿಸಿಕೊಳ್ಳುತ್ತಾಳೆ. ಆಗ ದೂರದಲ್ಲಿದ್ದ ಕೃಷ್ಣ ಪರಮಾತ್ಮ ದ್ರೌಪದಿಯ ಅಸಲೀ ಶಕ್ತಿಯನ್ನು ಆಕೆಗೆ ಪರಿಚಯಿಸುತ್ತಾನೆ. ತಿಮಿರಾಸುರನನ್ನು ಮುಗಿಸುವ ತಾಕತ್ತು ದ್ರೌಪದಿಯೊಳಗೇ ಇರುವ ಬಗ್ಗೆ ಅರಿವು ಮೂಡಿಸುತ್ತಾನೆ. ಅದರ ಫಲವಾಗಿ ದ್ರೌಪದಿ ವಿಶ್ವರೂಪ ಧರಿಸಿ ತಳೆದು ವೀರಕುಮಾರರನ್ನು ಸೃಷ್ಟಿಸಿ ತಿಮಿರಾಸುರನ ಮೇಲೆ ಯುದ್ಧನಡೆಸಿ ಸಂಹಾರ ಮಾಡಿ ಸ್ವರ್ಗದತ್ತ ತೆರಳುತ್ತಾಳೆ.
ಹೀಗೆ ತಿಮಿರಾಸುರನ ಸಂಹಾರಕ್ಕಾಗಿ ದ್ರೌಪದಿಯಿಂದ ಸೃಷ್ಟಿಸಲ್ಪಟ್ಟ ವೀರಕುಮಾರರು ಮುಂದೇನೆಂಬ ದಾರಿ ಕಾಣದೆ ಭಗವಂತನ ನಾಮಸ್ಮರಣೆಯ ದಾರಿ ಹಿಡಿಯುತ್ತಾರೆ. ತಕ್ಷಣ ಪ್ರತ್ಯಕ್ಷನಾದ ಕೃಷ್ಣ ನಿಮ್ಮನ್ನು ಸೃಷ್ಟಿಸಿದ ತಾಯಿಯೇ ನಿಮಗೆ ದಾರಿ ತೋರಿಸುತ್ತಾಳೆಂಬ ಅಭಯ ನೀಡುತ್ತಾನೆ. ಜೊತೆಗೆ ಆಕೆಯನ್ನು ಮನಸಾ ಸ್ಮರಿಸಿ ಎಂದು ಸಲಹೆ ನೀಡಿ ಮಾಯವಾಗಿದ್ದ. ನಂತರ ವೀರಕುಮಾರರು ಖಡ್ಗಗಳನ್ನು ತಮ್ಮ ಎದೆಯ ಮೇಲೆ ಬಲವಾಗಿ ತಿವಿದುಕೊಳ್ಳುತ್ತಾ ಆತ್ಮಾಹುತಿಗೆ ಅಣಿಗೊಳ್ಳುತ್ತಾರೆ. ಈ ಹಂತದಲ್ಲಿ ದೇವಿ ದ್ರೌಪದಿ ತನ್ನ ಮಾನಸ ಪುತ್ರರನ್ನು ಸಮಾಧಾನಿಸಿ ಕ್ಷತ್ರಿಯರಾಗಿ, ವೀರರಾಗಿ ಬಾಳಿ ಎಂಬಂತೆ ಸಲಹೆ ಕೊಡುತ್ತಾಳೆ. ಜೊತೆಗೆ ವರ್ಷಕ್ಕೊಮ್ಮೆ ಧರೆಗೆ ಬಂದು ಮೂರು ದಿನಗಳ ಕಾಲ ನಿಮ್ಮೊಂದಿಗಿರುತ್ತೇನೆಂಬ ಅಭಯ ನೀಡಿ ಮರೆಯಾಗುತ್ತಾಳೆ.
