ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಡಂಕಿ’ ಇಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಈ ವರ್ಷ ಎರಡು ಮಾಸ್ ಸಿನಿಮಾ ಕೊಟ್ಟು ಮೂರನೇ ಭಾರಿಗೆ ಕ್ಲಾಸ್ ಆಗಿ ಎಂಟ್ರಿಕೊಟ್ಟ ಕಿಂಗ್ ಖಾನ್ ಕಂಡು ಅವರ ಫ್ಯಾನ್ಸ್ ಕ್ಯಾಕಿ ಹೊಡೆಯುತ್ತಿದ್ದಾರೆ. ಬಂದೂಕು ಬದಿಗಿಟ್ಟು ಭಾವನೆಗಳನ್ನ ಹೊತ್ಕೊಂಡು ಬೆಳ್ಳಿಪರದೆ ಮೇಲೆ ಬಂದ ಬಾದ್ಷಾಗೆ ಬಹುಪರಾಕ್ ಹಾಕ್ತಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳ ಜೊತೆ ಕ್ಲಾಸ್ ಸಿನಿಮಾ ಪ್ರೇಕ್ಷಕರು ಕೂಡ ಶಿಳ್ಳೆ, ಚಪ್ಪಾಳೆ ಹೊಡೆದು ಬಾಜೀಘರ್ ಹೀರೋನಾ ಬೆಂಬಲಿಸ್ತಿದ್ದಾರೆ. ಆದರೆ, ಮಾಸ್ ಸಿನಿಮಾ ಪ್ರೇಕ್ಷಕರಿಗೆ `ಡಂಕಿ’ ನಿರಾಸೆ ಮೂಡಿಸಿದೆ. ಲಾಂಗ್, ಗ್ಯಾಂಗ್, ಗನ್ನುಗಳ ಆರ್ಭಟವಿಲ್ಲದ `ಡಂಕಿ’ಗೆ ಮಾಸ್ ಆಡಿಯನ್ಸ್ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.
ಈ ವರ್ಷ ಬಾದ್ ಷಾ ಎರಡು ಬ್ಲಾಕ್ ಬಸ್ಟರ್ ಹಿಟ್ ಗಳನ್ನ ಕೊಟ್ಟಿದ್ದರಿಂದ, ಪಠಾಣ್ ಹಾಗೂ ಜವಾನ್ ಮ್ಯಾಸೀವ್ ಹಿಟ್ ಆಗಿದ್ದರಿಂದ `ಡಂಕಿ’ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಅದರಲ್ಲೂ, ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಗಳ ಸಾರಥಿ ಕಿಂಗ್ ಖಾನ್ ಗೆ ಫಸ್ಟ್ ಟೈಮ್ ಡೈರೆಕ್ಟ್ ಮಾಡಿದ್ದರಿಂದ ಸಿನಿದುನಿಯಾವೇ `ಡಂಕಿ’ಯತ್ತ ಕಣ್ಣರಳಿಸಿತ್ತು. ಫೈನಲೀ `ಡಂಕಿ’ ಇಂದು ವಲ್ರ್ಡ್ ವೈಡ್ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಮಾಸ್ ಮಸಾಲೆಗೆ ಹೆಚ್ಚು ಒತ್ತು ಕೊಡದೇ ಮಸ್ತ್ ಮನರಂಜನೆಯ ಜೊತೆಗೆ ಮೆಸೇಜ್ ಹೊತ್ತುಬಂದ `ಡಂಕಿ’ ಕ್ಲಾಸ್ ಆಡಿಯನ್ಸ್ ಕಡೆಯಿಂದ ಜೈಕಾರ ಹಾಕಿಸಿಕೊಳ್ತಿದೆ. ಕುಟುಂಬ ಸಮೇತ ಥಿಯೇಟರ್ ಗೆ ಬಂದು ನೋಡುವಂತಹ ಸಿನಿಮಾ ಎನ್ನುವ ಪ್ರಶಂಸೆಗೆ `ಡಂಕಿ’ ಪಾತ್ರವಾಗ್ತಿದೆ. ನೂರೆಂಟು ನಿರೀಕ್ಷೆ ಇಟ್ಕೊಂಡು ಥಿಯೇಟರ್ಗೆ ಬಂದ ಪ್ರೇಕ್ಷಕರನ್ನು `ಡಂಕಿ’ ಅಳ್ಸೋದ್ರ ಜೊತೆಗೆ ಮನಸಾರೆ ನಗಿಸುತ್ತೆ. ಸ್ನೇಹ, ಪ್ರೀತಿ ಜೊತೆಗೆ ದೇಶಪ್ರೇಮವಿರುವ `ಡಂಕಿ’ ಸೆಲ್ಯೂಟ್ ಹೊಡೆಸಿಕೊಳ್ಳುತ್ತೆ.
