ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರು 2024-2025 ಬಜೆಟ್ ಮಂಡಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾದ ಹಾಡಿನ ಸಾಲುಗಳನ್ನ ಹೇಳುತ್ತಾ ಬಜೆಟ್ ಮಂಡನೆ ಮಾಡಿರುವುದು ವಿಶೇಷ. ಹೌದು, ಅಲ್ಪ ಸಂಖ್ಯಾತರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ ಬಂಪರ್ ಕೊಡುಗೆ ಘೋಷಣೆ ಮಾಡುವಾಗ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಗೀತೆಯೊಂದಿಗೆ ಬಜೆಟ್ ಶುರು ಮಾಡಿದ್ದಾರೆ.
ಬಂಗಾರದ ಮನುಷ್ಯ ಮಾತ್ರವಲ್ಲದೆ ಕಳೆದ ವರ್ಷ ಬಿಡುಗಡೆಯಾದ ಡಾಲಿ ಧನಂಜಯ ನಿರ್ಮಾಣದ ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ಸಾಲುಗಳನ್ನು ಕೂಡ ಬಳಸಿಕೊಳ್ಳಲಾಗಿದೆ. ‘ಒಂದು ತೋಟದಲ್ಲಿ ನೂರು ಹೂವು ಅರಳಿ. ಎಲ್ಲಾ ಕೂಡಿ ಆಡುವಂಥ ಗಾಳಿ ಬೀಸಲಿ’ ಈ ಸಾಲುಗಳನ್ನ ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದಾರೆ.
ಇತ್ತೀಚಿಗಷ್ಟೇ ಡಾಲಿ ಧನಂಜಯ್ ಅವರು ಲಿಡ್ಕರ್ ಸಂಸ್ಥೆಗೆ ಬ್ರಾಂಡ್ ಅಂಬಾಸೆಡರ್ ಆಗಿ ಆಯ್ಕೆ ಆಗಿದ್ದರು, ಈ ಬಾರಿ ಮುಖ್ಯಮಂತ್ರಿಗಳು ಸೂಟ್ಕೇಸ್ ಬಿಟ್ಟು ಲಿಡ್ಕರ್ ಬ್ಯಾಗ್ ನಲ್ಲಿ ಬಜೆಟ್ ಪ್ರತಿಗಳನ್ನು ತೆಗೆದುಕೊಂಡು ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಡಾಲಿ ಧನಂಜಯ್ ಹರ್ಷ ವ್ಯಕ್ತ ಪಡಿಸಿದ್ದಾರೆ.
ಇನ್ನೂ, ಬಜೆಟ್ ಆರಂಭದಲ್ಲಿ ವಿರೋಧ ಪಕ್ಷದ ನಾಯಕರು ಉಪೇಂದ್ರ ನಟನೆಯ ‘ಏನಿಲ್ಲ ಏನಿಲ್ಲ..’ ಹಾಡನ್ನು ನೆನಪಿಸಿಕೊಂಡರು. ಏನಿಲ್ಲ ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಎಂಬ ಹಾಡನ್ನು ಗುನುಗುವ ಮೂಲಕ ಬಜೆಟ್ ಬಗ್ಗೆ ಕಾಮೆಂಟ್ ಕೂಡ ಮಾಡಿದ್ದಾರೆ.