ಅದ್ದೂರಿ ಕರಗೋತ್ಸವಕ್ಕೆ ಶತಮಾನಗಳಷ್ಟು ವಿಸ್ತಾರವಾದ ಐತಿಹ್ಯವಿದೆ. ಬೆಂಗಳೂರಿನ ಪ್ರಮುಖ ದೇವಾಲಯಗಳಲ್ಲಿ ಶತಶತಮಾನಗಳಿಂದಲೂ ಕರಗ ಮಹೋತ್ಸವವನ್ನು ಅದ್ದೂರಿಯಿಂದ ಆಚರಿಸಿಕೊಂಡು ಬರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಬೆಂಗಳೂರಿನ ಹೃದಯಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪ್ರತೀ ವರ್ಷವೂ ಸಡಗರ, ಸಂಭ್ರಮಗಳಿಂದ ಅದ್ದೂರಿಯಾಗಿ ಆಚರಿಸಲ್ಪಡುತ್ತಾ ಬಂದಿದೆ. ಇತಿಹಾಸ ಕೆದಕಿ ನೋಡಿದಾಗ ಈ ಕರಗಕ್ಕೇ ತನ್ನದೇ ಆದ ವೈಶಿಷ್ಟ್ಯವಿರುವ ವಿಚಾರ ಗಮನಕ್ಕೆ ಬರುತ್ತದೆ. ವಿಶೇಷವಾಗಿ ಇದು ಆದಿಶಕ್ತಿಯ ವಿಶೇಷ ಆಚರಣೆಯಾಗಿ ಗಮನ ಸೆಳೆದುಕೊಂಡಿದೆ. ಕರಗ ಪೂಜೆ ಮತ್ತು ಉತ್ಸವಗಳು ತಮಿಳುನಾಡಿನಲ್ಲಿ ತುಂಬಾ ಹಿಂದಿನಿಂದಲೂ ವೈಭವದಿಂದ ಆಚರಿಸಿಕೊಂಡು ಬಂದಿವೆ. ಕಾಲ ಕ್ರಮೇಣ ಕರ್ನಾಟಕದ ಬೆಂಗಳೂರು, ಕೋಲಾರ, ತುಮಕೂರಿನ ಕೆಲ ಭಾಗಗಳಲ್ಲಿ ಈ ಆಚರಣೆ ವೈವಿಧ್ಯತೆಯಿಂದ ನಡೆಯುತ್ತಾ ಬಂದಿದೆ.

ಪುರಾಣಗಳ ಉಲ್ಲೇಖ


ಕರಗ ಆಚರಣೆಯ ಬಗ್ಗೆ ಪುರಾಣಗಳಲ್ಲಿಯೂ ದಾಖಲೆಗಳು ಸಿಗುತ್ತವೆ. ಅದು ನಕುರುಕ್ಷೇತ್ರ ಯುದ್ಧ ಕಾಲಘಟ್ಟಕ್ಕೂ ಕೊಂಡೊಯ್ದು ನಿಲ್ಲಿಸುತ್ತೆ. ಕುರುಕ್ಷೇತ್ರ ಸಮರದ ತರುವಾಯ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಬೋಧ ತಪ್ಪಿ ಬಿದ್ದಳಂತೆ. ದೌಪದಿ ಈ ಸ್ಥಿತಿಯಲ್ಲಿರೋದರ ಅರಿವಿಲ್ಲದ ಪಾಂಡವರು ತಿತಮ್ಮ ಪಾಡಿಗೆ ತಾವು ಮುಂದೆ ಸಾಗುತ್ತಾರೆ. ಇದಾಗಿ ಕೊಂಚ ಸಮಯದ ನಂತರ ದ್ರೌಪದಿಗೆ ಎಚ್ಚರ ಬಂದು ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ಅವಳಿಂದ ಸ್ವಲ್ಪ ದೂರದಲ್ಲಿಯೇ ನಿಂತು ಹೊಂಚುತ್ತಿದ್ದ. ಆ ಹಂತದಲ್ಲಿ ಕೃಷ್ಣನನ್ನು ಸ್ಮರಿಸಿ. ಆತನಿಂದ ಉತ್ತೇಜನಗೊಂಡ ದ್ರೌಪದಿ ಆದಿಶಕ್ತಿಯ ರೂಪ ಧರಿಸಿ ತೋರುತ್ತಾ ತಿಮರಾಸುರನನ್ನು ಸೆದೆ ಬಡಿಯಲು ಸನ್ನದ್ಧಳಾಗುತ್ತಾಳೆ. ಈ ಹಂತದಲ್ಲಿ ತನ್ನ ತನ್ನ ತಲೆಯಿಂದ ಯಜಮಾನರನ್ನು, ಹಣೆಯಿಂದ ಗಣಾಚಾರಿಗಳನ್ನು, ಕಿವಿಗಳಿಂದ ಗೌಡರನ್ನು, ಬಾಯಿಯಿಂದ ಗಂಟೆಪೂಜಾರಿಗಳನ್ನು, ಹೆಗಲಿನಿಂದ ವೀರಕುಮಾರರನ್ನು ಸೃಷ್ಟಿಸಿದ್ದಳು.