`ಡಂಕಿ’ ಚಿತ್ರದಲ್ಲಿ ಕಿಂಗ್ ಖಾನ್ ಹಾರ್ಡಿ ಸಿಂಗ್ ದಿಲೋನ್ ಎಂಬ ಮಾಜಿ ಸೈನಿಕನ ಪಾತ್ರ ಮಾಡಿದ್ದಾರೆ. ಯಾವುದೇ ಹೀರೋಗಿರಿಯನ್ನು ವಿಜೃಂಭಿಸಿಲ್ಲ. ಸಿಂಪಲ್ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಆ ಪಾತ್ರ ವಿಶೇಷ ಎನಿಸುವುದು ಆತ ತೆಗೆದುಕೊಳ್ಳುವ ನಿರ್ಧಾರಗಳಿಂದ. ಎಂತಹ ಪರಿಸ್ಥಿತಿಯಲ್ಲೂ ತನ್ನ ದೇಶಪ್ರೇಮವನ್ನು ಮೆರೆಯುವ ಹಾರ್ಡಿ ಸಿಂಗ್ ಪಾತ್ರಕ್ಕೆ ಶಾರುಖ್ ಖಾನ್ ಜೀವ ತುಂಬಿದ್ದಾರೆ. ಅವರಿಗೆ ಸೂಕ್ತ ಜೋಡಿಯಾಗಿ ತಾಪ್ಸಿ ಪನ್ನು ನಟಿಸಿದ್ದಾರೆ. ಅವರ ಪಾತ್ರಕ್ಕೆ ಈ ಸಿನಿಮಾದಲ್ಲಿ ಒಳ್ಳೆಯ ಸ್ಕೋಪ್ ಸಿಕ್ಕಿದೆ. ವಿಕ್ರಮ್ ಕೊಚ್ಚರ್, ಅನಿಲ್ ಗ್ರೋವರ್ ಹಾಗೂ ಬೊಮನ್ ಇರಾನಿ ಅವರು ನಗಿಸುವ ಜವಾಬ್ದಾರಿಯನ್ನು ಹೆಚ್ಚಾಗಿ ನಿಭಾಯಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ವಿಕ್ಕಿ ಕೌಶಲ್ ಅವರು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಾರೆ.
ನೈಜ ಘಟನೆಯನ್ನು ಆಧಾರಿಸಿ ರಾಜ್ ಕುಮಾರ್ ಹಿರಾನಿ ಡಂಕಿ ಸಿನಿಮಾವನ್ನು ಎಣೆದಿದ್ದಾರೆ. ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಾಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಎಳೆಯಲ್ಲಿ ತೆರೆದಿಟ್ಟಿದ್ದಾರೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತೆರಳಲು ವೀಸಾ ಪಡೆಯಬೇಕು. ಬಡವರಿಗೆ ಸುಲಭವಾಗಿ ವೀಸಾ ಸಿಗುವುದಿಲ್ಲ. ಬೇರೆ ದೇಶಕ್ಕೆ ಹೋಗಿ ಒಳ್ಳೆಯ ಉದ್ಯೋಗ ಮಾಡಬೇಕು ಎಂದು ಕನಸು ಕಂಡ ಬಡವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.ಫನ್-ಎಮೋಷನ್ ಪ್ರೀತಿ ಜೊತೆ ದೇಶಭಕ್ತಿ ಕಥೆ ಹೊತ್ತುಬಂದಿರುವ ಡಂಕಿ ಸ್ನೇಹಿತರಿಗೆ, ಕ್ಲಾಸ್ ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗ್ತಿದೆ.