ಆ ನಂತರದಲ್ಲಿ ದ್ರೌಪದಿಯ ಶಕ್ತಿಯಿಂದ ಹುಟ್ಟಿದ ವೀರಾಗ್ರಣಿಗಳು ತಿಮಿರಾಸುರನನ್ನು ಸಂಹರಿಸುತ್ತಾರೆ. ಹೀಗೆ ಈ ಕ್ಷಣದ ಪಲ್ಲಟಗಳಿಂದಾಗಿ ಮಕ್ಕಳನ್ನು ಸೃಷ್ಟಿಸಿದ ದ್ರೌಪದಿ ಆದಿಶಕ್ತಿಯಾಗಿ ಮತ್ತೆ ಭೂಮಿಗೆ ಮರಳಿ ಬಾರದೆ ಕೈಲಾಸಕ್ಕೆ ಹೊರಟಿದ್ದರಿಂದ ಮಕ್ಕಳೆಲ್ಲ ತಬ್ಬಿಬ್ಬುಗೊಳ್ಳುತ್ತಾರೆ. ತಾಯಿ ದೂರ ಹೋಗುವುದನ್ನು ತಡೆಯುವಂತೆ ಕೃಷ್ಣನ ಮೊರೆ ಹೋಗುತ್ತಾರೆ. ತಮ್ಮ ಕೈಯಲ್ಲಿರುವ ಕತ್ತಿಯಿಂದ ತಮ್ಮ ಎದೆಗೆ ತಿವಿದುಕೊಳ್ಳುತ್ತಾ ಅಮ್ಮನನ್ನು ಕರೆಯಲು ಸೂಚಿಸುತ್ತಾನೆ. ಕೃಷ್ಣನಿಂದ ಬಂದ ಸಂದೇಶ ಸ್ವೀಕರಿಸಿದ ವೀರ ಕುಮಾರರು ಅದರಂತೆಯೇ ಮಾಡುತ್ತಾರೆ. ಈ ವಿಚಾರದಿಂದದಿಶಕ್ತಿಯಾದ ದ್ರೌಪದಿಗೆ ಮರುಕ ಮೂಡಿಕೊಂಡು ಪ್ರತಿ ವರುಷವೂ ತಾನು ಭೂಮಿಗೆ ಬಂದು ತನ್ನ ಮಕ್ಕಳೊಂದಿಗೆ ಇರುವುದಾಗಿ ಅಭಯ ಕೊಡುತ್ತಾಳೆ. ಆಕೆ ತನ್ನ ಮಕ್ಕಳಿಗೆ ಆಣೆ ಮಾಡಿದ ದಿನವೇ ಕರಗ ಹಬ್ಬದ ಹೆಸರಲ್ಲಿ ಸಂಪನ್ನಗೊಳ್ಳುತ್ತಾ ಬಂದಿದೆ. ತಾಯಿ ಮಕ್ಕಳ ಬಾಂಧವ್ಯದ ಆ ಘಳಿಗೆಯನ್ನು ಇಂದಿಗೂ ಕರಗದ ಹೆಸರಲ್ಲಿ ಸ್ಮರಿಸುತ್ತಾ, ವೀರಕುಮಾರರು ತಮ್ಮ ತಾಯಿ ಭೂಮಿಗೆ ಬರುವುದನ್ನು ಸಂಭ್ರಮಿಸುತ್ತಾರೆ.

ದ್ವಾಪರ ಯುಗದಲ್ಲಿ…


ಸಾಮಾನ್ಯವಾಗಿ ಇಂಥಾ ಆಚರಣೆಗಳ ಹಿಂದೆ ನಾನಾ ದೃಷ್ಟಾಂತಗಳಿರುತ್ತವೆ. ಅದರಂತೆಯೇ ಕರಗದ ಬಗ್ಗೆಯೂ ನಾನಾ ಕಾಲಘಟ್ಟಕ್ಕೆ ಹೊಂದಿಕೊಂಡಂಥಾ ಅನೇಕ ಪುರಾಣ ಕಥನಗಳಿದ್ದಾವೆ. ದ್ವಾಪರ ಯುಗದಲ್ಲಿ ತನ್ನ ಸ್ವಯಂವರದ ಸಮಯದಲ್ಲಿ ದ್ರೌಪದಿ ಮಂಗಳ ಕಲಶದೊಂದಿಗೆ ಸ್ವಯಂವರ ಮಂಟಕ್ಕೆ ಆಗಮಿಸುತ್ತಾಳೆ. ಆ ಸ್ವಯಂವರದಲ್ಲಿ ಕೆಳಗೆ ಪಾತ್ರೆಯಲ್ಲಿದ್ದ ಎಣ್ಣೆಯಲ್ಲಿ ಮೀನಿನ ಪ್ರತಿಬಿಂಬವನ್ನು ನೋಡಿಕೊಂಡು ತನ್ನ ಬಾಣದಿಂದ ಮತ್ಸ್ಯವನ್ನು ಅರ್ಜುನ ಭೇದಿಸುತ್ತಾನೆ. ಬಳಿಕ ನಡೆದ ವಿದ್ಯಮಾನದಲ್ಲಿ ಕುಂತಿದೇವಿ ಆಶಯಕ್ಕನುಗುಣವಾಗಿ ದ್ರೌಪದಿ ಉಳಿದ ನಾಲ್ವರು ಪಾಂಡವ ಸಹೋದರರೊಂದಿಗೂ ವಿವಾಹವಾಗುತ್ತಾಳೆ. ಇದರಿಂದಾಗಿಯೇ ಪಾಂಚಾಲಿ ವಿಶೇಷಣವೂ ಆಕೆಯ ಮುಡಿಗೇರಿಕೊಳ್ಳುತ್ತೆ. ಈ ವಿದ್ಯಮಾನಗಳ ನಡುವೆ ವಿವಾಹವಾದ ಸಂತಸದಲ್ಲಿದ್ದ ದ್ರೌಪದಿ ತನ್ನ ಕೈಯಲಿದ್ದ ಕಲಶವನ್ನು ನೆತ್ತಿ ಮೇಲಿಟ್ಟುಕೊಂಡಿದ್ದಳಂತೆ. ಆ ರೀತಿಯಲ್ಲಿ ದ್ರೌಪದಿ ಕಳಶವನ್ನು ಶಿರದ ಮೇಲಿಟ್ಟುಕೊಂಡಿದ್ದೇ ಕರಗವಾಯ್ತೆಂಬ ಪ್ರತೀತಿಯೂ ಇದೆ.