ರಾಜ್ಕುಮಾರ್ ಹಿರಾನಿ ಅವರು ಪ್ರತಿ ಬಾರಿಯೂ ಒಂದು ಗಂಭೀರವಾದ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಂತ ಅದನ್ನು ಪ್ರೇಕ್ಷಕರ ಎದುರಿಗೆ ಇಡುವಾಗ ಅವರ ನಿರೂಪಣಾ ಶೈಲಿ ಗಂಭೀರವಾಗಿ ಇರುವುದಿಲ್ಲ. ಎಂಥ ಸೀರಿಯಸ್ ವಿಷಯವನ್ನೇ ಆದರೂ ಪಕ್ಕಾ ಹಾಸ್ಯದ ಶೈಲಿಯಲ್ಲಿ ಹೇಳಬಲ್ಲಂತಹ ಕಲೆ ಅವರಿಗೆ ಸಿದ್ಧಿಸಿದೆ. ಕಾಮಿಡಿಯ ನಡುವೆಯೇ ಪ್ರೇಕ್ಷಕರನ್ನು ಭಾವುಕರನ್ನಾಗಿಸುವ ಗುಣ ಕೂಡ ಅವರ ಸ್ಕ್ರಿಪ್ಟ್ನಲ್ಲಿ ಇರುತ್ತದೆ. ಅದನ್ನೇ ಅವರು ‘ಡಂಕಿ’ ಸಿನಿಮಾದಲ್ಲೂ ಮುಂದುವರಿಸಿದ್ದಾರೆ. ಈ ಸಿನಿಮಾದಲ್ಲಿನ ಪ್ರತಿ ಪಾತ್ರಗಳ ಹಿನ್ನೆಲೆಯೂ ಕಷ್ಟದಿಂದ ಕೂಡಿದೆ. ಅದನ್ನು ಹಾಸ್ಯದ ಶೈಲಿಯಲ್ಲಿ ರಾಜ್ಕುಮಾರ್ ಹಿರಾನಿ ಪ್ರಸ್ತುತಪಡಿಸಿದ್ದಾರೆ. ಆ ಮೂಲಕ ತಮ್ಮ ಛಾಪನ್ನು ಅವರು ಮತ್ತೊಮ್ಮೆ ಮೂಡಿಸಿದ್ದಾರೆ. ‘ಮುನ್ನಭಾಯ್ ಎಂಬಿಬಿಎಸ್’, ‘ಪಿಕೆ’, ‘3 ಈಡಿಯಟ್ಸ್’ ರೀತಿಯೇ ಒಂದು ಮುಖ್ಯವಾದ ಸಂದೇಶವನ್ನು ನೀಡುವಲ್ಲಿ ‘ಡಂಕಿ’ ಸಿನಿಮಾ ಯಶಸ್ವಿ ಆಗುತ್ತದೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಮತ್ತು ರಾಜ್ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಬಿಟ್ಟಿ ಬಿಲ್ಡಪ್ ಕೊಡದೇ ನಿರ್ದೇಶಕ ರಾಜ್ಕುಮಾರ್ ಇರಾನಿಯವರು `ಡಂಕಿ’ನಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಸೋ, `ಡಂಕಿ’ಯಿಂದ ಇರಾನಿ ಹಾಗೂ ಕಿಂಗ್ ಖಾನ್ ಖಜಾನೆಗೆ ಅದೆಷ್ಟು ದುಡ್ಡು ಹರಿದುಬರುತ್ತೆ? ಬಾಕ್ಸ್ ಆಫೀಸ್ ಕಲೆಕ್ಷನ್ ಪಠಾಣ್ ಹಾಗೂ ಜವಾನ್ ಸಿನಿಮಾನ ಮೀರಿಸುತ್ತಾ? ಡಂಕಿ ಕ್ಲಾಸಿಕ್ ಸಿನಿಮಾವಾಗಿ ಉಳಿದು ಇತಿಹಾಸ ಸೃಷ್ಟಿಸುತ್ತಾ ಕಾದುನೋಡಬೇಕು