ಈ ಕರಗೋತ್ಸವ ಪ್ರತೀ ವರ್ಷ ಒಂದೇ ಕಾಲಮಾನದಲ್ಲಿ ಅತ್ಯಂತ ಶಾಸ್ತ್ರಬದ್ಧವಾಗಿ ನಡೆಯುತ್ತದೆ. ವರ್ಷಂಪ್ರತಿ ಚೈತ್ರ ಮಾಸದ ಹುಣ್ಣಿಮೆಯಂದು ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯ ಬಳಿಯಿರುವ ಪ್ರಸಿದ್ಧ ಧರ್ಮರಾಜ ದೇವಸ್ಥಾನದಲ್ಲಿ ವೈಭವೋಪೇತವಾಗಿ ಕರಗ ನಡೆಯುತ್ತೆ. ಈ ಕರಗ ಉತ್ಸವದ ಕೇಂದ್ರ ಬಿಂದುವಾಗಿ ಬೆಂಗಳೂರಿನಲ್ಲಿ ವಾಸವಿಕರುವ ತಿಗಳ ಸಮುದಾಯ ಗುರುತಿಸಿಕೊಂಡಿದೆ. ಇವರಿಗೆ ವಹ್ನಿಕುಲ ಕ್ಷತ್ರಿಯರು ಅಂತಲೂ ಉಪ ನಾಮವಿದೆ. ಕ್ಷತ್ರಿಯ ಎಂಬ ಹೆಸರಿಗೆ ಈ ಸಮುದಾಯದವರು ಬಲಶಾಲಿಗಳಾಗಿದ್ದರು. ಈ ಕಾರಣದಿಂದಲೇ ರಾಜರ ಆಳ್ವಿಕೆಯಲ್ಲಿ ಸೇನೆಯಲ್ಲಿ ಕೆಲಸ ಮಾಡುವ ಅವಕಾಶವೂ ಲಭಿಸಿತ್ತು. ಯುದ್ಧಗಳಲ್ಲಿ ಹೋರಾಟ ನಡೆಸುತ್ತಾ, ಕೃಷಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಆ ಕುಲದವರು ಇಂದಿಗೂ ಅದೇ ಕಸುಬನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ಹೀಗೆ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ತಿಗಳ ಸಮುದಾಯವೂ ಬೆರಗಿನ ಕಥೆಗಳನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡಿದೆ. ದ್ರೌಪದಿಯಿಂದ ಸೃಷ್ಟಿ ಆದ ವೀರ ಕುಮಾರರೇ ಮಂದೆ ತಿಗಳ ಸಮುದಾಯವಾಗಿ ಬೆಳೆದರು ಎಂಬ ನಂಬಿಕೆಯಿದೆ. ಇವರು ತ್ರಿಶೂಲವನ್ನು ಪೂಜೆ ಮಾಡುತ್ತಾರೆ. ಯುದ್ದದ ಸಮಯದಲ್ಲಿ ಅದೇ ತ್ರಿಶೂಲವನ್ನು ಹಿಡಿದು ಹೋರಾಟ ನಡೆಸುತ್ತಿದ್ದರು. ಈ ಸಮುದಾಯದಲ್ಲಿ ಮೂರು ಪಂಗಡಗಳಿದ್ದಾವೆ. ವಹ್ನಿಕುಲ ಕ್ಷತ್ರಿಯರು, ಅಗ್ನಿಕುಲ ಕ್ಷತ್ರಿಯರು ಮತ್ತು ಶಂಭುಕುಲ ಕ್ಷತ್ರಿಯರು ಅಂತ ಅವುಗಳನ್ನು ಗುರುತಿಸಲಾಗಿದೆ. ಇದರಲ್ಲಿ ವಹ್ನಿಕುಲ ಕ್ಷತ್ರಿಯರೇ ಬೆಂಗಳೂರಿನ ಕರಗದ ಮುಂಚೂಣಿಯಲ್ಲಿರುತ್ತಾರೆ. ತಮಿಳುನಾಡು ಹಾಗೂ ಪಾಂಡಿಚೇರಿಯ ಭಾಗದಲ್ಲಿ ವಣ್ಣೇರ್, ವಣ್ಣಿಯಾರ್ ಎಂದೂ ಕರೆಯಲಾಗುತ್ತದೆ.

ಬೆಂಗಳೂರಿಗೆ ಬಂದಿದ್ದೇಕೆ?


ಈ ಕರಗದ ಸುತ್ತಾ ನಿಖರವಾದ ಅನೇಕ ವಿಚಾರಗಳಿದ್ದಾವೆ. ಹಾಗಿದ್ದ ಮೇಲೆ ಬೇರ್‍ಯಾವ ಪ್ರದೇಶಗಳೂ ಇಲ್ಲದೆ ಬೆಂಗಳೂರೇ ಯಾಕೆ ಈ ಸಮುದಾಯದ ನೆಲಯಾಗಿದೆ? ಯಾಕೆ ಅಲ್ಲಿಯೇ ಕರಗ ನಡೆಯುತ್ತೆ? ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೂ ನಿಖರವಾದ ಉತ್ತರವಿದೆ. ವಹ್ನಿಕುಲ ಕ್ಷತ್ರಿಯರು ಬೆಂಗಳೂರಿನಲ್ಲಿ ನೆಲೆಸಿದ ಹಿಂದೆಯೂ ಪೌರಾಣಿಕ ಹಿನ್ನೆಲೆ ಇದ್ದೇ ಇದೆ. ತನ್ನ ಮಕ್ಕಳಾದ ವೀರಕುಮಾರರನ್ನು ಕಾಣಲು ಪ್ರತಿವರ್ಷವೂ ಬರುತ್ತೇನೆ ಎಂದು ಆಣೆ ಮಾಡಿದ ದ್ರೌಪದಿ ಸ್ವರ್ಗಕ್ಕೆ ಹೋಗುವ ಮುನ್ನಾ ಆ ವೀರಕುಮಾರರಿಗೆ ಅಭಿಮನ್ಯುವಿನ ಮಗ ಜನಮೇಜಯನ ಬಳಿ ಆಶ್ರಯ ಪಡೆಯುವಂತೆ ಆದೇಶಿಸಿದ್ದಳಂತೆ. ದ್ರೌಪತಿಯ ಆದೇಶದಂತೆ ವೀರುಕುಮಾರರು ಜನಮೇಜಯನ ಬಳಿ ಬಂದು ಆಶ್ರಯ ಪಡೆದು ಆತನ ಸೈನ್ಯಕ್ಕೆ ದಾಖಲಾಗಿದ್ದರು. ಆ ಕಾಲಘಟ್ಟದ ವನ್ನೇರು ಘಟ್ಟವೇ ಇಂದಿನ ಬನ್ನೇರುಘಟ್ಟ ಎಂದು ನಂಬಲಾಗಿದೆ. ಅದರ ಸಾಕ್ಷಿಯಾಗಿ ಆಗಿ ಇಂದೂ ಸಹಾ ಆ ಬನ್ನೇರುಘಟ್ಟದಲ್ಲಿ ಒಂದು ಕೋಟೆ ಇದೆ.
ಹಾಗೆ ಈಗಲೂ ಇರುವ ಆ ಕೋಟೆಯ ಸುತ್ತಲೂ ಅನೇಕಾನೇಕ ಕಥೆಗಳಿದ್ದಾವೆ. ಅದರ ಬಾಜಿನಲ್ಲಿ ಒಂದು ಸರೋರವಿತ್ತಂತೆ. ಅದು ದೈವೀಕ ಗುಣ ಹೊಂದಿದ್ದ ಸರೋವರ ಅನ್ನೋದು ಪ್ರತೀತಿ. ಅದರಲ್ಲಿ ಸ್ನಾನ ಮಾಡಿದರೆ ನಾನಾ ಕಾಯಿಲೆಗಳು ಗುಣವಾಗುತ್ತೆ ಎಂಬ ನಂಬಿಕೆ ಎಲ್ಲರಲ್ಲಿತ್ತು. ವಿವಿಧ ಕಾಯಿಲೆಗಳಿಂದ ನರಳುತ್ತಿದ್ದ ಜನಮೇಜಯ ವನ್ನೇರುಘಟ್ಟದ ಸರೋವರದಲ್ಲಿ ಸ್ನಾನ ಮಾಡಿದ ನಂತರ ಕಾಯಿಲೆಗಳು ವಾಸಿ ಆದವೆಂಬ ಉಲ್ಲೇಖವೂ ಇದೆ. ಆಗ ಸಂತುಷ್ಟನಾದ ಜನಮೇಜಯ ಇಲ್ಲಿನ ಭೂಮಿ ವಾತಾವರಣವನ್ನು ರಕ್ಷಣೆ ಮಾಡಿಕೊಂಡು ಇಲ್ಲಿಯೇ ಇರುವಂತೆವ ತಾಕೀತು ಮಾಡಿದ್ದನಂತೆ. ಆ ಕಾರಣದಿಂದಲೇ ವೀರುಕುಮಾರರು ವನ್ನೇರುಘಟ್ಟದಲ್ಲೇ ನೆಲೆ ಕಂಡುಕೊಂಡು, ವಹ್ನಿಕುಲ ಕ್ಷತ್ರೀಯರು ಎಂಬ ಪಂಗಡವಾಗಿ ಬೆಳೆದಿದ್ದರು. ನಂತರ ಬದಲಾದ ಸನ್ನಿವೇಶಗಳಿಗೆ ತಕ್ಕುದಾಗಿ ಬೆಂಗಳೂರಿನ ನಾನಾ ಪ್ರದೇಶಗಳಲಲಿ ನೆಲೆ ಕಂಡುಕೊಂಡಿದ್ದರು. ಹಾಗೆ ವನ್ನೇರುಘಟ್ಟ ಬಿಟ್ಟು ಬಂದ ಬಹುತೇಕ ವಹ್ನಿಕುಲದವರು ಬೆಂಗಳೂರಿನ ಸಂಪಗಿರಾಮ ನಗರದ ಕೆರೆಯ ಸುತ್ತ ನೆಲೆ ಕಂಡುಕೊಂಡಿದ್ದರು. ಅಲ್ಲಿ ಇವರ ಸಂಖ್ಯೆ ಹೆಚ್ಚಿದ್ದದ್ದರಿಂದಾಗಿಯೇ ಆ ಪ್ರದೇಶಕ್ಕೆ ತಿಗಳರ ಪೇಟೆ ಅಂತ ಹೆಸರು ಬಂದಿತ್ತು. ಕ್ರಮೇಣ ತಿಗಳ ಸಮುದಾಯದವರು ಅಲ್ಲಿಯೇ ಬೃಹತ್ ಧರ್ಮರಾಯಸ್ವಾಮಿ ದೇವಸ್ಥಾನ ಕಟ್ಟಿಸಿದ್ದರು.
ಹೀಗೆ ಶುರುವಾದ ಕರಗ ತನ್ನದೇ ಆದ ವಿಶಿಷ್ಟವಾದ ಆಚರಣೆಗಳನ್ನು ಹೊಂದಿದೆ. ಕರಗ ಹೊರುವ ಪೂಜಾರಿ ಮತ್ತು ವೀರ ಕುಮಾರರು ಇದರ ಪ್ರಧಾನ ಆಕರ್ಷಣೆ. ಅದಕ್ಕಾಗಿ ಅವರು ತಿಂಗಳಿಂದಲೇ ಶ್ರಮ ವಹಿಸುತ್ತಾರೆ. ಕರಗೋತ್ಸವಕ್ಕೂ ಮುನ್ನ ಹನ್ನೊಂದು ದಿನಗಳ ಕಾಲ ಕಠಿಣ ವ್ರತಾಚರಣೆಯಲ್ಲಿರುತ್ತಾರೆ. ಈ ಕಾಲಾವಧಿಯಲ್ಲ್ಲಿ ಧೂಮಪಾನದಂಥಾ ಚಟಗಳು, ಮಾಂಸಾಹಾರ ಸೇವನೆಯನ್ನು ತ್ಯಜಿಸಿ, ಸ್ರೀಯರಿಂದಲೂ ಅಂತರ ಕಾಯ್ದಕೊಳ್ಳುತ್ತಾರೆ. ಅಂಥಾ ಕಠಿಣ ವ್ರತ ದಾಟಿಕೊಂಡು ಶ್ರದ್ಧಾ ಭಕ್ತಿಯಿಂದ ದೇವಿಯನ್ನು ಪೂಜಿಸಿ ಹೂವಿನ ಕರಗವನ್ನು ತನ್ನ ತಲೆಯ ಮೇಲೆ ಹೊರುತ್ತಾರೆ. ಕತ್ತಿ ಹಿಡಿದ ವೀರ ಕುಮಾರರು ಗೋಂವಿದಾ ಗೋವಿಂದಾ ಎಂದು ಗೋವಿಂದನ ನಾಮಸ್ಮರಣೆ ಮಾಡುತ್ತಾ ಅಲಗು ಸೇವೆ ನಡೆಸುತ್ತಾರೆ. ಬಳಿಕ ನಾದಸ್ವರ ಮತ್ತು ತಮಟೆಯ ಹಿಮ್ಮೇಳದೊಂದಿಗೆ ಧರ್ಮರಾಯನ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ನಂತರ ಇಡೀ ರಾತ್ರಿ ಮಾರುಕಟ್ಟೆಯ ಸುತ್ತಮುತ್ತಲಿನ ದೇವಸ್ಥಾನ ಮತ್ತು ದರ್ಗಗಳ ಬಳಿ ಪೂಜೆ ಸ್ವೀಕರಿಸುತ್ತಾರೆ. ಅದಾಗಿ ಮಾರನೇ ದಿನ ಬೆಳಗಿನ ಸಮಯದಲ್ಲಿ ವಿಧಿವತ್ತಾಗಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಮರಳಿ ಪೂಜೆ ಸಲ್ಲಿಸುತ್ತಾರೆ. ಅಲ್ಲಿಗೆ ಕರಗ ಸಂಪನ್ನಗೊಳ್ಳುತ್ತದೆ.
ಕಾಲ ಸರಿಯುತ್ತಲೇ ಅದೆಂಥಾ ಸಂಪ್ರದಾಯ, ಆಚರಣೆಗಳಾದರೂ ಕೂಡಾ ಒಂದಷ್ಟು ಮಾಸಲಾಗುತ್ತವೆ. ಆದರೆ ಕರಗದ ಪ್ರಭೆ ಮಾತ್ರ ಈ ಕ್ಷಣಕ್ಕೂ ಹಾಗೆಯೇ ಇದೆ. ಈ ಕರಗೋತ್ಸವದ ಹಿಂದೆ ಹತ್ತಾರು ದೇವಳಗಳ ಹಲವಾರು ಉತ್ಸವ ಮೂರ್ತಿಗಳು ಜೊತೆಯಾಗುವ ಸಂಪ್ರದಾಯವಿದೆ. ಉತ್ಸವದೊಂದಿಗೆ ಕೀಲುಕುದುರೆ ವೀರಗಾಸೆ ಯಂಥಾ ಮನೋರಂಜನೆಯೂ ಇರುತ್ತೆ. ಅದನ್ನು ನೋಡಲೆಂದೇ ಲಕ್ಷಾಂತರ ಜನರು ದೇಶವಿದೇಶಗಳಿಂದ ಕೃಷ್ಣರಾಜಾ ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜಮಾಯಿಸುತ್ತಾರೆ. ದೇವಾಲಯದ ಆಸುಪಾಸಿನ ಪ್ರಮುಖ ಬೀದಿಗಳಲ್ಲಿ ವೀರಕುಮಾರರು ಕುಣಿಯುತ್ತಾ ಇಡೀ ರಾತ್ರಿ ಸಂಚರಿಸುತ್ತಾರೆ. ಹೀಗೆ ಕರಗ ಹಾದು ಹೋಗುವ ದಾರಿಯುದ್ದಕ್ಕೂ ನೀರು ಹಾಕಿ ಸಾರಿಸಿ ರಂಗೋಲಿಯತಿಟ್ಟು ಬರಮಾಡಿಕೊಳ್ಳುವ ಪದ್ಧತಿ ಇದೆ. ಜಾತಿ ಬೇಧವಿಲ್ಲದೆ ಎಲ್ಲರೂ ಈ ಉತ್ಸವದಲ್ಲಿ ಭಾಗಿಯಾಗಿ, ಭಯ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ನೆಲದ ಅಸಲೀ ಛಾಯೆ, ಗುಣ ಕಳೆದುಕೊಂಡಿರೋ ಬೆಂಗಳೂರಿನಲ್ಲಿ ಇಂಥಾದ್ದೊಂದು ಪರಂಪರಾಗತ ಉತ್ಸವ ಉಳಿದಿರೋದೇ ಹೆಮ್ಮಯ ಸಂಗತಿ!

Tags: #karaga#karagafestival#kshathriyabangalorekaraga

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
reason for wildfire: ಕಾಡಿಗೆ ಕಂಟಕವಾದ ಕೊಳ್ಳಿದೆವ್ವಗಳು!

reason for wildfire: ಕಾಡಿಗೆ ಕಂಟಕವಾದ ಕೊಳ್ಳಿದೆವ್ವಗಳು!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.